20.6 C
Karnataka
Sunday, September 22, 2024

    ಮರೆತೆಲ್ಲ ಕೊನೆಗೊಮ್ಮೆ ಮನಬಿಚ್ಚಿ ನಕ್ಕುಬಿಡಿ

    Must read

    ನೂತನ ದೋಶೆಟ್ಟಿ

    ಮೂರು ದಶಕಗಳ ಹಿಂದೆ ಆಲ್ ದಿ ಬೆಸ್ಟ್ ಎಂಬ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ನಾಟಕ ಕರ್ನಾಟಕದಾದ್ಯಂತ ಉಂಟುಮಾಡಿದ ಸಂಚಲನವನ್ನು ಮರೆಯುವಂತಿಲ್ಲ. ಎಲ್ಲ ವಯಸ್ಸಿನವರನ್ನೂ ಕ್ಷಣಕ್ಷಣಕ್ಕೂ ನಗಿಸಬಲ್ಲ ಅಂಥ ಜನಪ್ರಿಯ ಹಾಸ್ಯ ನಾಟಕ ಇನ್ನೊಂದಿರಲಾರದು. ಮನುಷ್ಯನ ದೈಹಿಕ ನ್ಯೂನ್ಯತೆಗಳಿಂದ ಉಂಟಾಗಬಹುದಾದ ಹಾಸ್ಯಮಯ ಸನ್ನಿವೇಶಗಳನ್ನು ಆಧರಿಸಿ ನ್ಯೂನ್ಯತೆ ಇದ್ದಾಗಲೂ ಒಬ್ಬ ವ್ಯಕ್ತಿ ಹೇಗೆ ಏನನ್ನಾದರೂ ಸಾಧಿಸಬಲ್ಲ ಎಂಬುದನ್ನು ಸ್ಥೂಲವಾಗಿ ನಾಟಕ ಪರಿಚಯಿಸುತ್ತದೆ.

    ಇಲ್ಲಿ ಅಚ್ಚರಿ ಎನಿಸುವುದು ಎಂತಹ ಬಿಗುಮಾನದವರನ್ನೂ ಹಾಸ್ಯದ ಹೊನಲಲ್ಲಿ ತೇಲಿಸಿ ಬಿಡುವ ನಗುವಿನ ಪ್ರಕ್ರಿಯೆ. ರವೀಂದ್ರನಾಥ್ ಟ್ಯಾಗೋರರು ಒಂದು ಮಾತು ಹೇಳುತ್ತಾರೆ.The burdon of self is lightened when I laugh at myself ಎಂದು. ಅದರಂತೆ ಈ ನಾಟಕದ ಪಾತ್ರಗಳು ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುತ್ತ ಎಲ್ಲರಲ್ಲೂ ನಗೆಬುಗ್ಗೆಯನ್ನು ಚಿಮ್ಮಿಸುತ್ತವೆ.

    ನಗುವ ನಗಿಸುವ ನಗಿಸಿ
    ನಗುತ ಬಾಳುವ ವರವ
    ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ

    ಎಂದು ಡಿವಿಜಿ ಯವರು ನಗುವು ಸಹಜದ ಧರ್ಮ ಎಂದಿದ್ದರೂ ಇಂದು ಅದು ಅಪರೂಪವಾಗುತ್ತಿದೆ. ಗಡಿಬಿಡಿ, ಗೊಂದಲಗಳಲ್ಲಿ ಕಳೆದು ಹೋಗಿರುವ ಎಲ್ಲರೂ ನಗುವುದಕ್ಕೂ ಬಿಡುವಿಲ್ಲದವರಾಗಿದ್ದೇವೆ. ಮನಬಿಚ್ಚಿ ನಗುವುದಕ್ಕೂ ತಡೆಹಿಡಿಯುವ ಏನೇನೋ ಕಾರಣಗಳು. ಪರಿಚಯದವರನ್ನು ನೋಡಿ ನಕ್ಕರೆ ಏನೆಂದುಕೊಳ್ಳುವರೋ ಎಂಬ ಅಳುಕು. Loud laugh that spoke the vacant mind ಎಂಬ ಗೋಲ್ಡ್ ಸ್ಮಿತ್ ಕವಿಯ ಮಾತಿನಂತೆ ಅವರನ್ನು ನೋಡಿ ನಕ್ಕರೆ ತನ್ನ ಗೌರವವೆಲ್ಲಿ ಕಡಿಮೆಯಾಗುವುದೋ ಎಂಬ ಭಯ. ನಕ್ಕ ನಗು ಮನಃಪೂರ್ವಕವೇ ಎಂಬ ಅನುಮಾನ. ತನ್ನನ್ನು ಅವರೇನಾದರೂ ಅಪಹಾಸ್ಯ ಮಾಡುತ್ತಿಲ್ಲವಷ್ಟೇ ಎಂಬ ಶಂಕೆ. ಹೀಗೆ ಹುಚ್ಚು ಮನಸ್ಸು ತನ್ನೊಳಗೆ ವರ್ತುಲಗಳನ್ನು ನಿರ್ಮಿಸಿಕೊಳ್ಳುತ್ತ ಮುಕ್ತವಾಗಲು ಅಲ್ಲಗಳೆಯುತ್ತ ಹೋಗುವುದಕ್ಕೆ ಇಂದು ಮಾನಸಿಕ ತೊಂದರೆ, ಮಾನಸಿಕ ಕಾಯಿಲೆ ಎಂಬ ಹಣೆಪಟ್ಟಿಯೂ ದೊರೆತಿದೆ.

    ಹಾಗೆ ನೋಡಿದರೆ ವೈಜ್ಞಾನಿಕವಾಗಿಯೂ ನಗು ಮಹತ್ವವನ್ನು ಪಡೆಯುತ್ತದೆ. ಅಳುವಿಗಿಂತ ನಗುವುದರಿಂದ ಮುಖದ ಹೆಚ್ಚು ಸ್ನಾಯುಗಳು ಕೆಲಸ ಮಾಡಿ ಮುಖಕ್ಕೆ ಒಳ್ಳೆಯ ವ್ಯಾಯಾಮ ನೀಡುತ್ತವೆ ಎಂಬುದು ಬಹಳ ಪ್ರಚಲಿತವಾಗಿರುವ ಒಂದು ವೈಜ್ಞಾನಿಕ ಹೇಳಿಕೆಯಾದರೆ ಇನ್ನೊಂದು ಅಳು ದೇಹದಲ್ಲಿ ಟಾಕ್ಸಿನ್ ಗಳ ಉತ್ಪಾದನೆಯನ್ನು ಹೆಚ್ಚಿಸಿ ಋಣಾತ್ಮಕತೆಯನ್ನು ಬೆಳೆಸಿದರೆ ನಗು ಧನಾತ್ಮಕ ಆಲೋಚನೆಗಳನ್ನು ಹೆಚ್ಚಿಸುತ್ತದೆ ಎಂಬುದು. ಭಾರತೀಯ ಸಂಪ್ರದಾಯದ ಪ್ರಕಾರ ‘ ಸುಖವಾಗಿರು’ ಎಂಬ ಹಾರೈಕೆಗೆ ಸಂತಸ, ನೆಮ್ಮದಿ ಜೊತೆಯಾಗಿರುತ್ತವೆ ಎಂಬ ಕಾರಣದಿಂದಲೇ ಹಿರಿಯರ ಕಾಲಿಗೆರಗಿದಾಗ ‘ ಸುಖೀ ಭವ’ ಎಂದು ಹರಸುವುದು.

    ಇಂದು ಮುಖಗಳ ಮೇಲೆ ಮಂದಹಾಸ ಮರೆಯಾಗಿ ನಿರಾಸೆಯೋ, ಕಳವಳವೋ, ವಿಶಾದವೋ ಹರಡಿದಂತೆ ಕಾಣುವುದು ಪ್ರಮುಖವಾಗಿ ಎರಡು ಕಾರಣಗಳಿಂದ. ಮೊದಲನೆಯದಾಗಿ ತೃಪ್ತಿಯನ್ನು ಕಾಣದ ಜೀವನ. ಎರಡನೆಯದಾಗಿ ನಿರಾಶಾವಾದ. ಸುಖ ಅಥವಾ ತೃಪ್ತಿ ಒಂದು ಮಾನಸಿಕ ಸ್ಥಿತಿ. ಅದೊಂದು ವೈಯುಕ್ತಿಕ ಅನುಭವ. ಮನುಷ್ಯನ ಆಸೆಗಳು ಎಷ್ಟೆಂದರೆ ಅವು ಅವನನ್ನು ತೃಪ್ತ ಎಂದು ಒಪ್ಪಿಕೊಳ್ಳಲು ಬಿಡುವುದಿಲ್ಲ. ಒಂದರ ಹಿಂದೆ ಒಂದರಂತೆ ಬರುವ ಅವಶ್ಯಕತೆಗಳು, ಕೊನೆಯೇ ಇರದ ಆಸೆಗಳು, ಇನ್ನಷ್ಟು ಮತ್ತಷ್ಟು ಎಂದು ಎರಡೂ ಕೈಯಲ್ಲಿ ಬಾಚಿಕೊಳ್ಳುವಷ್ಟು ಆಸೆಬುರುಕತನ. ಇವೆಲ್ಲ ಸುಖಿಯನ್ನು ಅಸುಖಿಯನ್ನಾಗಿಯೂ ತೃಪ್ತನನ್ನು ಅತೃಪ್ತನನ್ನಾಗಿಯೂ ಮಾಡುತ್ತವೆ. ತನ್ನನ್ನು ಇತರರೊಂದಿಗೆ ಹೋಲಿಸಿಕೊಂಡು ಸಾಮಾಜಿಕ ಹಾಗೂ ಆರ್ಥಿಕ ಸಫಲತೆಯನ್ನು ಅಳೆಯುವ ಯಾರು ತಾನೇ ಸುಖವಾಗಿರಲು ಸಾಧ್ಯ? ಜನರ ಇಂಥ ನಡಾವಳಿಗಳನ್ನು ಭಂಡವಾಳವಾಗಿಸಿಕೊಂಡೇ ಓನಿಡಾ ಟಿವಿ ಇಪ್ಪತ್ತನೇ ಶತಮಾನದ ಕೊನೆಯ ದಶಕದಲ್ಲಿ ‘ ನೇಬರ್ಸ ಎನ್ವಿ , ಓನರ್ಸ್ ಪ್ರೈಡ್ ‘ ಎಂಬ ಟ್ಯಾಗ್ ಲೈನ್ ಹೊತ್ತು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಹಾಗೂ ಜನರಲ್ಲಿ ಸುಪ್ತವಾಗಿದ್ದ ಇಂಥ ಭಾವನೆಗಳನ್ನು ಕೆರಳಿಸಿ ಕೆಂಡವಾಗಿಸಿದ್ದು. ಇಂಥ ಅತೃಪ್ತಿಯ ಹೊಗೆಯೇ ಇಂದು ನಗುವನ್ನು ಮಾಸಲಾಗಿಸಿದೆಯೇನೊ!

    ಕೆಲವರದು ಎಲ್ಲದರಲ್ಲೂ ದೋಷವನ್ನೇ ಹುಡುಕುವ ಸ್ವಭಾವ. ಯಾವುದನ್ನೂ ವಸ್ತುನಿಷ್ಠವಾಗಿ ಒಪ್ಪಿಕೊಳ್ಳದ , ಒಳ್ಳೆಯದನ್ನು ಒಪ್ಪಿಕೊಳ್ಳಲು, ಸತ್ಯವನ್ನು ಗುರುತಿಸಲು ಸಿದ್ಧವಿರದ ವಿಲಕ್ಷಣ ಮನಸ್ಸು. ತನ್ನ ನಿಲುವೇ ಸರಿ ಎಂದು ಸತ್ಯವನ್ನು ಅಲ್ಲಗಳೆಯುವುದು. ಇಂಥ ಮನೋಭಾವದ ವ್ಯಕ್ತಿ ಒಂದು ನಡುಗಡ್ಡೆಯಾಗುತ್ತಾನೆಯೇ ಹೊರತು ‘ ‘ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ‘ ಎಂಬಂತೆ ಸಾಮರಸ್ಯದಿಂದ ಬದುಕವುದಿಲ್ಲ. ಆಂಗ್ಲ ಕವಿ ಎಸ್ ಟಿ ಕೊಲ್ರಿಜ್ “

    Alone Alone All All Alone
    Alone on a wide wide See

    ಎಂದು ಉದ್ಗರಿಸಿದಂತೆ ಒಂಟಿತನದ ಬಾಧೆಯಿಂದ ನರಳುತ್ತ ಸಮುದ್ರದ ಮಧ್ಯದಲ್ಲಿ ದಾಹ ಹಿಂಗಿಸಿಕೊಳ್ಳಲು ನೀರಿಲ್ಲದೆ ಕಂಗೆಡುವಂತಾಗಿದೆ. ಒಬ್ಬೊಬ್ಬರೂ ಒಂದು ಪ್ರಪಂಚವೇ ಆಗಿ ಎಲ್ಲೋ ಭೇಟಿಯಾದಾಗೊಮ್ಮೆ ನಕ್ಕು ಲೋಕಾಭಿರಾಮವಾಗಿ ಮಾತನಾಡಿ ನಾವೆಲ್ಲ ಒಂದು ಎಂದು ಕಲ್ಪಿಸಿಕೊಂಡು ಸುಖಿಸುವ ಭ್ರಮೆಯಲ್ಲಿ ನರಳುವುದು.

    Laugh off if you are wise ಎಂಬ ಮಾತಿದೆ. ತಿಳಿಯಾದ ನಗು, ಅಬ್ಬರದ ನಗು, ಓರೆ-ಕೋರೆಯ ನಗು, ಅಪಹಾಸ್ಯದ ನಗು, ಅವಮಾನಿಸುವ ಹುಸಿ ನಗು ಇನ್ನೂ ಮುಂತಾಗಿ ಹೆಸರಿಸಬಹುದಾದ ಬಗೆಬಗೆಯ ನಗುಗಳಲ್ಲಿ ನಮ್ಮ ವ್ಯಕ್ತಿತ್ವ ಅಡಗಿದೆ ಎಂಬುದನ್ನೂ ಕೂಡ ಆಧುನಿಕ ಮಾನಸಿಕ ಶಾಸ್ತ್ರಜ್ಞರು ಗುರುತಿಸುತ್ತಾರೆ.

    ಸಾಗರದ ಅಲೆಗಳಷ್ಟು ಪ್ರೀತಿಯನ್ನು ಉಕ್ಕಿಸಬಲ್ಲ, ಬೆಟ್ಟದಷ್ಟು ಕೋಪವನ್ನು ತಣಿಸಬಲ್ಲ, ಸ್ನೇಹದ ಕುರುಹಾಗಿರುವ, ಪ್ರೇಮದ ಸಂಕೇತವಾಗಿರುವ ಈ ನಗು ಒಂದು ಅಚ್ಚರಿಯೇ ಸರಿ. ನಮ್ಮ ನಲ್ಮೆಯ ಕವಿ ನಿಸಾರ್ ಅಹಮದ್ ಅವರು ಅದಕ್ಕಾಗಿ ” ಮರೆತೆಲ್ಲ ಕೊನೆಗೊಮ್ಮೆ ಮನಬಿಚ್ಚಿ ನಕ್ಕುಬಿಡಿ” ಎಂದು ಹಾರೈಸಿದ್ದಾರೆ.

    ನೂತನ ಎಮ್. ದೋಶೆಟ್ಟಿ
    ನೂತನ ಎಮ್. ದೋಶೆಟ್ಟಿ
    ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ ಆಗಿರುವ ನೂತನ ಎಂ ದೋಶೆಟ್ಟಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಈಗ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿ. ಹಲವಾರು ಕವನ ಸಂಕಲನಗಳು, ಕಥಾ ಸಂಕಲನ, ಪ್ರಕಟವಾಗಿವೆ. ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಲೇಖನಗಳು ಪ್ರಕಟವಾಗಿವೆ., ಆಕಾಶವಾಣಿಯಲ್ಹಿ ಮಾಡಿದ ಕಾರ್ಯಕ್ರಮಗಳಿಗೆ ಹಲವಾರು ಪ್ರಶಂಸನಾ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!