26 C
Karnataka
Thursday, November 21, 2024

    ನಮ್ಮ ಹೆಮ್ಮೆಯ ರಾಮನ್ ಸಂಶೋಧನಾ ಸಂಸ್ಥೆ

    Must read

    ಬೆಂಗಳೂರಿನ ಮೇಕ್ರಿ ವೃತ್ತದಿಂದ ಯಶವಂತಪುರಕ್ಕೆ ಹೋಗುವ ರಸ್ತೆಯಲ್ಲಿ ಐದಾರು ನಿಮಿಷಗಳು ಕಾಲ್ನಡಿಗೆಯಲ್ಲಿ ಹೋದರೆ, ರಸ್ತೆಯ ಎಡ ಬದಿಯಲ್ಲಿ ಸುಮಾರು 400 – 500 ಅಡಿಗಳ ಉದ್ದದ ಪೌಳಿಯು ಕಾಣಿಸುತ್ತದೆ. ಸ್ವಲ್ಪ ಕುತೂಹಲದಿಂದ ಒಳಗೆ ದೃಷ್ಟಿ ಹರಿಸಿದರೆ, ನೀಲಗಿರಿ, ಮಾವು, ಸಂಪಿಗೆ ಮುಂತಾದ ಮರಗಳು ಮತ್ತು ಆಕರ್ಷಕವಾಗಿ ಬೆಳೆಸಿದ ಹೂ ದೋಟದ ಮಧ್ಯೆ ಭವ್ಯವಾದ ಕಲ್ಲಿನ ಕಟ್ಟಡವು ಕಂಗೊಳಿಸುತ್ತದೆ. ಇದೇ ವಿಶ್ವ ವಿಖ್ಯಾತ ನೊಬೆಲ್ ಪ್ರಶಸ್ತಿ ವಿಜೇತ ಭೌತ ವಿಜ್ಞಾನಿ ಸರ್ ಸಿ. ವಿ ರಾಮನ್‍ ರ ಕನಸಿನ ಕೂಸು “ರಾಮನ್ ಸಂಶೋಧನಾ ಸಂಸ್ಥೆ”.

    ರಾಮನ್ ಸಂಶೋಧನಾ ಸಂಸ್ಥೆ / ಚಿತ್ರ ಕೃಪೆ : ವಿಕಿಪಿಡಿಯಾ

    ನಿವೃತ್ತಿ ಹೊಂದಿದ ನಂತರ ಏನು ಮಾಡುವಿರಿ? ಎಂದು ನಾವು ಯಾರನ್ನಾದರೂ ಕೇಳಿದರೆ, ಹಾಯಾಗಿ, ನಿಶ್ಚಿಂತೆಯಾಗಿ, ಮೊಮ್ಮಕ್ಕಳ ಜೊತೆಯಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತೇನೆ ಎಂಬ ಉತ್ತರ ಸಾಮಾನ್ಯವಾಗಿ ಬರುತ್ತದೆ. ಆದರೆ, ಸರ್ ಸಿ. ವಿ ರಾಮನ್‍ ರ ಉತ್ತರ ಭಿನ್ನವಾಗಿತ್ತು. ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕರ ಹುದ್ದೆಯಿಂದ 1948 ರಲ್ಲಿ ರಾಮನ್ ರು ನಿವೃತ್ತಿ ಹೊಂದಲಿದ್ದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿಯೇ ನೆಲೆಸಿ, ಸ್ವತಂತ್ರವಾದ ಸಂಸ್ಥೆಯನ್ನು ಸ್ಥಾಪಿಸಿ, ತಮ್ಮ ಸಂಶೋಧನಾ ಕಾರ್ಯವನ್ನು ಯಾರ ಹಂಗು ಇಲ್ಲದೆ ಮುಂದುವರಿಸ ಬೇಕೆಂಬ ಧ್ಯೇಯವನ್ನು ಹೊಂದಿದ್ದರು.

    ಇವರ ಹಂಬಲವನ್ನು ತಿಳಿದಿದ್ದ ಮೈಸೂರಿನ ಮಹಾರಾಜರಾದ ನಾಲ್ಕನೆ ಕೃಷ್ಣರಾಜ ಒಡೆಯರ್ ರವರು ರಾಮನ್ ರಿಗೆ ಭಾರತೀಯ ವಿಜ್ಞಾನ ಮಂದಿರದ ಬಳಿಯೇ 10 ಎಕರೆ ಜಮೀನನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ (Indian Academy of Sciences) ಸ್ಥಾಪಿಸಲು ಶಾಶ್ವತವಾದ ಜಾಗವನ್ನು ನೀಡುವುದು ಅವರ ಉದ್ದೇಶವಾಗಿತ್ತು. ವಿಜ್ಞಾನವನ್ನು ಬೆಳೆಸುವುದೇ ಅಕಾಡೆಮಿಯ ಮೂಲ ಉದ್ದೇಶವಾದ್ದರಿಂದ, 1943 ರಲ್ಲಿ ಅಕಾಡೆಮಿ ಮತ್ತು ರಾಮನ್ ರ ನಡುವೆ ರಾಮನ್ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ಒಪ್ಪಂದವಾಯಿತು. ಅದರಂತೆ, 1943 ರಲ್ಲಿ ರಾಮನ್ ಸಂಶೋಧನಾ ಸಂಸ್ಥೆಯ ಕಟ್ಟಡದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಕಟ್ಟಡಕ್ಕೆ ಉಪಯೋಗಿಸಿರುವ ಕಲ್ಲುಗಳ ಆಯ್ಕೆಯಿಂದ ಹಿಡಿದು ಪ್ರತಿಯೊಂದು ವಿಷಯದಲ್ಲು, ಅತ್ಯಂತ ಆಸಕ್ತಿಯನ್ನು ರಾಮನ್ ರು ತೋರಿದರು. ಅವರ ಇಚ್ಚೆಯಂತೆ 1948 ರ ವೇಳೆಗೆ ಸಂಸ್ಥೆಯ ಕಟ್ಟಡ ಪೂರ್ಣಗೊಂಡಿತು.

    ಭಾರತೀಯ ವಿಜ್ಞಾನ ಮಂದಿರದಿಂದ ನಿವೃತ್ತಿಗೊಂಡ ಸರ್ ಸಿ. ವಿ ರಾಮನ್ ರು 1948 ರಲ್ಲಿ ಸ್ವಂತ ಸಂಶೋಧನಾಲಯಕ್ಕೆ ಹೆಜ್ಜೆಯನ್ನಿಟ್ಟರು. ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‍ನ ಆಡಳಿತ ಮಂಡಳಿಯು ನೂತನ ಸಂಶೋಧನಾಲಯಕ್ಕೆ “ರಾಮನ್ ಸಂಶೋಧನಾ ಸಂಸ್ಥೆ” ಎಂದೆ ನಾಮಕರಣ ಮಾಡಿತು. ಅಂದಿನಿಂದ ಇಂದಿನವರೆವಿಗೆ, ಈ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಕೀರ್ತಿಯನ್ನು ಪಡೆಯುತ್ತಾ ಬಂದಿರುವುದು, ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವ ವಿಷಯ.

    ಸಂಸ್ಥೆಯ ಮುಖ್ಯ ಕಟ್ಟಡದ ಮೊದಲನೇ ಅಂತಸ್ಥಿನಲ್ಲಿ ಚಿಕ್ಕ ಮತ್ತು ಚೊಕ್ಕವಾದ ಸಭಾಂಗಣ ಮತ್ತು ಅಮೂಲ್ಯ ವಸ್ತುಗಳಿಂದ ಕೂಡಿದ ಸಂಗ್ರಹಾಲಯಗಳಿವೆ. ಪ್ರೊ. ರಾಮನ್ ರೆ ಸ್ವತಃ ಸಂಗ್ರಹಿಸಿರುವ ಅಪೂರ್ವ ರತ್ನಗಳು, ವಜ್ರಗಳು, ಜ್ವಾಲಾಮುಖಿಯಿಂದ ಬರುವ ಲಾವಾ ಹರಿವನ್ನು ಸೂಚಿಸುವ ಶಿಲೆ ಮುಂತಾದ ಸ್ಪಟಿಕಗಳನ್ನು ಸಂಗ್ರಹಾಲಯದಲ್ಲಿ ನಾವು ನೋಡಬಹುದು. ವಿಶೇಷವಾಗಿ, ಅತಿ ನೇರಳೆ ಬೆಳಕಿನಲ್ಲಿ (U V rays) ಬಣ್ಣ ಬಣ್ಣದ ಬೆಳಕನ್ನು ಹೊರಸೂಸುವ ಖನಿಜಗಳನ್ನು ಕತ್ತಲೆಯ ಕೋಣೆಯಲ್ಲಿಟ್ಟು ಫಳ ಫಳನೆ ಪ್ರಕಾಶಿಸುವ ಒಂದು ಮೋಹಕ ಲೋಕವನ್ನೆ ಇಲ್ಲಿ ಸೃಷ್ಟಿಸಲಾಗಿದೆ. ಇದು ಅತಿ ನೇರಳೆ ಬಣ್ಣದ ಕೋಣೆಯೆಂದೆ ಪ್ರಖ್ಯಾತಿ ಹೊಂದಿದೆ.

    ರಾಮನ್ ರಿಗೆ ಪ್ರಕೃತಿಯಲ್ಲಿ ಕಾಣುವ ಬಣ್ಣಗಳ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಅದರಂತೆ, ಬಣ್ಣ ಬಣ್ಣದ ಚಿಟ್ಟೆಗಳನ್ನು ಮತ್ತು ಪಕ್ಷಿಗಳನ್ನು ಸಂಗ್ರಹಿಸಿ ಪ್ರತ್ಯೇಕ ಕೋಣೆಯಲ್ಲಿಡಲಾಗಿದೆ. ಪ್ರತಿಯೊಬ್ಬ ವಿಜ್ಞಾನದ ವಿದ್ಯಾರ್ಥಿ ನೋಡ ಬೇಕಾದಂತಹ ಸಂಗ್ರಹಾಲಯ ಇದಾಗಿದೆ. ಸಂಗ್ರಹಾಲಯದಲ್ಲಿ ಅಡ್ಡಾಡಿದ ಯಾವುದೇ ವ್ಯಕ್ತಿಗೆ ಸರ್ ಸಿ. ವಿ ರಾಮನ್ ರಿಗಿದ್ದ ಪ್ರಕೃತಿ ಪ್ರೇಮ ಮತ್ತು ವೈಜ್ಞಾನಿಕ ದೃಷ್ಠಿ ಅರಿವಾಗುತ್ತದೆ.
    ವಿದೇಶಗಳಿಂದ ಭಾರತಕ್ಕೆ ಆಗಮಿಸುವ ವಿಜ್ಞಾನಿಗಳಿಂದ ಉಪನ್ಯಾಸವನ್ನು ಏರ್ಪಡಿಸುವುದು, ಸಮ್ಮೇಳನಗಳನ್ನು ಏರ್ಪಡಿಸುವುದು, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಹೊಂದಿರುವ ಈ ಸಂಸ್ಥೆ ಬೆಳೆಸಿಕೊಂಡು ಬಂದಿರುವ ಸತ್ಸಂಪ್ರದಾಯವಾಗಿದೆ.

    ಮೊಟ್ಟ ಮೊದಲ ಮಹಾತ್ಮ ಗಾಂಧಿ ಸ್ಮಾರಕ ಭಾಷಣವನ್ನು 1959 ಅಕ್ಟೋಬರ್ 2 ರಂದು ಡಾ. ಸಿ. ವಿ ರಾಮನ್ ರು ನೀಡಿದರು. ಅಂದಿನ ಉಪನ್ಯಾಸದ ವಿಷಯ “ಬೆಳಕು, ಬಣ್ಣ ಮತ್ತು ದೃಷ್ಟಿ”. ಗಾಂಧೀಜಿಯವರ ಜನ್ಮ ದಿನದಂದು ಸುಪ್ರಸಿದ್ಧ ವಿಜ್ಞಾನಿಗಳಿಂದ, ಗಣ್ಯ ವ್ಯಕ್ತಿಗಳಿಂದ ಹಲವಾರು ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸುವುದು ಈಗಲೂ ನಡೆದುಕೊಂಡು ಬರುತ್ತಿದೆ.

    ಸರ್ ಸಿ. ವಿ ರಾಮನ್ ರಿಗೆ ಪ್ರಕೃತಿಯ ಬಗ್ಗೆ ಅಪಾರವಾದ ಪ್ರೇಮ. ಅವರ ಜೀವನದ ಕೊನೆಯ ದಿನಗಳಲ್ಲಿ, ಸಂಸ್ಥೆಯ ಮನೆಯಲ್ಲಿಯೆ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಅವರ ಕೊಠಡಿಯ ಕಿಟಕಿಗಳು ಎತ್ತರದಲ್ಲಿದ್ದು, ಅವರು ಮಲಗಿದ್ದ ಮಂಚದ ಎತ್ತರ ಕಡಿಮೆ ಇದ್ದುದ್ದರಿಂದ ಅವರಿಗೆ ಕಿಟಕಿಯ ಮೂಲಕ ಗಿಡ ಮರಗಳನ್ನು ಮತ್ತು ಹೂದೋಟಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಈ ಕೊರತೆಯನ್ನು ಅವರ ಸ್ನೇಹಿತರ ಗಮನಕ್ಕೆ ತಂದಾಗ, ಕೂಡಲೆ ಕಿಟಕಿಗಳ ಮೂಲಕ ಹೊರಗಡೆಯ ಮರಗಿಡಗಳನ್ನು ಮತ್ತು ಹೂದೋಟಗಳನ್ನು ನೋಡಲು ಸಾಧ್ಯವಾಗುವಂತೆ, ಅವರು ಮಲಗಿದ್ದ ಮಂಚದ ಎತ್ತರವನ್ನು ಹೆಚ್ಚಿಸಲಾಯಿತಂತೆ.

    ಸರ್ ಸಿ. ವಿ ರಾಮನ್ ನವೆಂಬರ್ 21, 1970 ರಂದು 82 ನೇ ವಯಸ್ಸಿನಲ್ಲಿ ದೈವಾಧೀನರಾದರು. ಅವರ ಸಂಸ್ಥೆಯಲ್ಲಿಯೇ ಅಂತ್ಯ ಕ್ರಿಯೆಯನ್ನು ನಡೆಸಲಾಯಿತು. ಆ ಜಾಗದಲ್ಲಿ ಇಂದು ಪ್ರಿಮ್ ವೆರ ಮರವು ಅದ್ಭುತವಾಗಿ ಬೆಳೆದು ಜೀವಂತ ಸ್ಮಾರಕವಾಗಿ ನಿಂತಿದೆ. ಮರವನ್ನು ಪ್ರೀತಿ ಮತ್ತು ಗೌರವಗಳಿಂದ, “ ರಾಮನ್ ಟ್ರೀ” ಎಂದು ಕರೆಯಲಾಗುತ್ತಿದೆ.

    ರಾಮನ್ ಟ್ರೀ / ಚಿತ್ರ ಕೃಪೆ : ವಿಕಿಪಿಡಿಯಾ

    ರಾಮನ್ ರ ನಿಧನದ ನಂತರ ಅವರ ಜ್ಞಾಪಕಾರ್ಥವಾಗಿ ಈ ಸಂಶೋಧನಾಲಯವನ್ನು ರಾಷ್ಟ್ರೀಯ ಸಂಶೋಧನಾಲಯವೆಂದು ಪರಿಗಣಿಸಿ ಭಾರತ ಸರ್ಕಾರವು ಧನ ಸಹಾಯವನ್ನು ನೀಡುತ್ತಿದೆ.
    ಮೂಲಭೂತ ಸಂಶೋಧನೆಗಳಿಗಾಗಿಯೇ ಮೀಸಲಾಗಿರುವ ಈ ಸಂಸ್ಥೆಯಲ್ಲಿ, ಭೌತಶಾಸ್ತ್ರದ ವಿವಿಧ ಶಾಖೆಗಳಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಸಂಶೋಧನೆ ನಡೆಯುತ್ತಿದೆ. ಬೆಳಕು ಮತ್ತು ದ್ರವ್ಯ ಭೌತಶಾಸ್ತ್ರ (Light and Matter Physics), ಸೈದ್ಧಾಂತಿಕ ಭೌತಶಾಸ್ತ್ರ (Theoretical Physics), ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ (Astronomy and Astrophysics), ಮೃದು ಘನೀಕರಿಸಿದ ದ್ರವ್ಯ ಭೌತಶಾಸ್ತ್ರ (Soft condensed Matter Physics) ಹೀಗೆ ಹಲವಾರು ವಿಷಯಗಳ ಬಗ್ಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಹೊಂದಿರುವ ವಿಜ್ಞಾನಿಗಳು ಸಂಶೋಧನೆಯನ್ನು ನಡೆಸುತ್ತಿದ್ದಾರೆ.

    ಸಂಸ್ಥೆಯಲ್ಲಿಯೆ 10.4m ಮಿಲಿ ಮೀಟರ್ ವೇವ್ ರೇಡಿಯೋ ದೂರದರ್ಶಕ, ಬೆಂಗಳೂರಿನ ಸಮೀಪದಲ್ಲಿರುವ ಗೌರಿಬಿದನೂರಿನಲ್ಲಿ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಡೆಕಾ ಮೀಟರ್ ವೇವ್ ರೇಡಿಯೋ ದೂರ ದೂರದರ್ಶಕ ಹಾಗೂ ಮೌರಿಷಿಯಸ್ ನಲ್ಲಿ ಮೀಟರ್ ತರಂಗಾಂತರಗಳಲ್ಲಿ ಅಧ್ಯಯನ ಮಾಡುವ ಉದ್ದೇಶದಿಂದ ರೇಡಿಯೋ ದೂರದರ್ಶಕವನ್ನು ಸ್ಥಾಪಿಸಲಾಗಿದೆ. ಈ ದೂರದರ್ಶಕಗಳನ್ನು ಆಕಾಶ ಕಾಯಗಳ ವಿದ್ಯಮಾನಗಳ ಅಧ್ಯಯನಕ್ಕೆ ಬಳಸಲಾಗುತ್ತಿದೆ.

    ಸಂಸ್ಥೆಯ ಗ್ರಂಥಾಲಯವು, 1948 ರಲ್ಲಿಯೆ ರಾಮನ್ ರಿಂದ ಸ್ಥಾಪಿತಗೊಂಡಿತು. ರಾಮನ್ ರ ಸ್ವಂತ ಪುಸ್ತಕಗಳು ಮತ್ತು ನಿಯತಕಾಲಿಕೆಗಳಿಂದ ಪ್ರಾರಂಭಗೊಂಡ ಗ್ರಂಥಾಲಯ, 1976 ರಲ್ಲಿ ಪ್ರತ್ಯೇಕವಾದ ಕಟ್ಟಡವನ್ನು ಹೊಂದಿ, ಈಗ ದೇಶದ ಪ್ರತಿಷ್ಠಿತ ಗ್ರಂಥಾಲಯಗಳಲ್ಲಿ ಒಂದಾಗಿ, ಬೃಹದಾಕಾರವಾಗಿ ಬೆಳೆದು ನಿಂತಿದೆ. ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯದ ಕಟ್ಟಡದಲ್ಲಿಯೇ “Archival Gallery” ಯನ್ನ ಸ್ಥಾಪಿಸಲಾಗಿದೆ. ಸಂಶೋಧನಾ ಸಂಸ್ಥೆ, ಅದರ ಪ್ರಾರಂಭ, ನಡೆದು ಬಂದ ದಾರಿ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು, ಸಂಶೋಧನೆಗಳಿಗೆ ಒದಗಿಸುವ ಸೌಲಭ್ಯಗಳು, ಹೀಗೆ ಹತ್ತು ಹಲವಾರು ವಿಷಯಗಳನ್ನು ಒಳಗೊಂಡಂತೆ, ಸಂಕ್ಷಿಪ್ತವಾದ ಪ್ರೌಢತೆಯನ್ನು ಬಿಂಬಿಸುವ ರೀತಿಯಲ್ಲಿ ವಿವರಗಳನ್ನು ನೀಡಲಾಗಿದೆ. ನಿಜವಾಗಲೂ ಬಹಳ ಒಳ್ಳೆಯ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ.

    ರಾಮನ್ ಸಂಶೋಧನಾ ಸಂಸ್ಥಯಲ್ಲಿ ಲೇಖಕ ಡಾ. ಬಿ ಎಸ್ ಶ್ರೀಕಂಠ ಮತ್ತು ಅವರ ಪಿಎಚ್.ಡಿ ಸಹಪಾಠಿ ಡಾ. ಸುಬ್ರಹ್ಮಣ್ಯ ರಾಜೆ ಅರಸ್

    ಇಂತಹ ಸಂಸ್ಥೆಯಲ್ಲಿ ಪಿಎಚ್.ಡಿ ಮಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಜೀವನದ ಭಾಗ್ಯವೆಂದು ನಾನು ತಿಳಿದಿದ್ದೇನೆ. ಭೌತಶಾಸ್ತ್ರದಲ್ಲಿ ಸಂಶೋಧನೆಯನ್ನು ಮಾಡಲು ಇಚ್ಚೆಯುಳ್ಳವರಿಗೆ ಸಂಸ್ಥೆಯಲ್ಲಿ ಒಳ್ಳೆಯ ಅವಕಾಶಗಳನ್ನು ಒದಗಿಸಿ ಕೊಡಲಾಗಿದೆ. ಇಂತಹ ಹಲವಾರು ವೈಜ್ಞಾನಿಕ ಸಂಸ್ಥೆಗಳನ್ನು ಪಡೆದಿರುವ ಬೆಂಗಳೂರು ನಗರ “ವಿಜ್ಞಾನದ ರಾಜಧಾನಿ (Science capital)” ಎಂಬ ಬಿರುದನ್ನು ಪಡೆಯಲು ನಿಜವಾಗಿಯೂ ಅರ್ಹತೆಯನ್ನು ಪಡೆದಿದೆ.

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ. ಸಧ್ಯ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ .
    spot_img

    More articles

    4 COMMENTS

    1. ಅಪ್ಪಟ ರತ್ನ ದಂತೆ ವಿಷಯ ಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ ಡಾ ಶ್ರೀಕಂಠರವರು. ಇದು ಶ್ಲಾಘನೀಯ.

    2. ಸರ್ ಸಿ.ವಿ.ರಾಮನ್ ಅವರ ವಿಜ್ಞಾನ ಲೋಕದ ಮೇಲಿನ ಪ್ರೀತಿ, ಸಂಶೋಧನೆಯೆಡೆಗಿನ ಅಸಕ್ತಿ ಮತ್ತು `ರಾಮನ್ ಎಫೆಕ್ಟ್? ಬಗೆಗಷ್ಟೇ ಓದಿ, ಕೇಳಿ ತಿಳಿದಿದ್ದೆ. ಆದರೆ, ಅರ್ಧ ಶತಮಾನ ದಾಟಿದ `ರಾಮನ್ ಟ್ರೀ? ಬಗ್ಗೆ ತಿಳಿದಿರಲಿಲ್ಲ. ತಿಳಿಸಿಕೊಟ್ಟಿದ್ದಕ್ಕೆ ಶ್ರೀಕಂಠ ಸರ್‌ಗೆ ಧನ್ಯವಾದ..
      ಮೈಸೂರು ಸಂಸ್ಥಾನದ ಜನಪ್ರಿಯ ಅರಸು `ನಾಲ್ವಡಿ’ ಕೃಷ್ಣರಾಜ ಒಡೆಯರ್. . ಅವರ ಹೆಸರಿಗೆ `ನಾಲ್ಕನೆ’ ಪದ ಸರಿಯಾಗಿ ಜೋಡಣೆ ಆಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.
      ವಂದನೆಗಳು…

    LEAVE A REPLY

    Please enter your comment!
    Please enter your name here

    Latest article

    error: Content is protected !!