ಜಯಶ್ರೀ ಅಬ್ಬೀಗೇರಿ
ಕತೆ ಯಾರಿಗೆ ಇಷ್ಟ ಇಲ್ಲ ಹೇಳಿ? ’ಒಂದಾನೊಂದು ಕಾಲದಲ್ಲಿ’ ’ಒಂದೂರಲ್ಲಿ’ ಅಂತ ಶುರು ಆಗುವ ಕತೆ ಕೇಳಲು ತೆರೆದುಕೊಳ್ಳುವ ಕಿವಿಗಳಿಗೇನು ಕಮ್ಮಿ ಇಲ್ಲ. ಕತೆ ಮುಗಿವವರೆಗೂ ಊಟ ತಿಂಡಿ ಯಾವುದೂ ನೆನಪಿಗೆ ಬರುವುದಿಲ್ಲ. ನಡು ನಡುವೆ ಬರುವ ತಿರುವುಗಳಂತೂ ಮತ್ತಷ್ಟು ಕೌತುಕತೆಯನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲ ಬೇರೆ ಏನನ್ನೂ ಯೋಚಿಸದಂತೆ ಮಾಡುತ್ತವೆ. ಕತೆ ಯಾವ ವಯೋಮಾನದವರನ್ನೂ ಬಿಡುವುದಿಲ್ಲ. ಸುಂದರ ಕಾಮನಬಿಲ್ಲಿನಂತೆ ಸೆಳೆಯುವ ತಾಕತ್ತು ಅದಕ್ಕಿದೆ. ಅದರಲ್ಲೂ ಚಿಕ್ಕ ಮಕ್ಕಳಿಗಂತೂ ಅದೊಂದು ಸುಂದರ ಲೋಕ.
ಈಗೇನಿದ್ದರೂ ಯೂಟ್ಯೂಬ್ ಮೊಬೈಲ್ ಜಮಾನಾ. ಅದರಲ್ಲಿ ಮಕ್ಕಳ ಕಥೆಗಳು ಎಲ್ಲ ಭಾಷೆಯಲ್ಲೂ ಎಷ್ಟು ಬೇಕಷ್ಟು ಸಿಗುತ್ತವೆ. ಆದರೆ ಅಮ್ಮ ಹೇಳಿದ ಹಾಗೆ ಅಜ್ಜಿ ಹೇಳಿದ ಹಾಗೆ ಅನಿಸುವುದಿಲ್ಲ. ನೋಡುವ ಕತೆಗಳಿಗೂ ಕೇಳುವ ಕತೆಗಳಿಗೂ ಅಜಗಜಾಂತರವೆನಿಸುತ್ತದೆ. ಕೇಳುವ ಕತೆಯಲ್ಲಿ ಕಲ್ಪನೆಯಲ್ಲಿ ಪಾತ್ರಗಳು ಅವುಗಳ ಚಿತ್ರಗಳ ಮೂಲಕ ಕತೆ ಓಡುತ್ತಿರುತ್ತದೆ. ಅದು ’ಹ್ಞೂಂ’ ’ಹ್ಞೂಂ’ಎನ್ನುವ ಕಾಲುಗಳ ಜೊತೆ. ಎಷ್ಟು ಕೇಳಿದರೂ ಇನ್ನೊಂದು ಮತ್ತೊಂದು ಎಂದು ಪೀಡಿಸಲೇಬೇಕೆನಿಸುತ್ತದೆ.
ಕಥೆಯೊಳಗಿನ ಕಥೆಗಳು
ರಾತ್ರಿ ಮಲಗುವಾಗಲಂತೂ ಕತೆ ಕೇಳಿಯೇ ಮಲಗುವುದು. ಕೆಲವೊಂದಿಷ್ಟು ಮಕ್ಕಳಿಗಂತೂ ಊಟದ ಸಮಯದಲ್ಲೂ ಕತೆ ಬೇಕು. ಇಲ್ಲದಿದ್ದರೆ ಊಟ ಇಳಿಯುವುದಿಲ್ಲ. ರಾಮಾಯಣ ಮಹಾಭಾರತದಂಥ ಮಹಾಕಾವ್ಯಗಳ ಮೌಖಿಕ ಕಥೆಗಳು ಕಥೆಯೊಳಗಿನ ಕಥೆಗಳು ಉಪಕಥೆಗಳನ್ನು ಕೇಳಿ ಬೆಳೆದಿರುವ ಹಿಂದಿನ ತಲೆಮಾರಿನವರಿಗೆ ಕಥೆಯ ರುಚಿ ಗೊತ್ತು. ಅದು ಹುಟ್ಟಿಸುವ ರೋಚಕತೆಯಂತೂ ಈಗಿನ ಮಕ್ಕಳಿಗಿಂತ ಹೆಚ್ಚು ಗೊತ್ತು.
ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ಲಿಖಿತ ಪಠ್ಯಗಳು ತಾವು ತಮ್ಮ ಬಗೆಗೆ ಕಥೆಗಳನ್ನು ಹೊಂದಿವೆ. ಮಹಾಭಾರತದಂಥ ದೊಡ್ಡ ಕಾವ್ಯ ಹೇಗೆ ಬರೆಯಲ್ಪಟ್ಟಿತು ಎನ್ನುವುದಕ್ಕೆ ಅದರ ಸಂಪಾದಕನಾದ ವ್ಯಾಸ ತಾನು ಬಾಯಲ್ಲಿ ಹೇಳುತ್ತಿದ್ದಂತೆ ಬರೆದಕೊಳ್ಳಲು ಯಾರಾದರೂ ಬೇಕೆಂದು ಹುಡುಕುತ್ತಿದ್ದ.ಅದು ಅಷ್ಟು ಸುಲಭದ ಕೇಲಸವಲ್ಲ ಅಂತ ಎಲ್ಲರಿಗೂ ಗೊತ್ತಿತ್ತು. ಮಹಾಸಾಹಸದ ಕಾರ್ಯವೆಂದು ಯಾರೂ ಮುಂದೆ ಬರಲಿಲ್ಲ. ಅವನು ಹೇಳಿದಷ್ಟು ವೇಗವಾಗಿ ಯಾರಿಗೂ ಬರೆಯಲಾಗುತ್ತಿರಲಿಲ್ಲ. ಕೊನೆಗೆ ಗಣೇಶ ತಾನು ಬರೆಯುವಷ್ಟು ವೇಗವಾಗಿ ಹೇಳುತ್ತಲೇ ಇರಬೇಕು ಎಂಬ ಷರತ್ತಿನೊಂದಿಗೆ ಒಪ್ಪಿ ಬಂದ. ವ್ಯಾಸ ಮಹರ್ಷಿಯೂ ಅದಕ್ಕೆ ಒಪ್ಪಿಕೊಂಡ.
ಜಾನಪದ ಪಾಠ ಹೇಳುವಂತೆ, ಗಣೇಶನಾದರೋ ದೇವರು. ವ್ಯಾಸನಾದರೋ ಮಾನವ.ಮಾನವ ಸಹಜ ದೇಹ ಬಾಧೆಗಳನ್ನು ತೀರಿಸಿಕೊಳ್ಳಬೇಕಲ್ಲ.ಕೆಲವೊಮ್ಮೆ ಸರಿಯಾದ ಶಬ್ದಗಳನ್ನು ಹೇಳಲೂ ಆತನಿಗೆ ಯೋಚಿಸಬೇಕಾಗುತ್ತಿತ್ತು. ಅದಕ್ಕಾಗಿ ಆಗಾಗ ವ್ಯಾಸ ಗಣೇಶನ ಕೈಯಲ್ಲಿ ಬರೆಯಲು ಆಗದ ಕಷ್ಟದ ಪದಗಳನ್ನು ಹೇಳುತ್ತ ಆ ಸಮಯವನ್ನು ತನ್ನ ಅಗತ್ಯಕ್ಕೆ ಬಳಸಿಕೊಳ್ಳುತ್ತಿದ್ದನಂತೆ.ಅಂದ ಹಾಗೆ ಇಲಿಯಡ್ ಒಡಿಸ್ಸಿಗಳೆರಡರ ಎಂಟು ಪಟ್ಟು ದೊಡ್ಡದು ಮಹಾಭಾರತ. ಅಬ್ಬಬ್ಬಾ! ಇಷ್ಟು ದೊಡ್ಡ ಕತೆಯ ಬಗೆಗೆ ಕೇಳೋಕೆ ಖುಷಿ ಆಗುತ್ತದೆ ಅಲ್ವಾ!
ಈ ಕಥೆ ಕೇಳಿ
ಕತೆ ಬಗ್ಗೆ ಹೇಳುವಾಗ ಒಂದು ಕತೆ ಹೇಳದಿದ್ದರೆ ಹೇಗೆ? ಹಾಗಾದರೆ ಕೇಳಿ. ಒಂದೂರಿನಲ್ಲಿ ಒಬ್ಬ ರಾಜ ಇದ್ದ ಆತನಿಗೆ ಕತೆ ಅಂದರೆ ಬಲು ಇಷ್ಟ. ಎಷ್ಟು ಕೇಳಿದರೂ ಬೇಸರವಿಲ್ಲ. ತೃಪ್ತಿಯೂ ಇಲ್ಲ. ಎಷ್ಟು ಹೇಳಿದರೂ ಇನ್ನೊಂದು ಹೇಳು ಮತ್ತೊಂದು ಹೇಳು ಎಂದು ದುಂಬಾಲು ಬೀಳುತ್ತಿದ್ದ. ಆತನಿಗೆ ಕಥೆ ಹೇಳಿ ಹೇಳಿ ಎಲ್ಲರೂ ಸುಸ್ತಾಗಿದ್ದರು. ಆದರೂ ಆತ ತನಗೆ ಸಾಕು ಎನ್ನುವಷ್ಟು ಕಥೆ ಹೇಳುವವನಿಗೆ ಒಂದು ಸಾವಿರ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಡುವುದಾಗಿ ರಾಜ್ಯದಲ್ಲೆಲ್ಲ ಢಂಗುರ ಸಾರಿಸಿದ. ಹೇಳಲು ಬಂದವರೆಲ್ಲ ಸೋತು ಹೋದರು.ಅರಮನೆಯಿಂದ ಹಾಗೆ ಸೋತು ಹೋಗುತ್ತಿದ್ದ ಕತೆಗಾರನಿಗೆ ದಾರಿಯಲ್ಲಿ ಒಬ್ಬ ಬುದ್ಧಿವಂತ ಗೆಳೆಯ ಸಿಕ್ಕ. ಆ ಗೆಳೆಯ ರಾಜನಿಗೆ ಸಾಕೆನ್ನಿಸುವ ದಾರಿ ನನಗೆ ಗೊತ್ತು ಎಂದ.
ಮರು ದಿನ ಆತ ಅರಮನೆಗೆ ಹೋದ. ರಾಜ ಎಂದಿನಂತೆ ಕತೆ ಕೇಳಲು ಕುಳಿತ. ಕತೆಯೂ ಶುರುವಾಯ್ತು ’ಒಂದಾನೊಂದು ಕಾಲದಲ್ಲಿ ಒಂದು ದೊಡ್ಡ ಗಿಳಿಹಿಂಡು ಒಂದು ಮರದ ಮೇಲೆ ಕೂತಿತು. ಆ ಮರದ ಪಕ್ಕವೇ ಒಂದು ಕಣ ಇತ್ತು. ಅಲ್ಲಿ ಕಾಳುಗಳನ್ನು ಆಗ ತಾನೆ ಒಕ್ಕಿ ರಾಶಿ ರಾಶಿ ಹಾಕಿದ್ದರು. ಹಿಂಡಿನಿಂದ ಒಂದು ಗಿಳಿ ಕೆಳಗೆ ಹಾರಿ ಬಂದು ಒಂದು ಕಾಳನ್ನು ಕಚ್ಚಿಕೊಂಡು ಹೋಯಿತು. ಆಮೇಲೆ ಇನ್ನೊಂದು ಗಿಳಿ ಕೆಳಗೆ ಬಂದು ಕಾಳು ಎತ್ತಿಕೊಂಡು ಹೋಯಿತು. ಆಮೇಲೆ ಇನ್ನೂ ಒಂದು ಗಿಳಿ ಹಾರಿ ಕೆಳಕ್ಕೆ ಬಂದು ಕಾಳು ಎತ್ತಿಕೊಂಡು ಹೋಯಿತು. ಆಮೇಲೆ ಇನ್ನೂ ಒಂದು ಗಿಳಿ. . . . .ಹೀಗೆ ಗಂಟೆಗಟ್ಟಲೇ ಹೇಳುತ್ತ ಹೋದ. ರಾಜ ಕತೆ ಕೇಳುತ್ತಿದ್ದಂತೆ ತಲೆ ಹಾಕುತ್ತ ಹ್ಞೂಂಗುಟ್ಟಲೇಬೇಕಿತ್ತು. ರಾಜನಿಗೆ ಕೇಳಿದ್ದೇ ಕೇಳಿ ಸುಸ್ತಾಗಿ ನಿದ್ದೆ ಬರುವಂತಾಯ್ತು.
’ನೀನು ಇನ್ನೂ ಎಷ್ಟು ಹೊತ್ತು ಹೀಗೆ ಇನ್ನೂ ಒಂದು ಗಿಳಿ ಕೆಳಗೆ ಬಂತು ಅದು ಕಾಳು ಎತ್ತಿಕೊಂಡು ಹೋಯಿತು ಅಂತ ಹೇಳ್ತಿಯಾ? ಎಂದು ಕೇಳಿದ. ’ರಾಶಿಯಲ್ಲಿರುವ ಕಾಳುಗಳೆಲ್ಲ ಮುಗಿಯುವವರೆಗೆ ಪ್ರಭೂ.’ ಎಂದು ಮತ್ತೆ ಆತ ಮುಂದುವರೆಸಿದ. ’ಆಮೇಲೆ ಇನ್ನೂ ಒಂದು. . . .’ ರಾಜನಿಗೆ ತಡೆಯಲಾಗಲಿಲ್ಲ.ಅವನು ಸೋಲೊಪ್ಪಿಕೊಂಡ.ಹೇಳುಗನಿಗೆ ಸಾವಿರ ಚಿನ್ನದ ನಾಣ್ಯಗಳನ್ನು ಕೊಟ್ಟು ಕಳುಹಿಸಿದ.
ಬಾಲ್ಯದ ತಮಾಷೆಯ ಆಟಗಳು ತರಲೆಗಳು ತುಂಟಾಟಗಳು ಒಂದೇ ಎರಡೇ ಎಲ್ಲವೂ ಒಂದು ಸಲ ನೆನಪಿನ ಭಿತ್ತಿಯಲ್ಲಿ ಸುಳಿದರೆ ಸಾಕು ಮನಸ್ಸು ಮಗುವಾಗಿ ಬಿಡುತ್ತದೆ. ಅವ್ವನ ಕೈ ತುತ್ತು ಅಪ್ಪನ ಹೆಗಲೇರಿ ಜಾತ್ರೆ ಸಂತೆ ಸುತ್ತಿದ್ದು ಅಕ್ಕ ತಂಗಿಯರ ಜೊತೆ ಅಣ್ಣ ತಮ್ಮಂದಿರ ಸಂಗಡ ಆಟಿಕೆ ಸಾಮಾನುಗಳಿಗಾಗಿ ಜಗಳ ಮಾಡಿದ್ದು ಗೆಳತಿಯರ ಊರು ಕೇರಿಯಲ್ಲೆಲ್ಲ ಸುತ್ತಿ ರಾತ್ರಿ ತಡವಾಗಿ ಮನೆಗೆ ಬಂದು ಒದೆ ತಿಂದದ್ದು ಇವುಗಳ ಜೊತೆ ಕತೆಗಳು ಸಹ ಮನದ ಭಿತ್ತಿಯ ಮೇಲೆ ಅಳಿಸದಂತೆ ಅಚ್ಚೊತ್ತಿಕೊಂಡಿವೆ.
ಈ ಮೇಲಿನ ಕತೆಯಲ್ಲಿ ರಾಜನು ನಿಜಕ್ಕೂ ತಾನು ಆಸೆ ಪಡುವಷ್ಟು ಕತೆಗಳನ್ನು ಕೇಳಿಸಲಾಗದ ಹಿರಿಯರನ್ನು ಪೀಡಿಸುವ ಮಗುವಿನ ಹಾಗೆ. ಕತೆಯ ಮೂಲವನ್ನು ಈ ಕತೆ ಮುರಿಯುತ್ತದೆ. ಯಾವುದೇ ಕಥನವು ಒಂದು ಮುಕ್ತಾಯವನ್ನು ಹೊಂದಿರಬೇಕು. ಕತೆ ನಿಜ ಜೀವನದಂತದ್ದಲ್ಲ ಮುಗಿಸುವಂತದ್ದು. ಕಥನ ಮತ್ತು ವಾಸ್ತವ ಸಂಕಥನ ಮತ್ತು ವಸ್ತು ಬೇರೆ ಬೇರೆ ನಿಯಮಗಳನ್ನು ಅನುಸರಿಸುತ್ತವೆ. ಮೊದಲನೆಯವು ಅಂತ್ಯವುಳ್ಳವು ಆದರೆ ಎರಡನೆಯವು ಅನಂತವಾದವು. ಏನೇ ಹೇಳಿ ಕತೆಗಳು ಮಾಯದ ಮೋಡಿಗೆ ಸಿಲುಕಿಸುತ್ತವೆ. ತನ್ನ ದಾರಿಗೆ ನಮ್ಮನ್ನು ಎಳೆದೊಯುತ್ತದೆ.ಹಳೆಯ ನದಿಗಳು ಹಳೆಯ ಸಾಗರಗಳು ಹಳೆಯ ಗಾಳಿ ಇರಲು ಸಾಧ್ಯವಿಲ್ಲ. ಆದರೆ ಹಳೆಯ ಕತೆಗಳು ಹೊಸ ರೂಪ ಪಡೆದು ಇಲ್ಲವೇ ಮೊದಲಿನ ರೂಪದಲ್ಲೇ ನಮ್ಮ ಕಿವಿಗೆ ಬೀಳುವ ಸಾಧ್ಯತೆ ತುಂಬಾ ಹೆಚ್ಚು ಎಂದರೆ ನಂಬಲೇಬೇಕು.
ಮತ್ತೆ ಮತ್ತೆ ಕೇಳುವ ಕಿವಿಗಳಿವೆ ಎನ್ನುವ ಸಲುವಾಗಿಯೇ ಕತೆಗಳು ಹೇಳಲ್ಪಡುತ್ತವೆ ಮತ್ತು ಅಷ್ಟೇ ಸೊಗಸಾಗಿ ಹೆಣೆಯಲ್ಪಡುತ್ತವೆ. ಒಮ್ಮೆ ಹ್ಞೂಂಗುಟ್ಟತೊಡಗಿದರೆ ಸಾಕು ಕತೆ ಮುಗಿಯುವವರೆಗೆ ಅಲ್ಲಿಂದ ಮರಳಿ ಬರುವ ಮಾತಿಲ್ಲ! ಹೀಗೆ ಕತೆಯ ಬಗ್ಗೆ ಹೇಳುತ್ತ ಹೊರಟರೆ ಅದೊಂದು ಮುಗಿಯದ ಕತೆ. ಭಾವಕೋಶದ ಬೀಜದೊಳಗಿನ ಅಂಕುರದಂತೆ ನವೊಲ್ಲಾಸ ಮೂಡಿಸುವ ಹೊಸ ಹೊಸ ಹೊಳಹು ಮೂಡಿಸುತ್ತದೆ. ಅಷ್ಟೇ ಅಲ್ಲ ಕೇಳಲು ಹೊಸ ಹೊಸ ಕಿವಿಗಳನ್ನೂ ಹುಟ್ಟಿಸಿಕೊಳ್ಳುತ್ತದೆ. ಹೃನ್ಮನ ತಣಿಸುವ ತಾಕತ್ತು ಮನೋಹಾರಿ ಕತೆಗಳಿಗೆ ಮಾತ್ರ ಇರೋದು ಅಲ್ವೇನ್ರಿ??
ಜಯಶ್ರೀ ಅವರ ಲೇಖನ ಓದಿ ನನ್ನ ಬಾಲ್ಯದ ನೆನಪುಗಳು ಮೆಲುಕು ಹಾಕುವಂತಾಯ್ತು
ಧನ್ಯವಾದಗಳು
ಕತೆ ಹೇಳುವ ರೀತಿ ಅದಕ್ಕೆ ಕೇಲುಗರನ್ನು ಹಿಡಿದಿಡುವಂತಹ ತಾಕತ್ತನ್ನುಜಯಶ್ರೀ ಅಬ್ಬಿಗೇರಿಯವರು ಚೆನ್ನಾಗಿ ತಿಳಿಸಿ ಇರುವರು.👌🙏
ಮನದ ನಮನಗಳು