ರೋಗಲಕ್ಷಣಗಳನ್ನು ಗೂಗಲ್ ಮಾಡಿ ನೋಡುವ ಹವ್ಯಾಸ ಅನೇಕರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ವೆಬ್ ನಲ್ಲಿ ರೋಗಲಕ್ಷಣಗಳನ್ನು ಗೂಗಲ್ ಮಾಡಿ ಸ್ವಯಂ ರೋಗನಿರ್ಣಯ ಮಾಡಿಕೊಳ್ಳುವುದು ಅತ್ಯಂತ ಅಪಾಯಕಾರಿ. ಈ ರೀತಿಯ ಹುಡುಕಾಟವನ್ನು ಸೈಬರ್ಕಾಂಡ್ರಿಯಾ ಎಂದು ಕರೆಯಲಾಗುತ್ತದೆ.
ಉದಾಹರಣೆಗೆ, ನೀವು ‘ತಲೆನೋವು’ಗಾಗಿ ಹುಡುಕಿದರೆ, ನೀವು ಸುಮಾರು ಕನಿಷ್ಠ 20ಫಲಿತಾಂಶಗಳನ್ನು ಕಂಡುಕೊಳ್ಳುವಿರಿ. ಓದುತ್ತಾ ಹೋದಂತೆ ಪ್ರತಿಯೊಂದೂ ಒಂದಕ್ಕಿಂತ ಒಂದು ಭಯ ಹುಟ್ಟಿಸುತ್ತದೆ. ಚಿಕ್ಕ ತಲೆನೋವು ಸಹ ಗೂಗಲ್ ನಲ್ಲಿ ತಲೆಯಲ್ಲಿನ ಗೆಡ್ಡೆಯೆಂದು ಗುರುತಿಸಲ್ಪಡುವ ಸಾಧ್ಯತೆಗಳಿವೆ ಮತ್ತು ನಿಮ್ಮ ನಿರಂತರ ಹುಡುಕುವಿಕೆಯು ಕ್ಯಾನ್ಸರ್ ನಂಥ ಗಂಭೀರ ಕಾಯಿಲೆಗೆ ತುತ್ತಾದಂಥ ಭೀತಿಯನ್ನು ಮನದಲ್ಲಿ ಉಂಟು ಮಾಡುತ್ತದೆ.
ಇಂಥ ಹವ್ಯಾಸ ತಪ್ಪಾದ ರೋಗನಿರ್ಣಯಗಳ ಜೊತೆಗೆ, ನಿಮ್ಮ ರೋಗಲಕ್ಷಣಗಳನ್ನು ಸ್ವಯಂ-ನಿರ್ಣಯಿಸುವ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಇದು ನಿಜವಾದ ರೋಗವನ್ನು ಮರೆಮಾಚುತ್ತದೆ. ವ್ಯಥಾ ಮಾನಸಿಕ ಕಸಿವಿಸಿಗೆ ಕಾರಣವಾಗುತ್ತದೆ.
ನಿಮ್ಮ ರೋಗಲಕ್ಷಣಗಳನ್ನು ಗೂಗಲ್ ಮಾಡುವ ಮೊದಲು ನೆನಪಿನಲ್ಲಿಡಬೇಕಾದ ವಿಷಯಗಳು:
1. ವೈದ್ಯರು ವೈದ್ಯಕೀಯ ಕಾಲೇಜಿನಲ್ಲಿ ವರ್ಷಗಳನ್ನು ಕಳೆಯುತ್ತಾರೆ
ಒಬ್ಬ ವೈದ್ಯನಾಗಬೇಕಾದರೆ ಅವರು ಕಾಲೇಜಿನಲ್ಲಿ ಓದಿ ನಿರಂತರ ಅಧ್ಯಯನ ಹಾಗೂ ಅಭ್ಯಾಸದಲ್ಲಿರುತ್ತಾರೆ. ಆ ವೈದ್ಯನನ್ನು ಬಿಟ್ಟು ನಾವು ಅಂತರ್ಜಾಲದ ಸಹಾಯದಿಂದ ರೋಗನಿರ್ಣಯದ ಮೊರೆ ಹೋದರೆ ಅದು ತುಂಬಾ ತಪ್ಪಾಗುತ್ತದೆ. ಅಂತರ್ಜಾಲದ ಮೂಲಕ ಅಧ್ಯಯನ ಮಾಡಿ ಒಂದು ಔಷಧವನ್ನು ನಾವೇ ತೆಗೆದುಕೊಳ್ಳುವುದು ಸುಲಿದ ಬಾಳೆಹಣ್ಣು ತಿಂದಷ್ಟು ಸುಲಭವಲ್ಲ. ಅಂತರ್ಜಾಲದಲ್ಲಿ ಸೀಮಿತ ಪ್ರಶ್ನೆಗಳಿಗೆ ತಕ್ಕಂತೆ ಹಾಗೂ ಅದಕ್ಕೆ ನೀವು ನೀಡಿದ ಉತ್ತರದಂತೆ ಮಾತ್ರ ರೋಗವನ್ನು ಪತ್ತೆ ಮಾಡುತ್ತದೆ. ಆದರೆ ವೈದ್ಯರು ದೈಹಿಕವಾಗಿ ನಿಮ್ಮನ್ನು ನೋಡಿ ಮಾತನಾಡಿ ಪರೀಕ್ಷಿಸಿ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ.
2. ಈ ಸ್ಥಿತಿಗೆ “ಸೈಬರ್ಕಾಂಡ್ರಿಯಾ”ಅನ್ನುತ್ತಾರೆ. ಇದು ಆನ್ಲೈನ್ನಲ್ಲಿ ರೋಗಲಕ್ಷಣಗಳನ್ನು ಹುಡುಕುವ ಮೂಲಕ ಸ್ವಯಂ-ರೋಗನಿರ್ಣಯ ಮಾಡುವ ಪ್ರವೃತ್ತಿಯಾಗಿದೆ. ಇದರ ಜೊತಗೆ ವಾಟ್ಸಪ್ ಬರುವ ಮಾಹಿತಿಗಳು ನಿಮ್ಮನ್ನು ಆತಂಕಕ್ಕೆ ದೂಡಿ ಮನಸ್ಸಿನ ನೆಮ್ಮದಿ ಹಾಳು ಮಾ್ಡುತ್ತದೆ
3. ಯಾರು ಬೇಕಾದರೂ ವಿಷಯವನ್ನು ಆನ್ ಲೈನ್ ನಲ್ಲಿ ಪ್ರಕಟಿಸಿರಬಹುದು. ಅದು ತಪ್ಪಾಗಿಯೂ ಇರಬಹುದು.
ಆನ್ ಲೈನ್ ನಲ್ಲಿ ಲಭ್ಯವಿರುವ ವಿಷಯದ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗಾಗಿ ಯಾರೂ ಭರವಸೆ ನೀಡಲಾಗುವುದಿಲ್ಲ. ಇದು ವಿಶ್ವಾಸಾರ್ಹ ಮೂಲಗಳಿಂದ ನಿಮಗೆ ಮಾಹಿತಿಯನ್ನು ಒದಗಿಸಬಹುದಾದರೂ, ನಕಲಿ ಮಾಹಿತಿಯನ್ನು ಹೊಂದಿರುವ ಕೆಲವು ವೆಬ್ ಲಿಂಕ್ ಗಳನ್ನು ಸಹ ಇದು ನಿಮಗೆ ನೀಡಬಹುದು.
ಅಂತರ್ಜಾಲದಲ್ಲಿ ಬೇಕಿರುವುದಕ್ಕಿಂತ ಬೇಡದಿರುವುದೇ ಸಾಕಷ್ಟಿರುತ್ತದೆ. ಅದು ನಿಮ್ಮ ಸಮಸ್ಯೆಯ ನಿಜವಾದ ಪರಿಹಾರದಿಂದ ಸಾಕಷ್ಟು ದೂರ ತೆಗೆದುಕೊಂಡು ಹೋಗಬಹುದು.
ಹೀಗಾಗಿ ಮಾಹಿತಿಯ ವಿಶ್ವಾಸಾರ್ಹ ಮೂಲ ಮತ್ತು ಸಂಪೂರ್ಣ ಸುಳ್ಳಿನ ಕಂತೆಯ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆನ್ ಲೈನ್ ನಲ್ಲಿ ಕೆಲವು ವಿಶ್ವಾಸಾರ್ಹ ವೈದ್ಯಕೀಯ ವೆಬ್ ಸೈಟ್ ಗಳ ಬಗ್ಗೆ ನಿಮ್ಮ ವೈದ್ಯರನ್ನು ಕೇಳಿ ಮತ್ತು ಅವುಗಳನ್ನು ಉಪಯೋಗಿಸಿ.
ಖಿನ್ನತೆ ತಂದೀತು
ಅನಾರೋಗ್ಯದ ಬಗ್ಗೆ ಅಂತರ್ಜಾಲದಲ್ಲಿ ವಿಪರೀತ ಹುಡುಕಾಟವು ತಪ್ಪಾದ ತಿಳಿವಳಿಕೆಗಳಿಂದ ಮಾನಸಿಕ ಕಾಯಿಲೆ ಕಾಯಿಲೆಗಳಿಗೆ ಕಾರಣವಾಗಬಹುದು ಆತ೦ಕ, ಖಿನ್ನತೆ, ನಿದ್ರಾಹೀನತೆಯ೦ತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಇದಕ್ಕೆ ತಾಜಾ ಉದಾಹರಣೆಯೆಂದರೆ ಇತ್ತೀಚಿನ ದಿನಗಳಲ್ಲಿ ಮನುಕುಲ ಎದುರಿಸುತ್ತಿರುವ ಕರೋನಾ. ಅದರ ಬಗ್ಗೆ ತಿಳಿದುಕೊಂಡು ಸರ್ಕಾರದ ಆದೇಶ ಪಾಲಿಸಬೇಕೇ ಹೊರತು ಬರೀ ಅಂತರ್ಜಾಲದ ಮೊರೆ ಹೋದರೆ ಸಾಮಾನ್ಯ ಶೀತ ನೆಗಡಿ ತಲೆನೋವು ಬಂದರೂ ಕರೋನಾ ಹಾಗೆ ಹೀಗೆ ಅಂದುಕೊಂಡು ಖಿನ್ನತೆಗೊಳಗಾಗಬಹುದು. ರೋಗಗಳನ್ನು ಧೈರ್ಯದಿಂದ ಎದುರಿಸಬೇಕು. ಅಂತರ್ಜಾಲದ ಮುಖಾಂತರ ತಪ್ಪಾಗಿ ತಿಳಿದು ತಪ್ಪಾಗಿ ಪಾಲಿಸಿ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಬಾರದು.
ಎಂತಹ ಸಣ್ಣ ಅಥವಾ ಗಂಭೀರ ಕಾಯಿಲೆ ಬಂದರೂ ಅಂತರ್ಅ ಜಾಲದ ಅರಿವೇ ಇಲ್ಲದ ಹಳ್ಳಿಯ ಜನರು ವೈದ್ಯರ ಸಲಹೆ ಮತ್ತು ಚಿಕಿತ್ಸೆ ಮೂಲಕ ಬೇಗ ಗುಣ ಹೊಂದುತ್ತಾರೆ. ಅವರು ಕಾಯಿಲೆ ಬಂದಿತೆಂದು ಹೆದರಿ ಖಿನ್ನತೆಗೆ ಒಳಗಾಗುವದಿಲ್ಲ. ಇದಕ್ಕೆ ತದ್ವಿರುದ್ದ ಎಂಬಂತೆ ನಗರವಾಸಿಗಳು ಅಂತರ್ಜಲ ಜಾಲಾಡಿ ಏನೇನೋ ಊಹಿಸಿಕೊಂಡು ಆತಂಕಕ್ಕೆ ಒಳಗಾಗುತ್ತಾರೆ.
ಇಂದು ಅಂತಾರಾಷ್ಟ್ರೀಯ ಆರೋಗ್ಯ ದಿನಾಚರಣೆ. ಆರೋಗ್ಯವೇ ಭಾಗ್ಯ. ಸರಿಯಾದ ಆಹಾರ ನಡಿಗೆ, ವ್ಯಾಯಾಮ, ಯೋಗಾಭ್ಯಾಸಗಳಿಂದ ನಾವೆಲ್ಲರೂ ಭಾಗ್ಯಶಾಲಿಗಳಾಗೋಣ.
ಸಾಂದರ್ಭಿಕ ಚಿತ್ರ : Christina Morillo from Pexels
Nice article and informative
Very informative article.
Very Nice..informative..
Very useful article
ಲೇಖನ ಉತ್ತಮವಾಗಿ ಮೂಡಿ ಬಂದಿದೆ.
Well narrated article 🙏