21.7 C
Karnataka
Tuesday, December 3, 2024

    ಲಸಿಕೆ ಪಡೆದ ನಂತರವೂ ಕೋವಿಡ್ ಬರಬಹುದೇ?

    Must read

    ಲಸಿಕೆ ಪಡೆದ ನಂತರವೂ ಇನ್ನು ಕೆಲಕಾಲ ಕೋವಿಡ್ ನಿಯಮ ಪಾಲಿಸಬೇಕು

    ಒಂದು ವರ್ಷದ ಹಿಂದೆ ಕೋವಿಡ್ ವಿಚಾರದ ಬಗ್ಗೆ ನಮಗೆ ಬಹುತೇಕ ಏನೂ ತಿಳಿದಿರಲಿಲ್ಲ. ಅದೊಂದು ವಿಶ್ವವ್ಯಾಪಿ ಹೊಸ ವ್ಯಾಧಿಯಾಗಿತ್ತು. ಒಂದೂ ಕಾಲು ವರ್ಷದಲ್ಲಿ ಈ ವ್ಯಾಧಿಯ ಬಗ್ಗೆ ನಾವು ಒಂದಷ್ಟು ವಿಚಾರಗಳನ್ನು ಅರಿತುಕೊಂಡಿದ್ದೇವೆ. ಕೆಲವು ವಿಚಾರಗಳಲ್ಲಿ ಕೋವಿಡ್ ಹೀಗೇ ವರ್ತಿಸುತ್ತದೆ ಎಂದು ಕೂಡ ಹೇಳಬಹುದಾಗಿದೆ. ಅದನ್ನು ತಡೆಯಬಲ್ಲ ಲಸಿಕೆಗಳೂ ಈಗ ಲಭ್ಯವಿವೆ.

    ಕೋವಿಡ್ ನಿಯಮಗಳನ್ನು ಸ್ವಲ್ಪ ಸಡಿಲಿಸಿದರೂ ಅದು ನಮ್ಮ ನಡುವೆ ಜಿಗಿಯುತ್ತ ಮತ್ತೆ ಬಲಿಷ್ಠವಾಗುತ್ತದೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿದದ್ದೇ. ಆದರೆ, ಜನರ ಒತ್ತಾಯಕ್ಕೆ ಮಣಿದ, ಭಾರತ ಸರ್ಕಾರ ಬಹುತೇಕ ಚಟುವಟಿಕೆಗಳನ್ನು ಮತ್ತೆ ಶುರುಮಾಡಿತು. ಜಾತ್ರೆ, ಸಿನಿಮಾ,ಹೋಟೆಲುಗಳು ಶುರುವಾಗಿ ಬದುಕು ಮತ್ತೆ ಹರಡಿತು ಎನ್ನುವಷ್ಟರಲ್ಲಿ ಕೋವಿಡ್ ಕಾಳ್ಗಿಚ್ಚು ಭಾರತದಲ್ಲಿ ಮತ್ತೆ ಹರಡುತ್ತಿದೆ.ಏಪ್ರಿಲ್ ಎರಡನೇ ವಾರದಲ್ಲಿ ದಿನವೊಂದರಲ್ಲಿ ಸರಾಸರಿ ಒಂದು ಲಕ್ಷಕ್ಕೂ ಹೆಚ್ಚಿನ ಹೊಸ ಪ್ರಕರಣಗಳು ಸತತ ಮೂರು ದಿನಗಳು ದಾಖಲಾಗಿವೆ. ಪ್ರತಿದಿನ ಸರಾಸರಿ ಐನೂರಕ್ಕೂ ಹೆಚ್ಚು ಜನರು ವಿಧಿವಶರಾಗಿದ್ದಾರೆ. ಇದು ಭಾರತದ ಕೋವಿಡ್ ಇತಿಹಾಸದಲ್ಲಿ ದಿನವೊಂದಕ್ಕೆ ದಾಖಲಾದ ಅತ್ಯಂತ ಹೆಚ್ಚಿನ ಸೋಂಕಿನ ದಾಖಲೆಯೂ ಆಗಿದೆ.

    ಖ್ಯಾತ ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ರಾಜಕಾರಣಿಗಳು ಒಬ್ಬೊಬ್ಬರಾಗಿ ಪ್ರತಿ ದಿನ ತಮಗೆ ಈ ಎರಡನೇ ಅಲೆಯ ಕೋವಿಡ್ ಪಾಸಿಟಿವ್ ಆಗಿರುವುದಾಗಿ ಟ್ವೀಟ್ ಮಾಡುತ್ತಲೇ ಇದ್ದಾರೆ. ಆದರೆ ದಟ್ಟವಾಗಿ ಹರಡುತ್ತಿರುವ ಈ ಕೋವಿಡ್ ಅಲೆಯ ನಡುವೆ ಕೋವಿಡ್ ಲಸಿಕೆಯ ಭರವಸೆ ಜನರನ್ನು ಪೊರೆಯುತ್ತಿದೆ. ಸುಮಾರು ಎಂಟು ಕೋಟಿ ಜನರಿಗೆ ಈ ವರೆಗೆ ಮೊದಲ ವ್ಯಾಕ್ಸಿನ್ ಡೋಸ್ ದೊರಕಿದೆ. ಈಗ 45 ವಯಸ್ಸು ಮೇಲ್ಪಟ್ಟವರಿಗೆಲ್ಲ ವ್ಯಾಕ್ಸಿನ್ ನೀಡುವ ಪ್ರಯತ್ನಗಳಾಗುತ್ತಿವೆ.

    ಜನರು ಎಚ್ಚರ ತಪ್ಪಿದ ಕಾರಣ ಕೋವಿಡ್ ವ್ಯಾಕ್ಸಿನ್ ದೊರಕುತ್ತಿರುವ ಈ ಸಮಯದಲ್ಲೇ ಭಾರತ ಅತ್ಯಂತ ಬಲವಾದ ಕೋವಿಡ್ ನ ಎರಡನೇ ಅಲೆಯನ್ನು ಎದುರಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಕೋವಿಡ್ ವ್ಯಾಕ್ಸಿನ್ ಬಗ್ಗೆ ಕೆಲವು ವಸ್ತು ನಿಷ್ಠ ವಿಷಯಗಳ ಅರಿವು ಜನರಿಗಿರಬೇಕಾದ್ದು ಅತ್ಯಂತ ಅಗತ್ಯ. ವ್ಯಾಕ್ಸಿನ್ ಬಗ್ಗೆ  ಹೆದರುವ ಅಗತ್ಯವಿಲ್ಲ. ಅಂತೆಯೇ ವ್ಯಾಕ್ಸಿನ್ ಬಗ್ಗೆ ಇಲ್ಲ ಸಲ್ಲದ ಭರವಸೆಗಳನ್ನು ಇಡುವುದು ಕೂಡ ಅಪಾಯಕರ.

    ಇತ್ತೀಚೆಗೆ ವ್ಯಾಕ್ಸಿನ್ ನ ಮೊದಲ ಅಥವಾ ಎರಡೂ ಡೋಸ್ ಪಡೆದ ನಂತರ ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ಬಗೆಯ ಆತಂಕಕ್ಕೆ ಎಡೆ ಮಾಡಿಕೊಡುತ್ತಿದೆ. ವಾಟ್ಸಾಪ್ ಮುಂತಾದ ತಾಣಗಳಲ್ಲಿ  ’ಪೆಲ್ಟಮ್ಯಾನ್ ಎಫೆಕ್ಟ್ ’ ಎನ್ನುವ ಸಿದ್ಧಾಂತದ ಬಗ್ಗೆ ಚರ್ಚೆ ನಡೆಯುತ್ತಿದೆ.

    Sam peltzmanಎಂಬಾತ ಚಿಕಾಗೊ ನಲ್ಲಿ 1988ರಲ್ಲಿ ಮೈಕ್ರೊ ಎಕಾನಾಮಿಕ್ಸ್ ಹೇಳಿಕೊಡುತ್ತಿದ್ದ ವ್ಯಕ್ತಿ. ಆತ ಹೇಳಿದ್ದೇನೆಂದರೆ, ಕೆಲವು ಭದ್ರತೆಗಳು ಜನರಿಗೆ ಸಿಕ್ಕ ಕೂಡಲೇ ಅವರಲ್ಲಿ ಅಪಾಯವನ್ನು ಎದುರಿಸುವ ಧೈರ್ಯ ಹೆಚ್ಚಾಗುವ ಸಂಭವನೀಯತೆಯ ಬಗ್ಗೆ ಆತ ತತ್ವವೊಂದನ್ನು ಪ್ರತಿಪಾದಿಸಿದ. ಉದಾಹರಣೆಗೆ ಹೆಲ್ಮೆಟ್ ಹಾಕಿದ ನಂತರ ಬೈಕ್ ನ್ನು ಅತ್ಯಂತ ವೇಗವಾಗಿ ಓಡಿಸುವುದು, ಸೀಟ್ ಬೆಲ್ಟ್ ಹಾಕಿಕೊಂಡಿದ್ದೇನೆ ಎನ್ನುವ ಹುಂಬ ಧೈರ್ಯದಲ್ಲಿ ಅಡ್ಡಾ ದಿಡ್ಡಿ ವಾಹನಗಳನ್ನು ಓಡಿಸಿ ಆಕ್ಸಿಡೆಂಟ್ ಗಳು ಹೆಚ್ಚಾಗುವುದು -ಇತ್ಯಾದಿ ವಿಚಾರಗಳನ್ನು ಈತನ ತತ್ವ ಹೇಳುತ್ತದೆ.

    ಅಂದರೆ, ಒಂದಿಷ್ಟು ಭದ್ರತೆ ಸಿಕ್ಕಕೂಡಲೇ ಜನರು ತಾವು ವಹಿಸಬೇಕಾದ ಎಚ್ಚರಿಕೆಗಳನ್ನು ಗಾಳಿಗೆ ತೂರಿ, ಮೈ ಮರೆತು ಅಪಾಯಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುವ ವಾಲಿಕೆಯನ್ನು ತೋರುತ್ತಾರೆ. ಅಲ್ಲಿ ಬದಲಾಗುವುದು ಅಪಾಯವನ್ನು ಆಹ್ವಾನಿಸುವ ಜನರ ವರ್ತನೆಯೇ ಹೊರತು, ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ನಿಂದ ಯಾವ ಪ್ರಯೋಜನವೂ ಇಲ್ಲವೆಂದಲ್ಲ. ಪ್ರಾಣವೇ ಹೋಗುವ ಕಡೆ, ಜೀವ ಉಳಿಯುವ ಸಾಧ್ಯತೆಯನ್ನು ಈ ಉಪಕರಣಗಳು ಕಲ್ಪಿಸಿ ಅಲ್ಪ ಸ್ವಲ್ಪ ಭದ್ರತೆಯನ್ನು ಒದಗಿಸಬಲ್ಲವೇ ಹೊರತು ಅಪಘಾತ ನಡೆಯದಂತೆ ಜನರು ಎಚ್ಚರವಹಿಸದಿದ್ದಲ್ಲಿ ಅವು ನಿಶ್ಪ್ರಯೋಜಕವಾಗುತ್ತವೆ. ಈ ವಿಚಾರವನ್ನು ನಾವು ಕೋವಿಡ್ ಲಸಿಕೆಯ ವಿಚಾರಕ್ಕೂ ಅನ್ವಯಿಸಿಕೊಳ್ಳಬಹುದು.

    ಲಸಿಕೆ ಸಿಕ್ಕ ಕೂಡಲೇ ಕೋವಿಡ್ ಬರುವುದಿಲ್ಲವೆಂದಲ್ಲ. ಎರಡು ಡೋಸ್  ಲಸಿಕೆಯ ನಂತರವೂ  ಕೋವಿಡ್ ನಿಯಮಗಳನ್ನು ಪಾಲಿಸದಿದ್ದರೆ ಸುಲಭವಾಗಿ ಕೋವಿಡ್ ಬರಬಹುದು.ಕೋವಿಡ್ ವಿಚಾರದಲ್ಲಿ ಈಗ ಲಸಿಕೆಯ ಲಭ್ಯತೆ ಇದೆಯಾದರೂ ಎಂದಿನಂತೆ ಎಚ್ಚರಿಕೆಗಳನ್ನು ನಾವು ಕಟ್ಟು ನಿಟ್ಟಾಗಿ ಪಾಲಿಸುವುದನ್ನು ಮುಂದುವರೆಸುವ ಅವಶ್ಯಕತೆಯಿದ್ದೇ ಇದೆ. ಮೈ ಮರೆಯುವಂತಿಲ್ಲ.ನೆನಪಿಟ್ಟುಕೊಳ್ಳಬೇಕಾದ ವಿಚಾರಗಳು ಬದಲಾಗಿಲ್ಲ. ಜೊತೆಗೆ ಇನ್ನಷ್ಟು ವಿಚಾರಗಳನ್ನು ಮನನ ಮಾಡಿಕೊಳ್ಳುವುದು ಕೂಡ ಅಗತ್ಯವಾಗಿದೆ.

    1. ವ್ಯಾಕ್ಸಿನ್ ನಿಂದ ಕೋವಿಡ್ ಬರುವುದಿಲ್ಲ.

    2. ಒಂದು ಡೋಸ್ ಪಡೆದವರಲ್ಲಿ ಪೂರ್ಣ ಪ್ರಮಾಣದ ಪ್ರತಿರೋಧಕ ಶಕ್ತಿಯಿರುವುದಿಲ್ಲ.

    3. ಎರಡೂ ಡೋಸ್ ಗಳು ದೊರಕಿದ ನಂತರ ಜನರಲ್ಲಿ ಕೋವಿಡ್ ವಿರುದ್ಧ ಬಲವಾದ ಪ್ರತಿರೋಧಕ ಶಕ್ತಿ ಬೆಳೆಯುತ್ತದೆ. ಆದರೆ, ಅದು ಪ್ರತಿಶತ ನೂರರಷ್ಟು ರಕ್ಷಣೆ ಒದಗಿಸುವುದಿಲ್ಲ. ಆದ್ದರಿಂದ ಎಚ್ಚರ ತಪ್ಪಿದರೆ ಆಗಲೂ ಕೋವಿಡ್ ಬರಬಲ್ಲದು.

    4. ಎರಡೂ ಡೋಸ್ ಪಡೆದವರಲ್ಲಿ ಕೂಡ ಹಲವಾರು ವಾರಗಳ ಕಾಲ ಪ್ರತಿರೋಧಕ ಶಕ್ತಿ ಬೆಳೆದಿರುವುದಿಲ್ಲ. ಇದೇ ಕಾರಣಕ್ಕೆ ಎರಡನೇ ಡೋಸ್ ಸಿಕ್ಕ ಮರುದಿನವೇ ಕೋವಿಡ್ ಪಾಸಿಟಿವ್ ಎನ್ನುವಂತ ವಿಚಾರಗಳನ್ನು ನಾವು ಓದುತ್ತೇವೆ.

    5. ಯಾವ ಲಸಿಕೆಗಳಿಂದಲೂ ಪ್ರತಿಶತ ಕೋವಿಡ್ ನಿರೋಧಕ ಶಕ್ತಿ ಬರುವುದಿಲ್ಲ.

    6. ಒಂದಷ್ಟು ಶಕ್ತಿ ಬಂದರೂ ಒಂದಾರು ತಿಂಗಳುಗಳಿಗಿಂತ ಹೆಚ್ಚಾಗಿ ಅದು ಉಳಿಯದಿರಬಹುದು.ಒಂದಾರು ತಿಂಗಳ ನಂತರ ಬೂಸ್ಟರ್ ಡೋಸ್ ಬೇಕಾಗಬಹುದು.

    7. ಕೋವಿಡ್ ಲಸಿಕಯನ್ನು ಪ್ರತಿ ವರ್ಷ ಕೊಡುವ ಪರಿಪಾಟವನ್ನು ಪಾಲಿಸಬೇಕಾಗಬಹುದು.ಈ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ.

    8. ಭಾರತದ ಬೃಹತ್ ಸಂಖ್ಯೆಯ ಜನರಿಗೆ ಎರಡೆರಡು ಲಸಿಕೆ ಸಿಗಲು ಇನ್ನೂ ಬಹಳ ಕಾಲ ಬೇಕು. ಜನಸಂಖ್ಯೆ ಶೇಕಡ 60ರಷ್ಟು ಜನರು ವ್ಯಾಕ್ಸಿನ್ ಪಡೆದಾಗ ಮಾತ್ರ ಹರ್ಡ್ ಇಮ್ಯೂನಿಟಿ ಬೆಳೆಯುತ್ತದೆ. ಅಲ್ಲಿಯವರೆಗೆ ನಮ್ಮ ದೇಶ ಕೋವಿಡ್ ಮುಕ್ತವಾಗುವುದಿಲ್ಲ. ಜನ ಪ್ರಪಂಚದ ಪ್ರತಿ ದೇಶದಿಂದ ಕೋವಿಡ್ ಉಚ್ಚಾಟಣೆಯಾಗುವುದು ಸುಲಭವಾದ ವಿಚಾರವಲ್ಲ.ಅಲ್ಲಿಯವರೆಗೆ ಕೋವಿಡ್ ಎಚ್ಚರಿಕೆಗಳು ಜಾರಿಯಲ್ಲಿರಲೇ ಬೇಕು. ಈ ವಿಚಾರ ಅತ್ಯಂತ ಕಟುವಾದ ಸತ್ಯ. ಇದನ್ನು ಪ್ರಪಂಚದ ಎಲ್ಲರೂ ಒಂದಾಗಿ ಎದುರಿಸಲೇಬೇಕಾಗಿದೆ. ಲಸಿಕೆ ಒಂದು ಪ್ರಮಾಣದ ಸುರಕ್ಷತೆಯನ್ನು ಒದಗಿಸಿದರು, ಅದು ಪೂರ್ಣ ಪ್ರಮಾಣದ್ದಾಗಿರುವುದಿಲ್ಲ.ಈ ಎಚ್ಚರಿಕೆಯ ಜೊತೆಗೇ ನಮ್ಮ ಬದುಕು ಮುಂದುವರೆಯಬೇಕಾಗಿದೆ.

    9. ಲಸಿಕೆಯನ್ನು ತೆಗೆದುಕೊಳ್ಳದಿದ್ದಲ್ಲಿ ಕೋವಿಡ್ ಅಪಾಯ ನೂರಕ್ಕೆ ನೂರು ನಿಜವಾಗಿರುತ್ತದೆ.ಅದರಿಂದ ತಪ್ಪಿಸಿಕೊಳ್ಳಲು ಸದಾ ಜಾಗೃತರಾಗಿರಬೇಕಾಗುತ್ತದೆ. ಆದರೂ ಅವಘಡಗಳು ಸಂಭವಿಸುವ ಸಾಧ್ಯತೆಯ ಹೆದರಿಕೆಯಲ್ಲೇ ಬದುಕಬೇಕಾಗುತ್ತದೆ. ಲಸಿಕೆಗಳು ಶೇಕಡಾ 70ಕ್ಕೂ ಹೆಚ್ಚಿನ ರಕ್ಷಣೆಯನ್ನು ಒದಗಿಸಬಲ್ಲವು.ಲಸಿಕೆ ಪಡೆಯುವುದರಿಂದ ಸಾವು ನೋವು ಮತ್ತು ಆಸ್ಪತ್ರೆ ಸೇರಬೇಕಾದ ಸ್ಥಿತಿ ಗರಿಷ್ಠ ಮಟ್ಟದಲ್ಲಿ ಕಡಿಮೆಯಾಗುತ್ತದೆ.

    ಆದರೆ ಲಸಿಕಗಳಿಂದ ಕೂಡ ಕೆಲವು ದುಷ್ಪರಿಣಾಮಗಳು ಪಟ್ಟಿಯಾಗಿವೆ. ಹೊಸ ದುಷ್ಪರಿಣಾಮಗಳು ದಾಖಲಾಗುತ್ತಿವೆ. ಉದಾಹರಣೆಗೆ, ಆಸ್ಟ್ರಾಜೆನಿಕಾ ಲಸಿಕೆ ಕೆಲವರ ರಕ್ತನಾಳಗಳಲ್ಲಿ ರಕ್ತದ ಗಡ್ಡೆಗಳನ್ನು ಸೃಷ್ಟಿಸಬಲ್ಲದು ಎನ್ನುವ ವಿಚಾರ ಯೂರೋಪು ಮತ್ತು ಯು.ಕೆ.ಯಲ್ಲಿ ವಿಸ್ತೃತವಾದ ಚರ್ಚೆಯಾಯಿತು.  ಲಸಿಕೆ ಪಡೆದ ಲಕ್ಷಾಂತರ ಜನರಲ್ಲಿ ಹಲವರಲ್ಲಿ  ರಕ್ತದ ಗಡ್ಡೆ ಕಾಣಿಸಿದ್ದು, ಕೆಲವರು ಅಸುನೀಗಿದ್ದು ದೃಢವಾಯಿತು.ಅದರಲ್ಲೂ ಇದು ಮಹಿಳೆಯರಲ್ಲೇ ಅಧಿಕವಾಗಿ ಕಾಣಿಸಿತು.ಆದರೆ ಇದು ಕಾಕತಾಳಿಯವೋ ಅಥವಾ ಲಸಿಕೆಯಿಂದಲೂ ಎಂಬುದರ ಬಗ್ಗೆ ಇನ್ನು ಅಧ್ಯಯನ ನಡೆಯುತ್ತಿದೆ. ಆದರೆ ಈ ಸೈಡ್ ಎಫೆಕ್ಟ್ ಸಾವಿರಾರು ಮೈಲು ವಿಮಾನ ಪ್ರಯಾಣ ಮಾಡಿದರೆ ಅಥವಾ ಮಕ್ಕಳಾಗದಂತೆ ಮಹಿಳೆಯರು ತೆಗೆದುಕೊಳ್ಳುವ ಸಂತಾನ ನಿರೋಧಕ ಗುಳಿಗೆಗಳಿಂದ ಆಗುವ ರಕ್ತದ ಗಡ್ಡೆಗಳ ಅಪಾಯಕ್ಕೆ ಹೋಲಿಸಿದರೆ ಒಂದು ಭಾಗದಷ್ಟು ಕೂಡ ಅಪಾಯಕಾರಿಯಲ್ಲ ಎಂಬ ವಿಚಾರವನ್ನು ಸರ್ಕಾರ, ಜನರಿಗೆ ತಿಳಿಸಿ ಭರವಸೆ ನೀಡಿದೆ.

    ಹಾಗೆ ನೋಡಿದರೆ, ಪ್ರಪಂಚದ ಯಾವ ಲಸಿಕೆಯೂ ಪೂರ್ಣ ಪ್ರಮಾಣದ ರಕ್ಷಣೆಯನ್ನು ನೀಡುವುದಿಲ್ಲ. ಪ್ರತಿಯೊಂದಕ್ಕೂ ಅದರದೇ ಆದ ಸೈಡ್ ಎಫೆಕ್ಟ್ ಗಳು ಕೂಡ ಇವೆ. ಕೋವಿಡ್ ಲಸಿಕೆಯೂ ಇದಕ್ಕೆ ಹೊರತಲ್ಲ. ಆದರೆ ಪ್ರತಿಯೊಂದು ಲಸಿಕೆಗಳಿಂದ ಮನುಷ್ಯಕುಲಕ್ಕೆ ಅಪಾರವಾದ ಲಾಭವಾಗಿದೆ. ಕೋಟ್ಯಂತರ ಜನರ ಜೀವ ಉಳಿದಿದೆ. ಕೋವಿಡ್ ಲಸಿಕೆಯ ವಿಚಾರದಲ್ಲೂ ಇದು ಸತ್ಯವಾಗಲಿದೆ.

    10. ಆದರೆ ಹಲವಾರು ಕೋವಿಡ್ ಲಸಿಕೆಗಳನ್ನು ವರ್ಷವೊಂದರಲ್ಲಿ ಮಾರುಕಟ್ಟೆಗೆ ತಂದು ದೀರ್ಘಕಾಲದ ಅಧ್ಯಯನವಿಲ್ಲದೆ ಜನ ಸಾಮಾನ್ಯರಿಗೆ ನೀಡುತ್ತಿರುವ ಬಗ್ಗೆ ಜನರಲ್ಲಿ ಆತಂಕವಿದೆ. ಪೂರ್ಣ ಪ್ರಮಾಣದ ಮಾಹಿತಿಯಿಲ್ಲದ ಕಾರಣ ಎಲ್ಲರಲ್ಲೂ ಒಂದು ಬಗೆಯ ಆತಂಕ ಮನೆಮಾಡಿದೆ. ಆದರೆ, ಕೋವಿಡ್ ಬಿಗಿಹಿಡಿತಕ್ಕೆ ಸಿಲುಕಿದಲ್ಲಿ ಆಗಬಹುದಾದ ಜೀವಹಾನಿಗೆ ಹೋಲಿಸಿದರೆ ಕೋವಿಡ್ ಲಸಿಕೆ ತೆಗೆದುಕೊಂಡರೆ ಆಗುವ ಲಾಭಗಳೇ ಅಧಿಕವಾದ ಕಾರಣ ವಿವಾದಗಳಿರುವ ಆಸ್ತ್ಟ್ರಜೆನಿಕದ  ಎರಡೂ ಡೋಸ್ ವ್ಯಾಕ್ಸಿನ್ ಗಳನ್ನು ನಾನು ತೆಗೆದುಕೊಂಡಿದ್ದೇನೆ.ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಆರಾಮಾಗಿದ್ದೇನೆ.

    ಕೋವಿಡ್ ಬಂದರೆ ಆಗಬಹುದಾದ ದುರದೃಷ್ಟದ ಪಾಡನ್ನು ನನ್ನ ಪ್ರಯತ್ನ ಮತ್ತು ಒಪ್ಪಿಗೆಯಿಂದ ದೂರವಿಟ್ಟ ತೃಪ್ತಿಯಂತೂ ನನಗಿರುತ್ತದೆ. ಅಕಸ್ಮಾತ್ ಕೋವಿಡ್ ಬಂದು, ಬೇರೆಯವರಿಗೆ ನನ್ನಿಂದ ಸದ್ದೇ ಇಲ್ಲದೆ ಕೋವಿಡ್ ಹರಡದಂತೆ ತಡೆದ ನೆಮ್ಮದಿಯೂ ಇರುತ್ತದೆ.ಸದ್ಯದ ಪರಿಸ್ಥಿತಿಯಲ್ಲಿ ಹೀಗೆ ಮಾಡಿರೆಂಬುದೇ ಪ್ರತಿ ಸರ್ಕಾರಗಳು ನಮ್ಮನ್ನು ಕೇಳುತ್ತಿರುವುದು ಕೂಡ.

    ಲಸಿಕೆ ಪಡೆದರೂ ಸಧ್ಯಕ್ಕೆ ಕೋವಿಡ್ ನಿಯಮಪಾಲನೆಗಳು ಹೋಗುವುದಿಲ್ಲ. ಜನರು ಮೈ ಮರೆತರೆ ಕೋವಿಡ್ ಮತ್ತೆ ಹರಡುತ್ತದೆ. ಮತ್ತೊಂದು ವರ್ಷವಾದರು ನಾವು ಕೋವಿಡ್ ನಿಯಮಪಾಲನೆಯನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಮುಂದೆಯೂ ಅಗತ್ಯಕ್ಕೆ ತಕ್ಕಂತೆ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ತಯಾರಿರೋಣ.

    Photo by Ivan Diaz on Unsplash

                                                                  

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    5 COMMENTS

    1. ಬಹಳ ದಿನಗಳ ನಂತರ ಮತ್ತೆ ನಿಮ್ಮ ಬರಹ ಕಂಡು ಖುಷಿಯಾಯಿತು. ಎಂದಿನಂತೆ ಮಾಹಿತಿ ಪೂರ್ಣ ಬರಹ.

      • ಪ್ರೇಮಲತಾ ಅವರ ಲೇಖನ ಬಹಳ ದಿನಗಳ ನಂತರ ಓದಿ ತುಂಬಾ ತುಂಬಾ ಖುಷಿಯಾಯಿತು ಹಾಗೂ ಲೇಖನದ ಮಾಹಿತಿ ಚೆನ್ನಾಗಿದೆ. ನಿಮ್ಮ ಲೇಖನಕ್ಕೆ ಕಾಯುತ್ತಿರುವ ಓದುಗರಲ್ಲಿ ನಾನೂ ಒಬ್ಬಳು. ಆಗಾಗ ನಿಮ್ಮ ವಿಚಾರಗಳು ನಮ್ಮತ್ತ ಹರಿದು ಬರಲಿ.

    LEAVE A REPLY

    Please enter your comment!
    Please enter your name here

    Latest article

    error: Content is protected !!