20.6 C
Karnataka
Sunday, September 22, 2024

    ನಿಂದಕರಿರಬೇಕು

    Must read


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಕಾಣದಂತೆ  ಕಣ್ಗಳ್ ತಮ್ಮ ಕಾಡಿಗೆಯಂ-  ಕನ್ನಡದ  ಮೊದಲ ಲಕ್ಷಣಗ್ರಂಥ ‘ಕವಿರಾಜಮಾರ್ಗ’ದಲ್ಲಿ  ಪ್ರಸ್ತಾಪವಾಗಿರುವ  ಅಪ್ಪಟ ದೇಸಿ ಸೊಗಡುಳ್ಳ ಮಾತಿದು.  ತೋರ್ಬೆರಳೊಂದೇ ಇತರರನ್ನು ತಪ್ಪಿತಸ್ಥರೆಂದು ಬೊಟ್ಟು  ಮಾಡಿ ತೋರಿಸುವಾಗ  ಇತರ ಬೆರಳುಗಳು ನಮ್ಮತ್ತ ನೀನೆ ಮೊದಲ ತಪ್ಪಿತಸ್ಥ  ಎಂದು ಬೊಟ್ಟುಮಾಡಿ ತೋರಿಸುತ್ತಿರುತ್ತವೆ.

    ಕವಿರಾಜಮಾರ್ಗಕಾರ ಕಾವ್ಯದ ದೋಷಗಳನ್ನು ಕುರಿತು ಮಾತನಾಡುವಾಗ   “ಕಾಣನೇಗೆಯ್ದುಂ ತನ್ನ  ದೋಷಮಂ ಕಾಣದಂತೆಂದುಂ ಕಣ್ಗಳ್ ತಮ್ಮ ಕಾಣಿಗೆಯುಂ”    ಎಂಬ ಮಾತನ್ನು ಉಲ್ಲೇಖಿಸಿದ್ದಾನೆ. ಕಣ್ಣಿಗೆ ಕಾಡಿಗೆ ಹಾಕಿದರೆ ಅದರ ಸೌಂದರ್ಯವನ್ನು  ನೋಡುವ ಕಣ್ಣುಗಳೇ ಬೇರೆ. ಎಂದು ವಾಚ್ಯಾರ್ಥದಲ್ಲಿ ತೆಗೆದುಕೊಂಡರೆ  ವಿಶೇಷಾರ್ಥದಲ್ಲಿ  ಮನುಷ್ಯ ಏನು ಮಾಡಿದರೂ ತನ್ನ ದೋಷವನ್ನು ತಾನು ಕಂಡುಕೊಳ್ಳಲಾರ, ಅತ್ಮಾಭಿಮಾನವೋ  ತನ್ನ ಮೇಲಿನ ಅಂಧಾಭಿಮಾನವೋ ತನ್ನನ್ನು ಯಾವತ್ತೂ ಸಮರ್ಥಿಸಿಕೊಳ್ಳುತ್ತಾನೆ .

    ತನ್ನ ಮೂಗಿನ ನೇರಕ್ಕೆ ಮಾತನಾಡಿಕೊಳ್ಳುವುದನ್ನು ಬಿಟ್ಟು “ ನಮ್ಮ ಬೆನ್ನು ನಮಗೆ ಕಾಣದು” ಎಂಬ  ಮಾತಿನಂತೆ ಸ್ವತಃ ಆತ್ಮವಿಮರ್ಶೆಗೆ ಒಳಗಾಗಬೇಕು . ಹೊಗಳಿಕೆ,ಓಲೈಕೆ, ದಾಕ್ಷಿಣ್ಯ ,ಮುಂತಾದ ಕೃತಕತೆಯನ್ನು ಮೀರಿ,  ನಿಂದನೆಗಳನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎನ್ನುತ್ತಾರೆ.

    ಇದನ್ನೆ ನಿಂದಕ ನಿಯರೆ ರಾಖಿಯೆ,ಆಂಗನ ಕುಟಿ ಬಂಧಾಯಿ|ಬಿನ ಸಾಬನ,ಪಾನಿಬಿನಾ ನಿರ್ಮಲ ಕರೆ ಸುಭಾಯಿ||

    ಎಂದು ಸಂತ ಕಬೀರರು ಹೇಳಿರುವುದು.  ಬದುಕಿನ ನಿರಂತರ ಪ್ರಯಾಣದಲ್ಲಿ ಸಹ ಪ್ರಯಾಣಿಕರಿಂದ ಸದಾ ಒಳ್ಳೆಯದನ್ನೆ ನಿರೀಕ್ಷಿಸಲಾಗದು. ಇವರು ತೊಂದರೆ ಕೊಟ್ಟು ಕಿರಿ ಕಿರಿ ಮಾಡಿ ನಮ್ಮನ್ನು ಪರಿಪಕ್ವಗೊಳಿಸುತ್ತಾರೆ ಅದಕ್ಕೆ ನಾವುಗಳು ಸದಾ ಋಣಿಗಳಾಗಿರಬೇಕು. 

    ನಕರಾತ್ಮಕತೆಯನ್ನು ಬಿಟ್ಟು ಎಲ್ಲವನ್ನೂ ಸಕಾರಾತ್ಮವಾಗಿ ತೆಗೆದುಕೊಳ್ಳಬೇಕು.  ನೀರು ಸಾಬೂನು ವ್ಯಯವಾದರೂ ಕೊಳೆ ಕಳೆದು ಹೋಗುವಂತೆ  ನಿಂದಕ ಜನರು ಅಕಾರಣವೋ,ಸಕಾರಣವೋ ತಮ್ಮ ಹಣ, ಸಮಯ,ಶಕ್ತಿ ವ್ಯಯಿಸಿ  ಕೊಂಕುನುಡಿಗಳನ್ನು, ಬಿರುನುಡಿಗಳನ್ನು, ಮನಸ್ಸಿಗೆ ಘಾಸಿಯಾಗುವಂಥ ಮಾತುಗಳನ್ನಾಡಿ ಸದಾ ಇತರರ ಕೊಳೆ ತೆಗೆಯುತ್ತಲೇ ಇರುತ್ತಾರೆ.  ಹಾಗಾಗಿ ಹೊಗಳು ಭಟರಿಗಿಂತ ನಿಂದಕರಿಗೆ ಎಡೆ ಕೊಡಬೇಕು ಎನ್ನುತ್ತಾರೆ.  

    ಬದುಕಿನ ಹಾದಿಯಲ್ಲಿ ನಿಚ್ಛಳ ಯಶಸ್ಸು ಬೇಕೆಂದರೆ ಇಂಥ ನಿಂದಕರ ನಡುವೆ ಇರಲೇಬೇಕು.  ಮನುಷ್ಯ  ಎಷ್ಟೇ  ಬುದ್ಧಿವಂತನಾದರೂ  ನಾಳಿನ ಹೊಳಹುಗಳ ಸುಳುಹುಗಳನ್ನು ಅರಿಯದವನಾಗಿರುತ್ತಾನೆ. ನಿಂದಕರು ತಮಗರಿವಿಲ್ಲದಂತೆ ಇತರರನ್ನು ತಿದ್ದುವ ಕೆಲಸ ಮಾಡುತ್ತಿರುತ್ತಾರೆ ಹಾಗಾಗಿ ಅವರಿಗೆ ಧನ್ಯವಾದಗಳನ್ನೂ ಹೇಳಬೇಕು. ನಾವೇ ಸರಿ ಎಂಬ ಬೀಗುವಿಕೆ ಸರಿಯಲ್ಲ ಬಾಗುವಿಕೆಯೂ ಇರಬೇಕು ಅಂದಾಗ ಮಾತ್ರ ಸಜ್ಜನಿಕೆಯ ಬಾಳುವಿಕೆ ನಮ್ಮದಾಗುತ್ತದೆ ಹಾಗಾಗಿ ನಮ್ಮ ಓರೆಕೋರೆಗಳನ್ನು ರಂಜಕವಾಗಿ ಹೇಳುವ ನಿಂದಕರನ್ನು ಸಹಿಸಿಕೊಳ್ಳುವ ವಿಶಾಲ ಮನೋಧರ್ಮವಿರಬೇಕು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    spot_img

    More articles

    2 COMMENTS

    1. ಹೂವಿನ ತೋಟದಲ್ಲಿ ಹೂವು ಪರಿಪೂರ್ಣ ವಾಗಿ ಅರಳಲು ಆ ತೋಟದ ಸುತ್ತಾ ಮುಳ್ಳಿನ ಬೇಲಿ ಇರಬೇಕು. ನಮ್ಮ ಎದುರಾಳಿಯು ಬಿರುಗಾಳಿಯಂತೆ ಬಲಶಾಲಿ ಆಗಿದ್ದ ಸಮಯದಲ್ಲಿ ನಾವು ಹುಲ್ಲಿನ ಕಡ್ಡಿಯಂತೆ ಬಾಗುವುದನ್ನು ಕಲಿತರೆ ಮತ್ತಷ್ಟು ಬದುಕುವ ಸಾಧ್ಯತೆ ಇರುತ್ತದೆ. ಬಾಗುವುದನ್ನು ಕಲಿತರೆ ಮುಂದೊಂದು ದಿನ ನಾವು ಬೀಗಬಹುದು.
      ಲೇಖನ ಉತ್ತಮವಾಗಿದೆ ಧನ್ಯವಾದಗಳು 🙏🙏

    LEAVE A REPLY

    Please enter your comment!
    Please enter your name here

    Latest article

    error: Content is protected !!