ಷೇರುಪೇಟೆಯಲ್ಲಿ ಸುಲಭವಾಗಿ ಹಣ ಗಳಿಸಬಹುದು. ಆದರೆ ಹಣಗಳಿಸಬೇಕೆಂಬುದೊಂದೇ ಧ್ಯೇಯವಾಗಿರಬೇಕು. ಅದರಲ್ಲೂ ಚಟುವಟಿಕೆ ಅಗ್ರಮಾನ್ಯ ಕಂಪನಿಗಳಿಗೆ ಮಾತ್ರ ಸೀಮಿತವಾಗಿರಬೇಕು. ಇದು ಎಷ್ಠರಮಟ್ಟಿಗೆ ಸಾಧ್ಯ ಎಂದರೆ ಉತ್ಪಾದನಾ ಕಂಪನಿಗಳು ತಾವು ಉತ್ಪಾದನೆಗೆ ಅಗತ್ಯವಿರುವ ಸಮಯ ಮತ್ತು ಉತ್ಪಾದಿಸಿ ಗಳಿಸುವ ಹಣಕ್ಕಿಂತ ಹೆಚ್ಚು ಗಳಿಕೆ ಸಾಧ್ಯ. ಆದರೆ ಚಟುವಟಿಕೆಯು ಸ್ವಲ್ಪ ದಾರಿತಪ್ಪಿದಲ್ಲಿ ಹಾವು ಏಣಿ ಆಟದಲ್ಲಿ ಹಾವು ಕಚ್ಚಿಸಿಕೊಂಡು ಪಾತಾಳಕ್ಕಿಳಿದಂತಾಗುತ್ತದೆ. ಎಚ್ಚರ ಅತ್ಯಗತ್ಯ.
ಹೂಡಿಕೆ ತಜ್ಞರು, ವಿಶ್ಲೇಷಕರು, ಪಂಡಿತರು ಸಾಮಾನ್ಯವಾಗಿ ಸಣ್ಣ ಹೂಡಿಕೆದಾರರು ದೀರ್ಘಕಾಲೀನ ಹೂಡಿಕೆಗೆ ತೊಡಗಿಸಿಕೊಂಡರೆ ಅಧಿಕ ಲಾಭ ಪಡೆಯಬಹುದು ಎನ್ನುತ್ತಾರೆ. ಸೆನ್ಸೆಕ್ಸ್ ಒಂದು ವರ್ಷದ ಹಿಂದೆ ಅಂದರೆ ಹಿಂದಿನ ಮಾರ್ಚ್ ತಿಂಗಳಲ್ಲಿ ಸುಮಾರು 25,700 ಪಾಯಿಂಟುಗಳಲ್ಲಿದ್ದು ಅಲ್ಲಿಂದ ಸರಿ ಸುಮಾರು ದ್ವಿಗುಣಗೊಂಡಾಗಲೂ ಇದೇ ರೀತಿ ಉಪದೇಶಿಸಿದಲ್ಲಿ ಹೂಡಿಕೆ ಯಶಸ್ಸು ಕಾಣುವುದು ಸಾಧ್ಯವಿರದು. ಅಲ್ಲದೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಷೇರುಗಳ ಇಂಡೆಕ್ಸ್ ಗಳು ಸಹ ಸರ್ವಕಾಲೀನ ಗರಿಷ್ಠಕ್ಕೆ ಜಿಗಿದಿರುವ ಕಾರಣ ಅಂತಹ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ, ಹೂಡಿಕೆಯು ಧೀರ್ಘಕಾಲೀನ, ಅತಿ ದೀರ್ಘಕಾಲೀನವೋ ಅಥವಾ ಶಾಶ್ವತಕಾಲೀನವೋ ಆಗಿಬಿಡುವ ಸಾಧ್ಯತೆ ಹೆಚ್ಚಾಗುತ್ತದೆ.ಕೆಲವು ದೃಷ್ಠಾಂತಗಳನ್ನು ಪರಿಶೀಲಿಸೋಣ:
ಶುಕ್ರವಾರ 9 ರಂದು ಫಾರ್ಮಾ ವಲಯದ ಷೇರುಗಳಲ್ಲಿ ಅನಿರೀಕ್ಷಿತ ಮಟ್ಟದ ಚಟುವಟಿಕೆ ಬಿಂಬಿತವಾಗಿದ್ದು ತಿಳಿದ ವಿಷಯ. ಗ್ಲೆನ್ ಮಾರ್ಕ್ ಫಾರ್ಮ ಕಂಪನಿ ಷೇರು ಕಳೆದ ಎರಡು ಮೂರು ತಿಂಗಳ ಚಟುವಟಿಕೆ ಗಮನಿಸಿದಲ್ಲಿ , ಮೂರು ತಿಂಗಳ ಹಿಂದೆ ಷೇರಿನ ಬೆಲೆ ರೂ.530 ರ ಸಮೀಪವಿದ್ದು ಚಟುವಟಿಕೆ ಭರಿತವಾಗಿತ್ತು. ಅಲ್ಲಿಂದ ಫೆಬ್ರವರಿಯಲ್ಲಿ ರೂ.443 ರಸಮೀಪಕ್ಕೆ ಜಾರಿತು. ಮಾರ್ಚ್ ನಲ್ಲಿ ರೂ.443 ರಿಂದ ರೂ.492 ರವರೆಗೂ ಏರಿಳಿತ ಪ್ರದರ್ಶಿಸಿದೆ. ಏಪ್ರಿಲ್ ತಿಂಗಳಲ್ಲಿ ಈ ಷೇರಿನ ಬೆಲೆ ಮತ್ತೆ ರೂ.533 ನ್ನು ತಲುಪಿದೆ.
ಅಂದರೆ ಕೇವಲ ಮೂರೇ ತಿಂಗಳಲ್ಲಿ ಷೇರಿನ ಬೆಲೆ ರೂ.532 ರಿಂದ ರೂ.443 ಕ್ಕೆ ಕುಸಿದು ಮತ್ತೆ ರೂ.533 ಕ್ಕೆ ಪುಟಿದೆದ್ದಿದೆ. ಇನ್ನು ಒಂದು ವರ್ಷದ ಹಿಂದೆ ಅಂದರೆ ಮಾರ್ಚ್ 2020 ರಲ್ಲಿ ಈ ಷೇರಿನ ಬೆಲೆ ರೂ.168 ರ ಕನಿಷ್ಠ ಬೆಲೆಯಾಗಿದ್ದು ಏಪ್ರಿಲ್ ನಲ್ಲಿ ರೂ.361 ಕ್ಕೆ ಪುಟಿದೆದ್ದಿದೆ. ಅಲ್ಲಿಂದ ಜೂನ್ ನಲ್ಲಿ ರೂ.500 ನ್ನು ದಾಟಿದೆ. ಜೂನ್ ನಲ್ಲಿ ತಲುಪಿದ್ದ ರೂ.572 ರ ಹಂತವು ವಾರ್ಷಿಕ ಗರಿಷ್ಠವಾಗಿದ್ದು ಆ ಬೆಲೆಯನ್ನು ನಂತರದ ತಿಂಗಳುಗಳಲ್ಲಿ ತಲುಪದಾಗಿದೆ. ಮತ್ತೆ ಆಗಷ್ಟ್ 2020 ರ ನಂತರ ಫೆಬ್ರವರಿವರೆಗೂ ಪ್ರತಿ ತಿಂಗಳು ರೂ.500 ನ್ನು ದಾಟಿ ಕುಸಿಯುತ್ತಿದೆ. ಅಂದರೆ ಈ ಷೇರಿನಲ್ಲಿ ನಡೆಯುತ್ತಿರುವ ವ್ಯವಹಾರಿಕ ಚಟುವಟಿಕೆಯು ಕೇವಲ ಅಲ್ಪಕಾಲೀನ ಹೂಡಿಕೆಗೆ ಅನುಕೂಲವಾಗಿದ್ದು ದೀರ್ಘಕಾಲೀನ ಎಂಬುದಕ್ಕೆ ಅಂಟಿಕೊಂಡಲ್ಲಿ ಅವಕಾಶ ವಂಚಿತರಾಗುವಂತಿದೆ. ಕಳೆದ ಒಂದು ವರ್ಷದಲ್ಲಿ ಒಂಬತ್ತು ತಿಂಗಳು ಷೇರಿನ ಬೆಲೆ ರೂ.500 ನ್ನು ದಾಟಿ ಮತ್ತೆ ಕುಸಿದಿದೆ.
ಈ ಷೇರು ಪ್ರತಿ ತಿಂಗಳು ಶೇ.10 ರಿಂದ ಶೇ.20 ರವರೆಗೂ ಏರಿಳಿತ ಪ್ರದರ್ಶಿಸುತ್ತಿರುವುದಕ್ಕೆ ಕಾರಣಗಳನೇಕವು ಸೃಷ್ಠಿಯಾಗುತ್ತಿರುತ್ತವೆ. ಆದರೆ ಚಟುವಟಿಕೆ ನಡೆಸುವವರು ಮಾತ್ರ ತಮ್ಮ ಲಾಭ ನಷ್ಟದ ಮೇಲೆ ಗಮನವಿರಿಸಿದಲ್ಲಿ ಅವಕಾಶದ ಲಾಭ ಪಡೆಯಲು ಸಾಧ್ಯ. ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ, ವಹಿವಾಟಿನ ಶೇ.20 ರಿಂದ ಶೇ.30 ರವರೆಗಿನ ಭಾಗ ಮಾತ್ರ ವಿಲೇವಾರಿ ವಹಿವಾಟಾಗಿದ್ದು, ಉಳಿದಂತೆ ಚುಕ್ತಾ ವಹಿವಾಟಾಗಿರುವುದು ವ್ಯವಹಾರಿಕತೆಯ ಮಟ್ಟವನ್ನು ಬಿಂಬಿಸುತ್ತದೆ. ಈ ಷೇರಿನ ಏರಿಳಿತ ನೋಡೋಣ.
ಕ್ಯಾಡಿಲ್ಲಾ ಹೆಲ್ತ್ ಕೇರ್ ಕಂಪನಿಯ ಷೇರು ಸಹ ಹೆಚ್ಚಿನ ಚಟುವಟಿಕೆಯನ್ನು ಪ್ರದರ್ಶಿಸುತ್ತಿದ್ದು ಶುಕ್ರವಾರ ಈ ಷೇರಿನ ಬೆಲೆಯು ರೂ.517 ನ್ನು ತಲುಪಿ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿದೆ. ಪ್ರತಿ ತಿಂಗಳು ಶೇ.10 ರಿಂದ ಶೇ.20 ರಷ್ಠು ಏರಿಳಿತಗಳನ್ನು ಪ್ರದರ್ಶಿಸುತ್ತಿರುವ ಈ ಷೇರಲ್ಲೂ ಸಹ ವಿಲೇವಾರಿಯಾಗುವ ಅಂಶ ಮಾತ್ರ ಶೇ.25 ರಿಂದ 30 ಮಾತ್ರವಾಗಿದೆ. ಆದರೆ ಫೆಬ್ರವರಿ ತಿಂಗಳಲ್ಲಿ ಶೇ.40 ನ್ನು ತಲುಪಿದೆ.
ಇದಕ್ಕೆ ಮುಖ್ಯ ಕಾರಣ ಷೇರಿನ ಬೆಲೆಯು ಜನವರಿಯಲ್ಲಿ ತಲುಪಿದ್ದ ರೂ.509 ರ ಸಮೀಪದಿಂದ ರೂ.412 ರವರೆಗೂ ಕುಸಿದ ಕಾರಣ ವ್ಯಾಲ್ಯೂ ಪಿಕ್ ಆಗಿರುವುದಾಗಿದೆ. ಈ ಷೇರಿನಲ್ಲುಂಟಾದ ಒಂದು ವರ್ಷದ ಮಾಸಿಕ ಏರಿಳಿತಗಳನ್ನು ನೋಡೋಣ.
ಕೆನರಾ ಬ್ಯಾಂಕ್ ಕಂಪನಿಯ ಷೇರು ಸಹ ಹೆಚ್ಚಿನ ಚಟುವಟಿಕೆಯನ್ನು ಪ್ರದರ್ಶಿಸುತ್ತಿದ್ದು ಶುಕ್ರವಾರ ಈ ಷೇರಿನ ಬೆಲೆಯು ರೂ.147 ರಿಂದ ಏರಿಕೆ ಕಂಡು ರೂ.153 ನ್ನು ತಲುಪಿ ನಂತರ ರೂ.148 ರ ಸಮೀಪಕ್ಕೆ ಹಿಂದಿರುಗಿದೆ.
ಪ್ರತಿ ತಿಂಗಳು ಶೇ.10 ರಿಂದ ಶೇ.30 ರಷ್ಠು ಏರಿಳಿತಗಳನ್ನು ಪ್ರದರ್ಶಿಸುತ್ತಿರುವ ಈ ಷೇರಿನ ಬೆಲೆ 2014 ರಲ್ಲಿ ಸುಮಾರು ರೂ.400 ರ ಸಮೀಪವಿದ್ದಾಗ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳುವ ಪ್ರಸ್ತಾಪ ಮಾಡಿತಾದರೂ ಕಾರ್ಯಗತಗೊಳಿಸಲಿಲ್ಲಿ. ಆದರೆ ಕಾಲಕ್ರಮೇಣ ಪೇಟೆಯಲ್ಲಿ ಷೇರಿನ ಬೆಲೆಯು ಮುಖಬೆಲೆ ಸೀಳಿಕೆಯ ಹಂತಕ್ಕೆ ಕುಸಿದು ಚೇತರಿಕೆ ಕಂಡಿದೆ. 2019 ರಲ್ಲಿ ಕಂಪನಿಯು ತನ್ನ ನೌಕರವೃಂದಕ್ಕೆ ಪ್ರತಿ ಷೇರಿಗೆ ರೂ.237.23 ರಂತೆ ESOP ಮೂಲಕ ಷೇರುಗಳನ್ನು ವಿತರಿಸಿದೆ. ಆದರೆ ನಂತರದಲ್ಲಿ ಷೇರಿನ ಬೆಲೆಯು ಇಳಿಕೆಯಲ್ಲೇ ಇದೆ.
ಆದರೆ ಕಳೆದ ಒಂದು ವರ್ಷದಲ್ಲಿ ಈ ಷೇರು ಸಹ ಪ್ರತಿ ತಿಂಗಳು ಶೇ.10 ರಿಂದ 25 ರವರೆಗೂ ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪಕಾಲೀನ ಗಳಿಕೆಗೆ ಅಪಾರ ಅವಕಾಶ ಕಲ್ಪಿಸಿದೆ. ಹಿಂದಿನ ಒಂದು ವರ್ಷದ ಏರಿಳಿತಗಳ ಕೋಷ್ಠಕ ಹೀಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ತೈಲ ಮಾರಾಟದ ಸಂಸ್ಥೆಯಾಗಿದ್ದು. ಹೂಡಿಕೆದಾರರನ್ನು ಹರ್ಷಿತಗೊಳಿಸುವಂತಹ ಮಟ್ಟದಲ್ಲಿ ಕಾರ್ಪೊರೇಟ್ ಫಲಗಳನ್ನು ವಿತರಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಈ ಷೇರು ಸಹ ಪ್ರತಿ ತಿಂಗಳು ಶೇ.10 ರಿಂದ 15 ರವರೆಗೂ ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪಕಾಲೀನ ಗಳಿಕೆಗೆ ಅಪಾರ ಅವಕಾಶ ಕಲ್ಪಿಸಿದೆ. ಇದು ಪೇಟೆಯ ಚಟುವಟಿಕೆಗಳಲ್ಲಿ ದೊರೆಯಬಹುದಾದ ಲಾಭವಾದರೆ, ಸಹಜವಾಗಿ ಹೂಡಿಕೆ ಮಾಡಿರುವವರಿಗೆ ಆಕರ್ಷಕ ಡಿವಿಡೆಂಡ್ ಪ್ರತಿ ಷೇರಿಗೆ ರೂ.10.50 ಯಂತೆ 2021 ರಲ್ಲಿ ವಿತರಿಸಿದೆ. ಈ ಷೇರು ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡವರಿಗೂ, ಅಲ್ಪಕಾಲೀನ ಚಟುವಟಿಕೆಗೆ ಆಯ್ಕೆ ಮಾಡಿಕೊಂಡವರಿಗೂ ಸಂತೋಷವನ್ನುಂಟುಮಾಡಿದೆ. ಹಿಂದಿನ ಒಂದು ವರ್ಷದ ಏರಿಳಿತಗಳ ಕೋಷ್ಠಕ ಹೀಗಿದೆ.
ಹೀಗೆ ಅಗ್ರಮಾನ್ಯ ಕಂಪನಿಗಳನೇಕವು ಅಲ್ಪಕಾಲೀನದಲ್ಲೇ ಅಗಾದ ಪ್ರಮಾಣದ ಲಾಭಗಳಿಸಿಕೊಡುತ್ತಿರುವಾಗ, ಬ್ಯಾಂಕ್ ಬಡ್ಡಿ ಅತಿ ಕಡಿಮೆ ಇರುವ ಈ ಸಮಯದಲ್ಲಿ ಭಾವನಾತ್ಮಕತೆಯಿಂದ ಹೊರಬಂದು ಪೇಟೆ ಒದಗಿಸಿಕೊಡುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳುವ ನೈಪುಣ್ಯತೆ, ಕೌಶಲ್ಯತೆಗಳನ್ನು ಅಳವಡಿಸಿಕೊಂಡಲ್ಲಿ ಅಲ್ಪಮಟ್ಟಿನ ಸುರಕ್ಷತೆಯಿಂದ ಬಂಡವಾಳ ಬೆಳೆಸಿಕೊಳ್ಳಬಹುದು. ಪ್ರಚಾರಕ್ಕಿಂತ ಆಚಾರವೇ ಹಿತ. ಸರ್ಕಾರವೂ ಸಹ ಪರೋಕ್ಷವಾಗಿ, ಷೇರುಪೇಟೆಯಲ್ಲಿ ಹೂಡಿಕೆಗಿಂತ ವಹಿವಾಟಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬುದಕ್ಕೆ ಕಂಪನಿಗಳು ವಿತರಿಸುವ ಕಾರ್ಪೊರೇಟ್ ಫಲವಾದ ಡಿವಿಡೆಂಡ್ ನ್ನು ತೆರಿಗೆಗೊಳಪಡಿಸಿದರೆ, ಅಲ್ಪಕಾಲೀನ ವಹಿವಾಟಿನಿಂದ ಬಂದ ಲಾಭಕ್ಕೆ ಕೇವಲ ಶೇಕಡ 15 ತೆರಿಗೆ ವಿಧಿಸುತ್ತಿರುವುದು ನಿದರ್ಶನವಾಗಿದೆ.
ಈಗಿನ ದಿನಗಳಲ್ಲಿ ಸಂದರ್ಭವನ್ನಾಧರಿಸಿ ನಿರ್ಧರಿಸಬೇಕು. ಕಾರಣ ಬದಲಾವಣೆಗಳ ವೇಗ ಹೆಚ್ಚು. ಯಶಸನ್ನು ಸಾಧಿಸಲು ಸರ್ವಕಾಲೀನ ಸಮೀಕರಣ ಎಂದರೆ, ವ್ಯಾಲ್ಯು ಪಿಕ್ – ಪ್ರಾಫಿಟ್ ಬುಕ್ ಒಂದೇ ಆಗಿದೆ.