21.4 C
Karnataka
Thursday, November 21, 2024

    ವಸಂತ ಚಂದಿರ ಸುಖ-ದುಃಖಕ್ಕೂ…..

    Must read

    ಸುಮಾ ವೀಣಾ

    “ಹೆಜ್ಜೆಗೊಂದು ಹೊಸ ಯುಗಾದಿ,ಚೆಲುವುನಮ್ಮ ಜೀವನ ನಮ್ಮ ಹಾದಿಯೋ ಅನಾದಿ,ಪಯಣವೆಲ್ಲ ಪಾವನ” ಎಂಬ ಕೆ.ಎಸ್ ನರಸಿಂಹಸ್ವಾಮಿಯವರ ಸಾಲಿನಂತೆ ನಮ್ಮ ಜೀವನದ ಪಯಣದ  ಆವೃತ್ತಿಗೂ  ಯುಗಾದಿ ಚಂದ್ರನಿಗೂ ಸಂಬಂಧವಿದೆ. . ವಸಂತ ಮಾಸದ  ಚಂದ್ರನೋ ನೋಡಲು ಬಹಳ ಪ್ರಕಾಶಮಾನವಾಗಿ ಕಾಣಿಸುತ್ತಾನೆ.

    ‘ಯುಗಾದಿ’ ಎಂದರೆ ಬೇವು -ಬೆಲ್ಲಗಳ ಸಮಾಗಮ. ಪಂಚಾಂಗ ಶ್ರವಣ ಇತ್ಯಾದಿಗಳನ್ನು ಮುಗಿಸಿದ ಬಳಿಕ ಯುಗಾದಿ ಊಟ ಮಾಡಿ,  ಚಂದ್ರನನ್ನು ನೋಡಬೇಕು  ಶುಭ ಎನ್ನುತ್ತಾರೆ.   ಆದರೆ ಗಣೇಶ ಚತುರ್ಥಿಯ ದಿನ ಚಂದ್ರ ನೋಡುವುದು ನಿಷಿದ್ಧ ಹಾಗೊಂದು ವೇಳೆ ಆ ಚಂದ್ರನನ್ನು  ನೋಡಿದ್ದರೆ ಆ ದೋಷ ಯುಗಾದಿ ಚಂದ್ರನನ್ನು ನೋಡುವ   ಮೂಲಕ ನಿವಾರಣೆಯಾಗುತ್ತದೆ ಎನ್ನುತ್ತಾರೆ.

     ನಮ್ಮಲ್ಲಿ ನವಗ್ರಹಗಳಲ್ಲಿ ಸೂರ್ಯನನ್ನು ತಂದೆಗೆ ಹೋಲಿಸದಿದರೆ ಚಂದ್ರನನ್ನು ತಾಯಿಗೆ ಹೋಲಿಸುವುದಿದೆ. ಅಲ್ಲದೆ  ಚಂದ್ರನನ್ನು ಬುದ್ಧಿವಂತಿಕೆ  ಹಾಗು ಉತ್ತಮನಡವಳಿಕೆಯ ದ್ಯೋತಕವಾಗಿಯೂ ಬಿಂಬಿಸಲಾಗುತ್ತದೆ.  ಯುಗಾದಿಚಂದ್ರ ಅಷ್ಟು ಸುಲಭಕ್ಕೆ ಕಾಣಸಿಗುವುದಿಲ್ಲ . ಅಮವಾಸ್ಯೆಯ  ಮರುದಿನ ಚಂದ್ರ ಬೇಗ ಗೋಚರಿಸುವುದು ಕಷ್ಟ .ಹಾಗೊಂದು  ವೇಳೆ “ಕಷ್ಟ ಪಟ್ಟರೆ ಸುಖ” ಎಂಬಂತೆ ಆ ಚಂದ್ರನನ್ನು  ಕಷ್ಟ ಪಟ್ಟು ನೋಡಿದರೆ ಮನಸ್ಸಿಗೆ ಸಂತಸವಾಗುತ್ತದೆ.  ಇನ್ನು  ಕೆಲವೆಡೆ ಒಂದು ವರ್ಷದ ಮಳೆ- ಬೆಳೆಗಳ ಸಾಧ್ಯತೆಯನ್ನು ಹೇಳುವಾಗ ಯುಗಾದಿ ಚಂದ್ರ ಗೋಚರಿಸುವ ಗೆರೆಯಾಕಾರವನ್ನೂ  ಗಣನೆಗೆ ತೆಗೆದುಕೊಳ್ಳುವುದೂ ಇದೆ.

     ಇವಿಷ್ಟು ಯುಗಾದಿ ಹಬ್ಬದ ಚಂದ್ರನ ಕುರಿತ ವಿಚಾರವಾದರೆ   ‘ಕವಿರಾಜಮಾರ್ಗ’ ಕೃತಿಯ ಮೂರನೆಯ ಪರಿಚ್ಛೇದದ 124ನೆ ಪದ್ಯದಲ್ಲಿ  ಸಮಾಹಿತಾಲಂಕಾರಕ್ಕೆ ಉದಾಹರಣೆಯಾಗಿ ಉಲ್ಲೇಖವಾಗಿರುವ ಚಂದ್ರನನ್ನೂ ನೋಡೋಣ!

     ಮುಳಿದಿರ್ದ ನಲ್ಲಳಲ್ಲಿಗೆ

    ತಿಳಿಪಲ್ ಪೋಪೆನ್ನ ಬಗೆಗೆ ದೊರೆಕೊಳೆ ಮತ್ತಿಂ

    ತೆಳೆವೆರೆ ಗಗನಾಂತರದೊಳ್

    ಪೊಳೆದತ್ತೆತ್ತಂ ವಸಂತಸಮಯೋತ್ತಂಸಂ

     ಇದರರ್ಥ ಕೋಪಗೊಂಡ ನಲ್ಲೆಯನ್ನು ತವಿಸಲು ಹೊರಟ ನಲ್ಲನಿಗೆ  ವಸಂತಮಾಸಕ್ಕೇ ಶಿರೋಭೂಷಣದಂತಿದ್ದ  ಚಂದ್ರ ಸಹಾಯ  ಮಾಡಲು ಎಳೆವರೆಯಾಗಿ ಉದಯಿಸಿದ,   ಕತ್ತಲನ್ನು ದೂಡಿದ,  ಮಾರ್ಗ ತೋರಿಸಿದ ಎಂಬುದಾಗಿ . ಚಂದ್ರನನ್ನು ಮನಃಕಾರಕ, ಮನಸ್ಸಿನ ಮೇಲೆ ಪರಿಣಾಮ ಬೀರುವಂಥವನು ಹಾಗಾಗಿ  ಪ್ರಿಯೆಯ ಮನಸ್ಸನ್ನು ಸಮಾಧಾನಿಸಿದ ಎಂದೂ ಅರ್ಥೈಸುವುದಿದೆ.  ಕವಿರಾಜಮಾರ್ಗ ಕೃತಿಯಲ್ಲಿ   ಸಮಾಹಿತಾಲಂಕಾರಕ್ಕೆ  (ಸಮಾಹಿತ ಪದಕ್ಕೆ  ಪ್ರಸನ್ನ ಚಿತ್ತ,ಒಟ್ಟುಗೂಡಿಸಿದ,ವ್ಯವಸ್ಥೆಗೊಳಿಸಿದ  ಎಂಬ    ಅರ್ಥವಿದೆ) ಉದಾಹರಿಸಿದ   ಈ ಪದ್ಯದಲ್ಲಿ  ಕೋಪಗೊಂಡ ನಾಯಕಿಯ ಮನಸ್ಸನ್ನು ತವಿಸಲು ನಾಯಕನ ಪರವಾಗಿ  ಸ್ವತಃ   ದೈವಾದತ್ತವಾದ ಚಂದ್ರನೇ ಬಂದ ಎಂದಿದೆ.

     ಈ ಬರೆಹದ ಆರಂಭದಲ್ಲಿ ಚಂದ್ರನನ್ನು ತಾಯಿಗೂ ಹೋಲಿಸುತ್ತಾರೆ   ಎಂದು ಹೇಳಿರುವ ಕಾರಣದಿಂದ ಪಿ.ಲಂಕೇಶರ  ಅವ್ವ ಕವಿತೆಯಲ್ಲಿ   ತಾಯಿ,ಯುಗಾದಿ,ಚಂದ್ರನನ್ನು  ಉಲ್ಲೇಖಿಸಿರುವುದನ್ನೂ ಚುಟುಕಾಗಿ ಗಮನಿಸೋಣ!

    ಸತ್ತಳು ಈಕೆ

    ಬಾಗು ಬರೆನ್ನಿನ ಮುದುಕಿಗೆಷ್ಟು ಪ್ರಾಯ?

    ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ  ಸಂಭ್ರಮ?

    ಎಂದು . ಅಂದರೆ ಎಷ್ಟು ಯುಗಾದಿಯ ಚಂದ್ರನನ್ನು   ಅವ್ವ ನೋಡಿದ್ದಾಳೊ  ಅಷ್ಟು ವರ್ಷ  ಆಕೆಗೆ ಎಂದಿರುವ  ಲಂಕೇಶರು ತಕ್ಷಣವೇ  ನೋಡಿದ ಅಷ್ಟು ಚಂದ್ರರಲ್ಲಿ ನೆಮ್ಮದಿಯ ಚಂದ್ರರೆಷ್ಟು ಎನ್ನುವ  ಮರುಪ್ರಶ್ನೆಯನ್ನು   ಪ್ರಶ್ನಾರ್ಥಕವಾಗಿಯೇ ಉಳಿಸಿಕೊಂಡು   ಭಾವುಕರಾಗಿದ್ದಾರೆ. ಮುಂದುವರೆದು

     ಹೆತ್ತದ್ದಕ್ಕೆ,ಸಾಕಿದ್ದಕ್ಕೆ:ಮಣ್ಣಲ್ಲಿ ಬದುಕಿ,ಮನೆಯಿಂದ ಹೊಲಕ್ಕೆ ಹೋದಂತೆ……… ಹೊರಟು ಹೋದುದಕ್ಕೆ  ಎನ್ನುತ್ತಾ ಲಂಕೇಶರು ತಾಯಿಯನ್ನು ನೆನೆದು ಆರ್ದ್ರವಾಗಿ   ಉಳಿದಿರುವುದೇ “ಕೃತಜ್ಞತೆಯ ಕಣ್ಣೀರು” ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.

     ಬಾಳೆಲ್ಲಾ ಸುಖ-ದುಃಖ,ಬೇವು -ಬೆಲ್ಲ  ಎಂಬಂತೆ    ಕನ್ನಡ ಸಾಹಿತ್ಯದಲ್ಲೂ ಯುಗಾದಿಯ ಚಂದ್ರ  ನೋವಿಗೂ-ನಲಿವಿಗೂ ಸೂಚಕವಾಗಿದ್ದಾನೆ.  ವಾಸ್ತವವಾಗಿ ಕೊರೊನಾ   ಎರಡನೆ ಅಲೆ ಅನ್ನುವ ಕಾರ್ಮೋಡ  ಸರಿದು ಎಲ್ಲವೂ ಕ್ಷೇಮ!  ಎಲ್ಲವೂ ಆರೋಗ್ಯ! ಎಂಬ ಭರವಸೆಯ  ವಸಂತ  ಋತುವಿನ ಚಂದ್ರನನ್ನು ನಿರೀಕ್ಷಿಸೋಣವೆ!

    Photo by Jacob Dyer on Unsplash

    spot_img

    More articles

    2 COMMENTS

    1. ಚಂದ್ರನ ಬಗ್ಗೆ ಸುಮ ವೀಣಾ ಅವರು ಅರ್ಥ ಪೂರ್ಣ ವಾಗಿ
      ಕವಿರಾಜಮಾರ್ಗ ದಲ್ಲಿ ಉಲ್ಲೇಖಿತನಾಗಿದ್ದಾನೆ ಹಾಗು ವಾಸ್ತವದಲ್ಲಿ ಪ್ರಯೋಗಿತವಾಗಿರುವುದರ ಬಗ್ಗೆ ಔಚಿತ್ಯಪೂರ್ಣ ವಾಗಿ ವಿವರಿಸಿದ್ದಾರೆ. ಧನ್ಯವಾದಗಳು. 🙏

    LEAVE A REPLY

    Please enter your comment!
    Please enter your name here

    Latest article

    error: Content is protected !!