26 C
Karnataka
Thursday, November 21, 2024

    ಮಾವಿನ ತಳಿರಿನ ಜೊತೆಗೆ ಬೇವಿನ ಗೊಂಚಲು

    Must read

    ಹಬ್ಬ ಅಂದರೆ ಹೆಣ್ಣುಮಕ್ಕಳಿಗೆ ಸಡಗರ ಅಂತಾರೆ.
    ಸಡಗರ ಏನೋ ಇರುತ್ತೆ.ಆದರೆ ಗುಡಿಸು ಸಾರಿಸು ತಿಕ್ಕು ಉಜ್ಜುಗಳಿಂದ ಹೈರಾಣಾಗುವುದಂತೂ ಸತ್ಯವೇ.ಪಕ್ಕಾ ಹಳ್ಳಿಯವಳಾದ ನನಗೆ ನನ್ನತ್ತೆ ಕಲಿಸಿದ ಹಬ್ಬದ ಪೂರ್ವತಯಾರಿಯ ಅಚ್ಚುಕಟ್ಟುತನವನ್ನು ಬಿಡುವುದಕ್ಕೂ ಏನೋ ಎಂತೋ ಎನ್ನುವ ಆತಂಕ. ಮಾಮೂಲಿನಂತೆ ಹಳ್ಳಿಯಲ್ಲಿ ನೆರವಿಗೆ ಒಂದು ಜೊತೆ ಕೈಗಳು ಸಿಗುವುದು ಬಹಳ ಕಷ್ಟ.ಮನಸ್ಸು ಮಾಡಿ ಮನೆಯ ಗಂಡಸರು ಕೈ ಜೋಡಿಸಿದ್ರೆ ಹಟ್ಟಿ ,ಹಿತ್ತಿಲು ,ಅಟ್ಟ ,ಸೂರು ನೇರೂಪು.ಮನಸ್ಸೂ ಹಗೂರ.

    ವಿಪರ್ಯಾಸವೆಂದರೆ ಸಮಾನತೆಯನ್ನು ಭಾಷಣದಲ್ಲಿ ಮಾತಾಡುವ ನಮ್ಮ ಪುರುಷರು ಮನೆಗೆಲಸವನ್ನು ಮನೆಯ ಹೆಂಗಸರಿಗೇ ವಹಿಸಿ ದೊಡ್ಡತನ ಮೆರೆಯುತ್ತಾರೆ.ಒಂಚೂರು ಕೈ ಜೋಡಿಸಿದ್ರೆ…ಎನ್ನುವ ಸಾಲನ್ನು ನಾನು ಮತ್ತೆಮತ್ತೆ ಹೇಳಿದಾಗೆಲ್ಲಾ ಅದೊಂದು ಕನಸನ್ನು ಕಾಣುವುದು ಬಿಟ್ಟು ಬೇರೆ ಏನಾದರೂ ಇದ್ರೆ ಮಾತಾಡು ಅಂತ ಪಕ್ಕದಲ್ಲಿರುವ ನನ್ನ ಗೆಳತಿ ಸಿಡುಕುತ್ತಾಳೆ.

    ಯುಗಯುಗಾದಿ ಕಳೆದರೂ ಮತ್ತೊಂದು ಯುಗಾದಿ ಬಂದೇ ಹೋಯ್ತು.
    ರೇವತಿ ಮಳೆ ಹುಟ್ಟಿ ಎಂಟು ಕಳೆದರೂ ಇನ್ನೂ ಸುರಿಯುವ ದಿರಿಸು ಕಾಣ್ತಿಲ್ಲ.ಕಳೆದ ವರ್ಷ ಇಷ್ಟು ಸಮಯಕ್ಕೆ ಭೂಮಿಗೆ ಒಂದೆರಡು ಹದ ಮಳೆ ಸುರಿದು ಗಿಡಮರಗಳೆಲ್ಲ ಹಚ್ಚಗೆ ಕಂಗೊಳಿಸುತ್ತಿದ್ದವು.
    ಕಾಫಿ ತೋಟ ,ಮೆಣಸು ಬಳ್ಳಿಗಳು ಬಳಲಿವೆ.

    ಆದರೆ

    ಲೋಕದ ಕೃಪೆ ಅವಕೃಪೆಗಳಿಗೆಲ್ಲಾ ತಲೆಕೆಡಿಸಿಕೊಳ್ಳದೆ ಹಬ್ಬಗಳ ಆಚರಣೆಯಂತೂ ನಡೆದೇ ತೀರುತ್ತದೆ.ಅದು ಹಾಗಿದ್ದರೇ ಚೆನ್ನ.

    ಬಹುತೇಕ ನಮ್ಮಲ್ಲಿ ಯುಗಾದಿಗೆ ಹೊಸ ಬಟ್ಟೆ ಉಡುವುದು ಅನೂಚಾನವಾಗಿ ನಡೆದಿದೆ.ಹೊಸಬಟ್ಟೆ ಎಂದರೆ ಕನಿಷ್ಠ ಹೊಸ ಬನಿಯನ್ನು ,ಚಡ್ಡಿ ,ಟವೆಲ್ಲು ಗಳಾದರೂ ನಡೆದೀತು.
    ಹೆಣ್ಣುಮಕ್ಕಳು ಈ ನೆಪದಲ್ಲಿ ಹೊಸ ಸೀರೆ ಖರೀದಿ ಮಾಡ್ತಾರೆ.
    ಹಬ್ಬಕ್ಕೆ ವಿಶೇಷವಾಗಿ ಬೇಳೆ ಹೋಳಿಗೆಯನ್ನು ನೈವೇದ್ಯ ಮಾಡುತ್ತೇವೆ.ಹಬ್ಬದ ಹಿಂದಿನ ದಿನ ಹೂರಣ ತಯಾರಿಸಿಡುವ ಸಂಭ್ರಮ.
    ಹಿಂದೂಗಳ ನಂಬಿಕೆಯಂತೆ ಯುಗಾದಿ ಅಥವಾ ಉಗಾದಿ ವರ್ಷದ ಮೊದಲ ದಿನ.

    ಚೈತ್ರ ಮಾಸದ ಮೊದಲ ದಿನ.ಮಾವಿನ ತಳಿರಿನ ಜೊತೆಗೆ ಬೇವಿನ ಗೊಂಚಲುಗಳನ್ನೂ ಬಾಗಿಲಿಗೆ ಕಟ್ಟಿ ಸಿಂಗರಿಸಿ ಹೊಸಿಲಿಗೆ ರಂಗೋಲಿ,ಹೊಸಹೂವುಗಳನ್ನಿಟ್ಟು ಅಲಂಕರಿಸುತ್ತೇವೆ.ಮಲೆನಾಡಿನ ಈ ಭಾಗದಲ್ಲಿ ಬೇವಿನ ಮರಗಳ ಸಂಖ್ಯೆ ಬಹಳ ಕಡಿಮೆ. ನೂರುಮನೆಯಿರುವ ಊರಿನಲ್ಲಿ ಒಂದೆರಡು ಮನೆಯಲ್ಲಿ ಬೇವು ಸಿಗಬಹುದು.ಬೇವು ಬೆಲ್ಲಕ್ಕಾಗಿ ಬೇಕಾಗುವ ಬೇವನ್ನು ಒಬ್ಬರು ಇನ್ನೊಬ್ಬರಿಗೆ ಕೊಡುವಾಗ ಒಂದೆರಡು ಅಚ್ಚು ಬೆಲ್ಲವನ್ನೂ ಇಟ್ಟು ಕೊಡುವುದು ಪದ್ದತಿ.ಇದರಿಂದ ಹೊಸ ವರ್ಷದ ಈ ಶುಭದಿನದಂದು ಬೆಲ್ಲವನ್ನು ಹಂಚಿದ ಪುಣ್ಯ ಪಡೆಯುತ್ತಾರೆ.ಇನ್ನು ನಮ್ಮಲ್ಲಿ ಬೇವುಬೆಲ್ಲವನ್ನು ಒಣಕೊಬ್ಬರಿ ಹುರಿಗಡಲೆ ಬೆಲ್ಲ ಮತ್ತು ಬೇವನ್ನು ಒಟ್ಟಿಗೆ ಪುಡಿ ಮಾಡಿ ತಯಾರಿಸುತ್ತಾರೆ.

    ಹಬ್ಬದ ದಿನ ಮನೆಯವರೆಲ್ಲರಿಗೂ ಎಣ್ಣೆ ನೀರು ಕಡ್ಡಾಯ.
    ಅಭ್ಯಂಜನದ ಎಣ್ಣೆಗಾಗಿ‌ ಹರಳೆಣ್ಣೆ ಕೊಬ್ಬರಿ ಎಣ್ಣೆ ಹಾಗೂ ಎಳ್ಳೆಣ್ಣೆಗಳಿಗೆ ಅರಿಷಿಣ ಮತ್ತು ಬೇವಿನೆಲೆಗಳನ್ನು ಬೆರೆಸಿ ಬಿಸಿ ಮಾಡಿಕೊಂಡು ಬಳಸುತ್ತಾರೆ.ಹಾಗೇ ಹಂಡೆಯ ನೀರಿಗೂ ನಾಕಾರು ಸಣ್ಣ ಬೇವಿನ ರೆಂಬೆಗಳನ್ನು ಹಾಕುತ್ತೇವೆ.ಸ್ನಾನದ ನಂತರ ಪೂಜೆ ಮುಗಿಸಿ ಶತಾಯುರ್ವಜ್ರದೇಹಾಯ..ಮಂತ್ರವನ್ನು ಹೇಳಿಕೊಂಡು ಬೇವುಬೆಲ್ಲವನ್ನು ಭಕ್ತಿಯಿಂದ ಸೇವಿಸುತ್ತೇವೆ.ಊರ ದೇವಸ್ಥಾನಕ್ಕೆ ಪ್ರತಿ ಹಬ್ಬದಲ್ಲೂ ಎಡೆ ಕೊಡುವುದು ಸಹಜ ಪದ್ದತಿ.

    ಇನ್ನು ಸಂಜೆಯಾಗುತ್ತಲೂ ಚಂದ್ರದರ್ಶನದ ಸಂಭ್ರಮ. ತುಸು ಎತ್ತರದ ಊರಿನ ಮಾಮೂಲು ಜಾಗಕ್ಕೆ ಎಲ್ಲರೂ ಸೇರಿಕೊಂಡು…
    ‘ಅಮಾಸೆ ಆದ ಮಾರನೆ ದಿನವೇ ಉಗಾದಿ ಬಂದ್ರೆ ಚಂದ್ರ ಕಾಣಾದು ಕಷ್ಟವೆಯಾ’ಅನ್ನುವ ಮಾಮೂಲಿ ಮಾತಿನೊಂದಿಗೆ ಯಾರಿಗಾದರೂ ಒಬ್ಬರಿಗೆ ಕಿರುಗೆರೆಯಂತೆ ಕಾಣುವ ಚಂದ್ರ ಕಂಡೊಡನೆ
    ‘ ಓ ಅಲ್ಲಿ.. ಅಲ್ಲೆಯಾ..ಆ ದೊಡ್ಡ ಮಾಡಾ ಐತಲಾ..ಅದರ ಕೆಳಿಕೆ ಬಂದು ಬಲಕ್ಕೆ ನೋಡು.. ಅದೇ‌ ನ್ಯಾರಕ್ಕು ನೋಡಿರೆ ಕಾಣ್ತಿತಪಾ’
    ಅನ್ನುವ ದಿಕ್ಕು ತೋರುವ ಅಥವಾ ದಿಕ್ಕು ತಪ್ಪಿಸುವ ಎಲ್ಲರ ಸಂಭ್ರಮದೊಳಗೆ ಬೆರೆತು ಚಂದ್ರದರ್ಶನ ಮಾಡಿ ಭಕ್ತಿಯಿಂದ ಕೈಮುಗಿದು, ಉಳಿದ ಬೇವುಬೆಲ್ಲವನ್ನು ತಿಂದು ಮನೆಗೆ ಮರಳುವುದರೊಂದಿಗೆ ಉಗಾದಿಯ ಸಂಭ್ರಮ ಮುಗಿಯುತ್ತದೆ.

    ಇನ್ನು ತಿನ್ನೋರ ಪೈಕಿಗೆ(ನಾನ್ ವೆಜಿಟೇರಿಯನ್ಸಿಗೆ ನಮ್ ಆಡುಮಾತಲ್ಲಿ ಬಳಸುವ ವಿಶೇಷಣ)ಮಾರನೆ ದಿನ ವರ್ಷದೊಡುಕು. ಅವತ್ತು ಯಥಾಶಕ್ತಿಗನುಸಾರ ಮನೆಯಲ್ಲಿ ಮಾಂಸದಡುಗೆ ,ಪಾನ ಪರಿಕರಾದಿಗಳ ವ್ಯವಸ್ಥೆ.ಒಟ್ಟಾರೆ ಹಬ್ಬದ ಹೆಸರಿನಲ್ಲಿ ಸಂಭ್ರಮಿಸುವುದಕ್ಕೆ ನೆಪ ಹುಡುಕುವುದು.

    ಹಬ್ಬದ ಪೌರಾಣಿಕ ಹಿನ್ನೆಲೆ ಏನೇ ಇದ್ದರೂ ಹಬ್ಬಗಳು ಬಂದಾಗ ಸ್ಥಳೀಯವಾಗಿ ಏರುವ ವ್ಯಾಪಾರ ವಹಿವಾಟುಗಳಿಗೆ ಜಾತಿ ಮತದ ಸೋಂಕು ತಟ್ಟದೇ ಇರುವುದನ್ನು ನೋಡುವುದೇ ಸಂಭ್ರಮ. ಯುಗಾದಿ ಹಬ್ಬದ ದಿನ ಟಿವಿಯಲ್ಲಿ ಬರುವ ಪಂಚಾಂಗ ಶ್ರವಣ ಕಾರ್ಯಕ್ರಮಕ್ಕೆ ಮನೆಯ ಹಿರಿಯರು ತಪ್ಪದೇ ಹಾಜಾರಾಗಿ ಭೂಮಂಡಲದ, ದೇಶದ,ರಾಜಕೀಯ ನಾಯಕರ,ಮನೆಯ ಕಿರಿಯರ ಭವಿಷ್ಯವನ್ನು ಕುತೂಹಲದಿಂದ ಕೇಳಿ ರಾತ್ರಿ ಊಟದ ಜೊತೆಗೆ ಚರ್ಚಿಸುವುದು ಬಹುತೇಕ ಎಲ್ಲ ಮನೆಗಳಲ್ಲೂ ಇದ್ದಿದ್ದೆ.

    ಕರೋನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂಕಷ್ಟದ ಕಾಲದಲ್ಲಿ ಯುಗಾದಿಯ ಸಂಭ್ರಮದೊಂದಿಗೆ ನಮ್ಮ ಮುಸ್ಲಿಂ ಬಾಂಧವರ ಪವಿತ್ರ ಉಪವಾಸ ಮಾಸ ಸಹ ಆರಂಭವಾಗಲಿದೆ.ಕರೋನಾ ವಿರುದ್ದದ ರಕ್ಷಣೆಯ ಸೂತ್ರಗಳು ಹಬ್ಬದ ಹೆಸರಿನಲ್ಲಿ ಮರೆತು ಹೋಗದಿರಲಿ.
    ಭಗವಂತನ ಅನುಗ್ರಹವನ್ನು ಬೇಡುತ್ತಾ ಸರ್ವರಿಗೂ ಹಬ್ಬದ ಶುಭಾಶಯಗಳು.

    (ರಂಗೋಲಿ ಕಲೆ :ಸಂಧ್ಯಾ ನಾಗರಾಜ್)

    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ. ಬದುಕಿಗೆ ಕಾಫಿ ತೋಟ,ಕೃಷಿ. ಆಸಕ್ತಿ ಕೃಷಿ,ಕಾವ್ಯ,ಸಾಹಿತ್ಯ, ತಿರುಗಾಟ. ಮೂವತ್ತೈದನೇ ವಯಸಿನಲ್ಲಿ ಬರವಣಿಗೆ ಪ್ರಾರಂಭ. ಮೊದಲಿಗೆ ಹಾಸನದ ಪ್ರಾದೇಶಿಕ ಪತ್ರಿಕೆ ಜನತಾ ಮಾಧ್ಯಮಕ್ಕೆ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ ಸಾಹಿತ್ಯಾರಂಭ. 2016 ಅಕ್ಟೋಬರ್ ನಲ್ಲಿ ಸಕಲೇಶಪುರದಲ್ಲಿ ನಡೆದಂತಹ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ "ಅಸ್ಮಿತೆ" ಎನ್ನುವ ಕವನ ಸಂಕಲನ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರಿಂದ ಬಿಡುಗಡೆ. ಆ ನಂತರದಲ್ಲಿ ಅವರ ಮಾರ್ಗದರ್ಶನದಲ್ಲಿ ಕವಿತೆ ಬರೆಯಲು ಆರಂಭ. ಜನವರಿ 1,2017ರಲ್ಲಿ ಮೊದಲ ಕವನಗಳ ಗುಚ್ಛ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟ. 2018ಜನವರಿಯಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಎರಡನೇ ಸಂಕಲನ "ಒಳಸೆಲೆ"ಬಿಡುಗಡೆ. ಕನ್ನಡದ ಖ್ಯಾತ ವಿಮರ್ಶಕಿ ಎಮ್ ಎಸ್ ಆಶಾದೇವಿಯವರ ಮುನ್ನುಡಿ ಮತ್ತು ಸುವಿಖ್ಯಾತ ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ‌ಬೆನ್ನುಡಿಯಿರುವ ಈ ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಕೊಡುವ ಪ್ರತಿಷ್ಠಿತ ಜಿ ಎಸ್ ಎಸ್ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವದ ಪುರಸ್ಕಾರ.ಮಂಡ್ಯದ ಅಡ್ಡ್ವೆಸರ್ ಕೊಡಮಾಡುವ ಅಡ್ಡ್ವೆಸರ್ ವರ್ಷದ ಸಂಕಲನ ಪುರಸ್ಕಾರ ದೊರೆತಿದೆ. ದಸರಾಕವಿಗೋಷ್ಠಿ,ಆಳ್ವಾಸ್ ನುಡಿಸಿರಿ, ಬಾಗಲಕೋಟೆಯ ನುಡಿಸಡಗರ ,ಧಾರವಾಡದಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ. ಇತ್ತೀಚೆಗೆ ಪ್ರಕಟವಾದ ಬ್ರೂನೊ..ದಿ ಡಾರ್ಲಿಂಗ್ ಎನ್ನುವ ಪ್ರಬಂಧ ಸಂಕಲನ ರತಿಯ ಕಂಬನಿ ಎಂಬ ಕವಿತಾ ಸಂಕಲನ ಮತ್ತು ಇಂತಿ ನಿನ್ನವಳೇ ಆದ ಪ್ರೇಮಕಥೆಗಳ ಸಂಕಲನ ಅಪಾರ ಓದುಗರ ಮೆಚ್ಚುಗೆ ಗಳಿಸಿವೆ.. ರತಿಯ ಕಂಬನಿ ಸಂಕಲನಕ್ಕೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಲಭಿಸಿದೆ.
    spot_img

    More articles

    2 COMMENTS

    1. ನಂದಿನಿ ಹೆದ್ದುರ್ಗ ಅವರ ಲೇಖನ ಸೊಗಸಾಗಿದೆ.
      ಪಲ್ಲವ ಸಂವತ್ಸರ ದ ಶುಭಾಶಯಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!