ಕೊಡ ತುಂಬುತಾದಂತೆ, ಕೊಡ ತುಂಬುತಾದಂತೆ ಅಂತ ರಾತ್ರಿಯ ಒಂದು ಸರಹೊತ್ತಲ್ಲಿ ಬೇಸಿಗೆಯ ಸೆಖೆಗೆ ಜಗುಲಿಗಳ ಮೇಲೆ ಮಲಗಿದ್ದ ನನ್ನೂರ ಜನಕ್ಕೆ ರಣ ಘೋಷದಂತೆ ಕೇಳಿಸಿಬಿಡುತ್ತಿದ್ದವು ಈ ವಾಕ್ಯಗಳು!.. ಯಾರು ಮೊದಲು ಈ ರಣ ಕಹಳೆ ಊದಿದರು ಅಂತ ತಿಳಿಯುವ ವ್ಯವಧಾನ ಯಾರಿಗೂ ಇರುತ್ತಿರಲಿಲ್ಲ. ಇಡೀ ಓಣಿ,ನಂತರ ಊರಿಗೆ ಊರೇ ವಯಸ್ಸಿನ ಇತಿ ಮಿತಿ ಮರೆತು ಎದ್ದು ಸಂಭ್ರಮ,ಆತುರತೆಯಿಂದ ಕಣ್ಣುಜ್ಜಿಕೊಳ್ಳುತ್ತಾ ಮನೆಗಳಲ್ಲಿನ ಖಾಲಿ ಕೊಡಗಳನ್ನು ತಡಕಾಡಿ ನಮ್ಮೂರ ಸೇದುವ ಭಾವಿ ಕಡೆ ರಣೋತ್ಸಾಹದಿಂದ ಹೊರಟು ಬಿಡುತ್ತಿದ್ದರು.
ಎಪ್ಪತ್ತರ ದಶಕ ಅದು. ನಾಡು ಕಂಡರಿಯದ ಬರಗಾಲಕ್ಕೆ ಕರ್ನಾಟಕ ತುತ್ತಾಗಿತ್ತು. ಉತ್ತರ ಕರ್ನಾಟಕದ ಸ್ಥಿತಿಯಂತೂ ಚಿಂತಾಜನಕ. ರೈಲಲ್ಲಿ ನೀರು ಸರಬರಾಜು ಮಾಡ್ತಾರಂತೆ ಅನ್ನೋ ವಿಷಯಗಳನ್ನು ಬಾಯಿ ಮುಚ್ಚದೆ ಕೇಳುತ್ತಿದ್ದ ಸಮಯ. ಬಯಲು ಸೀಮೆಯ ನನ್ನೂರು ಅದಕ್ಕೆ ಹೊರತಾಗಿರಲಿಲ್ಲ. ಇಡೀ ಊರಿಗೆ ನೀರಿನ ದಾಹ ತೀರಿಸಲು ಇದ್ದದ್ದು ಒಂದೇ ಒಂದು ಸಿಹಿ ನೀರ ಸೇದುವ ಭಾವಿ! ತಾಯಿಯ ಮೊಲೆಗಿಂತಲೂ ಪವಿತ್ರ ನಮಗೆ. ಆ ನೀರಿನ ರುಚಿ ದೇಶ ಸುತ್ತಿರುವ ನನಗೆ ಮತ್ತೆಲ್ಲಿಯೂ ಕಂಡಿಲ್ಲ. ನಮ್ಮೂರ ಸಿಹಿನೀರ ಕುಡಿದರೆ ಯಾವ ರೋಗ ಬರೋದಿಲ್ಲ ಅನ್ನುವ ಹಿರಿಯರ ಮಾತಂತೂ ನಮಗೆ ಸಂಜೀವಿನಿಯಾಗಿತ್ತು. ದೊಡ್ಡ ಕೆರೆ ಇರುವ ನನ್ನೂರಲ್ಲಿ ಐದಾರು ಭಾವಿಗಳಿದ್ದರೂ ಅವುಗಳ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ ಈ ಒಂದು ಭಾವಿಯ ನೀರಿನ ಹೊರತು. ಕೊಡಗಳನ್ನು ಹಗ್ಗಕ್ಕೆ ಕಟ್ಟಿ ಕೆಳಗೆ ಬಿಟ್ಟು ಪ್ರಾಣಿಗಳ ಗುಟುರಿನ ಶಬ್ದದಂತೆ ತುಂಬಿಕೊಳ್ಳುತ್ತಿದ್ದ ಕೊಡಗಳನ್ನು ನೋಡ್ತಾ ಮೇಲಕ್ಕೆ ಒಬ್ಬರು ಅಥವಾ ಇಬ್ಬರೂ ಸೇರಿ ಎಳೆಯೋದು ಇದೆಯಲ್ಲ, ಅದು ಒಂದು ಕಲೆ. ಹಾಗಾಗಿ ಆ ಭಾವಿಗೆ ಸಿಹಿ ನೀರ ಸೇದುವ ಭಾವಿ ಅಂತ ಹೆಸರು. ಊರಿಂದ ನೂರಿನ್ನೂರು ಮೀಟರ್ ದೂರದಲ್ಲಿ ಕೆರೆಯ ದಂಡೆಯ ಪಶ್ಚಿಮ ದಿಕ್ಕಿನಲ್ಲಿತ್ತು.
ಕೆರೆ ತುಂಬಿದರೆ ಬಾವಿಯಲ್ಲಿ ಸಮೃದ್ಧ ನೀರು. ವರ್ಷ ಬಿಟ್ಟು ವರ್ಷವಂತೂ ಕೆರೆ ತುಂಬುತ್ತಿತ್ತು. ಹಾಗಾಗಿ ಆಗ ಸಾವಿರ,ಹದಿನೈದು ನೂರು ಜನಸಂಖ್ಯೆ ಇದ್ದ ನನ್ನೂರಿಗೆ ಈ ಬಾವಿಯ ನೀರು ಸಾಕಾಗುತ್ತಿತ್ತು. ಮೂರ್ನಾಲ್ಕು ವರ್ಷ ಮಳೆ ಬಾರದಿದ್ದರೆ, ನಮ್ಮ ನೀರಿನ ಗೋಳು ಎಲ್ಲಿ ಹೇಳಿದರೂ ತೀರದು. ಈಗಿನ ರೀತಿ ನಮ್ಮೆಲ್ಲ ಗೋಳುಗಳನ್ನು ಕೇಳೋಕ್ಕೆ ಸರ್ಕಾರ ಅಂತ ಒಂದಿದೆ ಅಂತ ನಮಗೆ ತಿಳಿದೇ ಇರಲಿಲ್ಲ. ಏನೇ ಸಮಸ್ಯೆ ಬಂದರೂ ಊರವರೇ ಪರಿಹರಿಸಿಕೊಳ್ಳುತ್ತಿದ್ದರು. ಒಣಗಿದ ಕೆರೆಯಲ್ಲಿ ಅಲ್ಲಲ್ಲಿ ಹೂಳಿನ ಕೆಸರು ತೆಗೆದು ಭಾವಿಯ ರೂಪದ ಗುಂಡಿ ಮಾಡಿಕೊಳ್ಳುತ್ತಿದ್ದೆವು. ಅದೂ ಸಾಕಾಗುತ್ತಿರಲಿಲ್ಲ. ಊರ ಪಶ್ಚಿಮಕ್ಕೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದ್ದ ಗೌಡ್ರ ಕಪಿಲೇಬಾವಿ, ಈಶಾನ್ಯದಲ್ಲಿ ಎರಡು ಕಿಲೋಮೀಟರ್ ದೂರದ ಗೊಲ್ಲರ ಅಳ್ಳಿರಜ್ಜನ ಕಪಿಲೆ ಬಾವಿಗಳು ನೆರವಿಗೆ ಬರುತ್ತಿದ್ದವು. ನನ್ನೂರ ಸುತ್ತ ಮುತ್ತ ಅಂತರ್ಜಲ ಕಡಿಮೆ.
ಈ ಸಿಹಿನೀರ ಸೇದುವ ಬಾವಿ ಒಂಥರಾ ನಮ್ಮೂರ ಸಂಪರ್ಕ ಕೇಂದ್ರ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ಸಾಯಂಕಾಲ ಪ್ರತಿ ಮನೆಯ ಒಬ್ಬ ಅಥವಾ ಇಬ್ಬರು ಸದಸ್ಯರು , ಹೆಣ್ಣು, ಗಂಡು ತಾಮ್ರ ಅಥವಾ ಮಣ್ಣಿನ ಕೊಡಗಳನ್ನು ಹಿಡಿದು ನೀರಿಗೆ ಅಂತ ಇಲ್ಲಿ ಬರಲೇಬೇಕು. ಎಲ್ಲ ಕುಶಲೋಪರಿಗಳೂ ಅಲ್ಲೇ. ಎಲ್ಲರ ಹತ್ತಿರ ಸೇದುವ ಹಗ್ಗ ಇರುತ್ತಿರಲಿಲ್ಲ. ಇದ್ದವರು ಹಗ್ಗ ಹಾಕುತ್ತಿದ್ದರು. ಅವರು ಸಾಕು ಮಾಡಿಕೊಂಡು ಹಗ್ಗ ತೆಗೆಯುತ್ತಿದ್ದರು. ಅಷ್ಟರಲ್ಲೇ ಎಲ್ಲರೂ ಸೇದಿಕೊಳ್ಳಬೇಕು. ಹಾಗಾಗಿ ಬಾವಿಗೆ ಹೋಗಿ ಬರುವ ಹಾದಿಯಲ್ಲಿ ಸಾಕಾ, ಸಾಕಾ ಅಂತ ಕೇಳಿಕೊಳ್ಳೋದು ಒಂದು ರೀತಿಯ ಸಾಂಪ್ರದಾಯಿಕ ಮಾತಾಗಿತ್ತು. ಯುವಕರು ಒಬ್ಬರೇ ಕೊಡವನ್ನು ಬಾವಿಯಿಂದ ಸೇದಿದರೆ, ಯುವತಿಯರಿಗೆ ನೆರವಿನಂತೆ ಹಗ್ಗಕ್ಕೆ ಕೈಹಾಕೋದು, ಎಳೆಯುವ ಆ ಧಾಟಿ ಬಲು ಸೊಗಸಾಗಿ ಇರ್ತಿತ್ತು. ಐದಾರು ರಾಟೆಗಳು ಬಾವಿಗೆ ಇದ್ದರೂ ಒಂದೋ ಎರಡೋ ಕೆಲಸ ಮಾಡುತ್ತಿದ್ದವು ಹಗ್ಗಗಳೊಂದಿಗೆ. ಹಾಗಾಗಿ ಬಾವಿಯ ಕಟ್ಟೆ ಮಾತುಗಳ ವಿನಿಮಯಕ್ಕೂ ವೇದಿಕೆ ಆಗುತ್ತಿತ್ತು. ಊರಿಗೆ ಬಂದವಳು ನೀರಿಗೆ ಬಾರದಿರುವಳೇ ಅನ್ನೋ ಗಾದೆಯೇ ಆಗ ಪ್ರಚಲಿತ ಇತ್ತು ಅಂದ್ರೆ, ಈ ನೀರಿನ ಭಾವಿಗಳ ಪಾತ್ರ ಎಷ್ಟಿರುತ್ತಿತ್ತು ಅಂತ ಅರ್ಥ ಮಾಡಿಕೊಳ್ಳಿ. ಜೋಡು ಕೊಡಗಳನ್ನು ಎರಡು ಹೆಗಲ ಮೇಲೆ ಯುವಕರು ಹೊತ್ತರೆ, ಬಳುಕುವ ಲತಾಂಗಿಯರು ತಲೆಯ ಮೇಲೆ ಒಂದು,ಸೊಂಟದ ಮೇಲೆ ಮತ್ತೊಂದನ್ನು ಹೊತ್ತು ನಡೆಯುವ ಸೊಗಸು ಇಂದು ಕನಸಾಗಿದೆ! ಈಗಿನ ಹೆಂಗಳೆಯರ ಸೊಂಟಗಳು ಕೊಡ ಇಡಲು ಸಿದ್ದವೇ ಆಗಿಲ್ಲವೇನೋ ಅಂತ ಅನುಮಾನ ನನಗೆ.
ಇದೆಲ್ಲಾ ಸೊಬಗು,ನಗು,ಬಿನ್ನಾಣ,ಊರ,ಮನೆಯ ಎಲ್ಲಾ ವಿಷಯಗಳ ಚರ್ಚೆ,ಯುವಕ ಯುವತಿಯರ ಕಳ್ಳ ಕಣ್ಣ ನೋಟಗಳ ವಿನಿಮಯ ನಡೆಯುತ್ತಿದ್ದದು ಬಾವಿಯಲ್ಲಿ ನೀರಿದ್ದರೆ ಮಾತ್ರ! ಬರಗಾಲ ಬಂದು,ಮಳೆ ಬಾರದೆ ಕೆರೆ ತುಂಬದೇ ಇದ್ರೆ, ಭಾವಿಯ ಜಲಮೂಲ ಕ್ಷೀಣಗೊಂಡು ಕೊಡಮುಳುಗುವಷ್ಟು ಅಡಿ,ಎರಡಡಿ ನೀರು ಶೇಖರಿಸಿಕೊಳ್ಳಲು ದಿನವಿಡೀ ಬೇಕಾಗುತ್ತಿತ್ತು. ಸಾಯಂಕಾಲದ ವರೆಗೆ ಇದ್ದ ಬದ್ದ ನೀರನ್ನೆಲ್ಲಾ ಬಾವಿಯ ತಳಕ್ಕೆ ಇಳಿದು ಬಸಿದಾಗಿರುತ್ತಿತ್ತು. ಹಾಗಾಗಿ ರಾತ್ರಿಯೆಲ್ಲಾ ಯಾರಾದ್ರು ಎಷ್ಟು ನೀರು ಬಂತು ಅಂತ ನೋಡಿಕೊಂಡು ರಾತ್ರಿಯೇ ನೀರನ್ನು ಸೇದುವುದು ಆಗ ಸಾಮಾನ್ಯವಾಗಿತ್ತು. ಹಾಗಾಗಿಯೇ ರಾತ್ರಿ ಸರಹೊತ್ತಿನ ಕೊಡ ತುಂಬುತ್ತಾವಂತೆ ಅನ್ನೋ ಶಬ್ದಗಳು ರಣ ಕೇಕೆಯಂತೆ ಪ್ರತಿಯೊಬ್ಬರನ್ನೂ ಬಡಿದೆಬ್ಬಿಸಿ ಬಿಡುತ್ತಿತ್ತು.
ಇಂತಹ ಬೇಸಿಗೆಯ ಸಮಯದಲ್ಲೇ,ನೀರಿನ ಬವಣೆ ಇರುವಾಗಲೇ ಯುಗಾದಿ ಹಬ್ಬ ಬಂದುಬಿಡುತ್ತಿತ್ತು. ಬಹುತೇಕ ಮನೆಗಳ ನೆಲಹಾಸು ಮಣ್ಣಿನಿಂದಲೇ ಇರುತ್ತಿತ್ತು. ಅವುಗಳನ್ನು ಸಗಣಿ ನೀರಿನೊಂದಿಗೆ ಸಾರಿಸುತ್ತಿದ್ದರು. ಮನೆಯಲ್ಲಿನ ಪಾತ್ರೆ ಪಗಡೆ ಗಳನ್ನು ತೊಳೆದುಕೊಳ್ಳಬೇಕು. ಇಲ್ಲವಾದ್ರೆ ಅದೆಂತಹ ಯುಗಾದಿ ಹಬ್ಬ?!
ಎರಡು ಮೂರು ವರ್ಷ ಮಳೆ ಬರದಿದ್ದದ್ದು,ಬೆಳೆ ಬೆಳೆಯದೇ ಹೋದದ್ದು, ಮನುಷ್ಯರದ್ದು ಬಿಡಿ, ದನ ಕರುಗಳಿಗೆ ನೀರು ಮೇವಿನ ಬವಣೆ, ಕೊನೆಗೆ ಕುಡಿಯಲು ನೀರೂ ಇಲ್ಲದ್ದು ವಿಷಯವೇ ಅಲ್ಲ ಅನ್ನುವ ರೀತಿ ನನ್ನೂರು ಯುಗಾದಿ ಹಬ್ಬಕ್ಕೆ ತಯಾರಾಗಿ ಬಿಡ್ತಿತ್ತು! ಹಿಂದಿನ ದಿನ ಮನೆ ಸಾರಿಸಿಕೊಂಡು, ಇದ್ದ ಬದ್ದ ಪಾತ್ರೆಗಳನ್ನು ತೊಳೆದುಕೊಂಡು, ರಾತ್ರಿಯೆಲ್ಲಾ ನೀರನ್ನು ಬಾವಿಯಿಂದ ಅಕ್ಷರಶಃ ಬಸಿದು ತಂದು, ಬೆಳಿಗ್ಗೆಯೇ ಎಲ್ಲ ಮನೆಗಳ ಮುಂದೆ ಸಗಣಿ ನೀರಿನ ಸಿಂಚನ, ರಂಗೋಲಿಗಳು, ಮಾವಿನ ಎಲೆಯ ತಳಿರು ತೋರಣಗಳು ಹಬ್ಬದ ಸಡಗರವನ್ನು ಉಲ್ಬಣಗೊಳಿಸುತ್ತಿತ್ತು. ಅಡುಗೆ ಮನೆಗಳಲ್ಲಿ ಹಬ್ಬದ ಅಡುಗೆಯ ತಯಾರಿ ನಡೆದರೆ, ಊರಲ್ಲಿ ದೇವರು ಬರುವ ಸಂಭ್ರಮ. ದೇವರು ಊರೆಲ್ಲ ಅಡ್ಡಾಡಿ ತಳಾಸ ಅಂತ ಕರೆಯಲ್ಪಡುವ ಪೂಜಾರಿ ಮನೆಯ ಜಾಗದಲ್ಲಿ ಬಂದು ಸ್ಥಾಪಿತನಾದರೆ, ಅಲ್ಲಿ ಕೊಡುತ್ತಿದ್ದ ಬೇವು ಬೆಲ್ಲದ ನೀರಿಗೆ ಊರೆಲ್ಲ ನೆರೆಯುತ್ತಿತ್ತು. ಬೇವಿನ ಹೂಗಳ ಗೊಂಚಲು, ಮಾವಿನಕಾಯಿಯ ತುಂಡುಗಳು, ಬೆಲ್ಲದ ತುಂಡುಗಳನ್ನು ಬೆರೆಸಿ, ತಯಾರಿಸಿದ ಪಾನಕ ಅದು. ಒದ್ದೆ ಬಟ್ಟೆಯಿಂದ ಹೊದಿಸಿದ ಹೊಸ ಮಣ್ಣಿನ ಗಡಿಗೆಯಲ್ಲಿ ಅದನ್ನು ಇಟ್ಟಿರುತ್ತಿದ್ದರು. ಆ ನೀರನ್ನು ಒಂದು ಲೋಟದಲ್ಲಿ ಮನೆಗೆ ತಂದು ಪೂಜೆಯ ನಂತರವೇ ಎಲ್ಲರ ಊಟ. ಇದು ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಯುಗಾದಿಯ ಬೇಟೆ ಗೆ ಅಂತ ಊರ ಉತ್ಸಾಹಿ ಯುವಕರು ನಮ್ಮೂರ ಬೇಡಪಡೆಯ ನೇತೃತ್ವದಲ್ಲಿ ಭರ್ಚಿ,ಬಿಲ್ಲೆ, ಕತ್ತಿ ವಿಧ ವಿಧವಾದ ಆಯುಧ ಹಿಡಿದು ಅಡವಿಗೆ ಹೋಗುತ್ತಿದ್ದರು.
ಯುಗಾದಿ ಬೇಟೆ ಅಂತಲೇ ಹೆಸರುಹೊಂದಿದ್ದ ಈ ಕಾರ್ಯಕ್ರಮ ಬಹುತೇಕ ಸುತ್ತ ಹಳ್ಳಿಗಳಲ್ಲಿ ಇರುತ್ತಿತ್ತು. ಅಡವಿಗಳಲ್ಲಿ ಆಯಾಯ ಊರುಗಳ ಸರಹದ್ದು ಇರುತ್ತಿತ್ತು. ಆಯಾಯ ಊರವರು ಅವರವರ ಊರುಗಳ ಸರಹದ್ದಲ್ಲೇ ಬೇಟೆ ಆಡಬೇಕು. ಬೇಟೆ ಬೇರೆ ಊರ ಅಡವಿಯ ಸರಹದ್ದಿಗೆ ಹೋಯ್ತೆಂದರೆ ಅದನ್ನು ಕೊಲ್ಲುವ ಹಾಗಿಲ್ಲ ಅನ್ನುವ ನಿಯಮ. ನನಗಂತೂ ಇದು ಆಗತಾನೇ ಅಪ್ಪ ಕಥೆ ಹೇಳುತ್ತಿದ್ದ ಪಾಶುಪತಾಸ್ತ್ರ ದ ಕಥೆಯಲ್ಲಿಯ ಅರ್ಜುನ ಮತ್ತು ಬೇಡನ ರೂಪದ ಶಿವನನ್ನು ನೆನಪಿಸುತ್ತಿತ್ತು.
ಸಾಮಾನ್ಯವಾಗಿ ಒಂದು ರಾತ್ರಿಗೆ ಮೀಸಲಿರುತ್ತಿದ್ದ ಈ ಬೇಟೆ ಆಟ, ಒಂದು ವೇಳೆ ಬೇಟೆ ಸಿಗದಿದ್ದರೆ ಮತ್ತೊಂದು ದಿನಕ್ಕೆ ಮುಂದೂಡಿಕೆ ಆಗ್ತಿತ್ತು. ಏನೇ ಆದರೂ ಬೇಟೆ ಇಲ್ಲದೆ ಪಡೆ ಊರೊಳಗೆ ಬರ್ತಿರಲಿಲ್ಲ. ಹಾಗೆ ಅಲ್ಲಿಯ ಆಗು ಹೋಗುಗಳನ್ನು ಕಾಲ ಕಾಲಕ್ಕೆ ಊರಿಗೆ ಬಂದು ತಿಳಿಸುವ ಗುಂಪು ಇರ್ತಿತ್ತು.
ಒನಕೆ ಓಬವ್ವ ಅಂತ ಹೆಸರು ವಾಸಿಯಾದ ಚಿತ್ರದುರ್ಗದ ಮದಕರಿ ನಾಯಕನ ಇತಿಹಾಸದಲ್ಲಿ ಬರುವ ವೀರ ಮಹಿಳೆಯ ತವರೂರು ಗುಡೇಕೋಟೆ ನನ್ನೂರಿನ ಅಡವಿಯ ಸರಹದ್ದಲ್ಲೇ ಇದೆ. ಈ ಯುಗಾದಿ ಬೇಟೆ ಅಂದ್ರೆ, ಅವರಿಗೂ ನಮಗೂ ಎನಾದ್ರೂ ತಗಾದೆ ಇರಲೇಬೇಕು. ಸಾಮಾನ್ಯವಾಗಿ ಕಾಡು ಹಂದಿಗಳೇ ಬೇಟೆ ಆಗಿರುತ್ತಿದ್ದವು. ಅದನ್ನು ಯಾರು ಮೊದಲಿಗೆ ನೋಡಿದರು,ಯಾರು ಮೊದಲ ಹೊಡೆತ ಯಾವ ಆಯುಧದಿಂದ ಕೊಟ್ಟರು,ಮತ್ಯಾರು ಅದಕ್ಕೆ ಸಾಯುವ ಹೊಡೆತ ಕೊಟ್ಟರು ಅನ್ನುವುದು ದಿನಗಳ ಕಾಲ ರಸವತ್ತಾದ ಚರ್ಚೆಯ ವಿಷಯಗಳು. ಇಡೀ ಊರಿಗೇ ಸಂಭ್ರಮದ,ಹೆಮ್ಮೆಯ ವಿಷಯವಾಗಿ ಚರ್ಚಿಸಲ್ಪಡುತ್ತಿತ್ತು. ನನಗಂತೂ ಕಥೆಗಳಲ್ಲಿ ಕೇಳುತ್ತಿದ್ದ ಯುದ್ಧದ ಭಾವನೆ ಬರ್ತಿತ್ತು. ಬಲವಾದ ಬೇಟೆ ದೊರಕಿದೆ, ಆ ವರ್ಷ ಒಳ್ಳೆ ಮಳೆ,ಬೆಳೆ ಆಗಿ ಊರಿಗೆ ಸಂವೃದ್ಧತೆ ಆಗುತ್ತದೆ ಅನ್ನುವ ಪ್ರತೀತಿ!
ಆ ಬೇಟೆಯ ಮೆರವಣಿಗೆಯೇ ಒಂದು ಸಂಭ್ರಮ. ಬೇಟೆಗೆ ಹೋದ ಎಲ್ಲರೂ ತಮ್ಮ ತಮ್ಮ ಆಯುಧಗಳನ್ನು ಮೇಲೆತ್ತಿಕೊಂಡು ಬೇಟೆಯನ್ನು ಒಂದು ಕೋಲಿಗೆ ನೇತುಹಾಕಿಕೊಂಡು ಇಬ್ಬರು ಹೊತ್ತು ಮೆರವಣಿಗೆಯಲ್ಲಿ ನಡೆಯುತ್ತಿದ್ದರೆ, ಮತ್ತೆಲ್ಲರೂ ಆಯುಧ ಸಮೇತರಾಗಿ ನೃತ್ಯ ಮಾಡುತ್ತಾ ಊರ ಬೀದಿಯಲ್ಲಿ ಸಾಗೋದು ಮರೆಯಲಾಗದ ರೋಚಕ ಕ್ಷಣ! ಸಾಗುವ ಮೆರವಣಿಗೆಗೆ, ಊರ ಹೆಂಗಳೆಯರು ಆರತಿ, ಓಕುಳಿಯಿಂದ ನಿವಾಳಿಸೋದು ನೋಡಲು ಬಲು ಖುಷಿ ಕೊಡ್ತಿತ್ತು. ಬೇಟೆಗಾರರ ದಣಿದ ಮುಖಗಳು ಕುಂಕುಮದಿಂದ ಕೆಂಪಾಗಿ ಹುರುಪಿನಿಂದ ಕುಣಿಯೋದು ನನಗೆ ರಣೋತ್ಸವವನ್ನು ಕಲ್ಪಿಸಿಕೊಳ್ಳಲು ಅನುವು ಮಾಡುತ್ತಿತ್ತು.
ಮಾರನೆಯ ದಿನ ಪಂಚಾಂಗ ಶ್ರವಣ, ಸಾಯಂಕಾಲ ಚಂದ್ರ ದರ್ಶನ. ಎಲ್ಲರೂ ಊರ ಹೊರಗಿನ ದೇವಸ್ಥಾನದಲ್ಲಿ ನೆರೆಯೋದು, ಮುಸುಕು ಆಗುವತನಕ ಅಲ್ಲಿದ್ದು, ಚಂದ್ರನನ್ನು ಆಗಸದಲ್ಲಿ ಹುಡುಕೋದು. ಕಂಡವರು ಅಲ್ಲಿದೆ ನೋಡು, ಆ ಮರದ ಟೊಂಗೆಯ ಎಡಕ್ಕೆ ಅಂತ ಹೇಳೋದು, ಕಾಣಲಿಲ್ಲ ಅನ್ನೋದು…ಹೀಗೇ ಸ್ವಲ್ಪ ಕತ್ತಲು ಆವರಿಸುವವರೆಗೆ ಕಣ್ಣು ಮುಚ್ಚಾಲೆ ಆಟ. ನಂತರ ಗೆರೆ ಎಳೆದಂತಹ ಬಿದಿಗಿ ಚಂದ್ರನ ದರ್ಶನ…ಮಿಣುಕು ದೀಪ ಹಚ್ಚಿದಂತಾ ಜೋಡು! ಚಂದ್ರ ಕಂಡ,ಚಂದ್ರ ಕಂಡ ಅಂತ ಕುಣಿತಿದ್ವಿ, ಕಂಡವರೆನ್ನೆಲ್ಲಾ ಚಂದ್ರನ್ನ ನೋಡಿದ್ಯಾ ಅಂತ ಕೇಳೋದೇ ಕಾರ್ಯಕ್ರಮ! ಊರ ಎಲ್ಲ ಹಿರಿಯರ ಕಾಲಿಗೆ ನಮಸ್ಕಾರ.
ಚೈತ್ರ ಮಾಸದೊಂದಿಗೆ ಪ್ರಾರಂಭವಾಗುವ ನಮ್ಮ ನೆಲದ ಹೊಸ ವರುಷದ ಹಬ್ಬ ಈ ಯುಗಾದಿ ಅಂತೆ. ಒಂದಿದ್ದರೂ,ಇಲ್ಲದಿದ್ದರೂ ಜೀವನದಲ್ಲಿಯ ಕಷ್ಟ,ಸುಖಗಳನ್ನು ಸಮವಾಗಿ ಸ್ವೀಕರಿಸಬೇಕೆಂಬ ಸಂದೇಶದ ರೂಪಕವಾಗಿ ಇಂದು ಬೇವು,ಬೆಲ್ಲವನ್ನು ಜೊತೆಯಾಗಿ ಸೇವಿಸಿ ಸಂಭ್ರಮಿಸುತ್ತೇವೆ.
ಸುಖವಾಗಿರಲು, ಸಂತೋಷವಾಗಿರಲು ಬೇಕಾಗಿರೋದು ಮನಃಸತ್ವ…. ಹಣ ಅಲ್ಲ ಅನುಕೂಲಗಳು ಅಲ್ಲ ಅನ್ನೋದನ್ನ ಆಗ ಅನುಭವಿಸಿದ್ದರೂ ತಿಳಿಯಲು ಆಗಲಿಲ್ಲ, ಈಗ ತಿಳೀತಿದೆ.
ಎಲ್ಲರಿಗೂ ಪ್ಲವನಾಮ ಸಂವತ್ಸರದ ಉಗಾದಿ ಹಬ್ಬದ ಶುಭಾಶಯಗಳು. ಬೇವು ಬೆಲ್ಲ ತಿಂದು,ಒಳ್ಳೊಳ್ಳೆ ಮಾತಾಡಿ ಕಷ್ಟ,ಸುಖಗಳನ್ನು ಸಮವಾಗಿ ಸ್ವೀಕರಿಸುವ ಸಮಭಾವಿಗಳಾಗಿ ಬಾಳೋಣ.
Photo by Jeremy Bishop on Unsplash
Mathomme namma jamanada yugadi acharisida anubhava authu
ಅತ್ಯುತ್ತಮ ಬರವಣಿಗೆ. ನಾನು ಹಾಸ್ಪೆಟ್ನಲ್ಲಿ ಕಳೆದ ದಿನಗಳನ್ನು ನೆನಪಿಸಿದೆ. ನಾನು ಬೇಟೆಯ ಬಗ್ಗೆ ಕೇಳಿರಲಿಲ್ಲ. ಹಬ್ಬದ ದಿನದಂದು ನನ್ನ ಅಜ್ಜಿ ಸಂಜೆ ನಮ್ಮನ್ನು ಮನೆಯಿಂದ ಬಿಡುತಿರಲಿಲ್ಲ ಈಗ ನಾನು ಭಾವಿಸುತ್ತೇನೆ ಸತ್ತ ಪ್ರಾಣಿಗಳ ಮೆರವಣಿಗೆ ನೋಡಬಾರಧು ಅಂತ ಇರಬಹುದು.
ಬಾವಿಯಿಂದ ನೀರು ಸೆಳೆಯೋದು, ಅಲ್ಲಿಯ ಮಾತುಗಳ ಸೊಗಸು, ಜಗಳಗಳು ಎಲ್ಲ ಸುಂದರ ನೆನಪುಗಳು
ಕುತೂಹಲ ಉಂಟು ಮಾಡುತ್ತದೆ. ಮಂಜುನಾಥ್ ಅವರ ಲೇಖನ. ಈಗಲೂ ಇಂತಹ ಸುಂದರ, ತುಂಟಾಟ ದೃಶ್ಯಗಳನ್ನು ನೋಡಲು ದೊರಕುತ್ತದೆ? 👌👍
Bm. ನಿನಗೆ ನೀನೆ ಸಾಟಿ. ಎಷ್ಟು ಮನೋಹರವಾಗಿ ವರ್ಣನೆ ಮಾಡಿದೆಯಾ. ನಿಜವಾಗ್ಲೂ ಮತ್ತೆ ಬಾಲ್ಯದ ದಿನಗಳು ಮರುಕಳಿಸುವ ಹಾಗಿದೆ ನಿನ್ನ ಬರವಣಿಗೆ. ಒನ್ನದೊಂದು ಸಾಲು ಓದುವಾಗ ಕಣ್ಣಿಗೆ ಕಟ್ಟುವಂತಿದೆ. ನಿನ್ನ ನೆನಪಿನ ಶಕ್ತಿ ಗೇ 🙏🙏ಮತ್ತಷ್ಟು ಲೇಖನ ಬರಲಿ
I was not aware of hunting after Ugadi. Another strange experience during my working days in Mandya.
Gambling, the winner will have a good year.