19.9 C
Karnataka
Sunday, September 22, 2024

    ಸಾಫ್ಟಿ ಕುಂಚದಲ್ಲಿ ಅರಳಿದ ನಿಸರ್ಗ ಚಿತ್ರಣ

    Must read

    ಬಳಕೂರು ವಿ ಎಸ್ ನಾಯಕ

    ನಿಸರ್ಗ ಎಲ್ಲರನ್ನೂ ಒಂದು ಕ್ಷಣ ಸೆಳೆದು ಬಿಡುತ್ತದೆ ನಿಸರ್ಗವು ಇಂದು ನೋಡಿದ ಹಾಗೆ ನಾಳೆ ಇರುವುದಿಲ್ಲ ಇದು ಬದಲಾವಣೆ ಹೊಂದುತ್ತಾ ಇರುತ್ತದೆ, ನಿಸರ್ಗವು ಕಲಾವಿದನಿಗೆ ಹೇಗೆಲ್ಲಾ ಆಕರ್ಷಣೆಗೆ ಒಳಗಾಗುತ್ತದೆ ಎಂದರೆ ಅದನ್ನು ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ. ಅಂದಹಾಗೆ ನಿಸರ್ಗದ ರಮ್ಯ ರಮಣೀಯ ದೃಶ್ಯಗಳಿಗೆ ಆಕರ್ಷಿತರಾಗಿ ಭಾವಪರವಶರಾಗಿ ಒಂದಕ್ಕಿಂತ ಒಂದು ಆಕರ್ಷಣೀಯ ಚಿತ್ರಗಳನ್ನು ರಚಿಸಿದವರು ಕಲಾವಿದ ವೆಂಕಟೇಶ ರಾವ್ ಕಾರಿಂಜ .

    ಇವರು ವೃತ್ತಿಯಲ್ಲಿ ಸಾಫ್ಟ್ವೇರ್ ಉದ್ಯೋಗಿ ಆದರೆ ಪ್ರವೃತ್ತಿಯಲ್ಲಿ ಕಲಾವಿದ. ಕಡಲ ಕಿನಾರೆ ಅಲ್ಲಿರುವ ಸುಂದರವಾದ ಪುಟ್ಟದಾದ ಗ್ರಾಮ ಕಾರಿಂಜ ಇವರ ಹುಟ್ಟೂರು. ಅಲ್ಲಿರುವ ಸುತ್ತಮುತ್ತಲ ಮರ-ಗಿಡ ಬೆಟ್ಟ ಎಲ್ಲವೂ ಕೂಡ ಇವರಿಗೆ ಕಲಾಸ್ಫೂರ್ತಿ. ಪ್ರತಿದಿನ ಬೆಳಿಗ್ಗೆ ಎದ್ದು ಸುಂದರವಾದ ಪ್ರಕೃತಿಯ ಮಡಿಲನ್ನು ನೋಡಿದ ಅವರು ತಮಗರಿವಿಲ್ಲದೆ ಪ್ರಕೃತಿಯ ಸೊಬಗಿಗೆ ಮರುಳಾದರು. ಅಂದಿನಿಂದ ಅವರು ಶಾಲಾ ದಿನಗಳಲ್ಲಿಯೇ ಹಲವಾರು ಪ್ರಕೃತಿಯ ಚಿತ್ರಗಳನ್ನು ಬರೆದು ಎಲ್ಲರ ಮನ ಸೆಳೆದರು. ಅಂದಿನಿಂದ ಆರಂಭವಾದ ಇವರ ಕಲಾಯಾತ್ರೆ ಇಂದಿನವರೆಗೆ ಮುಂದುವರಿದಿದೆ.

    ಸಾಫ್ಟ್ವೇರ್ ಉದ್ಯೋಗಿ ಆದರೂ ಕೂಡ ರಜಾದಿನಗಳಲ್ಲಿ ಸಮಯ ಸಿಕ್ಕಾಗ ತಾವು ಅಂದುಕೊಂಡ ಕಲಾಕೃತಿಗಳನ್ನು ವಿಶೇಷವಾದ ರೀತಿಯಲ್ಲಿ ಬಿಂಬಿಸುತ್ತಾರೆ. ಇವರ ರಚನೆಯಲ್ಲಿ ಸಾಮಾನ್ಯವಾಗಿ ನಾನು ನಿಸರ್ಗದಲ್ಲಿ ಕಾಣುವ ವಿಭಿನ್ನ ರೀತಿಯ ವಿಚಾರಧಾರೆಗಳನ್ನು ಗಮನಿಸಬಹುದು. ಒಂದಕ್ಕಿಂತ ಒಂದು ಆಕರ್ಷಣೀಯ ವಾದ ಕಲಾಕೃತಿಗಳು ನೋಡಿದವರಿಗೆ ಒಂದು ಕ್ಷಣ ಭಾವಪರವಶರನ್ನಾಗಿಸುತ್ತದೆ.

    ಇವರ ಕಲಾಕೃತಿಗಳಲ್ಲಿ ಸಾಮಾನ್ಯವಾಗಿ ಮನೆಯ ಮುಂದೆ ಕಂಗೊಳಿಸುವ ಹೊಲ ಗದ್ದೆಗಳು, ಮಳೆಯ ನೀರು ಹರಿದು ಹೋಗುವ ಜುಳುಜುಳು ಕಲರವ, ಮಂಜುಮುಸುಕಿದ ಬೆಟ್ಟಗಳು ಗದ್ದೆಯಲ್ಲಿ ಹಸಿರಿನ ನರ್ತನ, ಹಕ್ಕಿಗಳು ಆಕಾಶದಲ್ಲಿ ಹಾರಿ ಹೋಗುವ ದೃಶ್ಯ, ಸೂರ್ಯೋದಯ, ಸೂರ್ಯಾಸ್ತ, ಮೋಡಮುಸುಕಿದ ವಾತಾವರಣ ,ಮಂದವಾದ ಗಾಳಿ ಬೀಸಿದಾಗ ಕಾಣುವ ದೃಶ್ಯ,ತೋಟಗಳಲ್ಲಿ ಕೆಲಸ ಮಾಡುವ ಶ್ರಮಜೀವಿಗಳು, ಸೂರ್ಯ ರಶ್ಮಿಯ ಸ್ಪರ್ಶದ ದೃಶ್ಯಕಾವ್ಯ, ವರ್ಣ ವೈವಿಧ್ಯಮಯ ಹೂಗಳು, ಅವುಗಳಮೇಲೆ ಪಾತರಗಿತ್ತಿ ಹಾರಾಟ….. ಹೀಗೆ ಪ್ರಕೃತಿಯ ನಾನಾವಿಧದ ಮನಮೋಹಕ ದೃಶ್ಯಗಳು ಇವರ ಕಲಾಕೃತಿಗಳಲ್ಲಿ ಕಾಣಬಹುದು.

    ವೆಂಕಟೇಶ ರಾವ್ ರವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಹವ್ಯಾಸಿ ಕಲಾವಿದರಾಗಿ ಕಾರ್ಯವನ್ನು ಆರಂಭಿಸಿದ ಇವರು ಇಂದು ಅದ್ಭುತ ಕಲಾವಿದರಾಗಿ ಬೆಳೆದಿರುವುದು ನಿಜಕ್ಕೂ ಅವರ ಅಪಾರವಾದ ಪರಿಶ್ರಮವೇ ಕಾರಣ ಮತ್ತೊಂದು ವಿಶೇಷವೆಂದರೆ ವಾರಾಂತ್ಯದ ಬಿಡುವಿನ ಸಮಯದಲ್ಲಿ ಲಾಲ್ ಬಾಗ್ ,ಕಬ್ಬನ್ ಪಾರ್ಕ್, ಚಿತ್ರಕಲಾ ಪರಿಷತ್ ,ವೆಂಕಟಪ್ಪ ಕಲಾ ಗ್ಯಾಲರಿ ಹೀಗೆ ವಿವಿಧ ಪ್ರದೇಶಗಳಲ್ಲಿ ಭೇಟಿನೀಡಿ ಅಲ್ಲಿಯ ಹತ್ತು ಹಲವಾರು ವಿಷಯಗಳನ್ನು ಚಿತ್ರಗಳಲ್ಲಿ ಬಿತ್ತರಿಸುತ್ತಾರೆ. ಇವರು ಬೆಂಗಳೂರು-ಮಂಗಳೂರು ಮುಂತಾದೆಡೆ ಹಲವು ಬಾರಿ ಏಕವ್ಯಕ್ತಿ ಹಾಗೂ ಹಲವಾರು ಬಾರಿ ಮೋಹ ಕಲಾಪ್ರದರ್ಶನವನ್ನು ನೆರವೇರಿಸಿದ್ದಾರೆ.ಮಡಿಕೇರಿಯಲ್ಲಿ ಸಾಂಸ್ಕೃತಿಕ ಕಲಾ ಶಿಬಿರ ಬೆಂಗಳೂರಿನ ರೋರಿಚ್ ಎಸ್ಟೇಟ್ ಲ್ಯಾಂಡ್ಸ್ಕೇಪ್ ಆರ್ಟ್ ಕ್ಯಾಂಪ್ ಹಾಗೂ ಲಲಿತಕಲಾ ಅಕಾಡೆಮಿಯ ತಿಂಗಳ ಚಿತ್ರ ಪ್ರದರ್ಶನ ಮತ್ತು ಇನ್ನಿತರ ಚಿತ್ರ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ .ಜಲವರ್ಣ ಅಕ್ರಲಿಕ್ ತೈಲವರ್ಣ ಬಳಲ್ಲಿ ಪರಿಣಿತಿ ಪಡೆದಿರುವ ಇವರಿಗೆ ಜಲವರ್ಣ ಪ್ರಕೃತಿ ಚಿತ್ರವನ್ನು ರಚಿಸುವುದು ಎಂದರೆ ಬಹಳ ಇಷ್ಟ. ಇವರು ಕೆಎಸ್ಒಯು ಇಂದ ಎಂ ಎಫ್ಎ ಪದವಿಯನ್ನು ದೂರಶಿಕ್ಷಣದ ಮೂಲಕ ಪಡೆದಿದ್ದಾರೆ .

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    spot_img

    More articles

    4 COMMENTS

    1. ಕಲಾವಿದರ ಕುಂಚ ದಿಂದ ಅರಲಿರುವ ಚಿತ್ರಗಳು ಭಾವಪೂರ್ಣ, ಅರ್ಥಪೂರ್ಣವಾಗಿ ಇವೆ.🙏

    2. ವೆಂಕಟೇಶ್ರವರದು ಕಾಲೇಜಿನ ದಿನಗಳಿಂದಲೂ
      ಬಹಳ ಕ್ರಿಯಾಶೀಲ ಮತ್ತು ಕಲಾತ್ಮಕತೆಯನ್ನು ಹೊಂದಿದ ವ್ಯಕ್ತಿತ್ವ. ಅವರಿಂದು ಶ್ರೇಷ್ಠ, ಅದ್ವಿತೀಯ ಕಲಾಕಾರರಾಗಿರುವುದು ಬಹಳ ಸಂತೋಷ.
      ಅವರ ಚಿತ್ರಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತವೆ.

    3. ಜಲವರ್ಣ ಸಮ್ಮಿಲನ ಸೊಗಸಾಗಿದೆ.
      ಮಿ.ಕಾರಿಂಜ,
      ಪ್ರಕೃತಿ ಚಿತ್ರಗಳಿಗೇ ಸೀಮಿತವಾದಿರೇಕೆ?
      ಪ್ರಾಣಿ-ಪಕ್ಷಿ-ಮತ್ಸ್ಯಗಳು ಸ್ನೇಹ ಬೆಳೆಸಲಿಲ್ಲವೇ?
      ಪುಟ್ಟ ಮಕ್ಕಳು ನಗಿಸಲಿಲ್ಲವೇ?
      ಇರಲಿ ಬಿಡಿ. ನಿಮ್ಮ ಚಿತ್ರಗಳೆಲ್ಲಾ ಗಮನ ಸೆಳೆಯುತ್ತವೆ, ಕಣ್ಣಿಗೆ ಖುಷಿ ಕೊಡುತ್ತವೆ.
      ಈಗ ಕೊರೊನಾ, ಲಾಕ್‌ಡೌನ್ ಕಾಲ. ನೆರೆಹೊರೆಯ ಎಳೆಯರಿಗೂ ಕಲೆಯ ಜ್ಞಾನ ಧಾರೆ ಎರೆಯಬಹುದೇನೋ….

    LEAVE A REPLY

    Please enter your comment!
    Please enter your name here

    Latest article

    error: Content is protected !!