ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ನೆಲ್ಲುಂ ಮೊಸರುಂ ಕುಡಿದಂತೆ= ಕನ್ನಡದ ಲಕ್ಷಣಗ್ರಂಥ ಕವಿರಾಜಮಾರ್ಗ ಕಾವ್ಯದ ಎರಡನೆ ಪರಿಚ್ಛೇಧದಲ್ಲಿ ಉಲ್ಲೇಖವಾಗಿರುವ ವಾಕ್ಯವಿದು. ಬರೆವಣಿಗೆಯಲ್ಲಿ ಉಚಿತ ಪದ ಪ್ರಯೋಗಗಳ ಪದಪ್ರಾಮುಖ್ಯತೆ ಹೇಳುವ ಸಂದರ್ಭದಲ್ಲಿ ಈ ದೇಸೀ ಮಾತು ಬಂದಿದೆ.
ಮಾತಿನಲ್ಲಾಗಲಿ ಬರೆವಣಿಗೆಯಲ್ಲಾಗಲಿ ಅನುಚಿತ ಪದ ಅರ್ಥಾತ್ ಅನಗತ್ಯ ಪದಗಳನ್ನು ಹೇರುತ್ತಾ ಹೋದರೆ ಅದು ಸೊಗಸುವುದಿಲ್ಲ. ಏನೆ ಆದರೂ ಹೊಂದಾಣಿಕೆ ಆಗಬೇಕು ಎಲ್ಲೇ ಆಗಲಿ ವೈರುಧ್ಯಗಳಾಗಬಾರದು ಎನ್ನುವುದನ್ನು ಇದು ಸೂಚಿಸುತ್ತದೆ.
ಮೊಸರು ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಅನ್ನ,ಅವಲಕ್ಕಿ ಇತ್ಯಾದಿಗಳ ಜೊತೆಗೆ ಮೊಸರನ್ನು ಬೆರೆಸಿ ಕುಡಿದರೆ ಅದು ಹಿತವಾಗಿರುತ್ತದೆ. ಅದನ್ನು ಬಿಟ್ಟು ನೆಲ್ಲು ಅಂದರೆ ಬತ್ತ ಬೆರೆಸಿದ ಮೊಸರನ್ನು ಕುಡಿಯುವುದು ಕಷ್ಟ.ಕುಡಿದರೂ ಜೀರ್ಣಿಸಿಕೊಳ್ಳುವುದಿರಲಿ ಗಂಟಲಲ್ಲಿಯೂ ಇಳಿಯುವುದಿಲ್ಲ . ಹಾಗಾಗಿ ಮೊಸರಿನೊಂದಿಗೆ ಹೊಂದುವ ಪದಾರ್ಥವನ್ನು ಸೇವಿಸಬೇಕು ಇಲ್ಲವಾದರೆ ತೊಂದರೆ ಖಚಿತ .
ಹೇತಿ ಎಂದರೆ ಪ್ರಹೇತಿ ಎಂದಂತೆ, ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬ ಗಾದೆಗಳನ್ನು ಇಲ್ಲಿ ಅನ್ವಯಿಕವಾಗಿ ಹೇಳಬಹುದು. ‘ಕವಿರಾಜಮಾರ್ಗ’ದಲ್ಲಿ ಪದಗಳ ಅನುಚಿತತೆ ಬಗ್ಗೆ ಹೇಳಿದರೆ ಈ ಗಾದೆಗಳೂ ಅಭಿಪ್ರಾಯ ಭೇದ ಇರಬಾರದು ಎಂಬುದನ್ನು ಹೇಳುತ್ತವೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಲೇಖನ ಚೆನ್ನಾಗಿದೆ.
ಓದುತ್ತಿದ್ದಂತೆ….
ನನ್ನನ್ನು ೪ ದಶಕ ಹಿಂದಕ್ಕೋಡಿಸಿತು.
ಶಾಲೆಯಲ್ಲಿ ಕನ್ನಡ ಪಠ್ಯದಲ್ಲಿ ಓದಿದ `ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಾಯಿತು ನೆನಪಾಯಿತು.
ಮುದ್ದಣ-ಮನೋರಮೆಯ ಸರಸ ಸಲ್ಲಾಪವೂ ಕಣ್ಣೆದುರು ಬಂದಿತು.
ನನ್ನದು ಒಂದೇ ತಕರಾರು…
ಲೇಖನ ಬಹಳ ಚಿಕ್ಕದಾಯಿತು.
ಇದು ಮುದ್ರಣ ಮಾಧ್ಯಮವಲ್ಲ. ಸ್ಥಳಾವಕಾಶದ ಸಮಸ್ಯೆ ಇಲ್ಲ. ಇನ್ನಷ್ಟು ವಿಸ್ತರಿಸಿ ಬರೆಯಲು ಅಡ್ಡಿಯಾಗುತ್ತಿರುವುದೇನು?
ಎತ್ತು ಏರಿಗೆ ಎಳೆ ದರೆ ಕೋಣ ನೀರಿಗೆ ಎಳೆ ಯಿತು ಗಾದೆ ಇಂದೂ ಅನ್ವಯವಾಗುತ್ತದೆ.
ಮುಂದಿನ ಬರೆಹವನ್ನು ಸವಿಸ್ತಾರವಾಗಿ ಬರೆಯುವ ಮಹೇ ಚಂದ್ರ ಸರ್