20.6 C
Karnataka
Sunday, September 22, 2024

    ಚಂಚಲ ಚಿತ್ತ ಪೇಟೆಯಲ್ಲಿ ಲಾಭ ಮಾಡಿಕೊಳ್ಳವುದೇ ಜಾಣತನ

    Must read

    ವಾಹಿನಿ ಎಂದರೆ ದೂರದರ್ಶನ ಎಂಬುವ ಕಾಲದಲ್ಲಿ ಬರುತ್ತಿದ್ದ ಧಾರಾವಾಹಿಗಳು ಕೇವಲ 13 ವಾರಕ್ಕೆ ಸೀಮಿತವಾಗುತ್ತಿದ್ದವು. ಹಾಗಾಗಿ ಅವು ಹೆಚ್ಚು ಹೆಚ್ಚು ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದ್ದವು. ಮುಂದೆ ವಾಹಿನಿಗಳು ಹೆಚ್ಚಾದಂತೆ, ಅವುಗಳ ಶೈಲಿಗಳು ಬದಲಾದಂತೆ ಧಾರಾವಾಹಿಗಳ ರೂಪಗಳೂ ಬದಲಾದವು, ಅವಕ್ಕೆ ತಕ್ಕಂತೆ ವೀಕ್ಷಕರ ಅಭಿರುಚಿಯೂ ಬದಲಾಗುತ್ತಾ ಹೋಗಿದೆ. ಈಗ ಬರುವ ಧಾರಾವಾಹಿಗಳು ವರ್ಷಗಟ್ಟಲೆ ಮುಂದುವರೆಯುತ್ತಾ ಸಾಗುತ್ತವೆ. ಮುಂದೆ ಅದು ಹೇಗೆ ಸಾಗುತ್ತದೆ ಎಂದರೆ ನಿರ್ದೇಶಕರು ಉಪಯೋಗಿಸಬಹುದಾದ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಗಳು. ಎಲ್ಲಾ ಬರಿದಾದ ನಂತರ ಒಂದು ಹೊಸಾ ವಿಧವನ್ನು ಕಂಡುಕೊಂಡಿದ್ದಾರೆ, ಅದೆಂದರೆ ಎಲ್ಲಾ ಧಾರಾವಾಹಿಗಳನ್ನು ಮಿಸಾಳ ಮಾಡಿ ಸಂಭ್ರಮ, ಹಬ್ಬ ಮುಂತಾದ ನಾಮಕರಣಗಳೊಂದಿಗೆ ಕೆಲವು ಎಪಿಸೋಡ್‌ ಗಳನ್ನು ಪ್ರದರ್ಶಿಸುವುದಾಗಿದೆ.

    ಇದೇ ರೀತಿಯ ಬದಲಾವಣೆಗಳನ್ನು ಇಂದಿನ ಷೇರುಪೇಟೆಗಳಲ್ಲಿ ಕಾಣಬಹುದಾಗಿದೆ. ದಿನ ನಿತ್ಯ, ಪ್ರತಿವಾರ ವೈವಿಧ್ಯಮಯ ಕಾರಣಗಳಿಂದ ಏರಿಳಿತ, ರಭಸದ ಏರಿಳಿತಗಳನ್ನು ಪ್ರದರ್ಶಿಸುವಂತಾಗಿದೆ. ಷೇರುಪೇಟೆಯಲ್ಲಿ ವಹಿವಾಟಾಗಲು ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ನೋಂದಾಯಿಸಿಕೊಂಡಿರುವ ಕಂಪನಿಗಳ ಸಂಖ್ಯೆಯು 4,722. ಇದರಲ್ಲಿ 809 ಕಂಪನಿಗಳು ವಿವಿಧ ಕಾರಣಗಳಿಂದ ಅಮಾನತು ಗೊಂಡಿರುವುದರಿಂದ ವಹಿವಾಟಿನಲ್ಲಿ ಭಾಗವಹಿಸುವಂತಿಲ್ಲ. ಉಳಿದ 3,913 ಕಂಪನಿಗಳಲ್ಲಿ ಸುಮಾರು 3,000 ಕಂಪನಿಗಳು ವಹಿವಾಟಾಗುತ್ತವೆ. ಕೆಲವು ಕಂಪನಿಗಳ ವಹಿವಾಟಿನ ಗಾತ್ರ ಗಜಗಾತ್ರದ್ದಾಗಿದ್ದರೆ, ಹಲವಾರು ನೆಪಮಾತ್ರಕ್ಕೆ ವಹಿವಾಟು ದಾಖಲಿಸುತ್ತವೆ.

    ಕೆಲವು ಅಗ್ರಮಾನ್ಯ ಕಂಪನಿಗಳು ಪ್ರದರ್ಶಿಸುವ ಅಧಿಕ ಏರಿಕೆ ಮತ್ತು ಇಳಿಕೆಗಳಿಗೆ ಕಾರಣಗಳು ಕೇವಲ ನೆಪಮಾತ್ರಕ್ಕೆ.ಸೂಕ್ತ ಕಾರಣವಿಲ್ಲದೆ ಎನ್ನುವುದಕ್ಕಿಂತ ಸಾಮಾನ್ಯರ ಚಿಂತನೆಗಳಿಗೆ ವ್ಯತಿರಿಕ್ತವಾಗಿ ಚಲಿಸುತ್ತವೆ. ಅಂದರೆ ಅಂತರ್ಗತವಾಗಿ ಅಡಕವಾಗಿರುವ ಫಂಡಮೆಂಟಲ್ಸ್‌ ಗಳಿಗೂ, ಸಾಂಪ್ರದಾಯಿಕ ಅಂಶಗಳನ್ನಾಧರಿಸಿದ ಅಂಶಗಳನ್ನೂ ಮೀರಿ ಸಂಚರಿಸುವುದು ಈಗಿನ ದಿನಗಳಲ್ಲಿ ಸಹಜವಾಗಿಬಿಟ್ಟಿದೆ.

    ಈ ಸಂದರ್ಭದಲ್ಲಿ ಗಮನದಲ್ಲಿರಿಸುವ ಅಂಶವೆಂದರೆ ಲಿಸ್ಟಿಂಗ್‌ ಆಗಿರುವ 4,720 ಕಂಪನಿಗಳಲ್ಲಿ 4,280 ಕಂಪನಿಗಳ ಪ್ರವರ್ತಕರು ತಮ್ಮ ಭಾಗಿತ್ವ ( STAKE) ದ ಭಾಗವನ್ನು ಒತ್ತೆ ಇಟ್ಟಿದ್ದಾರೆ. ಒತ್ತೆ ಇಟ್ಟಿರುವ ಭಾಗವು ಹೆಚ್ಚಾದಲ್ಲಿ ಕಂಪನಿಗಳ ಮೇಲಿರುವ ಆರ್ಥಿಕ ಒತ್ತಡವನ್ನೂ ಬಿಂಬಿಸುತ್ತದೆ. ಹೂಡಿಕೆ ಮಾಡಲು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಒತ್ತೆ ಇಟ್ಟಿರುವ ಭಾಗವನ್ನೂ ಸಹ ಸರಿಯಾಗಿ ಪರಿಶೀಲಿಸಬೇಕಾಗುತ್ತದೆ.

    1,707 ಪಾಯಿಂಟುಗಳ ಕುಸಿತ

    ಸೋಮವಾರ, 12 ರಂದು ಸೆನ್ಸೆಕ್ಸ್‌ 1,707 ಪಾಯಿಂಟುಗಳ ಕುಸಿತವನ್ನು ಪ್ರದರ್ಶಿಸಿದೆ. ಅಂದು ಘಟಾನುಘಟಿ, ಅಗ್ರಮಾನ್ಯ ಕಂಪನಿಗಳಾದ ಆಕ್ಸಿಸ್‌ ಬ್ಯಾಂಕ್‌, ಲಾರ್ಸನ್‌ ಅಂಡ್‌ ಟೋಬ್ರೊ, ಟಾಟಾ ಮೋಟಾರ್ಸ್‌, ವೇದಾಂತ, ಐಸಿಐಸಿಐ ಬ್ಯಾಂಕ್‌, ಆಯಿಲ್‌ ಇಂಡಿಯಾ, ಎನ್‌ ಎಂ ಡಿ ಸಿ, ಸ್ಟೀಲ್‌ ಅಥಾರಿಟೀಸ್‌, ಕ್ಯಾಡಿಲ್ಯ, ಹೆಚ್‌ ಸಿ ಎಲ್‌ ಟೆಕ್ನಾಲಜೀಸ್ ದಂತಹ ಅನೇಕ ಕಂಪನಿಗಳು ಹೆಚ್ಚಿನ ಕುಸಿತಕ್ಕೊಳಗಾದವು. ಆದರೆ ವಾರಾಂತ್ಯದ 16 ರಂದು ಈ ಕಂಪನಿಗಳು ವಿಜೃಂಭಿಸಿದ ರೀತಿ ನೋಡಿದಲ್ಲಿ ಬದಲಾವಣೆಗಳ ವೇಗ, ಹಣಗಳಿಸುವ ಅವಕಾಶಗಳು ಹೇಗೆ ಕಲ್ಪಿತವಾಗುತ್ತವೆ ಎಂಬುದನ್ನು ತೋರಿಸುತ್ತದೆ.

    ಸೋಮವಾರ ಆಕ್ಸಿಸ್‌ ಬ್ಯಾಂಕ್‌ ರೂ.630 ರಲ್ಲಿದ್ದು ಶುಕ್ರವಾರ ರೂ.675 ಕ್ಕೆ ಜಿಗಿತ ಕಂಡು ರೂ.670 ರ ಸಮೀಪ ಕೊನೆಗೊಂಡಿದೆ.

    ಲಾರ್ಸನ್‌ ಅಂಡ್‌ ಟೋಬ್ರೊ ಷೇರಿನ ಬೆಲೆ ಸೋಮವಾರ ರೂ.1,333 ರಲ್ಲಿದ್ದು – ಶುಕ್ರವಾರ ರೂ.1,390 ರವರೆಗೂ ಜಿಗಿದು ರೂ.1,360 ರಲ್ಲಿ ಕೊನೆಗೊಂಡಿದೆ.

    ಟಾಟಾ ಮೋಟರ್ಸ್‌ ಷೇರಿನ ಬೆಲೆಯು ಸೋಮವಾರ ರೂ.286 ರಲ್ಲಿದ್ದು, ಮಂಗಳವಾರ ತನ್ನ ಕುಸಿತವನ್ನು ಮುಂದುವರೆಸಿಕೊಂಡು ರೂ.281 ನ್ನು ತಲುಪಿತು. ವಾರಾಂತ್ಯದ ದಿನ ರೂ.315 ನ್ನು ತಲುಪಿ ರೂ.310 ರ ಸಮೀಪ ಕೊನೆಗೊಂಡಿದೆ.

    ವೇದಾಂತ ಕಂಪನಿ ಷೇರಿನ ಬೆಲೆ ಸೋಮವಾರ ರೂ.210 ರ ಕನಿಷ್ಠದಲ್ಲಿದ್ದು, ಶುಕ್ರವಾರ ರೂ.235 ನ್ನು ತಲುಪಿ ರೂ.232 ರ ಸಮೀಪ ಕೊನೆಗೊಂಡಿದೆ.

    ಸಾರ್ವಜನಿಕ ವಲಯದ ಸ್ಟೀಲ್‌ ಅಥಾರಿಟೀಸ್‌ ಸೋಮವಾರ ರೂ.84 ರ ಸಮೀಪವಿದ್ದು ಶುಕ್ರವಾರ ರೂ.94 ನ್ನು ಮೀರಿದೆ. ಅಂತಿಮವಾಗಿ ರೂ.91.50 ರಲ್ಲಿ ಕೊನೆಗೊಂಡಿದೆ.

    ಅದೇ ರೀತಿ ಮತ್ತೊಂದು ಪಿ ಎಸ್‌ ಯು ಕಂಪನಿ ಎನ್‌ ಎಂ ಡಿ ಸಿ ಸಹ ಈ ವಾರ ರೂ.133 ರ ಸಮೀಪದಿಂದ ರೂ.146 ರ ಸಮೀಪದವರೆಗೂ ಏರಿಕೆ ಕಂಡಿದೆ.

    ಫಾರ್ಮ ಕಂಪನಿ ಕ್ಯಾಡಿಲ್ಲಾ ಹೆಲ್ತ್‌ ಕೇರ್‌ ಕಂಪನಿ ಷೇರಿನ ಬೆಲೆ ಸೋಮವಾರ ರೂ.530 ರವರೆಗೂ ಏರಿಕೆ ಕಂಡು, ಮಂಗಳವಾರ ರೂ.478 ರವರೆಗೂ ಕುಸಿದು ವಾರಾಂತ್ಯದಲ್ಲಿ ಮತ್ತೊಮ್ಮೆ ರೂ.530 ನ್ನು ತಲುಪಿ ರೂ.527 ರಲ್ಲಿ ಕೊನೆಗೊಂಡಿದೆ.

    ಗ್ಲೆನ್‌ ಮಾರ್ಕ್‌ ಫಾರ್ಮ ಕಂಪನಿ ಸೋಮವಾರ ರೂ.530 ನ್ನು ದಾಟಿತ್ತಾದರೂ, ಮಂಗಳವಾರ ರೂ.485 ರವರೆಗೂ ಕುಸಿಯಿತು, ಆದರೆ ಶುಕ್ರವಾರ ಈ ಷೇರು ರೂ.577 ನ್ನು ತಲುಪಿ ವಾರ್ಷಿಕ ಗರಿಷ್ಠವನ್ನು ವಿಜೃಂಭಿಸಿತು.

    ತಾಂತ್ರಿಕ ವಲಯದ ಕಂಪನಿ ಹೆಚ್‌ ಸಿ ಎಲ್‌ ಟೆಕ್ನಾಲಜೀಸ್ ಸೋಮವಾರ ರೂ.1,045 ರ ಸಮೀಪದಲ್ಲಿದ್ದು, ಮಂಗಳವಾರ ರೂ.960 ಕ್ಕೆ ಕುಸಿಯಿತಾದರೂ, ಶುಕ್ರವಾರ ರೂ.1,016 ಕ್ಕೆ ಜಿಗಿಯಿತು.

    ಹೀಗೆ ಅನೇಕ ಅಗ್ರಮಾನ್ಯ ಕಂಪನಿಗಳು ಪ್ರದರ್ಶಿಸುತ್ತಿವೆ. ಅಂದರೆ ಷೇರಿನ ದರಗಳು ಹೆಚ್ಚಿನ ಅಸ್ಥಿರತೆಯಿಂದ ಕೂಡಿದ್ದು, ಷೇರಿನ ಬೆಲೆಗಳ ಏರಿಳಿತಗಳಿಗೂ ಕಂಪನಿಗಳ ಆಂತರಿಕ ಸಾಧನೆಗೂ ಸಂಬಂಧವಿಲ್ಲದ ರೀತಿ ಪ್ರದರ್ಶಿತವಾಗುತ್ತಿದೆ. ಹೂಡಿಕೆ ಮಾಡಿದ ಹಣದ ಸುರಕ್ಷಿತತೆಯ ದೃಷ್ಠಿಯಿಂದ ದೀರ್ಘಕಾಲೀನ ಚಿಂತನೆಯಿಂದ ಹೊರಬಂದು, ಅಲ್ಪ ಮಟ್ಟದ ಲಾಭವನ್ನು ಕೈಗೆಟುಕಿಸಿಕೊಳ್ಳುವುದು ಅನಿವಾರ್ಯ.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!