18 C
Karnataka
Friday, November 22, 2024

    ನಡೆದಾಡುತ್ತಿದ್ದ ಕನ್ನಡ ನಿಘಂಟು ; ಪಾಂಡಿತ್ಯಕ್ಕೆ ಸವಾಲು ಹಾಕಿದ ಸಾಹಿತಿ

    Must read


    ನಾಡಿನ ಅತ್ಯಂತ ಹಿರಿಯ ಪತ್ರಕರ್ತರಲ್ಲಿ ಕೆ . ಸತ್ಯನಾರಾಯಣ ಅವರು ಅಗ್ರಗಣ್ಯರು. ಕನ್ನಡಪ್ರಭದಲ್ಲಿ ಅವರು ಬರೆಯುತ್ತಿದ್ದ ಅಂಕಣಗಳು ಪತ್ರಿಕಾ ಬರಹಕ್ಕೆ ಈಗಲೂ ಮಾದರಿ. ಕೆಲ ದಿನಗಳಿಂದ ತಮ್ಮ ಲೇಖನಿಗೆ ವಿಶ್ರಾಂತಿ ನೀಡಿದ್ದ ಸತ್ಯ, ಕನ್ನಡಪ್ರೆಸ್.ಕಾಮ್ ಗಾಗಿ ಬರೆದ ಈ ವಿಶೇಷ ಬರಹದಲ್ಲಿ ಮೊನ್ನೆ ನಿಧನರಾದ ಪ್ರೊ. ಜಿ . ವೆಂಕಟಸುಬ್ಬಯ್ಯ ನವರ ವೃತ್ತಿ ಬದುಕಿನ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.


    ಕೆ. ಸತ್ಯನಾರಾಯಣ (ಸತ್ಯ)

    ಸುಮಾರು 1947ರಲ್ಲಿ ಇಂಗ್ಲಿಷ್ ಮೀಡಿಯಂನ ಬೆಂಗಳೂರು ವಿಜಯಾ ಕಾಲೇಜಿನಲ್ಲಿಒಂದು ಬೆಳಿಗ್ಗೆ ಕನ್ನಡದ ಕ್ರಾಂತಿಯಾಯಿತು. ಅಷ್ಟೇನು ಎತ್ತರವಿಲ್ಲದ ಗರಿ ಗರಿ ಮಿರುಗುವ ಸೂಟು ಧರಿಸಿ ಒಬ್ಬ ಯುವಕ ನಮಸ್ಕಾರ ಎನ್ನುತ್ತಲೇ ಕನ್ನಡ ತರಗತಿಯನ್ನು ಪ್ರವೇಶಿಸಿದರು.

    ಆ ಕಾಲಕ್ಕೆ ಅದು ಪವಾಡವೇ. ಕನ್ನಡ ಪಂಡಿತರ ಪಂಚೆ ಜುಬ್ಬಕ್ಕೆ ಒಗ್ಗಿದ್ದ ವಿದ್ಯಾರ್ಥಿಗಳು ಸೂಟು ಬೂಟು ಧಾರಿಯಾದ ಕನ್ನಡ ಪಂಡಿತರನ್ನು ಕಂಡು ಬೆರಗಾದರು. ಅಲ್ಲದೆ ಇಂಗ್ಲಿಷ್ ಭಾಷೆಯನ್ನೂ ಮಾತನಾಡುವ ಈ ಪಂಡಿತರನ್ನು ಕಂಡು ಮತ್ತಷ್ಟು ಅಚ್ಚರಿಗೆ ಒಳಗಾದರು. ಅವರ ಬಾಯಲ್ಲಿ ಇಂಗ್ಲಿಷ್ ಮಾತು ಕೇಳುವುದು ಈ ವಿದ್ಯಾರ್ಥಿಗಳಿಗೆ ಒಂದು ಪವಾಡದಂತೆ ಕಂಡಿತು. ಈ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಕನ್ನಡ ವಿದ್ಯಾರ್ಥಿಗಳಿಗೆ ಒಂದೆರಡು ದಿನ ಬೇಕಾಯಿತು. ಈ ಪವಾಡ ಪುರುಷ ಪ್ರೊ. ಜಿ ವೆಂಕಟಸುಬ್ಬಯ್ಯ.

    ಆದರೆ ಅನಂತರದ ದಿನಗಳಲ್ಲಿ ಅವರಿಂದ ಇಂಗ್ಲಿಷ್ ಕನ್ನಡದ ಮೂಲಕ ಮೂಡಿಬಂದ ಭಾಷಾ ಜ್ಞಾನ ಭಂಡಾರ ಎಳೆಯ ಕನ್ನಡ ವಿದ್ಯಾರ್ಥಿಗಳಲ್ಲಿ ಹೆಮ್ಮೆ ಮೂಡಿಸಿತು.

    ಬಲ್ಲವರೆ ಬಲ್ಲರು ಆ ಸವಿಯ

    ಒಂದು ಕಡೆ ಪಿ ಬಿ ಶ್ರೀನಿವಾಸನ್ ಅವರು ತಮ್ಮ ನೆನಪಿನಿಂದಲೇ ಷೇಕ್ಸ್ ಪಿಯರ್ ನ ಪ್ರಸಿದ್ಧ ನಾಟಕವನ್ನು ಪುಸ್ತಕದ ನೆರವಿಲ್ಲದೆ ವಿವರಿಸುವುದು.ಮತ್ತೊಂದು ಕಡೆ ಪಂಡಿತೋತ್ತಮ ವೆಂಕಟಸುಬ್ಬಯ್ಯ ಅವರು ರಾಘವಾಂಕನ ಹರಿಶ್ಚಂದ್ರ ಕಾವ್ಯವನ್ನು ವಿವರಿಸುವುದನ್ನು ಆಲಿಸಿದವರೇ ಬಲ್ಲರು ಆ ಸವಿಯ.ವೆಂಕಟಸುಬ್ಬಯ್ಯ ಅವರು ನಿಘಂಟು ಸುಬ್ಬಯ್ಯ ಆಗಿದ್ದು ಅನಂತರ.

    ತೀರಾ ಇತ್ತೀಚೆಗೆ ಬೆಂಗಳೂರಿನ ವಿಜಯಾ ಕಾಲೇಜಿನ ಇಬ್ಬರು ಹಳೆಯ ವಿದ್ಯಾರ್ಥಿಗಳು ಗಾಂಧಿಬಜಾರಿನ ಗಡಿಬಿಡಿಯಲ್ಲೇ ವೆಂಕಟಸುಬ್ಬಯ್ಯ ಪ್ರಣೀತ ಹರಿಶ್ಚಂದ್ರ ಚರಿತ್ರೆಯ ಕೆಲವು ಸ್ವಾರಸ್ಯಕರ ಭಾಗಗಳನ್ನು ಚರ್ಚೆಗೆ ಗುರಿ ಮಾಡಿದಾಗ ಅಲ್ಲೊಂದು ಕನ್ನಡಿಗರ ಗುಂಪೇ ಸೇರಿತ್ತು.

    ಆ ಕಾಲದ ಇನ್ನೊಬ್ಬ ಪ್ರಕಾಂಡ ಪಂಡಿತ ಎಲ್ ಎಸ್ ಶೇಷಗಿರಿರಾವ್ ಅಂದಿನ ದಿನಗಳಲ್ಲಿ ಯುವಕರ ಅಚ್ಚು ಮೆಚ್ಚು. ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಶೇಷಗಿರಿರಾಯರ ಭಾಷಣಕ್ಕೆ ಸೇರಿದ್ದ ಯುವ ಸಮೂಹದ ವರ್ತನೆ ವೆಂಕಟಸುಬ್ಬಯ್ಯ ಅವರಿಗೆ ಹಿಡಿಸಲಿಲ್ಲ. ಅಂದು ಅವರು ಎತ್ತರದ ಧ್ವನಿಯಲ್ಲಿ ಇಂದು ಇಲ್ಲಿ ನಡೆದಿದ್ದು ಸರಸ್ವತಿ ದ್ರೋಹ . ಈ ದ್ರೋಹದ ಅವಾಂತರ ಸಾಕಿನ್ನು ನಡೆಯಿರಿ ಎಂದು ಗುಡುಗಿದರು. ಅವರ ಮುಖ ಕೆಂಪಾಗಿತ್ತು. ವಿದ್ಯಾರ್ಥಿಗಳು ಮರುಮಾತಿಲ್ಲದೆ ಸದ್ದುಗದ್ದಲವಿಲ್ಲದೆ ಪರಿಷತ್ತನ್ನು ಖಾಲಿ ಮಾಡಿ ಹೋದರು .

    ವೆಂಕಟಸುಬ್ಬಯ್ಯ ಕನ್ನಡಕ್ಕೆ ಯಾವ ರೀತಿಯಲ್ಲೂ ಅಪವಾದವನ್ನು, ಹೀಯಾಳಿಕೆಯನ್ನ ಸಹಿಸುತ್ತಿರಲಿಲ್ಲ.ಹೀಗಾಗಿಯೇ ಈಗ ಒಂದು ಶತಮಾನದ ನಂತರವೂ ವೆಂಕಟಸುಬ್ಬಯ್ಯ ಅವರನ್ನು ಈಗಲೂ ಕನ್ನಡದ ಹೆಸರಲ್ಲೇ ಸ್ಮರಿಸಿಕೊಳ್ಳುತ್ತಾರೆ.

    spot_img

    More articles

    2 COMMENTS

    1. ಪ್ರೊಫೆಸರ್ ವೆಂಕಟಸುಬ್ಬಯ್ಯನವರ ಬಗ್ಗೆ ತಿಳಿ ಸಿರುವ ಸತ್ಯನಾರಾಯಣ್ ರವರಿಗೆ ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!