19.9 C
Karnataka
Sunday, September 22, 2024

    ಮೇ 1ರಿಂದ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ಸೂಚನೆ; ಜಾಗೃತಿ ಅಭಿಯಾನಕ್ಕೆ ನೇತೃತ್ವ ವಹಿಸಲು ವಿಸಿಗಳಿಗೆ ನಿರ್ದೇಶನ

    Must read

    ಕೋವಿಡ್‌ ಎರಡನೇ ಅಲೆಯನ್ನು ಕಟ್ಟಿಹಾಕುವ ಉದ್ದೇಶದಿಂದ ರಾಜ್ಯದ ಸರಕಾರಿ ಮತ್ತು ಖಾಸಗಿ ವಲಯದ ಎಲ್ಲ 33 ವಿಶ್ವವಿದ್ಯಾಲಯಗಳಲ್ಲೂ ಕಠಿಣ ಕೋವಿಡ್‌ ನಿರ್ವಹಣಾ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ರಾಜ್ಯಪಾಲ ವಜೂಭಾಯ್‌ ವಾಲ ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಕುಲಪತಿಗಳ ಸಮಾವೇಶ ನಡೆಸಿದರು.

    ರಾಜಭವನದಲ್ಲಿ ಬುಧವಾರ ಸಂಜೆ ರಾಜ್ಯಪಾಲರು ಕರೆದಿದ್ದ ಸಮಾವೇಶದಲ್ಲಿ ವಿಶ್ವವಿದ್ಯಾಲಯಗಳು, ಅವುಗಳ ವ್ಯಾಪ್ತಿಯಲ್ಲಿರುವ ಕಾಲೇಜುಗಳು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಲ್ಲ ಕುಲಪತಿಗಳಿಗೆ ಸೂಚಿಸಲಾಯಿತು.

    ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು. ಆಯಾ ವಿಶ್ವವಿದ್ಯಾಲಯ ಹಾಗೂ ಅದರ ವ್ಯಾಪ್ತಿಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಲಸಿಕೆ ಪಡೆಯಬೇಕು. ವಿದ್ಯಾರ್ಥಿಗಳ ಮನವೊಲಿಕೆ ಸೇರಿ ಅದಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕುಲಪತಿಗಳು ಕೈಗೊಳ್ಳಬೇಕು ಎಂದು ರಾಜ್ಯಪಾಲರು ಮತ್ತು ಡಿಸಿಎಂ ಸೂಚಿಸಿದರು.

    ನಿರ್ವಹಣಾ ಸಮಿತಿ ರಚಿಸಿಕೊಳ್ಳಿ: ಗವರ್ನರ್

    ಪ್ರತಿಯೊಂದು ವಿವಿ ವ್ಯಾಪ್ತಿಯಲ್ಲಿ ಕುಲಪತಿ ನೇತೃತ್ವದಲ್ಲಿ ನಿರ್ವಹಣಾ ಸಮಿತಿ ರಚನೆ ಮಾಡಿಕೊಳ್ಳಿ. ಎರಡನೇ ಅಲೆ ತಡೆಯುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಅವರ ಮೂಲಕ ಪೋಷಕರಿಗೂ ತಿಳಿವಳಿಕೆ ನೀಡಿ. ಎಲ್ಲರಿಗೂ ಲಸಿಕೆ ಕೊಡಿಸಿ. ಶೈಕ್ಷಣಿಕ ಚಟುವಟಿಕೆಗಳ ಸಾಧನೆಯ ಜತೆಗೆ ಕೋವಿಡ್‌ ಸಾಧನೆಯೂ ಮುಖ್ಯ. ಕೋವಿಡ್‌ ತಡೆಗಟ್ಟುವಲ್ಲಿ ವಿವಿಗಳ ಪಾತ್ರ ಮಹತ್ವದ್ದು ಎಂದು ರಾಜ್ಯಪಾಲರು ಒತ್ತಿ ಹೇಳಿದರು.

    ಆಯಾ ವಿವಿ ಕಾರ್ಯವ್ಯಾಪ್ತಿಯ ಪ್ರದೇಶದಲ್ಲಿ ಕೋವಿಡ್‌ ಕುರಿತಾಗಿ ಯಾವುದೇ ಸಹಕಾರ ಬೇಕಿದ್ದರೂ ತಪ್ಪದೇ ಮಾಡಬೇಕು ಎಂದು ಕುಲಪತಿಗಳಿಗೆ ರಾಜ್ಯಪಾಲರು ನಿರ್ದೇಶನ ನೀಡಿದರು.

    ರೋಗ ಲಕ್ಷಣಗಳಿದ್ದರೆ ಪರೀಕ್ಷೆ ಮಾಡಿಸಿ

    ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಈಗ ಚಟುವಟಿಕೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳಲ್ಲಿ ಅಥವಾ ಸಿಬ್ಬಂದಿಯಲ್ಲಿ ಕೆಮ್ಮು, ಶೀತ, ಜ್ವರ ಇತ್ಯಾದಿ ರೋಗ ಲಕ್ಷಣ ಕಂಡುಬಂದ ಕೂಡಲೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಉಪೇಕ್ಷೆ ಮಾಡಬಾರದು. ಒಂದು ವೇಳೆ ಪಾಸಿಟೀವ್‌ ರಿಸಲ್ಟ್‌ ಬಂದರೆ ತಕ್ಷಣದಿಂದಲೇ ಚಿಕಿತ್ಸೆ ಪಡೆಯಬೇಕು. ಈ ನಿಟ್ಟಿನಲ್ಲಿ ಕುಲಪತಿಗಳು, ಕುಲ ಸಚಿವರು ಹಾಗೂ ಸಿಬ್ಬಂದಿ ಕೆಲಸ ಮಾಡಬೇಕು ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಸಲಹೆ ಮಾಡಿದರು.

    ಲಸಿಕೆ ಪಡೆಯುವಂತೆ ವಿದ್ಯಾರ್ಥಿಗಳನ್ನು ಪ್ರೆರೇಪಿಸಿ. ಆ ಮೂಲಕ ಅವರ ಪೋಷಕರನ್ನೂ ಮನವೊಲಿಸಿ. ಎಲ್ಲರಲ್ಲೂ ಜಾಗೃತಿ ಮೂಡಿಸಿ. ಆಯಾ ವಿವಿಗಳ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಿ. ಇಡೀ ರಾಜ್ಯದಲ್ಲಿ ಆರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇವರ ಜತೆಗೆ ಅವರವರ ಪೋಷಕರು ಲಸಿಕೆ ಪಡೆದರೆ ಅದೇ ಒಂದು ದೊಡ್ಡ ಮೈಲುಗಲ್ಲು ಆಗುತ್ತದೆ ಎಂದು ಡಿಸಿಎಂ ಕುಲಪತಿಗಳಿಗೆ ತಿಳಿಸಿದರು.

    ಆಯಾ ವಿವಿಗಳಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ಕೋವಿಡ್‌ ನಿರ್ವಹಣೆಗಾಗಿ ಬಳಸಿಕೊಳ್ಳಿ. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಅವರು ಹೇಳಿದರು.

    ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್‌, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್‌ ಸೇರಿದಂತೆ 33 ವಿವಿಗಳ ಕುಲಪತಿಗಳು ಸೇರಿದಂತೆ ಇನ್ನಿತರೆ ಉನ್ನತ ಪ್ರತಿನಿಧಿಗಳು ಇದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!