18.8 C
Karnataka
Friday, November 22, 2024

    ಮನಸ್ಸಿನಲ್ಲಿ ಮಧುವನ್ನು ತುಂಬಿಸಿಕೊಳ್ಳಬೇಕೇ ವಿನಾ ಮೆಣಸನ್ನು ತುಂಬಿಸಿಕೊಳ್ಳಬಾರದು

    Must read


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಪರಿವ ಮನಕ್ಕೆ ಪಗ್ಗಮಿಲ್ಲ, ನಡುವ ಕಂಗಳಿಗೆ ಕಟ್ಟಿಲ್ಲ -ಕವಿ ಜನ್ನನ  ‘ಅನಂತನಾಥ ಪುರಾಣ’ ಕೃತಿಯ ಚಂಡಶಾಸನನ ಕಥೆಯಲ್ಲಿ ಬರುವ  ದೇಸೀ  ಮಾತಿದು.    ‘ಮನಸ್ಸು’ ಮತ್ತು ‘ಪಂಚೇಂದ್ರಿಯ’ಗಳು ನಮ್ಮ  ಅಂಕೆಯಲ್ಲಿ  ಇರುವುದಿಲ್ಲ  ಅವುಗಳನ್ನು ಹೋದಲ್ಲೆ ಬಿಡದೆ ಸ್ಥಿಮಿತತೆಗೆ ತಂದುಕೊಳ್ಳುವುದು  ಮುಖ್ಯ ಎಂಬುದನ್ನು ಒಂದೇ ವಾಕ್ಯದ   ಎರಡು ಹೋಲಿಕೆಗಳೊಂದಿಗೆ  ಅನುಸಂಧಾನಿಸಬಹುದು.

    ವೇಗ ವೇಗಗಳಿಗಿಂತ ಮನಸ್ಸಿನ ವೇಗ ಹಿರಿದು ಎನ್ನುತ್ತಾರೆ.   ಮನಸ್ಸು ಇದ್ದಲ್ಲೆ ಸಾವಿರಾರು ಮೈಲಿಗಳನ್ನು ಕ್ರಮಿಸಿ ಮತ್ತದೇ ವೇಗದಲ್ಲಿ ಮರಳುತ್ತದೆ.  ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ  ಅಂಥ ಕಷ್ಟವನ್ನು ಸುಲಭ ಸಾಧ್ಯ ಮಾಡಿಕೊಳ್ಳುವುದು ಏಕಾಗ್ರತೆ ಮನುಷ್ಯನ ಆತ್ಮ ಬಲವನ್ನು ಹೆಚ್ಚಿಸುವುದಲ್ಲದೆ ಹಿಡಿದ ಕೆಲಸವನ್ನು ನಿರ್ವಿಘ್ನವಾಗಿ ಮಾಡಿಸುತ್ತದೆ.  

    ಹರಿಯುವ ಮನವನ್ನು ಬಂಧಿಸಲು ವಾಚ್ಯಾರ್ಥದಲ್ಲಿ ಯಾವ ಹಗ್ಗಗಳೂ ಇಲ್ಲ ಆದರೆ  ಧೃಢ ನಿರ್ಧಾರ ,  ಏಕಾಗ್ರತೆಯಿಂದ ಮನಸ್ಸನ್ನು ಹಿಡಿದಿಟ್ಟುಕೊಳ್ಳಬಹುದು. ‘‘ಮನಸ್ಸು ಹೂವಿನಂತೆ ಹಗುರ’’, ‘’ವಜ್ರದಂತೆ ಕಠೋರ’’ ಇತ್ಯಾದಿ ಮಾತುಗಳು ಸುಳಿದರೂ  ಆಯಾ  ಸಂದರ್ಭ, ಘಟಿಸಿದ ಘಟನೆಗಳು,  ಸಂತೋಷ -ಸಾಂಗತ್ಯಗಳು, ನೋವು- ಯಾತನೆಗಳು  ಮನುಷ್ಯನ ಮನಸ್ಸನ್ನು  ಒಂದೋ ಪ್ರಫುಲ್ಲವಾಗಿಸಿ ಇಲ್ಲವೇ  ಜರ್ಝರಿತರನ್ನಾಗಿ ಮಾಡಿರುತ್ತವೆ.  ಏನೇ ಆದರೂ   ಲೆಕ್ಕಿಸದೆ ಮನಸ್ಸಿನಲ್ಲಿ ಮಧುವನ್ನು ತುಂಬಿಸಿಕೊಳ್ಳಬೇಕೇ ವಿನಾ ಮೆಣಸನ್ನು ತುಂಬಿಸಿಕೊಳ್ಳಬಾರದು. ಇದಿರು ಇರುವವರಿಗೆ , ಬರುವವರಿಗೆ ಸ್ವತಃ ನಮಗೆ ಖಾರ ಖಾರ.  ಈ ಮನಸ್ಸೂ ಸಹ   ಸಾಫ್ಟ್ವೇರ್ ಇದ್ದಂತೆ ಅದೂ – ಇದೂ ಬೇಡದ್ದು  ತುಂಬಿಸಿಕೊಂಡು ಕರಪ್ಟ್ ಮಾಡಿಕೊಳ್ಳಬಾರದಷ್ಟೆ.

     “ನಡುವ ಕಂಗಳಿಗೆ ಕಟ್ಟಿಲ್ಲ” ಪಂಚೇಂದ್ರಿಯಗಳನ್ನು  ಮನಸ್ಸಿನಿಂದ ನಿಯಂತ್ರಿಸುವುದು ಬಹಳ ಕಷ್ಟ ಕೆಲಸ. “ವೈರಾಗ್ಯ ತಳೆದಿದ್ದೇವೆ ಎನೂ ಬೇಡ !”   ಎಂದರೂ  ಪಂಚೇಂದ್ರಿಯಗಳ ವೈರಾಗ್ಯ  ಯಾರೂ ತಳೆಯಲಾಗದು .  ಹಾಗೆ  ನಮ್ಮ ಕಣ್ಣುಗಳು ಇಂಥದ್ದನ್ನೇ ನೋಡಬೇಕು ಎಂಬಕಟ್ಟಳೆಯನ್ನು ನಿಯಮವನ್ನು ನಿರ್ಬಂಧವನ್ನು   ವಿಧಿಸಲು ಸಾಧ್ಯವಿಲ್ಲ. ಎಲ್ಲೋ  ಹೋಗುತ್ತಿರುತ್ತೇವೆ  ಕಸದ ತೊಟ್ಟಿಯನ್ನು ಕಂಡು ದೂರಕ್ಕೆ ದೂರ ಹೋದರೂ  ಮೂಗು ಆ ಕೆಟ್ಟ ನಾತವನ್ನು  ಮೂಸದೆ ಬಿಡುವುದಿಲ್ಲ ಇದು ವಾಸನೆ ನಾನು ಮೂಸಬಾರದು ಅನ್ನುವುದಿಲ್ಲ.   ಬೇಗ ಹೋಗಬೇಕು ಎನ್ನುತ್ತಾ   ಆಚೀಚೆ  ರಸ್ತೆಯಲ್ಲಿ ಎಡಬಲ ನೋಡದೆ  ನಡೆಯುತ್ತಿದ್ದರೆ   ನಾವು ನೋಡೆದೆ ಇದ್ದರೂ ಮೂಗು  ಹೂವಿನ ಪರಿಮಳವನ್ನು ಆಘ್ರಾಣಿಸಿ  ಪರಿಮಳ ಭರಿತವಾದ ಹೂವಿನ ರಾಶಿಯ  ಇರುವಿಕೆಯನ್ನು ತೋರಿಸಿಯೇ ತೋರಿಸುತ್ತದೆ. 

    ಹಾಗೆ ಕಣ್ಣು ನಾನು ಒಳ್ಳೆಯದನ್ನೇ ನೋಡುತ್ತೇನೆ ಎಂದು  ನಿರ್ಧಾರ ಮಾಡಿಕೊಳ್ಳಲು ಸಾಧ್ಯವಿಲ್ಲ ದೃಷ್ಟಿಗೆ ನಿಲುಕಿದ್ದನ್ನೆಲ್ಲ ನೋಡಬಹುದು.  ಎಲ್ಲವನ್ನು ನೋಡುತ್ತದೆ. ನೋಡಿದ್ದನ್ನು ನಾವು ಯಾವ ರೀತಿ   ಸ್ವೀಕಾರ ಮಾಡುತ್ತೇವೆ ಅದರಿಂದ ನಮಗಾಗುವ  ಪ್ರಯೋಜನವನ್ನು ಮತ್ತೆ ನಾವೆ  ಅವಲೋಕನ ಮಾಡಿಕೊಳ್ಳಬೇಕು .  ಕಣ್ಣನ್ನು ಜ್ಞಾನಕ್ಕೂ ಹೋಲಿಸಿ ಹೇಳುತ್ತಾರೆ  ನಾಲ್ಕಾರು  ಜನಗಳಿಗೆ ಉಪಯೋಗವಾಗುವಂಥ  ವಿದ್ಯೆಯನ್ನು , ಜ್ಞಾನವನ್ನು ಹೊಂದುವುದು ಮುಖ್ಯ.

    ಮನುಷ್ಯನಿಗೆ  ಬುದ್ಧಿ ಎಂಬ ಪರಿಪ್ರೇಕ್ಷ ಲಬ್ಧಿಯಾಗುವಂತೆ  ಮಾಡಲು ಮನಸ್ಸು ಮತ್ತು ಪಂಚೇಂದ್ರಿಯಗಳು ಅತ್ಯಂತ ಮುಖ್ಯ.   ಪ್ರತಿಭೆಯನ್ನು ಈ ಸಂದರ್ಭದಲ್ಲಿ ಬುದ್ಧಿಯನ್ನು  ಹೃದ್ಗೋಚರ ಹಾಗು ದೃಗ್ಗೋಚರ   ಎನ್ನುತ್ತಾರೆ  ಅಂದರೆ ಹೃದಯ ಹಾಗು ಕಣ್ಣಿಗೆ  ಅನ್ವಯಿಸಿ ಹೇಳುವುದಿದೆ.  ಹಾಗೆ ಗೋಚರಿಸಿದ್ದನ್ನು    ಇದು ಒಳ್ಳೆಯದು ಕೆಟ್ಟದ್ದು ಎಂದು ನಿಷ್ಕರ್ಷೆಮಾಡಬೇಕು ಎಚ್ಚರದಿಂದ  ಇರಬೇಕು  ಎಂಬುದನ್ನು  “ಪರಿವ ಮನಕ್ಕೆ ಪಗ್ಗಮಿಲ್ಲ, ನಡುವ ಕಂಗಳಿಗೆ ಕಟ್ಟಿಲ್ಲ” ಎಂಬ ವಾಕ್ಯ ಹೇಳುತ್ತದೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!