ಇದು ಅಮ್ಮನ ಮನೆಯ ತೋಟದೊಳಗಿರುವ ಬಸವಣ್ಣನ ಗುಡಿ.ಅಕ್ಕಪಕ್ಕದಲ್ಲಿ ಬಸವಣ್ಣ.ಮಧ್ಯದಲ್ಲಿ ಲಿಂಗರೂಪಿ ಶಿವ.
ಈ ಮೂರೂ ದೇವರಿಗೂ ಒಂದು ಮುದ್ದಾದ ಹಿನ್ನೆಲೆ ಇದೆ.
ನಾವು ಬಾಳಾ ಚಿಕ್ಕವರಿರುವಾಗಲೇ ಅಪ್ಪ ಅಮ್ಮನನ್ನು ಮಲಗಳಲೆಯ ಅಜ್ಜನ ಮನೆಯಿಂದ ಹಿಸ್ಸೆ ಕೊಟ್ಟು ಕಳಿಸಿದ್ರಂತೆ.ಆಗ ಅಜ್ಜನ ಮನೆಯಲ್ಲಿ ನಾಕಾರು ಜೊತೆ ಉಳುಮೆ ಮಾಡೊ ಎತ್ತುಗಳಿದ್ದವಂತೆ.ಗಾಡಿಗೂ ಬರುವ,ಉಳುಮೆಗೂ ತಿದ್ದಿದ ಜೋಡೆತ್ತುಗಳೂ ಎರಡು ಜೊತೆ ಇದ್ದವಂತೆ.
ಸಿಂಧಿ-ಮಾಟ…. ಹಾಗೇ ಉಳುಮೆಗೂ ಗಾಡಿಗೂ ತಿದ್ದಿದ ಎತ್ತುಗಳ ಜೋಡಿ.
ರುಪಾಯಿ ಬಣ್ಣದ, ನೋಡಲಿಕ್ಕೆ ಸಾಕ್ಷತ್ ಬಸವಣ್ಣನನ್ನೇ ಎರಕ ಹೊಯ್ದಷ್ಟು ಲಕ್ಷಣವಾಗಿದ್ದ ,ಬೆಳಗಿಂದ ಕತ್ತಲು ಇಳಿಯುವವರೆಗೂ ನೊಗ ಹೆಗಲ ಮೇಲಿದ್ದರೂ ಸೋಲದ,ಅವು ಸುಮ್ಮನಿದ್ದಾಗೆಲ್ಲಾ ನಾವು ಮಾಡುತ್ತಿದ್ದ ತಂಟೆಗಳನ್ನು ಸುಮ್ಮನೆ ಸಹಿಸುತ್ತಿದ್ದ ಮಮತಾಮಯಿ ಎತ್ತುಗಳು ಅವು.
ಅಮ್ಮ ಅಪ್ಪನಿಗೆ ಹಿಸ್ಸೆಯ ಜಮೀನಿನ ಜೊತೆಗೆ ಬಂದಿದ್ದು ಈ ಸಿಂಧಿ ಮಾಟ.ದುಡಿಮೆಯಲ್ಲಿ ನೀ ಮೇಲಾ ನಾ ಮೇಲಾ ಅನ್ನುವ ಪೈಪೋಟಿಯಲ್ಲಿ ಸಿಂಧಿ ಮಾಟ ಮತ್ತು ಅಪ್ಪ ಅಮ್ಮ .
ಗದ್ದೆ ಉಳಲು,ಹೊರೆ ಹೇರಲು,ಹೊಲದ ನೇರೂಪಿಗೆ ,ಮನೆ ಕಟ್ಟಲು ಬೇಕಾದ ಮರಮಟ್ಟು ಹೇರಲು ಸಿಂಧಿ ಮಾಟ ಹಗಲೂ ರಾತ್ರಿ ಹೆಗಲು ಕೊಟ್ಟವು.ಅಪ್ಪ ಅಮ್ಮನೂ ಸರೀಕರ ಜೊತೆಗೆ ಸಮಬಾಳ್ವೆ ಮಾಡೋ ಹಟದಿಂದ ಅಜ್ಜ ಕೊಟ್ಟಿದ್ದ ಸಣ್ಣ ತೋಟವನ್ನು ವಿಶಾಲವಾಗಿಸಿದರು.
ನಾವು ಚಿಕ್ಕವರಿರುವಾಗ ಆ ಜೋಡೆತ್ತುಗಳೇ ನಮಗೆ ಆಟದ ಸರಕು.ನಾನು ,ಅಣ್ಣ ಮತ್ತು ನನ್ನ ತಮ್ಮ ಧರಣಿ ಪೈಪೋಟಿ ಮೇಲೆ ಸಿಂಧಿಮಾಟನ ಕಾಲಸಂದಿಯಿಂದ ನುಸುಳುತ್ತಿದ್ದೆವು.ಜೋಡು ಕೋಡುಗಳನ್ನು ಸುಮ್ಮಸುಮ್ಮನೆ ಎಳೆಯುತ್ತಿದ್ವಿ.ರಜ ಇದ್ದಾಗ ಮೇಯಿಸಲಿಕ್ಕೆ ಕೆಳಗಡೆ ಗದ್ದೆಗೆ ಹೊಡಕೊಂಡು ಹೋಗ್ತಿದ್ದ ದನಿನ ಹುಡುಗನಿಗೆ ನಾವೂ ಜೊತೆಯಾಗ್ತಿದ್ವಿ.ಹಗಲೆಲ್ಲಾ ದುಡಿದು ಬಂದ ಜೀವ ಅವು. ಮಕ್ಕಳಾಟಕ್ಕೆ ಬೇಸರಿಸದೆ ,ಒದೆಯದೆ, ಹಾಯದೇ ಸುಮ್ಮನೆ ಕಣ್ಣುಮುಚ್ಚಿ ಧ್ಯಾನಸ್ಥ ಸ್ಥಿತಿಯಲ್ಲಿ ನಿಂತಿರುತ್ತಿದ್ದವು.ಹಗಲೆಲ್ಲಾ ಕೆಲಸ ಮಾಡುತ್ತಿದ್ದಿದ್ದು, ಸಂಜೆ ಗೊಂತಿಗೆ ಹಾಕಿದ್ದ ಬಿಳುಲ್ಲು ತಿನ್ನುವಾಗ ನಾವು ಕೊಡುತ್ತಿದ್ದ ತಂಟೆಗಳನ್ನು ಮೆಲುಕು ಹಾಕುತ್ತಲೇ ಸಹಿಸುತ್ತಿದ್ದಿದ್ದು.,ಇಷ್ಟೇ ಸದ್ಯ ನನ್ನ ನೆನಪಿನಲ್ಲಿ ಉಳಿದಿದೆ.
ಅಪ್ಪ ಹೇಳುವ ಸಿಂಧಿಯ ಮತ್ತೊಂದು ಕಥೆ ಬಾಳಾ ಸೊಗಸಾಗಿದೆ.
ಒಮ್ಮೆ ಸಿಂಧಿ ಏನೋ ತಪ್ಪು ಮಾಡಿತ್ತು ಅಂತ ಅಪ್ಪ ಸಂಜೆ ಒಂದೆರಡು ಏಟು ಕೊಟ್ಟಿದ್ರಂತೆ. ದನಕರುಗಳು ಹೊಡೆಸಿಕೊಂಡಾಗ ಕಣ್ಣೀರು ಸುರಿಸುತ್ತಾ ಮುಖದಲ್ಲಿ ನೋವನ್ನು ತೋರಿಸುತ್ತವೆ.
ಅಪ್ಪ ಹೊಡೆದ ನೋವಿಗೆ ಅಳುತ್ತಿದ್ದ ನಮ್ ಸಿಂಧಿ ರಾತ್ರಿಯಾಗುತ್ತಲೂ ಕಟ್ಟಿದ್ದ ಹಗ್ಗವನ್ನು ಕಿತ್ತುಕೊಂಡು ಎರಡು ಕಿಮೀ ದೂರದಲ್ಲಿರುವ ಅಜ್ಜನ ಮನೆಯ ಕೊಟ್ಟಿಗೆಯಲ್ಲಿ ಹೋಗಿ ನಿಂತಿತ್ತಂತೆ.
ಅಪ್ಪ ಮಾರನೆ ದಿನ ಊರೆಲ್ಲಾ ಹುಡುಕಿ ಅಜ್ಜನ ಮನೆಗೆ ಹೋದರೆ ಅಲ್ಲಿ ಹುಲ್ಲು ಕೂಡ ತಿನ್ನದೆ ಮುನಿಸಿಕೊಂಡು ಸುಮ್ಮನೆ ನಿಂತಿತ್ತಂತೆ.
ಅಪ್ಪ ಸಮಾಧಾನ ಮಾಡಿದ ಮೇಲೆ ಮನೆಗೆ ಬಂದಿದ್ದಂತೆ.
ಇಂಥಾ ಸಿಂಧಿ ಈ ಪ್ರಸಂಗ ಆದಮೇಲೆ ಮತ್ತೆಂದೂ ಆ ಸಾಹಸ ಮಾಡಲಿಲ್ಲ. ಅಪ್ಪನ ಸರಿಸಮಕ್ಕೆ ದುಡಿದು ಸಂಜೆಯಾಗುತ್ತಲೂ ಹಣ್ಣಾಗುತ್ತಿತ್ತು.
ಅವತ್ತೊಂದು ದಿನ., ಹಗಲೆಲ್ಲಾ ನಟ್ಟಿಗದ್ದೆ ಉಳುಮೆ ಮುಗಿಸಿ,ರಾತ್ರಿ ಹುಲ್ಲು ತಿಂದು ಮಲಗಿದ್ದು ಹಾಗೇ ಕಣ್ಮುಚ್ಚಿಕೊಂಡಿದೆ…
ತನ್ನ ಬದುಕಿನ ಕೊನೇ ಕ್ಷಣದವರೆಗೂ ತನ್ನ ಮನೆಗಾಗಿ,ಒಡೆಯನಿಗಾಗಿ ದುಡಿದ ಜೀವ ಸುಖವಾದ ಕೊನೆ ಕಂಡಿತ್ತು.ಮಾಟ ತನ್ನ ಗೆಳೆಯನ ಸಾವಿನ ನಂತರ ಸ್ವಲ್ಪ ದಿನ ಬದುಕಿದ್ದು ತೀರಿಹೋಯ್ತು.ಇವೆರಡೂ ಎತ್ತುಗಳು ಉಳಿಸಿಹೋದ ನೆನಪು, ಗಳಿಸಿದ ಆಸ್ತಿ ಮಾತ್ರ ಇಂದಿಗೂ ನಮ್ಮ ಮನೆಯಲ್ಲಿ ಶಾಶ್ವತವಾಗಿದೆ.
ಸಿಂಧಿಯನ್ನು ಸಮಾಧಿ ಮಾಡಿದ ಜಾಗದಲ್ಲಿ ಎತ್ತರಕ್ಕೆ ಕಟ್ಟೆ ಕಟ್ಟಿಸಿದರು ಅಪ್ಪ. ಹಬ್ಬ ಹುಣ್ಣಿಮೆಗಳಲ್ಲಿ,ಶುಭಕಾರ್ಯಕ್ಕೆ ಹೊರಡುವ ಮುನ್ನ ,ಏನಾದರೂ ಸಂಕಲ್ಪ ಮಾಡಿಕೊಳ್ಳುವಾಗ ಬಸವಣ್ಣನ ಪೂಜೆ ಮಾಡುವುದು ನಮ್ಮನೆಯಲ್ಲಿ ಅಂದಿನಿಂದಲೂ ನಡೆಯುತ್ತಿದೆ.ಹಬ್ಬದಲ್ಲಿ ಎಡೆ ಮಾಡ್ತಾರೆ ಅಮ್ಮ.
ಎರಡು ಜೋಡಿ ಬಸವಣ್ಣನ ವಿಗ್ರಹ ತಂದು ಪುಟ್ಟ ಗುಡಿ ಕಟ್ಟಿದ ಮೇಲೆ ಬಸವಣ್ಣನ ಕಟ್ಟೆ ಇನ್ನೂ ಚಂದ ಆಯ್ತು.
ನನ್ನ ಮಗ ಚಿಕ್ಕವನಿರುವಾಗ ಅಜ್ಜನ ಮನೆಗೆ ಬೇಸಿಗೆ ರಜಕ್ಕೆ ಹೋದಾಗೆಲ್ಲಾ ಬಸವಣ್ಣನ ಪೂಜೆ ಮಾಡಕೊಂಡು ಬರಲಿಕ್ಕೆ ಕಳಿಸ್ತಿದ್ರು.ಅಮ್ಮನ ನಂಬಿಕೆ ಪ್ರಕಾರ ಅವನು ಪೂಜೆ ಮಾಡಿದಾಗೆಲ್ಲಾ ಮಳೆಯಾಗ್ತಿತ್ತು.
ಅದ್ಯಾವ ಕಾರಣಕ್ಕೋ ಗೊತ್ತಿಲ್ಲ. ಮಾಟನನ್ನು ಸಮಾಧಿ ಮಾಡಲಿಲ್ಲ. ಅದರ ಸುಂದರವಾದ ಕೊಂಬುಗಳು ಬಹಳ ವರ್ಷ ಮನೆಯ ಉಣುಗೋಲಿನಲ್ಲಿದ್ವು.
ಈ ಎರಡು ಬಸವಣ್ಣಗಳ ನಡುವಿದೆಯಲ್ಲಾ ಲಿಂಗ.ಅದಕ್ಕೂ ಒಂದು ಮುಗ್ಧ ,ಮುದ್ದಾದ ಕಥೆಯಿದೆ.ಆಗ ನಾವು ಪ್ರೈಮರಿ ಶಾಲೆ ಕಲಿಯಲು ಊರಲ್ಲೇ ಇದ್ದ ಶಾಲೆಗೆ ಹೋಗ್ತಿದ್ವಿ.ಶನಿವಾರ ಭಾನುವಾರ ಬಂತೂಂದ್ರೆ ಅಮ್ಮ ಹಂಚಿದ್ದ ಕೆಲಸಗಳನ್ನು ಗುತ್ತಿಗೆ ತಗೊಂಡವ್ರ ಹಾಗೆ ಒಂದೇ ಉಸಿರಿನಲ್ಲಿ ಮುಗಿಸಿ ಅಮ್ಮ ಅಪ್ಪ ಕೆಲಸ ಮಾಡುತ್ತಿದ್ದ ತೋಟದ ನಡುರೋಡಿಗೆ ಹೋಗಿ ಅಲ್ಲಿ ಸಿಕ್ಕುವ ಸೌದೆ ,ಕಲ್ಲುಗುಂಡು, ಸೊಪ್ಪು, ಹೂವುಗಳಿಂದ ಆಟ ಆಡ್ತಿದ್ವಿ.ನಾವು ಆಡ್ತಿದ್ದ ಆ ದಾರಿಯಲ್ಲಿ ಒಂಥರಾ ಕೇಸರಿಕಪ್ಪು ಮಿಶ್ರಿತ ಬಣ್ಣದ ಕಲ್ಲುಗಳು ರಸ್ತೆಯಲ್ಲಿ ಎದ್ದಿರುತ್ತಿದ್ದವು.
ಒಂದಿನ ಹೀಗೇ ಆಡುವಾಗ ಈಗ ಬಸವಣ್ಣನ ನಡುವಿರುವ ಈ ಲಿಂಗ ನಮಗೆ ಆಟಕ್ಕೆ ದಕ್ಕಿದ್ದು.ನಾವು ಈ ಗುಂಡಗಿನ ಕಲ್ಲನ್ನು ಈಶ್ವರ ಅಂತ ಕಲ್ಪಿಸಿ ಪೂಜೆಯ ಆಟ ಆಡಿದ್ದೇ ಆಡಿದ್ದು.
ಅದಾದ ಮೇಲೆ ಅದು ಥೇಟು ಲಿಂಗದಂತೇ ಅನಿಸಿದ ಕಾರಣ ಬಸವಣ್ಣನ ಕಟ್ಟೆ ಮೇಲಿಟ್ಟು ಶಿವಸ್ವರೂಪಿಯಾಗಿ ಪೂಜೆ ನಡೆಸಲಾರಂಬಿಸಿದ್ರು ಅಪ್ಪ ಅಮ್ಮ.. ಚಿಕ್ಕಂದಿನಲ್ಲಿ ನಂಗೆ,ಅಣ್ಣಂಗೆ,ಧರಣಿಗೆ ಈ ಲಿಂಗ ಪ್ರತಿಷ್ಟಾಪನೆಯ ಪ್ರಸಂಗದಿಂದಾಗಿ ನಾವು ಬಾಳಾ ಬಾಳಾ ವಿಶೇಷ ಅನಿಸ್ತಿತ್ತು.ಅದೂ ಅಲ್ಲದೆ ಸ್ವತಃ ಶಿವನೇ ಬಂದು ನಮ್ಮ ಕೈಗೆ ತಾನಾಗಿಯೇ ಸಿಕ್ಕಿ ಆಟ ಆಡಿಸಿಕೊಂಡು ಪೂಜಿಸಿಕೊಳ್ಳ ತೊಡಗಿದ್ದರಿಂದ ನಾವು ಬಾಳಾ ಅದೃಷ್ಟವಂತರು ಅಂತಲೂ ಅನಿಸ್ತಿತ್ತು.
ಇನ್ನು ಬಸವಣ್ಣನ ಪಕ್ಕ ಹಲಸಿನ ಮರ ಇದೆಯಲ್ಲಾ.ಅದರ ಬುಡದಲ್ಲಿ ಒಂದು ಪುಟಾಣಿ ಕಟ್ಟೆ ಇದೆ.ಅದು ಅಂಜನೇಯ ಸ್ವಾಮಿ.
ಇದಕ್ಕೂ ಒಂದು ಹಿನ್ನೆಲೆ ಇದೆ. ಬಹುಶಃ ಮೂರು ದಶಕದ ಹಿಂದಿನ ಕಥೆ.ಆಗ ನಮ್ಮ ಭಾಗದಲ್ಲಿ ಮಂಗಗಳ ಕಾಟ ಇರಲಿಲ್ಲ. ಇನಫ್ಯಾಕ್ಟ್ ನಾವು ಚಿಕ್ಕಂದಿನಲ್ಲಿ ಮಂಗಗಳನ್ನು ನೋಡಿದ್ದೇ ಧರ್ಮಸ್ಥಳದಲ್ಲಿದ್ದ ಝೂನಲ್ಲಿ.
ಹೀಗಿದ್ದಾಗ ಅಕಸ್ಮಾತ್ ಒಂದಿನ ನಮ್ಮ ಮನೆಯ ಹಿಂದುಗಡೆ ಇದ್ದ ನೇರಳೆ ಮರದಲ್ಲಿ ಬಳಲಿದ್ದ ಮಂಗವೊಂದು ಬಂದಿತ್ತು. ಬರುವಾಗಲೇ ಅದಕ್ಕೇನೋ ತೊಂದರೆ. ಯಾರೋ ಹೊಡೆದೋ,ಅಥವಾ ಗಾಯದಿಂದಲೋ ನರಳುತ್ತಿದ್ದ ಅದು ಮಧ್ಯಾಹ್ನದ ಹೊತ್ತಿಗೆ ಕಾಣಲಿಲ್ಲ. ಏನಾಯ್ತು ಅಂತ ಅಪ್ಪ ಹೋಗಿ ನೋಡುವಾಗ ಮರದ ಬುಡದಲ್ಲಿ ಅದರ ಪ್ರಾಣವಿಲ್ಲದ ದೇಹ ಕಂಡಿತು.ಅವೊತ್ತು ನಮಗೆಲ್ಲಾ ತುಂಬಾ ದುಃಖ. ಎಂದೂ ಮನೆಯ ಬಳಿ ಬಾರದ ಮಂಗ ಇವತ್ತು ಬಂದು ಇಲ್ಲಿ ಪ್ರಾಣ ಬಿಟ್ಟಿದೆ ಎಂದರೆ ಏನೋ ಋಣವಿರಬೇಕು ಎನಿಸಿತ್ತು ಅಪ್ಪನಿಗೆ.
ಅದನ್ನು ನಮ್ ಬಸವಣ್ಣನ ಕಟ್ಟೆ ಬಳಿಯಲ್ಲೇ ಸಮಾಧಿ ಮಾಡಿ ಅದಕ್ಕೊಂದು ಪುಟಾಣಿ ಕಟ್ಟೆ ಕಟ್ಟಿ ಪೂಜಿಸಲಾರಂಬಿಸಿದರು.
ಪ್ರತಿ ಬಾರಿ ಬಸವಣ್ಣನ ಪೂಜೆಗೆ ಹೋದಾಗಲೂ ಮನಸ್ಸು ನೆನಪಿನ ತೆಪ್ಪದಲ್ಲಿ ತೇಲಿಹೋಗುತ್ತದೆ. ಅಮ್ಮನ ಮನೆಯಿಂದ ಇನ್ನೂರು ಹೆಜ್ಜೆ ದೂರ ಇರುವ ಈ ಬಸವಣ್ಣನ ಕಟ್ಟೆ ನಮಗೆ ಆಪದ್ಭಾಂದವ.ಅಮ್ಮ ವಾರದಲ್ಲಿ ನಾಕಾರು ವಿಶೇಷ ದಿನಗಳನ್ನು ಮಾಡಿಕೊಂಡು ಬಸವಣ್ಣನಿಗೆ ಪೂಜೆ ಮಾಡ್ತಾರೆ.ಅಮ್ಮನ ನಂಬಿಕೆ ಮತ್ತು ಭಕ್ತಿಗೆ ಬಸವಣ್ಣನೂ ಅಂಜನೇಯನೂ ಮಾರುಹೋಗಿರುವುದು ನಿಜವೇ.
ಇವತ್ತು ಬಸವಣ್ಣನಿಗೂ ಅಂಜನೇಯನಿಗೂ ಹಣ್ಣುತುಪ್ಪ ಇತ್ತು.
ಯಾವಾಗಲೂ ಮನೆಯ ಬಿಡಿ ಹೂವುಗಳಿಂದಲೇ ಅಲಂಕೃತವಾಗ್ತಿದ್ದ ನಮ್ ಬಸವಣ್ಣನಿಗೆ ಇವತ್ತು ಪೇಟೆಯ ಸುಗಂಧರಾಜದ ಹಾರ.
ಅಂಜನೇಯನಿಗೆ ಬಣ್ಣದ ಸೇವಂತಿಗೆ.ಅಲಂಕಾರ ಮುಗಿದ ಮೇಲೆ ದೇವರು ದೃಷ್ಟಿ ತಾಕುವಷ್ಟು ಚಂದ ಕಾಣ್ತಿತ್ತು.
ನಂಗೆ ಯಾವಾಗಲೂ ಅನಿಸುವುದು. ನಮಗಿದ್ದ ಸಮೃದ್ಧ ಬಾಲ್ಯ,ನಾವಾಡಿದ ಬದುಕಿಗೆ ಹತ್ತಿರವಿದ್ದ ಮಕ್ಕಳಾಟಗಳು ಇಂದಿನ ಪೀಳಿಗೆಗೆ ಎಂದೂ ಸಿಗಲಾರದು.ಹೀಗೆ ಹಳಹಳಿಸುವಾಗೆಲ್ಲಾ ಈ ಯೋಚನೆ ಸರಿಯಲ್ಲ ಅಂತಲೂ ಅನಿಸ್ತದೆ. ‘ಪ್ರತಿ ಕಾಲವೂ ಆಯಾ ಕಾಲಕ್ಕನುಸಾರ ಅತೀ ನವೀನವೂ ಅತ್ಯಂತ ಪುರಾತನವೂ ಆಗಿರುತ್ತದೆ’ಎನ್ನುವುದನ್ನು ನೆನಪಿಸಿಕೊಳ್ತಿನಿ.
ಪ್ರಕೃತಿಯಲ್ಲಿನ ಪ್ರತಿಯೊಂದರಲ್ಲೂ ದೈವತ್ವ ಕಾಣುವ ಅಪ್ಪ ಅಮ್ಮ ನಮಗೆ ಹಾಕಿಕೊಟ್ಟ ಮೇಲ್ಪಂಕ್ತಿ ನಿಜಕ್ಕೂ ಒಂದು ಚಂದದ ಹಂಬಲನೆಸ್ ಅನ್ನು ಕೊಟ್ಟಿದೆ ನಮಗೆ ಎನಿಸುತ್ತದೆ.
ಮರುಜನ್ಮದ ಥಿಯರಿ ಪ್ರಕಾರ ನಮ್ ಸಿಂಧಿಮಾಟ ಈಗ ಈ ಜನ್ಮದಲ್ಲಿ ಮಹಾಪುರುಷರಾಗೇ ಹುಟ್ಟಿರುತ್ತವೆ.ಇದಂತೂ ನಿಶ್ಚಿತ.
ಇನ್ನು ಅಂಜನೇಯ ಅಮ್ಮನ ಮನೆಯನ್ನು ಅಗೋಚರವಾಗಿ ಕಾಪಾಡ್ತಿರಬಹುದು .
ಹೀಗೆ ನಂಬುವುದರಲ್ಲಿ ಎಷ್ಟು ನಿರಾಳವಿದೆ ಎನ್ನುವುದನ್ನು ಅನುಭವಿಸಿಯೇ ತೀರಬೇಕು.
..
ಅಪ್ಪ ಮತ್ತೂ ಸಿಂಧಿ ಕತೆ ಹೇಳ್ದಾಗ ಮತ್ತಷ್ಟು ಬರೀತಿನಿ.ಈಗ ಸಾಕು.
ನಮ್ಮ ಮನೇಲೂ ಎತ್ತು ಗಳೊಂದಿಗೆ ಆಟವಾಡಿದ ನೆನಪು ನಿಮ್ಮ ಲೇಖನದಿಂದ ಜೀವ ಪಡೆಯಿತು. ಪ್ರಾಣಿ,ಪಕ್ಷಿಗಳ ಜೀವ, ಜೀವನದ ಬಗ್ಗೆ ಇಂದಿನ ಪೀಳಿಗೆಗೆ ಕಳಕಳಿ ಕಡಿಮೆ. ಅವರನ್ನು ಬ್ಲೇಮ್ ಮಾಡುವುದಲ್ಲ. ಆ ಕೊಂಡಿ ನಮಗೇ ಕಡಿತಗೊಂಡಿದೆ. ಅವರಿಗೆ ನಿದರ್ಶನಕ್ಕೂ ಏನು ಸಿಗೊಲ್ಲ. ಕಣ್ಣಿಗೆ ಕಟ್ಟುವ ಹಾಗೆ ಬರೆದಿದ್ದೀರ.