ಇಂದು ಕನ್ನಡದ ಮೊದಲ ಕವಯತ್ರಿ ಶಿವಶರಣೆ ಅಕ್ಕಮಹಾದೇವಿಯವರ ಜಯಂತಿ
ಸುಮಾ ವೀಣಾ
ವಚನ ಸಾಹಿತ್ಯಾಕಾಶದ ಉಜ್ವಲನಕ್ಷತ್ರ ಅಕ್ಕಮಹಾದೇವಿ. ಈಕೆ ತನ್ನ ವೈಚಾರಿಕತೆ ಮತ್ತು ಆತ್ಮಪ್ರತ್ಯಯದ ಮೂಲಕ ಬೆಳಕಾದವಳು. ಈಕೆ ಸಂಸಾರದಲ್ಲಿದ್ದೂ ಇಲ್ಲದ ಹಾಗೆ ಅದರ ಜಂಜಡದಲ್ಲಿ ಸಿಲುಕದೆ ತಾವರೆಯ ಎಲೆಯ ಮೇಲಿನ ನೀರಿನಂತೆ ಅಂಟಿಯೂ ಅಂಟದಂತೆ ಇದ್ದವಳು.
‘ಸಾಮಾಜಿಕ ಪ್ರಭುತ್ವ’ ಮತ್ತು ‘ರಾಜಪ್ರಭುತ್ವ’ ಎರಡನ್ನೂ ಏಕಕಾಲಕ್ಕೆ ದಿಕ್ಕರಿಸಿದವಳು. ಅರ್ಥಾತ್ ‘ಅಂಗಭಾವ’ವನ್ನು ತ್ಯಜಿಸಿ ‘ಲಿಂಗಭಾವ’ವನ್ನು ಬೆಳೆಸಿಕೊಂಡವಳು. ಅಕ್ಕನ ವಚನಗಳು ಕಾ್ವ್ಯದ ದೃಷ್ಟಿಯಿಂದಲೂ ಅಲಂಕಾರ,ದೃಷ್ಟಾಂತಗಳಿಂದ ಕೂಡಿದ್ದು ಸಂಕೀರ್ಣವಾಗಿ ಹಾಗು ಸಂಗತದಿಂದ ಕೂಡಿವೆ.
ನಮಗೆ ದೊರೆತಿರುವ ಅಕ್ಕನ ಒಂದೊಂದು ವಚನಗಳು ಒಂದೊಂದು ಒಂದೊಂದು ಅಣಿಮುತ್ತುಗಳು.ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ ಕೈದೀವಿಗೆಗಳಾಗಿವೆ. ಮುಂಗಾರಿನ ಸಂದರ್ಭದಲ್ಲಿ ಬೀಳುವ ವಾರಿಕಲ್ಲು ಅರ್ಥಾತ್ ಆಲಿಕಲ್ಲಿನ ಹಾಗೆ ಮನಸ್ಸನ್ನು ಉಲ್ಲಾಸದಿಂದ ಪುಟಿದೇಳಿಸುವ ಅಕ್ಕನ ವಚನವೊಂದನ್ನು ಆಕೆಯ ಜಯಂತಿಯಂದು ನೋಡೋಣ!
ಮುತ್ತು ನೀರಲ್ಲಾಯಿತ್ತು,ವಾರಿಕಲ್ಲು ನೀರಲ್ಲಾಯಿತ್ತು,
ಉಪ್ಪು ನೀರಲ್ಲಾಯಿತ್ತು
ಉಪ್ಪು ಕರಗಿತ್ತು ವಾರಿಕಲ್ಲು ಕರಗಿತ್ತು
ಮುತ್ತು ಕರಗಿದುದನಾರೂ ಕಂಡಿಲ್ಲ
ಈ ಸಂಸಾರಿ ಮಾನವರು ಲಿಂಗವ ಮುಟ್ಟಿ ಭವಭಾರಿಗಳಾದರು
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ
ಜಗತ್ತಿನಲ್ಲಿ ಯಾವುದು ನಿತ್ಯನಿರಂತರ ಎಂದು ಹೇಳಲು ಅಕ್ಕ ಅದ್ಭುತ ಕೊಟ್ಟಿರುವ ಉಪಮೆಗಳನ್ನು ಇಲ್ಲಿ ನೋಡಬಹುದು.
ಮುತ್ತು,ವಾರಿಕಲ್ಲು,ಉಪ್ಪು ಇವುಗಳ ಮೂಲ ನೀರು ಆದರಿವುಗಳ ಆಯುಷ್ಯ ಕ್ಷಣ, ತಿಂಗಳುಗಳು, ವರ್ಷಗಳು . ವಾರಿಕಲ್ಲು ಅಂದರೆ ಆಲಿಕಲ್ಲು ಭೂಮಿಗೆ ಬಿದ್ದೊಡನೆ ಕರಗಲಾರಂಭಿಸುತ್ತದೆ ಇನ್ನೇನು ತಿನ್ನೋಣ ! ಎನ್ನುವಷ್ಟರಲ್ಲಿ ಕೈಜಾರಿಹೋಗುತ್ತದೆ, ಹಾಗೊಂದು ವೇಳೆ ತಿಂದರೂ ಕ್ಷಣಗಳಲ್ಲಿ ಬಾಯಲ್ಲೇ ಕರಗಿ ಹೋಗುತ್ತದೆ.
ಅಂತೆಯೇ ಲಕ್ಷೋಪಲಕ್ಷ ಜನರು ಜಗತ್ತಿನಲ್ಲಿ ಹುಟ್ಟುತ್ತಾರೆ ವಾರಿಕಲ್ಲಿನಂತೆಯೆ ಬೇಗನೆ ಕರಗಿಯೇ ಹೋಗುತ್ತಾರೆ . ಸ್ವಲ್ಲ ಕಾಲವಿದ್ದು ಕರಗುವುದು ಉಪ್ಪು ಕೆಲವರು ಸಾಮಾಜಿಕ ಜೀವನದಲ್ಲಿದ್ದು ಭವದ ರಾಗ- ದ್ವೇಷಗಳಿಗೆ ಒಳಗಾಗಿ ಸುಳ್ಳು -ತಟವಟಿಕೆ ಮಾಡಿಕೊಂಡೇ ಇದ್ದುಬಿಡುತ್ತಾರೆ. ಕೆಲ ಸಮಯಾನಂತರ ಹೇಳ ಹೆಸರಿಲ್ಲದಂತೆ ಅವರೂ ಕರಗಿ ಹೋಗುತ್ತಾರೆ. ಆದರೆ ಮಹಾತ್ಮರು ನೀರಿನಲ್ಲಿಯೇ ಹುಟ್ಟುವ ಮುತ್ತು ಪರಿಪೂರ್ಣವಾಗಿ ಶಾಶ್ವತವಾಗಿ ಇರುವಂತೆ ತಮ್ಮ ಕೆಲಸಗಳ ಮೂಲಕ ಇದ್ದುಬಿಡುತ್ತಾರೆ.
ಮಹಾತ್ಮರ ಹುಟ್ಟು ಹಾಗೆಯೇ ತನ್ನ ಸುತ್ತ ಮುತ್ತಲಿನವರನ್ನು ತನ್ನ ಸಿದ್ಧಾಂತಗಳಿಂದ ಸೆಳೆದು ತಿದ್ದುವ ತೀಡುವ ಪ್ರಯತ್ನ ಮಾಡಿ ಭೌತಿಕ ಶರೀರ ಧಾಟಿದ ಮೇಲೆಯೂ ಪ್ರಾತಃಸ್ಮರಣೀಯರಾಗುತ್ತಾರೆ. ವಚನದ ಮುಂದುವರೆದ ಭಾಗದಲ್ಲಿ ಅಕ್ಕಮಹಾದೇವಿ ‘ಭವಭಾರಿಗಳು’ ಅಂದರೆ ಲೌಕಿಕ ಜೀವನಾಸಕ್ತರು ಎನ್ನುತ್ತಾರೆ. ಪ್ರಾಪಂಚಿಕ ಜೀವನದಲ್ಲಿ ಮುಳುಗಿದ್ದು ಕಡೆಗೆ ಉಪ್ಪಿನ ಹಾಗೆ ಹೆಸರಿಗಿಲ್ಲದಂತೆ ಜೀವನವನ್ನು ವ್ಯಯಿಸಿಕೊಂಡೇ ದುಃಖದಲ್ಲೇ ಕರಗಿ ಹೋಗುತ್ತಾರೆ. ಆದರೆ ನಾನು ಈ ಮನುಷ್ಯ ಜನ್ಮದಲ್ಲಿ ಇದ್ದರೂ ಕೂಡ ಚೆನ್ನಮಲ್ಲಿಕಾರ್ಜುನನ ನೆನಹಿನಲ್ಲಿ ,ಉಲುಹಿನಲ್ಲಿ ಧೃಡಮನಸ್ಕಳಾಗಿ ಅವನದೇ ಧ್ಯಾನದಲ್ಲಿ ತೊಡಗಿದ್ದೇನೆ ಅನದೇ ಹೆಸರಿನಲ್ಲಿ ಇಷ್ಟೆಲ್ಲಾ ಚರ್ಚಿಸಿದ ನಂತರ ನೀರಲ್ಲಾದ ಮುತ್ತಿನಂತೆ ಅಕ್ಕನೂ ಅಮರಳೆ ಅಲ್ವೆ!
ಮುಖ್ಯ ಚಿತ್ರ :ಅಕ್ಕಮಹಾದೇವಿಯವರ ಜನ್ಮಸ್ಥಳ ಉಡುತಡಿಯಲ್ಲಿರುವ ದೇವಾಲಯ/ ಚಿತ್ರ ಕೃಪೆ: ವಿಕಿಪಿಡಿಯಾ
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಪದ್ಮ ಪತ್ರಬಿಂದು ವಿನಂತಿ ಬದುಕಿದ ಶರಣಾಗಬೇಕು ಅಕ್ಕಮಹಾದೇವಿಗೆ 🙏🙏
🙏