18.8 C
Karnataka
Friday, November 22, 2024

    ಮೂಗಿಗಿಂತ ಮೂಗುತಿಯೇ ಭಾರವಾಗಬಾರದು

    Must read


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಕೂಸಿನ ತಲೆಯೊಳ್ ಬಿಣ್ಪೊರೆಯನ್ನಿಟ್ಟವೊಲಸುಖಕರಂ  ಕನ್ನಡದ ಮೊದಲ ಲಕ್ಷಣ ಗ್ರಂಥ ‘ಕವಿರಾಜಮಾರ್ಗ’ ಕಾವ್ಯದ   ಎರಡನೆ ಪರಿಚ್ಛೇಧದಲ್ಲಿ ಉಲ್ಲೇಖವಾಗಿರುವ  ದೇಸೀ ವಾಕ್ಯವಿದು.  ಸಮಸಂಸ್ಕೃತ  ಪದಗಳನ್ನು ಲಘುಪದಗಳ ಮುಂದೆ ತಂದು ನಿಲ್ಲಿಸಿದರೆ ಅದು ಸುಖಕರವಲ್ಲ ಎಂದು ಕೃತಿಕಾರರು  “ಕೂಸಿನ ತಲೆಯೊಳ್ ಬಿಣ್ಪೊರೆಯನ್ನಿಟ್ಟವೊಲಸುಖಕರಂ” ಎಂಬ  ಮಾತಿನ ಮೂಲಕ  ವ್ಯಾಕರಣದ ಹಿನ್ನೆಲೆಯಲ್ಲಿ ಹೇಳುತ್ತಾರೆ.

    ಅಗತ್ಯಕ್ಕಿಂತ ಹೆಚ್ಚಾದರೆ ಮೂಗಿಗಿಂತ ಮೂಗುತಿಯೇ ಭಾರ  ಅನ್ನುವ ಹಾಗಾಗುತ್ತದೆ ಎಂಬ ಅಭಿಪ್ರಾಯವೂ ಇಲ್ಲಿ ಮೂಡುತ್ತದೆ. ಬಿಣ್+ ಪೊರೆ(ಹೊರೆ)  ಅಂದರೆ  ಭಾರೀ ಹೊರೆ ಎಂದರ್ಥ. ‘ಕೂಸು’ ಎಂದರೆ ಎಳೆಯ ಮಗು  ಏನೂ  ತಿಳಿದಿರುವುದಿಲ್ಲ. ಆಟವಾಡಿಕೊಂಡೇ ಕಾಲ ಕಳೆಯುತ್ತಿರುತ್ತದೆ ಅದಕ್ಕೆ  ಯಾವುದೇ ವಸ್ತುವಿನ ಭಾರವನ್ನಾಗಲಿ, ಜವಾಬ್ದಾರಿಯನ್ನಾಗಲೀ ಹೊರಲು ಸಾಧ್ಯವಾಗುವುದಿಲ್ಲ. ಅಂಥ ಮಗುವಿನ ತಲೆಯ ಮೇಲೆ ಭಾರವನ್ನು ಅಥವಾ ಗುರುತರ ಜವಾಬ್ದಾರಿಯನ್ನು ಹೊರಿಸಲು ಸಾಧ್ಯವೇ? ಎಂಬ ಪ್ರಶ್ನೆ ಬಂದೇ ಬರುತ್ತದೆ.

    ಯಾವುದೇ  ಯಂತ್ರಕ್ಕಾಗಲಿ,  ತನ್ನ ಕ್ಷಮತೆಗಿಂತ  ಹೆಚ್ಚು ಭಾರವನ್ನು   ಹೊರಿಸಿದರೆ ಅದು ಸರಾಗವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗದೇ ಇರಬಹುದು ಇಲ್ಲವೇ ಅವಧಿಗಿಂತ ಮೊದಲೆ  ಕಾರ್ಯ ಸ್ಥಗಿತ ಮಾಡಬಹುದು. ಇದರಿಂದ ನಷ್ಟವೇ ಅಲ್ಲವೆ!   ಎಷ್ಟು ಕಾರ್ಯ ನಿರ್ವಹಿಸಲು ಸಾಮರ್ಥ್ಯವಿದೆಯೋ ಅಷ್ಟನ್ನು ಮಾತ್ರ ನೀಡುವುದು ಸೂಕ್ತ ಎಂಬುದು  ‘’ಕೂಸಿನ ತಲೆಯೊಳ್ ಬಿಣ್ಪೊರೆಯನ್ನಿಟ್ಟವೊಲಸುಖಕರಂ’’ ಎಂಬ ಮಾತಿನ  ಅರ್ಥ.

    ಕೂಸಿನ ತಲೆಯ ಮೇಲೆ ಅಧಿಕ  ಭಾರ ಹೊರಿಸುವುದು ಎಂದರೆ  ದುರ್ಬಲರ ಮೇಲೆ ದೌರ್ಜನ್ಯ ಎಸಗಿದಂತೆ, ಕಿರಿಯರ  ಮೇಲೆ ಬಲಪ್ರದರ್ಶನ  ಮಾಡಿದಂತೆ ಎಂಬ   ಅರ್ಥವೂ ಇಲ್ಲಿ ಹೊಳೆಯುತ್ತದೆ.  ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಯಕ್ಕೂ ಮೀರಿ ಕೂಸಿನ  ಮೇಲೆ ಅಧಿಕ ಕಲಿಕೆಯ ಭಾರ ಹೊರಿಸುವುದಿದೆ ಹಾಗೆ  ವಯಸ್ಸಿಗೆ ಮೀರಿದ್ದನ್ನು  ಕಲಿಕೆಗೆ ಹೇರಬಾರದು  ಎಂಬ ಸೂಕ್ಷ್ಮವನ್ನೂ ಇಲ್ಲಿ ಗಮನಿಸಬೇಕಾದದ್ದೇ.

    ಆಟಾಡಿಕೊಂಡು ಇರಬೇಕಾದ ವಯಸ್ಸಿನಲ್ಲಿ ಕಲಿಕಾ ಭಾರವನ್ನು ಹೊರಿಸಿದರೆ ಆ ಮಗು ಖಿನ್ನತೆಗೆ ಒಳಗಾಗಬಹುದು, ಸೃಜನಶೀಲತೆಯನ್ನು ಕಳೆದುಕೊಳ್ಳಬಹುದು ಇಲ್ಲವೆ ಆ ಮಗುವಿನ ಆಲೋಚನಾ ಸಾಮರ್ಥ್ಯ ಕುದುರೆಗೆ ಕಟ್ಟಿದ ಜೀನಿನಂತೆ ಸೀಮಿತವಾಗಬಹುದು  ಹಾಗಾಗಿ ಮಗುವಿಗೆ ಕಲಿಕೆಗೆ ಎಷ್ಟು ಅವಶ್ಯಕವೋ ಅಷ್ಟಷ್ಟನ್ನು ಹಿತಮಿತವಾಗಿ  ಒದಗಿಸುವುದು ಉತ್ತಮ  ಎಂಬರ್ಥ ಬರುತ್ತದೆ.   ಮಕ್ಕಳ ಮನಸ್ಸು ಮುಗ್ಧ ಅವುಗಳ ತಲೆಯ ಮೇಲೆ ಹೂಗೊಂಚಲನ್ನು ಇರಿಸಬೇಕೇ ವಿನಃ ಭಾರವಾದ ಕಲ್ಲನ್ನಲ್ಲ. ಕಲಿಯುವ ಮಕ್ಕಳ ಮನಸ್ಸು  ಮೃದುವಾಗಿರುತ್ತದೆ ಅದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಆಸೆಗಳನ್ನು, ಕನಸುಗಳನ್ನು ಒಟ್ಟಿಗೆ ಅವುಗಳ ಮೆಲೆ ಹೇರಿದರೆ  ಅದು “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ”  ಎಂಬ ನುಡಿಗಟ್ಟಿಗೂ ಸಮವಾಗುತ್ತದೆ .

    ಯಾವುದೇ ವಾಹನ,  ಎಲೆಕ್ಟ್ರಾನಿಕ್ ಉಪಕರಣ ತೆಗೆದುಕೊಂಡರೂ ಅದರ ಕಾರ್ಯಕ್ಷಮತೆ ಇಷ್ಟೆ ಎಂದು ಬರೆದಿರುತ್ತಾರೆ ಮೀರಿದರೆ ತೊಂದರೆಯೇ ಅಲ್ವೆ. ಅದಕ್ಕೆ ಕೆಲವು ವಾಹನಗಳಲ್ಲಿ ‘ನಿಗದಿತ ‘ ಎಂಬ ಪದವನ್ನೂ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ minimum/maximum Capacity  ಎಂದೂ ಬರೆದಿರುತ್ತಾರೆ. ಒಟ್ಟಾರೆಯಾಗಿ  ಯಂತ್ರವೋ, ಮಗುವೋ, ಮನುಷ್ಯನೋ ಅವನ ವ್ಯಕ್ತಿಗತ ಸಾಮರ್ಥ್ಯ  ನೋಡಿ ಕಾರ್ಯಭಾರವನ್ನು  ಒದಗಿಸುವುದು ಉತ್ತಮ ಆಗ ಅವರಿಗೆ ಜವಾಬ್ದಾರಿ ನಿರ್ವಹಣೆ ಸುಲಭಸಾಧ್ಯವಾಗುತ್ತದೆ. ಒಳ್ಳೆಯ ಫಲಿತಾಂಶ ದೊರೆಯುತ್ತದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ

    spot_img

    More articles

    1 COMMENT

    1. ಮೂಗಿಗಿಂತ ಮೂಗುತಿಯೇ ಭಾರ ಎನ್ನವುದು ವಾಸ್ತವ ಕ್ಕೆ ಹಿಡಿದ ಕನ್ನಡಿ ಆಗಿದೆ.👌

    LEAVE A REPLY

    Please enter your comment!
    Please enter your name here

    Latest article

    error: Content is protected !!