18.6 C
Karnataka
Friday, November 22, 2024

    ಹೂಡಿಕೆ ಚಾರಿಟಬಲ್‌ಗಿಂತ ಪ್ರಾಫಿಟಬಲ್‌ ಆಗಿರಲಿ.

    Must read

    ಹೂಡಿಕೆಯನ್ನು ಮಾಡುವ ಮೊದಲು ಕಂಪನಿಯ ಗುಣಮಟ್ಟ, ಕಂಪನಿಯ ಚಟುವಟಿಕೆಯ ವಲಯ, ಆ ಚಟುವಟಿಕೆಗೆ ಇರುವ ವ್ಯಾವಹಾರಿಕ ಬೆಂಬಲ, ಕಂಪನಿಯ ಆಡಳಿತ ಮಂಡಳಿಯ ಮನೋಧರ್ಮ ವಿಶೇಷವಾಗಿ ಷೇರುದಾರರ ಬಗ್ಗೆ ಅವರಿಗಿರುವ ಕಾಳಜಿ (ಇದನ್ನು ಕಂಪನಿ ಪ್ರಕಟಿಸುವ ಕಾರ್ಪೊರೇಟ್ ಫಲಗಳಾದ ಲಾಭಾಂಶ, ಬೋನಸ್ ಷೇರು ಮುಂತಾದವುಗಳಿಂದ ಮಾಪನ ಮಾಡಬಹುದು) ಮುಂತಾದವುಗಳನ್ನು ಪರಿಶೀಲಸಿ ನಿರ್ಧರಿಸಿದಲ್ಲಿ ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    ಇವೆಲ್ಲವನ್ನೂ ಮೈಗೂಡಿಸಿಕೊಂಡಿರುವ ಎಚ್ ಡಿ ಎಫ್ ಸಿ ಆರಂಭವಾದುದು 1977 ರಲ್ಲಿ. ಈ ಕಂಪನಿ 1981-82 ರಲ್ಲಿ ರೂ.100 ರ ಮುಖಬೆಲೆ ಷೇರಿಗೆ ಶೇ.5 ರಷ್ಟು ಆರಂಭಿಕ ಲಾಭಾಂಶ ನೀಡಿ ತದನಂತರ ಶೇ.7.50, ಶೇ.10 ಹೀಗೆ ವರ್ಷದಿಂದ ವರ್ಷಕ್ಕೆ ಲಾಭಾಂಶ ಹೆಚ್ಚಿಸಿಕೊಂಡು ಹೋಯಿತು. ರೂ.100 ರ ಮುಖಬೆಲೆಯ ಷೇರು ಸುಮಾರು 2000 ದ ಇಸವಿಯವರೆಗೂ ಷೇರಿನ ಬೆಲೆ ಪೇಟೆಯಲ್ಲಿ ನೂರರ ಒಳಗಿತ್ತು. ಉತ್ತಮ ಲಾಭಾಂಶದ ಕಾರಣ ಒಂದು ರೀತಿಯ ಫಿಕ್ಸೆಡ್ ಡೆಪಾಸಿಟ್ ತರಹ ನಿಯತಕಾಲಿಕವಾಗಿ ಆದಾಯ ಗಳಿಸಿಕೊಡುವ ಕಂಪನಿಯಾಗಿ ಗುರುತಿಸಲ್ಪಟ್ಟಿತು. ಈ ಷೇರು ಆಗ ಕೊಂಡವರು ಮುಂದೆ ಮುಖಬೆಲೆ ಸೀಳಿಕೆ, ‌ ಆಕರ್ಷಕ ಡಿವಿಡೆಂಡ್, ಬೋನಸ್‌ ಷೇರು ವಿತರಣೆಗಳ ಮೂಲಕ ಉತ್ತಮ ಲಾಭವನ್ನು ಪಡೆದುಕೊಂಡರು.

    ಇದೇ ರೀತಿ 80 ರ ದಶಕದಲ್ಲಿ ನಿವೃತ್ತರು, ಸೀನಿಯರ್‌ ಸಿಟಿಜನ್ಸ್‌, ನಿಯತಕಾಲಿಕ ಆದಾಯವನ್ನವಲಂಬಿತರನೇಕರು ಕಂಪನಿಗಳಾದ ಟಾಟಾ ಪವರ್‌, ಟಾಟಾ ಹೈಡ್ರೋ, ಆಂದ್ರ ವ್ಯಾಲಿಯಂತಹ ಕಂಪನಿಗಳ ಷೇರುಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈ ಕಂಪನಿಗಳ ಷೇರಿನ ಮುಖಬೆಲೆ ರೂ.100 ರಲ್ಲಿದ್ದು ಈ ಕಂಪನಿಗಳು ಪ್ರತಿವರ್ಷ ಪ್ರತಿ ಷೇರಿಗೆ ರೂ.15 ರಂತೆ ಡಿವಿಡೆಂಡ್‌ ವಿತರಿಸುತ್ತಿದ್ದರು. ಇದು ಆಗಿನ ಬ್ಯಾಂಕ್‌ ಬಡ್ಡಿದರಕ್ಕಿಂತ ಹೆಚ್ಚಿದ್ದುದಲ್ಲದೆ, ಷೇರಿನ ಬೆಲೆಗಳು ಡಿವಿಡೆಂಡ್‌ ನಂತರ ಭಾರಿ ಕುಸಿತ ಕಂಡಾಗ ಹೂಡಿಕೆಗೆ ಆಕರ್ಷಣೀಯವಾಗಿದ್ದವು. ಷೇರಿನ ಬೆಲೆಗಳು ಕಡಿಮೆ ಬೆಲೆಯಲ್ಲಿದ್ದ ಕಾರಣ ಧೀರ್ಘಕಾಲೀನ ಹೂಡಿಕೆ ಅನಿವಾರ್ಯವಾಗಿತ್ತು. ಆಗ ಭಾರತೀಯ ಪೇಟೆಗಳು ವಿದೇಶೀ ಹೂಡಿಕೆದಾರರಿಗೆ ತೆರೆದುಕೊಂಡಿರದೆ ಕೇವಲ ಸ್ಥಳೀಯ ಹೂಡಿಕೆದಾರರಿಗೆ ಮಾತ್ರ ಅವಕಾಶ ಒದಗಿಸುತ್ತಿದ್ದವು.

    ತಾಂತ್ರಿಕತೆಯ ಅಭಾವ- ದೀರ್ಘಕಾಲೀನ ಪ್ರಭಾವ

    ಆಗಿನ ಸಂದರ್ಭದಲ್ಲಿ ಎಲ್ಲವೂ ಭೌತಿಕ ಕ್ರಿಯೆಗಳ ಮೂಲಕ ನಿರ್ವಹಿಸುವ ಪದ್ಧತಿಯಾಗಿತ್ತು. ಹಾಗಾಗಿ ಭೌತಿಕ ಷೇರುಪತ್ರಗಳನ್ನು, ಟ್ರಾನ್ಸ್‌ ಫರ್‌ ಫಾರಂಗಳೊಂದಿಗೆ ವರ್ಗಾವಣೆ ಸ್ಟಾಂಪ್‌ ಗಳನ್ನು ಲಗತ್ತಿಸಿ ಕಂಪನಿಗಳಿಗೆ ಕಳುಹಿಸಿದರೆ, ಅವು ಖರೀದಿದಾರರ ಹೆಸರಿಗೆ ವರ್ಗಾವಣೆಯಾಲು ಕೆಲವು ತಿಂಗಳುಗಳೇ ಬೇಕಾಗುತ್ತಿತ್ತು. ಈ ಕಾರಣದಿಂದ ಷೇರುಪೇಟೆಯಲ್ಲಿ ದೀರ್ಘಕಾಲೀನ ಹೂಡಿಕೆ ಎಂಬುದು ಹೆಚ್ಚಾಗಿ ಅಳವಡಿಕೆಯಾಗುತ್ತಿತ್ತು. ಅದಕ್ಕೆ ತಕ್ಕಂತೆ ಪೇಟೆಯಲ್ಲಿ ಖರೀದಿಸಿದ ಷೇರು ಕೊಂಡವರ ಕೈ ಸೇರಬೇಕಾದರೆ ಕೆಲವೊಮ್ಮೆ ತಿಂಗಳುಗಳೇ ಹಿಡಿಯುತ್ತಿತ್ತು. ಷೇರು ಮಾರಾಟ ಮಾಡಿದವರಿಗೆ ಹಣ ಕೈ ಸೇರಲು ಆಯಾ ವಿನಿಮಯ ಕೇಂದ್ರಗಳ ಚುಕ್ತಾಚಕ್ರ ( Clearing cycle) ಗಳನ್ನಾಧರಿಸಿ, ಒಂದು ವಾರ, ಎರಡು ವಾರ ಅಥವಾ ತಿಂಗಳು ಹೀಗೆ ಅಧಿಕ ಸಮಯ ಹಿಡಿಯುತ್ತಿತ್ತು. ಈಗಿನಂತೆ ತಾಂತ್ರಿಕತೆಯಾಧಾರಿತ ಸರಳೀಕೃತ ಪದ್ಧತಿ ಇರಲಿಲ್ಲ. ಹಾಗಾಗಿ ದೀರ್ಘಕಾಲೀನ ಹೂಡಿಕೆ ಎಂಬುದು ರಕ್ತಗತವಾದ ಪದ್ಧತಿಯಾಗಿತ್ತು.

    ಮತ್ತೊಂದು ಪ್ರಮುಖ ಅಂಶವೆಂದರೆ ಕಂಪನಿಗಳು ಈಗಿನಂತೆ ಪ್ರತಿಯೊಂದು ತ್ರೈಮಾಸಿಕದ ಫಲಿತಾಂಶಗಳನ್ನು ಸ್ಟಾಕ್‌ ಎಕ್ಸ್‌ ಚೇಂಜ್‌ ಗಳಿಗೆ ನೀಡುವ ನಿಯಮವಿಲ್ಲದೆ, ಕೇವಲ ವರ್ಷಕೊಮ್ಮೆ ವಾರ್ಷಿಕವಾಗಿ ಅಂಕಿ ಅಂಶಗಳನ್ನು, ಬ್ಯಾಲನ್ಸ್‌ ಶೀಟ್‌ ಮತ್ತು ಲಾಭ- ನಷ್ಟದ ಲೆಕ್ಕವನ್ನು ನೀಡುತ್ತಿದ್ದ ಕಾರಣ ಷೇರಿನ ಏರಿಳಿತಗಳು ವಾರ್ಷಿಕ ಸಾಮಾನ್ಯ ಸಭೆಯ ಸಮಯದಲ್ಲಿ, ಡಿವಿಡೆಂಡ್‌, ಬೋನಸ್‌ ಷೇರು, ಹಕ್ಕಿನ ಷೇರು ಮುಂತಾದ ಕಾರ್ಪೊರೇಟ್‌ ಫಲಗಳ ಕಾರಣ ಬರುತ್ತಿದ್ದ ನಿಗಧಿತ ದಿನದ ಸಮಯದಲ್ಲಿ ಹೆಚ್ಚಾಗುತ್ತಿದ್ದವು. ಸಂಪರ್ಕಸಾಧನಗಳ ಕೊರತೆಯ ಕಾರಣ ಕಂಪನಿಗಳ ಸುದ್ಧಿ-ಸಮಾಚಾರಗಳು ಎಲ್ಲರಿಗೂ ಲಭ್ಯವಾಗುತ್ತಿರಲಿಲ್ಲ. ಕೇವಲ ಕೆಲವೇ ವಹಿವಾಟುದಾರರಿಗೆ ಇದು ಸುವರ್ಣಾವಕಾಶ ಕಲ್ಪಿಸಿಕೊಡುತ್ತಿತ್ತು. ಆದರೆ ಆಗಿನ ಸೀಮಿತ ಚಟುವಟಿಕೆಯ ಯುಗದಲ್ಲಿ ಬರುತ್ತಿದ್ದ ಐ ಪಿ ಒ ಗಳು ಆಕರ್ಷಕ ಬೆಲೆಗಳಲ್ಲಿ ವಿತರಣೆಯಾಗುತ್ತಿದ್ದ ಕಾರಣ ಅಲಾಟ್ಮೆಂಟ್‌ ಪಡೆದವರಿಗೆ ಹೆಚ್ಚಿನ ಲಾಭದಾಯಕವಾಗಿರುತ್ತಿತ್ತು. ಆಗಿನ ಕಂಟ್ರೋಲರ್‌ ಆಫ್‌ ಕ್ಯಾಪಿಟಲ್‌ ಇಶ್ಯೂಸ್‌ (C C I ) ಕಂಪನಿಗಳ ಐ ಪಿ ಒ ಗಳ ವಿತರಣೆ ಬೆಲೆಗಳನ್ನು ನಿಯಂತ್ರಿಸುತ್ತಿತ್ತು. ಎಲ್ಲಾ ವಿತರಣೆಗಳು ಫಿಕ್ಸಡ್‌ ಪ್ರೈಸ್‌ ನಲ್ಲಿರುತ್ತಿದ್ದವು.

    ಹೂಡಿಕೆ ಲಾಭಕಾಲೀನವಾದರೆ ಯಶಸ್ಸು

    ಆದರೆ ಈಗ ಎಲ್ಲವೂ ಬದಲಾಗಿದೆ. ಸ್ಟಾಕ್‌ ಎಕ್ಸ್‌ ಚೇಂಜ್‌ ನ ಎಲ್ಲಾ ಚಟುವಟಿಕೆಗಳೂ ಟೆಕ್ನಾಲಜಿ ಅಳವಡಿಕೆಯ ಕಾರಣ ಸರಳವಾಗಿ, ಸುಸೂತ್ರವಾಗಿ ನಡೆಯುವಂತಾಗಿದೆ. ಹಿಂದೆ ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದ ಪೇ ಔಟ್‌ ಅಂದರೆ ವಿಲೇವಾರಿ ಹಣವು ಕೇವಲ ವಹಿವಾಟಿನ ನಂತರದ ಎರಡನೇ ದಿನವೇ ಲಭಿಸುವಷ್ಟು ವೇಗವಾಗಿ ಸಿಗುತ್ತಿದೆ.

    ಖರೀದಿಸಿದ ಷೇರುಗಳೂ ಸಹ ಅದೇ ಸಮಯಕ್ಕೆ ಡಿ ಮ್ಯಾಟ್‌ ಖಾತೆಗೆ ಜಮೆಯಾಗುತ್ತಿದೆ. ಭೌತಿಕ ಷೇರು ಸರ್ಟಿಫಿಕೇಟ್‌ ಗಳ ಬದಲಾಗಿ ಎಲ್ಲವೂ ಅಭೌತಿಕ ಅಂದರೆ ಡಿಮ್ಯಾಟ್‌ ರೂಪದಲ್ಲಾಗಿರುವುದರಿಂದ ಷೇರು ವರ್ಗಾವಣೆಯ ಫಜೀತಿಯೇ ಇಲ್ಲ. ಆದ್ದರಿಂದ ಚಟುವಟಿಕೆಯ ಗಾತ್ರವೂ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಭಾರತೀಯ ಪೇಟೆಗಳೂ ಜಾಗತಿಕ ವಿತ್ತೀಯ ಸಂಸ್ಥೆಗಳಿಗೂ ತೆರೆದ ಕಾರಣ ಎಲ್ಲಾ ದಿಕ್ಕಿನಿಂದಲೂ ಹಣವು ಹರಿದು ಬರುತ್ತಿರುವುದರಿಂದ ಹೆಚ್ಚು ಹೆಚ್ಚು ಕೈಗಾರಿಕೆಗಳು, ಉದ್ಯಮಗಳು ಸ್ಟಾಕ್‌ ಎಕ್ಸ್‌ ಚೇಂಜ್‌ ವಹಿವಾಟಿಗೆ ಲೀಸ್ಟಿಂಗ್‌ ಮಾಡಿಕೊಂಡಿವೆ.

    ಸ್ಟಾಕ್‌ ಎಕ್ಸ್‌ ಚೇಂಜ್‌ – ವಹಿವಾಟಿನ ವೇದಿಕೆ

    ದೇಶದಲ್ಲಿದ್ದ ಪ್ರಾದೇಶಿಕ ಸ್ಟಾಕ್‌ ಎಕ್ಸ್‌ ಚೇಂಜ್‌ ಗಳು ಹೂಡಿಕೆದಾರರ ಹಿತದ ದೃಷ್ಠಿಯಿಂದ ಜಾರಿಗೊಳಿಸಿದ ಬಿಗಿ ನಿಯಮಗಳ ಕಾರಣ ತಮ್ಮ ಅಸ್ಥಿತ್ವವನ್ನು ತ್ಯಜಿಸಿಕೊಂಡವು. ಹಾಗಾಗಿ ಈಗ ಸಧ್ಯ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ಮತ್ತು ನ್ಯಾಶನಲ್‌ ಸ್ಟಾಕ್‌ ಎಕ್ಸ್‌ ಚೇಂಜ್‌ ಗಳು ಪ್ರಮುಖವಾಗಿ ಷೇರುಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹಾಗಾಗಿ ಈ ಎರಡು ಸ್ಟಾಕ್‌ ಎಕ್ಸ್‌ ಚೇಂಜ್‌ ಗಳು ತಮ್ಮ ಸಾರ್ವಭೌಮತ್ವವನ್ನು ಸ್ಪರ್ಧಾತ್ಮಕವಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ಸುಮಾರು 4,700 ಕಂಪನಿಗಳು ವಹಿವಾಟಿಗೆ ನೋಂದಾಯಿಸಿಕೊಂಡಿದ್ದರೆ, ನ್ಯಾಷನಲ್‌ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಾಗುವ ವಹಿವಾಟಿನ ಗಾತ್ರ ಹೆಚ್ಚಾಗಿದೆ. ಒಂದರಲ್ಲಿ ವೇದಿಕೆಯ ತಳಹದಿ ವಿಸ್ತಾರವಾಗಿದ್ದರೆ, ಮತ್ತೊಂದರಲ್ಲಿ ವಹಿವಾಟಿನ ಗಾತ್ರ ಅತಿ ಎತ್ತರವಾಗಿದೆ.

    ದೀರ್ಘಕಾಲೀನ-ಅಲ್ಪಕಾಲೀನ ಯಾವುದು ಸೂಕ್ತ:

    ಹೂಡಿಕೆದಾರರು ಇತ್ತೀಚಿನ ದಿನಗಳಲ್ಲಿ ವೈವಿಧ್ಯಮಯ ವಿಶ್ಲೇಷಣೆಗಳ ಕಾರಣ ಹೂಡಿಕೆಯನ್ನು ಲಾಭ ಗಳಿಸಲು ಬಳಸಿಕೊಳ್ಳುವ ಬದಲು ಖರೀದಿಸಿದ ಷೇರಿನ ವ್ಯಾಮೋಹಕ್ಕೊಳಗಾಗುವ ಸಂದರ್ಭವೇ ಹೆಚ್ಚಾಗುತ್ತಿದೆ. ಇದು ಹೂಡಿಕೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಹೂಡಿಕೆ ಮಾಡಿದವರಿಗೆ ಡಿವಿಡೆಂಡ್‌, ಬೋನಸ್‌ ಷೇರು, ಹಕ್ಕಿನ ಷೇರು ಮುಂತಾದವುಗಳ ಮೂಲಕ ಫಲ ನೀಡುವುದು ಕಾರ್ಪೊರೇಟ್‌ ಗಳ ನೀತಿಯಾಗಿದೆ. ಪರ್ಯಾಯವಾಗಿ ಪೇಟೆಯಲ್ಲಿ ವಹಿವಾಟಾಗುತ್ತಿರುವ ಷೇರುಗಳ ಬೆಲೆ ಏರಿಕೆ ಕಂಡಾಗ ಅವುಗಳನ್ನು ಮಾರಾಟಮಾಡಿ ಲಾಭವನ್ನಾದರೂ ಪಡೆದುಕೊಳ್ಳಬಹುದಾಗಿದೆ.

    ಈಗಿನ ಪರಿಸ್ಥಿತಿ ಹೇಗಿದೆ ಎಂದರೆ ಹೂಡಿಕೆದಾರರು ಷೇರಿನ ಬೆಲೆ ಅತಿ ಹೆಚ್ಚಾದಾಗ ಮಾರಾಟಮಾಡದೆ ಇದು ಉತ್ತಮ ಕಂಪನಿಯಾಗಿದ್ದು, ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ನಾನು ಮಾರಾಟ ಮಾಡುವುದಿಲ್ಲ. ಹೂಡಿಕೆಯಾಗಿ ಮುಂದುವರೆಸುತ್ತೇನೆ ಎಂಬ ಚಿಂತನೆಯಲ್ಲಿರುತ್ತಾರೆ. ಆ ಕಂಪನಿಯು ಉತ್ತಮ ಕಾರ್ಪೊರೇಟ್‌ ಫಲ, ವಿಶೇಷವಾಗಿ ಆಕರ್ಷಕ ಡಿವಿಡೆಂಡ್‌ ವಿತರಿಸುವುದಾದರೆ ಈ ನಿರ್ಧಾರವು ಸೂಕ್ತವಾದುದಾಗಿರುತ್ತದೆ.

    ಆದರೆ ಈಗಿನ ದಿನಗಳಲ್ಲಿ ಷೇರುಪೇಟೆಯ ಹೂಡಿಕೆಯು ಒಂದು ರೀತಿಯ ಚಾರಿಟಬಲ್‌ ಚಟುವಟಿಕೆಯಾಗುತ್ತಿರುವಂತಿದೆ. ಇದಕ್ಕೆ ಕೆಳಗಿನವು ನಿದರ್ಶನಗಳಾಗಿವೆ.

    ರೂ.2,000 ದ ಸಮೀಪವಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಪ್ರತಿ ಷೇರಿಗೆ ರೂ.7 ರಂತೆ ಡಿವಿಡೆಂಡ್‌ ಪ್ರಕಟಿಸಿದೆ. ಕಂಪನಿಯು ಉತ್ತಮವಾದರೂ ಹೂಡಿಕೆಗೆ ಬರುವ ಲಾಭವಾದರೂ ಎಂತಹದು. ಈ ಷೇರಿನ ಬೆಲೆ ಏರಿಕೆ ಕಂಡಾಗ ಮಾರಾಟಮಾಡಲೂ ಸಹ ಒಲವು ತೋರದೆ ಹೂಡಿಕೆ ಮುಂದುವರೆಸುತ್ತಾರೆ. ಈ ಕಂಪನಿ ಪ್ರಕಟಿಸಿದ ನಾಲ್ಕನೆ ತ್ರೈಮಾಸಿಕ ಫಲಿತಾಂಶವು ತುಂಬಾ ಆಕರ್ಷಕವಾಗಿದೆ ಎಂದು ಹೆಚ್ಚಿನವರು ವಿಶ್ಲೇಷಿಸುತ್ತಾರೆ. ಆದರೆ ವರ್ಷದಿಂದ ವರ್ಷದ ಫಲಿತಾಂಶ ಮಾತ್ರ ಯಾರು ವಿಶ್ಲೇಷಿಸುತ್ತಿಲ್ಲ ಕಾರಣ ಇದು ಅಷ್ಠು ಸಮರ್ಪಕವಾಗಿಲ್ಲ.

    ಲೌರಸ್‌ ಲ್ಯಾಬ್‌ ಷೇರಿನ ಬೆಲೆ ರೂ.460 ರ ಸಮೀಪವಿದೆ. ಈ ಕಂಪನಿ ಉತ್ತಮ ಫಲಿತಾಂಶ ಪ್ರಕಡಿಸಿದರೂ ಘೋಷಿಸಿದ ಡಿವಿಡೆಂಡ್‌ ಮಾತ್ರ ಪ್ರತಿ ಷೇರಿಗೆ 80 ಪೈಸೆ ಮಾತ್ರ.

    ಆಕ್ಸಿಜೆನ್‌ ಬೇಡಿಕೆ ಹೆಚ್ಚಾಗಿರುವ ಕಾರಣ ಈ ಹಿಂದೆ ಬಿ ಒ ಸಿ ಲಿಮಿಟೆಡ್‌ ಎಂದಿದ್ದು ಈಗ ಲಿಂಡೇ ಇಂಡಿಯಾ ಎಂದಾಗಿರುವ ಕಂಪನಿ ರೂ.1830 ರಲ್ಲಿದ್ದು ಪ್ರತಿ ಷೇರಿಗೆ ರೂ.3 ರಂತೆ ಡಿವಿಡೆಂಡ್‌ ನೀಡಲಿದೆ.

    ಬಜಾಜ್‌ ಫೈನಾನ್ಸ್‌ ಕಂಪನಿ ಷೇರಿನ ಬೆಲೆ ರೂ.5,450 ರಲ್ಲಿದ್ದು ಪ್ರತಿ ಷೇರಿಗೆ ರೂ.10 ರಂತೆ ಡಿವಿಡೆಂಡ್‌ ಪ್ರಕಟಿಸಿದೆ. ಈ ಷೇರಿನ ಬೆಲೆ ರೂ.4,361 ರಿಂದ ರೂ.5,525 ರ ಏರಿಳಿತವನ್ನು ಕೇವಲ ಒಂದೇ ತಿಂಗಳಲ್ಲಿ ಪ್ರದರ್ಶಿಸಿದೆ.

    ಲಸಿಕೆ ಉತ್ಪಾದನಾ ಕಂಪನಿ ಅಸ್ಟ್ರಾಜನೆಕ ಫಾರ್ಮ ಕಂಪನಿ ಷೇರಿನ ಬೆಲೆ ರೂ.ಆ3,900 ರ ಸಮೀಪದಲ್ಲಿದೆ. ಈ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.3,005 ರಿಂದ ರೂ.4,500 ರ ಸಮೀಪಕ್ಕೆ ಜಿಗಿದು ನಂತರ ರೂ.3,900 ರ ಸಮೀಪದಲ್ಲಿದೆ. ಇಂತಹ ವಾತಾವರಣದಲ್ಲಿ ಹೂಡಿಕೆಯಾಗಿ ಉಳಿಸಿಕೊಂಡಲ್ಲಿ ಈ ಕಂಪನಿ ವಿತರಿಸುವ ಡಿವಿಡೆಂಡ್‌ ಮಾತ್ರ ರೂ.2 ಮಾತ್ರ.

    ಕಂಪನಿಗಳು ವಿತರಿಸುವ ಡಿವಿಡೆಂಡ್‌ ಗಿಂತ ಪೇಟೆಯಲ್ಲಿನ ಏರಿಳಿತಗಳನ್ನು ಲಾಭದಾಯಕ ಚಟುವಟಿಕೆಯಾಗಿ ಬಳಸಿಕೊಂಡಲ್ಲಿ ಹೂಡಿಕೆಯು ಯಶಸ್ವಿಯಾಗುತ್ತದೆ. ಇದೇ ರೀತಿಯ ವಹಿವಾಟಿನಿಂದ ಎಫ್‌ ಐ ಐ, ಡಿ ಐ ಐ ಗಳು, ಕೋಟಿಗಟ್ಟಲೆ ಸಂಪಾದನೆ ಮಾಡಿಕೊಳ್ಳುತ್ತಿವೆ. ಷೇರಿನ ಬಗ್ಗೆ ವ್ಯಾಮೋಹ ತ್ಯಜಿಸಿದಲ್ಲಿ ಮಾತ್ರ ಹೂಡಿಕೆಯು ನ್ಯಾಯಸಮ್ಮತಗೊಳಿಸಿದಂತಾಗುತ್ತದೆ.

    ಆಕ್ಸಿಸ್‌ ಬ್ಯಾಂಕ್‌, ಬಯೋಕಾನ್‌, ಸಿಂಜೀನ್‌ ಇಂಟರ್‌ ನ್ಯಾಶನಲ್‌, ಚೆನ್ನೈ ಪೆಟ್ರೊ ದಂತಹ ಅನೇಕ ಕಂಪನಿಗಳು ಉತ್ತಮ ಸಾಧನೆ ಪ್ರದರ್ಶಿಸಿದರೂ ಡಿವಿಡೆಂಡ್‌ ಪ್ರಕಟಿಸಲು ಅಸಮರ್ಥವಾಗಿವೆ. ಇದು ಹೂಡಿಕೆದಾರರ ಹಿತದಿಂದ ಸಮರ್ಥನೀಯವಲ್ಲ.

    ಹೂಡಿಕೆ ಹೇಗಿರಬೇಕು?

    ಷೇರುಪೇಟೆಯಲ್ಲಿ ನಡೆಸುವ ಚಟುವಟಿಕೆ ಹೂಡಿಕೆಯಾಗಲಿ ಅಥವಾ ವ್ಯವಹಾರಿಕತೆಯಿಂದಾಗಲಿ ಯಶಸ್ಸು ಕಂಡು ಫಲಪ್ರದವಾಗಲು ಅನುಸರಿಸಬೇಕಾದ ರೀತಿ ಹೇಗಿರಬೇಕೆಂದರೆ ಹೂಡಿಕೆ ಮಾಡಿದ ಷೇರಿನ ಬೆಲೆಯಲ್ಲೂ ಏರಿಕೆ ಕಾಣುವುದರೊಂದಿಗೆ ಆಕರ್ಷಕ ಡಿವಿಡೆಂಡ್‌ ನೀಡುವ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

    ಆಯ್ಕೆ ಮಾಡಬೇಕಾಗಿರುವ ಕಂಪನಿ ಉತ್ತಮವಾಗಿದ್ದರೂ ಖರೀದಿಸುವ ಸಮಯದಲ್ಲಿ ಅದು ಇಳಿಕೆಯಲ್ಲಿದ್ದು ಉತ್ತಮ ಮೌಲ್ಯಾದಾರಿತವಾಗಿರಬೇಕು.

    ರಿಲಯನ್ಸ್‌ ಇಂಡಸ್ಟ್ರೀಸ್‌ ಉತ್ತಮ ಕಂಪನಿಯೂ ಹೌದು, ಷೇರುದಾರರ ಹಿತಾಸಕ್ತ ಕಂಪನಿಯೂ ಹೌದಾದರೂ, ಷೇರಿನಲ್ಲಿ ಸಂಪಾದನೆಯಾಗಬೇಕೆಂದರೆ ಷೇರಿನ ಬೆಲೆ ರೂ.1,500 ರಿಂದ ರೂ1,800 ರ ಸಮೀಪದಲ್ಲಿದ್ದಾಗ ಖರೀದಿಸಿದಲ್ಲಿ ಈಗ ಅಲ್ಪಮಟ್ಟಿನ ಆದಾಯ ಗಳಿಸಲು ಸಾಧ್ಯವಾಗುತ್ತಿತ್ತು. ಆದರೆ ಷೇರಿನ ಬೆಲೆಯೇ ಗರಿಷ್ಠದಲ್ಲಿದ್ದಾಗ ಖರೀದಿ ಮಾಡಿದಲ್ಲಿ ಆ ಹೂಡಿಕೆಯು ಚಾರಿಟಬಲ್‌ ಶೈಲಿಯಾಗುತ್ತದೆಯೇ ಹೊರತು, ಲಾಭ ಗಳಿಕೆಯ ದೃಷ್ಠಿಯಿಂದ ಸರಿಯಲ್ಲ.

    ಷೇರಿನ ಬೆಲೆ ಗರಿಷ್ಠದಲ್ಲಿದ್ದಾಗ ಮಾರಾಟಮಾಡಿ ಹೊರಬಂದು, ಮತ್ತೊಮ್ಮೆ ಕುಸಿದಾಗ ಅದನ್ನೇ ಮರುಖರೀದಿ ಮಾಡಿದಲ್ಲಿ ಹೂಡಿಕೆಯ ಹೊರೆಯನ್ನು ತಗ್ಗಿಸಿಕೊಂಡಂತಾಗಿ ಹೂಡಿಕೆ ಫಲಪ್ರದವಾಗುತ್ತದೆ. ಇದೇ ರೀತಿ ಟಾಟಾ ಸ್ಟೀಲ್‌, ಆಕ್ಸಿಸ್‌ ಬ್ಯಾಂಕ್‌, ಎಸ್‌ ಬಿ ಐ, ಮಹೀಂದ್ರ ಅಂಡ್‌ ಮಹೀಂದ್ರ, ಐ ಟಿ ಸಿ, ಲಾರ್ಸನ್‌ ಅಂಡ್‌ ಟೋಬ್ರೊ, ಮುಂತಾದ ಅಗ್ರಮಾನ್ಯ ಕಂಪನಿಗಳೂ ಭಾರಿ ಏರಿಳಿತ ಪ್ರದರ್ಶಿಸುವ ಕಾರಣ ದೀರ್ಘಕಾಲೀನ ಹೂಡಿಕೆಯ ಚಿಂತನೆಯಿಂದ ಅವಕಾಶ ವಂಚಿತರಾಗುವುದು ಸರಿಯಲ್ಲ. REAL TIME MARKET STRATEGY ನಿಯಮ ಅಳವಡಿಸಿಕೊಂಡು ಬಂಡವಾಳ ಸುರಕ್ಷತೆಯೊಂದಿಗೆ ಬೆಳೆಸುವ ಪ್ರಯತ್ನ ಒಳಿತು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    2 COMMENTS

    1. Every articles of yours is a realistic one. It always tally with my thinking.
      Recently I bought IRFC 5000 qty at 21 Rs.
      Not sure whether it is a good decision or not but tally’s with your thinking.

    2. Each and every article of yours is full of depth and meaning sir. Thanks for your wonderful contributions towards building wealth.

    LEAVE A REPLY

    Please enter your comment!
    Please enter your name here

    Latest article

    error: Content is protected !!