18.8 C
Karnataka
Friday, November 22, 2024

    ಕೋವಿಡ್‌ ಆಕ್ಸಿಜನ್‌ ಬೆಡ್‌ ಕೊರತೆ ನೀಗಿಸಲು ಪರಿಹಾರ ಸೂತ್ರ:ಗಂಭೀರವಲ್ಲದ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಶಿಫ್ಟ್‌ ಮಾಡಲು ನಿರ್ಧಾರ

    Must read

    ರಾಜ್ಯದಲ್ಲಿ ಕೋವಿಡ್‌ ಸೋಂಕಿತರಿಗೆ ಹಾಸಿಗೆ ಕೊರತೆ ನೀಗಿಸುವ ಉದ್ದೇಶದಿಂದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಭೀರವಲ್ಲದ ಸೋಂಕಿತರನ್ನು ಸ್ಟೆಪ್‌ʼಡೌನ್‌ ಆಸ್ಪತ್ರೆ ಇಲ್ಲವೇ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಶಿಫ್ಟ್‌ ಮಾಡಿ ಚಿಕಿತ್ಸೆ ನೀಡಲು ಸರಕಾರ ನಿರ್ಧರಿಸಿದೆ.

    ಬೆಂಗಳೂರಿನಲ್ಲಿ ಶುಕ್ರವಾರ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿಎನ್‌.ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ʼಕೋವಿಡ್‌ ಚಿಕಿತ್ಸೆ ಶಿಷ್ಟಾಚಾರ ಸಮಿತಿʼ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

    ತಜ್ಞರು ಕೊಟ್ಟ ವರದಿ ಪ್ರಕಾರ ಶೇ.30ರಿಂದ 40ರಷ್ಟು ಗಂಭೀರವಲ್ಲದ ಸೋಂಕಿತರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ಇವರೆಲ್ಲರನ್ನೂ ಸ್ಟೆಪ್‌ಡೌನ್‌ ಆಸ್ಪತ್ರೆಗಳಿಗೆ ಶಿಫ್ಟ್‌ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

    ಕೂಡಲೇ ಈ ಕೆಲಸ ಆಗಬೇಕು. ಇಷ್ಟು ಬೆಡ್‌ಗಳು ಖಾಲಿಯಾದರೆ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಬೆಡ್‌ಗಳು ಲಭ್ಯವಾಗುತ್ತವೆ. ಇದರಿಂದ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಸಭೆಯಲ್ಲಿ ಹೇಳಿದರು.

    ಸರಕಾರಿ ಆಸ್ಪತ್ರೆಗಳು ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳು ಕೂಡ ಕಡ್ಡಾಯವಾಗಿ ಈ ನಿರ್ಣಯವನ್ನು ಜಾರಿಗೆ ತರಬೇಕು. ನೋಡೆಲ್‌ ಅಧಿಕಾರಿಗಳ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ಕಟ್ಟುನಿಟ್ಟಾಗಿ ನಡೆಯಬೇಕು ಎಂದು ಅವರು ಸೂಚಿಸಿದರು.

    ಅನೇಕರು ಆಸ್ಪತ್ರೆಗೆ ಸೇರುವ ಅಗತ್ಯ ಇಲ್ಲದಿದ್ದರೂ ಬಂದು ಸೇರುತ್ತಿದ್ದಾರೆ. ಇದನ್ನು ಕೂಡ ತಡೆಯಬೇಕು ಹಾಗೂ ಅವರನ್ನು ಹೋಮ್‌ ಐಸೋಲೇಷನ್‌ ಮಾಡಿ ಚಿಕಿತ್ಸೆ ಕೊಡಬೇಕು. ಸರಕಾರದ ಮಾರ್ಗಸೂಚಿ ಪ್ರಕಾರ 90ಕ್ಕಿಂತ‌ ಕಡಿಮೆ ಸ್ಯಾಚುರೇಷನ್ ಇರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಹಣ ಕೊಡ್ತಾರೆ ಎಂದು ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳುವಂತಿಲ್ಲ. ಇದು ಖಾಸಗಿ ಆಸ್ಪತ್ರೆಗಳಿಗೂ ಕಡ್ಡಾಯವಾಗಿ ಅನ್ವಯವಾಗುತ್ತದೆ ಎಂದು ಡಿಸಿಎಂ ಸಭೆಯಲ್ಲಿ ಹೇಳಿದರು.

    ಸಂಬಂಧಿಕರಿಗೆ ಮಾಹಿತಿ ಕಡ್ಡಾಯ:ಸರಕಾರಿ ರೂಪಿಸಿರುವ ಕೋವಿಡ್‌ ಚಿಕಿತ್ಸಾ ವಿಧಾನದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳೂ ಪಾಲಿಸಬೇಕು. ಕೋವಿಡ್‌ ಶಿಷ್ಟಾಚಾರವನ್ನು ಯಾರೂ ಉಲ್ಲಂಘಿಸುವಂತಿಲ್ಲ. ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ದೂರುಗಳು ಬಂದಿವೆ. ಈ ಬಗ್ಗೆ ಕರಾರುವಕ್ಕಾದ ಸಮೀಕ್ಷೆ-ಪರಿವೇಕ್ಷಣೆ ನಡೆಸಿ. ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಚಿಕಿತ್ಸೆಯಲ್ಲಿ ಎಲ್ಲಾದರೂ ಲೋಪವಾಗಿದ್ದರೆ ಕಠಿಣ ಕ್ರಮ ಜರುಗಿಸಿ. ಇದೇ ವೇಳೆ ರಿಮೋಟ್‌ ಐಸಿಯು ವ್ಯವಸ್ಥೆಯನ್ನು ಕೆಲ ದಿನಗಳಲ್ಲಿಯೇ ಅನುಷ್ಟಾನಕ್ಕೆ ತರಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.

    ಚಿಕಿತ್ಸೆ ಪಡೆಯುತ್ತಿರುವ ಸೋಂಕಿರಿಗೆ ಯಾವ ಚಿಕಿತ್ಸೆ ನೀಡಲಾಗುತ್ತಿದೆ? ಅವರ ಆರೋಗ್ಯ ಹೇಗಿದೆ? ಎಂಬ ಮಾಹಿತಿಯನ್ನು ಸಂಬಂಧಿಕರಿಗೆ ನೀಡುವುದು ಕಡ್ಡಾಯ. ವೈದ್ಯರು ಈ ಬಗ್ಗೆ ಸಂಬಂಧಿಕರಿಗೆ ಸಮರ್ಪಕ ಮಾಹಿತಿ ನೀಡಲಾಗುತ್ತಿಲ್ಲ ಎಂದು ದೂರುಗಳು ಬರುತ್ತಿವೆ. ಸಾವುಗಳ ಬಗ್ಗೆಯೂ ಸಮರ್ಪಕ ಆಡಿಟ್‌ನಡೆಯಬೇಕು ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    ರಕ್ತ ಪರೀಕ್ಷೆ ಮಾಡಿ:ಹೋಮ್‌ ಐಸೋಲೇಷನ್‌ ಆಗಿರುವ ಸೋಂಕಿತರ ರಕ್ತ ಪರೀಕ್ಷೆ ನಡೆಸುವಂತೆ ಸೂಚಿಸಿದ ಡಿಸಿಎಂ ಅವರು, ಇತ್ತೀಚಿನ ಕೆಲ ದಿನಗಳಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದಲ್ಲಿ ಬಹಳ ಏರುಪೇರಾಗುತ್ತಿರುವ ವರದಿಗಳು ಬರುತ್ತಿವೆ. ಹೀಗಾಗಿ ಅವರೆಲ್ಲರ ರಕ್ತ ಪರೀಕ್ಷೆ ಮಾಡಿ, ಸಮಸ್ಯೆ ಪತ್ತೆ ಹಚ್ಚಬೇಕು. ಸೋಂಕು ಪತ್ತೆ ಹಚ್ಚುವ ಕೆಲಸ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಮುಗಿಯಬೇಕು ಎಂದು ಅಧಿಕಾರಿಗಳಿಗೆ ಡಾ.ಅಶ್ವತ್ಥನಾರಾಯಣ ಸೂಚಿಸಿದರು.

    ಸಭೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಆಕ್ತರ್‌, ಇಲಾಖೆ ಆಯುಕ್ತ ತ್ರಿಲೋಕ ಚಂದ್ರ, ಡಿಸಿಎಂ ಅವರ ಕಾರ್ಯದರ್ಶಿ ಪ್ರದೀಪ್‌, ಚಿಕ್ಸಿತೆಯ ಶಿಷ್ಟಾಚಾರ ಸಮಿತಿ ಅಧ್ಯಕ್ಷರೂ ಆದ ಆರೋಗ್ಯ ವಿವಿ ಕುಲಪತಿ ಡಾ.ಸಚ್ಚಿದಾನಂದ ಸೇರಿದಂತೆ ಇತರ ಹಿರಿಯ ವೈದರು ಸಭೆಯಲ್ಲಿ ಇದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!