ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ಪ್ರಯೋಗಶಾಲೆಗಳಲ್ಲೊಂದಾದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (INMAS), ಹೈದರಾಬಾದ್ ನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ ಕೋವಿಡ್ -19 ಚಿಕಿತ್ಸಕ ಔಷಧಿಯನ್ನು(2-deoxy-D-glucose -2_DG )ಅಭಿವೃದ್ಧಿಪಡಿಸಿದೆ.
ಇದರ ಪ್ರಾಯೋಗಿಕ ಫಲಿತಾಂಶಗಳು ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂಬುದನ್ನು ತೋರಿಸಿದೆ. ಕೋವಿಡ್-19 ರಿಂದ ಬಳಲುತ್ತಿರುವ ಜನರಿಗೆ ಈ ಔಷಧವು ಅಪಾರ ಪ್ರಯೋಜನವನ್ನು ನೀಡುತ್ತದೆ ಎಂಬ ಭರವಸೆಯನ್ನು ಉಂಟು ಮಾಡಿದೆ.
ಸಾಂಕ್ರಾಮಿಕ ರೋಗದ ವಿರುದ್ಧ ಸನ್ನದ್ಧತೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯನ್ನು ಅನುಸರಿಸಿ, ಡಿಆರ್ ಡಿಒ ಕೋವಿಡ್ ಚಿಕಿತ್ಸಕ 2-ಡಿಜಿ ಎಂದು ಕರೆಯಲಾಗುವ ಔಷಧವನ್ನು ಅಭಿವೃದ್ಧಿಪಡಿಸುವ ಉಪಕ್ರಮವನ್ನು ತೆಗೆದುಕೊಂಡಿತು. ಏಪ್ರಿಲ್ 2020 ರಲ್ಲಿ ಕಂಡ ಈ ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ, ಐಎನ್ಎಂಎಎಸ್ ಹಾಗೂ ಡಿಆರ್ ಡಿ ಒ ವಿಜ್ಞಾನಿಗಳು ಹೈದರಾಬಾದಿನ ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ಸಂಸ್ಥೆಯ ಸಹಾಯದಿಂದ ಪ್ರಯೋಗಗಳನ್ನು ನಡೆಸಿ ಸಿದ್ಧಪಡಿಸಿದ ಮ್ಯಾಲಿಕೂಲ್ SARS-CoV-2 ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರತಿಬಂಧಿಸುತ್ತದೆ ಎಂಬುದನ್ನು ಪತ್ತೆ ಹಚ್ಚಲಾಯಿತು.
ಈ ಫಲಿತಾಂಶಗಳ ಆಧಾರದ ಮೇಲೆ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) 2020 ರ ಮೇ ತಿಂಗಳಲ್ಲಿ ಕೋವಿಡ್-19 ರೋಗಿಗಳಲ್ಲಿ ಈ 2-ಡಿಜಿ ಯ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ನೀಡಿತು.
ಡಿಆರ್ ಡಿಒ, ಅದರ ಉದ್ಯಮದ ಪಾಲುದಾರ ಹೈದರಾಬಾದ್ ನ ರೆಡ್ಡಿ ಲ್ಯಾಬ್ , COVID-19 ರೋಗಿಗಳಲ್ಲಿ ಔಷಧದ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿತು. 2020 ರ ಮೇ ನಿಂದ ಅಕ್ಟೋಬರ್ ಅವಧಿಯಲ್ಲಿ ನಡೆಸಿದ ಎರಡನೇ ಹಂತದ ಪ್ರಯೋಗಗಳಲ್ಲಿ (ಡೋಸ್ ಶ್ರೇಣಿ ಸೇರಿದಂತೆ), ಕೋವಿಡ್-19 ರೋಗಿಗಳಲ್ಲಿ ಈ ಔಷಧಿ ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ ಮತ್ತು ಅವರ ಚೇತರಿಕೆಯಲ್ಲಿ ಗಮನಾರ್ಹ ಸುಧಾರಣೆಯನ್ನು ತೋರಿಸಿದೆ. ಎರಡನೇ ಹಂತವನ್ನು ಆರು ಆಸ್ಪತ್ರೆಗಳಲ್ಲಿ ನಡೆಸಲಾಯಿತು ಮತ್ತು ಎರಡು-ಬಿ ಹಂತದ (ಡೋಸ್ ಶ್ರೇಣಿ) ಚಿಕಿತ್ಸಾ ಪ್ರಯೋಗವನ್ನು ದೇಶಾದ್ಯಂತ 11 ಆಸ್ಪತ್ರೆಗಳಲ್ಲಿ ನಡೆಸಲಾಯಿತು. 110 ರೋಗಿಗಳ ಮೇಲೆ ಎರಡನೇ ಹಂತದ ಪ್ರಯೋಗವನ್ನು ನಡೆಸಲಾಯಿತು.
ಔಷಧದ ಪರಿಣಾಮ ಕಂಡುಕೊಳ್ಳುವ ಹಂತದಲ್ಲಿ , 2-ಡಿಜಿ ಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳು ವಿವಿಧ ಅಂತಿಮ ಹಂತಗಳಲ್ಲಿ ಸ್ಟ್ಯಾಂಡರ್ಡ್ ಆಫ್ ಕೇರ್ (SoC) ಗಿಂತ ವೇಗವಾಗಿ ಚೇತರಿಕೆ ತೋರಿಸಿದರು. ಎಸ್ ಒ ಸಿ ಗೆ ಹೋಲಿಸಿದಾಗ ನಿರ್ದಿಷ್ಟ ಪ್ರಮುಖ ಚಿಹ್ನೆಗಳ ನಿಯತಾಂಕಗಳ ಸಾಮಾನ್ಯೀಕರಣವನ್ನು ಸಾಧಿಸುವ ಸರಾಸರಿ ಸಮಯದ ದೃಷ್ಟಿಯಿಂದ ಗಮನಾರ್ಹವಾಗಿ ಅನುಕೂಲಕರ ಪ್ರವೃತ್ತಿ (2.5 ದಿನಗಳ ವ್ಯತ್ಯಾಸ) ಕಂಡುಬಂದಿದೆ.
ಯಶಸ್ವಿ ಫಲಿತಾಂಶಗಳ ಆಧಾರದ ಮೇಲೆ, ಡಿಸಿಜಿಐ ನವೆಂಬರ್ ನಲ್ಲಿ 3ನೇ ಹಂತದ ಚಿಕಿತ್ಸಾ ಪ್ರಯೋಗಗಳಿಗೆ ಅನುಮತಿ ನೀಡಿತು. ಡಿಸೆಂಬರ್ 2020 ರಿಂದ ಮಾರ್ಚ್ 2021 ರ ನಡುವೆ 220 ರೋಗಿಗಳ ಮೇಲೆ 3ನೇ ಹಂತದ ಚಿಕಿತ್ಸಾ ಪ್ರಯೋಗವನ್ನು ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ 27 ಕೋವಿಡ್ ಆಸ್ಪತ್ರೆಗಳಲ್ಲಿ ನಡೆಸಲಾಯಿತು. ಹಂತ -3 ಕ್ಲಿನಿಕಲ್ ಪ್ರಯೋಗದ ವಿವರವಾದ ದತ್ತಾಂಶವನ್ನು ಡಿಸಿಜಿಐಗೆ ನೀಡಲಾಯಿತು. 2-ಡಿಜಿ ಕ್ಲಿನಿಕಲ್ ಟ್ರಯಲ್ ಗೆ ಒಳಾಗದ ಹೆಚ್ಚಿನ ರೋಗಿಗಳು ಬೇಗ ಸುಧಾರಿಸಿದರು ಮತ್ತು 3ನೇ ದಿನದ ಹೊತ್ತಿಗೆ ಪೂರಕ ಆಮ್ಲಜನಕ ಅವಲಂಬನೆಯಿಂದ (42% ಮತ್ತು 31%) ಮುಕ್ತರಾದರು, ಇದು ಆಮ್ಲಜನಕ ಚಿಕಿತ್ಸೆ / ಅವಲಂಬನೆಯಿಂದ ಆರಂಭಿಕ ಪರಿಹಾರವನ್ನು ಸೂಚಿಸುತ್ತದೆ.
65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ರೋಗಿಗಳಲ್ಲಿ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ. ಮೇ 01 ರಂದು, ತೀವ್ರವಾದ ಕೋವಿಡ್-19 ರೋಗಿಗಳಿಗೆ ಮಧ್ಯಮ ಪ್ರಮಾಣದಲ್ಲಿ ಪೂರಕ ಚಿಕಿತ್ಸೆಯಾಗಿ ಈ ಔಷಧಿಯನ್ನು ಬಳಸಲು ಡಿಸಿಜಿಐ ಅನುಮತಿ ನೀಡಿತು.
ಈ ಔಷಧವು ಪುಡಿ ರೂಪದಲ್ಲಿ ಸ್ಯಾಚೆಟ್ನಲ್ಲಿ ಬರುತ್ತದೆ, ಇದನ್ನು ನೀರಿನಲ್ಲಿ ಕರಗಿಸಿ ಮೌಖಿಕವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಇದು ವೈರಸ್ ಸೋಂಕಿತ ಕೋಶಗಳಲ್ಲಿ ಸಂಗ್ರಹಗೊಂಡು ವೈರಸ್ ನ ಬೆಳವಣಿಗೆಯನ್ನು ತಡೆಯುತ್ತದೆ. ವೈರಸ್ (ವೈರಾಣು) ಸೋಂಕಿತ ಕೋಶಗಳಲ್ಲಿ ಶೇಖರಣೆಗೊಳ್ಳುವಿಕೆಯು ಈ ಔಷಧಿಯ ವಿಶೇಷತೆಯಾಗಿದೆ.
ಈಗಿರುವ ಕೋವಿಡ್ -19ರ ಅಲೆಯಲ್ಲಿ, ಹೆಚ್ಚಿನ ಸಂಖ್ಯೆಯ ರೋಗಿಗಳು ತೀವ್ರ ಆಮ್ಲಜನಕ ಅವಲಂಬನೆಯನ್ನು ಎದುರಿಸುತ್ತಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲು ಮಾಡಬೇಕಾಗುತ್ತದೆ. ಸೋಂಕಿತ ಕೋಶಗಳಲ್ಲಿ ಔಷಧದ ಕಾರ್ಯಾಚರಣೆಯ ಕಾರ್ಯವಿಧಾನದಿಂದಾಗಿ ಔಷಧವು ಅಮೂಲ್ಯವಾದ ಜೀವಗಳನ್ನು ಉಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಕೋವಿಡ್-19 ರೋಗಿಗಳು ಆಸ್ಪತ್ರೆಗೆ ದಾಖಲಾಗುವುದನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗಿದೆ.
(ವರದಿ :ಪಿಐಬಿ)