ಸುಪ್ರೀಂ ಕೋರ್ಟ್ 1,200 ಮೆ.ಟನ್ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಲು ಕೇಂದ್ರ ಸರಕಾರಕ್ಕೆ ಆದೇಶ ನೀಡಿದ ಬೆನ್ನಲ್ಲೇ ಸರಕಾರವು ಆಕ್ಸಿಜನ್ ಬೆಡ್‌ಗಳ ಪ್ರಮಾಣವನ್ನು ಇನ್ನೂ 20,000 ಹೆಚ್ಚಿಸಲು ಮುಂದಾಗಿದೆ ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.
ವಿಧಾನಸೌಧದಲ್ಲಿಂದು ಬಿಜೆಪಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಟ್ಟು 20,000 ಆಕ್ಸಿಜನ್ ಬೆಡ್‌ಗಳ ಪೈಕಿ ತಕ್ಷಣವೇ ತುರ್ತಾಗಿ 10,000 ಬೆಡ್ ವ್ಯವಸ್ಥೆ ಮಾಡಲಾಗುವುದು. ಇದರೊಂದಿಗೆ ರಾಜ್ಯದಲ್ಲಿ ಉಂಟಾಗಿರುವ ಆಕ್ಸಿಜನ್ ಬೆಡ್‌ಗಳ ಹಾಹಾಕಾರ ನೀಗಲಿದೆ” ಎಂದರು.
ಕೋವಿಡ್ ಬರುವ ಮುನ್ನ ರಾಜ್ಯದಲ್ಲಿ ದಿನಕ್ಕೆ 100 ಮೆ.ಟನ್ ಆಕ್ಸಿಜನ್ ಮಾತ್ರ ಖರ್ಚಾಗುತ್ತಿತ್ತು. ಆದರೆ, ಈಗ ನಿತ್ಯವೂ 950 ಮೆ.ಟನ್ ಬೇಕಾಗುತ್ತಿದೆ. ಸದ್ಯಕ್ಕಿರುವ ಆಕ್ಸಿಜನ್ ಬೆಡ್‌ಗಳಿಗೆ ಸಾಕಾಗುವಷ್ಟು ಆಮ್ಲಜನಕ ನಮ್ಮಲ್ಲಿದೆ. ಆದರೆ, ಸೋಂಕಿತರು ಹೆಚ್ಚುತ್ತಿರುವುದರಿಂದ ಅನಿವಾರ್ಯವಾಗಿ ಬೆಡ್‌ಗಳನ್ನೂ ಹೆಚ್ಚಿಸಬೇಕಾಗಿರುವುದರಿಂದ ಹೆಚ್ಚುವರಿ ಆಮ್ಲಜನಕವೂ ಬೇಕಿದೆ. ಆ ಕೊರತೆ ನ್ಯಾಯಾಲಯದ ಆದೇಶದಿಂದ ನೀಗಲಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು
ಕೋವಿಡ್ ಕೇರ್ ಸೆಂಟರ್‌ಗಳಲ್ಲೂ ಆಕ್ಸಿಜನ್ ಬೆಡ್ ಹಾಕಲು ನಿರ್ಧರಿಸಲಾಗಿದೆ. ಅಲ್ಲಿಗೆ ಅಗತ್ಯ ನುರಿತ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದ ಅವರು, ಸದ್ಯಕ್ಕೆ ಈಗ ರಾಜ್ಯದಲ್ಲಿ 70,000 ಬೆಡ್‌ಗಳನ್ನು ಕೋವಿಡ್‌ಗೆ ಮೀಸಲಾಗಿ ಇಡಲಾಗಿದ್ದು, ಈ ಪೈಕಿ ಸರಕಾರದಿಂದ 35,000 ಹಾಗೂ ಖಾಸಗಿ ಆಸ್ಪತ್ರೆಗಳ ವತಿಯಿಂದ 35,000 ಬೆಡ್‌ಗಳಿವೆ. ಈ ಒಟ್ಟು ಬೆಡ್‌ಗಳ ಪೈಕಿ 50,000 ಆಕ್ಸಿಜನ್ ಬೆಡ್‌ಗಳಿವೆ ಎಂದರು.
ಇದೇ ವೇಳೆ ಆಕ್ಸಿಜನ್ ಬೆಡ್‌ಗಳ ಕೊರತೆಯನ್ನು ನೀಗಿಸಲು ಕ್ರಮ ವಹಿಸಲಾಗಿದೆ. ಶೇ.30ರಿಂದ 40ರಷ್ಟು ಗಂಭೀರವಲ್ಲದ ಸೋಂಕಿತರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಆಕ್ಸಿಜನ್ ಬೆಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರನ್ನು ಕೂಡಲೇ ಸ್ಟೆಪ್‌ಡೌನ್ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲು ಸರಕಾರ ನಿರ್ಧರಿಸಿದೆ ಎಂದು ಡಿಸಿಎಂ ತಿಳಿಸಿದರು.
ರೆಮಿಡಿಸಿವಿರ್ ಸಮಸ್ಯೆ ಇಲ್ಲ:ರೆಮಿಡಿಸಿವಿರ್ ಕೊರತೆ ಈಗಿಲ್ಲ. 9ನೇ ತಾರೀಖಿನ ವರೆಗೂ 30,900 ಡೋಸ್ ಹಂಚಿಕೆಯಾಗಿತ್ತು. ಇನ್ನು 70,000 ಡೋಸ್ ಬರುವುದು ಬಾಕಿ ಇದೆ. ಇವತ್ತು-ನಾಳೆಗೆ ಕೊರತೆ ಇಲ್ಲ. ಎಲ್ಲ ಜಿಲ್ಲೆಗಳಿಗೂ ಹಂಚಿಕೆ ಮಾಡಲಾಗಿದೆ. ಹತ್ತನೇ ತಾರೀಖಿನ ನಂತರ ಒಂದು ವಾರ ಕಾಲ 2,60,000 ಡೋಸ್ ಹಂಚಿಕೆಯಾಗಿದ್ದು, ರಾಜ್ಯಕ್ಕೆ ಬರುವುದಿದೆ. ಈ ಲೆಕ್ಕದ ಪ್ರಕಾರ ಪ್ರತಿದಿನ ರಾಜ್ಯಕ್ಕೆ 37,000 ಡೋಸ್ ಲಭ್ಯವಾಗುತ್ತಿದೆ. ಹೀಗಾಗಿ ಕೊರತೆ ಪ್ರಶ್ನೆ ಇಲ್ಲ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ನಿತ್ಯವೂ ನಮಗೆ ಪೂರೈಕೆ ಮಾಡಬೇಕಾದ ರೆಮಿಡಿಸಿವಿರ್ ಕೋಟಾ ಸಕಾಲಕ್ಕೆ, ಸರಿಯಾಗಿ ಪೂರೈಕೆ ಮಾಡುವಂತೆ ಎಲ್ಲ ತಯಾರಿಕಾ ಕಂಪನಿಗಳಿಗೆ ಸರಕಾರ ಇವತ್ತೇ ನೊಟೀಸ್ ಕೂಡ ಜಾರಿ ಮಾಡುತ್ತಿದೆ ಎಂದೂ ಅವರು ಉತ್ತರಿಸಿದರು.
ಕೋವಿಡ್ ರಿಸಲ್ಟ್ ತಡವಾದರೆ ಲ್ಯಾಬ್‌ಗೆ ದಂಡ:ಇನ್ನು ಮುಂದೆ 24 ಗಂಟೆ ಒಳಗಾಗಿ ಕೋವಿಡ್ ಪರೀಕ್ಷೆ ರಿಸಲ್ಟ್ ನೀಡಲಾಗುವುದು. ಯಾವ ಲ್ಯಾಬೇ ಆಗಿರಲಿ. ಅದು ಖಾಸಗಿಯಾಗಿರಲಿ ಅಥವಾ ಸರಕಾರದ್ದೇ ಆಗಿರಲಿ ಸರಕಾರ ನಿಗದಿ ಮಾಡಿದ ಸಮಯದೊಳಗೆ ಫಲಿತಾಂಶ ನೀಡದಿದ್ದರೆ ಪ್ರತಿ ಟೆಸ್ಟಿಗೆ 100ರಿಂದ 150 ರೂಪಾಯಿ ದಂಡ ವಿಧಿಸಲಾಗುವುದು ಎಂದು ಡಿಸಿಎಂ ಎಚ್ಚರಿಕೆ ಕೊಟ್ಟರು.
ಇಷ್ಟು ದಿನ ಸೋಂಕಿತರು ತಡವಾಗಿ ಪರೀಕ್ಷೆಗೆ ಬರುತ್ತಿದ್ದರು. ತಡವಾಗಿ ಪರೀಕ್ಷೆ ಮಾಡಿಸಿಕೊಂಡು ತಡವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಪ್ರಾಣ ಹಾನಿ ಹೆಚ್ಚಾಗುತ್ತಿತ್ತು. ಮುಂದೆ ಹೀಗೆ ಆಗಬಾರದು ಎಂದು ಅವರು ತಿಳಿಸಿದರು.
ಆರ್‌ಟಿಪಿಸಿಆರ್ ಟೆಸ್ಟ್‌ಗೆ ವೇಗ ಕೊಡಲಾಗಿದೆ. ಕೋವಿಡ್ ಬಂದಾಗ ಸರಕಾರಿ ವಲಯದಲ್ಲಿ ಕೇವಲ ಒಂದೇ ಲ್ಯಾಬ್ ಇತ್ತು. ಇವತ್ತು 91 ಲ್ಯಾಬ್‌ಗಳಿವೆ. ಖಾಸಗಿ ವಲಯದಲ್ಲಿ 150 ಲ್ಯಾಬ್‌ಗಳಿವೆ. ದಿನಕ್ಕೆ ಸರಕಾರದ ವತಿಯಿಂದ 10,500 ಟೆಸ್ಟ್‌ಗಳನ್ನು ಮಾಡಬಹುದು. ಖಾಸಗಿ ಲ್ಯಾಬ್‌ಗಳಲ್ಲಿ 70,000 ಜನರಿಗೆ ಟೆಸ್ಟ್ ಆಗುತ್ತಿದೆ. ಅಂಕಿ-ಅಂಶಗಳ ಪ್ರಕಾರ 93% ಆರ್‌ಟಿಪಿಸಿಆರ್ ಟೆಸ್ಟ್ ಆಗುತ್ತಿದ್ದರೆ, 7% ಮಾತ್ರ ರಾಟ್ ಟೆಸ್ಟ್ ಆಗುತ್ತಿದೆ. ಈಗ ರಾಟ್ ಟೆಸ್ಟ್ ಅನ್ನು ಎಷ್ಟು ಬೇಕಾದರೂ ಮಾಡಲು ಐಸಿಎಂಆರ್ ಒಪ್ಪಿಗೆ ಕೊಟ್ಟಿದ್ದು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ರಾಟ್ ಕಿಟ್‌ಗಳನ್ನು ಒದಗಿಸಿ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು ಎಂದರು ಡಿಸಿಎಂ.
ಔಷಧ ಕೊರತೆ ಇಲ್ಲ:ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಔಷಧಿಗಳನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸಲಾಗುತ್ತಿದೆ. ಜತೆಗೆ, ವೈದ್ಯಕೀಯ ಬಳಕೆ ವಸ್ತುಗಳ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಇನ್ನೆರಡು ದಿನದಲ್ಲಿ ಅಷ್ಟೂ ಪಿಎಚ್‌ಸಿಗಳಿಗೆ ಮತ್ತೂ ಅಗತ್ಯವಾದಷ್ಟು ಔಷಧಿ ಮತ್ತು ಸರಂಜಾಮುಗಳನ್ನು ಒದಗಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.