ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ನಳಿಗೆಯೊಳ್ ನಾಯ ಬಾಲವನು ಕಟ್ಟಲ್ತನ್ನ ನಳುಹ ಬಿಡಂತೆ- ನಮ್ಮೆಲ್ಲರಿಗು ತಿಳಿದಿರುವಂತಹ ಮಾತು. ತಪ್ಪನ್ನು ತಿದ್ದಿಕೊಳ್ಳದೆ ಉಡಾಫೆಯಿಂದ ವರ್ತಿಸುವ ಜನರನ್ನು ನೋಡಿದಾಗಲೆಲ್ಲಾ “ಎಷ್ಟು ಹೇಳಿದರೂ ಅಷ್ಟೆ ನಾಯಿ ಬಾಲ ಡೊಂಕು” ಅಂದು ಬಿಡುತ್ತೇವೆ.
ಈ ಗಾದೆ ಮಾತನ್ನು ವ್ಯಕ್ತಿಯ ಗುಣಸ್ವಭಾವಕ್ಕೆ ಅನ್ವಯಿಸಿ ಹೇಳುವಂತಹದ್ದು. “ನಳಿಗೆಯೊಳ್ ನಾಯ ಬಾಲವನು ಕಟ್ಟಲ್ತನ್ನ ನಳುಹ ಬಿಡಂತೆ” ಎಂಬ ಮಾತು ‘ಸಮ್ಯುಕ್ತಕೌಮುದಿ’ಯಲ್ಲಿ ಉಲ್ಲೇಖವಾಗಿದೆ.ನಮಗೆ ಸ್ವಯಂಬುದ್ಧಿ ಹೇಳಿಕೊಳ್ಳುವ ಪ್ರಸಂಗಗಳು ಅನೇಕ ಬಾರಿ ಬರುತ್ತವೆ. ಅಚಾತುರ್ಯದಿಂದ ಏನೋ ಘಟಿಸಿಬಿಡುತ್ತದೆ ನಷ್ಟವೂ ಆಗುತ್ತದೆ ಆ ಸಂದರ್ಭದಲ್ಲಿ ಇನ್ನೊಮ್ಮೆ ಆಗದಂತೆ ಎಚ್ಚರವಹಿಸಬೇಕು ಎಂದು ನಮಗೆ ಬುದ್ಧಿವಾದ ಹೇಳಿಕೊಂಡಿರುತ್ತೇವೆ ಸ್ವಲ್ಪ ದಿನ ಕಳೆದನಂತರ ಮತ್ತದೆ ತಪ್ಪು ಮರುಕಳಿಸಿದಾಗ ನಾವೂ” ನಾಯಿ ಬಾಲಕ್ಕೆ ದಬ್ಬೆ ಕಟ್ಟಿದರೆ ಡೊಂಕು ಸರಿಹೋಗುತ್ತದೆಯೇ?” ಎಂದು ನಮ್ಮನ್ನೆ ಹಳಿದುಕೊಂಡಂತಾಗುತ್ತದೆ.
ಸಾಧಕರ, ಸಾಹಸಿಗಳ ಮಾತುಗಳನ್ನು ಕೇಳಿದಾಗಲೂ ನಮ್ಮ ಮನಸ್ಸು ಅವರಂತೆಯೇ ನಾವೂ ಸಾಧಿಸಬೇಕು ಅನ್ನುವ ತೀರ್ಮಾನಕ್ಕೆ ಬರುತ್ತದೆ. ಹಾಗೆ ಕೂಡ ಕೆಲಸ ಮಾಡಬೇಕು ಅಂದು ಕೊಳ್ಳುತ್ತೇವೆ.ಒಂದೆರಡು ದಿನ ಅದೇ ದಿಸೆಯಲ್ಲಿ ನಡೆಯುತ್ತೇವೆ ಕೂಡ ಆನಂತರ ಆ ಅಭ್ಯಾಸ ಕೈಬಿಟ್ಟುಹೊಗುತ್ತದೆ. ಕಾರಣ ಏಕಾಗ್ರತೆಯ ಕೊರತೆಯಿರುತ್ತದೆ. ನಿದ್ರೆ ಇತ್ಯಾದಿಗಳನ್ನು ತ್ಯಾಗ ಮಾಡಲು ನಮ್ಮ ಮನಸ್ಸು ಸಿದ್ಧವಿರುವುದಿಲ್ಲ. ಅಂದುಕೊಂಡ ಕೆಲಸ ಅರ್ಧಕ್ಕೆ ನಿಲ್ಲುತ್ತದೆ. ಅಂದು ಕೊಂಡ ಸಂಕಲ್ಪ ಈಡೇರದೆ ಹೋದಾಗಲೂ ಹೀಗೆ ಆಗುತ್ತದೆ.
ಇನ್ನು ಕೆಲವೊಮ್ಮೆ ಡಯಟ್ ಮಾಡಬೇಕು ಎಂದು ಹಿತಮಿತ ಆಹಾರ ಸೇವಿಸಬೇಕೆಂದು ತೀರ್ಮಾನ ಮಾಡಿಕೊಂಡು ಅನುಸರಿಸುತ್ತಿದ್ದರೂ ಮನೆಗೆ ಯಾರೊ ಅತಿಥಿಗಳು ಬಂದರು ಎಂದೋ ಮದುವೆ -ಮುಂಜಿ ಇತ್ಯಾದಿ ಸಮಾರಂಭಕ್ಕೆ ಹೋಗಿ ಅಲ್ಲಿ ಪಥ್ಯ ಅನುಸರಿಸಲಾಗದೆ ಡಯಟ್ ನಿಯಮವನ್ನು ಕೈಬಿಡುವುದೂ ಇದೆ. ಆಗ ಮತ್ತೆ ನಾಯಿ ಬಾಲ ಡೊಂಕು ಎಂದೇ ಹೇಳಬೇಕಾಗುತ್ತದೆ.
ನಾಯಿ ಬಾಲ ಡೊಂಕು ಎಂಬುದು ನಾಯಿಯ ಜೈವಿಕ ಗುಣವನ್ನು ಅನುಸರಿಸಿ ಹೇಳಿದರೂ ಅದನ್ನು ಮೀರಿಯೂ ಮನುಷ್ಯ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬಹುದು ತಿದ್ದಿಕೊಳ್ಳಬೇಕು ಅನ್ನುವ ಅಂತಃಸತ್ವ ಇಲ್ಲಿದೆ. ನಾಯಿ ಬಾಲಕ್ಕೆ ದಬ್ಬೆ ಕಟ್ಟುವುದು ಎಂಬ ಮಾತು ,ಮನುಷ್ಯನ ಸಂದರ್ಭದಲ್ಲಿ ನಿರ್ದಿಷ್ಟ ನಿಯಮಗಳನ್ನು ಪಾಲಿಸುವುದು ಎಂದಾಗುತ್ತದೆ. ಮನುಷ್ಯ ಬುದ್ಧಿ ಕಲಿತ ಮೇಲೆಯೇ ಕೆಲವೊಂದು ದುರಭ್ಯಾಸಗಳನ್ನು ತಿಳಿದು ರೂಢಿಸಿಕೊಂಡಿರುತ್ತಾನೆ ಅಂಥವುಗಳನ್ನು ಖಂಡಿತಾ ತಿದ್ದಿಕೊಳ್ಳುವ ಅವಶ್ಯಕತೆಯಿದೆ ಮನುಷ್ಯ ಪ್ರಯತ್ನ ಮಾಡಿದರೆ ಯಾವುದನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಮಾತನ್ನು ಅನ್ವಯಿಸಿ ಹೇಳುವುದು.
“ಮನಸಿದ್ದಲ್ಲಿ ಮಾರ್ಗ” ಎಂಬಂತೆ ಲೋಪದೋಷಗಳನ್ನು ಕೆಟ್ಟ ಅಭ್ಯಾಸಗಳನ್ನು ತ್ಯಜಿಸ ಬಯಸುವುದಕ್ಕಿಂತ ತ್ಯಜಿಸಬೇಕೆಂಬ ಸಂಕಲ್ಪ ಮಾಡಿದರೆ ನಾಯಿ ಬಾಲವನ್ನೂ ಸರಿ ಮಾಡಬಹುದು ಎಂಬ ಆಶಾದಾಯಕ ಮಾತನ್ನು ಸ್ಥಾಯಿಗೊಳಿಸಬಹುದು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಮನಸಿದ್ದಲ್ಲಿ ಮಾರ್ಗ ಎಂಬುದನ್ನು ಸುಮ ವೀಣಾ ಅವರು ತಿಳುಹಿಸಿ ಇರುವುದು 👌
👌👌