19.9 C
Karnataka
Sunday, September 22, 2024

    ಮನೆಯಲ್ಲಿಯೇ ಇರಿ – ಮಹತ್ತರವಾದ ಆರೋಗ್ಯ ಭಾಗ್ಯ ಪಡೆಯಿರಿ.

    Must read

    ಎಂತಹ ಪರಿಸ್ಥಿತಿ ಬಂತು ವ್ಯಾಪಾರವೇ ಇಲ್ಲ, ಜನ ಓಡಾಟ ಕಡಿಮೆಯಾಗಿದೆ.  ಸರಕನ್ನು ಅಸಲಿನ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ ಎಂಬುದು ಇತ್ತೀಚೆಗೆ ಹೆಚ್ಚು ಹೆಚ್ಚು ಚಾಲ್ತಿಯಲ್ಲಿರುವ ಪರಿಸ್ಥಿತಿಯಾಗಿದೆ.  ಇನ್ನು ಕೃಷಿಕ ವಿಭಾಗದವರ ಪಾಡು ಹೇಳತೀರದು.   ಮತ್ತೆ ಕೆಲವರಿಗೆ  ನಾವು ಹೂಡಿದ ಬಂಡವಾಳಕ್ಕೆ 2- 3% ಸಹ ವರ್ಕೌಟ್‌ ಆಗಲ್ಲ ಎಂಬ ಭಾವನೆ,  ಹೂವಿನ ವ್ಯಾಪಾರಸ್ಥರು ಇತ್ತೀಚೆಗೆ ಮಾರಾಟವಾಗದೇ ಇರುವ ಸರಕನ್ನು ತಿಪ್ಪೆಗೆ ಎಸೆದ ಸುದ್ಧಿಯೂ ಸಹ ಪಸರಿಸಿತ್ತು.   ಈಗ ಮತ್ತೊಮ್ಮೆ ಲಾಕ್‌ ಡೌನ್‌ ಪ್ರಕಟಿಸಲಾಗಿದೆ. 

    ನಮ್ಮ ಸುರಕ್ಷಾ ಚಕ್ರವನ್ನು ನಾವೇ ನಿರ್ಮಿಸಿಕೊಳ್ಳಬೇಕಾಗಿದೆ.  STAY at HOME- STAY SAFE  ಎಂದು ಹೆಚ್ಚಿನವರು ಅಳವಡಿಸಿಕೊಂಡಿರುವರು.  ಮನೆಯಲ್ಲಿಯೇ ಇರಿ ಮನರಂಜನೆ ತೆಗೊಳ್ಳಿ ಎಂಬುದಕ್ಕೆ ಈಗ ಬ್ರೆಕ್‌ ಬಿದ್ದಿದೆ.  ಕಾರಣ ಪ್ರಸಾರವಾಗುತ್ತಿರುವ  ಹಳೆಯ ಧಾರಾವಾಹಿಗಳು ಅಸಹಜ ತಿರುವುಗಳಿಂದ ವೀಕ್ಷಕರ ಆಸಕ್ತಿ ಕಳೆದುಕೊಳ್ಳುತ್ತಿವೆ. ಡಬ್ಬಿಂಗ್‌ ಆದ ಕೆಲವು ಪೌರಾಣಿಕ ಧಾರಾವಾಹಿಗಳೂ ಸಹ ಅರ್ಧಕ್ಕೇ ನಿಂತು ಹೋಗಿವೆ.ಬಿಗ್ ಬಾಸ್ ಕೂಡ ಇಂದೇ ಕೊನೆಯಾಗುತ್ತಿದೆ.   ನ್ಯೂಸ್‌ ಚಾನಲ್‌ ಗಳಲ್ಲಿ ಸದಾ ಕಾಲವೂ ನೆಗಟಿವ್ ಸುದ್ದಿಗಳೇ.  ಹಾಗಿದ್ದರೆ ಸಮಯ ಕಳೆಯುವುದು ಹೇಗೆ? ಎಂಬುದು ಹೆಚ್ಚಿನವರ ಪ್ರಶ್ನೆಯಾಗಿದೆ.  ಈಗಿನ ತಾಂತ್ರಿಕ ಯುಗದಲ್ಲಿ ನಾವೂ ಚಟುವಟಿಕೆಯಲ್ಲಿರಬೇಕು,  ಮನಸ್ಸಿಗೂ ಸ್ವಲ್ಪ ಚಿಂತನೆಗೆ ಅವಕಾಶಕೊಟ್ಟು ಆರೋಗ್ಯದ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು, ನಡೆಸಿದ ಚಟುವಟಿಕೆಯಿಂದ ಸ್ವಲ್ಪ ಸಂಪಾದನೆಯೂ ಆಗಬೇಕು.    ಈ ಎಲ್ಲವಕ್ಕೂ ಪರಿಹಾರ ಎಂದರೆ ಷೇರುಪೇಟೆ ಚಟುವಟಿಕೆಯೊಂದೇ.  ಕದಡಿದ ವಾತಾವರಣದಲ್ಲಿ ಮನೆಯಲ್ಲೇ ಕುಳಿತು ಕೈಲಿರುವ ಹಣದಲ್ಲೇ ಸೀಮಿತ ಚಟುವಟಿಕೆ ನಡೆಸಿ ಹಣವನ್ನು ಗಳಿಸುವುದರೊಂದಿಗೆ ಮನಸ್ಸನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಹರ್ಷೋಲ್ಲಾಸಭರಿತವಾಗಿರಲು ಷೇರುಪೇಟೆ ಒಂದು ಉತ್ತಮ ಸಾಧನ.

    ಷೇರಪೇಟೆಯಲ್ಲಿ ಸ್ವಲ್ಪಮಟ್ಟಿನ ಸುರಕ್ಷಿತ ವಿಧಾನ ಎಂದರೆ  invest – hold – book profit ಒಂದೇ.   ಇಲ್ಲಿನ ವಹಿವಾಟಿಗೆ ಗ್ಯಾರಂಟೀ ಎಂಬುದಿರುವುದಿಲ್ಲ.  ಇತರೆ ವ್ಯಾಪರಗಳಲ್ಲಿದ್ದಂತೆ  ಇಲ್ಲಿಯೂ ಸ್ವಲ್ಪಮಟ್ಟಿನ ಅಪಾಯವಿದ್ದೇ ಇದೆ.  ಆದರೆ ನಮ್ಮ ಚಿಂತನೆ, ಭಾವನೆಗಳನ್ನು ನಮ್ಮ ಹತೋಟಿಯಲ್ಲಿಟ್ಟುಕೊಳ್ಳುವ ಕೌಶಲ್ಯವನ್ನು ಹೊಂದಿದ್ದರೆ ಷೇರುಪೇಟೆಯ ವಹಿವಾಟು ನಿರ್ವಹಣೆ ಲಾಭದಾಯಾಕವಾಗಿರುತ್ತದೆ.

    ಯಶಸ್ಸಿನ ಸೂತ್ರಗಳು:

    ಷೇರುಪೇಟೆ ಚಟುವಟಿಕೆಯಲ್ಲಿ ಯಶಸ್ಸು ಕಾಣಲು ಅಳವಡಿಸಿಕೊಳ್ಳಬೇಕಾದ / ಅಗತ್ಯವಿರುವ ಕೆಲವು ಸೂತ್ರಗಳು ಹೀಗಿವೆ.

    ಬಂಡವಾಳ (CAPITAL) :   ಇಂದು ಉಳಿಸಿದ ಮೊಬಲಗು ನಾಳಿನ ಜೀವನಕೆ ಮೆರಗು ಎಂಬಂತೆ  ಪೇಟೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಸುರಕ್ಷಿತವಾಗಿ ಬೆಳೆಸುವ ಪ್ರಯತ್ನಮಾಡಿದಲ್ಲಿ ಮಾತ್ರ ಭವಿಷ್ಯದಲ್ಲಿ ಆ ಹೂಡಿಕೆ ಮೆರಗು ತರಲು ಸಾಧ್ಯ.

    ಸಹನೆ (PATIENCE)  :  ಹೂಡಿಕೆಗೆ  ಆಯ್ಕೆ ಮಾಡಿಕೊಂಡ ಕಂಪನಿಗಳು ಉತ್ತಮವಾಗಿದ್ದಲ್ಲಿ, ಷೇರುಗಳ ಬೆಲೆಗಳಲ್ಲಿ ಆಗುವ ಏರಿಳಿತಗಳಿಗೆ ಗಮನಕೊಡದೆ,  ಅವುಗಳು ಏರಿಕೆ ಕಾಣುವವರೆಗೂ ಹೂಡಿಕೆ ಮುಂದುವರೆಸಬೇಕು.   ಕೊಂಡ ಷೇರು ಏರಿಕೆ ಕಾಣಲಿಲ್ಲ ಎಂಬ ಕೊರಗು ಇರಬಾರದು.  ಕಾರಣ, ಸೇವಿಸಿದ ಆಹಾರವು ಪಚನವಾಗಿ ರಕ್ತಗತವಾಗಲೂ ಸಹ ಸಮಯ ಬೇಕಾಗುವುದು, ಅದರಂತೆ ಖರೀದಿಸಿದ ಷೇರು ಲಾಭ ಗಳಿಸಿಕೊಡಲು ಸಹ ಸಮಯಾವಕಾಶ ನೀಡಬೇಕು.  ಹೂಡಿಕೆಯು ಸಕಾರಾತ್ಮಕ ಫಲಿತಾಂಶ ನೀಡುವವರೆಗೂ ಮುಂದುವರೆಸುವಂತಿರಬೇಕು.   ಒಂದು ವೇಳೆ ಹೂಡಿಕೆಮಾಡಿದ ಕಂಪನಿಯಲ್ಲಿನ ಆಂತರಿಕ ಬೆಳವಣಿಗೆ ಅಥವಾ ಕಂಪನಿಯ ಕಾರ್ಯನಿರ್ವಹಣೆಯ ಮೇಲೆ ನೇರವಾಗಿ ಪ್ರಭಾವ ಬೀರುವಂತಹ ಭಾಹ್ಯ ಬೆಳವಣಿಗೆ ಏನಾದರೂ ಇದ್ದಾಗ ಮಾತ್ರ ಅಂತಹ ಷೇರಿನಿಂದ ಹೊರಬರುವ ಚಿಂತನೆ ಮಾಡಬೇಕಷ್ಠೆ.  ಇದು ಒಂದು ರೀತಿಯ ಸ್ಟಾಪ್‌ ಲಾಸ್‌ ಪ್ರಕ್ರಿಯೆಯಾಗಿದೆ.

    ಅನುಭವ (EXPERIENCE) :   ಅಧ್ಯಯನದಿಂದ ಅರಿವು,  ಅನುಭವದಿಂದ ತಿಳಿವು, ಚಿಂತನೆಯಿಂದ ಸುಳಿವು,  ಅರಿವು ತಿಳಿವು ಸುಳಿವುಗಳಿಂದ ಉಳಿವು ಎಂಬಂತೆ ಅನುಭವವೇ ಚಟುವಟಿಕೆಗೆ ಪೂರಕ ಅಂಶವಾಗಿದ್ದು, ಚಟುವಟಿಕೆಗೆ ಸ್ವಂತ ಅನುಭವವಿಲ್ಲದೆ ಇದ್ದರೂ,  ಅನುಭವಸ್ಥರಿಂದ, ವೃತ್ತಿಪರರಿಂದ ಸೂಕ್ತ ಮಾರ್ಗದರ್ಶನ ಪಡೆದಲ್ಲಿ ಹೆಚ್ಚಿನ ಸಕಾರಾತ್ಮಕ ಫಲಿತಾಂಶ ಪಡೆಯಲು ಸಾಧ್ಯ.  

    ಸಂದರ್ಭೋಚಿತ ನಿರ್ಧಾರ (DECISION) : ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಾಗ ಸಂಪ್ರದಾಯಿಕ ಮಾಂತ್ರಿಕ ಪದಗಳಿಗೆ ಮರುಳಾಗದೆ invest and track it,  invest  and watch it, wealth protection ಎಂಬುದಕ್ಕೆ ಹೆಚ್ಚಿನ ಆಧ್ಯತೆ ನೀಡಿದಲ್ಲಿ ಯಶಸ್ಸು ಸಮೀಪವಿರುತ್ತದೆ.   ಸಮಯೋಚಿತ ನಿರ್ಧಾರ  ಹಲವು ಭಾರಿ ಹೆಚ್ಚಿನ ಲಾಭ ತಂದುಕೊಡುವ ಸಾಧ್ಯತೆಗಳೂ ಉಂಟು. ವಿಶೇಷವಾಗಿ ಪೇಟೆಗಳು ಉತ್ತುಂಗದಲ್ಲಿದ್ದಾಗ, ಹೂಡಿಕೆಯು ಆರಂಭದಲ್ಲಿ ದೀರ್ಘಕಾಲೀನ ಉದ್ದೇಶ ಹೊಂದಿದ್ದರೂ,  ನಂತರದಲ್ಲಿ ಅವಕಾಶ ಲಭಿಸಿದಾಗ ನಿರ್ಗಮಿಸುವ ವ್ಯವಹಾರಿಕತೆಯನ್ನು ಅಳವಡಿಸಿಕೊಳ್ಳುವುದು ಸೂಕ್ತ.

    ನಿರ್ಲಿಪ್ತತೆ (DETACHMENT) :    ಸಾಮಾನ್ಯವಾಗಿ, ಸಾಂಪ್ರದಾಯಿಕವಾಗಿ ನಡೆದುಬಂದಿರುವ ಪದ್ಧತಿ ಎಂದರೆ ಹೂಡಿಕೆಯೊಂದಿಗೆ ಭಾವನಾತ್ಮಕ ಭಾಂದವ್ಯವನ್ನು ಹೊಂದುವುದು.  ಈ ಭಾವನಾತ್ಮಕತೆಯು ಷೇರುಪೇಟೆಯಲ್ಲಿ ಹೆಚ್ಚಿರುತ್ತದೆ.   ಈ ಭಾವನಾತ್ಮಕತೆಯ ಕಾರಣ ಅನೇಕ ಅವಕಾಶಗಳನ್ನು ಕೈ ಚೆಲ್ಲಬೇಕಾಗುತ್ತದೆ.  

    ಶಿಸ್ತು(DESCIPLINE) :  ಹೂಡಿಕೆಯು ಉತ್ತಮ ಕಂಪನಿಯಲ್ಲಿದ್ದು,  ಮೌಲ್ಯಾಧಾರಿತ ಖರೀದಿಯಾಗಿದ್ದಲ್ಲಿ  ಪೇಟೆಯ ಏರಿಳಿತಗಳತ್ತ ಗಮನಹರಿಸದೆ ಕೇವಲ ಅವಕಾಶಕ್ಕಾಗಿ ಎದುರು ನೋಡಬೇಕು.  ಇಂದಿನ ಪೇಟೆಗಳಲ್ಲಿ ವಿವಿಧ ರೀತಿಯ ವಹಿವಾಟುದಾರರು, ವಿತ್ತೀಯ ಸಂಸ್ಥೆಗಳು, ಸಾಹುಕಾರಿ ವ್ಯಕ್ತಿಗಳು ಭಾಗವಿಹಿಸುವುದರಿಂದ,  ಹಾಗೂ Derivative ಪೇಟೆಯ ಚಟುವಟಿಕೆಯು, ಪ್ರತಿ ತಿಂಗಳ ಕೊನೆಯ ಗುರುವಾರ ಚುಕ್ತಾ ಆಗಬೇಕಾಗಿರುವುದರಿಂದ, ಹತ್ತಾರು ರಭಸದ ಏರಿಳಿತಗಳನ್ನು ಕಾಣಬಹುದಾಗಿದೆ.   ಭಾರಿ ಕುಸಿತ ಕಂಡಂತಹ ಕಂಪನಿಗಳು ಹೂಡಿಕೆದಾರರನ್ನು ಆಕರ್ಷಿಸುತ್ತವೆ.  ಅದು ಷೇರಿನ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ಕಾಣುವಂತೆ ಮಾಡುತ್ತದೆ.   ಷೇರಿನ ಬೆಲೆಗಳು ಗರಿಷ್ಠದಲ್ಲಿದ್ದಾಗ ಅಲ್ಪ ಪ್ರಮಾಣದ ಲಾಭಕ್ಕೆ ತೃಪ್ತಿಪಟ್ಟು ನಗದೀಕರಿಸುವ ಶಿಸ್ತನ್ನು ರೂಢಿಸಿಕೊಳ್ಳುವುದು ಸೂಕ್ತ.    ಕೈಲಿ ಹಣವಿದೆ ಎಂದು ಆತುರದಲ್ಲಿ ಮನಬಂದಂತೆ ಹೂಡಿಕೆ ನಿರ್ಧರಿಸದೆ,  ಅವಕಾಶಕ್ಕಾಗಿ ಎದುರುನೋಡುವುದು ಒಳಿತು.

    ನೆಮ್ಮದಿ (SATISFACTION) :  Value pick – prafit book ಎಂಬುದು  ಷೇರುಪೇಟೆ ವಹಿವಾಟಿಗೆ ಸದಾ ಅನ್ವಯವಾಗುವ ಹಸಿರು ಸಮೀಕರಣವಾಗಿದೆ.  ಯಾವುದೇ ಒಂದು ಷೇರು ಖರೀದಿಸುವಾಗ ಅದರ ಮೌಲ್ಯವು ಭಾರಿ ಕುಸಿತದಲ್ಲಿದೆ ಎಂದಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು.  ನಂತರ ಈ ಷೇರಿನ ಬೆಲೆ ಏರಿಕೆ ಕಂಡಾಗ ಹೂಡಿಕೆಯ ಅವಧಿ ಮತ್ತು ಅದು ಗಳಿಸಿಕೊಡುವ ಲಾಭದ ಗಾತ್ರಕ್ಕನುಗುಣವಾಗಿ, ಉತ್ತಮವಾಗಿದ್ದಲ್ಲಿ ಮಾರಾಟ ಮಾಡಿ ನಿರ್ಗಮಿಸಬೇಕು.   ಮಾರಾಟಮಾಡಿದ ನಂತರ ಇದೇ ಷೇರು ಮತ್ತಷ್ಟು ಏರಿಕೆ ಕಂಡಲ್ಲಿ ಚಿಂತಿಸದೆ, ಲಾಭ ನಗದೀಕರಿಸಿಕೊಂಡ ತೃಪ್ತಿ ಇದ್ದಲ್ಲಿ ಮುಂದಿನ ನಿರ್ಧಾರಗಳು ಸುಸೂತ್ರವಾಗಿರುತ್ತದೆ.   ಹಾಗಾಗಿ ಸಮತೋಲನ ಚಿತ್ತ ಭವಿಷ್ಯದ ಚಟುವಟಿಕೆಗೆ ಅತ್ಯಗತ್ಯ.

    ಷೇರುಪೇಟೆಯಲ್ಲಿ ಹೂಡಿಕೆ ಯಾವ ರೀತಿ ಲಾಭದಾಯಕ?

    ಷೇರುಪೇಟೆ ಚಟುವಟಿಕೆಯಲ್ಲಿ ಲಾಭಗಳಿಸುವುದಕ್ಕೆ ಹಲವಾರು ವಿಧಗಳಿವೆ.   ಅವುಗಳಲ್ಲಿ ಸುರಕ್ಷಿತ ವಿಧಾನ ಎಂದರೆ invest – hold – book profit ವಿಧವಾಗಿದೆ.   ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆ ಇಳಿಕೆ ಕಂಡಾಗ ಖರೀದಿಸಬೇಕು.  ನಂತರದಲ್ಲಿ ಷೇರಿನ ಬೆಲೆ ವಿವಿಧ ಕಾರಣಗಳಿಂದ ಏರಿಕೆ ಕಂಡಾಗ ಹೂಡಿಕೆ ಅವಧಿಗನುಗಣವಾಗಿ ಹೆಚ್ಚಿನ ಲಾಭ ತಂದುಕೊಡುವುದಾದರೆ ಅದನ್ನು ಮಾರಾಟಮಾಡಿ ಲಾಭಗಳಿಸಿಕೊಳ್ಳಬಹುದು.

    ಹೆಚ್ಚಿನ ಕಂಪನಿಗಳು ತಮ್ಮ 2020-21 ವರ್ಷದ ವಾರ್ಷಿಕ ಮತ್ತು 4 ನೇ ತ್ರೈಮಾಸಿಕದ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸುತ್ತಿವೆ.   ಅವುಗಳಲ್ಲಿ ಕೆಲವು ಕಂಪನಿಗಳು ಉತ್ತಮವಾಗಿವೆ ಎಂದು ಬಿಂಬಿಸಿದರೆ ಅನೇಕ ಕಂಪನಿಗಳೂ ಆಕರ್ಷಕ ಡಿವಿಡೆಂಡ್‌ ಗಳನ್ನು ಪ್ರಕಟಿಸಿವೆ.  ಪಾರಂಪರಿಕವಾಗಿ ಅನೇಕ ಕಂಪನಿಗಳು ತಮ್ಮ ಡಿವಿಡೆಂಡ್‌ ಗಳನ್ನು ಪ್ರಕಟಿಸಿವೆ.  ಕೆಲವು ಕಂಪನಿಗಳು ಉತ್ತಮವಾದ ಫಲಿತಾಂಶ ಪ್ರಕಟಿಸಿದರೂ ಡಿವಿಡೆಂಡ್‌ ಪ್ರಕಟಿಸಿಲ್ಲ.

    ಇತ್ತೀಚೆಗೆ ಕಂಪನಿಗಳು ಪ್ರಕಟಿಸಿರುವ ಡಿವಿಡೆಂಡ್‌ ಪಟ್ಟಿ:

    COMPANY NAMEDIVIDEND PER SHARE IN Rs. RECORD / BOOK CLOSSURE DATE
    ATUL20.0017TH JULY
    BAJAJ AUTO140.0010TH JULY
    BAJAJ HOLDINGS40.0010TH JULY
    BAJAJ FINANCE10.0010TH JULY
    BLUE DART15.0023RD JULY
    ORACLE200.0018TH MAY
    GODREJ AGRO8.006TH AUG
    GRINDWEL NORTON9.5022ND JULY
    HERO MOTOCORP35.0024TH JULY
    ICRA27.0024TH JULY
    MAHARASHTRA SCOOTERS50.0010TH JULY
    SHRIRAM CITI13.0023RD JULY
    SWARAJ ENGINES69.0003RD JULY
    TECH MAHINDRA30.0027TH JULY
    VST LTD114.0020TH JULY
    WENDT INDIA20.0016TH JULY

    ಇವುಗಳಲ್ಲದೆ  ಕಂಪನಿಗಳಾದ ಟಾಟಾ ಸ್ಟೀಲ್‌ ಪ್ರತಿ ಷೇರಿಗೆ ರೂ.25, ಅಲೆಂಬಿಕ್‌ ಫಾರ್ಮ ಪ್ರತಿ ಷೇರಿಗೆ ರೂ.14,  ಟೆಕ್‌ ಮಹೀಂದ್ರ ಪ್ರತಿ ಷೇರಿಗೆ ರೂ.30, ಮಾರುತಿ ಸುಜುಕಿ ಪ್ರತಿ ಷೇರಿಗೆ ರೂ.45, ಟಾಟಾ ಕೆಮಿಕಲ್ಸ್‌ ಪ್ರತಿ ಷೇರಿಗೆ ರೂ.10,   ಟಾಟಾ ಕಮ್ಯುನಿಕೇಶನ್ಸ್‌ ಪ್ರತಿ ಷೇರಿಗೆ ರೂ.14, ,  ವಿಶಾಖ ಇಂಡಸ್ಟ್ರೀಸ್‌ ಪ್ರತಿ ಷೇರಿಗೆ ರೂ.10, ,  ಜಿಲ್ಲೆಟ್‌ ಪ್ರತಿ ಷೇರಿಗೆ ರೂ.50,   ಹೆಚ್‌ ಡಿ ಎಫ್‌ ಸಿ ಪ್ರತಿ ಷೇರಿಗೆ ರೂ.23, ,  ಇನ್ಫೊಸಿಸ್‌ ಪ್ರತಿ ಷೇರಿಗೆ ರೂ.15,  ಹಿಂದೂಸ್ಥಾನ್‌ ಯುನಿಲೀವರ್‌ ಪ್ರತಿ ಷೇರಿಗೆ ರೂ.17 ರಂತೆ  ಕಂಪನಿಗಳು ಆಕರ್ಷಕ ಡಿವಿಡೆಂಡ್‌ ಘೋಷಿಸಿವೆ. 

    ಕಂಪನಿಗಳಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಪ್ರತಿ ಷೇರಿಗೆ ರೂ.7 ರಂತೆ ಡಿವಿಡೆಂಡ್‌ ಘೋಷಿಸಿದರೆ, ಕೋಟಕ್‌ ಮಹೀಂದ್ರ ಬ್ಯಾಂಕ್ ರೂ. 1,780 ರಲ್ಲಿದ್ದು, ಪ್ರತಿ ಷೇರಿಗೆ 90 ಪೈಸೆಯಂತೆ ಡಿವಿಡೆಂಡ್‌ ಪ್ರಕಟಿಸಿದೆK. ಇಂತಹ ಕಂಪನಿಗಳಲ್ಲಿ ಕೇವಲ ಭಾವನಾತ್ಮಕವಾಗಿ ಹೂಡಿಕೆ ಮಾಡಬಹುದಷ್ಠೆ. 

    ಕೆಲವೊಮ್ಮೆ ಕಂಪನಿಗಳು ಬೋನಸ್‌ ಷೇರುಗಳನ್ನು ವಿತರಿಸುತ್ತವೆ ಇದರಿಂದ ಹೊಂದಿರುವ ಷೇರುಗಳ ಸಂಖ್ಯೆ ಹೆಚ್ಚಾಗಿ ಮುಂದಿನ ದಿನಗಳಲ್ಲಿ ಷೇರಿನ ಬೆಲೆಗಳು ಏರಿಕೆ ಕಂಡಾಗ ಹೆಚ್ಚಿನ ಲಾಭ ಗಳಿಕೆಗೆ ಅವಕಾಶವಾಗುವುದು.

    ಒಟ್ಟಾರೆ ಪೇಟೆಯು ಉತ್ತುಂಗದಲ್ಲಿರುವುದರಿಂದ ಹೆಚ್ಚಿನ ಅಲ್ಪಾವಧಿ ಏರಿಳಿತಗಳು ಪ್ರದರ್ಶಿತವಾಗುವುದರಿಂದ ಅಲ್ಪಕಾಲೀನ ಲಾಭ ಗಳಿಕೆಗೆ ಉತ್ತಮ ತಳಹದಿಯನ್ನು ಪೇಟೆ ಒದಗಿಸುತ್ತಿದೆ.   ಭಾವನಾತ್ಮಕತೆಗಿಂತ ಚಿಂತನಾತ್ಮಕ ಕೌಶಲ್ಯವು ಹೆಚ್ಚು ಲಾಭದಾಯಾಕವಾಗಿದೆ.

    ಮನೆಯಲ್ಲಿಯೇ ಇದ್ದು ಸುರಕ್ಷತೆಯೊಂದಿಗೆ  ನಡೆಸಿದ ತುಲನಾತ್ಮಕ ಚಟುವಟಿಕೆಗೆ ಉತ್ತಮ ಪ್ರತಿಫಲ ಪಡೆಯಿರಿ.  ಶುಭವಾಗಲಿ.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!