19.9 C
Karnataka
Sunday, September 22, 2024

    ಯಾವುದೂ ಸತ್ಯವಲ್ಲ. ಎಲ್ಲವೂ ಸಾಪೇಕ್ಷ!

    Must read

    ಅವನು ತನ್ನದೇ ಪ್ರಪಂಚದಲ್ಲಿರುತ್ತಾನೆ. ಸುತ್ತಲಿನ ಯಾವ ಆಗು ಹೋಗುಗಳಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ…..ಅಂತೆನ್ನುವ ಮಾತುಗಳನ್ನು ನಾವೆಲ್ಲ ಬೇರೆಯವರ ಬಗ್ಗೆಯೂ,ಬೇರೆಯವರು ನಮ್ಮ ಬಗ್ಗೆಯೂ ಅತೀ ಸಾಮಾನ್ಯ ಎಂಬಂತೆ ಆಡುವುದನ್ನು ಯಾವಾಗಲೂ ಕೇಳುತ್ತೇವೆ. ಇದರ ಅರ್ಥ ಭೌತಿಕವಾದ ಈ ಪ್ರಪಂಚಕ್ಕೆ ಹೊರತಾಗಿ, ನಮ್ಮ ನಮ್ಮ ಮೆದುಳುಗಳಲ್ಲಿ ನಾವೇ ಪ್ರಪಂಚ ಸೃಷ್ಟಿಸಿ ಕೊಳ್ಳೋದು ಅನ್ನೋ ಅರ್ಥವನ್ನು ಎಷ್ಟು ಸಾಮಾನ್ಯ ಎಂಬಂತೆ ನಾವು ಭಾವಿಸಿದ್ದೇವಲ್ಲ?

    ಯಾಕೋ ಇತ್ತೀಚಿಗೆ ಸುತ್ತಲಿನ ಆಗು ಹೋಗುಗಳು ಈ ಪ್ರಪಂಚದ ಬಗ್ಗೆ ಯೋಚಿಸುವ ಹಾಗೆ ಮಾಡಿತು. ಪ್ರಪಂಚ ಎಂದರೇನು? ನನ್ನ ಪ್ರಪಂಚ ಮತ್ತೊಬ್ಬರ ಪ್ರಪಂಚದಿಂದ ಬೇರೆ ಅಂತಾದರೆ ಎಷ್ಟು ಸಹಸ್ರ ಸಂಖ್ಯೆಯಲ್ಲಿ ಈ ಪ್ರಪಂಚಗಳು ಇರಬೇಕಾಗುತ್ತೆ? ಬೇರೆ ಬೇರೆ ಜೀವ ರಾಶಿಗಳಿಗೆ ಬೇರೆಯದೇ ಪ್ರಪಂಚ. ನಾನು, ಇರುವೆ ಜೊತೆಯಲ್ಲೇ ಇದ್ದರೂ ನನ್ನ ಮತ್ತು ಇರುವೆಯ ಪ್ರಪಂಚ ಬೇರೇನೇ. ಇರುವೆಗೆ ಕತ್ತಲು, ಬೆಳಕು,ಋತುಮಾನ ತಿಳಿದಿದೆಯಾ? ತಿಳಿದಿದ್ದರಿಂದಲೇ ಮಳೆಗಾಲಕ್ಕೆ ಮುಂಚೆ ತನ್ನ ಆಹಾರವನ್ನು ಅದು ಶೇಖರಿಸಿಕೊಳ್ಳುತ್ತೆ. ಆದರೆ ಅದರ ಆಯಸ್ಸು ಬೇರೆ,ನನ್ನ ಆಯುಸ್ಸು ಬೇರೆ. ಅದು ಎಷ್ಟೇ ಮೇಲಿನಿಂದ ಬಿದ್ದರೂ ಸಾಯಲ್ಲ,ನಾನು ಹತ್ತಿಪ್ಪತ್ತು ಅಡಿಯಿಂದ ಬಿದ್ದರೆ ಸಾಯ್ತಿನಿ!

    ನಾಯಿಗಿರುವ ವಾಸನೆ ಶಕ್ತಿ,ಬೆಕ್ಕಿಗಿರುವ ರಾತ್ರಿಯ ದೃಷ್ಟಿ ಶಕ್ತಿ ವಿಕಾಸದ ಅತ್ಯುತ್ತಮ ಜೀವರಾಶಿಯಾದ ನಮಗೆ ಇಲ್ಲ. ವಿಶ್ವದ ಎಲ್ಲ ಜೀವ ರಾಶಿಗಳಿಗೆ ಬೇರೆಯದೇ (ಪರ) ರೀತಿ ತೋರುವ ಪಂಚ ಭೂತಗಳ ವಿಷಯ ಹೇಳಲು, ಇದನ್ನು ಪರಪಂಚ, ಪ್ರಪಂಚ ಅಂದರಾ?! ಇರುವುದು ಒಂದೇ ಭೌತಿಕ ಪ್ರಪಂಚವಾದರೂ ಮೆದುಳಿರುವ ಎಲ್ಲ ಜೀವಿಗಳಿಗೂ ಅದರದ್ದೇ ಆದ ಪ್ರಪಂಚವನ್ನು ಅವುಗಳೇ ಸೃಷ್ಟಿ ಮಾಡಿಕೊಂಡು ಬಿಟ್ಟವಾ? ಒಂದರಂತೆ ಮತ್ತೊಂದಿಲ್ಲ ಅಂತ ಹೇಳಿದ ದ್ವೈತ ಇದೇನಾ?

    ಅಂದರೆ ಯಾವುದೂ ಸತ್ಯವಲ್ಲ. ಎಲ್ಲವೂ ಸಾಪೇಕ್ಷ! ಇದನ್ನಾ ಅದ್ವೈತ ಹೇಳಿದ್ದು, ಸಾವಿರಾರು ವರ್ಷಗಳ ಹಿಂದೆ ಈ ನೆಲದಲ್ಲಿ?ಆಧುನಿಕ ವಿಜ್ಞಾನ ಆಕಾಶ, ಕಾಲ ಎರಡೇ ಸತ್ಯ. ಮಿಕ್ಕಿದ್ದೆಲ್ಲ ಸಾಪೇಕ್ಷ ಅಂದಿದೆ. (ಸಾಪೇಕ್ಷೆ ಅಂದರೆ ಸತ್ಯವಲ್ಲ, ಮಿಥ್ಯೆಯೂ ಅಲ್ಲ. ನನಗೆ ಒಂಥರಾ ಕಾಣಿಸಿದರೆ, ಮತ್ತೊಬ್ಬರಿಗೆ ಮತ್ತೊಂದು ತರಹ ಕಾಣಿಸೋದು) ಇದನ್ನು ಸರಳ ಉದಾಹರಣೆಯಲ್ಲಿ ಹೇಳುವುದಾದ್ರೆ, ಒಂದು ಚಲಿಸುವ ಕಾರನ್ನು ಊಹಿಸಿಕೊಳ್ಳುವ. 10 ಮೀಟರ್ ದೂರದ ಎರಡು ಬಿಂದುಗಳಲ್ಲಿ ಅದು 100 ಕಿಲೋ ಮೀಟರ್ ವೇಗದಲ್ಲಿ ಚಲಿಸುವಾಗ ನಮಗೆ ಕಾಣುತ್ತದೆ. ಆದರೆ ಅದೇ ಕಾರು 1000ಕಿಲೋಮೀಟರ್ ವೇಗವಾಗಿ ಚಲಿಸುವಾಗ ಆ ಎರಡು ಬಿಂದುಗಳ ಮಧ್ಯೆ ಕಾಣುವುದಿಲ್ಲ. ಒಂದು ಬೆಳಕಿನ ಕಿರಣ ಹಾದು ಹೋದ ಹಾಗೆ ಭಾಸವಾಗುತ್ತದೆ. ಕಾರು ಇದ್ದದ್ದು, ಓಡಿದ್ದು ಸತ್ಯ,ಆದರೆ ನಮಗೆ ಕಾಣಲಿಲ್ಲ ಅನ್ನುವುದೂ ಸತ್ಯ. ಇದರಲ್ಲಿ ವೇಗ ಸಾಪೇಕ್ಷ. ಕಾರು, ಎರಡು ಬಿಂದುಗಳ ನಡುವಣ ದೂರವನ್ನು ಕ್ರಮಿಸಲು ತೆಗೆದುಕೊಂಡ ಕಾಲ ಸತ್ಯ. ಕ್ಷೀಣಿಸಿದ ಕಾಲದಲ್ಲಿ ವೇಗದ ಕಾರು ನಮಗೆ ಕಾಣಿಸಲಿಲ್ಲ ಅನ್ನುವ ಸತ್ಯವು ನಮ್ಮ ಜ್ಞಾನೇಂದ್ರಿಯಗಳಿಗೆ ಸಾಪೇಕ್ಷ. ಮತ್ಯಾವುದೋ ಜೀವಿಗೆ ನಮಗೆ ಕಾಣಿಸದ ಕಾರು ಕಾಣಿಸಿಕೊಳ್ಳಬಹುದಾದ ಸಾಧ್ಯತೆ ಇರಬಹುದು. ಜ್ಞಾನೇಂದ್ರಿಯಗಳ ಕ್ಷಮತೆಯ ಕಾರಣದಿಂದ ಸತ್ಯವು ಸಾಪೇಕ್ಷವಾಯಿತಾ?

    ಇದರ ಅಡಿಯಲ್ಲಿ ಸ್ವಲ್ಪ ಆಯಾಮಗಳ ಕಡೆ ನೋಡುವ. ವಿಜ್ಞಾನದ ಪ್ರಕಾರ ಆಯಾಮ(Dimensional) ಮೂರು ಪ್ರಕಾರ. ಅವು ಉದ್ದ, ಅಗಲ, ಎತ್ತರ. ಉದ್ದದ ಆಯಾಮದಲ್ಲಿ ನಡೆದರೆ,ಬದುಕಿದರೆ ಅದು ಒಂದನೆಯ ಆಯಾಮ. (1st dimensional) ಉದಾಹರಣೆಗೆ ಸರಳ ರೇಖೆ. ಎರಡನೆಯ ಆಯಾಮ (2nd dimensional/ 2D) ಅಂದ್ರೆ ಉದ್ದ,ಅಗಲ ಗಳಲ್ಲಿ ಇರುವುದು ಎತ್ತರದ ಅರಿವು ಇರುವುದಿಲ್ಲ. ಉದಾಹರಣೆಗೆ ಚೌಕ,ಆಯತ ಇತ್ಯಾದಿ. ಮೂರನೆಯ ಆಯಾಮ (3rd dimensional/ 3D)ಅಂದರೆ ಉದ್ದ,ಅಗಲ,ಎತ್ತರ ಮೂರರಲ್ಲೂ ಬದುಕುವುದು. ನಾವು ಮನುಷ್ಯರು ಈ ಆಯಾಮದಲ್ಲಿ ಇದ್ದೇವೆ. ಕಾಣುವ ಪ್ರಪಂಚದ ಎಲ್ಲ ಭೌತಿಕ ವಸ್ತುಗಳೂ ಈ ಆಯಾಮದಲ್ಲಿವೆ.

    ಎರಡನೇ ಆಯಾಮದವರಿಗೆ ಎತ್ತರದ ಅನುಭವ ಇರದೇ ಇರುವುದರಿಂದ ಮೂರನೇ ಆಯಾಮದಲ್ಲಿರುವವರನ್ನು ನೋಡಲಾಗಲ್ಲ,ನೋಡಿದರೂ ಅವರ ಅನುಭವದ ಎರಡೇ ಆಯಾಮದಲ್ಲಿ ಮಾತ್ರ ನೋಡುತ್ತಾರೆ. ನಮ್ಮಲ್ಲಿಯ ಹಲವು ಏಕ ಜೀವಿಗಳು ಒಂದನೇ ಆಯಾಮದಲ್ಲಿಯೂ, ಮತ್ತೆ ಕೆಲವು ಕೆಳ ಸ್ತರದ ಜೀವಿಗಳು ಎರಡನೇ ಆಯಾಮದಲ್ಲಿಯೂ ಇರುವ ಸಾಧ್ಯತೆ ಇದೆ.

    ಇತ್ತೀಚೆಗೆ ವಿಜ್ಞಾನ ಕಾಲವನ್ನು ನಾಲ್ಕನೆಯ ಆಯಾಮ ಅಂತ ಕರೆದಿದೆ ಮತ್ತು ಅದರಲ್ಲಿರುವವರು ನಮ್ಮ ಕಣ್ಣಿಗೆ ಕಾಣದ ವೇಗದಲ್ಲಿರುವುದರಿಂದ ಅವರು ನಮಗೆ ಗೋಚರಿಸಲಾರರು ಅಂದಿದ್ದಾರೆ! ಹೀಗೆಯೇ ಪ್ರಯೋಗ ಶಾಲೆಯ ಆಧುನಿಕ ವಿಜ್ಞಾನ ಹನ್ನೊಂದು ಆಯಾಮಗಳನ್ನು ಮುಂದಿಟ್ಟು, ಒಂದೊಂದು ಆಯಾಮದಲ್ಲೂ ನಮಗಿರುವ ಇಂದ್ರಿಯಗಳಿಗೆ ನಿಲುಕದ ಶಕ್ತಿಗಳನ್ನು ಅವರಿಗೆ ಪರಮಾರಿಸಿ, ಹನ್ನೊಂದನೆಯ ಆಯಾಮದಲ್ಲಿರುವವರನ್ನು ನಮ್ಮ ಪೂರ್ವಜರು ಹೇಳಿರುವ ದೇವರುಗಳು ಅನ್ನುವ ಅರ್ಥದಲ್ಲಿ ಉನ್ನತ ಮಟ್ಟದ ಸ್ತರದಲ್ಲಿ ಇರಿಸಿದ್ದಾರೆ, ಅತಿಂದ್ರಿಯ ಶಕ್ತಿಗಳನ್ನು ಕೊಟ್ಟು! ಮೂರನೇ ಆಯಾಮದಿಂದ ಮೇಲಿನವರು ನಮ್ಮ ಸುತ್ತ,ಹತ್ತಿರದಲ್ಲೇ ಇದ್ದರೂ ನಮಗೆ ನೋಡಲಾಗಲ್ಲ,ಕಾರಣ ನಮ್ಮ ಜ್ಞಾನೇಂದ್ರಿಯಗಳ ಕ್ಷಮತೆ. ಇವಿಷ್ಟೂ ನಮ್ಮ ಪುರಾಣಗಳನ್ನು ಉಲ್ಲೇಖಿಸಿ ಹೇಳುತ್ತಿಲ್ಲ, ಬದಲಾಗಿ ಆಧುನಿಕ ಭೌತ ವಿಜ್ಞಾನದ ಪ್ರಥಮ ಹಂತದ ಊಹೆಗಳಾಗಿ ಪರಿಗಣಿಸಿ, ಸಂಶೋಧನೆ ನಡೆಯುತ್ತಿದೆ.

    ಆಯಾಮಗಳನ್ನು ವಿಂಗಡಿಸಲು ವಿಜ್ಞಾನ ಸೌರಶಕ್ತಿಯನ್ನು ಮಾಪಕವಾಗಿ ಬಳಸಿಕೊಂಡಿದೆ. ಅಂದರೆ ಮೂರನೆಯ ಆಯಾಮದಲ್ಲಿಯ ನಾವು ಸೌರ ಶಕ್ತಿಯನ್ನು ಶೇಕಡಾ 5 ರಷ್ಟು ಉಪಯೋಗಿಸಿಕೊಂಡಿದ್ದರೆ, ಹನ್ನೊಂದನೇ ಆಯಾಮದವರು ಶೇಕಡಾ 100 ರಷ್ಟು ಸೌರಶಕ್ತಿಯನ್ನು ಬಳಸಿಕೊಳ್ಳಲು ಕಲಿತಿರುತ್ತಾರಂತೆ. ಅಥವಾ ನಾವೂ 100 ಶೇಕಡಾ ಸೌರಶಕ್ತಿ ಉಪಯೋಗಿಸುವುದನ್ನು ಕಲಿತ ದಿನ ಆ ಆಯಾಮದಲ್ಲಿರುತ್ತೇವೆ, ಅತಿಂದ್ರಿಯ ಶಕ್ತಿ ಹೊಂದಿ!

    ವಿಜ್ಞಾನದ ಅನುಸಾರ ಯಾರು ಯಾವ ಆಯಾಮಗಳಲ್ಲಿ ಬೇಕಾದರೂ ಇರಬಹುದು, ಆಯಾಯ ಆಯಾಮಗಳನ್ನು ಗ್ರಹಿಸಲು,ಅನುಭವಿಸಲು ಬೇಕಾಗುವ ಜ್ಞಾನೇಂದ್ರಿಯಗಳ ಸಾಮರ್ಥ್ಯ ಪಡೆದು. ಅದ್ವೈತದ ಅಹಂ ಬ್ರಹ್ಮಾಸ್ಮಿ (ನಾನೂ ಬ್ರಹ್ಮನಾಗ ಬಲ್ಲೆ, ಅಥವಾ ನಾನೂ ಬ್ರಹ್ಮ) ಇದನ್ನೇನಾ ಹೇಳುದ್ದು?ಈ ಮಣ್ಣಿನ ಪುರಾತನ ದರ್ಶನಗಳನ್ನು ಅಭ್ಯಸಿಸಿದ ಎಲ್ಲರಿಗೂ ಮೇಲೆ ಹೇಳಿದ ವಿಷಯಗಳು ತೀರಾ ಸಾಮಾನ್ಯವಾದವುಗಳು, ಆದರೆ ಈಗಿನ ವಿಜ್ಞಾನಕ್ಕೆ ಕುತೂಹಲ ಕೆರಳಿಸಿರುವ ವಿಷಯಗಳು! ಅಣುವಿನಲ್ಲಿನ ಎಲೆಕ್ಟ್ರಾನ್, ನ್ಯೂಟ್ರಾನ್,ಪ್ರೋಟ್ರಾನ್ ಅನ್ನುವಲ್ಲಿಗೆ ನಿಂತಿದ್ದ ವಿಜ್ಞಾನ, ಮತ್ತೂ ಒಳ ಹೊಕ್ಕು ಈ ಮೂರನ್ನೂ ವಿಭಜಿಸಿ ಇವು ವಿಭಜಿಸಲಾಗದ, ಸದಾ ಚಲನೆಯಲ್ಲಿರುವ ದಾರದ ತರಹದ ತಂತುಗಳಿಂದ ಮಾಡಲ್ಪಟ್ಟಿವೆ ಅಂತ ಹೇಳಿದ್ದಾರೆ. ಅದನ್ನು String Theory ಅಂತ ಕರೆದು ಕೊಂಡಿದ್ದಾರೆ. ಮನುಷ್ಯನ ಪಂಚೇದ್ರಿಯಗಳ ಸೂಕ್ಷ್ಮತೆಯನ್ನು ವಿಸ್ತರಿಸಿಕೊಳ್ಳುವಂತಹ ಯಂತ್ರಗಳನ್ನು ಕಂಡುಕೊಂಡು ಅವುಗಳ ಸಹಾಯದಿಂದ ಈ ಸೃಷ್ಠಿಯನ್ನು ನೋಡುತ್ತಿರುವುದೇ ವಿಜ್ಞಾನದ ಕೆಲಸ ವಾಗಿದೆ,ಬಿಟ್ಟರೆ ಸತ್ಯದ ಅನ್ವೇಷಣೆಯಲ್ಲ.

    ನಮ್ಮ ಜ್ಞಾನೇಂದ್ರಿಯಗಳಿಗೂ ನಿಲುಕದ ಎಷ್ಟೋ ಸತ್ಯಗಳು ನಮ್ಮ ಸುತ್ತ ಮುತ್ತ ಇವೆ. ಉದಾಹರಣೆ ನಾಲ್ಕನೇ ಆಯಾಮದ ಜಗತ್ತನ್ನು ನಾವು ಅನುಭವಿಸದೇ ಇರುವುದು. ಏನೇ ನಾವು ವಿಜ್ಞಾನದಲ್ಲಿ ಮುಂದುವರಿದಿದ್ದೇವೆ ಅಂದರೂ ಅದು ಪಂಚೇಂದ್ರಿಯಗಳ ನಿಲುಕು ಮಾತ್ರ!ಹಾಗಾಗಿಯೇ ನಮ್ಮ ಹಿರಿಯರು ಜ್ಞಾನ,ವಿಜ್ಞಾನ,ಸುಜ್ಞಾನ ಅಂದು, ಈ ವಿಜ್ಞಾನವನ್ನು ಮಧ್ಯೆದಲ್ಲಿ ಇಟ್ಟಿದ್ದಾರೆ.

    ಇಂತಹ ವಿಜ್ಞಾನ ಮತ್ತೂ ಒಂದು ಹೆಜ್ಜೆ ಮುಂದುವರಿದು ಸಾವಿಗೆ ಹೊಸ ವ್ಯಾಖ್ಯಾನ ಕೊಡ್ತಿದೆ. ಅದೆಂದರೆ ಒಂದು ಆಯಾಮದಿಂದ ಮರೆಯಾಗಿ, ಮತ್ತೊಂದು ಆಯಾಮದಲ್ಲಿ ಅದರ ಅಸ್ತಿತ್ವನ್ನು ಕಾಣುವುದು! ಮೂರನೇ ಆಯಾಮದಲ್ಲಿ ಸಂಭವಿಸಿದ ಸಾವು ಭೌತ ಶರೀರದ ಅಸ್ತಿತ್ವವನ್ನು ಇಲ್ಲವಾಗಿಸಿದರೂ ಸೂಕ್ಷ್ಮ ಶರೀರದ ಅಸ್ತಿತ್ವವನ್ನು ನಂತರದ ಆಯಾಮಗಳಲ್ಲಿ ಮುಂದುವರಿಸುತ್ತಿರುವುದು ನನಗೆ ಕುತೂಹಲದ ವಿಷಯವಾಗಿದೆ. ಈ ನೆಲದ ದಾರ್ಶನಿಕರು ಇದೇ ವಿಷಯದ ಬಗ್ಗೆ ನಾನಾ ತರಹದ ಸಿದ್ದಾಂತಗಳನ್ನು ಮಂಡಿಸಿದ್ದರೂ ವೈಜ್ಞಾನಿಕ ಪುರಾವೆಗಳೊಂದಿಗೆ ಮಂಡಿಸಿದ ಉದಾಹರಣೆ ಇಲ್ಲವಾಗಿ ಅದೊಂದು ನಂಬಿಕೆಯ ಪ್ರತೀತಿ ಆಗಿದೆ. ಈಗಿನ ವಿಜ್ಞಾನ ಇಂತಹ ನಂಬಿಕೆಯ ವಿಷಯಕ್ಕೆ ನಮ್ಮ ಜ್ಞಾನೇಂದ್ರಿಯಗಳಿಗೆ ನಿಲುಕುವ ನೆಲೆಗಟ್ಟಲ್ಲಿ ಪುರಾವೆ ಒದಗಿಸಲು ತೊಡಗಿಕೊಳ್ಳುವುದು ಆಧುನಿಕ ಮನುಷ್ಯನ ಜೀವಮಾನದ ಮೈಲಿಗಲ್ಲೇನೋ!

    ಅತಿಂದ್ರಿಯ ವಾದದ್ದನ್ನು ಇಂದ್ರಿಯಗಳ ವ್ಯಾಪ್ತಿಗೆ ತಂದು ನಿಲ್ಲಿಸಿ,ವಿವರಿಸುವುದು, ವಿಜ್ಞಾನ ಅನ್ನಿಸಿದರೂ ನಮ್ಮ ಸೀಮಿತ ಇಂದ್ರಿಯಗಳ ಜ್ಞಾನಕ್ಕೆ ನಿಲುಕದೇ ಇರೋದು ವಿಶ್ವದಲ್ಲಿ ತುಂಬಾ ಇದೆ ಅನ್ನೋದನ್ನ ವಿಶ್ವದ ಎಲ್ಲಾ ದಾರ್ಶನಿಕರು ಮಾರ್ಮಿಕವಾಗಿ, ನಾನಾ ತರಹದ ಮಾಧ್ಯಮಗಳ ಮೂಲಕ ಮುಂದಿನ ಪೀಳಿಗೆಗಳಿಗೆ ಹೇಳಿದ್ದಾರೆ. ಎಲ್ಲ ಜೀವಿಗಳ ಇಂದ್ರಿಯ ಶಕ್ತಿಗಳು ಸೀಮಿತವಾಗಿದ್ದು, ಒಂದೇ ಇರುವ ಪರಮ ಸತ್ಯವನ್ನೂ ಸಾಪೇಕ್ಷಗೊಳಿಸಿಕೊಂಡು ತಮ್ಮದೇ ಆದ ಪ್ರಪಂಚದಲ್ಲಿ ವಿಹರಿಸುತ್ತಿವೆ. ಮಾನವ ಒಂದೆಡೆ ಆಯಾಮಗಳ ಹುಡುಕಾಟದಲ್ಲಿ ಉರ್ಧ್ವಮುಖದಲ್ಲಿ ಚಲಿಸಿದರೆ, ಮತ್ತೊಂದೆಡೆ ನೀಚ ಬುದ್ಧಿಗಳ ಆಗರವಾಗಿ ಮಾನವ ಕುಲಕ್ಕೇ ಕಂಟಕವಾಗಿ ಕುಹಕ ನಗೆ ಬೀರುತ್ತಿದ್ದಾನೆ. ಕೊಳಕು ಅನ್ನುವುದೂ ಸಾಪೇಕ್ಷವಾ?? ನನ್ನ ಕೊಳಕು ನನಗೆ ಕೊಳಕಾಗದೆ,ಬೇರೆಯವರಿಗೆ ಕೊಳಕಾಗಿ ಕಾಣೋದು ಅಥವಾ ಅನಿವಾರ್ಯವಾ? ಎಲ್ಲ ಜೀವ ಕಣಗಳಿಗೆ ಹುಟ್ಟು ಈ ಕೊಳಕೇ. ಮನುಷ್ಯನ ದೇಹದ ಕೊಳಕು ಮೈಯ ಬೆವರಾಗಿ ಹೊರಬರುವುದು ನಿಂತಿತು ಅಂದರೆ, ಅವನು ಸತ್ತ ಅಂತ. ನಾವಿಂದು ಯೋಚಿಸಬೇಕಾಗಿರುವುದು ಮನಸ್ಸಿನ ಕೊಳಕಿನ ಬಗ್ಗೆ. ಅದು ಸೃಷ್ಟಿಸುವ ಕೊಳಕು ಪ್ರಪಂಚದ ಬಗ್ಗೆ. ಹೌದು,ಪ್ರತಿ ಮನಸ್ಸಿಗೂ ಒಂದು ಶಕ್ತಿ ಇದೆ. ಅದರ ಕೊಳಕು ಪ್ರಪಂಚವೂ ಸಾಪೇಕ್ಷವಾ? ಅಥವಾ ಅನಿವಾರ್ಯವಾ?

    ಒಂದೆಡೆ ಕರೊನಾ ಕಾರಣದಿಂದ ಇಡೀ ವಿಶ್ವ ನರಳುತ್ತಿದ್ದರೆ, ಮಾನವಿಯತೆಯಿಂದ ಮಿಡಿದು,ಸಹಾಯ ಹಸ್ತ ಚಾಚುವವರು ಒಂದು ಕಡೆಯಾದರೆ, ಕೆಲವರು ಇದರಲ್ಲೇ ಕೊಳಕು,ಪಾಪಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ! ತಮ್ಮ ತೆವಲುಗಳನ್ನು ವಿಕೃತವಾಗಿ ತೀರಿಸಿಕೊಳ್ಳುತ್ತಿದ್ದಾರೆ. ಎಲ್ಲ ಮಾನವರ ಮೇಲೆ ಈ ಕ್ರಿಮಿ ಭೇದ,ಭಾವ ತೋರದೆ ಎರಗಿದರೂ ಮನುಷ್ಯನಲ್ಲಿಯ ಈ ಇಬ್ಬಗೆ ರೀತಿ ನನ್ನನ್ನು ಯೋಚಿಸುವಂತೆ ಮಾಡಿದೆ. ಯಾಕೆ ಹೀಗೆ? ಇಂತಹ ಸಮಯದಲ್ಲಾದರೂ ಪರಸ್ಪರರು ಮಾನವರಾಗಿ ಬಂದ ಸಂಕಟ ಎದುರಿಸಬೇಕು ತಾನೇ? ಬಂದಿರುವ ಮಹಾ ಮಾರಿಯ ಮುಂದೆ ಅದೇಗೆ ಮಾನವ ಈ ರೀತಿ ವರ್ತಿಸಬಹುದು? ಹಾಗಾದರೆ ಮಾನವನಿಗೆ ಆತ್ಮಸಾಕ್ಷಿ ಅಥವಾ ಮನಃಸಾಕ್ಷಿ ಎಂಬುದು ಇಲ್ಲವೇ? ಇಲ್ಲ ಅಂತಾದರೆ, ವಿಜ್ಞಾನ ಮಂಡಿಸುವ ಉನ್ನತ ಮಟ್ಟದ ಆಯಾಮಗಳ ಅರ್ಥ ಏನು?! ಅಥವಾ ಇದೆಲ್ಲಾ ಸತ್ಯವಲ್ಲದ ಸಾಪೇಕ್ಷವಾ?

    Photo by Andy Beales on Unsplash

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    11 COMMENTS

    1. ಭಾರತದ ಪುಣ್ಯಭೂಮಿಯಲ್ಲಿ ಇಂದ್ರಿಯಾತೀತ ಗ್ರಹಿಕೆಯನ್ನು ಮಹಾನ್ ಸನ್ಯಾಸಿಗಳು ಪಡೆದಿದ್ದರಬೇಕು ಎಂಬ ನಿನ್ನ ಆಯಾಮಗಳ ವಿಶ್ಲೇಷಣೆಯಿಂದ ಮನದಟ್ಟಾಗುತ್ತದೆ.
      ಮನೋಕೋಶದ ಕೊಳೆಯ ಆಚೆ ಸಮಷ್ಟಿ ಜೀವನ ಶೈಲಿಯನ್ನು ರೂಢಿಸಿಕೊಳ್ಳುವ ಚಿಂತನೆ ಸ್ಪಷ್ಟ ನಿರೂಪಣೆಯಲ್ಲಿದೆ. ಇಂದ್ರಿಯ ಗ್ರಹಿಕೆಯಷ್ಟೆ ಸತ್ಯವಲ್ಲ ಅದರಾಚೆ ಬ್ರಹ್ಮಾಂಡದ ಕಲ್ಪನೆ ಚಿತ್ರಣ ತಲ್ಲೀನತೆಗೆ ಪೂರಕ ಅಡಿಪಾಯದಂತಿದೆ ಲೇಖನ. ವಾಸ್ತವ ಮಾನವರ ಪಾಶವೀ ಗುಣಗಳಿಗೆ ಅಲೌಕಿಕ ಸ್ಪರ್ಶದ ವೈಜ್ಞಾನಿಕ ತಳಹದಿಯ ಪರಿಹಾರಕ್ಕೆ ಆಳವಾದ ಚಿಂತನೆ ಲೇಖನ ಸಮಯೋಚಿತ ಗೆಳೆಯ

    2. ಮಿತ್ರ ಮಂಜುನಾಥ್ ರವರೆ,

      ನಿಮ್ಮ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.
      ಬಹಳ ಜಟಿಲವಾದ ವಿಷಯವನ್ನು ಸರಳವಾಗಿ ಹೇಳಲು ಪ್ರಯತ್ನ ಮಾಡಿದ್ದೀರಿ. ನಿಮ್ಮದು ಬಲು ಅಪರೂಪದ ಹಾಗೂ ವಿಶಿಷ್ಟವಾದ ಚಿಂತನೆಯಾಗಿದೆ👌👍

      ಇದನ್ನು ಅರ್ಥೈಸಿಕೊಳ್ಳಲು ನಾವು ನಮ್ಮದೇ ಆಯಾಮಗಳಿಗೆ ಹೋಗಬೇಕಾಗುತ್ತದೆ😀

      ನೀವೊಬ್ಬ ಒಳ್ಳೆಯ ವೈಜ್ಞಾನಿಕ ಲೇಖಕರಾಗಿ ಬೆಳೆಯುವ ಲಕ್ಷಣಗಳು ಕಾಣಿಸುತ್ತಿವೆ.👍👏

      ನಿಮಗೆ ಶುಭವಾಗಲಿ 🙏🙏🙏

      H L ಶಿವಾನಂದ್
      ಬೆಂಗಳೂರು

    3. In this world everything is relative. Only activities related God is absolute. Matters related to Gita & Upanishad’s are absolute truths.

      Defined very well about relative truth & absolute truth aspects.

      Clarified Dwaita & Adwaita aspects of Ramanuja & Shankara Acharya philosophies for a common man understanding.

      Thanks for enlightening us. Keep writing.

    4. A Beautiful Article in this corona time, ತುಂಬಾ ಇಷ್ಟ ಆಯ್ತು ನನ್ನ ಗೆಳೆಯ.

    5. This is intellectual subject ,u discuss ed nicely , from fundamental u came upto modern science ,the original sanatana thoughts ,this can be understood more when one goes inside and think the the way u have thought,good article

    6. ವಿಜ್ಞಾನದ ವಿವಿಧ ಆಯಾಮಗಳನ್ನು ತೆರೆದಿಟ್ಟು ಜೀವನಕ್ಕೆ ಒಂದು ಆಧ್ಯಾತ್ಮಿಕ ಟಚ್ ನೀಡಿರುವ ಲೇಖಕರಿಗೆ ವಂದನೆಗಳು.‌ಕೊರೊನಾ ಕಾಲಘಟ್ಟದಲ್ಲಿ ಒಂದು ಅಪೂರ್ವವಾದ ಲೇಖನ

    7. ಅರ್ಥೈಸಿಕೊಳ್ಳಲೇ ಶ್ರಮ ಪಡಬೇಕಾದ ಈ ನಿನ್ನ ಅದ್ಭುತ ಲೇಖನ ಮತ್ತೆ ಮತ್ತೆ ಓದಬೇಕಾಗಿದೆ ಗೆಳೆಯ.
      ನಿನ್ನಲ್ಲಿರುವ ಅತೀಂದ್ರೀಯ ಬರವಣಿಗೆಯ ಅಗಾಧ ಶಕ್ತಿಯಿಂದ ಹೊರ ಹೊಮ್ಮಿರುವ ಈ ನಿನ್ನ ಲೇಖನ ವಿಮರ್ಶಗೆ ನಿಲುಕುವುದಿಲ್ಲ ಗೆಳೆಯಾ….ಮತ್ತೊಮ್ಮೆ ಹೇಳುವೆ…ನಿನಗೆ ನೀನೇ ಸಾಟಿ…👍

    8. ಲೇಖನ ತುಂಬಾ ಸ್ವಾರಸ್ಯಕರವಾಗಿ ಮೂಡಿ ಬಂದಿದೆ. ನೀವು ಹೇಳಿರುವ ವಿಷಯ. ಅದಕ್ಕೆ ಕೊಟ್ಟಿರುವ ಉದಾರಣೆ 👌👌. ನಮ್ಮ ಭಾರತ ದೇಶ ಪುಣ್ಯ ಭೂಮಿ. ಆದ್ಯಾತ್ಮಿಕ ನೆಲಕಟ್ಟು ಹೊಂದಿದ ದೇಶ. ಇಂದ್ರಿಯ ಗಳ ವಿಶ್ಲೇಷಣೆ ಅದ್ಭುತ. ಮನುಷ್ಯ ಎಲ್ಲಾ ಪ್ರಾಣಿಗಳಿಗಿಂತ ಬುದ್ದಿವಂತ. ಆದರೂ ಒಂದೊಂದು ಸಾರಿ. ಅವನಿಗೆ ಮನಸಾಕ್ಷಿ ಇದೆಯಾ ಎನ್ನುವ ಅನುಮಾನ ಬರುತ್ತೆ. ಈಗಿನ ವಾತಾವರಣ ನೋಡಿದರೆ. ಅವನು ನಡೆದು ಕೊಳ್ಳುವ ರೀತಿ ತುಂಬಾ ವಿಚಿತ್ರ. ಅಲ್ವಾ.ನೀವು ವಿಶ್ಲೇಷಣೆ ಮಾಡಿರುವ ಒಂದೊಂದು ವಿಷಯ ಅರ್ಥ ಗರ್ಭಿತ. ಒಟ್ಟಿನಲ್ಲಿ ನೀವು ವಾಸ್ತವ ವನ್ನು ಎಳೆ ಎಳೆಯಾಗಿ ಬಿಡಿಸಿದೇ. ಧನ್ಯವಾದಗಳು BM🙏🙏

    9. Oh!! excellent writing it should raise lots of eyebrows. Of course much of your subject was your own hard-won experience in the matter. Nevertheless, you must have done a wheelbarrow-full of research. I admire you. I guess this means we will be seeing more of you in the print media from now on. I say more power to you!

    LEAVE A REPLY

    Please enter your comment!
    Please enter your name here

    Latest article

    error: Content is protected !!