18.6 C
Karnataka
Friday, November 22, 2024

    ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ

    Must read


    ಆಮ್ಲಜನಕ, ರೆಮಿಡಿಸಿವಿರ್ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿರುವ ಸರಕಾರಿ ಬೆಡ್‌ಗಳ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್‌ (sast) ಪೋರ್ಟಲ್ʼ ನಲ್ಲಿ ಸಿಗುವ ಹಾಗೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಸೋಮವಾರ ರಾಜ್ಯ ಕೋವಿಡ್‌ ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು; ಆಮ್ಲಜನಕ & ರೆಮಿಡಿಸಿವಿರ್ ಬೇಡಿಕೆ- ಪೂರೈಕೆಯಲ್ಲಿ ಪಾರದರ್ಶಕತೆ ಬಹಳ ಮುಖ್ಯ. ಎಷ್ಟು ಪೂರೈಕೆ ಆಗುತ್ತಿದೆ? ಎಷ್ಟು ಬಳಕೆಯಾಗುತ್ತಿದೆ? ಯಾರಿಗೆ ಕೊಡಲಾಗಿದೆ? ಎಂಬ ಸಮಗ್ರ ಮಾಹಿತಿಯನ್ನು ಇದೇ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಈಗ ಪ್ರತೀದಿನ 35,000 ರೆಮಿಡಿಸಿವಿರ್ ಡೋಸ್‌ ಬೇಕಿದೆ ಎಂದರು.

    ಇದರ ಜತೆಗೆ, ರಾಜ್ಯಾದ್ಯಂತ ಆಕ್ಸಿಜನ್‌ ಬೆಡ್‌ಗಳಿಗೆ ಭಾರೀ ಬೇಡಿಕೆ ಇದೆ. ಸರಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸರಕಾರದ ಬೆಡ್‌ಗಳ ಮಾಹಿತಿಯನ್ನು ಕೂಡ ಈ ಪೋರ್ಟಲ್‌ ನಲ್ಲಿ ಹಾಕಲಾಗುವುದು. ಇದರಿಂದ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಬರುತ್ತದೆ. ಜತೆಗೆ ಸಾರ್ವಜನಿಕರಿಗೂ ವಾಸ್ತವ ಚಿತ್ರಣ ಸಿಗುವಂತಾಗಲಿದೆ ಎಂದರು.

    ಇನ್ನು ಎರಡು-ಮೂರು ದಿನಗಳಲ್ಲೇ ಸಾಸ್ಟ್ ಪೋರ್ಟ್‌ಲ್‌ಗೆ (http://arogya.karnataka.gov.in/) ಮೇಲೆ ತಿಳಿಸಿದ ಎಲ್ಲವನ್ನೂ ಲಿಂಕ್‌ ಮಾಡಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ತಿಳಿಸಿದರು.

    24 ಗಂಟೆ ಒಳಗೇ ರಿಸಲ್ಟ್‌:ಬೆಂಗಳೂರಿನಲ್ಲಿ ಈಗ ಪರೀಕ್ಷೆಯಾದ 24 ಗಂಟೆ ಒಳಗೇ ಫಲಿತಾಂಶ ಕೊಡಬೇಕು. ಬಿಯು ನಂಬರ್‌ ಜನರೇಟ್‌ ಆಗುವುದು ಕೂಡ ತಕ್ಷಣ ಆಗಬೇಕು. ರಾಜ್ಯದ ಉದ್ದಗಲಕ್ಕೂ ಹೀಗೆಯೇ ಆಗಬೇಕು. ರಾಜ್ಯದ ಸರಾಸರಿ ಪರಿಸ್ಥಿತಿ ನೋಡಿದರೆ ರಿಸಲ್ಟ್‌ ಬರಲು ನಾಲ್ಕೂವರೆ ದಿನದಿಂದ ಎರಡು ದಿನವಾಗುತ್ತಿದೆ. ಫಲಿತಾಂಶ ವಿಳಂಬದಿಂದ ಸೋಂಕು ಉಲ್ಬಣಿಸಿ ಹೆಚ್ಚು ಪ್ರಾಣನಷ್ಟ ಆಗುತ್ತಿದೆ ಎಂದು ಡಿಸಿಎಂ ಕಳವಳ ವ್ಯಕ್ತಪಡಿಸಿದರು.

    ಸ್ಯಾಂಪಲ್‌ ಕಲೆಕ್ಟ್‌ ಮಾಡಿದ ಒಂದು ದಿನದೊಳಗೆ ವರದಿ ಕೊಡುವುದಕ್ಕೆ ಇರುವ ಅಡ್ಡಿಗಳನ್ನು ನಿವಾರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ. ತಡವಾಗಿ ರಿಸಲ್ಟ್ ಕೊಡುವ ಲ್ಯಾಬ್‌ಗಳಿಗೆ ಪ್ರತಿ ಟೆಸ್ಟ್‌ಗೆ 150 ರೂ. ದಂಡ ವಿಧಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ಬೆಡ್‌ಗೆ ಬೇಡಿಕೆ ಹೆಚ್ಚಾಗಿದೆ:ಬೆಂಗಳೂರಿನಲ್ಲಿ ಈಗ ಬೆಡ್ ಖಾಲಿ ಆಗುತ್ತಿರುವುದು ದಿನಕ್ಕೆ 950 ಮಾತ್ರ. ಆದರೆ 7000 ದಿಂದ 8000 ಬೆಡ್‌ಗಳಿಗೆ ಡಿಮಾಂಡ್ ಬರುತ್ತಿದೆ. ಇಷ್ಟು ಸೋಂಕಿತರಲ್ಲಿ ಟ್ರಾಯಾಜ್ (ವೈದ್ಯರ ಪರಿಶೀಲನೆ) ಆದ ಮೇಲೆ ಆಸ್ಪತ್ರೆಗೆ ಸೇರಬೇಕಾದವರೇ 2000ಕ್ಕೂ ಹೆಚ್ಚು ಜನ ಇದ್ದಾರೆಂದು ಡಿಸಿಎಂ ಮಾಹಿತಿ ನೀಡಿದರು.

    ಬೆಡ್‌ ಬೇಡಿಕೆ ನಿಭಾಯಿಸಲು ಸಮರ್ಪಕ ಟ್ರಾಯಾಜಿಂಗ್ ಮಾಡಬೇಕು. ಬೆಂಗಳೂರಿನಲ್ಲಿ ಎಲ್ಲ ವಾರ್ಡ್ ಮಟ್ಟದಲ್ಲಿಯೂ ಟ್ರಾಯಾಜಿಂಗ್ ಮಾಡಿ ಅರ್ಹರಿಗಷ್ಟೇ ಆಸ್ಪತ್ರೆಗೆ ಸೇರಿಸುವ ಅವಕಾಶ ಕಲ್ಪಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೆಲ ಕಡೆ ವೈಯಕ್ತಿಕ ಟ್ರಾಯಾಜಿಂಗ್ ಆರಂಭವಾಗಿದೆ. ಒಂದೊಂದು ಕಡೆಯೂ ಐವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು ಡಾ.ಅಶ್ವತ್ಥನಾರಾಯಣ.

    ಗಂಭೀರ ಸೋಂಕಿತರಿಗೆ ಬೆಡ್‌ ಒದಗಿಸುವ ಉದ್ದೇಶದಿಂದ ಸ್ಟೆಪ್ʼಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಈ ಸ್ಟೆಪ್ʼಡೌನ್ ಆಸ್ಪತ್ರೆ & ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಟ್ರಾಯಾಜಿಂಗ್, ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಗಂಭೀರವಲ್ಲದ ಸೋಂಕಿತರಿಗೆ ಇಲ್ಲಿಯೇ ಚಿಕಿತ್ಸೆ ಕೋಡಲಾಗುವುದು ಎಂದು ಡಿಸಿಎಂ ತಿಳಿಸಿದರು.

    20,000 ಬೆಡ್‌ ಹೆಚ್ಚಳ:ರಾಜ್ಯಾದ್ಯಂತ ಐಸಿಯು & ಆಕ್ಸಿಜನ್‌ ಬೆಡ್‌ಗಳನ್ನು ಹೆಚ್ಚಿಸಲಾಗುತ್ತಿದೆ. ಬೆಂಗಳೂರಿನಲ್ಲಿ 4000 ಬೆಡ್‌ಗಳೂ ಸೇರಿದಂತೆ ರಾಜ್ಯದ ಉದ್ದಗಲಕ್ಕೂ 20,000 ಬೆಡ್‌ಗಳನ್ನು ಹೆಚ್ಚಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ರಾಜ್ಯಕ್ಕೆ 1200 ಮೆ.ಟನ್‌ ಆಮ್ಲಜನಕ ಹಂಚಿಕೆಯಾದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಡಾ.ಅಶ್ವತ್ಥನಾರಾಯಣ ವಿವರಿಸಿದರು.

    ಹೆಚ್ಚು ದರ ಸುಲಿಗೆ ಮಾಡಿದರೆ ಕ್ರಮ:ಹೋಮ್‌ ಐಸೋಲೇಷನ್‌ ಪ್ರಮಾಣ ಹೆಚ್ಚುತ್ತಿರುವುದರಿಂದ ಪಲ್ಸಾಸ್ಕೋಮೀಟರ್‌ಗಳಿಗೆ ಡಿಮಾಂಡ್‌ ಜಾಸ್ತಿಯಾಗಿದೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಲಾಗುತ್ತಿದೆ ಎಂಬ ಸರಕಾರಕ್ಕೆ ಬಂದಿದೆ. ಮೆಡಿಕಲ್‌ ಸ್ಟೋರ್‌ಗಳು ಆಗಿರಲಿ ಅಥವಾ ಇನ್ನಾರೇ ಆಗಿರಲಿ ಎಂಆರ್‌ಪಿಗಿಂತ ಹೆಚ್ಚು ಬೆಲೆಗೆ ಮಾರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದು ಪ್ರತಿ ರೆಮಿಡಿಸಿವರ್‌ ಸೇರಿ ಪ್ರತಿಯೊಂದು ಔಷಧಕ್ಕೂ ಅನ್ವಯ ಆಗುತ್ತದೆ. ಜನರು 112 ಹೆಲ್ಪ್‌ಲೈನ್‌ ಕರೆ ಮಾಡಿದರೆ ಅಂಥ ತಪ್ಪಿತಸ್ಥರನ್ನೂ ಕೂಡಲೇ ಬಂಧಿಸಲಾಗುವುದು. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಶಿಕ್ಷೆಗೊಳಪಡಿಸಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

    ಸರಕಾರವು ದೊಡ್ಡ ಪ್ರಮಾಣದಲ್ಲಿ ಪಲ್ಸಾಸ್ಕೋಮೀಟರ್‌ಗಳನ್ನು ಖರೀದಿ ಮಾಡುತ್ತಿದೆ. ಪ್ರತೀ ಒಂದಕ್ಕೆ 350 ರೂ.ನಂತೆ ಕೊಡಲಾಗುತ್ತಿದೆ. ಹೀಗಿದ್ದರೂ ಜನರ ಅಗತ್ಯಕ್ಕಾಗಿ ಸರಕಾರ ಹೆಚ್ಚು ಪ್ರಮಾಣದಲ್ಲಿ ಕೊಳ್ಳುತ್ತಿದೆ ಎಂದರು ಅವರು.

    ಡಿಸಿಎಂ ವಾರ್‌ ರೂಂಗೆ ಭೇಟಿ ನೀಡಿದ ವೇಳೆ ಮುಖ್ಯಮಂತ್ರಿಗಳ ಕಾರ್ಯನೀತಿ ಸಲಹೆಗಾರ ಪ್ರಶಾಂತ್‌ ಪ್ರಕಾಶ್‌ ಇದ್ದರು.ಹಿರಿಯ ಐಎಎಸ್ ಅಧಿಕಾರಿಗಳಾದ ಪೊನ್ನುರಾಜ್‌, ಮೌನಿಷ್‌ ಮುದ್ಗಲ್‌, ಪ್ರದೀಪ್, ಅರುಂಧತಿ ಚಂದ್ರಶೇಖರ್‌, ಗಿರಿಗೌಡ, ಸಾಸ್ಟ್ ಪೋರ್ಟ್‌ಲ್‌ ಕಾರ್ಯನಿರ್ವಾಹಕ ನಿರ್ದೇಶಕಿ ಎನ್.ಟಿ. ಅಬ್ರು, ಕೆಎಎಸ್ ಅಧಿಕಾರಿ ರಾಜೇಂದ್ರ ಕುಮಾರ ಮತ್ತಿತರರು ಇದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!