ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ | ಧರೆ ಹತ್ತಿಉರಿದಡೆ ನಿಲಲು ಬಾರದು | ಏರಿ ನೀರುಂಬುಡೆ, ಬೇಲಿ ಕೆಯ್ಯ ಮೇವಡೆ | ನಾರಿ ತನ್ನ ಮನೆಯಲ್ಲಿ ಕಳುವಡೆ | ತಾಯ ಮೊಲೆಹಾಲು ನಂಜಾಗಿ ಕೊಲುವೆಡೆ | ಇನ್ನಾರಿಗೆ ದೂರುವೆ ಕೂಡಲ ಸಂಗಮದೇವಾ |
ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲೆ ಇರುತ್ತದೆ ಎಂಬುದನ್ನು ದಾರ್ಶನಿಕ ಬಸವಣ್ಣ ಇಲ್ಲಿ ಉಲ್ಲೇಖಿಸಿರುವುದನ್ನು ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿ ನೋಡಬಹುದು.
ಜಾಗತಿಕ ತಾಪಮಾನದ ದಿಸೆಯಿಂದ ಭೂಮಿಯಲ್ಲಿ ಕೆಲವೆಡೆ ನಿಲ್ಲಲಾಗುತ್ತಿಲ್ಲ ಬಿಸಿಲಿನ ತಾಪ ಸಹಿಸಲಾರದೆ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.. ಭಿತ್ತಿಯಿಲ್ಲದೆ ಬರೆಯಬಹುದೆ ಚಿತ್ತಾರವೆ? ಬಿತ್ತಿ ಬೆಳೆಯಬಹುದೆ ಧರೆಯಿಲ್ಲದೆ? ಎಂಬಂತೆ ಭಿತ್ತಿ ಅರ್ಥಾತ್ ಭೂಮಿಯೇ ಇಲ್ಲದೆ ಇನ್ನೂ ಸರಳವಾಗಿ ಹೇಳುವುದಾದರೆ ಕೃಷಿ ಭೂಮಿಯೇ ಇಲ್ಲವಾದರೆ ನಾವು ಬೆಳೆಯುವುದಾದರು ಏನನ್ನು ಎಂಬ ಪ್ರಶ್ನೆ ಏಳುತ್ತದೆ.
ಅಕ್ರಮ ಭೂ ಒತ್ತುವರಿ, ಕೈಗಾರಿಕೆ,ನಿವೇಶನ,ರಸ್ತೆ ಇತ್ಯಾದಿ ಕಾರಣಕ್ಕೆ ಕೃಷಿ ಭೂಮಿ ಸವಕಲಾಗುತ್ತಿದೆ. ಕುಡಿಯುವ ನೀರು,ಸೇವಿಸುವ ವಾಯು ಅರ್ಥಾತ್ ಜೀವಜಲ ಪ್ರಾಣವಾಯುವಿಗೂ ತತ್ವಾರ ಬಂದಿರುವ ಕಾಲವಿದು. ಯದ್ವಾತದ್ವಾ ಬೋರ್ವೆಲ್ಗಳನ್ನು ಕೊರೆದು ನೀರನ್ನು ಪೋಲು ಮಾಡಿ ನೀರಿನ ಕುಡಿಯುವ ನೀರಿನ ಮಾರಾಟ ಪ್ರಾರಂಭವಾಗಿ ದಶಕಗಳೆ ಕಳೆದಿವೆ. ನಮ್ಮ ಅನುಕೂಲಕ್ಕೆ ಮರಗಳನ್ನು ಹನನ ಮಾಡಿ ಪ್ರಕೃತಿಯ ಮೇಲೆ ಮನುಷ್ಯ ವಿಕೃತಅಟ್ಟಹಾಸ ಮೆರೆದಿದ್ದಾನೆ.
ಸ್ವಚ್ಛ ಗಾಳಿಗೆ ಆಕ್ಸಿಜನ್ ಸೆಂಟರ್ ಗಳಿಗೆ ಹೋಗಬೇಕು ಅನ್ನುವ ಸುದ್ದಿ ಓದಿದ್ದೆವು ಕೇಳಿದ್ದೆವು ಹುಬ್ಬೇರಿಸಿದ್ದೆವು ನಮ್ಮ ಮುಂದಿನ ತಲೆಮಾರಿಗೆ ಇವೆಲ್ಲಾ ಎಂದು ಸುಮ್ಮನಿದ್ದೆವು, ಅದರೆ ಈಗ ಕೊರೊನಾ ಸಂದರ್ಭದಲ್ಲಿ ಈ ಆಮ್ಲಜನಕವೇ ಇಲ್ಲದೆ ಅನೇಕರು ಪ್ರಾಣಬಿಟ್ಟ ಸುದ್ದಿ ನಮ್ಮನ್ನು ಹೈರಾಣಾಗಿಸಿದೆ. ನೂರಾರು ಸಾವಿರಾರು ಟನ್ಗಟ್ಟಲೆ ಆಕ್ಸಿಜನ್ ಉತ್ಪಾದನೆ ಆದರೂ ಅವಶ್ಯಕತೆಗೆ ಲಭ್ಯವಿಲ್ಲದೆ ಇರುವುದು ಖೇದದ ಸಂಗತಿ.
ಏರಿ ಅಂದರೆ ಕೆರೆಯ ನೀರನ್ನು ತಡೆಯುವ ಕಟ್ಟೆ ಎಂಬ ಅರ್ಥದಲ್ಲಿ ತೆಗೆದುಕೊಂಡರೆ ಇಂದಿನ ಸಂದರ್ಭಕ್ಕೆ ಮಾನವ ಸಂಪನ್ಮೂಲವನ್ನು ರಕ್ಷಣೆ ಮಾಡಬೇಕಾಗಿರುವ ಸರಕಾರ ಸರಕಾರದ ಅಂಗ ಸಂಸ್ಥೆಗಳು ಎಂದು ತಿಳಿಯಬಹುದು. ನಿನ್ನೆಯ ವಿದ್ಯಾಮಾನಗಳನ್ನು ನೋಡಿದರೆ ಅತೀವ ದುಃಖವಾಗುತ್ತದೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ. ಜನರನ್ನು ರಕ್ಷಣೆ ಮಾಡುವ ಹೊಣೆ ಹೊತ್ತಿರುವ ವೈದ್ಯಕೀಯ ಸಿಬ್ಬಂದಿಯೇ ಅಕ್ರಮದಲ್ಲಿ ಭಾಗಿಯಾಗಿರುವುದು ಇರುವ ಜೀವರಕ್ಷಕ ಔಷಧಿಗಳನ್ನು ತಾವೇ ಕಳವು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಬೇಸರದ ಸಂಗತಿ.
ಕೊರೊನಾ ಸಂದರ್ಭಕ್ಕೆ ಲಸಿಕೆಗಳು ಬಂದಿವೆ ಇವುಗಳ ಅಭಾವವಾದರೆ ನಕಲಿ ಲಸಿಕೆಗಳು ಮಾರುಕಟ್ಟೆಗೆ ಬರುತ್ತವೆ ಎಂಬ ಸುದ್ದಿ ತಿಳಿದು ಜೀವ ರಕ್ಷಕ ಮಾಡುವ ಔಷಧವೂ ಕಲಬೆರಕೆಯೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದನ್ನೆ ಅಲ್ಲವೇ ತಾಯ ಹಾಲು ನಂಜಾಗುವುದು ಎನ್ನುವುದು ಕಾಯುವ ಕೈಗಳೇ ಕೊಡಲಿ ಕಾವಾದಾರೆ ಮಲಗುವ ನೆಲವೆ ಪ್ರಾಣ ರಕ್ಷಣೇ ಮಾಡಬೇಕಾದ ಹಾಸಿಗೆಗಳೆ ಮೃತ್ಯುಕೂಪವಾದರೆ ಇನ್ನೆಲ್ಲಿ ನಮ್ಮ ಸಂಕಷ್ಟಗಳ ಪರಿಹಾರ ಎಂಬ ಪ್ರಶ್ನೆ ಕಾಡುತ್ತದೆ.
ಪ್ರಾಕೃತಿಕ ಸಂಪತ್ತನ್ನು ರಕ್ಷಣೆ ಮಾಡುವ ಉತ್ತರದಾಯಿತ್ವ ಎಲ್ಲರದ್ದಾಗಿದೆ ಮತ್ತು ಅಧಿಕಾರ ಹೊಂದಿದ ಕೇಂದ್ರಗಳು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳದೆ ಬದ್ಧತೆಯಿಂದ ಇರಬೇಕು ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬಹುದು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ನಿಜ ಮೇಡಂ ಕಾಯುವ ಕೈಗಳು ಕೊಡಲಿಯ ಕಾವಾಗಿದೆ. ನಾಗರೀಕತೆ ಎಂಬ ಮರೀಚಿಕೆಯ ಬೆನ್ನು ಹಿಡಿದು ಪ್ರಕೃತಿಯನ್ನು ನಾಶ ಮಾಡಿದ್ದರ ಪರಿಣಾಮ ಪ್ರಾಣವಾಯುವಿನ ಕೊರತೆ. ಇದೇ ವೇಳೆಯಲ್ಲಿ ಒಂದು ಗಾದೆ ಮಾತಿನಂತೆ. ……..ಮದುವೇಲಿ ಉಂಡವನೇ ಜಾಣ ಅಂತ ಹಣ ಮಾಡಲು ತೊಡಗಿ ಇನ್ನಷ್ಟು ಸಾವು ನೋವಿಗೆ ಕಾರಣ ಕರ್ತರಾಗಿದ್ದಾರೆ.ಇನ್ನು ಮುಂದಾದರೂ ಪ್ರಕೃತಿ ಉಳಿಸುವತ್ತ ನಮ್ಮೆಲ್ಲರ ಗಮನ ಇರಲಿ.ನಿಮ್ಮ ಲೇಖನದಲ್ಲಿ ಚಂದ ವಿವರಿಸಿದ್ದೀರಾ ವಂದನೆಗಳು
ಪ್ರತಿಕ್ರಿಯೆಗೆ ಧನ್ಯವಾದಗಳು ಮಂಜುಳಾ ಹೆಗಡೆ ಅವರೆ