ಈಗಿನ ಅನಿಶ್ಷಿತತೆಯ ಸಮಯದಲ್ಲಿ ಹೆಚ್ಚಿನವರ ಗಮನ ಶೀಘ್ರ ಹಣ ಸಂಪಾದನೆಯಾಗಿದೆ. ಎಷ್ಠು ಸುಲಭವಾಗಿ, ತ್ವರಿತವಾಗಿ ಹಣ ಸಂಪಾದನೆ ಮಾಡಬಹುದು ಎಂಬ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಷೇರುಪೇಟೆಯೂ ಇದಕ್ಕೆ ಹೊರತಲ್ಲ.
ಷೇರುಪೇಟೆಯ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕಾದ ಸರಳ ಸಮೀಕರಣವೆಂದರೆ PFT Module ಅಂದರೆ Practical, Fundmental, Tehnicals ವಿಧ. ಪ್ರಸ್ತುತ ಸಂದರ್ಭದಲ್ಲಿ ಅಂತರ್ಗತವಾಗಿ ಅಡಕವಾಗಿರುವ ಮೂಲಭೂತಾಂಶಗಳನ್ನು ಆಧರಿಸಿ ಜೊತೆಗೆ ಪೇಟೆ ಒದಗಿಸುವ ಕ್ಷಣಿಕ, ಅಲ್ಪಕಾಲಿಕ ಅವಕಾಶಗಳನ್ನು ಬಳಸಿಕೊಂಡಲ್ಲಿ ಮಾತ್ರ ಷೇರುಪೇಟೆಯಲ್ಲಿ ಸ್ವಲ್ಪ ಮಟ್ಟಿನ ಸುರಕ್ಷತೆಯೊಂದಿಗೆ ಬಂಡವಾಳ ಬೆಳೆಸಲು ಸಾಧ್ಯ. ದೀರ್ಘಕಾಲೀನ ಹೂಡಿಕೆಯಿಂದ ಮಾತ್ರ ಹೆಚ್ಚಿನ ಲಾಭ ಪಡೆಯಬಹುದು ಎಂಬ ಪರಿಕಲ್ಪನೆ ಹೆಚ್ಚಿನವರಲ್ಲಿದೆ. ಷೇರುಪೇಟೆಯ ಸೂಚ್ಯಂಕಗಳು ಗರಿಷ್ಠದಲ್ಲಿರುವ ಈ ಸಮಯದಲ್ಲಿ ಹೂಡಿಕೆಗೆ ಅಂಟಿಕೊಳ್ಳದೆ ವ್ಯವಹಾರಿಕತೆಯತ್ತ ಒಲವು ತೋರುವುದು ಒಳಿತು.
ತ್ವರಿತ ಲಾಭ ತಂದ ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿಮಿಟೆಡ್
ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ಷೇರಿಗೆ ರೂ.166 ರಂತೆ ಐಪಿಒ ಮೂಲಕ ಸಾರ್ವಜನಿಕ ಷೇರು ವಿತರಣೆ ಮಾಡಿದ ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿಮಿಟೆಡ್ ಕಂಪನಿಯು ತನ್ನ ಷೇರುದಾರರಿಗೆ ಎಂತಹ ಅದ್ಭುತವಾದ ಲಾಭವನ್ನು ತಂದುಕೊಟ್ಟಿದೆ ಎಂದರೆ ಈ ತಿಂಗಳ 10 ರಂದು ರೂ.868 ರವರೆಗೂ ಜಿಗಿತ ಕಂಡಿದೆ. ಈ ಷೇರು ಆರಂಭಿಕ ದಿನಗಳಲ್ಲಿ ರೂ.286 ರಿಂದ ಆರಂಭವಾಗಿ ಕ್ರಮೇಣ ಏರಿಕೆಯ ಪಥದಲ್ಲಿ ಸಾಗಿ ಈ ಹಂತವನ್ನು ತಲುಪಿದೆ. ಕೇವಲ ಕೆಲವೇ ತಿಂಗಳಲ್ಲಿ ಪೇಟೆಯು ಎರಡಕ್ಕೂ ಹೆಚ್ಚು ಪಟ್ಟು ಲಾಭ ಗಳಿಸಿಕೊಟ್ಟಿದೆ. 10 ರಂದು ರೂ.868 ನ್ನು ತಲುಪಿದ ಈ ಷೇರು 14 ರಂದು ರೂ.720 ಕ್ಕೆ ಕುಸಿದು ರೂ.728 ರ ಸಮೀಪ ಕೊನೆಗೊಂಡಿದೆ. ಕಂಪನಿಯ ಪ್ರವರ್ತಕರನ್ನಾಧರಿಸಿ, ಉಜ್ವಲ ಭವಿಷ್ಯದ ನಿರೀಕ್ಷೆಯಿಂದ ಹೂಡಿಕೆದಾರರ ಬೆಂಬಲ ಹೆಚ್ಚಾಗಿ ಏರಿಕೆ ಕಂಡಿದೆ. ರೂ.300-400 ರ ಸಮೀಪ ಖರೀದಿ ಮಾಡಿದವರೂ ಸಹ ರೂ.860 ದಾಟಿದಾಗ ಮಾರಾಟ ಮಾಡಲು ನಿರುತ್ಸಾಹ ತೋರಲು ಕಾರಣ ಮೈಂಡ್ ಟ್ರೀ ಷೇರಿನ ಬೆಲೆಯಾಗಿದೆ. ಆದರೆ ಈಗಿನ ಅಲ್ಪ ಬಡ್ಡಿ ಯುಗದಲ್ಲಿ ಈ ರೀತಿ ಅನಿರೀಕ್ಷಿತ ಲಾಭದ ಇಳುವರಿ ದೊರೆತಾಗ ಲಾಭದ ನಗದೀಕರಣ ಸುರಕ್ಷಿತ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ದೀರ್ಘ ಕಾಲದ ನಂತರ ಮರಳಿಬಂದ ಅಸಲು : ಜಿ ಎನ್ ಎಫ್ ಸಿ ಲಿಮಿಟೆಡ್
ಈ ಷೇರಿನ ಬೆಲೆ ರೂ.390 ರ ಸಮೀಪವಿದ್ದು ಈ ತಿಂಗಳ 12 ರಂದು ಷೇರಿನ ಬೆಲೆ ರೂ.425 ನ್ನು ತಲುಪಿ ವಾರ್ಷಿಕ ಗರಿಷ್ಠದ ಸಂಭ್ರಮ ಮೂಡಿಸಿತು. ಹಿಂದಿನ ವರ್ಷ ಸುಮಾರು ರೂ.100 ರ ಕನಿಷ್ಠದಲ್ಲಿದ್ದು, ಈ ವರ್ಷ ರೂ.200 ರ ಸಮೀಪದಿಂದ ಕೆಲವೇ ತಿಂಗಳುಗಳಲ್ಲಿ ರೂ.425 ಕ್ಕೆ ಜಿಗಿತ ಕಂಡಿರುವುದು ಹಲವಾರು ಹೂಡಿಕೆದಾರರಿಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ. ಆದರೆ ಈಗಿನ ಬೆಲೆ ಸುಮಾರು ರೂ.400 ರಲ್ಲಿ ಖರೀದಿಮಾಡಿದಲ್ಲಿ ಅದು ಉತ್ತಮ ಹೂಡಿಕೆಯಾಗಬಹುದೇ? ಎಂಬ ಚಿಂತನೆ ಹಲವರಲ್ಲಿದೆ. ಅಂತಹವರ ಗಮನಕ್ಕೆ ಈ ಕೆಳಗಿನ ಅಂಶಗಳನ್ನು ತರಬಯಸುತ್ತೇನೆ.
ಜಿ ಎನ್ ಎಫ್ ಸಿ ಷೇರಿನ ಬೆಲೆ 2018 ರಲ್ಲಿ ರೂ.547 ರವರೆಗೂ ಏರಿಕೆ ಕಂಡಿತ್ತು. ಆ ವರ್ಷ ರೂ.425 ರ ಸಮೀಪ ಖರೀದಿ ಮಾಡಿದವರು ಈಗಲೂ ಪರಿತಪಿಸುತ್ತಿದ್ದಾರೆ. 2018 ರ ನಂತರದಲ್ಲಿ ಈ ಷೇರಿನ ಬೆಲೆ ರೂ.96 ರವರೆಗೂ ಕುಸಿದಿದ್ದು ಅಲ್ಲಿಂದ ಈ ವರ್ಷ ರೂ.425 ನ್ನು ತಲುಪಿ ಮತ್ತೆ ಜಾರಿದೆ. ಅಂದರೆ ಷೇರುಪೇಟೆಯಲ್ಲಿ ಷೇರಿನ ದರಗಳು ನಿಂತ ನೀರಿನಂತಲ್ಲ, ಸದಾ ಹರಿಯುತ್ತಿರುತ್ತವೆ. ಹರಿಯುವ ದಿಶೆಯನ್ನಾಧರಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಅರಿವು, ಕೌಶಲ್ಯಗಳ ಅಗತ್ಯ ಹೆಚ್ಚಾಗಿದೆ. ಷೇರುಪೇಟೆಯು ಜೂಜಾಟ ಎಂಬ ಭಾವನೆಯಲ್ಲಿರುವವರಿಗೆ ಇದು ಉತ್ತರವನ್ನು ನೀಡುವಂತಿದೆ. ಜೂಜಾಟದಲ್ಲಿ ಹಣವು ಸಂಪೂರ್ಣವಾಗಿ ನಶಿಸುವುದು ಇಲ್ಲ ಆದಾಯ ತರುವುದು. ಆದರೆ ಷೇರುಪೇಟೆಯಲ್ಲಿ ಹೂಡಿಕೆ ಉತ್ತಮ ಕಂಪನಿಗಳಲ್ಲಾಗಿದ್ದರೆ ಪೇಟೆಯಲ್ಲಿ ಷೇರಿನ ದರಗಳು ಕುಸಿದರೂ, ಕಂಪನಿ ಉತ್ತಮವಾಗಿದ್ದರೆ, ಷೇರಿನ ದರಗಳು ಪುಟಿದೇಳುವ ಸಾಧ್ಯತೆ ಹೆಚ್ಚಿರುತ್ತದೆ.
ದೀರ್ಘಕಾಲೀನವೋ ಶಾಶ್ವತವೋ : ಬಜಾಜ್ ಹಿಂದೂಸ್ಥಾನ್ ಶುಗರ್ ಲಿಮಿಟೆಡ್
ಈ ಷೇರಿನ ಬೆಲೆ ಶುಕ್ರವಾರ ರೂ.14.28 ರ ವಾರ್ಷಿಕ ಗರಿಷ್ಠ ದಾಖಲಿಸಿ ನಂತರ ರೂ.12.92 ರ ಲೋವರ್ ಸರ್ಕ್ಯೂಟ್ ನಲ್ಲಿ ಕೊನೆಗೊಂಡಿದೆ. ರೂ.3.77 ಈ ಷೇರಿನ ವಾರ್ಷಿಕ ಕನಿಷ್ಠ ಬೆಲೆಯಾಗಿದೆ. ಅಂದರೆ ಈ ವರ್ಷದ ಕೆಲವು ತಿಂಗಳ ಹಿಂದೆ ಖರೀದಿ ಮಾಡಿದವರು ಅಧಿಕ ಲಾಭ ಗಳಿಸಿದಂತಾಗಿದೆ. ಓದುಗರ ಗಮನಕ್ಕೆ ಕೆಲವು ಅಂಶಗಳನ್ನು ತರಬಯಸುತ್ತೇನೆ. ಈ ಷೇರಿನ ಬೆಲೆ ರೂ.1 ಅಗಿದ್ದು 2020 ರಲ್ಲಿ ವರ್ಷಪೂರ್ತಿ ಒಂದಂಕಿಯಲ್ಲಿ ವಹಿವಾಟಾಗುತ್ತಿತ್ತು. ಸೋಜಿಗವೆಂದರೆ ಈ ಷೇರು 2010 ರಲ್ಲಿ ರೂ.240 ಕ್ಕೂ ಹೆಚ್ಚಿತ್ತು. 2006 ರಲ್ಲಿ ಈ ಷೇರಿನ ಬೆಲೆ ರೂ.568 ರಲ್ಲಿತ್ತು. ಅಲ್ಲಿಂದ ನಿರಂತರವಾಗಿ ಇಳಿಯುತ್ತಲೇ ಬಂದಿದೆ. 2010 ರಲ್ಲಿ ಹೂಡಿಕೆ ಮಾಡಿದವರಿಗೆ ಬಂಡವಾಳ ಹೇಗೆ ಕರಗಿಹೋಯಿತೆಂದರೆ, ಅವರು ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡಿದ್ದ ಕಂಪನಿಯಲ್ಲಿ ಶಾಶ್ವತ ಹೂಡಿಕೆದಾರರಾಗಿದ್ದಾರೆ.
ಟಾಟಾ ಕೆಮಿಕಲ್ಸ್ ಲಿಮಿಟೆಡ್ :
ಸರಕು ರಸಾಯನಿಕಗಳನ್ನುತ್ಪಾದಿಸುವ ಈ ಕಂಪನಿ ಕಳೆದ ಒಂದು ತಿಂಗಳಿನಲ್ಲಿ ರೂ.800 ರ ಸಮೀಪದಿಂದ ರೂ.670 ರವರೆಗೂ ಇಳಿಕೆ ಕಂಡು ನಂತರ ಚೇತರಿಗೆ ಕಂಡು ಶುಕ್ರವಾರ 14 ರಂದು ರೂ.733 ನ್ನು ತಲುಪಿ ರೂ.702 ರ ಸಮೀಪ ಕೊನೆಗೊಂಡಿದೆ. ಪ್ರತಿ ಷೇರಿಗೆ ರೂ.10 ರಂತೆ ಲಾಭಾಂಶ ಘೋಷಿಸಿದೆ. ಡಿವಿಡೆಂಡ್ ನ್ನು ವಿತರಿಸಲು ಸುಮಾರು ಇನ್ನು ಒಂದು ತಿಂಗಳ ಸಮಯವಿರುವುದರಿಂದ ಮುಂದಿನ ದಿನಗಳಲ್ಲಿ ಚೇತರಿಕೆಯ ಚಟುವಟಿಕೆ ಪ್ರದರ್ಶಿತವಾಗಬಹುದು. ಬೇಗ ಬೇಗ ಡ್ರಾ ಬೇಗ ಬೇಗ ಹಣ ಎಂಬ ಹಂತದಲ್ಲಿರುವುದೇ ಕಾದು ನೋಡಬೇಕು.
ಪಿರಮಲ್ ಎಂಟರ್ ಪ್ರೈಸಸ್ ಲಿಮಿಟೆಡ್:
ಸುಮಾರು ರೂ.1,630 ರ ಸಮೀಪ ವಹಿವಾಟಾಗುತ್ತಿರುವ ಈ ಷೇರು ಮಾರ್ಚ್ 2021 ರ ತ್ರೈಮಾಸಿಕದಲ್ಲಿ ಲಾಭ ಗಳಿಸಿದೆ. ಫಾರ್ಮಾ ಮತ್ತು ವಿತ್ತೀಯ ವಲಯದಲ್ಲಿ ಗುರುತಿಸಿಕೊಂಡಿರುವ ಈ ಕಂಪನಿ 2020 ರಲ್ಲಿ ಪ್ರತಿ ಷೇರಿಗೆ ರೂ.14 ರಂತೆ ಡಿವಿಡೆಂಡ್ ವಿತರಿಸಿತ್ತು ಈ ವರ್ಷ ಪ್ರತಿ ಷೇರಿಗೆ ರೂ.33 ರಂತೆ ಡಿವಿಡೆಂಡ್ ಘೋಷಿಸಿದೆ. ಮಾರ್ಚ್ ತಿಂಗಳಲ್ಲಿ ರೂ.2,000 ದ ಸಮೀಪವಿದ್ದ ಈ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.1,760 ರ ಸಮೀಪದಿಂದ ಕುಸಿದಿದೆ. ಇದು ಹೈ ಬೀಟಾ ಸ್ಟಾಕ್ ಎಂಬುವ ರೀತಿಯಲ್ಲಿ ಏರಿಳಿತ ಪ್ರದರ್ಶಿಸುವ ಈ ಷೇರು ಅಲ್ಪಾವಧಿಯ ಹೂಡಿಕೆಗೆ ಉತ್ತಮವೆನಿಸುತ್ತದೆ. ಕಾದು ನೋಡೋಣ.
ಪ್ರಮುಖ ಕಂಪನಿಗಳನೇಕವು ಇತ್ತೀಚಿನ ದಿನಗಳಲ್ಲಿ ರಭಸದ ಏರಿಕೆ ಕಂಡು ಸ್ಥಿರತೆ ಕಾಣದೆ ಜಾರಿವೆ. ಎನ್ ಎಂ ಡಿ ಸಿ ರೂ.135 ರ ಸಮೀಪದಿಂದ ರೂ.213 ರವರೆಗೂ ಏರಿಕೆ ಕಂಡು, ರೂ.185 ಕ್ಕೆ ಕುಸಿದಿರುವ ವೇಗ, ಬಲರಾಂಪುರ್ ಚಿನ್ನಿ ಮಿಲ್ಸ್ ರೂ.230 ರ ಸಮೀಪದಿಂದ ರೂ.348 ಕ್ಕೆ ಏರಿಕೆ ಕಂಡು ರೂ.300 ಕ್ಕೆ ಕುಸಿದ ರೀತಿ, ಟಾಟಾ ಸ್ಟೀಲ್ ಷೇರು ಒಂದೇ ತಿಂಗಳಲ್ಲಿ ರೂ.854 ಸಮೀಪದಿಂದ ರೂ.1.246 ನ್ನು ತಲುಪಿ ರೂ.1,130 ಕ್ಕೆ ಕುಸಿದ ಶೈಲಿ ಕಂಡಾಗ ಕಣ್ಣಿಗೆ ಕಂಡಿದ್ದು ಸತ್ಯವಲ್ಲ- ಕೈಗೆ ಎಟುಕಿಸಿಕೊಂಡಿರುವುದೇ ಸತ್ಯವೆಂದು ಸಾರುವಂತಿದೆ.
ಕಾಲಕಾಲಕ್ಕೆ ಅಗತ್ಯ ಮಾಹಿತಿ ನೀಡಿ ನಮ್ಮನ್ನು ಜಾಗೃತಗೊಳಿಸುತ್ತಿೀರಿ ತಮಗೆ ಧನ್ಯವಾದಳು