ನಾಗೇಶ್ ಎಸ್ ವೈ
ಇಂದು ಹೈಸ್ಕೂಲ್ ಶಿಕ್ಷಣದ ಅವಧಿಯಲ್ಲೇ ತಾಂತ್ರಿಕ ವೃತ್ತಿಪರ ಕೋರ್ಸ್ ಪಡೆಯಬಹುದೆಂಬ ಬಹಳಷ್ಟು ಮಂದಿಗೆ ಗೊತ್ತಿಲ್ಲ. 7ನೇ ತರಗತಿ ಉತ್ತೀರ್ಣರಾದ ನಂತರ 8ನೇ ತರಗತಿಯ ಹಂತದಲ್ಲಿಯೇ 6 ವಿಷಯಗಳೊಂದಿಗೆ(ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ) ವೃತ್ತಿಪರ ತಾಂತ್ರಿಕ ಶಿಕ್ಷಣವನ್ನು ಪಡೆಯುವ ಅವಕಾಶ ಇದೆ.
ಕಾಲೇಜು ಶಿಕ್ಷಣ & ತಾಂತ್ರಿಕ ಶಿಕ್ಷಣ ಇಲಾಖೆ(DCTE) ಇದರ ಅಡಿಯಲ್ಲಿ 10ನೇ ತರಗತಿಯ ತನಕ ಈ ಕಿರಿಯ ತಾಂತ್ರಿಕ ಕೋರ್ಸ್ ಅನ್ನು ಮುಗಿಸಿಕೊಳ್ಳುವ ಅವಕಾಶವನ್ನು ಕಿರಿಯ ತಾಂತ್ರಿಕ ಶಾಲೆ(JTS) ಕಲ್ಪಿಸಿಕೊಟ್ಟಿದೆ. ಇದು ಕರ್ನಾಟಕದಲ್ಲಿ ಆರಂಭವಾಗಿದ್ದು 1965ರಲ್ಲಿ.
ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರವೇಶಾತಿ ಪ್ರಕ್ರಿಯೆ:
ಪ್ರತಿ ವರ್ಷ ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಏಪ್ರಿಲ್ ಮಾಹೆಯಲ್ಲಿ (ಈ ಬಾರಿ ಕರೋನ ಕಾರಣದಿಂದ ದಿನಾಂಕಗಳು ವ್ಯತ್ಯಾಸವಾಗಿವೆ) ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ 8ನೇ ತರಗತಿಯ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ತದ ನಂತರ ಆಯ್ಕೆ ಪ್ರಕ್ರಿಯೆ ರೋಸ್ಟರ್ ಪದ್ಧತಿಯಲ್ಲಿ ನಡೆಯುತ್ತದೆ. ಒಟ್ಟು 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ 30ವಿದ್ಯಾರ್ಥಿಗಳನ್ನು ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್(EEE) ಟ್ರೇಡ್ ಗೆ ಮತ್ತು ಉಳಿದ 30 ವಿದ್ಯಾರ್ಥಿಗಳನ್ನು ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್(EME) ಟ್ರೇಡ್ ಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವಿದ್ಯಾರ್ಥಿಯು ಮಾಧ್ಯಮಿಕ ಹಂತದಲ್ಲಿಯೇ ಕಿರಿಯ ತಾಂತ್ರಿಕ ಶಿಕ್ಷಣವನ್ನು ಪಡೆಯುವುದು ಮುಂದಿನ ತಾಂತ್ರಿಕ ಡಿಪ್ಲೋಮ ವ್ಯಾಸಂಗಕ್ಕೆ ದಾರಿದೀಪ. ಇಂತಹ ಶಾಲೆಗಳು ಕೇವಲ ಕರ್ನಾಟಕ ರಾಜ್ಯದಲ್ಲಿ 6 ಮಾತ್ರ ಇವೆ. ಎಲ್ಲಾ ಭಾಗದಲ್ಲೂ ತೆರದರೆ ಬಹಳಷ್ಟು ಕಿರಿಯ ತಾಂತ್ರಿಕ ಕಲಿಕಾರ್ಥಿಗಳಿಗೆ ಅನುಕೂಲವಾಗುತ್ತದೆ.
-ನಮಿತಾ ಸಿ,ಪ್ರಭಾರ ಪ್ರಾಚಾರ್ಯರು,ಕಿರಿಯ ತಾಂತ್ರಿಕ ಶಾಲೆ,ಭದ್ರಾವತಿ
ಪ್ರಸಕ್ತ ಕರ್ನಾಟಕದಲ್ಲಿನ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳು:
ಬಳ್ಳಾರಿ,ಬಾಗಲಕೋಟೆ,ಭದ್ರಾವತಿ,ಗುಲ್ಬರ್ಗಾ,ಮಂಗಳೂರು ಮತ್ತು
ಹುಬ್ಬಳ್ಳಿಯಲ್ಲಿಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಿವೆ.
ಮುಂದಿನ ವ್ಯಾಸಂಗಕ್ಕೆ ಮೀಸಲಾತಿ:ಸರ್ಕಾರಿ ಕಿರಿಯ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ ಎಸ್ ಎಲ್ ಸಿಯಲ್ಲಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳು ತಾಂತ್ರಿಕ ಡಿಪ್ಲೊಮಾ ಕೋರ್ಸ್ ಪ್ರವೇಶಾತಿ ಸಮಯದಲ್ಲಿ ರಾಜ್ಯದ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 5% ಮೀಸಲಾತಿ ದೊರೆಯಲಿದೆ. (ಅಲ್ಲದೇ ಈ ಅಭ್ಯರ್ಥಿಗಳು ಪಿಯುಸಿ ವ್ಯಾಸಂಗಕ್ಕೂ ಅರ್ಹರಾಗಿರುತ್ತಾರೆ.)
ಬೋಧನಾ ಮಾಧ್ಯಮ:ಕಿರಿಯ ತಾಂತ್ರಿಕ ಶಾಲೆಗಳಲ್ಲಿನ ಶಿಕ್ಷಣ ಮಾಧ್ಯಮ ಸಾಮಾನ್ಯ ವಿಷಯಗಳನ್ನು ಕನ್ನಡದಲ್ಲೂ ಹಾಗೂ ತಾಂತ್ರಿಕ ವಿಷಯಗಳನ್ನು ಇಂಗ್ಲಿಷ್ ನಲ್ಲಿ ಬೋಧಿಸಲಾಗುವುದು.
ಶಿಷ್ಯವೇತನ:ಕಿರಿಯ ತಾಂತ್ರಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸರ್ಕಾರದಿಂದ ಪ್ರತಿ ವರ್ಷದಲ್ಲಿ 500ರೂ. ಶಿಷ್ಯ ವೇತನ ನೀಡಲಾಗುವುದು.
ಕನಿಷ್ಠ ವಿದ್ಯಾರ್ಹತೆ ಹಾಗೂ ಇತರೆ ಅರ್ಹತೆಗಳು:ಪ್ರವೇಶಕ್ಕಾಗಿ ಅಭ್ಯರ್ಥಿಯು ಕರ್ನಾಟಕದ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಶಾಲೆಗಳಲ್ಲಿ 7ನೇ ತರಗತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ, ಇಂಗ್ಲಿಷ್ ಅಥವಾ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.ಅರ್ಜಿ ಸ್ವೀಕರಿಸುವ ಹಿಂದಿನ ದಿನಾಂಕಕ್ಕೆ ಅಭ್ಯರ್ಥಿಯು ಕರ್ನಾಟಕದ ಯಾವುದೇ ಅಂಗೀಕೃತ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕನಿಷ್ಠ 5 ವರ್ಷಗಳ ವ್ಯಾಸಂಗ ಮಾಡಿರಬೇಕು.
ಅರ್ಜಿ ಸಿಗುವ ಸ್ಥಳ:
ಅರ್ಜಿ ನಮೂನೆಯನ್ನು ಮೇಲೆ ಕಾಣುವ ನಿಮ್ಮ ಸ್ಥಳದಿಂದ ಹತ್ತಿರವಿರುವ ಯಾವುದಾದಾರೂ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗೆ ಭೇಟಿ ನೀಡಿ ಕಚೇರಿಯಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ವಿವಿರಗಳನ್ನು ಸಂಬಂಧಿಸಿದ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ(JTS) ಕಚೇರಿಯಿಂದ ಪಡೆಯಬಹುದು.
ಕಿರಿಯ ತಾಂತ್ರಿಕ ಶಾಲೆ(JTS)ಯಲ್ಲಿ ಕೋರ್ಸ್ ಮುಗಿಸಿದವರಿಗೆ ಆಗುವ ಪ್ರಯೋಜನಗಳು:
ಸ್ವಾವಲಂಬಿಯಾಗಿ, ಸ್ವ ಉದ್ಯೋಗಿಯಾಗಿ ಜೀವನ ನಿರ್ವಹಣೆ ಮಾಡುವ ಅವಕಾಶ.ಎಲೆಕ್ಟ್ರಿಷಿಯನ್,ಎಲೆಕ್ಟ್ರಿಕಲ್ ಶಾಪ್ ಉದ್ಯಮಿಯಾಗಿ ಕಾರ್ಯನಿರ್ವಹಿಸುವ ಕೌಶಲದ ಬೆಳವಣಿಗೆ,ಎಲೆಕ್ಟ್ರಿಕಲ್ ಟ್ರೇಡ್ ಗೆ ಸಂಬಂಧಪಟ್ಟ ಎಲ್ಲಾ ರೀತಿಯ ಕಾರ್ಯಗಳಲ್ಲಿ ತೊಡಗುವ ಕೌಶಲದ ಬೆಳವಣಿಗೆ.ಮೆಕ್ಯಾನಿಕಲ್ ಟ್ರೇಡ್ ಗೆ ಸಂಬಂಧಪಟ್ಟ ಎಲ್ಲಾ ರೀತಿಯ ಕಾರ್ಯಗಳಲ್ಲಿ ತೊಡಗುವ ಕೌಶಲದ ಬೆಳವಣಿಗೆ.
ಉದಾ: Corpenter, Welder, Turner etc ಈ ಕೋರ್ಸ್ ಜೊತೆಗೆ ತಾಂತ್ರಿಕ ಡಿಪ್ಲೋಮ ಕೋರ್ಸ್ ಮಾಡಿಕೊಂಡವರಿಗೆ MNC ಕಂಪನಿಗಳಲ್ಲಿ ವಿಪುಲವಾದ ಉದ್ಯೋಗ ಅವಕಾಶವಿದೆ. ಅಲ್ಲದೇ ಮೊದಲ ಆದ್ಯತೆ ನೀಡಲಾಗುತ್ತದೆ.
ನಾಗೇಶ್ ಎಸ್ ವೈ ಅವರು ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತಶಾಸ್ತ್ರ ಉಪನ್ಯಾಸಕರು.
ಪ್ರೌಢಶಿಕ್ಷಣಹಂತದಲ್ಲಿ ಕಿರಿಯ ತಾಂತ್ರಿಕ ಶಿಕ್ಷಣ ಅತ್ತ್ಯುತ್ತಮ ಲೇಖನ.