18.6 C
Karnataka
Friday, November 22, 2024

    ಯಥಾ ಪ್ರಜಾ…ತಥಾ ರಾಜಾ ಅಂದಿದ್ದರು ಕೃಷ್ಣ

    Must read

    ಯಥಾ ರಾಜಾ…ತಥಾ ಪ್ರಜಾ… ಎಂಬುದು ಅನಾದಿ ಕಾಲದ ಮಾತು. ರಾಜನಿದ್ದಂತೆ ಪ್ರಜೆಗಳು ಎಂದರ್ಥ. ಇದನ್ನು ಉಲ್ಟಾ ಮಾಡಿ ಹೇಳಿದ್ದರು ಅವರು. ಯಥಾ ಪ್ರಜಾ…ತಥಾ ರಾಜಾ ಅಂದಿದ್ದರು. ಅವರು ಮತ್ತ್ಯಾರೂ ಅಲ್ಲ; ಶುಕ್ರವಾರ ಇಹಲೋಕ ತ್ಯಜಿಸಿದ ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್‌.ಪೇಟೆ ಕೃಷ್ಣ.

    ಅನುಮಾನವೇ ಬೇಡ, ಕೃಷ್ಣ ಈ ನಾಡು ಕಂಡ ಅಪರೂಪದ ರಾಜಕಾರಣಿ. ಮೂರು ಬಾರಿ ವಿಧಾನಸಭಾ ಸದಸ್ಯರು, ಒಂದು ಬಾರಿ ಸಚಿವರು, ಒಮ್ಮೆ ಲೋಕಸಭಾ ಸದಸ್ಯರು, ಒಂದು ಅವಧಿಗೆ ವಿಧಾನಸಭಾ ಸ್ಪೀಕರ್‌ ಆಗಿದ್ದವರು. ಆದರೆ, ಅವರು ಇಡೀ ರಾಜ್ಯಕ್ಕೆ ಹೆಚ್ಚು ಪರಿಚಯವಾಗಿದ್ದೇ ವಿಧಾನಸಭಾ ಸ್ಪೀಕರ್‌ ಆದಾಗಲೇ. ಎಸ್‌.ಆರ್‌.ಬೊಮ್ಮಾಯಿ ಸಚಿವ ಸಂಪುಟದಲ್ಲಿಅವರು ರೇಷ್ಮೆ ಸಚಿವರಾಗಿದ್ದ ಅವಧಿಯೂ ಬಹಳ ಕಡಿಮೆ.

    ಕೃಷ್ಣ ಅವರ ಜೊತೆ ನನಗೆ ಸುಮಾರು 30 ವರ್ಷಗಳ ಒಡನಾಟ. ಪತ್ರಿಕೋದ್ಯಮದ ನನ್ನ ಆರಂಭದ ವರ್ಷಗಳಿಂದಲೇ ಪರಿಚಯವು ವಿಶ್ವಾಸವಾಗಿ ಬೆಳೆದಿತ್ತು. ಕೃಷ್ಣ ಅವರನ್ನು ನಾನು ಮೊದಲು ಭೇಟಿ ಮಾಡಿದ್ದು ಮಂಡ್ಯ ಜಿಲ್ಲೆನಾಗಮಂಗಲದಲ್ಲಿ. ಅದು 1990ರ ದಶಕದ ಆರಂಭದ ವರ್ಷಗಳು. ಆಗ ನಾಗಮಂಗಲದ ಶಾಸಕರಾಗಿದ್ದ ಲಾಳನಕೆರೆ ಶಿವರಾಮೇಗೌಡರ ಹೆಸರು ಪತ್ರಕರ್ತ ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ಪ್ರಕರಣದಲ್ಲಿಕೇಳಿ ಬಂದಿತ್ತು. ಜನತಾಪರಿವಾರದ ನೇತಾರ ಎಚ್‌.ಡಿ.ದೇವೇಗೌಡರು ಈ ಪ್ರಕರಣವನ್ನು ಕೈಗೆತ್ತಿಕೊಂಡು ಶಿವರಾಮೇಗೌಡರ ವಿರುದ್ಧ ಬೀದಿಗಿಳಿದರು. ಆಗ ರಾಜ್ಯದಲ್ಲಿಎಸ್‌.ಬಂಗಾರಪ್ಪ ಅವರ ಸರಕಾರ. ದೇವೇಗೌಡರು 1989ರ ವಿಧಾನಸಭಾ ಚುನಾವಣೆಯಲ್ಲಿಸೋತು ರಾಜಕೀಯವಾಗಿ ಸಂಕಷ್ಟದಲ್ಲಿದ್ದರು. ದೇವೇಗೌಡರು ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಗಮಂಗಲದಲ್ಲಿಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಗಂಗಾಧರಮೂರ್ತಿ ಅವರ ಫೋಟೋವನ್ನು ಕೈಯಲ್ಲಿಹಿಡಿದು ಬೃಹತ್‌ ಪಾದಯಾತ್ರೆ ನಡೆಸಿದರು. ಆಗ ಸಂಯುಕ್ತ ಕರ್ನಾಟಕದ ಮೈಸೂರು ಜಿಲ್ಲಾವರದಿಗಾರನಾಗಿದ್ದ ನಾನು ಈ ಪಾದಯಾತ್ರೆಯನ್ನು ವರದಿ ಮಾಡಲು ನಾಗಮಂಗಲಕ್ಕೆ ಹೋಗಿದ್ದೆ. ಅಲ್ಲಿಕೃಷ್ಣ ಮೊದಲ ಬಾರಿಗೆ ಪರಿಚಯವಾದರು.

    ಕೃಷ್ಣ ಅವರು ರಾಮಕೃಷ್ಣ ಹೆಗಡೆ, ದೇವೇಗೌಡ,ಬೊಮ್ಮಾಯಿ, ಜೆ.ಎಚ್‌. ಪಟೇಲ್‌ ಅವರ ಮುಂದಾಳತ್ವದ ಆಗಿನ ಜನತಾಪರಿವಾರದಲ್ಲಿಎರಡನೇ ಹಂತದ ನಾಯಕರಾಗಿದ್ದವರು. . ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕಾರಣ ಪ್ರವೇಶದ ಮುನ್ನಾ ದಿನಗಳಿಂದಲೂ ಆಪ್ತರಾಗಿದ್ದವರು. ಕೃಷ್ಣ ಹಾಗೂ ಸಿದ್ದರಾಮಯ್ಯ ಇಬ್ಬರೂ ಮೈಸೂರಿನಲ್ಲಿಹಿರಿಯ ವಕೀಲರೊಬ್ಬರ ಬಳಿ ವಕೀಲ ವೃತ್ತಿ ಆರಂಭಿಸಿದ್ದವರು. ಜನತಾಪರಿವಾರದಲ್ಲಿಈ ಇಬ್ಬರೂ ಒಂದು ಕಾಲದಲ್ಲಿಎಸ್‌.ಆರ್‌.ಬೊಮ್ಮಾಯಿ ಅವರ ಜೊತೆ ಹೆಚ್ಚು ಗುರುತಿಸಿಕೊಂಡವರಾಗಿದ್ದರು. ಇದಕ್ಕೆ ಕಾರಣ ಬೊಮ್ಮಾಯಿ ಅವರು ನಂಬಿದ್ದ ಎಂ.ಎನ್‌.ರಾಯ್‌ ಅವರ ಸಿದ್ಧಾಂತ. ಜನತಾ ಪರಿವಾರದ ಆಂತರಿಕ ರಾಜಕಾರಣದಲ್ಲಿಒಕ್ಕಲಿಗ ಸಮಾಜದ ಕೃಷ್ಣ ಅವರನ್ನು ಬದಿಗೆ ಸರಿಸುವ ಪ್ರಯತ್ನ ನಡೆದಾಗಲೆಲ್ಲಾಅವರ ಬೆಂಬಲಕ್ಕೆ ನಿಲ್ಲುತ್ತಿದ್ದವರು ಸಿದ್ದರಾಮಯ್ಯ.

    ಸಿದ್ದರಾಮಯ್ಯ ಹಾಗೂ ಕೃಷ್ಣ ಅವರ ಮಧ್ಯೆ ಮೊದಲ ಬಾರಿಗೆ ರಾಜಕೀಯವಾಗಿ ಬಿರುಕು ಮೂಡಿದ್ದು 2006ರಲ್ಲಿ. ಎಚ್‌.ಡಿ.ದೇವೇಗೌಡರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದ ವಿರುದ್ಧ ತಿರುಗಿ ಬಿದ್ದು ಬಿಜೆಪಿ ಜೊತೆಗೂಡಿ ಸರಕಾರ ರಚಿಸಿದಾಗ ಇದಕ್ಕೆ ನೀರೆರೆದವರು ಆಗ ಸ್ಪೀಕರ್‌ ಆಗಿದ್ದ ಕೃಷ್ಣ ಎಂಬುದು ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲಿಸ್ಪೀಕರ್‌ ಆಗಿ ಕೃಷ್ಣ ಅವರು ಕೈಗೊಂಡ ನಿರ್ಧಾರಗಳು ವಿವಾದಕ್ಕೀಡಾಯಿತು.

    ಕೃಷ್ಣ ಅವರು ಸ್ಪೀಕರ್‌ ಆದಾಗ ಕರ್ನಾಟಕ ರಾಜಕಾರಣವು ಸಂಕ್ರಮಣದ ಕಾಲದಲ್ಲಿತ್ತು. ವಿಧಾನಸಭೆಯಲ್ಲಿಯಾವ ಪಕ್ಷಕ್ಕೂ ಬಹುಮತ ಇರಲಿಲ್ಲ. ಕರ್ನಾಟಕದಲ್ಲಿಮೊದಲ ಬಾರಿಗೆ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಪರಸ್ಪರ ಜಿದ್ದಾಜಿದ್ದಿ ಹೋರಾಟದ ಪಕ್ಷಗಳಾಗಿದ್ದ ಕಾಂಗ್ರೆಸ್‌ -ಜೆಡಿಎಸ್‌ ಮೊದಲ ಬಾರಿಗೆ ಕೈಜೋಡಿಸಿ ಸರಕಾರ ರಚಿಸಿದ್ದು ಕರ್ನಾಟಕ ರಾಜಕಾರಣದಲ್ಲಿಆಘಾತವೇ ಸರಿ. ಕಾಂಗ್ರೆಸ್‌ ವಿರೋಧದಲ್ಲೇ ತನ್ನ ಶಕ್ತಿಯನ್ನು ಕಂಡು ಕೊಂಡಿದ್ದ ಜನತಾ ಪರಿವಾರ ಅಧಿಕಾರಕ್ಕಾಗಿ ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿದ್ದನ್ನು ಜನತಾ ಪರಿವಾರದ ಕಟ್ಟಾ ಬೆಂಬಲಿಗರು ಒಪ್ಪಿಕೊಳ್ಳಲು ಸುತರಾಂ ಸಿದ್ದರಿರಲಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಧರ್ಮಸಿಂಗ್‌ ಸರಕಾರ ರಚನೆಯಾಗಿ 20 ತಿಂಗಳಲ್ಲೇ ಕುಮಾರಸ್ವಾಮಿ ನಾಯಕತ್ವದಲ್ಲಿಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೇರಿತ್ತು. ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿಅಧಿಕಾರದ ರುಚಿ ಕಂಡಿತು. ಅಧಿಕಾರ ಪಲ್ಲಟದ ಇಂತಹ ಕಾಲಘಟ್ಟದಲ್ಲಿಸ್ಪೀಕರ್‌ ಆಗಿದ್ದವರು ಕೃಷ್ಣ.

    ಇದೇನೇ ಇರಲಿ. ಕೃಷ್ಣ ಅತ್ಯಂತ ಪ್ರಾಮಾಣಿಕ ರಾಜಕಾರಣಿ. ರಾಜಕಾರಣದಲ್ಲಿಹಣದ ಹಿಂದೆ ಯಾವತ್ತೂ ಹೋದವರಲ್ಲ. ಸರಳ ಜೀವಿ. ಅವರು ಸರಳವಾಗಿರಬೇಕೆಂದು ಸರಳವಾಗಿರುತ್ತಿದ್ದವರಲ್ಲ. ಅವರು ಜೀವನ ಶೈಲಿಯೇ ಹಾಗಿತ್ತು. ಸ್ವಲ್ಪ ಶ್ರೀಮಂತಿಕೆಯ ಜೀವನ ನಡೆಸಲು ಅವರ ಬಳಿ ಆರ್ಥಿಕ ಅನುಕೂಲ ಇರಲಿಲ್ಲಎಂದೇನೂ ಅಲ್ಲ. ಆದರೆ, ಸರಳವಾಗಿ ಬದುಕುವುದೇ ಅವರಿಗೆ ಒಗ್ಗಿ ಹೋಗಿತ್ತು. ಅದು ಅವರ ಮಾನಸಿಕ ಸ್ಥಿತಿ.

    ಸ್ಪೀಕರ್‌ ಆಗಿ ದುಬಾರಿ ಕಾರಿನಲ್ಲಿ ಪೊಲೀಸ್‌ ಎಸ್ಕಾರ್ಟ್‌ಗಳೊಂದಿಗೆ ಓಡಾಡುವಷ್ಟೇ ಸುಲಭವಾಗಿ ಫುಟ್‌ಪಾತ್‌ನಲ್ಲಿ ನಡೆದುಕೊಂಡೋ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿಬೆಂಗಳೂರು-ಮೈಸೂರು ಪ್ರಯಾಣಿಸುವುದೋ ಅವರಿಗೆ ಅಷ್ಟೇ ಸಲೀಸಾಗಿತ್ತು. ಮಹಾತ್ಮ ಗಾಂಧೀಜಿ ಹಾಗೂ ರಾಮಮನೋಹರ ಲೋಹಿಯಾ ಅವರ ಜೀವನದಿಂದ ಕೃಷ್ಣ ಪ್ರಭಾವಿತರಾಗಿದ್ದರು.

    ಕೃಷ್ಣ ಅಧಿಕಾರ ಬಂದಾಗಲೂ ಅಹಂ ಅನ್ನು ತಮ್ಮ ಬಳಿ ಬಿಟ್ಟುಕೊಂಡವರಲ್ಲ. ಅಧಿಕಾರ ಸಿಕ್ಕಾಗ ಹಿಗ್ಗಲಿಲ್ಲ. ಅಧಿಕಾರ ಹೋದಾಗ ಕುಗ್ಗಲಿಲ್ಲ. ಏಕೆಂದರೆ, ಅವರಲ್ಲೊಬ್ಬ ಸ್ಥಿತಪ್ರಜ್ಞ ಯಾವತ್ತೂ ನೆಲೆಸಿದ್ದ. ಅಧಿಕಾರದ ಕುರ್ಚಿ ಮೇಲೆ ಕುಳಿತಾಗಲೂ ಎಲೆ ಮೇಲೆ ಬಿದ್ದ ನೀರಿನಂತೆ ಅಂಟಿಯೂ ಅಂಟದಂತೆ ಇದ್ದವರು. ಒಂದು ಕಡೆ ಬಿಡಲಾಗದ ತತ್ತ್ವ ಸಿದ್ದಾಂತ, ಇನ್ನೊಂದು ಕಡೆ ಹಳೆಯದಕ್ಕೆ ಅಂಟಿಕೊಂಡರೆ ಬದಲಾದ ರಾಜಕೀಯ ವಾತಾವರಣದಲ್ಲಿಅಸ್ತಿತ್ವದ ಪ್ರಶ್ನೆ -ಈ ಎರಡರಮಧ್ಯೆ ಕೃಷ್ಣ ಆಯ್ಕೆ ಮಾಡಿಕೊಂಡಿದ್ದು ತತ್ತ್ವ, ಸಿದ್ದಾಂತವನ್ನೇ.

    ಅವರ ಜೊತೆ ಹರಟೆ ಹೊಡೆಯುತ್ತಿದ್ದ ಅನೇಕ ಸಂದರ್ಭದಲ್ಲಿಅವರಲ್ಲಿನಾನು ಕಂಡಿದ್ದು ತಮ್ಮ ಬುದ್ದಿಯ ಮಾತಿಗಿಂತ ಹೃದಯದ ಮಾತಿನಂತೆ ನಡೆದುಕೊಳ್ಳುತ್ತಿದ್ದರು. ಭ್ರಷ್ಟ ವ್ಯವಸ್ಥೆಯಲ್ಲಿಬದುಕಲು ಅವರು ತುಂಬಾ ಕಸಿವಿಸಿಗೊಳ್ಳುತ್ತಿದ್ದರು.
    ಕೃಷ್ಣ ತುಂಬಾ ಮಹತ್ವಾಕಾಂಕ್ಷೆಯ ರಾಜಕಾರಣಿ ಆಗಿರಲಿಲ್ಲ. ತಮ್ಮ ಕ್ಷೇತ್ರದ ಮಟ್ಟಿಗೆ ರಾಜಕಾರಣ ಮಾಡಿಕೊಂಡಿದ್ದವರು. ಪಕ್ಕದ ಕ್ಷೇತ್ರದ ಕಡೆಗೂ ತಲೆ ಹಾಕುತ್ತಿರಲಿಲ್ಲ. ಅವರ ಇತಿಮಿತಿಯ ಅರಿವು ಚೆನ್ನಾಗಿತ್ತು. ಸಮಾಜವಾದಿ ಸಿದ್ದಾಂತ ಹಿನ್ನೆಲೆಯ ಅವರು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಕಟ್ಟಿ ಜಾರ್ಜ್‌ ಫರ್ನಾಂಡೀಸ್‌ ಅವರನ್ನು ಮೈಸೂರಿಗೆ ಕರೆಸಿ ಈ ವೇದಿಕೆಯನ್ನು ಅವರಿಂದ ಉದ್ಘಾಟಿಸಿದ್ದರು.

    ಕೃಷ್ಣ ಅವರ ಜೊತೆ ಆಗಾಗ್ಗೆ ರಾಜಕಾರಣ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಹರಟೆ ಹೊಡೆಯುವ ಸಮಯ ಒದಗಿ ಬರುತ್ತಿತ್ತು. ಅವರ ಮೊಬೈಲ್‌ಗೆ ಕರೆ ಮಾಡಿದಾಗ ಅವರು ಮೈಸೂರಿನ ಕುವೆಂಪುನಗರದ ಮನೆಯಲ್ಲಿದ್ದಾಗ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸರಿಯಾಗಿ ಕೇಳುತ್ತಿರಲಿಲ್ಲ. ಆಗೆಲ್ಲಾಅವರು ಮನೆಗೆ ಬಂದು ಬಿಡಿ ಎನ್ನುತ್ತಿದ್ದರು. ಅವರ ಮನೆಗೆ ಹೋಗಿ ಮಾತಾಡಿ ಬರುತ್ತಿದ್ದೆ. ಮೈಸೂರಿನಲ್ಲಿ ಎಲ್ಲಿಯಾದರೂ ದಾರಿಯಲ್ಲಿಸಿಕ್ಕರೆ ಅಲ್ಲಿಯೇ ಯಾವುದಾದರೂ ಹೋಟೆಲ್‌ಗೆ ಹೋಗಿ ಚಹಾ ಕುಡಿಯುತ್ತಾ ಹರಟೆ ಹೊಡೆಯುತ್ತಿದ್ದೆವು. ಅವರ ಜೊತೆ ಮಾತಾಡುವಾಗ ರಾಜಕೀಯದ ಒಳನೋಟಗಳು ಗೊತ್ತಾಗುತ್ತಿದ್ದವು.

    ಮಾತಿನ ಮಧ್ಯೆ ಮಾಧ್ಯಮ ಕ್ಷೇತ್ರವೂ ವ್ಯಾಪಾರೀಕರಣದಿಂದ ಹೊರತಾಗಲಿಲ್ಲಎಂದು ನೊಂದುಕೊಳ್ಳುತ್ತಿದ್ದರು. ಆದರೆ, ಇದನ್ನೇ ನೆಪ ಮಾಡಿಕೊಂಡು ಮಾಧ್ಯಮಕ್ಕೆ ಅಧಿಕಾರಸ್ಥರು ಮೂಗುದಾರ ಹಾಕಲು ಹೊರಟರೆ ಸಹಿಸುವುದಿಲ್ಲ. ಮಾಧ್ಯಮದ ಸ್ವೇಚ್ಛಾಚಾರಕ್ಕೆ ನಿಯಂತ್ರಣ ಆ ಕ್ಷೇತ್ರದ ಒಳಗಿನಿಂದಲೇ ಆಗಬೇಕೇ ವಿನಾ ಸರಕಾರಗಳು ಮಾಡುವುದನ್ನು ಒಪ್ಪುವ ಮಾತೇ ಇಲ್ಲಎನ್ನುತ್ತಿದ್ದರು. ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಅವರು ವಿಧಾನಸಭೆಗೆ ಎಲೆಕ್ಟ್ರಾನಿಕ್‌ ಮೀಡಿಯಾದ ಕ್ಯಾಮರಾಗಳಿಗೆ ಪ್ರವೇಶ ನಿರ್ಬಂಧಿಸಿದಾಗ ಇದನ್ನು ವಿರೋಧಿಸಿದ್ದರು.


    ಕಳೆದ ವರ್ಷ ಒಂದು ದಿನ ಅವರ ಜೊತೆ ಮಾತಾಡುವಾಗ, ನೋಡ್ರೀ…ಈ ದೇಶಕ್ಕೆ ಒಬ್ಬ ಡಿಕ್ಟೇಟರ್‌ (ಸರ್ವಾಧಿಕಾರಿ) ಬೇಕು ಅಂದರು. ಏನ್‌ ಸರ್‌, ಹೀಗೆ ಹೇಳ್ತೀರಿ? ಅಂತ ನಾನು ಆಶ್ಚರ್ಯ ಚಕಿತನಾಗಿ ಕೇಳಿದಾಗ, ಇಲ್ಲಗುರುರಾಜ್‌, ನಮ್ಮ ಜನರೇ ಸರಿ ಇಲ್ಲ. ದುಡ್ಡು ತಗೊಂಡು ವೋಟ್‌ ಹಾಕ್ತಾರೆ. ಪ್ರಾಮಾಣಿಕತೆ, ಶಿಸ್ತು ಮರೆಯಾಗಿದೆ . ಯಥಾ ಪ್ರಜಾ…ತಥಾ ರಾಜಾ ಅಂತಾಗಿದೆ. ಜನರೇ ಭ್ರಷ್ಟರಾದರೆ ಏನ್‌ ಮಾಡ್ತೀರಿ? ಈ ದೇಶಕ್ಕೆ ಒಬ್ಬ ದಯಾಳು ಸರ್ವಾಧಿಕಾರಿ ಬೇಕು ( ಬೆನೆವೋಲೆಂಟ್‌ ಡಿಕ್ಟೇಟರ್‌). ಆಗಲೇ ನಮ್ಮ ಜನ ಸರಿ ಹೋಗೋದು ಅಂತ ಕಾಣುತ್ತೆ ಅಂತ ತುಂಬಾ ನೊಂದು ಮಾತಾಡಿದ್ದರು. ಅಂದರೆ, ಅವರೇನೂ ಮನಃಪೂರ್ವಕವಾಗಿ ಈ ಮಾತನ್ನು ಹೇಳಿರಲಿಲ್ಲ. ಆದರೆ, ವ್ಯವಸ್ಥೆ ಅಷ್ಟೊಂದು ಹದಗೆಟ್ಟು ಹೋಗಿದೆ. ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು ಕೆಲವು ವರ್ಷಗಳ ಮಟ್ಟಿಗಾದರೂ ದಯಾಳು ಸರ್ವಾಧಿಕಾರಿಯೊಬ್ಬನ ಅಗತ್ಯವಿದೆ ಎಂದು ಒಲ್ಲದ ಮನಸ್ಸಿನಿಂದಲೇ ಹತಾಶರಾಗಿ ಹೇಳಿದ್ದರು.

    ಭ್ರಷ್ಟ ವ್ಯವಸ್ಥೆಯ ಬಗ್ಗೆ ಅವರು ಅಷ್ಟೊಂದು ರೋಸಿ ಹೋಗಿದ್ದರು. ಮರುಕ್ಷಣವೇ ಜನತಂತ್ರ ವ್ಯವಸ್ಥೆಯಲ್ಲಿಏನಾದರೂ ಸುಧಾರಣೆ ಆಗಬಹುದು ನೋಡೋಣ. ಈ ಸುಧಾರಣೆ ಯುವಪೀಳಿಗೆಯವರಿಂದ ಮಾತ್ರ ಸಾಧ್ಯ ಎಂದಿದ್ದರು.

    ಕೃಷ್ಣ ಒಳ್ಳೆಯ ವಾಗ್ಮಿ ಅಲ್ಲ, ವೇದಿಕೆ ಮೇಲೆ ನಿಂತು ಮಾತಾಡುವ ಒಳ್ಳೆಯ ಭಾಷಣಕಾರರೂ ಅಗಿರಲಿಲ್ಲ. ಆದರೆ, ಅವರಾಡುವ ಮಾತು ಹೃದಯದಿಂದ ಬರುತ್ತಿದ್ದವು. ಅಂತರಂಗದ ಪಿಸು ಮಾತಾಗಿರುತ್ತಿದ್ದವು. ಒಡಲಾಳದ ನೋವಾಗಿರುತ್ತಿದ್ದವು. ಹೀಗಾಗಿ, ಜನರ ಹೃದಯಕ್ಕೆ ನೇರವಾಗಿ ನಾಟುತ್ತಿತ್ತು.

    ಕೃಷ್ಣ ಅವರು ಜನತಾ ಪರಿವಾರದಿಂದ ದೂರವಾದಾಗ ಬಿಜೆಪಿಯ ಕೆಲವು ಹಿರಿಯ ನಾಯಕರು ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೆ, ಅವರು ಬಿಜೆಪಿಗೆ ಹೋಗುವ ಮನಸ್ಸು ಮಾಡಲಿಲ್ಲ. ಸಿದ್ದರಾಮಯ್ಯ ಅವರ ಜೊತೆ ಮಾತಾಡಿ ಕಾಂಗ್ರೆಸ್‌ ಕೈ ಹಿಡಿದರು. ಕಾಂಗ್ರೆಸ್‌ ಸೇರುವುದು ಕೂಡ ಅವರ ಮನಸಾರೆಯ ತೀರ್ಮಾನವಾಗಿರಲಿಲ್ಲ. ಕೆಲವು ಬೆಂಬಲಿಗರ ಒತ್ತಾಯಕ್ಕೆ ಕಟ್ಟು ಬಿದ್ದು ಇಂತಹ ನಿರ್ಧಾರ ಕೈಗೊಂಡಿದ್ದರು. ಆದರೆ, ಕಾಂಗ್ರೆಸ್‌ ನಲ್ಲಿಅವರೇನೂ ಸಕ್ರಿಯರಾಗಿರಲಿಲ್ಲ. ರಾಜಕಾರಣ ದ ಮತ ಸಂತೆಯಲ್ಲಿ ಕಾಂಚಾಣದ ಥೈಲಿ ಕುಣಿದಾಗ ಕೃಷ್ಣ ಮೂಕಪ್ರೇಕ್ಷಕರಾಗಿ ಬಹಳ ವರ್ಷಗಳೇ ಆಗಿದ್ದವು. ಒಂದು ದಿನ ರಾಜಕೀಯ ನಿವೃತ್ತಿ ಘೋಷಿಸಿದರು. ಬೆಂಬಲಿಗರಿಗೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಅಂತ ಸ್ಥಿತಪ್ರಜ್ಞರಾದರು.

    ಹೀಗಿದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿಮಂಡ್ಯ ಕ್ಷೇತ್ರದಲ್ಲಿಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ ಕುಮಾರಸ್ವಾಮಿ ಹಾಗೂ ದಿವಂಗತ ಅಂಬರೀಶ್‌ ಅವರ ಪತ್ನಿ ಸುಮಲತಾ ಅಂಬರೀಶ್‌ ಅವರ ಮಧ್ಯೆ ಹಣಾಹಣಿ ಉಂಟಾದಾಗ ಇಬ್ಬರೂ ಕೃಷ್ಣ ಅವರ ಮನೆ ಬಾಗಿಲು ತಟ್ಟಿದರು. ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಂಡರು. ಆದರೆ, ಕೃಷ್ಣ ಅವರದು ಒಂದೇ ಮಾತು. ನಾನು ರಾಜಕಾರಣದಿಂದ ನಿವೃತ್ತ ನಾಗಿದ್ದೇನೆ. ನಿಮಗೆ ಒಳ್ಳೆಯದಾಗಲಿ ಎಂದು ಇಬ್ಬರಿಗೂ ಶುಭ ಹಾರೈಸಿ ಕಳುಹಿಸಿದ್ದರು.

    ಆದರೆ, ಚುನಾವಣಾ ಸಮಯದಲ್ಲಿಅವರ ಜೊತೆ ನಾನು ಮಾತಾಡುವಾಗ , ಸುಮಲತಾ ಅವರ ಬಗ್ಗೆ ಎದುರಾಳಿಗಳು ಆಕ್ಷೇಪಾರ್ಹ ಮಾತುಗಳನ್ನು ಆಡುತ್ತಿದ್ದುದನ್ನು ನೋಡಿ ಸಿಟ್ಟಾಗಿದ್ದರು. ಒಬ್ಬ ಹೆಣ್ಣು ಮಗಳ ಬಗ್ಗೆ ಹೀಗೆಲ್ಲಾಮಾತಾಡ್ತಾರಾ? ಅಂತ ನೊಂದಿದ್ದರು. ಅವನ ಮನಸ್ಸು ಸುಮಲತಾ ಅವರ ಗೆಲುವಿಗೆ ತುಡಿಯುತ್ತಿದುದು ಅವರ ಮಾತಿನಲ್ಲಿವ್ಯಕ್ತವಾಗಿತ್ತು.

    ಕೃಷ್ಣ ಅವರ ನಿಧನದ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಅವರೊಂದಿಗಿನ ಒಡನಾಟದ ನೆನಪುಗಳು ಸುರುಳಿ ಬಿಚ್ಚಿದವು.

    ಕೂಡ್ಲಿ ಗುರುರಾಜ
    ಕೂಡ್ಲಿ ಗುರುರಾಜ
    ಹಿರಿಯ ಪತ್ರಕರ್ತ ಡಾ. ಕೂಡ್ಲಿಗುರುರಾಜ ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ದಿ ಟೈಮ್ಸ್‌ ಆಫ್‌ ಇಂಡಿಯಾ (ಕನ್ನಡ), ವಿಜಯnext, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ವರದಿಗಾರ ಹಾಗೂ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿಯೂ ಪರಿಚಿತರು. ಇವರ ಪತ್ರಿಕಾ ಮಾಧ್ಯಮ: ವಾಣಿಜ್ಯದ ಆಯಾಮ ಕೃತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಹೊರತಂದಿದೆ.
    spot_img

    More articles

    2 COMMENTS

    1. ಕೃಷ್ಣ ಅವರೊಂದಿಗಿನ ಒಡನಾಟ ಆತ್ಮೀಯವಾಗಿ ಮೂಡಿ ಬಂದಿದೆ.

    2. ವಾಹ್.ಇದರಲ್ಲಿ ಒಂದು ಸಾಲು ತುಂಬಾ ಇಷ್ಟವಾಯ್ತು ಕೃಷ್ಣ ಅವರು ಬುದ್ದಿಯ ಮಾತಿಗಿಂತ ಹೃದಯದ ಮಾತಿಗೆ ಬೆಲೆ ಕೊಡುತ್ತಿದ್ದರು. ಇದು ಇವತ್ತಿನ ರಾಜಕಾರಣದಲ್ಲಿ ಕಷ್ಟ. ಎಲ್ಲಾ ಇದ್ದು ಸರಳವಾಗಿ ಬದುಕುವುದು ಸುಲಭದ ಮಾತಲ್ಲ. ಅದು ಕೆಲವರಿಗೆ ಮಾತ್ರ ಸಾಧ್ಯ. ಅಂತವರು ಅಗತ್ಯ ಈ ದಿನಗಳಲ್ಲಿ ಇರಬೇಕು. ಅವರ ಜೊತೆ ಒಡನಾಟ ವನ್ನು ಆತ್ಮೀಯವಾಗಿ ಬರೆದಿದ್ದಾರೆ

    LEAVE A REPLY

    Please enter your comment!
    Please enter your name here

    Latest article

    error: Content is protected !!