26.3 C
Karnataka
Saturday, November 23, 2024

    ಏನಾದರು ಆಗು ಮೊದಲು ಸುಜ್ಞಾನಿಯಾಗು

    Must read

    ಎಲ್ಲಿಯೂ ನಿಲ್ಲದಿರು,ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು…ಓ ನನ್ನ ಚೇತನ ಆಗು ನೀ ಅನಿಕೇತನ…..ಅಂದ ರಸ ಋಷಿ ಕವಿ ವಾಣಿ ಬಹಳ ದಿನದಿಂದ ಅವ್ಯಕ್ತ ಯೋಚನೆಯನ್ನು ನನ್ನಲ್ಲಿ ಹುಟ್ಟು ಹಾಕಿದೆ. ಕೊನೆ ಅನ್ನೋದು ಮುಟ್ಟಲಾಗದ ಅನಂತತೆಯಾ? ಅಥವಾ ಮುಟ್ಟುವ ಶಕ್ತಿ ಇದ್ದರೂ ಮುಟ್ಟಿ ನಿರಾಸೆ ಹೊಂದಬಾರದು ಅನ್ನುವ ಅರ್ಥವಾ? ಕೊನೆಯ ಉಸಾಬರಿಯೇ ಬೇಡ, ಇದ್ದಲ್ಲಿಯೇ ಮನೆ ಕಟ್ಟಿ ಕೊನೆ ಕಾಣುವ ಅಂದರೆ, ಎಲ್ಲಿಯೂ ನಿಲ್ಲಬೇಡ, ಮನೆ ಕಟ್ಟ ಬೇಡ ಅನ್ನುತ್ತಿದೆ ಕವಿ ವಾಣಿ! ಅನಂತತೆಯಲ್ಲಿ ಅನಂತನಾಗು, ಕೊನೆಯಾಗಬೇಡ ಎಂದಾರ್ಥವೇ?

    If Happiness is your destination, it’s along the road,not at the end of the road ಅಂದ ಮತ್ತೊಬ್ಬ ತತ್ವಜ್ಞಾನಿ ಇದನ್ನೇ ಹೇಳಿದನಾ? ವಿಶ್ರಮಿಸದೆ ನಿರಂತರತೆಯಲ್ಲಿ ಇರುವುದೇ ಸಂತೋಷ!! ಸರಳ ರೇಖೆಗೆ ಕೊನೆ ಉಂಟು, ವೃತ್ತಕ್ಕೆ ಕೊನೆ ಇಲ್ಲ! ಇಡೀ ವಿಶ್ವ, ಸೃಷ್ಟಿ ವೃತ್ತಾಕಾರವಾಗಿ, ಇಲ್ಲಿಯ ಜೀವನವೂ ಜೀವನ ಚಕ್ರವಾಯ್ತಾ?

    ಅನಂತತೆಯಲ್ಲಿ ಕೊನೆ ಅನ್ನೋದು ಇಲ್ಲ ಅಂತಾದ್ರೆ, ಸಾವು ಹೇಗೆ ಕೊನೆಯಾದೀತು?! ಕತ್ತಲು ದಿನದ ಅಂತ್ಯ. ರಾತ್ರಿಯ ಉಗಮ. ಬೆಳಕಲ್ಲಿ ಬದುಕುವವನಿಗೆ ಕತ್ತಲು ಅಂತ್ಯ. ಬೆಳಕು,ಕತ್ತಲೆಗಳ ಪರಿವೆ ಇಲ್ಲದವನಿಗೆ ಯಾವುದು ಅಂತ್ಯ, ಯಾವುದು ಉಗಮ? ಚೇತನವು ಇಂತಹ ಅಂತ್ಯ, ಉಗಮಗಳ ಪರಿವೆ ಮೀರಿ ಎಲ್ಲೂ ನಿಲ್ಲದೆ ಅನಿಕೇತನ ಆಗಬೇಕಾ? ಕೊನೆ ಇಲ್ಲದ ಪಯಣಕ್ಕೆ ಅರ್ಥ ಉಂಟಾ? ಹಾಗಾದರೆ ಈ ಪಯಣದ ಗುರಿ ಏನು? ಅನಂತತೆಯಲ್ಲಿ ಸ್ಪಷ್ಟ ಗುರಿ ಇಲ್ಲದ ಪಯಣಿಗನಾದ ಜೀವ ಹುಚ್ಚುಚ್ಚಾಗಿ ಆಡುತ್ತಿದ್ದಾನಾ?

    ಇಡೀ ಸೃಷ್ಟಿಯ ಜೀವರಾಶಿಗಳಲ್ಲಿ ಉನ್ನತ ಶ್ರೇಣಿಯ ವಿಕಸನ ಹೊಂದಿ ಪಂಚಭೂತಗಳನ್ನು, ಬ್ರಹ್ಮಾಂಡವನ್ನು ತನ್ನ ಸೀಮಿತ ಪಂಚೇಂದ್ರಿಯಗಳ ಮೂಲಕ ಅರಿತು ಅವುಗಳ ಮೇಲೆಯೇ ತನ್ನ ಅಸ್ತಿತ್ವನ್ನು ಹೇರಲು ಹೊರಟ ಜೀವವು ಎಲ್ಲಿಯ ತನಕ ಬಂದಿದೆ ಅಂದರೆ ತನಗೆ ಬಹುದೂರ ಅನ್ನಿಸಿದ್ದ ಈ ಭೂಮಂಡಲದ ಕ್ಷುಲ್ಲಕ ಧೂಳಿನ ವಿಸ್ತೀರ್ಣದಲ್ಲಿ ತನ್ನ ಸಂಪರ್ಕ ಸಾಧಿಸಿಕೊಂಡಿರುವುದು! ಸಾವಿರಾರು ಅಲ್ಲಲ್ಲ, ಕೋಟ್ಯಂತರ ಕಿಲೋಮೀಟರ್ ದೂರದ ತನಕ ಈ ಜೀವ ಇಂದು ಮಾತಾಡಬಲ್ಲ, ಅಲ್ಲಿಯ ತನ್ನಂತಹುದೇ ಜೀವಿಯ ಜೊತೆ ವ್ಯವಹರಿಸಬಲ್ಲ, ಅಲ್ಲಿಯ ಆಗು ಹೋಗುಗಳನ್ನು ಕುಳಿತಲ್ಲಿಂದಲೇ ನೋಡಬಲ್ಲ ಮತ್ತು ಈ ದೂರವನ್ನು ತನ್ನದೇ ಸೀಮಿತ ವೇಗದಲ್ಲಿ ಕ್ರಮಿಸಬಲ್ಲ ಕೂಡಾ!

    ನೆನಪಿರಲಿ ಈ ದೂರ ಬ್ರಹ್ಮಾಂಡದ ಒಂದು ಕಣದ ವಿಸ್ತೀರ್ಣಕ್ಕೂ ಸಮ ಅಲ್ಲ. ಇವೆಲ್ಲವೂ ಜೀವಿಯ ಪಂಚೇಂದ್ರಿಯ ಶಕ್ತಿಯ ಕ್ಷಮತೆಯನ್ನು ಹೆಚ್ಚಿಸಿವೆಯೇ ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ. ಇದರಿಂದ ಆದ ಅನಾನುಕೂಲದ ಕಡೆ ಗಮನ ಹರಿಸಿದರೆ ಗೊತ್ತಾಗುತ್ತೆ, ಈ ಭರದಲ್ಲಿ ತಾನು ಜೀವಿಸಲು ಯೋಗ್ಯವಿದ್ದಂತಾ ಒಂದೇ ಒಂದು ಜಾಗವಾದ ಈ ಭೂಮಿಯನ್ನು ಮತ್ತೆ ಸರಿಮಾಡಲಾಗದಂತೆ ಕೆಡಿಸಿ ಐದು ಭೂತಗಳಲ್ಲಿ ಎರಡು, ಗಾಳಿ,ನೀರನ್ನು ದುರ್ಲಭ ಮಾಡಿ ಆಹಾಕಾರ ಆಗುವಂತೆ ಮಾಡಿಬಿಟ್ಟಿದ್ದಾನೆ.

    ಮೂರನೇ ಭೂತವಾದ ಮಣ್ಣನ್ನು ನಾಶ ಮಾಡುವ ಎಲ್ಲ ಯೋಚನೆಯಲ್ಲಿದ್ದಾನೆ.ಎಷ್ಟೋ ಜೀವ ಸಂಕುಲಗಳನ್ನು ನಾಶ ಮಾಡಿಬಿಟ್ಟಿದ್ದಾನೆ. ಪ್ರಕೃತಿಯ ಮೇಲಿನ ದೌರ್ಜನ್ಯದ ಬಗ್ಗೆ ಹೇಳುವುದೇ ಬೇಡ. ಪಂಚ ಭೂತಗಳಲ್ಲಿ ಆಕಾಶ,ಬೆಂಕಿ ಇವನಿಗೆ ಇಲ್ಲಿಯವರೆಗೆ ನಿಲುಕಿಲ್ಲ, ಹಾಗಾಗಿ ಉಳಿದಿವೆ. ಇಂತಹ ಅತ್ಯಾಚಾರಿಯನ್ನು ಪ್ರಕೃತಿ ತನ್ನ ಮಾಡಿಲಲ್ಲಿಟ್ಟು ಇನ್ನೂ ಸಾಕುತ್ತಿರುವುದೇ ಆಶ್ಚರ್ಯ!

    ಪ್ರಕೃತಿ,ಪಂಚಭೂತಗಳನ್ನು ನಾಶ ಮಾಡುತ್ತಾ ಸಾಧಿಸಿದ ಈ ಕ್ಷುಲ್ಲಕನ ಅವಿವೇಕತನ ಎಂದಾದರೂ ಸಾಧನೆ ಆಗಬಹುದಾ?? ಹೋಗಲಿ ತಾನಾದರೂ ಸುಖವಾಗಿದ್ದಾನಾ? ಉಹೂಂ. ಮನುಷ್ಯ ಇಂದು ತಲುಪಿದ ಮಾನಸಿಕ ಅದಃಪತನವನ್ನು ತನ್ನ ವಿಕಸನದ ಪ್ರಯಾಣದ ಯಾವ ಅವಧಿಯಲ್ಲೂ ತಲುಪಿಲ್ಲ. ಆದರೂ ವಿಜಯದ ನಗು ಬಿರುತ್ತಿದ್ದಾನೆ. ತನ್ನ ಭಾರವನ್ನೇ ತಾಳದ ತಳಹದಿಯ ಮೇಲೆ ನಿಂತು,ಬ್ರಹ್ಮಾಂಡವನ್ನು ಹೊರುವ ಸಾಹಸ ಮಾಡುತ್ತಿದ್ದಾನೆ! ಮೂರ್ಖ ಅನ್ನಬೇಕೋ, ಅಮಾಯಕ ಅನ್ನಬೇಕೋ ಗೊತ್ತಾಗುತ್ತಿಲ್ಲ.

    ಪ್ರಕೃತಿಯ ಕೂಸಾದ ಮಾನವ ತನ್ನ ಮೆದುಳಿನ ಶಕ್ತಿಯನ್ನು ವಿರುದ್ಧ ದಿಕ್ಕಿನಲ್ಲಿ ಉಪಯೋಗಿಸುತ್ತಿದ್ದಾನಾ? ಎಲ್ಲ ಜೀವ ರಾಶಿಗಳನ್ನು ಸಲಹುವಂತೆ ಮಾನವನನ್ನೂ ಹೇಗೆ, ಎಷ್ಟರಮಟ್ಟಿಗೆ ಸಲುಹಬೇಕೆಂದು ಪ್ರಕೃತಿಗೆ ಗೊತ್ತಿತ್ತು. ಆದರೆ ಅತೀ ಬುದ್ಧಿವಂತಿಕೆಯಿಂದ ಇವನು ಪ್ರಕೃತಿಯ ವಿರುದ್ಧವೇ ಹೋಗಿ, ತನ್ನ ಆಯಸ್ಸು, ಪೀಳಿಗೆಗಳನ್ನು ಹೆಚ್ಚಿಸಿಕೊಂಡಿದ್ದಾನೆ. ಇದನ್ನು ಸಾಧನೆ ಅಂತ ತಿಳಿದು ಬೀಗುತ್ತಿದ್ದಾನೆ!

    ಇಂದಿಗೂ ಪ್ರಕೃತಿ ಸುಮ್ಮನೆ ಮುನಿದರೆ, ಹೇಳ ಹೆಸರಿಲ್ಲದಂತೆ ಆಗುವ ಮಾನವ ಪ್ರಕೃತಿಯನ್ನು ಮರೆತಂತೆ, ಅದರ ಅವಶ್ಯಕತೆಯೇ ಇಲ್ಲದವನಂತೆ ಧಿಮಾಕು ತೋರಿಸುತ್ತಾ, ಪ್ರಕೃತಿಯಿಂದ ಬಹು ದೂರ ನಡೆದು ಹೋಗಿ, ಹುಚ್ಚನಾಗಿದ್ದಾನೆ. ದೂರ ಸರಿದಂತೆಲ್ಲಾ ಕಾಣೆಯಾದ ನೀರಿಗೆ,ಗಾಳಿಗೆ ತತ್ತರಿಸುತ್ತಿದ್ದಾನೆ. ಮರ ಗಿಡ ಕಡಿದು ಮನೆಕಟ್ಟಿಕೊಂಡು, ತಣ್ಣನೆಯ ಗಾಳಿಗೆ ಹವಾ ನಿಯಂತ್ರಣ ವ್ಯವಸ್ಥೆ ಮಾಡಿಕೊಂಡು, ಇಂದು ಉಸಿರಾಡುವ ಗಾಳಿಗೆ ರೋಧಿಸುತ್ತಿದ್ದಾನೆ…. ಮನೆಯನೆಂದು ಕಟ್ಟದಿರು

    ಪ್ರಕೃತಿಗೆ ಯಾವುದೇ ತರಹದ ಧಕ್ಕೆ ತರದೆ, ಯಾವುದೇ ತರಹದ ಅದರ ವಿರುದ್ಧದ ಕೃತ್ಯ ಎಸಗದೆ, ಇಂದು ಮಾನವ ಸಾಧಿಸಿ ಬೀಗುತ್ತಿರುವ ಈ ದೂರ ಸಂಪರ್ಕವನ್ನು ಸಾವಿರ ಸಾವಿರ ವರ್ಷಗಳ ಹಿಂದೆ ಸಾವಿರಾರು ದಾರ್ಶನಿಕರು ಈ ಭೂಮಿಯಲ್ಲಿ ಬರೀ ಧ್ಯಾನದಿಂದ ಸಾಧಿಸಿ ತೋರಿಸಿ ಅದೂ ಉಪಯೋಗಕ್ಕೆ ಬರುವುದು ಅಲ್ಲ ಅಂತ ಹೇಳಿ ಮುಂದೆ ಹೋಗಿದ್ದಾರೆ…… ಎಲ್ಲಿಯೂ ನಿಲ್ಲದಿರು……

    ಪಂಚೇಂದ್ರಿಯಗಳಿಂದ ಕಾಣುವ ಪ್ರಪಂಚ ಸತ್ಯವಲ್ಲ. ಸತ್ಯವಾದ ಪ್ರಪಂಚವನ್ನು ಕಾಣ ಬಯಸಿದರೆ ಹೊರಗಣ್ಣು ಮುಚ್ಚಿ ಒಳಗಣ್ಣು ತೆರೆದು ನಿನ್ನಲ್ಲಿಯೇ ಇರುವ ನಿನ್ನನ್ನು ನೋಡು. ನಿನ್ನಲ್ಲಿಯ ಆಗಾಧ ಶಕ್ತಿ ನೋಡು. ಆ ಶಕ್ತಿಯೇ ಕೊನೆ ಇರದ ನಿನ್ನ ಪಯಣದ ಇಂಧನ. ಈ ಅಂತರ್ದರ್ಶನ ನೀನು ಹೊಂದಿದರೆ ಈ ಅನಂತದಲ್ಲಿ ಯಾರೂ ಎಲ್ಲಿಯೂ ನಿನ್ನನ್ನು ನಿಲ್ಲಿಸಲು ಸಾಧ್ಯವಿಲ್ಲ. ಕೊನೆ ಇರದ ಪಯಣದಲ್ಲಿ ಸದಾ ಸುಖಿ ನೀನು…… ಕೊನೆಯನೆಂದು ಮುಟ್ಟದಿರು….

    ವಿಜ್ಞಾನಿಗಳೆಂದರೆ ಋಷಿಗಳಿದ್ದಂತೆ. ಅವರ ಜ್ಞಾನವೆಲ್ಲವೂ ಸೃಷ್ಟಿಯ ಒಳಿತಿಗಾಗಿಯೇ. ಅವರು ಹೇಳುವ ವಿಷಯವು ಧರ್ಮಾತೀತವಾದದ್ದು. ಪ್ರಕೃತಿಯೇ ತನ್ನ ಹಲವಾರು ವಿಷಯಗಳನ್ನು ಸೃಷ್ಟಿಗೆ ತಿಳಿಸಲು ವಿಜ್ಞಾನಿಗಳನ್ನು ಸೃಷ್ಟಿಸಿಕೊಂಡಿದೆ ಅಂತೆಲ್ಲಾ ನಂಬಿಕೊಂಡಿದ್ದ ಕಾಲ ಒಂದಿತ್ತು. ಆದರೆ ಇಂದು ಅವರೂ ಪೇಟೆಂಟ್ ಅನ್ನುವ ನಮ್ಮ ಸಂಸ್ಕೃತಿ ಕಂಡು ಕೇಳರಿಯದ ಶಬ್ದವನ್ನು ಅಳವಡಿಸಿಕೊಂಡು ಮಾನವರ ರಕ್ತ ಹೀರುತ್ತಾ ಸೃಷ್ಟಿಯ ವೈರಿಗಳಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮನುಷ್ಯ ಯಾವ ಮಟ್ಟಕ್ಕೆ ಹೋದರೂ ತನ್ನ ದುರ್ಬುದ್ಧಿ ಎನ್ನುವ ಇಂದ್ರಿಯಾಧಾರಿತ ಗುಣದಿಂದ ಹೊರಬರಲು ಸಾಧ್ಯವೇ ಇಲ್ಲ ಎನ್ನುವುದನ್ನು ಸಾಬೀತುಮಾಡಿದ್ದಾನೆ. ತಾನು ಕಂಡುಕೊಂಡ ಅಗಾಧ ಶಕ್ತಿಗಳನ್ನು ಮಾನವ ಕುಲದ ಏಳಿಗೆಗೆ ಉಪಯೋಗಿಸದೆ, ಇತರೆ ತನ್ನದೇ ತಂತುಗಳಾದ ಮಾನವರನ್ನು ದಮನಿಸಲು,ಪ್ರಾಣಿಗಳಂತೆ ನಡೆಸಿಕೊಂಡು ಆಳಲು ತವಕಿಸುತ್ತಿದ್ದಾನೆ, ಅಧಮ ಮಾನವ.

    ಇದು ಎಂದೆಂದಿಗೂ “ವಿ” ಜ್ಞಾನವೇ….ಸುಜ್ಞಾನವಲ್ಲ. (ರೂಪ,ವಿರೂಪ, ಸುರೂಪ ಅರ್ಥದಲ್ಲಿ) ಮಾನವಕುಲವನ್ನು ಇಂದು ಸುಜ್ಞಾನಡೆದೆಗೆ ನಡೆಸುವ ಸುಜ್ಞಾನಿಗಳು ಬೇಕಾಗಿದ್ದಾರೆ, ವಿಜ್ಞಾನಡೆದೆಗೆ ನಡೆಸುವ ವಿಜ್ಞಾನಿಗಳಲ್ಲ ಅಂತ ಬಹು ನೋವಿನಿಂದ ಹೇಳಬೇಕಾಗಿದೆ. ಸುಜ್ಞಾನ ಮಾತ್ರ ಮಾನವನನ್ನು ತಾನಿದ್ದ ಸ್ತರದಿಂದ ಮೇಲಕ್ಕೆತ್ತಬಹುದೇ ವಿನಾ ವಿಜ್ಞಾನ ಅಲ್ಲ. ಸುಜ್ಞಾನಿಯಾಗದ ಜ್ಞಾನಿ,ಗುರು, ನಾಯಕ, ವಿಜ್ಞಾನಿ, ವೈದ್ಯ, ಎಂಜಿನಿಯರ್, ಮನುಕುಲಕ್ಕೆ ಮಾರಕ. ಹೀಗೇ ಮುಂದುವರಿದರೆ, ಸ್ವಾರ್ಥತೆಯ ಮನುಕುಲ ನಾಶವನ್ನು ಯಾರೂ ತಡೆಯಲಾರರು.

    Photo by Sovit Chetri from Pexels

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    4 COMMENTS

    1. ಚೇತನ, ಅನಿಕೇತನದ ಪರಿಕಲ್ಪನೆಯಲ್ಲಿ ವಿಶ್ವದ ಆಗಾಧತೆಯ ಸ್ಥೂಲ ಪರಿಚಯ ವಿಶಿಷ್ಟತೆ ಪಡೆದಿದೆ. ಭೌದ್ಧಿಕ ಬೆಳವಣಿಗೆ ಎಂಬ ಭ್ರಮೆಯಲ್ಲಿ ಪಂಚಭೂತಗಳ ಅತಿ ಅವಲಂಬಿನೆ ವಿನಾಶದ ದಿಕ್ಕಿನ ಬಗ್ಗೆ ಸೊಗಸಾದ ಪಲ್ಲವಿಯೊಂದಿಗಿನ ಮನವರಿಕೆ ಲೇಖನದ ಹೈಲೈಟ್. ಜಾಳಾದ ಭೌಧಿಕತೆಯನ್ನೆ ಮೆರೆಯುವ ಆಸ್ತಿಕ ಪ್ರಪಂಚಕ್ಕೆ ಜಾಳು ಅಭಿವೃದ್ಧಿಯ ವಿಡಂಬನೆ ಚಿಂತನೆಗೆ ಹಚ್ಚುತ್ತದೆ. ಒಟ್ಟಾರೆ ಉದ್ವೇಗದ ಮೆದುಳಲ್ಲಿ ಅನಿಕೇತನದತ್ತ ವ್ಯಾಪಿಸುವ ಚೇತನಕ್ಕೆ ಜಾಗೃತಿಯ ಸ್ಪರ್ಶ ಅನುರಣಿಸಿದೆ ಮಂಜು.

    2. ಎಂತ ವಿಶ್ಲೇಷಣೆ. ನಿಜವಾದ ಮಾತು. ಈಗೀನ ಈ ವಿಷಮ ಪರಿಸ್ಥಿತಿಗೇ ಹೊಂದುವಂತ ಲೇಖನ. ಮನುಷ್ಯ ಮೊದಲು manavanagabeku. ವಿದ್ಯೆ ಎಷ್ಟಿರಲಿ ಬಿಡಲಿ ಮೊದಲು ಮನುಷ್ಯ ನ ತರ ನಡೆದು ಕೊಳ್ಳಬೇಕು. ಆದರೆ ಅವನು ಮಾಡುತ್ತಿರುವ ಕೆಲಸ ತನ್ನನ್ನು ಸಲಹುತ್ತಿರುವ ಈ ಪ್ರಕೃತಿಯನ್ನೇ ಹಾಳು ಮಾಡ್ತಿರುವುದು. ನಿಮ್ಮ ಒಂದೊಂದು ಸಾಲು ಮಾನವನ ಅತೀಯಾದ ಬುದ್ದಿ ಹೇಗೆ ಅವನ ಅಂತ್ಯಕ್ಕೆ ಕಾರಣ. ಎನ್ನುವುದಕ್ಕೆ ಹಿಡಿದ ಕನ್ನಡಿಯಾಗಿದೆ. ಏನಾದರೂ ಆಗು ಮೊದಲು ಮಾನವನಾಗು. ಇಂತ ಲೇಖನ ದಾರಿದೀಪ ವಾಗಲಿ. ಧನ್ಯವಾದಗಳು. BM 🙏🙏🌹

    LEAVE A REPLY

    Please enter your comment!
    Please enter your name here

    Latest article

    error: Content is protected !!