ಸುಮಾ ವೀಣಾ
ಇಕ್ಕಲಾರದ ಕೈ ಎಂಜಲು-ಹರಿದಾಸ ಪರಂಪರೆಯ ಶ್ರೇಷ್ಟ ಕೀರ್ತನಕಾರರಲ್ಲಿ ಪುರಂದರ ದಾಸರ ಹೆಸರು ಅಗ್ರಮಾನ್ಯ. ವಿಡಂಬನಾತ್ಮಕವಾಗಿ ಬರೆದ ಅವರ “ ಇಕ್ಕಲಾರೆ ಕೈ ಎಂಜಲು” ಕೃತಿ ಪ್ರಸ್ತುತ ಸಮಾಜಕ್ಕೆ ಹೆಚ್ಚು ಅನ್ವಯವಾಗುತ್ತದೆ. ಪುರಂದರ ದಾಸರು ಉಪಾದಾನಕ್ಕೆ ಹೋದಾಗ ಭಿಕ್ಷೆ ನೀಡಲು ಇಷ್ಟವಿಲ್ಲದವರು ಮಕ್ಕಳು ಅಳುತ್ತಿದ್ದಾರೆ,ಅಟ್ಟದ ಮೇಲಿನ ಅಕ್ಕಿ ತೆಗೆಯಬೇಕು, ಹೊಟ್ಟೆ ನೋಯುತ್ತಲಿದೆ ಎಂಬ ನಾನಾ ಕಾರಣಗಳನ್ನು ನೀಡುತ್ತಾರೆ. ಕೆಲವರು ಮನೆಯ ಬಾಗಿಲನ್ನು ಹಾಕಿಕೊಂಡು ಬಿಡುತ್ತಾರೆ. ಈ ಸನ್ನಿವೇಶವನ್ನು ಪುರಂದರ ದಾಸರು “ಇಕ್ಕಲಾರೆ ಕೈ ಎಂಜಲು ಹೋಗೋ ದಾಸಯ್ಯ”. ಎಂಬ ಕೀರ್ತನೆಯಲ್ಲಿ ವಿಡಂಬಿಸಿದ್ದಾರೆ.
”ಕದವ ಮುಚ್ಚಿದಳು ಮಾಳಿ ಗಯ್ಯಾಳಿ ತನ್ನ ಮನೆಯೊಳಗಿನ ಪಾಪ ಹೊರಗೆ ಹೋದೀತೆಂದು”. ಎಂದು ಪುರಂದರದಾಸರು ಕೀರ್ತನೆಯ ಕಡೆಯಲ್ಲಿ ಮನುಷ್ಯನ ನೀಡದ ಗುಣವನ್ನು ಖಂಡಿಸುತ್ತಾರೆ. ಆದರೆ ಇಲ್ಲಿ “ಇಕ್ಕಲಾರದ ಕೈ ಎಂಜಲು” ಎಂದೇ ನಾವು ಅರ್ಥ ಮಾಡಿಕೊಳ್ಳಬೇಕು. ಇಕ್ಕಲಾರದ ಕೈ ಎಂಜಲು ಮನುಷ್ಯನ ಸಂಕುಚಿತ ಮನೋಭಾವವನ್ನು ಕುರಿತ ಮಾರ್ಮಿಕವಾದ ನುಡಿಗಟ್ಟೆಂದರೆ ತಪ್ಪಿಲ್ಲ. ಕಳ್ಳನಿಗೊಂದು ಪಿಳ್ಳೆನೆವ, ಕುಣಿಯಲಾರದವಳಿಗೆ ನೆಲಡೊಂಕು ಎಂಬ ಮಾತುಗಳೂ ಇದೇ ಸಾಲಿಗೆ ಸೇರುವವು. “ಇಕ್ಕಲಾರೆ ಕೈ, ಇಕ್ಕಲಾರದ ಕೈ” ಎರಡು ಪದ ದಾನ ಹೀನ, ದಾನ ಶೀಲ ಎಂಬ ಎರಡೂ ಪರಿಭಾಷೆಗಳನ್ನು ಸಂಕೇತಿಸುತ್ತದೆ.
ಇಕ್ಕಲಾರೆ ಕೈ ಎಂಜಲು,ಅನ್ಯ ಕೆಲಸವಿದೆ ಹಾಗೆ… ಹೀಗೆ…ಎಂದು ಬೇರೆ ಬೇರೆ ಕಾರಣಗಳನ್ನು ಹೇಳುವಂತಿಲ್ಲ. ಹಾಗಂದರೆ ಎಂಜಲು ಕೈಗಲ್ಲ ಮನಸ್ಸಿಗೆ ಎಂದಾಗುತ್ತದೆ. ಇತರರಿಗೆ ದಾನ ಕೊಡುವ ಶಕ್ತಿ ಇದ್ದಾಗ ಕೊಡಬೇಕು. ಆದರೆ ಕೊಟ್ಟದ್ದು ಗೋಪ್ಯವಾಗಿರಬೇಕು. ಅಪಾತ್ರರಿಗೆ ದಾನ ಕೊಡಬಾರದು. ಅಂದರೆ ಅರ್ಹತೆ ಇಲ್ಲದವರಿಗೆ ಒಂದು ವೇಳೆ ಕೊಟ್ಟರೆ “ಕೊಟ್ಟವನು ಕೋಣ ಇಸಿದುಕೊಂಡವನು ಜಾಣ” ಎಂದಾಗಿಬಿಡುತ್ತದೆ.
ದಾನ ಕೊಟ್ಟಾಗ ಯಾವುದೇ ಪ್ರತಿಫಲವನ್ನು ಅಪೇಕ್ಷಿಸಬಾರದು. ಗಳಿಸಿದ್ದರಲ್ಲಿ ಅಲ್ಪಾಂಶವನ್ನಾದರೂ ದಾನ ಮಾಡಬೇಕು. ಹಾಗಂತ ನಮಗೆ ಅನಗತ್ಯ ಎನ್ನಿಸಿದ್ದನ್ನು ಕೊಟ್ಟು ಬೀಗುವುದಲ್ಲ! ಗಳಿಸಿದ್ದೆಲ್ಲವೂ ನಮ್ಮದ್ದಲ್ಲ! ಅದರಲ್ಲಿ ಅನ್ಯರ ಪಾಲೂ ಇರುತ್ತದೆ. ಅದನ್ನೆಲ್ಲವನ್ನೂ ತಾನೇ ಅನುಭವಿಸುತ್ತೇನೆ ಯಾರಿಗೂ ಕೊಡಲಾರೆ ಎಂದರೆ ಕಡೆಗದು ಅನ್ಯರ ಪಾಲಾಗಿ. “ಕೂಡಿಟ್ಟವನು ಕೋಣ, ಅನುಭವಿಸುವವನು ಜಾಣ” ಎಂಬಂತಾಗುತ್ತದೆ.
ಸನಾತನ ಧರ್ಮದ ಮೊದಲ್ಗೊಂಡಂತೆ ಎಲ್ಲ ಧರ್ಮಗಳಲ್ಲಿಯೂ ದಾನಕ್ಕೆ ಅತ್ಯಂತ ಮಹತ್ವವಿದೆ. ದಾನ ಕೊಟ್ಟ ನಂತರ ಕೊಟ್ಟೆ ಎಂದು ಕೊರಗಿದರೆ ಮಾಡಿದ ದಾನ ವ್ಯರ್ಥವೆಂದೇ ತಿಳಿಯಬೇಕು. ಇದನ್ನೇ ಸರ್ವಜ್ಞ “ಕೊಟ್ಟು ಕುದಿಯಲು ಬೇಡ ಕೊಟ್ಟಾಡಿಕೊಳಬೇಡ”. ಎಂದಿರುವುದು.
ಮಾಡಿ ಕೆಟ್ಟರು ಮನವಿಲ್ಲದೆ | ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ |ಮಾಡುವ ನೀಡುವ ನಿಜಗುಣವುಳ್ಳೊಡೆ | ಕೂಡಿಕೊಂಡಿಪ್ಪ ನಮ್ಮ ಕೂಡಲ ಸಂಗಮ ದೇವ |– ಎಂದೂ ಬಸವಣ್ಣನವರು ದಾನದ ಹಿರಿಮೆಯನ್ನು ಕುರಿತು ಹೇಳುತ್ತಾರೆ. ಅಕ್ಕಮಹಾದೇವಿಯೂ ಬದುಕಿಗೆ ಯಾವುದು ಶೃಂಗಾರ ಎಂದು ಹೇಳುವ ವಚನದಲ್ಲಿ “ಕರಕ್ಕೆ ಶೃಂಗಾರ ಸತ್ಪಾತ್ರಕ್ಕೆ ನೀಡುವುದು” ಎಂದಿದ್ದಾರೆ.
ವಿದ್ಯಾದಾನ, ಅನ್ನದಾನ, ಕನ್ಯಾದಾನ ಇವುಗಳನ್ನು ಹೊರತುಪಡಿಸಿ ಆಧುನಿಕ ದಿನಮಾನಗಳಲ್ಲಿ ದಾನದ ಪರಿಪ್ರೇಕ್ಷ ಬದಲಾಗಿದೆ. ನೇತ್ರದಾನ, ದೇಹದಾನ, ಅಂಗಾಂಗ ದಾನ, ರಕ್ತದಾನ ಇತ್ಯಾದಿ ಹಾಗೆ ಕೋವಿಡ್ ಹತ್ತೊಂಬತ್ತರ ನಂತರ ಪ್ಲಾಸ್ಮದಾನ ಹೊಸದಾಗಿ ಸೇರ್ಪಡೆಯಾಗಿದೆ. ಏನೇ ದಾನ ನೀಡಿದರೂ ಅದರ ಪ್ರಯೋಜನವಾಗಬೇಕಷ್ಟೆ.
ದಾನಶೀಲತ್ವ ಒಳ್ಳೆಯಗುಣ ಇಲ್ಲದ್ದನ್ನು ತಂದು ದಾನ ನೀಡಲಾಗದು ಇರುವುದನ್ನು ನಿಷ್ಕಲ್ಮಶ ಮನಸ್ಸಿನಿಂದ ನೀಡಬೇಕು. “ದಾನಂ ಹಸ್ತಸ್ಯ ಭೂಷಣಂ”, “ಕೈಗೆ ದಾನವೇ ಭೂಷಣ”. ಕೊಡಲು ಮನಸ್ಸಿಲ್ಲದೆ ಕುಂಟು ನೆಪ ಹೇಳಿದರೆ ಆಗದು ಕೊಡೊಲೊಲ್ಲದಕೈ,ಇಕ್ಕಲಾರದ ಕೈ ಆಗಿಬಿಡುತ್ತದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
.