26.2 C
Karnataka
Thursday, November 21, 2024

    ಮಿಂಚಿನ ಓಟದ ರಾಜು

    Must read

    ಸುಮಾರು 30-35 ವರ್ಷಗಳ ಹಿಂದಿನ ಮಾತು. ಮೈಸೂರಿನ ಪತ್ರಿಕೋದ್ಯಮ ಒಂದು ರೀತಿ ಸಾಂಪ್ರದಾಯಕ ಚೌಕಟ್ಟಿನಲ್ಲಿಸಿಕ್ಕಿಹಾಕಿಕೊಂಡಿದ್ದ ಕಾಲಘಟ್ಟವದು. ಅಂತಹ ಸಂದರ್ಭದಲ್ಲಿಒಂದು ಕಡೆ ಪತ್ರಿಕೆಗಳ ಕಾಂಟೆಂಟ್‌ ವಿಚಾರದಲ್ಲಿ ಬದಲಾವಣೆ ಗಾಳಿ ಬೀಸಿ ಚಲನಶೀಲತೆ ದೊರೆತಾಗ ಮತ್ತೊಂದು ಕಡೆ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿಯೂ ಇಂಥದ್ದೇ ಕಾರ್ಯ ನಡೆದಿತ್ತು. ಇದರಲ್ಲಿಮುಂಚೂಣಿಯಲ್ಲಿದ್ದ ಪ್ರಮುಖರಲ್ಲಿ ನೇತ್ರಾ ರಾಜು ಕೂಡ ಒಬ್ಬರು.ಮೈಸೂರಿನಲ್ಲಿ ಮೇ 21 ರಂದು ಬದುಕೆಂಬ ರಂಗಸ್ಥಳದಿಂದ ನಿರ್ಗಮಿಸಿದ ರಾಜು ಮೈಸೂರಿನ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿಇಂತಹ ಚಲನಶೀಲತೆಗೆ ಗಟ್ಟಿಯಾಗಿ ನಿಂತವರು.

    ಅದು 1990ರ ದಶಕದ ಆರಂಭದ ವರ್ಷಗಳು. ದೇಶದಲ್ಲಿಉದಾರೀಕರಣದ ಗಾಳಿ ಬೀಸುತ್ತಿತ್ತು. ದಲಿತ, ರೈತ, ಬಂಡಾಯ ಚಳವಳಿ ಕಾವು ಪಡೆದಿತ್ತು. ಮೈಸೂರಿನ ಪತ್ರಿಕೋದ್ಯಮವು ಪತ್ರಿಕೆಗಳ ವಸ್ತು ವಿಷಯದಲ್ಲಿಮಗ್ಗಲು ಬದಲಿಸಿತ್ತು. ಹೊಸ ತಲೆಮಾರಿನ ಪತ್ರಕರ್ತರು ಪತ್ರಿಕಾ ಕ್ಷೇತ್ರ ಪ್ರವೇಶಿಸಿದ್ದರು. ಸಹಜವಾಗಿ ಹೊಸತನಕ್ಕೆ ತುಡಿದರು. ಇದು ಪತ್ರಿಕೆಗಳ ಕಾಂಟೆಂಟ್‌ನಲ್ಲಿಅಭಿವ್ಯಕ್ತವಾಗಿತ್ತು. ಆಗ ಛಾಯಾಚಿತ್ರ ಪತ್ರಿಕೋದ್ಯಮವೂ ತನ್ನ ಸಾಂಪ್ರದಾಯಕ ಚೌಕಟ್ಟಿನಲ್ಲೇ ಹೆಚ್ಚಾಗಿ ಗಿರಕಿ ಹೊಡೆಯುತ್ತಿತ್ತು. ಇಂತಹ ವೇಳೆ ಇದನ್ನು ಭೇದಿಸಿ ತಮ್ಮ ವಿಭಿನ್ನ ಶೈಲಿಯ ಫೋಟೋ ಜರ್ನಲಿಸಂನಲ್ಲಿ ಹೆಜ್ಜೆ ಗುರುತನ್ನು ದಾಖಲಿಸಿದವರು ನೇತ್ರಾರಾಜು.

    ಮೊದಲು ಇದಕ್ಕೆ ಚಾಲನೆ ಕೊಟ್ಟು ಕೆಲವು ವರ್ಷಗಳ ಕಾಲ ಆ ನಿಟ್ಟಿನಲ್ಲಿಸಾಗಿ ನಂತರ ಬೆಂಗಳೂರಿನಲ್ಲಿತಮ್ಮ ವೃತ್ತಿ ಜೀವನ ಮುಂದುವರಿಸಿದವರು ಹೆಸರಾಂತ ಪತ್ರಿಕಾ ಛಾಯಾಗ್ರಾಹಕ , ಸಾಗ್ಗೆರೆ ರಾಮಸ್ವಾಮಿ. ಮೈಸೂರಿನಲ್ಲಿಇದಕ್ಕೂ ಮುನ್ನ ಇಂತಹ ಪ್ರಯತ್ನಗಳು ನಡೆದಿರಲಿಲ್ಲಎಂದೇನೂ ಈ ಮಾತಿನ ಅರ್ಥವಲ್ಲ. ಆದರೆ, ಪತ್ರಿಕೆಗಳಲ್ಲಿಫೋಕಸ್‌ ಆಗಿ ಆ ಪ್ರಯತ್ನಗಳು ನಡೆಯಲು ಆರಂಭವಾಗಿದ್ದು 1990ರ ದಶಕದ ನಂತರ. ಎರಡು ಸಾವಿರದ ಇಸವಿ ನಂತರ ಅದು ಮತ್ತಷ್ಟು ಚಲನಶೀಲತೆ, ವಿಭಿನ್ನತೆ ಪಡೆದಿದ್ದು ಈಗ ಇತಿಹಾಸ.

    ನೇತ್ರಾ ರಾಜು ಅವರು ಸೆರೆಹಿಡಿದ ಚಿತ್ರ

    ಹೆಸರಾಂತ ಪತ್ರಿಕಾ ಛಾಯಾಗ್ರಾಹಕರಾದ ಮೈಸೂರಿನ ಎಸ್‌.ಎಂ.ಜಂಬುಕೇಶ್ವರ್‌, ಪ್ರಗತಿ ಗೋಪಾಲಕೃಷ್ಣ, ನಾಗೇಶ್‌ ಪಾಣತ್ತಲೆ, ಅನುರಾಗ್‌ ಬಸವರಾಜ್‌, ಶ್ರೀರಾಮ್‌, ಮಧುಸೂದನ್‌ ಹೀಗೆ ಮೈಸೂರಿನ ಅನೇಕ ಪತ್ರಿಕಾ ಛಾಯಾಗ್ರಾಹಕರು, ಈ ಹಿಂದೆ ಮೈಸೂರಿನಲ್ಲಿಕರ್ತವ್ಯ ನಿರ್ವಹಿಸಿದ ಪ್ರಜಾವಾಣಿಯ ವಿಶ್ವನಾಥ ಸುವರ್ಣ ಅವರು ಇದಕ್ಕೆ ತಮ್ಮದೇ ಆದ ಕಾಣಿಕೆ ನೀಡಿರುವುದು ಮೈಸೂರಿನ ಪತ್ರಿಕಾ ಇತಿಹಾಸದ ಪುಟಗಳಲ್ಲಿದಾಖಲಾಗಿದೆ.

    ಆಗೆಲ್ಲಾ1990ರ ದಶಕದಲ್ಲಿಸಂಯುಕ್ತ ಕರ್ನಾಟಕ ಹಾಗೂ ನಂತರ ಕನ್ನಡಪ್ರಭದ ಮೈಸೂರು ಜಿಲ್ಲಾವರದಿಗಾರನಾಗಿದ್ದ ನಾನು ಸುದ್ದಿ ಹಾಗೂ ಲೇಖನಗಳ ಫೋಟೋಗಳಿಗೆ ಹೆಚ್ಚಾಗಿ ಇಬ್ಬರ ಮೇಲೆ ಅವಲಂಬನೆ ಆಗುತ್ತಿದ್ದೆ. ಮೊದಲನೆಯದು ಪ್ರಗತಿ ಗೋಪಾಲಕೃಷ್ಣ. ಮತ್ತೊಬ್ಬರು ನೇತ್ರಾರಾಜು. ಆಗಾಗ್ಗೆ ಅನುರಾಗ ಬಸವರಾಜ್‌ ಕೂಡ ಫೋಟೋ ಕೊಡುತ್ತಿದ್ದದು ಉಂಟು. ಆಗ ಸಂಯುಕ್ತ ಕರ್ನಾಟಕ ಹಾಗೂ ಕನ್ನಡಪ್ರಭ ಪತ್ರಿಕೆಗಳಿಗೆ ಅವರದೇ ಪ್ರತ್ಯೇಕ ಫೋಟೋ ಜರ್ನಲಿಸ್ಟ್‌ಗಳಿರಲಿಲ್ಲ.

    ನೇತ್ರಾ ರಾಜು ತಮ್ಮ ಚಿಕಿತ್ಸಕ ದೃಷ್ಟಿಯಿಂದ ಸಮಾಜದ ಓರೆಕೋರೆಯನ್ನು ತಿದ್ದಲು ಪ್ರಯತ್ನಿಸಿದವರು. ತಮ್ಮ ಕಣ್ಣು ಮುಂದಿರುವ ವಸ್ತು ವಿಷಯವನ್ನು ವಿಭಿನ್ನ ಶೈಲಿಯಲ್ಲಿಮುಂದಿಡುವ ಕಲೆ ರಾಜು ಅವರಿಗೆ ಕರಗತವಾಗಿತ್ತು. ತಮ್ಮ ಫೋಟೋಗಳಿಗೆ ಯಾವತ್ತೂ ಬೈಲೈನ್‌ ಡಿಮಾಂಡ್‌ ಮಾಡಲಿಲ್ಲ. ಫೋಟೋ ಪಡೆದವರು ಕೊಟ್ಟಷ್ಟು ರೊಕ್ಕವನ್ನು ಕಿಸೆಗೆ ಹಾಕಿಕೊಳ್ಳುತ್ತಿದ್ದರು. ಫೋಟೋಗೆ ಕೊಟ್ಟ ಹಣ ಕಡಿಮೆಯಾಗಿದ್ದರೂ ಮರುಮಾತಾಡುತ್ತಿರಲಿಲ್ಲ. ತಮ್ಮ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾದರೆ ಮುಗುಳ್ನಕ್ಕು ಸುಮ್ಮನಾಗಿ ಬಿಡುತ್ತಿದ್ದರು. ಸನ್ಮಾನ, ಪ್ರಶಸ್ತಿಗಳೆಂದರೆ ಅವರು ಗಾವುದ ದೂರ.

    ಹಾಗೇ ನೋಡಿದರೆ ರಾಜು ಪ್ರೆಸ್‌ ಫೋಟೋಗ್ರಾಫರ್‌ಗಳ ಗುಂಪಿನಲ್ಲಿಕಾಣಿಸಿಕೊಂಡಿದ್ದು ತುಂಬಾ ಕಡಿಮೆ. ನಿಂತ ಜಾಗದಲ್ಲಿಹೆಚ್ಚು ಕಾಲ ನಿಲ್ಲುತ್ತಿರಲಿಲ್ಲ. ಚಹಾಗೆ ಕರೆದರೆ ಸರ್‌, ಅರ್ಜೆಂಟ್‌ ಕೆಲಸ ಇದೆ . ಇನ್ನೊಂದು ಸಲ ಟೀ ಕುಡಿಯೋಣ ಅಂತ ತಕ್ಷಣ ಜಾಗ ಖಾಲಿ ಮಾಡುತ್ತಿದ್ದರು. ಅಂತಹ ಅರ್ಜೆಂಟ್‌ ಕೆಲಸ ಏನೂ ಇರುತ್ತಿರಲಿಲ್ಲ. ತನ್ನ ಕ್ಯಾಮರಾ ಕಣ್ಣಲ್ಲಿಮತ್ತೊಂದು ದೃಶ್ಯವನ್ನು ಸೆರೆ ಹಿಡಿಯುವ ತುಡಿತ ಅದಾಗಿರುತ್ತಿತ್ತು ಅಷ್ಟೇ.

    ಅದೊಂದು ರೀತಿ ನಿರಂತರ ತಳಮಳದ ಸ್ಥಿತಿ. ನಿರಂತರ ತಳಮಳ ಇಲ್ಲದವನು ಕ್ರಿಯೇಟಿವ್‌ ಆಗಿರಲಾರ ಎಂಬ ಮಾತಿದೆ. ಅಂತಹ ತಳಮಳದಲ್ಲೇ ರಾಜು ಅದ್ಬುತ ಛಾಯಾಚಿತ್ರಗಳನ್ನು ಸಮಾಜದ ಮುಂದಿಟ್ಟಿದ್ದರು. ರಾಜು ಅಂತರ್ಮುಖಿಯಾಗಿದ್ದರು. ಆದರೆ, ಅವರು ಸೆರೆ ಹಿಡಿದ ಫೋಟೋಗಳು ಹೃದಯದ ಮಾತಾಗಿರುತ್ತಿದ್ದವು. ಅವರ ಫೋಟೋಗಳು ದೃಶ್ಯ ಕಾವ್ಯವಾಗಿರುತ್ತಿದ್ದವು, ಬಂಡಾಯದ ಕಿಚ್ಚಿನ ಅಭಿವ್ಯಕ್ತವಾಗಿರುತ್ತಿದ್ದವು, ಸಮಸಮಾಜದ ನಿರ್ಮಾಣದ ಆಶಯಗಳನ್ನು ಹೊತ್ತಿರುತ್ತಿದ್ದವು.

    ರಾಜು ಶ್ರಮಜೀವಿಯಾಗಿದ್ದರು.ನರಹಂತಕ ವೀರಪ್ಪನ್‌ ಸೆರೆ ಹಿಡಿಯುವ ಕಾರ್ಯಾಚರಣೆ ಕವರೇಜ್‌ ಎಂದರೆ ರಾಜು ಅವರಿಗೆ ಎಲ್ಲಿಲ್ಲದ ಹಿಗ್ಗು. ಕಾಡುಮೇಡು ಅಲೆಯಬಹುದು ಎಂಬ ಖುಷಿಯೋ ಖುಷಿ.
    ರಾಜು ತುಂಬಾ ಸಂಕೋಚದ ಸ್ವಭಾವದವರಾಗಿದ್ದರು. ಅಂದು ರಾತ್ರಿ ಒಬ್ಬರೇ ತೋಟದ ಮನೆಯಲ್ಲಿದ್ದಾಗ ಹೃದಯಾಘಾತವಾಗಿದ್ದರೂ ಮಧ್ಯರಾತ್ರಿಯಲ್ಲಿಏಕೆ ಮತ್ತೊಬ್ಬರಿಗೆ ತೊಂದರೆ ಕೊಡ್ಬೇಕು, ಬೆಳಗ್ಗೆ ಹೇಳಿದರಾಯಿತು ಎಂದು ಸುಮ್ಮನಾಗಿದ್ದಾರೆ. ಅಷ್ಟರಮಟ್ಟಿಗೆ ಅವರದು ಭಿಡೆ ಸ್ವಭಾವ ಅಂತೀರೋ ಅಥವಾ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವೋ ಗೊತ್ತಿಲ್ಲ.

    ಹೃದಯಾಘಾತವಾಗಿ ಎಷ್ಟೋ ತಾಸುಗಳ ನಂತರ ಅವರು ಆಸ್ಪತ್ರೆಗೆ ಬಂದಿದ್ದರು. ವೈದ್ಯರು, ಬದುಕಿಸುವ ಪ್ರಯತ್ನ ನಡೆಸಿದರೂ ಕೈಗೂಡಲಿಲ್ಲ. ತಮ್ಮ ಕ್ಯಾಮರಾ ಕ್ಲಿಕ್ಕಿಸಲು ಮಿಂಚಿನಂತೆ ಓಡಾಡುತ್ತಿದ್ದ ರಾಜು, ಜವರಾಯನ ಕರೆಗೂ ಮಿಂಚಿನಂತೆ ಓಡಿದ್ದರು.
    ರಾಜು ನಿಧನರಾದಾಗ ಅವರಿಗೆ 62 ವರ್ಷವಾಗಿತ್ತು. ಸಾಯುವ ವಯಸ್ಸಲ್ಲ.

    ನೇತ್ರಾ ಕಣ್ಮುಚ್ಚಿರಬಹುದು. ಆದರೆ, ಅವರ ಫೋಟೋಗಳು ಸದಾ ಮಾತಾಡುತ್ತಿರುತ್ತವೆ.

    ಕೂಡ್ಲಿ ಗುರುರಾಜ
    ಕೂಡ್ಲಿ ಗುರುರಾಜ
    ಹಿರಿಯ ಪತ್ರಕರ್ತ ಡಾ. ಕೂಡ್ಲಿಗುರುರಾಜ ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ದಿ ಟೈಮ್ಸ್‌ ಆಫ್‌ ಇಂಡಿಯಾ (ಕನ್ನಡ), ವಿಜಯnext, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ವರದಿಗಾರ ಹಾಗೂ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿಯೂ ಪರಿಚಿತರು. ಇವರ ಪತ್ರಿಕಾ ಮಾಧ್ಯಮ: ವಾಣಿಜ್ಯದ ಆಯಾಮ ಕೃತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಹೊರತಂದಿದೆ.
    spot_img

    More articles

    1 COMMENT

    1. ರಾಜು ಸೆರೆಹಿಡಿದ ಚಿತ್ರಗಳನ್ನು ಸೆರೆ ಹಿಡಿದ ರೀತಿ… ಬಹಳ ಚೆನ್ನಾಗಿ ಸೆರೆ ಹಿಡಿದು ಓದುಗರರಿಗೆ ತಿಳಿಸಿದ್ದೀರಿ… ರಾಜು ಅವರಿಗೆ ಶ್ರದ್ಧಾಂಜಲಿ… ಅವರ ಆತ್ಮಕ್ಕೆ ಶಾಂತಿ ಸಿಗಲಿ… 🙏

    LEAVE A REPLY

    Please enter your comment!
    Please enter your name here

    Latest article

    error: Content is protected !!