ಈ ಸ್ವಭಾವ ಚಿತ್ರವನ್ನು ಸದ್ಯದಲ್ಲೇ ಪ್ರಕಟವಾಗಲಿರುವ ನಾಡಿನ ಹೆಸರಾಂತ ಕಥೆಗಾರ ಕೆ. ಸತ್ಯನಾರಾಯಣ ಅವರು ಬರೆದ ಕಪಾಳಮೋಕ್ಷ ಪ್ರವೀಣ ಸ್ವಭಾವ ಚಿತ್ರಗಳ ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ. ಈ ಪುಸ್ತಕವನ್ನು ಕನ್ನಡದ ಪ್ರಸಿದ್ಧ ಪ್ರಕಾಶಕರಾದ ತಳುಕಿನ ವೆಂಕಣ್ಣಯ್ಯ ಗ್ರಂಥಮಾಲೆಯವರು ಪ್ರಕಟಿಸುತ್ತಿದ್ದಾರೆ. ಈ ಅಧ್ಯಾಯ ಅವರ ಸಂಪರ್ಕಕ್ಕೆ ಬಂದ ಆಗಿನ ಜನಪ್ರತಿನಿಧಿಗಳ ಚಿತ್ರಣವನ್ನು ಕಟ್ಟಿಕೊಡುತ್ತದೆ.
ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ 1954ರ ಏಪ್ರಿಲ್ 21ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸುವರ್ಣ ಪದಕದೊಂದಿಗೆ ಪದವಿ ಪಡೆದು, ಅಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವಿಸ್‌ಗೆ ಸೇರಿದ ಅವರು ಆದಾಯ ತೆರಿಗೆ ಇಲಾಖೆಯಿಂದ ನಿವೃತ್ತರಾಗುವಾಗ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಆಯುಕ್ತರಾಗಿದ್ದರು. ಸಣ್ಣಕತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರೆಹ, ವಿಮರ್ಶೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ 2013ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ.
ಶಾಸಕರು, ಸಂಸದರು, ಕಾರ್ಪೊರೇಟರ್‌ಗಳು ಇವರನ್ನೆಲ್ಲ ಹತ್ತಿರದಿಂದ, ದೂರದಿಂದ, ಓರೆನೋಟದಿಂದ ಕಾಣುವ, ಭೇಟಿ ಮಾಡುವ ಅವಕಾಶಗಳು ಬಂದಾಗಲೆಲ್ಲ, ಇಂತಹವರೆಲ್ಲ ವಿಶೇಷ ಜನ ಎಂದು ನನಗನಿಸುವುದೇ ಇಲ್ಲ. ಅವರನ್ನು ನಮ್ಮಂತೆಯೇ ಬಗೆದು ಸಮಾನರಾಗಿ ಕಾಣಲು ಹೊರಟರೆ, ಅವರಿಗೂ ಒಂದು ರೀತಿಯ ಮುಜುಗರ.
ಕೊಲ್ಹಾಪುರದಲ್ಲಿದ್ದಾಗ ಒಬ್ಬ ಸಂಸದರ ಷರ್ಟಿನ ವಿನ್ಯಾಸ ಚೆನ್ನಾಗಿದೆ ಎಂದು ಹೇಳಿದ್ದಕ್ಕೆ ಅವರು ಸಿಟ್ಟು ಮಾಡಿಕೊಂಡರು. ಇನ್ನೊಬ್ಬರು ಹಾಕಿಕೊಂಡಿರುವ ಬಟ್ಟೆ ಚೆನ್ನಾಗಿದ್ದರೆ, ಯಾರಾದರೂ ಹೊಗಳೇ ಹೊಗಳುತ್ತಾರಲ್ಲವೇ? ಆವಾಗ ಬಟ್ಟೆ ಹಾಕಿಕೊಂಡವರಿಗೂ ಖುಷಿಯಾಗುತ್ತದಲ್ಲವೇ ಎಂಬುದೇ ಪ್ರಶ್ನೆ. ಇನ್ನೊಂದು ಸಲ ಬೋರಿವಿಲಿಯಲ್ಲಿ ಒಬ್ಬ ಶಾಸಕರು ನನ್ನ ರೀತಿಯೇ ಎರಡು ಸಲ ಪಾನ್ ಹಾಕಿಕೊಂಡು ತುಟಿ ಕೆಂಪಾದ ಮೇಲೆ ನಾಲಿಗೆಯಿಂದ ತುಟಿ ಸವರಿಕೊಳ್ಳುತ್ತಾ ಸುಖ ಅನುಭವಿಸುತ್ತಿದ್ದರು. ಶಾಸಕರು, ಅವರ ಪಕ್ಕದಲ್ಲಿ ನಾನು, ನನ್ನ ಪಕ್ಕದಲ್ಲಿ ಸಹೋದ್ಯೋಗಿ. ಸಹೋದ್ಯೋಗಿ ಹತ್ತಿರ ನಾನು ಶಾಸಕರ ಬಗ್ಗೆ ಪಿಸುಮಾತಿನಲ್ಲಿ ಹೇಳಿದಾಗ, ಇಲ್ಲ, ಇಲ್ಲ, ಹಾಗೆ ಮಾತನಾಡಬಾರದು ಎಂದು ತುಟಿಯ ಮೇಲೆ ಬೆರಳಿಟ್ಟುಕೊಂಡರು.
ಏಕೆ ಹೀಗಾಗುತ್ತದೆ? ನನ್ನ ಅಧಿಕಾರ ಸ್ಥಾನದ ಬಗ್ಗೆ, ಬರಹಗಾರನಾಗಿರುವೆನೆಂಬ ಆತ್ಮವಿಶ್ವಾಸದಿಂದ ಹೀಗಾಗುತ್ತದೆಯೇ ಎಂದು ಮತ್ತೆ ಮತ್ತೆ ಯೋಚಿಸಿದಾಗ ಹೊಳೆದದ್ದು, ನಾನು ಬಾಲ್ಯದಲ್ಲಿ, ಯೌವ್ವನದಲ್ಲಿ ಕಂಡ ಜನಪ್ರತಿನಿಧಿಗಳ ಸ್ವಭಾವ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದೆಯೆಂಬುದು. ಇದೆಲ್ಲ ತೀರಾ ಹಿಂದಿನ ಕಾಲದ ಸಮಾಚಾರ ಎಂದು ತಿಳಿಯಬಾರದು. ತೀರಾ 1978, 1979ರಲ್ಲೂ ನಾನು ಒಂದು ಗೊಬ್ಬರದ ಅಂಗಡಿಯ ಮುಂದಿನ ಜಗುಲಿಯಲ್ಲಿ ಕುಳಿತುಕೊಂಡು ಶಾಸಕರೊಬ್ಬರ ಜೊತೆ ದಿನಪತ್ರಿಕೆ ಓದುತ್ತಿದ್ದೆ. ನನ್ನ ಹತ್ತಿರ ಒಂದು ಪುಟ ಇದ್ದರೆ, ಅವರ ಹತ್ತಿರ ಇನ್ನೊಂದು ಪುಟ. ಮುಂದಿನ ಪುಟದಲ್ಲಿದ್ದ ಸುದ್ದಿ ಮುಂದುವರೆದಿದ್ದರೆ, ಅವರು ನಾನು ಆ ಪುಟ ಓದಿ ಮುಗಿಸುವ ತನಕ ಕಾಯುತ್ತಿದ್ದರು.
ಜನಪ್ರತಿನಿಧಿಗಳ ಬಗ್ಗೆ ವಿಶೇಷ ಸಲಿಗೆಯಿದು ಎಂದು ಭಾವಿಸಬಾರದು. ನಮ್ಮ ಶಾಸಕರು ಪಕ್ಕದ ಗ್ರಾಮದಲ್ಲಿದ್ದವರು. ಅದೊಂದು ಸುಂದರವಾದ ಹಸಿರುವಾಣಿ ಗ್ರಾಮ. ಎಲ್ಲರ ಮನೆಯಲ್ಲೂ ಹಿತ್ತಲ ತುಂಬಾ ತರಕಾರಿಯಿತ್ತು. ತರಕಾರಿ ಅಂಗಡಿಯೇ ಇರಲಿಲ್ಲ. ಹಾಗಂತ ಅಂಚೆ ಕಚೇರಿಯೂ ಇರಲಿಲ್ಲ. ನಮ್ಮೂರಿನಲ್ಲಿದ್ದ ಅಂಚೆ ಕಚೇರಿಗೇ ಅವರ Post ಕೂಡ ಬರುತ್ತಿತ್ತು. ನಮ್ಮೂರ ಅಂಚೆ ಕಚೇರಿ ಕೂಡ Sub-Post Office ಮಾತ್ರವಷ್ಟೇ! ಇಡೀ ಗ್ರಾಮಕ್ಕೆ ಸೇರಿ ಒಂದು ನಾಲ್ಕೈದು ಕಾಗದಗಳು ಬರುತ್ತಿದ್ದವು ಅಷ್ಟೆ. ಪಕ್ಕದ ಗ್ರಾಮದ ನಾಯಕರು ಶಾಸಕರಾದರು ನೋಡಿ, ಬೆಂಗಳೂರು, ದೆಲ್ಲಿ, ಮೈಸೂರು ಎಲ್ಲ ಕಡೆಯಿಂದಲೂ ಅವರಿಗೆ ಕಾಗದಗಳು, ಪುಸ್ತಕಗಳು, ಪತ್ರಿಕೆಗಳು, ಗೆಜೆಟ್. ಪೋಸ್ಟ್ ಬ್ಯಾಗ್ ಗಾತ್ರ ಮಾತ್ರ ಊದುತ್ತಲೇ ಇತ್ತು. ಬ್ಯಾಗ್‌ನಿಂದ ಶಾಸಕರಿಗೆ ಸೇರಿದ ಎಲ್ಲ ಟಪಾಲನ್ನು ತೆಗೆದು ಒಂದು ಕಡೆ ಹರಡುವರು. ಅದನ್ನು ನೋಡಲೇ ಒಂದು ಸಂತೋಷ. ಗೆಜೆಟ್ಟನ್ನ ನಾನು ಮೊದಲು ನೋಡಿದ್ದು ಅಲ್ಲೇ. ಅದರ ಮೇಲೆ ಶಾಸಕರ ಹೆಸರು, ವಿಳಾಸ ನೋಡಿ ಪುಳಕಿತನಾಗುತ್ತಿದ್ದೆ. ಶಾಸಕರು ಎದುರಿಗೆ ಸಿಕ್ಕಾಗಲೆಲ್ಲ ಸೆಲ್ಯೂಟ್ ಹೊಡೆಯುವಾಗ ಗೆಜೆಟ್ ಕೂಡ ಕಣ್ಣೆದುರಿಗೆ ಬರೋದು.
ಈ ಶಾಸಕರು ದಿನವೂ ಎದುರಾಗುತ್ತಿದ್ದರು. ಎಸ್ಸೆಸ್ಸಲ್ಸಿ ಪರೀಕ್ಷೆ ಯಾವಾಗ, ಪಿಯುಸಿ ಪರೀಕ್ಷೆ ಯಾವಾಗ, ಯಾರು ಸಪ್ಲಿಮೆಂಟರಿ ಪರೀಕ್ಷೆ ಬರೆಯುತ್ತಿದ್ದಾರೆ ಎಂಬ ವಿವರಗಳು ಅವರಿಗೆ ಗೊತ್ತಿರುತ್ತಿತ್ತು. ಈ ಸಲವಾದರೂ ಪಾಸ್ ಮಾಡಿಕೊ, ಸುಮ್ಮನೆ ಮಾರ್ಚ್-ಸೆಪ್ಟೆಂಬರ್, ಸೆಪ್ಟೆಂಬರ್-ಮಾರ್ಚ್ ಅಂತ ದಂಡಯಾತ್ರೆ ಮಾಡಬೇಡ ಎಂದು ಗದರುತ್ತಿದ್ದರು. ಶಾಸಕರನ್ನು ನಿಲ್ಲಿಸಿಕೊಂಡು ಮನೆಯೊಳಗೆ ಆಗುತ್ತಿರುವ ದಾಯಾದಿ ಜಗಳವನ್ನೋ, ಗದ್ದೆಗೆ ನೀರು ಬಿಡುವುದರಲ್ಲಿ, ಕೊರಚುವದರಲ್ಲಿ ಮೂಡಿದ ತಗಾದೆಯನ್ನೋ ಗಂಟೆಗಟ್ಟಲೆ ಒಪ್ಪಿಸುವುರು, ಇದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಂಡು ಒಂದು ನ್ಯಾಯವನ್ನು ಕೂಡ ಶಾಸಕರು ಹೇಳುತ್ತಿದ್ದರು. ಯಾವ ಮದುವೆಗೆ ಬಂದಾಗ ಶಾಸಕರು ಎಷ್ಟು ಮುಯ್ಯಿ ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂಬುದನ್ನು ಊರಿನವರೆಲ್ಲ ಗಮನಿಸಿರುತ್ತಿದ್ದುದರಿಂದ, ಉಡುಗೊರೆ ನೀಡುವವರೆಲ್ಲ ಒಂದು ಸಮಾನತೆಯ ಸೂತ್ರವನ್ನು ಅನುಸರಿಸಲೇ ಬೇಕಾಗುತ್ತಿತ್ತು. ಸಣ್ಣ-ಪುಟ್ಟ ವ್ಯವಹಾರಗಳಿಗೂ ಶಾಸಕರ ಒತ್ತಾಸೆಗೆ, ಶಿಫಾರಿಸ್‌ಗೆ ಜುಲುಮೆ ಮಾಡುತ್ತಿದ್ದರು. ತಾಲೂಕ್ ಆಫೀಸಿಗೆ, ಜಿಲ್ಲಾಧಿಕಾರಿ ಕಚೇರಿಗೆ ಶಾಸಕರನ್ನು ಮುಂದಿಟ್ಟುಕೊಂಡು ಹೋಗಿಯೇ ಅಹವಾಲು ಹೇಳುತ್ತಿದ್ದರು. ಇಂಥ ಕಚೇರಿಗಳಲೆಲ್ಲ ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡು ಬಂದು ನಂತರ ಶಾಸಕರಿಗೆ ಅದರ ಬಗ್ಗೆ ದೂರು ಹೇಳಿ, ಅಧಿಕಾರಿಗೋ, ಗುಮಾಸ್ತರಿಗೋ ಕೊಟ್ಟಿರುವ ಲಂಚದ ಬಾಬ್ತನ್ನು ಹಿಂತಿರುಗಿ ಪಡೆಯಲು ಪ್ರಯತ್ನಿಸುತ್ತಿದ್ದರು. ಇಂತಹ ಕ್ಯಾತೆ, ಮಧ್ಯಸ್ಥಿಕೆಗೆ ಶಾಸಕರು ಒಪ್ಪದೆ, ಪದೇ ಪದೇ ಮನಸ್ತಾಪವಾಗೋದು.
ಇನ್ನೊಬ್ಬ ಶಾಸಕರಂತೂ ಬೆಳಿಗ್ಗೆ ಎದ್ದು ಸ್ನಾನ ಮಾಡಿ, ಪೂಜೆ ಮಾಡಿ, ನಾಷ್ಟಾ ಮುಗಿಸಿ, ಪೇಟ ಕಟ್ಟಿಕೊಂಡು, ಮನೆಯ ಮುಂದಿನ ಅಂಗಳದಲ್ಲಿ ನೂಲು ಮಂಚದ ಮೇಲೆ ಕೂರುತ್ತಿದ್ದರು. ನಾವು ಕಾಲೇಜಿಗೆ ಅವರ ಮನೆಯ ಮುಂದೆಯೇ ಹಾದು ಹೋಗಬೇಕಾಗಿತ್ತು. ಪ್ರತಿದಿನ ಬೆಳಿಗ್ಗೆ ಹೀಗೆ ಶಾಸಕರು ಜನಸೇವೆಗೆ ರೆಡಿಯಾಗಿ ಕುಳಿತಿದ್ದನ್ನು ನೋಡುತ್ತಿದ್ದರಿಂದ ರಾಜಕೀಯ ವಿಜ್ಞಾನದ ತರಗತಿಗಳಲ್ಲಿ ಜನಪ್ರತಿನಿಧಿಗಳ ಕರ್ತವ್ಯ ಮತ್ತು ಜವಾಬ್ದಾರಿ ಕುರಿತು ಹೇಳುತ್ತಿದ್ದ ಎಲ್ಲ ಸಂಗತಿಗಳೂ ನಮ್ಮ ಶಾಸಕರಿಗೂ ಹದಿನಾರಾಣೆ ಅನ್ವಯವಾಗುತ್ತಿತ್ತು. ಮೇಷ್ಟರು ಪುಸ್ತಕದಿಂದ ಹೇಳುತ್ತಿದ್ದುದಕ್ಕೂ, ಕಣ್ಣೆದುರಿಗೆ ಕಾಣುತ್ತಿರುವುದಕ್ಕೂ ಯಾವ ಬಿರುಕೂ ಕಾಣುತ್ತಿರಲಿಲ್ಲ. ಯಾವುದೇ ಸ್ತರದ ಸಾರ್ವಜನಿಕರು ಬಂದು ಕೂಗಲಿ, ಯಾವ ಕೆಲಸವೇ ಇರಲಿ, ಅವರೊಂದಿಗೆ ಶಾಸಕರು ಹೊರಟುಬಿಡುತ್ತಿದ್ದರು. ಕರೆದುಕೊಂಡು ಹೋಗಲು ಬಂದವರು ನಡೆದುಕೊಂಡು ಬಂದಿದ್ದರೆ, ಇವರದೂ ನಡಿಗೆಯೇ! ಜಟಕಾ ಅಂದರೆ ಜಟಕಾ, ಕಾರು ಇದ್ದರೆ ಕಾರು, ಬೆಂಗಳೂರಿಗೆ ಹೋಗಬೇಕು ಸರ್ಕಾರಿ ಬಸ್‌ನಲ್ಲಿ ಅಂದರೆ ಅದಕ್ಕೂ ಸೈ. ಬಸ್ ಹತ್ತಿದಾಗ ಎಲ್ಲ ಸೀಟುಗಳು ಭರ್ತಿಯಾಗಿದ್ದರೆ, ಯಾರಾದರೂ ಎದ್ದು ಶಾಸಕರಿಗೆ ಕೂರಲು ಅನುಕೂಲ ಮಾಡಿಕೊಡುತ್ತೀವೆಂದರೆ, ಅದಕ್ಕೂ ಒಪ್ಪುತ್ತಿರಲಿಲ್ಲ. ಹೀಗೆ ಓಡಾಡುವಾಗ ಮಧ್ಯಾಹ್ನದ ಊಟದ ಸಮಯವಾದರೆ, ಪ್ರಜೆಗಳ ಜೊತೆಯೇ ಊಟ. ಅಧಿಕಾರಿಗಳ ಬಳಿ ಹೋಗಿ, ನೋಡಿ ಇವರು ನಮ್ಮವರು, ಕೆಲಸ ಮಾಡಿಕೊಡಿ ಎಂಬ ಬೇಡಿಕೆ, ಆಗ್ರಹ.
ಒಂದು ಸಲ ಈ ಶಾಸಕರು ಊಟಕ್ಕೆ ಕೂತಿದ್ದರು. ಹಿಟ್ಟನ್ನು ಸೊಪ್ಪಿನ ಹುಳಿಗೆ ಅದ್ದಿ ಇನ್ನೇನು ಬಾಯಿಗೆ ಹಾಕಿಕೊಳ್ಳಬೇಕು ಅನ್ನುವ ಹೊತ್ತಿಗೆ ಜನರ ಒಂದು ಗುಂಪು ನುಗ್ಗಿತು. ಗ್ರಾಮದಲ್ಲಿ ಪೊಲೀಸರಿಂದ ಹಲ್ಲೆ. ಮಾನ್ಯರು ಊಟವನ್ನು ಮಾಡಲೇ ಇಲ್ಲ. ಎದ್ದು ಜನರ ಜೊತೆ ಎಸ್‌ಪಿ ಬಂಗಲೆಗೆ ಹೋದರು. ಸಾಹೇಬರು ಊಟ ಮಾಡುತ್ತಿದ್ದಾರೆ ಅಂದರೆ. ನಾನು ಕೂಡ ಊಟ ಮಾಡುತ್ತಿದ್ದವನು, ಮಧ್ಯದಲ್ಲಿ ಎದ್ದು ಬಂದಿದ್ದೇನೆ ಎಂದು ಬಂಗಲೆ ಒಳಗೆ ನುಗ್ಗಿದರು. ಸಾಹೇಬರು ಶಾಸಕರನ್ನು ಊಟಕ್ಕೆ ಆಹ್ವಾನಿಸಿರು. ಎಂತಹ ಅಧಿಕಾರಿಯನ್ನಾದರೂ ಏಕವಚನದಲ್ಲಿ ಆದರೆ ಪ್ರೀತಿಯಿಂದ, ಗೌರವದಿಂದ ಮಾತನಾಡಿಸುತ್ತಿದ್ದ ಶಾಸಕರು, ಇಲ್ಲ, ನಾನು ಮುಂದಿನ ತುತ್ತು ತಿನ್ನಬೇಕಾದರೆ ನೀನು ನಾನು ಬಂದ ಕೆಲಸ ಮಾಡಿಕೊಟ್ಟ ಮೇಲೇ ಎಂದು ಷರತ್ತು ಹಾಕಿ, ಅಲ್ಲಿಂದಲೇ ಗ್ರಾಮಕ್ಕೆ ಸಂದೇಶ ರವಾನಿಸಲು ಒಬ್ಬ ಇನ್‌ಸ್ಪೆಕ್ಟರನ್ನು ಮೋಟರ್ ಸೈಕಲ್‌ನಲ್ಲಿ ಕಳಿಸಿದರು.
ಇಂತಹ ಶಾಸಕರು ಬಯಲು ನಾಟಕ ನೋಡಲು ಬಂದಾಗ ಊರಿನ ಜನರು ನಟಿ-ನಟಿಯರಿಗೆ ಮುಯ್ಯಿ ಮಾಡುವಾಗ ಅವರ ವಸ್ತ್ರಗಳಿಗೆ ನೋಟನ್ನು ಪಿನ್ ಸಮೇತ ಚುಚ್ಚುತ್ತಿದ್ದರಲ್ಲ ಹಾಗೆಯೇ ಇವರಿಗೂ ಮುಯ್ಯಿ ಮಾಡುತ್ತಿದ್ದರು. ಈ ಶಾಸಕರಿಂದ ಕೆಲಸ ಆಗುತ್ತಿತ್ತೇ ಅಂದರೆ ಬಹುಪಾಲು ಸಂದರ್ಭಗಳಲ್ಲಿ ಇಲ್ಲ ಎಂಬುದೇ ಖಚಿತವಾದ ಉತ್ತರ. ಆದರೆ ಮನುಷ್ಯ ಜನಾನುರಾಗಿ. ಕ್ಷೇತ್ರದ ಎಲ್ಲ ಕುಟುಂಬಗಳೂ ಗೊತ್ತು. ಯಾರು ಯಾವ ಮನೆಯವರು, ಯಾವ ಬೀದಿಯವರು ಎಂಬುದು ಕೂಡ ಗೊತ್ತು. ಇವರ ವಿರುದ್ಧ ಚುನವಾಣೆಗೆ ನಿಲ್ಲುತ್ತಿದ್ದವರು, ಆಡಳಿತ ಪಕ್ಷದವರು, ಪದಾಧಿಕಾರಿಗಳು, ವಕೀಲರು ಜನರ ಜೊತೆ ಬೆರೆಯುವುದೇ ಕಷ್ಟ. ಪಕ್ಷದಲ್ಲಿ ಪ್ರಭಾವವಿದ್ದುದರಿಂದ ಕೆಲಸ ಆಗುತ್ತಿತ್ತು. ಆದರೆ ಜನ ಇವರ ಹತ್ತಿರ ಹೋಗುವುದಕ್ಕೆ ಇಷ್ಟ ಪಡುತ್ತಿರಲಿಲ್ಲ. ಚುನಾವಣೆ ಸಮಯ ಬಂದಾಗ ಈತನ ಪ್ರಚಾರವೂ ಜೋರಾಗಿರುವುದು. ಆದರೆ ಗೆಲ್ಲುತ್ತಿರಲಿಲ್ಲ. ಗೆಲ್ಲುತ್ತಿದ್ದವರು ಹಳೆ ಕಾಲದ ಮನೋಭಾವದ ಜನಾನುರಾಗಿ ಶಾಸಕರು. ಈ ಗ್ರಾಮದ ಮತ್ತು ಗ್ರಾಮ್ಯದ ಶಾಸಕರಿಗೆ ತಾನು ಆಧುನಿಕನಲ್ಲ, ಪದವೀಧರನಲ್ಲ ಎಂಬ ಪ್ರಜ್ಞೆ ಇತ್ತು. ಚುನಾವಣೆಯಲ್ಲಿ ಎದುರು ನಿಲ್ಲುತ್ತಿರುವವನು ವಿದ್ಯಾವಂತ, ಬುದ್ಧಿವಂತ, ಮುಂದೆ ಬರುತ್ತಾನೆ ಎಂಬುದೂ ಗೊತ್ತಿತ್ತು. ಯಾವುದಾದರೂ ಸಾರ್ವಜನಿಕ ಸಮಾರಂಭದಲ್ಲಿ ಶಾಸಕರಾಗಿ ಇವರಿಗೇ ಅಗ್ರ-ಅಧಿಕೃತ ಸ್ಥಾನ ಕೊಟ್ಟು ಕೂರಿಸಿದ್ದರೂ ಎದುರಾಳಿ ಬಂದಾಗ, ಆತನ ಆಧುನಿಕ ವ್ಯಕ್ತಿತ್ವಕ್ಕೆ ಗೌರವ ಕೊಟ್ಟು ಎದ್ದು ನಿಲ್ಲುತ್ತಿದ್ದರು. ಚೆನ್ನಾಗಿದ್ದೀರಾ ಗೌಡರೇ ಎಂದು ಕುಶಲೋಪರಿ ಕೇಳುತ್ತಿದ್ದರು.
ನಮ್ಮ ಗ್ರಾಮ್ಯ ಶಾಸಕರು ವಿಧಾನಸಭೆಯಲ್ಲಿ ಮಾತನಾಡಿದ ದಿವಸವೋ, ಪ್ರಶ್ನೆ ಕೇಳಿದ ದಿವಸವೋ ಪತ್ರಿಕೆಯಲ್ಲಿ ವರದಿಯಾದ ದಿವಸ ಆ ಪುಟವನ್ನು, ಸಾಲುಗಳನ್ನು ಹತ್ತು ಹತ್ತು ಸಲ ಓದುತ್ತಿದ್ದೆವು. ಶಾಸಕರು ದಿನವೂ ಎದುರಾಗುತ್ತಿದ್ದ ಮಾಮೂಲಿ ವ್ಯಕ್ತಿಯಾದರೂ, ವಿಧಾನಸಭೆಯಲ್ಲಿ ಮಾತನಾಡಿ ವಾಪಸ್ ಬಂದ ಸಂದರ್ಭದಲ್ಲಿ ಮತ್ತೆ ಹೋಗಿ ಅವರನ್ನೇ ವಿಶೇಷ ವ್ಯಕ್ತಿ ಎಂದು ನೋಡುತ್ತಿದ್ದೆವು. ನಿಜವಾಗಿಯೂ ಅವರ ಮುಖದಲ್ಲಿ ಒಂದು ಕಳೆ ಇರೋದು.
ಪಕ್ಕದ ಪಾಂಡವಪುರದಿಂದ ಶಾಸಕರಾಗಿ ಆಯ್ಕೆಯಾಗಿರುವವರು ಪಕ್ಷೇತರರಾದರೂ, ಕಾಂಗ್ರೆಸ್ಸಿನವರಿಗಿಂತ ಗಾಂಧೀವಾದಿಯೆಂದು, ಸೈಕಲ್‌ನಲ್ಲಿ ಓಡಾಡುತ್ತಾರೆಂದು, ಹೊಲ-ಗದ್ದೆ ಕೆಲಸ ಮಾಡಲು ಪಟಾಪಟಿ ಚಡ್ಡಿಯಲ್ಲಿ ಕೂಲಿಕಾರರ ಜೊತೆ ತಾವೂ ಸಮನಾಗಿ ನಿಲ್ಲುತ್ತಾರೆಂದು ಕೇಳಿದ್ದೆವು. ಇಂತಹ ಶಾಸಕರನ್ನು ಒಮ್ಮೆ ಹೋಗಿ ನೋಡಿಕೊಂಡು ಬರಲೇಬೇಕು ಎಂದು ಮೇಷ್ಟರು ಸೂಚಿಸಿದ್ದರಿಂದ ನಾವೆಲ್ಲಾ ನೆಲೆಮನೆ ಗ್ರಾಮಕ್ಕೆ ಹೋದರೆ, ಮಹಾನುಭಾವರು ಕೇವಲು ನೀರು ಗದ್ದೆಗೆ ಇಳಿದಿರಲಿಲ್ಲ ಅಷ್ಟೆ. ಜನರ ಒಂದು ಸಣ್ಣ ಗುಂಪಿನೊಡನೆ ಗದ್ದೆ ಬದುವಿನಲ್ಲಿದ್ದ ಹೊಂಗೆ ಮರದ ಕೆಳಗಿ ಕುಳಿತುಕೊಂಡು ಮಾತುಕತೆಯಲ್ಲಿ ತಲ್ಲೀನರಾಗಿದ್ದರು. ಇವರೇ ಶಾಸಕರು ಅಂತ ಒಬ್ಬರು ಗುರುತು ಹೇಳಿದ ಮೇಲೆ ನಮಗೆ ಗೊತ್ತಾಯಿತು. ಮುಂದಿನ ವಾಕ್ಯ ನಿಮಗೆ ಗೊತ್ತೇ ಇದೆ. ನಂತರದ ಚುನಾವಣೆಯಲ್ಲಿ ಇವರು ಗೆಲ್ಲಲಿಲ್ಲ. ಸೋತೆ ಎಂದು ಬೇಸರ ಕೂಡ ಮಾಡಿಕೊಳ್ಳಲಿಲ್ಲ. ತಾವಾಯಿತು ತಮ್ಮ ಹೊಲ-ಗದ್ದೆ ಕೆಲಸವಾಯಿತು, ಚರಕದಲ್ಲಿ ನೂಲುವುದಾಯಿತು. 1969ರಲ್ಲಿ ಗಾಂಧಿ ಶತಮಾನೋತ್ವವ ಆದಾಗ ನಮ್ಮ ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾನ್ಯರು ಮಾಡಿದ ಭಾಷಣದಿಂದ ನಾವು ವಿದ್ಯಾರ್ಥಿಗಳಿರಲಿ, ಕಾಲೇಜು ಮೇಷ್ಟರುಗಳು ಕೂಡ ಪ್ರಭಾವಿತರಾಗಿದ್ದೆವು.
ಇವರೆಲ್ಲ ಇಷ್ಟೊಂದು ಜನರ ಜೊತೆ ಬೆರೆಯುತ್ತಿದ್ದರಿಂದ ಭ್ರಷ್ಟರಾಗಿರುವುದು, ಆಸ್ತಿ ಮಾಡಿಕೊಳ್ಳುವುದು ಕೂಡ ಕಷ್ಟವಿತ್ತು. ಅದೂ ಅಲ್ಲದೆ, ಸಾರ್ವಜನಿಕರು ಕೂಡ ಇವರನ್ನು ಜನಪ್ರತಿನಿಧಿಗಳೆಂದು ಒಪ್ಪಿ ಗೌರವ ತೋರಿಸುತ್ತಿದ್ದುದು ನಿಜವಾದರೂ, ಇವನು ಜನಪ್ರತಿನಿಧಿ ನಿಜ, ಆದರೆ ಅದಕ್ಕಿಂತ ಮುಖ್ಯವಾಗಿ ನಮ್ಮವನು, ನಮಗೆ ಆಗಿ ಬರುವವನು ಎಂಬ ನಂಬಿಕೆ ಪ್ರಧಾನವಾಗಿತ್ತು. ಹಾಗಾಗಿ ಇವರ ಹಣದ ವಹಿವಾಟು, ಆಸ್ತಿ ವ್ಯವಹಾರದಲ್ಲಿ ಸಣ್ಣ-ಪುಟ್ಟ ಬದಲಾವಣೆಗಳಾದರೂ ಊರವರಿಗೆಲ್ಲ ಗೊತ್ತಾಗಿಬಿಡುತ್ತಿತ್ತು. ಜನರ ಬಾಯಿಗೆ ಬೀಳಲು ಶಾಸಕರು ಕೂಡ ಹೆದರುತ್ತಿದ್ದರು. ಜಿಲ್ಲಾ ಕೇಂದ್ರದಲ್ಲೋ, ಬೆಂಗಳೂರಿನಲ್ಲೋ ಮನೆ ಮಾಡಿಕೊಂಡು ವಾಸಿಸುತ್ತಾ, ಚುನಾವಣೆ ಸಮಯದಲ್ಲಿ ಮಾತ್ರ ಭೇಟಿ ನೀಡುವ ಕ್ರಮ ಇನ್ನೂ ಜಾರಿಗೆ ಬಂದಿರಲಿಲ್ಲ.
ಇಂತಹ ಶೀಲ-ಸ್ವಭಾವಗಳ ಜನಪ್ರತಿನಿಧಿಯನ್ನು ವ್ಯಕ್ತಿತ್ವ ನಿರ್ಮಾಣವಾಗುವ ನಿರ್ಣಾಯಕ ವರ್ಷಗಳಲ್ಲಿ ನೋಡಿದ್ದರಿಂದ ಮುಂದೆ ಕೂಡ ನನಗೆ ಇವರನ್ನು ವಿಶೇಷ ವ್ಯಕ್ತಿಗಳೆಂದು ಪರಿಗಣಿಸುವ ಮನೋಭಾವವೇ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಬಂದ ನಾನು ಮುಂದೆ ಮೈಸೂರಿನಲ್ಲಿ ಓದುವಾಗ ನಮ್ಮ ವಿಭಾಗದ ಸಮಾರಂಭಕ್ಕೆ ಹಿಂದೆ ಅರ್ಥ ಸಚಿವರಾಗಿದ್ದು ನಂತರ ವಿರೋಧಪಕ್ಷದ ನಾಯಕರಾಗಿದ್ದವರನ್ನು ಹೋಟೆಲಿನಿಂದ ಕರೆದುಕೊಂಡು ಹೋಗುವಾಗ, ಕಾರಿನಲ್ಲಿ ಹಿಂದುಗಡೆ ಸೀಟಿನಲ್ಲಿ ಅವರ ಪಕ್ಕವೇ ಕುಳಿತುಕೊಳ್ಳಲು ಹೊರಟೆ. ಮುಖ ಸಿಂಡರಿಸಿಕೊಂಡ ಮಹಾನುಭಾವರು, ಹೋಗಿ ಮುಂದೆ ಡ್ರೈವರ್ ಪಕ್ಕದಲ್ಲಿ ಕುಳಿತುಕೊ ಎಂದು ಸೂಚಿಸಿದರು. ಹಾಗಿದ್ದರೂ ಮುಂದೆ ಅವರ ವರ್ತನೆ ಮತ್ತು ಮಾತುಕತೆ ಎಲ್ಲ ಸೌಜನ್ಯಪೂರ್ಣವಾಗಿಯೇ ಇತ್ತು. ನೀನು ಪ್ರಜೆ ಆಗಿರುವುದರಿಂದ ನನ್ನಿಂದ ದೂರವಿರು ಎಂದು ಹೇಳಿಸಿಕೊಂಡಂತಹ ಸಂದರ್ಭ ಬಹಳ ಅಪರೂಪ. ಒಂದು ಸಂದರ್ಭದಲ್ಲಿ ನಾಯಕರೊಬ್ಬರು ಹೋಟೆಲ್ ಮುಂದೆ ಸಿಕ್ಕಿ ನನಗೆ ಬೇಕಾಗಿದ್ದ ಶಿಫಾರಸ್ ಪತ್ರವೊಂದನ್ನು ಕಾರಿನ ಬಾನೆಟ್ ಮೇಲೆ ನೋಟ್‌ಪ್ಯಾಡ್ ಇಟ್ಟುಕೊಂಡು ಬರೆದುಕೊಟ್ಟರು.
ಮುಂದೆ ನಾನು ಕೇಂದ್ರ ಸರ್ಕಾರದಲ್ಲಿ ಅಧಿಕಾರಿಯಾದ ಮೇಲೂ ಭೇಟಿ ಮಾಡಿದ, ಒಡನಾಡಿದ ಬಹುಪಾಲು ಜನಪ್ರತಿನಿಧಿಗಳು, ನಾಯಕರು ಸೌಜನ್ಯದಿಂದಲೇ ವರ್ತಿಸುತ್ತಿದ್ದರು. ಇದಕ್ಕೆ ಬಹುಪಾಲು ನಾನು ಅಧಿಕಾರಿಯಾಗಿದ್ದುದು ಕಾರಣವಾಗಿರಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಒಡನಾಡುವಾಗ ಯಾರು ಯಾವ ರೀತೀಯಲ್ಲಿ ವರ್ತಿಸಬೇಕೆಂಬುದಕ್ಕೆ ಮಾದರಿಗಳಿರುತ್ತವೆ, ಸೂತ್ರಗಳಿರುತ್ತವೆ. ಅದರ ಪ್ರಕಾರವೇ ಎಲ್ಲವೂ ನಡೆದುಕೊಂಡು ಹೋಗುತ್ತದೆ. ಇದು ನಿಜವಾದರೂ, ನಾನು ಇದುವರೆಗೆ ಬರೆದಿರುವುದೆಲ್ಲ ಗಾಂಧಿಯುಗದ, ಸ್ವಾತಂತ್ರ್ಯ ಚಳುವಳಿಯ ಪ್ರಭಾವ ಇನ್ನೂ ತೀವ್ರವಾಗಿದ್ದ ೧೯೬೦ರ ದಶಕದ, ೭೦ರ ದಶಕದ ಮೊದಮೊದಲ ವರ್ಷಗಳ ಕನಸಿನ ಯುಗದ ಶಾಸಕರ, ಜನಪ್ರತಿನಿಧಿಗಳ ಸ್ವಭಾವ ಚಿತ್ರವೆಂದು ತಪ್ಪು ತಿಳಿಯಬಾರದು. ಬೆಂಗಳೂರಿನಲ್ಲಿ ಕೂಡ ನಮ್ಮ ಬಡಾವಣೆಯಲ್ಲಿದ್ದ ಒಬ್ಬ ಶಾಸಕರು ಬೆಳಿಗ್ಗೆ ಎದ್ದು ಸೀಲ್, ಸ್ಟ್ಯಾಂಪ್ ಪ್ಯಾಡ್, ಲೆಟರ್ ಹೆಡ್ ಇಟ್ಟುಕೊಂಡು ಕುಳಿತುಕೊಂಡು ಗಂಟೆಗಟ್ಟಲೆ ಶಿಫಾರಸ್ ಪತ್ರಗಳನ್ನು ಬರೆದುಕೊಡುತ್ತಿದ್ದರು. ನಾನು ಒಮ್ಮೆ ಯಾವುದೋ ಒಂದು ದಾಖಲೆಯನ್ನು ದೃಢೀಕರಿಸಿಕೊಳ್ಳಲು ಇವರ ಸಹಿ ಪಡೆಯಲು ಹೋದಾಗ, ರಿಕ್ಷಾ ಚಾಲಕನೊಬ್ಬನಿಗೆ ನನ್ನ ಕೆಲಸ ಮಾಡಿಕೊಡುವುದಕ್ಕಿಂತ ಮುಂಚೆ ಒಂದು ಶಿಫಾರಸ್ ಪತ್ರ ಬರೆದುಕೊಟ್ಟರು. ಅದನ್ನು ಓದಿದ ರಿಕ್ಷಾ ಚಾಲಕ ಹೀಗೆ ಬರೆದುಕೊಟ್ಟರೆ ಕೆಲಸ ಆಗುವುದಿಲ್ಲ, ಇನ್ನೂ Strong ಆಗಿ ಬರೆದುಕೊಡಿ ಎಂದು ರೇಗಿ ಜುಲುಮೆ ಮಾಡಿ ಮತ್ತೊಂದು ಶಿಫಾರಸ್ ಪತ್ರ ಬರೆಸಿಕೊಂಡ. ಇದೇ ಬಡಾವಣೆಯಲ್ಲಿದ್ದ ಸಂಸದರೊಬ್ಬರು ಯಾವಾಗಲೂ ಗಾಂಧಿ ಬಜಾರ್, ಶಂಕರಪುರಂ, ಚಾಮರಾಜಪೇಟೆ ಬೀದಿ ಬೀದಿಗಳಲ್ಲಿ ತಮ್ಮ ಸಹಚರರೊಡನೆ ಪಟಪಟ ನಡೆದುಕೊಂಡೇ ಓಡಾಡೋರು.
ತುರ್ತು ಪರಿಸ್ಥಿತಿ ಸಮಯದಲ್ಲಿ ಶ್ರೀಮಂತ, ಸಜ್ಜನ ಶಾಸಕರೊಬ್ಬರು ಒಂದು ಸಂಘಟನೆಯ ಕೆಲಸಕ್ಕೆ ಅವರ ಬಂಗಲೆಯ ಹಿಂದಿನ ಔಟ್ ಹೌಸನ್ನು ಬಿಟ್ಟುಕೊಟ್ಟರು. ನಾವೆಲ್ಲ ಅಲ್ಲಿಗೆ ಹೋದಾಗ, ಮಾನ್ಯರು ತಮ್ಮ ದಿವಾನ್‌ಖಾನೆಯಿಂದ ಬಂದು ನಮ್ಮೊಡನೆಯೇ ಬೆರೆಯುತ್ತಿದ್ದರು. ಮುಂದೆ ಅವರು ಸಚಿವರು, ಪಕ್ಷದ ಅಧ್ಯಕ್ಷರೂ ಆದರು. ಕೆಲವು ವರ್ಷಗಳ ನಂತರ ಇಪ್ಪತ್ತು ಮೂವತ್ತು ಜನರು ಭಾಗವಹಿಸಿದ್ದ ಒಂದು ಸಾಹಿತ್ಯ ಪರಿಷತ್ತಿನ ಆಪ್ತ ಸಮಾರಂಭದಲ್ಲಿ ಸಿಕ್ಕಿದ್ದೆವು. ನಮಸ್ಕಾರ ಹೇಳಿ, ಹಿಂದಿನ ಗುರುತನ್ನು ನಾನು ಹೇಳುವ ಮುನ್ನವೇ ಅವರೇ ಎಲ್ಲ ವಿವರಗಳನ್ನು ನೆನೆಸಿಕೊಂಡರು.
ನಾಗಪುರದಲ್ಲಿ ಎರಡು ಮೂರು ವರ್ಷ ಕೆಲಸ ಮಾಡುತ್ತಿದ್ದಾಗ ನಾನು ದೆಹಲಿಗೆ ಹೋಗುವ ರೈಲಿನಲ್ಲೇ ಆಡ್ವಾಣಿಯವರು ಕೂಡ ಅನೇಕ ಸಲ ಪ್ರಯಾಣ ಮಾಡುತ್ತಿದ್ದರು. ಸಹ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುತ್ತಿದ್ದರು. ಪ್ರಯಾಣದುದ್ದಕ್ಕೂ ಓದುತ್ತಿದ್ದ ಅವರಿಗೆ ರಾತ್ರಿ ದೀಪವನ್ನು ಹೆಚ್ಚು ಹೊತ್ತು ಉರಿಸುವುದರಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗಬಹುದಲ್ಲವೇ ಎಂದು ಯಾವಾಗಲೂ ಪರಿತಪಿಸುತ್ತಿದ್ದರು. ಪ್ರಯಾಣದುದ್ದಕ್ಕೂ ಸಿಗುವ ಸ್ಟೇಷನ್‌ಗಳಲ್ಲಿ ಅವರನ್ನು ಭೇಟಿ ಮಾಡಲು ನೂರಾರು ಕಾರ್ಯಕರ್ತರು ಬಂದುಬಿಡುತ್ತಿದ್ದರು. ಅವರ‍್ಯಾರೂ ರೈಲಿನೊಳಗೆ ಬರದಂತೆ, ದಾಂದಲೆ ಮಾಡದಂತೆ ಇವರೇ ಎಚ್ಚರಿಸುತ್ತಿದ್ದರು. ಮತ್ತೆ ರೈಲು ಹೊರಟ ಮೇಲೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಎಲ್ಲರೊಡನೆ ಮಿತವಾಗಿ ಬೆರೆಯುತ್ತಾ ತಮ್ಮ ಪಾಡಿಗೆ ತಾವಿರುತ್ತಿದ್ದರು.
ಸಮಕಾಲೀನ ಜನಪ್ರತಿನಿಧಿಗಳನ್ನು ಕುರಿತು ಕೂಡ ನನಗೆ ಇದೇ ರೀತಿಯ ಸ್ವಭಾವ ಚಿತ್ರ ಬರೆಯಲು ಆಸೆಯಾಗುತ್ತದೆ. ಹಾಗೆ ನಾನೆ ಬರೆಯಲಾರೆ ಎಂಬುದು ಕೂಡ ಗೊತ್ತಿದೆ. ಆದರೆ ಹಾಗೆ ಬರೆಯಲು ಸಾಧ್ಯವಾಗದೆ ಇರುವುದಕ್ಕೆ ಜನಪ್ರತಿನಿಧಿಗಳು ಮಾತ್ರ ಕಾರಣವಲ್ಲ, ನಾವು, ನೀವು ಮತ್ತು ಸಮಾಜ ಹಾಗೂ ಕಾಲಧರ್ಮ ಕೂಡ ಕಾರಣವಾಗಿರಬಹುದು ಎಂದು ಹೊಳೆದಾಗ ಇದು ಸ್ವಭಾವ ಚಿತ್ರದ ಬರವಣಿಗೆಗೆ ಸಂಬಂಧಪಟ್ಟ ಸಂಗತಿ ಮಾತ್ರವಲ್ಲ ಎಂಬುದು ಹೊಳೆದಾಗ, ಮನಸ್ಸಿಗೆ ಖೇದವಾಗುತ್ತದೆ.
ಈ ಲೇಖನ ಓದಿದಾಗ ನನಗೆ ನೆನಪಾಗಿದ್ದು ಕರ್ನಾಟಕ ಮುಖ್ಯಮಂತ್ರಿ ಆಗಿದ್ದ ಶ್ರೀ ರಾಮ ಕೃಷ್ಣ ಹೆಗಡೆಯವರು.ನನ್ನ ತಂದೆಗೆ ತಾಂತ್ರಿಕ ಕಾರಣಗಳಿಂದ ಒಂಭತ್ತು ತಿಂಗಳು ಸಂಬಳ ಆಗಲಿಲ್ಲ ಅದೇ ಸಮಯದಲ್ಲಿ ಮುಖ್ಯಮಂತ್ರಿ ಆಗಿದ್ದ ಅವರು ತರಂಗ ವಾರ ಪತ್ರಿಕೆಯಲ್ಲಿ ಬಂದಿದ್ದ ಸಂದರ್ಶನದಲ್ಲಿ ದೂರು ಬಂದ ಪ್ರತೀ ಪತ್ರವನ್ನು ತಾನೇ ಖುದ್ದಾಗಿ ನೋಡಿ ಬಗೆಹರಿಸುವೆ ಅಂತ ಹೇಳಿದ್ದರು. ಆಗ ನಾನು ನೀವು ಸಂಬಳ ನೀಡಿದರೆ ಬಸ್ಸಿನಲ್ಲಿ ಹೋಗಿ ಪರೀಕ್ಷೆ ಬರೆಯುವೆ.ಇಲ್ಲವಾದರೆ ನಡೆದುಕೊಂಡು ಹೋಗಿ ಪರೀಕ್ಷೆ ಬರೆಯುವೆ ಅಂತ ಹೇಳಿ ಬರೆದಿದ್ದೆ.ಒಂದುವಾರದಲ್ಲಿ ಅವರ ಎಲ್ಲಾ ಸಿಬ್ಬಂದಿ ವರ್ಗ ದವರಿಗೂ ಸಂಬಳ ಆಯಿತು.ಅಲ್ಲದೇ ನನಗೆ ಪ್ರತ್ಯೇಕ ಪತ್ರ ಕೂಡ ಬರೆದಿದ್ದರು.
ಇನ್ನು ನನ್ನವರು ರೇಷ್ಮೆ ಇಲಾಖೆ ಕೆಲಸ ಅವರನ್ನು ಅವಧಿ ಮುನ್ನ ವರ್ಗ ಮಾಡಿದ್ದರು.ಆವಾಗ ನನ್ನವರು ಸಾಮಾನ್ಯ ನೌಕರ ನಾನು ನ್ಯಾಯ ಕೇಳಿ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ.ನನ್ನ ವರ್ಗಾವಣೆ ರದ್ದು ಮಾಡಿ ಎಂದು ಬರೆದಿದ್ದರು. ಆವಾಗಲೂ ಇವರ ವರ್ಗಾವಣೆ ರದ್ದು ಮಾಡಿದ್ದರು.
ರಾಮಕೃಷ್ಣ ಹೆಗಡೆಯವರ ಮನೆ ಮೇಲೆಒಂದು ಹಾಲ್ ಇತ್ತು ಊರಿನ ಕಡೆಯವರು ಬಂದವರಿಗೆ ಉಳಿದುಕೊಳ್ಳುವ ವ್ಯವಸ್ಥೆ ಇತ್ತು.
ಮತ್ತೊಬ್ಬರು ಕಾಗೇರಿ. ನಾನು ಅವರ ರಾಜಕೀಯ ಬಗ್ಗೆ ಹೇಳುತ್ತಿಲ್ಲ. ಆದರೆ ಊರಿನಲ್ಲಿ ಅವರು ಯಾವುದೇ ಕಾರ್ಯಕ್ರಮಕ್ಕೆ ಬಂದರೂ ಎಲ್ಲರೂ ಕಾಗೇರಿ ಭಾವ ಬಂಜಾ ಅಂತಾರೆ ಹೊರತು ಯಾರೂ ಶಾಸಕ ಅಂತ ನೋಡಲ್ಲ.ನಾನೊಮ್ಮೆ ಬೆಂಗಳೂರಿಗೆ ಬರುವಾಗ ಕಾಗೇರಿಯವರು ಕೂಡ ಸಾಮಾನ್ಯ ಪ್ರಯಾಣಿಕರ ತರ ಬಸ್ಸಿನಲ್ಲಿ ಬಂದಿದ್ದರು. ಈ ಲೇಖನ ಓದಿದಾಗ ಇದೆಲ್ಲಾ ನೆನಪಾಯಿತು
ಶಾಸಕರ ಸ್ವಭಾವ ಓದಿದೆ.60-70ರ ದಶಕದ ಸಾಮಾನ್ಯ ಶಾಸಕರ ಚಿತ್ರ ಅಂದಿನ ಸಮಾಜದ ಸ್ವಭಾವ ತೋರಿಸುತ್ತದೆ. ಸಮಕಾಲೀನ ಚಿತ್ರ ಬರೆಯಲಾರೆ ಎಂದಾಗ ಬದಲಾವಣೆ ಎದ್ದು ಕಾಣುತ್ತದೆ. ನಿಮ್ಮ ನೆನಪಿನ ಶಕ್ತಿ ಅಗಾಧವಾಗಿದೆ. ಒಳ್ಳೆಯ ರಚನೆ.