21.5 C
Karnataka
Saturday, September 21, 2024

    ಉಪಕಾರ ಮಾಡಲು ಸಾಧ್ಯವಾಗದೇ ಇದ್ದರೂ ಉಪದ್ರವ ಮಾಡುವ ಗೋಜಲಿಗೆ ಹೋಗಬಾರದು

    Must read

    ಸುಮಾ ವೀಣಾ

    ಮದ್ದಳೆಯ ಹೊಕ್ಕಿಲಿಯಂತೆ– ಈ ಮಾತು ಮೂರನೆ ಮಂಗರಸನ ‘ನೇಮಿಜಿನೇಶ’ ಕೃತಿಯಲ್ಲಿ ಬರುತ್ತದೆ.   “ಮದ್ದಳೆಯ ಹೊಕ್ಕಿಲಿಯಂತೆ” ಇದೊಂದು ಅರ್ಥಧ್ವನಿಯುಳ್ಳ ವಾಕ್ಯ. “ ಆವಕಡೆಯೆಂದು ಕಾಣದೆ ತಲಹಳಂಗೊಳುತ್ತಾ ವನಾಂತರದೊಳು  ಮದ್ದಳೆಯ ಹೊಕ್ಕಿಲಿಯಂತೆ “ ಎಂದಿದೆ.

    ಮದ್ದಳೆ   ತಾಳವಾದ್ಯದ ಒಂದು ಬಗೆ  ಅಂಥ ತಾಳ ವಾದ್ಯದೊಳಕ್ಕೆ ಪ್ರವೇಶಿಸಿದ    ಇಲಿಯನ್ನು   ವಿಷಮ ಪರಿಷ್ಥಿತಿಯನ್ನು  ಎದುರಿಸುವ ಮಾನವರಿಗೆ ಹೋಲಿಸಿ ಹೇಳುವುದಿದೆ.  ಒಂದುವೇಳೆ ಅಂಥ ಪರಿಸ್ಥಿತಿಯಲ್ಲಿ  ಸಿಕ್ಕರೆ ಅಲ್ಲಿಯೇ  ಇರಲಾಗದು ತಪ್ಪಿಸಿಕೊಂಡು ಹೊರಬರಲಾಗದು ಅತ್ತ ಪುಲಿ ಇತ್ತ ದರಿ ಎನ್ನುವ ಹಾಗಾಗುತ್ತದೆ.

    ಏನೇ ಕೆಲಸ ಮಾಡಬೇಕಾದರೂ ಪೂರ್ವತಯಾರಿಯೊಂದಿಗೆ ಮಾಡಬೇಕು ಇಲ್ಲವಾದರೆ ಅರ್ಥನಷ್ಟ,ಸಮಯನಷ್ಟ ಉಂಟಾಗುತ್ತದೆ. ಹಾಗೆ ಸಮಸ್ಯೆಯೊಂದರಲ್ಲಿ ಸಿಕ್ಕು ತಹತಹ ಪಡುವ   ಜನರನ್ನು ಈ ಮಾತು ಉದಾಹರಿಸುತ್ತದೆ. ಇನ್ನು ಇನ್ಯಾರದೋ ಮಾತಿನಿಂದ ಪ್ರಲೋಭನೆಗೊಂಡು ಅವರ ಮಾತಿಗೆ ಮರುಳಾಗಿ  ತೊಳಲಾಟದಲ್ಲಿ ಸಿಲುಕುವವರನ್ನು , ಗೊತ್ತು ಗುರಿಯಿಲ್ಲದ ಸ್ಥಳ, ವಿಷಜಾಲದಲ್ಲಿ ಸಿಲುಕು ಮೋಸ ಹೋಗುವವರನ್ನು ಕಂಡಾಗ  ಮದ್ದಳೆಯೊಳಗೆ ಸಿಲುಕಿದ  ಇಲಿಯದೇ ಪರಿಸ್ಥಿತಿ. ಅಪ್ಪಿ ತಪ್ಪಿ ಏನೋ ಕುತೂಹಲದಿಂದ ಇಲಿಗಳು ಮದ್ದಳೆ ಪ್ರವೇಶಿಸಿದರೆ ಅದನ್ನು ಉಪಯೋಗಿಸುವವರು  ಬಿಡುತ್ತಾರೆಯೇ ಅದನ್ನು ಹಿಡಿದು ಕೊಲ್ಲುವವರೆಗೆ ಬಿಡುವುದಿಲ್ಲ.   ಇಲ್ಲಿ  ಇಲಿಯ ಚೆಲ್ಲಾಟದಿಂದ ಮದ್ದಳೆ ನುಡಿಸುವವರಿಗೂ ನಷ್ಟ  ಇಲಿಗೂ ಪ್ರಾಣಭೀತಿ  ಒಟ್ಟಾರೆ ಉಭಯ ಭೀತಿ.

    ಯಾರಿಗಾದರೂ ನಾವು ಉಪಕಾರ  ಮಾಡಲು ಸಾಧ್ಯವಾಗದೇ ಇದ್ದರೂ ಉಪದ್ರವ ಮಾಡುವ ಗೋಜಲಿಗೆ ಹೋಗಬಾರದು. ಹಾಗಾದರೆ ಈ ರೀತಿಯ ಕಷ್ಟಗಳು ಎದುರಾಗುತ್ತವೆ ಎಂಬ ಎಚ್ಚರಿಕೆಯನ್ನು ಮೂರನೆಯ ಮಂಗರಸ ಕೊಟ್ಟಿದ್ದಾನೆ.  ಈ ವಾಕ್ಯವನ್ನು ಓದುವಾಗ ವೀರ ಅಭಿಮನ್ಯು ನೆನಪಿಗೆ ಬರುತ್ತದೆ ದ್ರೋಣಾಚಾರ್ಯರು  ರಚಿಸಿದ ಚಕ್ರವ್ಯೂಹದಲ್ಲಿ  ಪ್ರವೇಶಿಸುತ್ತಾನೆ ಆದರೆ ಹೊರಗೆ ಬರಲಾಗುವುದಿಲ್ಲ ಧಿರೋದಾತ್ತತೆಯಿಂದ  ಹೋರಾಡುತ್ತಾನೆ ಮಡಿಯುತ್ತಾನೆ.  ಆದರೆ ಮದ್ದಳೆಯಲ್ಲಿ ಸಿಕ್ಕ ಇಲಿಗೆ  ಹೋಲಿಸಲಾಗುವುದಿಲ್ಲ.  ಕಾರಣ  ತನ್ನವರಿಗಾಗಿ  ಪ್ರವೇಶಿಸಿದ ಅಭಿಮನ್ಯವಿನಲ್ಲಿ  ಹೋರಾಟದ ಛಲವಿತ್ತೇ  ವಿನಃ ಅನ್ಯ ಆಲೋಚನೆಗಳಿರಲಿಲ್ಲ. 

    ಈಗಿನ ಕೊರೋನಾ ಕಾಲಕ್ಕೂ ಇದನ್ನು ಹೋಲಿಸ ಬಹುದು. ಸರಕಾರ ಮಾಡಿರುವ ನಿಯಮಗಳನ್ನು ಪಾಲಿಸದೆ ಕೊರೋನಾ ಎಂಬ ಮದ್ದಳೆಯಲ್ಲಿ ಸೇರಿದಂತ ಇಲಿಯಂತೆ ನಾವಾಗವುದು ಬೇಡ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಮುಂತಾದ ನಿಯಮಗಳನ್ನು ಪಾಲಿಸಿ ಕೊರೋನವನ್ನು ಹೊಡೆದೋಡಿಸೋಣ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!