ಶಿವಪ್ರಸಾದ್ ಬೋಳಂತೂರು
ದಿನಕಳೆದಂತೆಲ್ಲಾ ನಿರಾಳವಾಗಿ ಸಾಗುತ್ತಿದ್ದ ಜೀವನ ಇಂದು ಕಳೆಗುಂದಿದೆ. ನೆಮ್ಮದಿಯ ಭರವಸೆ ಕಳಕೊಂಡಿದೆ. ಅಭಿವೃದ್ದಿಯ ಹೊಂಗನಸ ತೆರೆದಿಟ್ಟು, ಮೇರುಶಿಖರವಾಗಲೋಸುಗ ಆ ದಿಕ್ಕಿನಲ್ಲಿ ಅಂಬೆಗಾಲಿಡುತ್ತಿದ್ದಂತೆ, ದೇಶ ಜಾರದಿದ್ದರೂ ಕಾಲೆಳೆಯುವ ಪ್ರಯತ್ನ ಕೆಲವರಿಂದ ಸದ್ದಿಲ್ಲದೆ ನಡೆಯುತ್ತಿದೆ. ಯಾರಿಗೇನು ನೀಡಿತ್ತು ಭಾರತವೆಂದಾದರೆ, ಸಂಸ್ಕೃತಿ ನೀಡಿಲ್ಲವೆ, ಬಂದ ಪಯಣಿಗರಿಗೆ ನೆಲೆಯನಿತ್ತಿಲ್ಲವೆ, ಕಷ್ಟದಲ್ಲಿ ಸಹಾಯಹಸ್ತ ಚಾಚಿಲ್ಲವೆ…ಆದರೂ ಇನಿತಿದೇಕೆ ಸಂಕಷ್ಟ!
ವೇದೋಪನಿಷತ್ತು, ಧರ್ಮಗ್ರಂಥವನ್ನು ನೀಡಿ, ಅದರೊಳಗಿನ ಗಂಧಪರಿಮಳವನ್ನು ಪಸರಿಸಿ, ಆಘ್ರಾಣಿಸಿದ ಮೇಲೂ ಧೈರ್ಯವನ್ನೇಕೆ ಕಳೆದುಕೊಂಡಿತು ನನ್ನ ದೇಶ! ಮತ್ತೇಕೆ ನನ್ನವರು ಅಪಪ್ರಚಾರದಲಿ ಸಿಲುಕಿ, ನಲುಗಿ ಪ್ರಾಣವನ್ನೆ ಬಿಡುವಷ್ಟು ಅಬಲರಾಗುತ್ತಿದ್ದಾರೆ! ಮನೆಯೊಳಗೆ ಕುಳಿತಂತೆ ಭವಿಷ್ಯದ ಕೆಟ್ಟ ಕನಸು ಕಾಣುತ್ತಾ, ಪೂರ್ವಜರು ಕೊಟ್ಟಿಹ ಕೊಡುಗೆಗಳನ್ನು ನೆನೆಯದೆ ಭವಿಷ್ಯದ ಚಿಂತಕರಾಗುವಲ್ಲಿ ಮುನ್ನುಡಿ ಬರೆಯುತ್ತಿದ್ದಾರೆ. ಬಿಟ್ಟೂಬಿಡದೆ ಸಂಕಷ್ಟ ಎದುರಾಗಿರುವಾಗ, ದುಃಖದಲ್ಲಿ ಕುಂದಿ ಅಬಲರಾಗಿರುವ ನಿಶ್ಯಕ್ತ ಜೀವಗಳಿಗೆ ಶಕ್ತಿ ತುಂಬಿ ಸಬಲರನ್ನಾಗಿಸಬೇಕಿದೆ.
ಕೊರೋನಾ ಬಂದಾಗಿನಿಂದಲೂ ನಾವು ಕೈಗೊಳ್ಳುವ ಕೆಲಸಕ್ಕೆ ನೂರೆಂಟು ವಿಘ್ನ! ಕಷ್ಟಪಟ್ಟು ಪದವಿ ಗಳಿಸಿ ಸಣ್ಣಪುಟ್ಟ ಉದ್ಯೋಗದಲ್ಲಿರುವವರು ಮುಂದೇನು ಕತೆಯೋ ಎಂಬಂತೆ ಚಿಂತಿಸುತ್ತಾರೆ! ಕತ್ತಲ ಚಿಮಣಿ ದೀಪದ ಬೆಳಕಲ್ಲೋ, ಜಗಲಿಯ ಅಂಚಲ್ಲೋ ಕುಳಿತು ಬೀಡಿ ಕಟ್ಟಿ, ಮನೆಗೆ ದಿನಸಿ ಸಾಮಾನು ಹೊಂದಿಸುತ್ತಿದ್ದವರ ಗೋಳು ಸಾಮಾನ್ಯವಾಗಿಬಿಟ್ಟಿದೆ. ಜೋತುಬಿದ್ದಿರುವ ಹುಬ್ಬಿನೆಡೆಯ ಆಸೆಯ ಕಂಗಳಲಿ ಪೆನ್ಷನ್ ಹಣಕ್ಕಾಗಿ ಕಾದು ಕುಳಿತಿರುವ ಸುಕ್ಕುಗಟ್ಟಿರುವ ಕೈಗಳು ಇನ್ನೆಷ್ಟು ಕಾಯಬೇಕೋ! ಪಟ್ಟಿ ಮಾಡುತ್ತಾ ಹೋದಂತೆ ಸಾಲು ಸಾಲು ಸಂಕಷ್ಟಗಳು, ಚಿಂತಿಸುತ್ತಾ ಕೂತಂತೆ ಭವಿಷ್ಯವೇ ಹಾಳಾಯಿತೆಂಬ ಅಳುಕು. ಸರ್ವ ರೋಗಕ್ಕೂ ಸರಾಯಿ ಮದ್ದು ಎಂದು ಬೀಗುತ್ತಿದ್ದವರು ಕೊರೋನಾದೆದುರು ಬಾಗಲೇಬೇಕಾಯಿತು. ಶಾಲೆಯ ಸವಿ ಕ್ಷಣಗಳನ್ನು ಮೆಲುಕು ಹಾಕಬೇಕಿದ್ದ ಮುಗ್ಧ ಮನಸುಗಳು ಆನ್‌ಲೈನ್ ಕ್ಲಾಸಿಗೆ ಹೊಂದಿಕೊಂಡಿವೆ. ಇವರೆಲ್ಲರದು ಒಂದೇ ಪ್ರಶ್ನೆ “ಇದೆಲ್ಲ ಸರಿ ಆಗೋದು ಯಾವಾಗ?”
ಧೈರ್ಯ ಕಳಕೊಂಡ ಮನಗಳಿಗೆ ಈ ಬರಹ ಸಾಂತ್ವನದ ಜೋಗುಳ. ಎದೆಗುಂದದಿರಿ ನನ್ನವರೇ, ಕಲಿಯಬೇಕಾದ ಸಾಕಷ್ಟು ಜೀವನ ಪಾಠ ಪ್ರಕೃತಿ ಕಲಿಸಿತು. ಮತ್ತೆ ಹೊಸ ದಿನಗಳಿಗಾಗಿ ನಾವು ನಮ್ಮ ಮನಸ್ಸು ಬದಲಿಸಿಕೊಳ್ಳಬೇಕು. ನಮ್ಮಿಂದ ಆಗುವಷ್ಟು ನಾವೇ ನಮಗೆ ಧೈರ್ಯ ತಂದುಕೊಳ್ಳಬೇಕು. ಋಣಾತ್ಮಕವಾಗಿ ಚಿಂತಿಸುವವರಿಂದ ದೂರವಿರಬಹುದು. ಬಿಡುವಿನ ಸಮಯದಲ್ಲಿ ಮನೆಯವರೊಂದಿಗೆ ಬೆರೆಯಿರಿ, ಸ್ನೇಹಿತರೊಂದಿಗೆ ಹರಟೆ ಹೊಡೆಯಿರಿ, ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿ. ಪರೀಕ್ಷೆಯ ದಿನ ಸಮೀಪ ಬಂದಾಗ ಪುಸ್ತಕ ಓದುತ್ತಿದ್ದಂತೆ, “ಅದು ಮಾಡಬೇಕು, ಇದು ಸಾಧಿಸಬೇಕು” ಎಂದು ಕಾಡುವ ಆಲೋಚನೆಗಳನ್ನು ಸಾಕಾರಗೊಳಿಸಿ. ಮನಸ್ಸನ್ನು ಬೇಜಾರಿಗೆ ನೂಕದಿರಿ. ಮನೆಯಲ್ಲೇ ಇರಿ, ಆರಾಮಾಗಿರಿ. ಅತಿಯಾಗಿ ಚಿಂತಿಸದಿರಿ.
ನಮ್ಮ ಭಾರತ ಹಿಂದೆಂದೂ ಕಂಡಿರದ ಸಂಕಷ್ಟಕ್ಕೆ ತುತ್ತಾಗಿರಬಹುದಾದರೂ, ಮನೆಮನದಲ್ಲೆಲ್ಲೂ ನಂಬಿಕೆಯ ಪ್ರೇಮ ಬಹು ಗಟ್ಟಿಯಾಗಿರಲಿ. ನಮಗೆ ಅರಿವಿಲ್ಲದಂತೆ ಎಲ್ಲಾ ನಡೆದು ಹೋಯಿತು. ಕೃಷ್ಣ ವಾಣಿಯಂತೆ, “ಆದದ್ದೆಲ್ಲ ಒಳ್ಳೆಯದಕ್ಕೆ ಆಗುತ್ತಿದೆ,ಆಗುವುದೆಲ್ಲಾ ಒಳ್ಳೆಯದೇ ಆಗಿದೆ, ಮುಂದೆ ಆಗಲಿರುವುದೂ ಒಳ್ಳೆಯದೇ ಆಗಲಿದೆ”. ಭಗವದ್ಗೀತೆಯ ಈ ಮಾತುಗಳು ಅನಂತ ಸತ್ಯವೆಂದು ತಿಳಿದಿದ್ದರೂ ದಿನನಿತ್ಯದ ಜೀವನದಲ್ಲಿ ಆ ಮಾತುಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿ ಸುಖಾಸುಮ್ಮನೆ, “ಹೀಗೆ ಆಗಬಾರದಿತ್ತು” ಎಂದು ವಿಷಾದಿಸುತ್ತೇವೆ.
ಸಂಸ್ಕೃತದಲ್ಲಿ ಸ್ವರ್ಣದಂತ ಸುಭಾಷಿತವಿದೆ. “ಚಿಂತಾ ಚಿತಾ ಸಮಾನಾsಸ್ತಿ ಬಿಂದುಮಾತ್ರ ವಿಶೇಷತ್ಹ|, ಸಜೀವಂ ದಹತೇ ಚಿಂತಾ ನಿರ್ಜೀವಂ ದಹತೆ ಚಿತಾ”||: ಚಿಂತೆ ಮತ್ತು ಚಿತೆಯಲ್ಲಿ ಕೇವಲ ಅನುಸ್ವಾರದ ವ್ಯತ್ಯಾಸವಿದೆ. ಚಿಂತೆಯೂ ಜೀವವಿರುವವರನ್ನು ಸುಟ್ಟರೆ, ಚಿತೆ ನಿರ್ಜೀವಿಯನ್ನು ಸುಡುತ್ತದೆ. ಹಾಗಾಗಿ ಅತಿಯಾಗಿ ಚಿಂತಿಸದೆ ನಮ್ಮ ಮನಸ್ಸಿಗೆ ಧೈರ್ಯ ತಂದುಕೊಂಡರೆ ಮಾತ್ರ ಬದಲಾವಣೆ ಸಾಧ್ಯ.
Photo by Sarah Kilian on Unsplash
ಶಿವಪ್ರಸಾದ್ ಬೋಳಂತೂರು, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿ ಪ್ರಥಮ ಬಿ.ಎ ( ಪತ್ರಿಕೋದ್ಯಮ ವಿಭಾಗ)ವಿದ್ಯಾರ್ಥಿ