17.5 C
Karnataka
Saturday, November 23, 2024

    KSRTC ಹೆಸರು ಕೇರಳ ಪಾಲಾಗುವುದೆ ? FBಯಲ್ಲಿ ಸ್ವಾರಸ್ಯಕರ ಚರ್ಚೆ; ಆತಂಕ ಬೇಡ ಎಂದರು ಸಾರಿಗೆ ಸಚಿವರು

    Must read

    ಸುದೀರ್ಘ ಕಾನೂನು ಸಮರದಲ್ಲಿ ನಮ್ಮ ಹೆಮ್ಮೆಯ ರಾಜ್ಯ ರಸ್ತೆ ಸಾರಿಗೆ ನಿಗಮ ಕೆಎಸ್ ಆರ್ ಟಿ ಸಿ ಹೆಸರು ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಪಾಲಾಗಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಬದಲಿ ಹೆಸರು ಸೂಚಿಸಿ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಸ್ವಾರಸ್ಯಕರ ಚರ್ಚೆ ಶುರುವಾಗಿದೆ.

    ಪರ್ತಕರ್ತ ಹ. ಚ. ನಟೇಶ ಬಾಬು‘KSRTC’ ಅನ್ನೋದು ಇನ್ಮೇಲೆ ಕೇರಳ ಸ್ವತ್ತು. ಹೋಗಲಿ ಬಿಡಿ ಒಂದು S ತೆಗೆದು ‘KRTC'(Karnataka Road Transport Corporation) ಮಾಡಿಕೊಳ್ಳೋಣ. ನೋ ಪ್ರಾಬ್ಲಂ ಎಂದು ಆರಂಭಿಸಿದ ಚರ್ಚೆಗೆ ಪ್ರತಿಕ್ರಿಯಿಸಿರುವ ಶ್ರೀಧರ ಬಾಣಾವರ ಅವರು Ka Ra Ra Sa Sam ಅಂತ ಇಂಗ್ಲಿಷ್‌ ನಲ್ಲಿ ಯಾಕಾಗಬಾರದು.? ನನ್ನ ಮಗಳಿಗೆ ನನ್ನ ಹೆಸರಿನ ಮೊದಲಕ್ಷರ (ಶ್ರೀ)Sri ಎಂದು S ಬದಲಿಗೆ ನಾಲ್ಕು ದಶಕಗಳ ಹಿಂದೆ ಇಟ್ಟಿದ್ದೇನೆ. ಏನೂ ತೊಂದರೆ ಆಗಿಲ್ಲ ಎಂದಿದ್ದಾರೆ.

    ಇದೇ ಚರ್ಚೆಯಲ್ಲಿ ಭಾಗವಹಿಸಿರುವ ಹಿರಿಯ ಪತ್ರಕರ್ತ ಎಂ. ಜಯರಾಮ ಅಡಿಗ ಅವರು ..State ಪದವನ್ನು ಎಲ್ಲ ಸರ್ಕಾರಿ ನಿಗಮ -Corporation-ಗಳಲ್ಲಿ Karnataka ಪದದ ಮುಂದೆ ಸೇರಿಸುವ ನಿಯಮ ಅನುಸರಣೆ ಇದೆ. (ಸರ್ಕಾರಿಮಂಡಳಿ-Board-ಗಳಿಗೆ ಹಾಗೇನಿಲ್ಲ).ಯಾವುದೇ ಖಾಸಗಿ ಸಂಸ್ಥೆ ‘ಕರ್ನಾಟಕ….ಸಂಸ್ಥೆ’ ಹೆಸರಿಟ್ಟು ಕೊಂಡರೆ ಕರ್ನಾಟಕದ ಮುಂದೆ ರಾಜ್ಯ-State-ಪದಸೇರಿಸಿಕೊಳ್ಳಬಾರದೆಂಬ ನಿರ್ಬಂಧ. ಉದಾ: ನೀವು ಕರ್ನಾಟಕ ಪುಸ್ತಕ ಸಂಸ್ಥೆ Karataka Book House ಪ್ರಾರಂಭಿಸಿದರೆ ಅದನ್ನು ಕರ್ನಾಟಕ ರಾಜ್ಯ ಪುಸ್ತಕ ಸಂಸ್ಥೆ Karnataka State Book House ಎಂಬ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮೂಲಕ ಹೆಸರು ಬದಲಾವಣೆ ಸಂದರ್ಭದಲ್ಲಿ ಎದುರಾಗುವ ಸವಾಲನ್ನು ವಿವರಿಸಿದ್ದಾರೆ.

    ಈ ಚರ್ಚೆ ಮುಂದುವರಿದಿದ್ದು ಹಲವಾರು ಹಲವು ರೀತಿಯ ಹೆಸರು ಸೂಚಿಸಿದ್ದಾರೆ.

    ರಾ ಸು ವೆಂಕಟೇಶ ನಮ್ಮದೀಗ
    ಕದಂಬ ಸಾರಿಗೆ ಸಂಸ್ಥೆ /ಕರುನಾಡ ಸಾರಿಗೆ
    ಎಂದಾಗಲಿ!
    . ಎಂದು ಆರಂಭಿಸಿರುವ ಚರ್ಚೆಗೆ ಹಲವಾರು ಮಂದಿ ದನಿಗೂಡಿಸಿದ್ದಾರೆ.ಕೆಲವರು ಸುವರ್ಣ ಕರ್ನಾಟಕ ಸಾರಿಗೆ ಎಂದಾಗಲಿ ಎಂಬ ಸಲಹೆಯನ್ನು ನೀಡಿದ್ದಾರೆ. ಇಲ್ಲೂ ಚರ್ಚೆ ಮುಂದುವರಿದಿದೆ.

    ಆತಂಕ ಬೇಡ

    ಈ ಮಧ್ಯೆ ಕೆಎಸ್ ಆರ್ ಟಿ ಸಿ ಎಂಬ ಹೆಸರು ಕೈ ತಪ್ಪುತ್ತಿದೆ ಎಂದು ಕನ್ನಡಿಗರು ಪಡುತ್ತಿರುವ ಆತಂಕಕ್ಕೆ ಸಾರಿಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ

    ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರು ಕರ್ನಾಟಕದಿಂದ ಕೈತಪ್ಪಿದೆ ಎಂಬ ಆತಂಕ ಪಡಬೇಕಾಗಿಲ್ಲ. ಕೇರಳ ಸರ್ಕಾರವು ಈ ಬಗ್ಗೆ ಏನೇ ಹೇಳಿಕೆ ನೀಡಿದರೂ ನಮ್ಮ ಕರ್ನಾಟಕ ಸರ್ಕಾರವು ಈ ಬಗ್ಗೆ ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

    ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರನ್ನು ಮುಂದೆಯೂ ಕರ್ನಾಟಕವು ಬಳಸಲು ಸ್ವತಂತ್ರವಾಗಿದೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯವಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಎಂದು ಸವದಿ ಅವರು ಕಟುವಾಗಿ ಪ್ರತ್ಯುತ್ತರ ನೀಡಿದ್ದಾರೆ.

    ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ “ಕೆಎಸ್‌ಆರ್‌ಟಿಸಿ” ಎಂದು ಬಳಸುವಂತಿಲ್ಲವೆಂದು,ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿರವರು
    ಬುಧವಾರ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ್ದು, ಎರಡು ರಾಜ್ಯಗಳ ನಡುವಿನ ಒಂದು ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊಂಡಂತಿದೆ ಎಂಬ ಮಾಧ್ಯಮಗಳ ವರದಿಗಳನ್ನು ಇಂದು ಕೂಲಂಕಶವಾಗಿ ಪರಿಶೀಲಿಸಲಾಗಿದೆ. ಆದರೆ ಸಾರಿಗೆ ಸಂಸ್ಥೆಗೆ ಕೇಂದ್ರ ಟ್ರೇಡ್ ಮಾರ್ಕ್ ರಿಜಿಸ್ಟರಿ ರವರಿಂದ ಇಂತಹ ಯಾವುದೇ ಸೂಚನೆ ಅಥವಾ ಆದೇಶ ಇಂದಿನವರೆಗೂ ಬಂದಿಲ್ಲ ಎಂದೂ ಅವರು ಹೇಳಿದ್ದಾರೆ.

    ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆ ಎಸ್ ಆರ್ ಟಿ ಸಿ ಗೆ ನೀಡಲಾದ ಟ್ರೇಡ್ ಮಾರ್ಕ್ ಪ್ರಮಾಣಪತ್ರದ ವಿರುಧ್ಧ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ)ಯ ಮುಂದೆ ಸಲ್ಲಿಸಿದ ಮೇಲ್ಮನವಿಗಳಲ್ಲಿ ಯಾವುದೇ ಅಂತಿಮ ಆದೇಶಗಳನ್ನು ಸಹ ಹೊರಡಿಸಲಾಗಿಲ್ಲ ಎಂಬುದು ತಿಳಿದುಬಂದಿದೆ.ಏತನ್ಮಧ್ಯೆ, ಸದರಿ ಮಂಡಳಿಯನ್ನು .4.04.2021 ರ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಲಾಗಿದೆ ಮತ್ತು ಇಲ್ಲಿ ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ, ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿಯ ಟ್ರೇಡ್ ಮಾರ್ಕ್ ನೋಂದಣಿಯು ಪ್ರಸ್ತುತ ಜಾರಿಯಲ್ಲಿದೆ ಮತ್ತು ಕೆಎಸ್‌ಆರ್‌ಟಿಸಿಯು ತನಗೆ ನೀಡಲಾಗಿರುವ ಟ್ರೇಡ್‌ಮಾರ್ಕ್‌ಗಳನ್ನು ಬಳಸಲಾಗುವುದಿಲ್ಲ ಎಂಬ ಸುದ್ದಿ-ವರದಿಗಳು ಸತ್ಯಕ್ಕೆ ದೂರವಾಗಿದೆ ಮತ್ತು ಇದನ್ನು ಕಾನೂನಾತ್ಮಕವಾಗಿ ಒಪ್ಪಲಾಗದು.

    ಆದ್ದರಿಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ‘ಕೆಎಸ್‌ಆರ್‌ಟಿಸಿ’ ಟ್ರೇಡ್‌ಮಾರ್ಕ್ ಬಳಕೆ ಮಾಡುವ ವಿರುದ್ಧವಾಗಿ ಯಾವುದೇ ಕಾನೂನಾತ್ಮಕ ಅಡೆತಡೆಯಾಗಲಿ ಅಥವಾ ನಿಷೇಧವಾಗಲೀ ಇಲ್ಲ ಎಂಬುದನ್ನು ಗಮನಿಸಬೇಕು ಎಂದು ಸವದಿಯವರು ಸಮಜಾಯಿಷಿ ನೀಡಿದ್ದಾರೆ.

    ಕೇರಳ ಎಸ್‌ಆರ್‌ಟಿಸಿಯು, ಕೆಎಸ್ಆರ್‌ಟಿಸಿ / ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿನ ಸುದ್ದಿ ಪ್ರಕಟವಾಗಿದೆ. ಒಂದು ವೇಳೆ ಅಂತಹ ನೋಟಿಸ್ ನೀಡಿದರೆ, ಸಂಸ್ಥೆಯಿಂದ ಸೂಕ್ತವಾದ ಉತ್ತರವನ್ನು ನೀಡಲಾಗುತ್ತದೆ. ನಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ನಾವು ಪ್ರಸ್ತುತ ನಮ್ಮ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇವೆ. ಆದ್ದರಿಂದ ಆತಂಕಪಡಬೇಕಾಗಿಲ್ಲ ಎಂದು ಸವದಿ ಅವರು ತಿಳಿಸಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!