ಮನುಷ್ಯನು ಸ್ವಾರ್ಥ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಿರಂತರವಾಗಿ ಪೃಕೃತಿಯ ಮೇಲೆ ಮಾಡಿದ ದಬ್ಬಾಳಿಕೆಯಿಂದ ಈಗಾಗಲೇ ಅನೇಕ ವನ್ಯಜೀವಿಗಳು ನಾಶಹೊಂದಿವೆ, ಇನ್ನೂ ಅನೇಕ ಜೀವಿಗಳು ವಿನಾಶದಂಚಿನಲ್ಲಿವೆ. ಮಾತ್ರವಲ್ಲ, “ಮಾಡಿದ್ದುಣ್ಣು ಮಹರಾಯ ಅನ್ನುವಂತೆ”, ಮನುಷ್ಯನೇ ಈಗ ಪರಿಸರ ಮಾಲಿನ್ಯದಿಂದ ಉಂಟಾದ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಡೆಂಗ್ಯು ಜ್ವರ, ಚಿಕನ್‌ಗೂನ್ಯ, ಮಲೇರಿಯ, ಇಲಿಜ್ವರ ಮುಂತಾದ ಸಾಂಕ್ರಾಮಿಕ ರೋಗಗಳಿಗೆ, ಮಿತಿ ಮೀರಿದ ಪರಿಸರ ಮಾಲಿನ್ಯದಿಂದ ಉಂಟಾಗಿರುವ ಭೂಮಂಡಲದ ತಾಪಮಾನ ಏರುವಿಕೆ ಮತ್ತು ಹವಾಮಾನ ಬದಲಾವಣೆಯೇ ಮುಖ್ಯ ಕಾರಣವೆಂದು ತಿಳಿದು ಬಂದಿದೆ. ಪರಿಸರ ಮಾಲಿನ್ಯದಿಂದ ಕ್ಯಾನ್ಸರ್ ಮತ್ತು ಉಸಿರಾಟ-ಸಮಸ್ಯೆಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. ಇಷ್ಟು ಮಾತ್ರವಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಉಂಟಾಗುತ್ತಿರುವ ಅಕಾಲಿಕ ಮಳೆ, ನೆರೆ, ಕ್ಷಾಮ, ಸಮುದ್ರಕೊರೆತ, ಬರಗಾಲದಂತಹ ದುಸ್ಥಿತಿಗಳಿಂದ ಅನೇಕ ಕಷ್ಟನಷ್ಟ, ಸಾವು ನೋವುಗಳನ್ನು ಅನುಭವಿಸುತ್ತಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಇನ್ನಷ್ಟು ಭೀಕರ ದುರಂತಗಳಿಗೆ ಕಾಲ ಸನ್ನಿಹಿತವಾಗಬಹುದು.
COVID-19 ಸಾಂಕ್ರಾಮಿಕದ ಮೊದಲ ಮತ್ತು ಎರಡನೇ ಅಲೆಗಳ ಅವಧಿಯಲ್ಲಿ, ವಾಯುಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರುವುದು ಅನೇಕ ಸಂಶೋಧನೆಗಳಿಂದ ನಿರೂಪಿತವಾಗಿದೆ. ಮಾತ್ರವಲ್ಲ, ವಲಸೆ ಪಕ್ಷಿಗಳೂ ಸೇರಿದಂತೆ ಅನೇಕ ವನ್ಯಜೀವಿಗಳ ಬದುಕು ಮರುಸ್ಥಿತಿಗೆ ಬಂದಿರುವುದು ವರದಿಯಾಗಿವೆ. ಪರಿಸರದ ಅವನತಿಗೆ ನಾವು ಮನುಷ್ಯರೇ ಕಾರಣ ಅನ್ನುವುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಈಗಾಗಲೇ ನಾವು ಮರು ಸ್ಥಿತಿಗೆ ತರಲಾರದಷ್ಟು ಪರಿಸರವನ್ನು ಸಾಕಷ್ಟು ಹಾನಿ ಮಾಡಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಪರಿಸರದ ನೈರ್ಮಲ್ಯವನ್ನು ಕಾಪಾಡಲು ಮತ್ತು ಸಂರಕ್ಷಿಸಲು ಕಾರ್ಯಪ್ರವೃತ್ತರಾಗಬೇಕಾಗಿರುವುದು ತುಂಬಾ ಅವಶ್ಯ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅನೇಕ ದೇಶಗಳ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದ ಕಾರ್ಯತಂತ್ರಗಳನ್ನು ರೂಪಿಸುತ್ತಿರುವುದು ಸಮಾಧಾನದ ವಿಷಯ.
ಪರಿಸರ ಸಂರಕ್ಷಣೆ ಅಂದ ತಕ್ಷಣ ಸರಕಾರ, ಸಂಸ್ಥೆ, ಕೈಗಾರಿಕೋದ್ಯಮಿ, ಬಂಡವಾಳ ಶಾಹಿಗಳ ಅಥವಾ ಇನ್ನಾವುದೋ ದೇಶದ ಕಡೆಗೆ ಕೈ ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ. ಬದಲಾಗಿ ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಮೂಹಿಕವಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ನಮಗೆ ಬದುಕಲು ಆಮ್ಲಜನಕ, ನೀರು, ಆಹಾರ, ನೆಲೆ ಎಲ್ಲವನ್ನೂ ನೀಡುವ ಪರಿಸರವನ್ನು ಸಂರಕ್ಷಿಸಲು ನಾವು ಕಾರ್ಯೋನ್ಮುಖರಾಗಬೇಕಿದೆ. ನಮ್ಮ ದೈನಂದಿನ ಜೀವನದಲ್ಲಿ ಪರಿಸರ-ಸ್ನೇಹಿ ಚಟುವಟಿಕೆಗಳನ್ನು ಅಳವಡಿಸಿಕೊಂಡು ನಮಗೆ ಆಸರೆಯಾಗಿರುವ ಭೂಮಿಯನ್ನು ಉಳಿಸಿ ಕೊಳ್ಳುವಲ್ಲಿ ಅಳಿಲುಸೇವೆ ಸಲ್ಲಿಸೋಣ.
ಪರಿಸರ–ಸ್ನೇಹಿಚಟುವಟಿಕೆಗಳು:
- ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು ಉಳಿಸಿ ಬೆಳೆಸೋಣ. ಹಣ್ಣುಹಂಪಲು ನೀಡುವ ಗಿಡಗಳನ್ನು ನೆಟ್ಟರೆ, ಮುಂದೆ ವನ್ಯಜೀವಿಗಳಿಗೆ ಮುಖ್ಯವಾಗಿ ಪಕ್ಷಿಗಳಿಗೆ ಆಹಾರ ಸಿಗುತ್ತದೆ.
- ನೀರನ್ನು ಅನಗತ್ಯವಾಗಿ ವೆಚ್ಚ ಮಾಡದಿರೋಣ.
- ಮನೆ ಕಚೇರಿಗಳಲ್ಲಿ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳಲ್ಲಿ ನೀರು ಸೋರುತ್ತಿದ್ದರೆ ತಕ್ಷಣ ಅದನ್ನು ನಿಲ್ಲಿಸೋಣ.
- ಮಳೆನೀರನ್ನು ಆದಷ್ಟು ಸಂಗ್ರಹಿಸಿ ಉಪಯೋಗಿಸೋಣ. ನಮ್ಮ ಮನೆ ತೋಟಗಳಲ್ಲಿ ಮಳೆಕೊಯ್ಲು ಮಾಡುವ ಮೂಲಕ ಅಂತರ್ಜಲ ಮಟ್ಟವನ್ನು ಕಾಪಾಡೋಣ.
- ಹಳೆಯ ಕಾಗದ, ಪುಸ್ತಕಗಳನ್ನು ಸುಡದೆ, ಮರು ಮಾರಾಟ ಮಾಡಿ, ಅವನ್ನು ಪುನ: ಕಾಗದ ತಯಾರಿಸಲು ಬಳಸಬಹುದು, ಇದರಿಂದ ಅನೇಕ ಮರಗಳನ್ನು ಸಂರಕ್ಷಿಸಬಹುದು.
- ಜೈವಿಕ ತ್ಯಾಜ್ಯಗಳಿಂದ ಅಡುಗೆ ಅನಿಲವನ್ನು ಉತ್ಪಾದಿಸಿ, ಜಾಗತಿಕ ತಾಪಮಾನ ಬಿಸಿಯೇರುವಿಕೆಗೆ ಕಾರಣಗಳಲ್ಲಿ ಒಂದಾದ ಮಿಥೇನ್ ಅನಿಲವನ್ನು ನಿಯಂತ್ರಿಸೋಣ.
- ಮನೆಯ ಸುತ್ತಮುತ್ತ, ಬಾಲ್ಕನಿಯಲ್ಲಿ ಗಿಡಗಳನ್ನು ಬೆಳೆಸೋಣ. ಇದರಿಂದ ಮನೆಯ ಸೌಂದರ್ಯವೂ ಹೆಚ್ಚುತ್ತದೆ, ತಾಜಾ ಮಾಲಿನ್ಯರಹಿತ ಆಮ್ಲಜನಕವೂ ಸಿಗುತ್ತದೆ.
- ಕಟ್ಟಡಗಳನ್ನು (ಮನೆ, ಅಂಗಡಿ, ಮಾಲ್, ಕಚೇರಿ) ಕಟ್ಟುವ ಹಂತದಲ್ಲೇ ಶಕ್ತಿ ಮತ್ತು ಸಂಪನ್ಮೂಲವನ್ನು ಉಳಿಸುವ ತಂತ್ರ – ಸಾಮಾಗ್ರಿಗಳನ್ನು ಬಳಸೋಣ.
- ಮದುವೆ, ಧಾರ್ಮಿಕ ಮತ್ತು ಇನ್ನಿತರ ಶುಭ ದಿನಗಳಲ್ಲಿ ಪರಿಸರಕ್ಕೆ ಧಕ್ಕೆ ತರುವ ಆಚರಣೆಗಳನ್ನೆಲ್ಲ ಕಡಿಮೆಗೊಳಿಸೋಣ.
- ವಿದ್ಯುತ್ಬಳಕೆಯನ್ನು ಮಿತಗೊಳಿಸೋಣ (ಅಗತ್ಯವೆನಿಸಿದಾಗ ಮಾತ್ರ ಫ್ಯಾನ್, ಹವಾ ನಿಯಂತ್ರಣ, ಬಳಸೋಣ, ಕೊಠಡಿ ಹಾಗೂ ಮನೆ ಕಚೇರಿಯಿಂದ ಹೊರಬರುವ ಮುನ್ನ ಸ್ವಿಚ್ ಗಳನ್ನು ಮರೆಯದೆ ಆರಿಸುವುದು ಇತ್ಯಾದಿ).
- ಸೌರಶಕ್ತಿ, ಎಲ್ ಇ ಡಿ ಬಲ್ಬ್ಗ ಳನ್ನು ಬಳಸೋಣ.
- ವಾಹನಗಳನ್ನು ಸುಸ್ಥಿತಿಯಲ್ಲಿಟ್ಟಿರೋಣ ಮತ್ತು ಸಿ.ಎನ್.ಜಿ ಇಂಧನವನ್ನು ಬಳಸಿ ವಾಯು ಮಾಲಿನ್ಯವನ್ನು ಕಡಿಮೆಗೊಳಿಸೋಣ.
- ವಿದ್ಯುತ್-ಚಾಲಿತ ವಾಹನಗಳನ್ನು ಬಳಸುವ ಬಗ್ಗೆ ಆಸಕ್ತಿ ವಹಿಸೋಣ.
- ನಾವು ಬಳಸುವ ಎಲ್ಲ ವಸ್ತುಗಳನ್ನು ಮರುಚಕ್ರೀಕರಣಗೊಳಿಸಲು ಸಾಧ್ಯವಿದೆ. ಘನತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡಿ ಮರುಚಕ್ರೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗೋಣ ಮತ್ತು ಕೈಜೋಡಿಸೋಣ.
- ಮಿತಬಳಕೆ, ಮರುಬಳಕೆ ಮತ್ತು ಮರುಚಕ್ರೀಕರಣ ಎಂಬ ನೀತಿಯನ್ನು ಪಾಲಿಸಿ ತ್ಯಾಜ್ಯದ ಹೊರೆ ಕಡಿಮೆ ಮಾಡೋಣ.
- ದೀಪಾವಳಿಯಲ್ಲಿ ಪಟಾಕಿ ಸುಡುವುದನ್ನು ಕಡಿಮೆಗೊಳಿಸೋಣ; ಹಬ್ಬ ಹರಿದಿನಗಳಲ್ಲಿ ಶಬ್ಧ ಮಾಲಿನ್ಯವನ್ನು ಕಡಿಮೆಗೊಳಿಸೋಣ.
- ಗ್ರಾಮವಾಸಿಗಳಾಗಿದ್ದರೆ, ಖಾಲಿ ಇರುವ ಸ್ಥಳಗಳಲ್ಲಿ ಗಿಡಮರಗಳನ್ನು ಬೆಳೆಸಿ, ಹೊಂಗೆ, ಜತ್ರೋಪಾದಂತಹ ಜೈವಿಕ-ಇಂಧನದ ಸಸ್ಯಗಳನ್ನು ಬೆಳೆಸಬಹುದು.
- ಬೋರ್‌ವೆಲ್‌ಗಳನ್ನು ಕೊರೆಯುವುದನ್ನು ಕಡಿಮೆಗೊಳಿಸಿ ಅಂತರ್ಜಲದ ದುರುಪಯೋಗವನ್ನು ತಡೆಗಟ್ಟೋಣ.
- ಸಾಧ್ಯವಾದಷ್ಟು ಸಾವಯವ ಕೃಷಿಯನ್ನು ಅವಲಂಬಿಸಿ (ಎರೆಗೊಬ್ಬರ, ಜೈವಿಕ ಕ್ರಿಮಿನಾಶಕ ಬಳಕೆ, ಸಂಯೋಜಿತ ಕೀಟ ನಿರ್ವಹಣೆ ಇತ್ಯಾದಿ), ಆಧುನಿಕ ಕೃಷಿ ಪದ್ಧತಿಯಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ಕಡಿಮೆಗೊಸೋಣ.
- ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗೋಣ.
- ಮಳೆನೀರು ವ್ಯರ್ಥ ಸಮುದ್ರ ಸೇರದಂತೆ ಜಮೀನಿನಲ್ಲೇ ಇಂಗಿಸೋಣ.
- ಸಾಧ್ಯವಾದಷ್ಟು ಸಾರ್ವಜನಿಕ ವಾಹನಗಳಲ್ಲಿ (ಬಸ್/ರೈಲು) ಪ್ರಯಾಣಿಸೋಣ.
- ಸಮೀಪದ ತಿರುಗಾಟಕ್ಕೆ ಕಾಲ್ನಡಿಗೆ, ಸೈಕಲ್ ಸವಾರಿ ಮಾಡೋಣ, ಇದು ಪರಿಸರ ಮಾತ್ರವಲ್ಲ ಆರೋಗ್ಯದ ದೃಷ್ಠಿಯಿಂದಲೂ ಉತ್ತಮ.
- ಪ್ಲಾಸ್ಟಿಕ್ ಕೈಚೀಲಗಳನ್ನು ಅವಲಂಬಿತವಾಗದೇ, ಬಟ್ಟೆಯ/ನಾರಿನ ಚೀಲಗಳನ್ನು ಬಳಸೋಣ.
- ನಾವು ಬಳಸುವ ಪ್ಲಾಸ್ಟಿಕ್ ವಸ್ತುಗಳನ್ನು (ಕೈಚೀಲ, ಲೋಟ, ತಟ್ಟೆ, ಚಮಚ, ಐಸ್ಕ್ರೀಮ್ ಕಪ್ ಇತ್ಯಾದಿ) ಅಲ್ಲಲ್ಲಿಯೇ ಎಸೆಯದೇ ಅವುಗಳನ್ನು ಪುನರ್- ಬಳಕೆಗೊಳಿಸಲು (ರೀಸೈಕ್ಲಿಂಗ್) ಹಿಂದಿರುಗಿಸೋಣ.
- 4 ಅಥವಾ 5 ಸ್ಟಾರ್ ಲೇಬಲ್ ಇರುವ ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಇನ್ನಿತರ ಗೃಹೋಪಯೋಗಿ ಉಪಕರಣಗಳನ್ನು ಬಳಸಿ ವಿದ್ಯುತ್ ಶಕ್ತಿಯನ್ನು ಉಳಿಸೋಣ.
- ಉಡುಗೊರೆ / ನೆನಪಿನ ಕಾಣಿಕೆಗಳನ್ನು ನೀಡುವಾಗ ಪರಿಸರಸ್ನೇಹಿ ವಸ್ತುಗಳನ್ನೇ/ ಪರಿಸರ ಸಂರಕ್ಷಣಾ ಪುಸ್ತಕ, ಗಿಡಗಳನ್ನು ಕೊಡೋಣ. ಸ್ಥಳಿಯ ಪರಿಸರ-ಸ್ನೇಹಿ ಕರಕುಶಲ ಮಾದರಿಗಳನ್ನು ಖರೀದಿಸೋಣ ಮತ್ತು ಪ್ರೋತ್ಸಾಹಿಸೋಣ.
- “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಪರಿಸರದ ಬಗ್ಗೆ ಕಾಳಜಿಯನ್ನು ಹುಟ್ಟಿಸಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಿವು ಮೂಡಿಸಿ, ಪರಿಸರಸ್ನೇಹಿ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಲು ಹುರಿದುಂಬಿಸಲು ಹೆತ್ತವರು / ಪೋಷಕರು ಮತ್ತು ಶಿಕ್ಷಕರು ಆಸಕ್ತಿ ತೋರಬೇಕು.
- ಕೋವಿಡ್-೧೯ ಸುರಕ್ಷತೆಯ ದೃಷ್ಟಿಯಿಂದ ಬಳಸುವ ಫೇಸ್ ಮಾಸ್ಕ್ ಗಳನ್ನು ಸಿಕ್ಕಿದಲ್ಲಿ ಎಸೆಯದೆ, ಅದು ಒಂದು ಅಪಾಯಕಾರಿ ಜೈವಿಕ ತ್ಯಾಜ್ಯ ಆಗಿರುವುದರಿಂದ ವಿಲೇವಾರಿ ಮಾಡುವ ಬಗ್ಗೆ ವಿಶೇಷ ಜಾಗೃತಿ ವಹಿಸೋಣ.
- ಪರಿಸರ ಸಂಘ, ಕೂಟಗಳನ್ನು ರಚಿಸಿಕೊಂಡು ತಮ್ಮ ಸುತ್ತಲ ಸ್ಥಳಗಳನ್ನು ಹೆಚ್ಚು ಚೊಕ್ಕವಾಗಿಟ್ಟುಕೊಳ್ಳಲು ಸೂಕ್ತವಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಕಾರ್ಯರೂಪಕ್ಕೆ ತರೋಣ.
- ಮಾಡುತ್ತಿರುವ ಪರಿಸರ-ಸ್ನೇಹಿ ಕಾರ್ಯ-ಚಟುವಟಿಕೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡು ಇತರರನ್ನೂ ಹುರಿದುಂಬಿಸೋಣ.
ವಿಶ್ವ ಪರಿಸರ ದಿನಾಚರಣೆ: 2021 : ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ 5 ಒಂದು ಮಹತ್ವಪೂರ್ಣವಾದ ದಿನ; ವಿಶ್ವ ಪರಿಸರ ದಿನಾಚರಣೆ. ಇದು ಪರಿಸರ ಮತ್ತು ಅದರ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಎಚ್ಚರಿಸುವ ದಿನ. ಇದು ವಿಶ್ವ ಸಂಸ್ಥೆಯ – ಪರಿಸರ ಕಾರ್ಯಕ್ರಮದ ಅಡಿಯಲ್ಲಿ ನಡೆಯುವ ಜಾಗತಿಕ ಒಂದು ಅಭಿಯಾನ. 1974 ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಇದು ಸಮುದ್ರ ಮಾಲಿನ್ಯ, ಮಾನವ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಹೊರಹೊಮ್ಮುವ ಪರಿಸರ ಸಮಸ್ಯೆಗಳಿಗೆ ಪರಿಹಾರ ಮತ್ತು ವನ್ಯಜೀವಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಒಂದು ಬೃಹತ್ ಅಭಿಯಾನವಾಗಿದೆ. ‘ಮರುಕಲ್ಪಿಸಿ, ಮರುಸೃಷ್ಟಿಸಿ. ಮರುಸ್ಥಾಪಿಸಿ’ (Reimagine. Recreate. Restore) ಎಂಬ ಧ್ಯೇಯವನ್ನು ಇಟ್ಟುಕೊಂಡು ‘ವಿಶ್ವಸಂಸ್ಥೆ – ಪರಿಸರ ಕಾರ್ಯಕ್ರಮ’ ವು (United Nations – Environment Programme; UN-EP) ಈ ವರ್ಷದ ವಿಶ್ವ ಪರಿಸರ ದಿನವನ್ನು ಆಚರಿಸಿಲು ಕರೆನೀಡುವುದರ ಜೊತೆಗೆ ‘ಪರಿಸರ ವ್ಯವಸ್ಥೆಯ ಮರುಸ್ಥಾಪನೆ: 2021-2030’ (Ecosystem Restroration:2021-30) ಎಂಬ ಹತ್ತು ವರ್ಷದ ಒಂದು ಬೃಹತ್ ಕಾರ್ಯಯೋಜನೆಗೆ ಚಾಲನೆ ನೀಡಿದೆ. ದಶಕದ ಈ ಅವಧಿಯಲ್ಲಿ ಪ್ರತಿ ಭೂಖಂಡ ಮತ್ತು ಸಮುದ್ರದಲ್ಲಿ ಮಾನವ ನಿರ್ಮಿತ ಪರಿಸರ ವ್ಯವಸ್ಥೆಗಳ ಅವನತಿಯನ್ನು ತಡೆಯಲು, ಮತ್ತು ಅದನ್ನು ಹಿಮ್ಮುಖಗೊಳಿಸಬೇಕೆಂಬ ಉದ್ದೇಶವನ್ನು ಹೊಂದಿದೆ. ಆ ಮೂಲಕ ಇದು ಬಡತನವನ್ನು ನಿರ್ಮೂಲನೆಗೊಳಿಸಲು, ಹವಾಮಾನ ಬದಲಾವಣೆಯನ್ನು ಉಪಶಮನಗೊಳಿಸಲು ಮತ್ತು ವನ್ಯಜೀವಿಗಳ ಸಂತತಿ ನಿರ್ವಂಶವಾಗುವುದನ್ನು ತಡೆಯಲು ಸಹಕಾರಿಯಾಗುವುದು ಎಂದು ಆಶಿಸಲಾಗಿದೆ. ಇದು ಯಶಸ್ವಿಯಾಗಬೇಕಿದ್ದರೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರಿಗೂ ಮಹತ್ತರವಾದ ಜವಾಬ್ದಾರಿ ಇದೆ. ಈ ಜವಾಬ್ದಾರಿಯಿಂದ ನುಣುಚಿಕೊಂಡರೆ, ಅದರ ವ್ಯತಿರಿಕ್ತ ಪರಿಣಾಮ ಮುಂದೆ ನಾವೇ ಎದುರಿಸಬೇಕಾಗುತ್ತದೆ.ವಿಶ್ವ ಪರಿಸರ ದಿನಾಚರಣೆಯ ಹೆಚ್ಚಿನ ಮಾಹಿತಿಗಾಗಿ UN-EP ವೆಬ್‌ಸೈಟ್‌ಗೆ ಪ್ರವೇಶಿಸಬಹುದು: https://www.un.org/en/observances/environment-day |

ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಭೂಮಿಯು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಯನ್ನು ಪೂರೈಸಲು ಅಲ್ಲ- ಮಹಾತ್ಮ ಗಾಂಧಿ.
ನೀರು ಅತ್ಯಂತ ಅಮೂಲ್ಯ ಸರಕು ಮತ್ತು ಈ ಭೂಮಿಯ ಎಲ್ಲ ಜನರಿಗೆ ಉಡುಗೊರೆಯಾಗಿದೆ ಮತ್ತು ಅದನ್ನು ಸಮಾನವಾಗಿ ಹಂಚಿಕೊಳ್ಳಬೇಕು – ಬುದ್ಧ.
ನಮ್ಮ ಕೈಯಲ್ಲಿ ಇಂದು ನಮ್ಮ ಭವಿಷ್ಯ ಮಾತ್ರವಲ್ಲ, ಜೊತೆಗೆ ನಮ್ಮೊಂದಿಗೆ ಈ ಭೂಮಿಯಲ್ಲಿರುವ ಎಲ್ಲ ಜೀವಿಗಳ ಭವಿಷ್ಯವೂ ಅಡಗಿದೆ – ಡೇವಿಡ್ ಅಟೆನ್ ಬರೋ.
ಪ್ರತಿಯೊಂದು ಜೀವಕ್ಕೂ ಇನ್ನೊಂದು ಪೂರಕವಯ್ಯ, ಜೀವಜೀವದ ನಂಟು ಬೃಹ್ಮಗಂಟು – ಗೋಪಾಲಕೃಷ್ಣ ಅಡಿಗ.
ಜಗತ್ತು ಬದಲಾಗಬೇಕೆಂದು ಎಲ್ಲರೂ ಬಯಸುತ್ತಾರೆ, ತಾನು ಬದಲಾಗಬೇಕೆಂದು ಯಾರೂ ಯತ್ನಿಸುವುದಿಲ್ಲ – ಲಿಯೋ ಟಾಲ್‌ಸ್ಟಾಯ್.
ಪರಿಸರ ಯಾರೊಬ್ಬರ ಆಸ್ತಿ ಅಲ್ಲ, ಅದು ಪ್ರತಿಯೊಬ್ಬನಿಗೂ ಅವಶ್ಯ, ಉತ್ತಮ ಪರಿಸರವನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ – ಡಾ. ಶಿವರಾಮ ಕಾರಂತ.
ಮಾನವ ಜೀವಿಯ ಕಾರಣದಿಂದ ಭೂಮಿಯೊಂದು ರೋಗಗ್ರಸ್ತ ಗ್ರಹವಾಗಿದೆ. ಅದಕ್ಕೆ ತುರ್ತಾಗಿ ಚಿಕಿತ್ಸೆ ಬೇಕಾಗಿದೆ. ಬರಲಿರುವ ದುರಂತಕ್ಕೆ ತಡೆಯೊಡ್ಡದ್ದಿದ್ದರೆ ಇಡೀ ಪ್ರಥ್ವಿಯೇ ಜೀವಗಳ ವಾಸಕ್ಕೆ ಅನರ್ಹವಾಗಲಿದೆ- ಕೆ.ವಿ. ನಾರಾಯಣ.
ಈ ಪೃಥ್ವಿಯನ್ನು ನಮ್ಮ ತಾತ ಮುತ್ತಾತರಿಂದ ನಾವು ವಂಶ ಪಾರಂಪರ್ಯವಾಗಿ ಪಡೆದಿದ್ದೇವೆ. ನಮ್ಮ ಮಕ್ಕಳು ಮೊಮ್ಮಕ್ಕಳಿಗೆಂದು ನಾವಿದನ್ನು ಕಲುಷಿತಗೊಳಿಸಿಟ್ಟು ಹೋಗಬಾರದು – ನಾಗೇಶ ಹೆಗ್ಡೆ.
ಪರಿಸರ-ಸ್ನೇಹಿ ಕೆಲಸಗಳೆಂದರೆ ಬೀಜ ಬಿತ್ತಿದಂತೆ. ಅದು ಬೆಳೆದು ಫಲ ಕೊಡುವುದಲ್ಲದೆ ಮತ್ತೆ ಬೀಜವನ್ನು ಒದಗಿಸುತ್ತದೆ- ಕೆ. ಎಸ್. ನಿಸಾರ್ ಅಹಮದ್.
“ಗಿಡ ಬೆಳೆಸಿದಂತೆಲ್ಲ ರಾಷ್ಟ್ರವೂ ಬೆಳೆಯುತ್ತದೆ, ಗಿಡ ಬೆಳೆಸಿ, ರಾಷ್ಟ ಉಳಿಸಿ” – ಎನ್. ಮಣಿವಾಸಕಮ್.
Photograph by: Nithish P. Byndoor
ಪ್ರಸ್ತುತತೆಗೆ ಅತ್ಯುತ್ತಮ ಲೇಖನ. ಪರಿಸರ ಸಂರಕ್ಷಣೆ ಪ್ರತಿ ಯೊಬ್ಬ ನಾಗರೀಕನ ಕರ್ತವ್ಯ. ಇದರ ಕುರಿತಾದ ಇಂದಿನ ಲೇಖನ ಮಹತ್ತರ ಮಾಹಿತಿಯನ್ನು ಒದಗಿಸಿದೆ.
ಧನ್ಯವಾದಗಳು.
ಸರ್ ಪರಿಸರದ ಬಗ್ಗೆ ತುಂಬಾ ಚೆನ್ನಾಗಿ ಬರೆದು ನಾಡಿನ ಜನತೆಗೆ ತುಂಬಾ ಮಹತ್ವಪೂರ್ಣವಾದ ಸಂದೇಶವನ್ನು ನೀಡಿದ್ದೀರಿ ಇದಕ್ಕಾಗಿ ನನ್ನ ವತಿಯಿಂದ ಹೃದಯಪೂರ್ವಕವಾಗಿ ಧನ್ಯವಾದಗಳು ಸರ್
Really very nicely written. I always loved reading sirs articles. He always motivates young budding generation in his way of writings.
Keep writing sir 🙏
ಪ್ರಕೃತಿಯ ಪ್ರಸ್ತುತ ಪರಿಸ್ಥಿತಿಗೆ ಕೈಗನ್ನಡಿಯಂತಿರುವ ಈ ಲೇಖನ ಮನುಷ್ಯ ಇನ್ನಾದರೂ ಕಣ್ತೆರೆದು ಈಗಿರುವ ಹಸಿರು ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಬೇಕಿದೆ ಎಂಬುದನ್ನು ಸಮರ್ಥವಾಗಿ ಪ್ರತಿಪಾದಿಸಿದೆ. ಲೇಖಕ ಡಾ. ಪ್ರಶಾಂತ ನಾಯ್ಕರಿಗೆ ಅಭಿನಂದನೆಗಳು.
ಪರಿಸರ ದಿನಾಚರಣೆಯ ವಿಶಾಲ ಅರ್ಥವನ್ನು ಹಾಗೂ ಇನ್ನೊಂದು ದಶಕದ ಕಾರ್ಯ ಯೋಜನೆಯನ್ನು ಫಲಪ್ರದವಾಗಿಸುವಲ್ಲಿ ಪ್ರತಿಯೊಬ್ಬರೂ ಪಾಲುದಾರರು ಎಂಬುದನ್ನು ತಿಳಿಸಿದ್ದೀರಿ. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರತಿಯೊಂದು ಗ್ರಾಮ ಮಟ್ಟದಲ್ಲೂ 60 – 70 ರ ದಶಕದಲ್ಲಿ ನಡೆದಂತೆ ಒಂದಿಷ್ಟು ಸಂಘಟಿತ ಪ್ರಯತ್ನ ಗಳು ನಡೆಯಬೇಕಾಗುತ್ತದೆ.
ಪ್ರಶಾಂತ್ ನಾಯ್ಕ್ ರ ಈ ಲೇಖನ ಮತ್ತು ಈ ಬಗೆಗಿನ ಅವರ ಕಾರ್ಯ ಒಂದಿಷ್ಟು ಪ್ರೇರಣೆಯಾಗಲಿ.
ಶುಭಾಶಯಗಳು ಪ್ರಶಾಂತ್ ನಾಯ್ಕ್ ರವರಿಗೆ 🙏
ಸ್ತುತ್ಯಾರ್ಹ ಲೇಖನಕ್ಕೆ ವಂದನೆಗಳು.
ಬಹಳ ಅಮೂಲ್ಯ ವಾದ ಲೇಖನ, ಇವತ್ತಿನ ಸಂಧಿಗ್ದ ಪರಿಸ್ಥಿತಿ ಯಲ್ಲಿ ಪರಿಸರ ಕ್ಕೆ ಪೂರಕ ವಾಗಿ ಹೇಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು ಎಂಬುದನ್ನು ಮನೋಜ್ಞ ವಾಗಿ ವಿವರಿಸಿದ್ದೀರಿ ಅಭಿನಂದನೆಗಳು ಸರ್ 🙏🙏🙏🌹❤
ಸರ್,ಉತ್ತಮ ವಿಷಯ ಮಂಡನೆ, ಜವಾಬ್ದಾರಿ ನಾಗರಿಕ ಹೇಗೆ ಪರಿಸರ ಕಾಳಜಿಯಿಂದ ನಡೆದುಕೊಳ್ಳಬಹುದು ಎಂಬುದು ಅನುಕರಣೀಯ.ನಿಮಗೆ ವಂದನೆಗಳು.
ಪರಿಸರ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ, ವರ್ಷ ಪರ್ಯಂತ ದಿನವಾಗಿರಲಿ. ಕೊರೊನ ಬಂದು ಹೆಚ್ಚಿನವರು ತಂತಮ್ಮ ಮನೆಗಳಲ್ಲಿ ಗಿಡ ಮರ ಬೆಳೆಸಿ ಪರಿಸರ ರಕ್ಷಣೆ ಮಾಡುತ್ತಿದ್ದಾರೆ.ಇಂದಿನ ದಿನಗಳಲ್ಲಿ ತಮ್ಮ ಲೇಖನ ಉಪಯುಕ್ತವಾಗಿದೆ.ದೇವರ ಆಶೀರ್ವಾದವಿರಲಿ ಪ್ರಶಾಂತ