ಎಂ.ವಿ.ಶಂಕರಾನಂದ
ತೋವಿನಕೆರೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ, ಸಿದ್ಧರಬೆಟ್ಟ ಪರ್ವತಶೃಂಗಗಳ ಸೆರಗಿನಲ್ಲಿರುವ ಒಂದು ಗ್ರಾಮ. ಹೋಬಳಿ ಕೇಂದ್ರವಾಗುವ ಎಲ್ಲ ಅರ್ಹತೆಗಳನ್ನೂ ಪಡೆದಿದ್ದರೂ ಬರೀ ಗ್ರಾಮವಾಗೇ ಉಳಿದಿರುವ ಈ ಹಳ್ಳಿಯ ಹೃದಯ ಭಾಗವಾದ ತುಮಕೂರು-ಮಧುಗಿರಿ-ಕೊರಟಗೆರೆ ವೃತ್ತದಲ್ಲಿ ನಿಂತು ಪಶ್ಚಿಮಕ್ಕೆ ನೋಡಿದರೆ ನಳನಳಿಸುವ ಸಮೃದ್ಧಿಯಾದ ಹಸಿರು ಬೇಲಿಯ ತೋಟವೊಂದು ಕಾಣುತ್ತದೆ. ಅದು ಪ್ರಜಾವಾಣಿ ಪತ್ರಿಕೆಯ ಅರೆಕಾಲಿಕ ವರದಿಗಾರ ಪದ್ಮರಾಜು ಅವರ ತೋಟ. ಇವರಿಗೆ ತೋಟಗಾರಿಕೆ ಮತ್ತು ಬೇಸಾಯದಲ್ಲಿ ಅಪಾರವಾದ ಆಸಕ್ತಿ.
ಬಿ.ಕಾಂ. ಪದವೀಧರರಾದ ಪದ್ಮರಾಜು ಅರಸಿ ಬಂದ ನೌಕರಿಯನ್ನು, ಬೆಂಗಳೂರಿನ ಆಕರ್ಷಣೆಯನ್ನು ಬಿಟ್ಟು ತೋಟಗಾರಿಕೆಗೆ ಬಂದಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 4-5 ಗಂಟೆ ಕಾಲ ತೋಟದಲ್ಲಿ ಕೆಲಸ ಮಾಡುವ ಇವರು ಸಹಜ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಖುಷಿಯಾಗಿ ಅಳವಡಿಸಿಕೊಂಡಿದ್ದಾರೆ. ಹಿತಮಿತವಾದ ಫ್ರೂನಿಂಗ್(ಸವರುವಿಕೆ) ಇವರ ಕೃಷಿ ಶೈಲಿ. ತೋಟದ ಅಗೆತ, ಬೇಸಾಯ ತೀರಾ ತೀರಾ ಕಮ್ಮಿ. ಎಲ್ಲಾ ಅಲ್ಲೇ ಮುಚ್ಚುವಿಕೆ. ಇದರಿಂದ ತೋಟದಲ್ಲಿ ಅಪಾರವಾದ ಬಯೋಮಾಸ್ ಕಾಣಬಹುದು. ತೋಟ ಕಾಲು ಶತಮಾನದಿಂದ ಒಂದು ಹದಕ್ಕೆ, ಲಯಕ್ಕೆ ಒಗ್ಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆರುನೂರು ಅಡಿ ಆಳದ ಬೋರ್‌ವೆಲ್‌ಗಳಲ್ಲಿ ಎರಡು ಇಂಚು ನೀರಿನ ಲಭ್ಯವಿದೆ. ಐವತ್ತು ಅಡಿ ಆಳದ ತೆರೆದ ಕಲ್ಲುಬಾವಿ ಇದ್ದರೂ ಜಲ ಬತ್ತಿಹೋಗಿದೆ. ಆದರೂ ಮುಚ್ಚಿಸುವ ತಪ್ಪು ನಿರ್ಧಾರ ಮಾಡಿಲ್ಲ.
ಸಹಜ, ಸಾವಯವ ಪದ್ಧತಿಯ ಅರಿವಿಲ್ಲದವರಿಗೆ ಇವರ ತೋಟ ಆಕರ್ಷಕವಾಗಿ ಕಾಣುವುದಿಲ್ಲ. ಸ್ಯಾದರಿಯಂತೆ ಗೋಚರಿಸುತ್ತದೆ. ಎರಡು ಮುಕ್ಕಾಲು ಎಕರೆಯಲ್ಲಿ ಐದುನೂರು ಅಡಿಕೆ, ನಲವತ್ತು ತೆಂಗು, ಹತ್ತು ಹಲಸು, ನಲವತ್ತು ತೇಗ, ಬೇಲಿಯಲ್ಲಿ ಅಪಾರವಾಗಿ ಶ್ರೀಗಂಧ ಮತ್ತು ಗ್ಲಿಸೀಡಿಯಾ, ಬೇವು ಹೀಗೆ ಒಟ್ಟು ಎರಡು ಸಾವಿರ ಮರಗಿಡಗಳನ್ನು, ನಲವತ್ತು ಜಾತಿಯ ಸಸ್ಯಪ್ರಭೇದಗಳನ್ನು ಕಾಣಬಹುದಾಗಿದೆ. ನಿತ್ಯ ಉಪಯೋಗಿಯಾದ ಕರಿಬೇವು, ಮಸಾಲೆ ಎಲೆಗಿಡ, ಸಿಮರುಬ, ನೇರಳೆ, ಮಾವು, ಸೀಬೆ, ಬಾಳೆ, ನುಗ್ಗೆ, ಗೆಣಸು, ಮೆಣಸು ಮಾತ್ರವಲ್ಲದೆ, ಔಷಧ ಸಸ್ಯಗಳು ಉಂಟು. ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಮುನ್ನೂರು ವೆನಿಲ್ಲಾ ಸಸ್ಯಗಳನ್ನು ಬೆಳೆದು ಆರ್ಥಿಕವಾಗಿಯೂ ಸದೃಢರಾದರು.
`ಒಂದು ಕೇಜಿಗೆ ಮೂರು ಸಾವಿರ ರೂಪಾಯಿ ಗಳಿಸಿದ್ದುಂಟು’ ಎಂಬುದಾಗಿ ತುಂಬಾ ಹೆಮ್ಮೆಯಿಂದ ಹೇಳುವ ಪದ್ಮರಾಜು `ಕಾಲಕ್ಕೆ ತಕ್ಕಂತೆ ನಮ್ಮ ರೈತರು ನಮ್ಮ ಜಮೀನಿನಲ್ಲಿ, ತೋಟಗಾರಿಕೆಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ’ ಎಂಬುದನ್ನು ಹೀಗೆ ವಿವರಿಸುತ್ತಾರೆ;
`ಸಕಾಲಕ್ಕೆ ಮಳೆ, ನೀರು, ಇದ್ದಾಗ ತಂದೆ ಕಾಲದಲ್ಲಿ ಆಹಾರ ಬೆಳೆಗಳಾದ ರಾಗಿ, ಜೋಳ, ಹುರುಳಿ, ಅವರೆ, ತೊಗರಿ, ಶೇಂಗಾ ಇತ್ಯಾದಿಗಳನ್ನು ದಿಣ್ಣೆ ಹೊಲದಲ್ಲಿ ಬೆಳೆದೆವು. ಇತ್ತೀಚಿನ (ಎರಡು ದಶಕದಿಂದ) ಅನಿಶ್ಚಿತ ಮಳೆ, ಅಂತರ್‌ಜಲದ ಕುಸಿತದ ಕಾರಣದಿಂದ ತೋಟಗಾರಿಕೆಗೆ ಒತ್ತು ಕೊಟ್ಟಿದ್ದೇವೆ. ನಮ್ಮ ದಿಣ್ಣೆ ಹೊಲವನ್ನು ಹೊರತುಪಡಿಸಿ, ಎರಡೂ ಮುಕ್ಕಾಲು ಎಕರೆ ತೋಟಗಾರಿಕೆಯ ಎರಡು ದಶಕದ ಅನುಭವದಿಂದ ಹೇಳುವುದಾದರೆ ವಾರ್ಷಿಕ ನಿರ್ವಹಣಾ ವೆಚ್ಚ ಕಳೆದು ಮೂರು ಲಕ್ಷ ರೂಪಾಯಿಗೆ ಮೋಸವಿಲ್ಲ. ಮುಖ್ಯವಾಗಿ ಅಡಿಕೆ, ತೆಂಗಿನ ಬೆಳೆಯ ಬೆಲೆಯಲ್ಲಿ ಏರುಪೇರಾಗುವುದರಿಂದ ಒಂದು ವರ್ಷ ಮೂರು ಲಕ್ಷ, ಇನ್ನೊಂದು ವರ್ಷ ಐದಾರು ಲಕ್ಷ ಸಿಗಬಹುದು. ಏನೇ ಏರುಪೇರಾದರೂ ಸರಾಸರಿ ಮೂರು ಲಕ್ಷ ಗ್ಯಾರಂಟಿ. ಆದುದರಿಂದ ನಮ್ಮ ಮನೆಯ ಮೂಲಭೂತ ಸೌಲಭ್ಯಗಳಿಗೆ ಕೊರತೆ ಇಲ್ಲ. ಇನ್ನು ನಮ್ಮ ತೋಟದ ನಲವತ್ತು ತೆಂಗಿನ ಮರಗಳಲ್ಲಿ ಇಪ್ಪತ್ತೈದು ನಲವತ್ತು ವರ್ಷ ಮೀರಿದವು. ಅವುಗಳಿಂದ ಹದವಾದ ಕಾಯಿಗಳನ್ನು ಆಯ್ದ ಸಸಿಗಳನ್ನು ಬೆಳೆಸುತ್ತೇವೆ. ಪ್ರತಿವರ್ಷ ಒಂದು ಸಾವಿರಕ್ಕೂ ಮಿಗಿಲಾಗಿ ಪ್ರತಿ ಸಸಿಗೆ ಬೆಳವಣಿಗೆ ಆಧರಿಸಿ ಇನ್ನೂರು-ಇನ್ನೂರೈವತ್ತು ರೂಪಾಯಿಗೆ ಮಾರುತ್ತೇವೆ. ಸ್ಥಳೀಯ ರೈತರ ಬೇಡಿಕೆಯನ್ನು ಪೂರ್ಣವಾಗಿ ಪೂರೈಸಲಾಗುತ್ತಿಲ್ಲ.’
ಪದ್ಮರಾಜು ಅವರ ಈ ಮಾತುಗಳನ್ನು ಕೇಳುತ್ತಿದ್ದರೆ ಸಹಜವಾಗಿ `ರೈತರೇಕೆ ಬಡವರು? ರೈತರೇಕೆ ಸಾಲ ಮಾಡುತ್ತಾರೆ? ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಏಕಿಲ್ಲ?’ ಮುಂತಾಗಿ ಅನೇಕ ಪ್ರಶ್ನೆಗಳು ಏಳುತ್ತವೆ. ಈ ಕುರಿತು ಮೂರು ದಶಕದಿಂದ ಕೃಷಿಯ ಒಡನಾಟ ಮತ್ತು ಪತ್ರಿಕಾ ಮಾಧ್ಯಮದ ಸಂಪರ್ಕವಿರುವ ಇವರು ಸಾವಿರಾರು ವರದಿ, ಲೇಖನ, ಟಿಪ್ಪಣಿಗಳನ್ನು ಬರೆದಿದ್ದಾರೆ. ಅಷ್ಟು ಮಾತ್ರವಲ್ಲದೆ ತಮ್ಮ ತೋಟದಲ್ಲೇ ಹತ್ತಾರು ವಿಚಾರ ಸಂಕಿರಣಗಳನ್ನು, ಕಮ್ಮಟಗಳನ್ನು, ಪ್ರಾತ್ಯಕ್ಷಿಕೆಗಳನ್ನು ನಡೆಸಿದ್ದಾರೆ. ರೈತರಲ್ಲಿ ಅರಿವು ಮತ್ತು ಆತ್ಮವಿಶ್ವಾಸ ತುಂಬಲು ಶ್ರಮಿಸಿದ್ದಾರೆ.
ಕಳೆದ ಒಂದು ದಶಕದಿಂದ ತೋವಿನಕೆರೆಯ `ಹಳ್ಳಿಸಿರಿ’ ಮಹಿಳಾ ಸಂಘಟನೆ ಜೊತೆ ಒಡನಾಟ ಇಟ್ಟುಕೊಂಡಿರುವ ಪದ್ಮರಾಜು ಈ ಏರಿಯಾದಲ್ಲಿ ಹಲಸಿನ ಕ್ರಾಂತಿಗೆ ಕಾರಣರಾಗಿದ್ದಾರೆ. ಹಲಸಿನ ಮೌಲ್ಯವರ್ಧನೆ ಇವರ ಮಂತ್ರ. ಹಿರೇಹಳ್ಳಿಯ ತೋಟಗಾರಿಕಾ ಕೇಂದ್ರಕ್ಕೆ ನಿರ್ದೇಶಕರಾಗಿ ಕರುಣಾಕರನ್ ಅವರು ಆಗಮಿಸಿದ್ದು `ಹಳ್ಳಿಸಿರಿ’ ಗೆ ನಿಜವಾಗಿಯೂ ಸಿರಿಯೇ ಬಂದAತಾಗಿದೆ. ಹಲಸಿನಿಂದ ಮುನ್ನೂರು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು ಎಂಬುದನ್ನು ಶ್ರೀಪಡ್ರೆಯವರು ತಮ್ಮ ಹಲಸಿನ ಅಧ್ಯಯನದಲ್ಲಿ ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಹಳ್ಳಿಸಿರಿ ಸಂಸ್ಕೃತಿಗೆ ತೊಂಬತ್ತು ಖಾದ್ಯಗಳನ್ನು ತಯಾರಿಸುವುದು ಗೊತ್ತಿದ್ದರೂ, ತುಂಬಾ ಜನಪ್ರಿಯವಾದ ಹದಿನೈದು ಖಾದ್ಯಗಳನ್ನು ತಮ್ಮ ಪ್ರಾತ್ಯಕ್ಷಿಕಾ ಕಾರ್ಯಕ್ರಮಗಳಲ್ಲಿ ಮತ್ತು ಹಲಸಿನ ಔತಣಕೂಟಗಳಲ್ಲಿ ರುಚಿ ತೋರಿಸುತ್ತಾರೆ. ಪದ್ಮರಾಜುರವರು ಈ ಅರ್ಧ ವರ್ಷದಲ್ಲಿ ಹಲಸಿನ ಕುರಿತು ವಾಟ್ಸಪ್‌ನಲ್ಲಿ ಮಾಹಿತಿ ನೀಡಿರುವುದೇ ಒಂದು ಕೃತಿಯಾಗುತ್ತದೆ. ಹಲಸಿಗೆ ನವಕಲ್ಪವೃಕ್ಷ ಎಂಬುವ ಹೆಸರು ಪ್ರಾಪ್ತವಾಗಿದೆ. ಹಲಸನ್ನ ಕುರಿತು ಯಾಕಿಷ್ಟು ವ್ಯಾಮೋಹ ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ:` ಹಲಸು ಮಳೆ ಕಡಿಮೆ ಬೀಳುವ ಒಣಪ್ರದೇಶದಲ್ಲೂ ಸಮೃದ್ಧಿಯಾಗಿ ಬೆಳೆಯುತ್ತದೆ. ಹೆಚ್ಚಿನ ಪೌಷ್ಠಿಕಾಂಶಗಳಿಂದ ಕೂಡಿದೆ. ಹಲವು ಖಾದ್ಯಗಳ ತಯಾರಿಕೆಯ ಸಾಧ್ಯತೆಯಿಂದ ಮೌಲ್ಯವರ್ಧನೆ. ನಮ್ಮ ಬಯಲು ಸೀಮೆಯ ರೈತರನ್ನು ಬರದಿಂದ ಮುಕ್ತಿಗೊಳಿಸಲು ಇರುವ ಸುಲಭೋಪಾಯ.’
ಹಲಸಿನ ಅಭಿಯಾನವನ್ನೇ ಆರಂಭಿಸಿರುವ ಪದ್ಮರಾಜುರವರಿಗೆ ಕೃಷಿ ವಿಶ್ವವಿದ್ಯಾಲಯದೊಂದಿಗೆ (ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಜಿಕೆವಿಕೆ) ಭಾರಿ ನಂಟು. ಜಿಕೆವಿಕೆ ವಿದ್ಯಾರ್ಥಿಗಳು ತಮ್ಮ ಪದವಿ ಅಧ್ಯಯನದ ಕೊನೆಯ ವರ್ಷ ಮೂರು ತಿಂಗಳು ಗ್ರಾಮವಾಸ್ತವ್ಯ ಮಾಡಿ, ರೈತರೊಂದಿಗೆ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವುದು ಮತ್ತು ಸಂವಾದ ಮಾಡುವುದು ಕಡ್ಡಾಯ. ಅಂಥ ಗ್ರಾಮ ವಾಸ್ತವ್ಯಗಳು ತೋವಿನಕೆರೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಆಗಿವೆ, ಆಗುತ್ತಿವೆ. ಹೀಗಾಗಿ ತೋವಿನಕೆರೆಗೂ, ಜಿಕೆವಿಕೆಗೂ ಅವಿನಾಭಾವ ಸಂಬಂಧ ಏರ್ಪಟ್ಟಿದೆ.
ರೈತ ಆತ್ಮಹತ್ಯೆಗೆ ಪರಿಹಾರವೇನು ಎಂಬ ಪ್ರಶ್ನೆಗೆ ಪದ್ಮರಾಜು ಉತ್ತರ: `ಎಲ್ಲ ರೈತರ ಆತ್ಮಹತ್ಯೆಗಳು ಸಾಲಬಾಧೆಗೆ ಅಲ್ಲ. ರೈತ ಸಾಲದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಿಲ್ಲ. ಸಾಲಮನ್ನಾ ಒಂದೇ ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ಕೆಲ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ, ಬರದ ಸಂದರ್ಭದಲ್ಲಿ ಮಾತ್ರ ಸರ್ಕಾರ ವಿವೇಚನೆಯಿಂದ ಸಾಲಮನ್ನಾ ಮಾಡಬೇಕಷ್ಟೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವುದು ಗಂಭೀರ ವಿಚಾರವಾಗಿದೆ’. ಹೀಗೆ ಅಭಿಪ್ರಾಯಪಡುತ್ತಾ ಅವರು ಬೆಳೆವಿಮೆ ಜಾಗೃತಿಗೆ ಮುಂದಾಗಿದ್ದಾರೆ.
ಇಂದು ಕೋವಿಡ್ ಸಂಕಷ್ಟ ನಮ್ಮ ಪರಿಸರ ಪ್ರಿಯರ, ರೈತರ ಬದುಕನ್ನು ಸಹ ಹಿಂಡಿ ಹಿಪ್ಪೆ ಮಾಡಿದೆ. ಇಂತಹ ದುರ್ಭರ ಸನ್ನಿವೇಶದಲ್ಲಿ ಇಂದು (ಜೂನ್ ೫) ವಿಶ್ವ ಪರಿಸರ ದಿನಾಚರಣೆ ಆಚರಿಸುವಂತಹ ಸ್ಥಿತಿ ಬಂದಿದೆ. ಹೀಗಿರುವಾಗ ರೈತರಿಗೆ ನಿಮ್ಮ ಸಂದೇಶವೇನು ಎಂದು ಕೇಳಿದಾಗ, `ರೈತ ಶ್ರಮಜೀವಿ. ಕಷ್ಟಸಹಿಷ್ಣು. ಆತ್ಮಹತ್ಯೆ ಪ್ರಶ್ನೆ ಬೇಡ. ಆತ್ಮಸ್ಥೈರ್ಯದ ಬಗ್ಗೆ ಮಾತನಾಡಿ, ಬರೆಯಿರಿ, ಬದುಕಿ’. ಇದು ಅವರ ಅನಿಸಿಕೆ. ಎಂಥ ಬುದ್ಧಿವಾದ! ಅಲ್ಲವೇ?
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.
ಸೂಪರ್.ನಿಮ್ಮ ಶ್ರಮಕ್ಕೆ ಒಂದು ನಮನ.ನಾನು ಸ್ವಲ್ಪ ಮಟ್ಟಿಗೆ ರೈತರು ಜೊತೆ ಒಡನಾಟ ಇರುವ ಕಾರಣ ರೈತರು ಕಷ್ಟಕ್ಕೆ ಹಲವು ಕಾರಣಗಳು. ನಿಮ್ಮ ತೋಟದಲ್ಲಿ ನೀವು ಎಲ್ಲಾ ರೀತಿಯ ಬೆಳೆ ಬೆಳೆದಿರುವ ಕಾರಣ ನಿಮಗೆ ನಷ್ಟ ವಾದರೆ ಸ್ವಲ್ಪ ಮಟ್ಟಿಗೆ ಸರಿದೂಗಿಸಬಹುದು ಆದರೆ ಕೆಲವು ಕಡೆ ರೈತರು ಹತ್ತು ಬೋರ್ ತೆಗೆದರೂ ನೀರು ಸಿಗದೆ ಕಷ್ಟಕ್ಕೆ ಒಳಗಾಗಿರುವರು.ಆಮೇಲೆ ಒಂದೇ ಬೆಳೆಗೆ ಅವಲಂಬಿತರಾಗಿರುವರು.ಅದಕ್ಕೆ ಬೆಲೆ ಸಿಗದೆ ಇದ್ದಾಗ ಮತ್ತೆ ಕಷ್ಟ. ಈ ರೈತರು ವೆನಿಲಾ ಬೆಳೆದು ಒಳ್ಳೆ ಲಾಭ ಪಡೆದ ಬಗ್ಗೆ ತಿಳಿಸಿದ್ದಾರೆ.ಆದರೆ ಆ ಬೆಳೆಯ ಬೆಲೆ ಕುಸಿಯಲು ಕಾರಣ ಕೆಲವು ರೈತರೇ. ಎಳೆ ವೆನಿಲ್ಲಾ ಕಿತ್ತು ಮಾರಾಟ ಮಾಡಿದ ಕಾರಣ ಆ ಸಮಯದಲ್ಲಿ ತುಂಬಾ ಜನ ಮೆಣಸು ಬಳ್ಳಿ ಕಿತ್ತು ವೆನಿಲ್ಲಾ ಬೆಳೆದರು ದರದಲ್ಲೀ ಕುಸಿತ.ಆದರೆ ನೀವು ಎಲ್ಲಾ ರೀತಿಯ ಬೆಳೆ ಬೆಳೆದಿರುವ ಕಾರಣ ನಿಮ್ಮ ಶ್ರಮಕ್ಕೆ ಸಂದ ಪ್ರತಿಫಲ ಸಿಕ್ಕಿದೆ.ನಿಮ್ಮ ರೀತಿಯಲ್ಲಿ ಕೆಲವರಾದರೂ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಉತ್ತಮ ಬದುಕು ಖಂಡಿತ
Good article. Better to go for mixed farming than mono culture