20.6 C
Karnataka
Sunday, September 22, 2024

    ಕಾರ್ಯ ಸಾಧನೆಗೆ ಅಡ್ಡದಾರಿ ಎಂದಿಗೂ ಸಲ್ಲ

    Must read

    ಸುಮಾ ವೀಣಾ

    ತನ್ನಿಕ್ಕಿ ದ ತತ್ತಿಯನ್ ತಾನೆ ನೊಣೆವಂತಕ್ಕುಂ– ಪ್ರಸ್ತುತ ಸಾಲು ಪಂಪನ ‘ವಿಕ್ರಮಾರ್ಜುನ ವಿಜಯ’ದ  ದಶಮಾಸ್ವಾಸದಲ್ಲಿ  ಉಲ್ಲೇಖವಾಗಿರುವಂಥದ್ದು.  ಕುರುಕುಲ ಪಿತಾಮಹಾ ಭೀಷ್ಮರು  ಮಹಾಭಾರತ ಯುದ್ಧ ನಡೆಯುವ ಪೂರ್ವದಲ್ಲಿ   ದಂಡನಾಯಕನ ಪಟ್ಟ ಕಟ್ಟುವ ಸಂದರ್ಭದಲ್ಲಿ   ಉಭಯಸಂಕಟ ಅನುಭವಿಸುವ ಸಂದರ್ಭದಲ್ಲಿದೆ.  ಪಾಂಡವರು ಹಾಗು ಕೌರವರು ಕುರುಕುಲಪಿತಾಮಹ ಭೀಷ್ಮರಿಗೆ ಮೊಮ್ಮಕ್ಕಳೇ .ಅವರುಗಳೆ ಪರಸ್ಪರ ಹೋರಾಟ ಮಾಡಿಕೊಳ್ಳುತ್ತಿದ್ದಾರೆ  ಅವರನ್ನು ರಕ್ಷಿಸಲಾಗುತ್ತಿಲ್ಲವಲ್ಲ.  ಕೈಕಟ್ಟಿದಂಥ ಪರಿಸ್ಥಿತಿ ಎಂದು ಭೀಷ್ಮರು ನೊಂದುಕೊಳ್ಳುತ್ತಾರೆ. ಹಾವು ತಾನೆ ಇಟ್ಟ ಮೊಟ್ಟೆಗಳನ್ನು ತಾನೆ ನಷ್ಟಮಾಡಿಕೊಂಡು ತನ್ನ ವಂಶವನ್ನೆ  ನಾಶಮಾಡಿಕೊಳ್ಳುವಂತೆ ನಾನು ನನ್ನ ವಂಶವನ್ನು ನಾನೆ ನಾಶ ಮಾಡಿಕೊಳ್ಳುತ್ತಿದ್ದೇನಲ್ಲಾ ಯಾರಿಗೂ ಬರಬಾರದ ಧರ್ಮ ಸಂಕಟ  ಎಂದು  ದುಃಖಿಸುತ್ತಾರೆ.

    ಕೆಲವೊಮ್ಮೆ ಹಾಗೆ ನಮ್ಮ ತಪ್ಪುಗಳೆ, ನಾವೆ ಮಾಡಿಕೊಳ್ಳುವ ಎಡವಟ್ಟುಗಳೆ   ನಮಗೆ ಉರುಳಾಗುವ ಸಂದರ್ಭಗಳು ಬರುತ್ತವೆ. “ಅವರವರ ತಲೆಯ ಮೇಲೆ ಅವರವರವೇ ಕೈಗಳು” ಅನ್ನುತ್ತಾರಲ್ಲ ಹಾಗೆ. ಇಲ್ಲಿ ಮೋಹಿನ ಭಸ್ಮಾಸುರರ ಕತೆ ನೆನಪಾಗುತ್ತಾದೆ .  ವಿಷ್ಣು ಮೋಹಿನಿ ಅವತಾರ ತಾಳಿದ್ದೆ ಭಸ್ಮಾಸುರನ ಸಂಹಾರಕ್ಕೆ ಅವನು ಯಾವಾಗ ಅವನ ತಲೆ ಮೇಲೆ ಕೈಯನ್ನಿಟ್ಟುಕೊಳ್ಳುವನೋ ಅಂದೇ ಮರಣಿಸುವನು ಎಂಬ ವರವನ್ನು ಪಡೆದಿರುತ್ತಾನೆ.   ಮಿತಿಮೀರಿದ ಭಸ್ಮಾಸುರನ ಅಟ್ಟಹಾಸ ಸಹಿಸಲು  ಸಾಧ್ಯವಾಗದೇ ಹೋದಾಗ ಮೋಹಕ ರೂಪ ಅವತರಿಸಿ ಬಂದ  ವಿಷ್ಣು ನೃತ್ಯ ಹೇಳಿಕೊಡುವ ನೆಪದಲ್ಲಿ  ಅವನ ತಲೆಯ  ಮೇಲೆ ಕೈಇಡುವಂತೆ  ಮಾಡುತ್ತಾನೆ. ಭಸ್ಮಾಸುರನನ್ನು ಸಂಹರಿಸುತ್ತಾನೆ.

    ಭೀಷ್ಮರ   ಉಭಯಸಂಕಟ,  ಭಸ್ಮಾಸುರನ  ಅಟ್ಟಹಾಸ ಬೇರೆ ಬೇರೆ ಸನ್ನಿವೇಶಗಳು.   ಪ್ರಸ್ತುತ ಕಾಲಘಟ್ಟದಲ್ಲೂ  ಈ ವಿಜ್ಞಾನ ತಂತ್ರಜ್ಞಾನ ಯುಗದಲ್ಲೂ  “ತನ್ನಿಕ್ಕಿದ ತತ್ತಿಯನೆ ತಾನೆ ನೊಣವಂತಕ್ಕುಂ” ಎಂಬ ಮಾತು ಅಕ್ಷರಷಃ ಅನ್ವಯಿಸುತ್ತದೆ. ಮಾನವ ಸಂಶೋಧನೆಗಳನ್ನು ಮಾಡುವುದು    ಜೀವಪರ ಕಾಳಜಿಯಿಂದ .ಜನರ   ಉಪಯೋಗಕ್ಕೆ ಬರುವಂತೆ. ಆದರೆ ಅವುಗಳೆ ಮನುಕುಲದ ನಾಶಕ್ಕೆ ಕಾರಣವಾಗಿ ಅಪಸವ್ಯಗಳಾಗಿ ಕಾಡುತ್ತಿವೆ.

    ಉದಾಹರಣೆಗೆ  ಪ್ರಸವ ಪೂರ್ವ ಸ್ಕ್ಯಾನಿಂಗ್ ಬೆಳೆಯಲಿರುವ  ಭ್ರೂಣದ ಆರೋಗ್ಯ  ಪರೀಕ್ಷೆಗಾಗಿರುವುದು ಇದನ್ನೆ  ಕೆಲವು ಅವಿವೇಕಿಗಳು ಲಿಂಗ ಪತ್ತೆಗೆ ದುರ್ಬಳಕೆ ಮಾಡಿಕೊಂಡ ಅನೇಕ  ಸಾಲು ಸಾಲು ಉದಾಹರಣೆಗಳಿವೆ. ಉಳಿದಂತೆ  ನಮ್ಮ ನಾಗರಿಕರೂ ಕೂಡ  ಸುಲಭದಲ್ಲಿ ಕಾರ್ಯ ಸಾಧಸಿಕೊಳ್ಳಲು ಅಡ್ಡದಾರಿಗಳನ್ನು, ನ್ಯಾಯವಲ್ಲದ  ಉಪ ಮಾರ್ಗಗಳನ್ನು ಹಿಡಿಯುತ್ತಾರೆ . ಇವು  ಕ್ರಮೇಣ ಅವರಿಗೇ ತೊಡಕುಗಳಾಗುತ್ತವೆ“ತಾನೇ ತೋಡಿದ ಹಳ್ಳದಲ್ಲಿ ತಾನೆ ಬಿದ್ದಂತೆ”   ಎಂದು  ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದು. ಮನುಷ್ಯ ಸದಾ ನೇರ- ನಿಷ್ಟರ ಜೀವನ ನಡೆಸಬೇಕು , ಅನ್ಯಮಾರ್ಗಿಗಳಾದರೆ, ದಾಕ್ಷಿಣ್ಯಕ್ಕೆ ಕಟ್ಟುಬಿದ್ದರೆ  ತೊಡಕುಗಳು ಅವರಿಸುತ್ತವೆ ಎಂಬ ಸೂಕ್ಷ್ಮವನ್ನು ಅರಿಯಬೇಕು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!