21.2 C
Karnataka
Sunday, September 22, 2024

    ಮಂಗಳೂರು ವಿವಿಯಲ್ಲಿ ಪರಿಸರ ದಿನಾಚರಣೆ

    Must read

    ಮಂಗಳೂರು ವಿಶ್ವವಿದ್ಯಾನಿಲಯವು ಮಂಗಳಗಂಗೋತ್ರಿಯಲ್ಲಿ   ವಿಶ್ವ ಪರಿಸರ ದಿನವನ್ನು ಆಚರಿಸಿತು. ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಸಸಿಯನ್ನು ನೆಟ್ಟು  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    “ಕೋವಿಡ್ -19 ಎರಡನೇ ಅಲೆಯ ಪರಿಣಾಮವಾಗಿ    ಕ್ಯಾಂಪಸ್ನ  ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾನಿಲಯ  ಉದ್ಯೋಗಿಗಳೆಲ್ಲರ ಸಾಮೂಹಿಕ ಭಾಗವಹಿಸುವಿಕೆಯೊಂದಿಗೆ ಈ ವರ್ಷದ  ವಿಶ್ವ ಪರಿಸರ ದಿನವನ್ನು ಆಚರಿಸಲು ಸಾಧ್ಯವಿಲ್ಲದ ಕಾರಣ, ನಾವು ಈ  ದಿನವನ್ನು  ಸರಳ ಆದರೆ ಪರಿಣಾಮಕಾರಿ ವಿಧಾನಗಳಲ್ಲಿ ನಡೆಸಲು ನಿರ್ಧರಿಸಿದ್ದೇವೆ ಎಂದರು.

    ಇಂದಿನ  ಮಕ್ಕಳು   ಭವಿಷ್ಯದ ನಾಗರಿಕರು.  ರಾಷ್ಟ್ರದ ಪ್ರಜ್ಞಾವಂತ ನಾಗರೀಕರನ್ನಾಗಿ ರೂಪುಗೊಳಿಸುವಲ್ಲಿ ಮಕ್ಕಳಲ್ಲಿ   ಪರಿಸರದ ಬಗ್ಗೆ ಪ್ರೀತಿ  ಕಾಳಜಿ ಮೂಡಿಸುವಂತದ್ದು ಒಂದು ಮಹತ್ವಪೂರ್ಣವಾದ ಕಾರ್ಯ. ಅಂತೆಯೇ,   ರಾಷ್ಟ್ರ ನಿರ್ಮಾಣದಲ್ಲಿ  ಯುವಶಕ್ತಿಯೂ ಪಾತ್ರವೂ  ಅತ್ಯಮೂಲ್ಯವಾದದ್ದು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯವು   ದತ್ತು ಸ್ವೀಕರಿಸಿರುವ ಸರ್ಕಾರಿ ಶಾಲಾ ಮಕ್ಕಳಿಗಾಗಿ ‘ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ’    ಹಾಗೂ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ‘ಪರಿಸರ ಸಂರಕ್ಷಣೆಯಲ್ಲಿ ನನ್ನ ವೀಕ್ಷಣೆಗಳು ಮತ್ತು ಅನುಭವಗಳು’  ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಂದ  ಒಳ್ಳೆಯ ಪ್ರತಿಸ್ಪಂದನೆ  ಬಂದಿರುವುದು ಪ್ರಶಂಸನೀಯ ಎಂದೂ ಹೇಳಿದರು.

    ಆಸಕ್ತ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಪ್ರಬಂಧವನ್ನು ಬರೆದು ಕೆಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಎಲ್ಲಾ ವಿಜೇತರಿಗೆ ಬಹುಮಾನ ನೀಡಲಾಗುವುದು. ಬಹುಮಾನಗಳನ್ನು ಗೆಲ್ಲಲು ಸಾಧ್ಯವಾಗದವರು ನಿರಾಶೆಗೊಳ್ಳಬೇಡಿ. ಅವರಿಗೆ  ಮೆಚ್ಚುಗೆಯ ಪ್ರಮಾಣಪತ್ರವನ್ನೂ ನೀಡಲಾಗುವುದು. ಆದರೆ ನಿಮ್ಮ ಸಕ್ರಿಯ ಭಾಗವಹಿಸುವಿಕೆ ಮತ್ತು ಪ್ರಕೃತಿಯ ಬಗೆಗಿನ ಕಾಳಜಿಯನ್ನು ನಿಲ್ಲಿಸಬೇಡಿ. ಮನುಷ್ಯರೂ ಸೇರಿದಂತೆ ಎಲ್ಲಾ  ಪ್ರಾಣಿಗಳ ಬದುಕು ಸಸ್ಯಗಳ ಮೇಲೆ ಅವಲಂಬಿತವಾಗಿದೆ. ಸಸ್ಯಗಳು,  ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ, ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತವೆ, ಆವಾಸಸ್ಥಾನ ಮತ್ತು ಆಹಾರವನ್ನು ಒದಗಿಸುತ್ತವೆ, ನೀರಿನ ಚಕ್ರವನ್ನು ನಿಯಂತ್ರಿಸುತ್ತವೆ, ಹೀಗೆ ಅನೇಕ  ಸೇವೆಗಳನ್ನು ನೀಡುತ್ತವೆ. ಆದ್ದರಿಂದ, ಅಸ್ತಿತ್ವದಲ್ಲಿರುವ ಹಸಿರನ್ನು ಸಂರಕ್ಷಿಸುವುದರ ಜೊತೆಗೆ, ನಾವು ಹೆಚ್ಚು ಹೆಚ್ಚು ಸಸ್ಯಗಳನ್ನು ನೆಟ್ಟು ಅರಣ್ಯವನ್ನು ಮರುಸೃಷ್ಟಿಸಬೇಕು.   ನಮ್ಮ ದಿನನಿತ್ಯದ ಜೀವನದಲ್ಲಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ  ಪ್ರಕೃತಿಗೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಒಳ್ಳೆಯದು.

    ಮಳೆನೀರು ಕೊಯ್ಲು,  ಸೌರಶಕ್ತಿ ಬಳಕೆ, ಪೇಪರ್ ಲೆಸ್ ಇ -ಆಫೀಸ್, ಬ್ಯಾನ್  ಆನ್   ಸಿಂಗಲ್ ಯೂಸ್  ಪ್ಲಾಸ್ಟಿಕ್,  ಒನ್ ಸ್ಟುಡೆಂಟ್ – ಒನ್ ಪ್ಲಾಂಟ್,  ಔ’ಷಧಿಯ ಸಸ್ಯಗಳ ನಿರ್ವಹಣೆ,  ಡಿಜಿಟಲ್ ಲೇಬಲ್ಲಿಂಗ್ ಒಫ್  ಪ್ಲಾಂಟ್ಸ್  ಮುಂತಾದ ಪರಿಸರಸ್ನೇಹಿ ಕಾರ್ಯಚಟುವಟಿಕೆಗಳನ್ನು ಇನ್ನಷ್ಟೂ  ವಿಸ್ತಾರವಾಗಿ ಹಾಗೂ  ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ.  ‘ಪರಿಸರ-ವ್ಯವಸ್ಥೆ ಪುನಃಸ್ಥಾಪನೆ’ ವಿಶ್ವಸಂಸ್ಥೆಯ ಈ ಬೃಹತ್ ಯೋಜನೆ ಯಶಸ್ಸುಗೊಳಿಸುವಲ್ಲಿ  ನಾವೆಲ್ಲರೂ ಕೈಜೋಡಿಸೋಣ. ಪರಿಸರವನ್ನು ಸಂರಕ್ಷಿಸೋಣ” ಎಂದು ಹೇಳಿದರು.  

    ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಪ್ರಶಾಂತ ನಾಯ್ಕ ಅವರು   ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾನಾಡಿ  ಸ್ವಾಗತಿಸಿದರು.  

    ಜೀವವಿಜ್ಞಾನ ವಿಭಾಗದ ಮುಖ್ಯಸ್ಥೆ  ಪ್ರೊ.  ಮೋನಿಕಾ ಸದಾನಂದ ಅವರು   ‘ಪರಿಸರ ವ್ಯವಸ್ಥೆ ಪುನಃಸ್ಥಾಪನೆಗೆ ಜೈವಿಕ ತಂತ್ರಜ್ಞಾನದ ವಿಧಾನಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.  ಸಸ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ   ಪ್ರೊ. ಬಿ. ರಾಜು ಕೃಷ್ಣ  ಚಲನಾನವರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಪರಿಸರ ವಿಜ್ಞಾನ ವಿಭಾಗದ ಸಂಯೋಜಕರಾದ ಪ್ರೊ. ತಾರಾವತಿ ಎನ್  ಸಿ ಅವರು ವಂದನಾರ್ಪಣೆ ಸಲ್ಲಿಸಿದರು.   ಪ್ರೊ. ಬಿ . ನಾರಾಯಣ, ಹಣಕಾಸು ಅಧಿಕಾರಿಗಳು, ಡಾ. ಚಂದ್ರು ಹೆಗ್ಡೆ  ವಿಶೇಷ ಅಧಿಕಾರಿಗಳು, ಇನ್ನಿತರರು   ಉಪಸ್ಥಿತರಿದ್ದರು. 

    ಕುಲಸಚಿವರಾದ  ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಅವರ   ನೇತೃತ್ವದಲ್ಲಿ  ಜೆಸಿಐ  ಮಂಗಳಗಂಗೋತ್ರಿ ಸಹಭಾಗಿತ್ವದೊಂದಿಗೆ  ಮಂಗಳಗಂಗೋತ್ರಿ ಆವರಣದಲ್ಲಿ ಸುಮಾರು ನೂರು ಸಸಿಗಳನ್ನು ನೆಡಲಾಯಿತು.  ಜೇಸಿ  ಫ್ರಾಂಕಿ ಪ್ರಾನ್ಸಿಸ್ ಕುಟಿನೊ,  ತ್ಯಾಗಂ ಹರೇಕಳ, ಶ್ರೀ ದಿವಾಕರ  ಎಂ.ಎಸ್., ಡಾ.ಶರತ್ ಚಂದ್ರ ಕೆ., ಶ್ರೀ ಚನಿಯಪ್ಪ ನಾಯಕ್, ಡಾ.ಪ್ರಸನ್ನ  ಬಿ.ಕೆ., ಶ್ರೀ ಚಂದ್ರ, ಆನಂದ ಕೆ.  ಅಸೈಗೋಳಿ, ಶ್ರೀಮತಿ. ಪ್ರತಿಮಾ ಹೆಬ್ಬಾರ್, ಜೆ.ಸಿ. ಜಯಲಕ್ಷ್ಮಿ  ಇತರರು ಸಹಕರಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!