23.2 C
Karnataka
Friday, November 22, 2024

    ಅಧಿಕಾರಿಗಳ ಜೊತೆ ಮೀಟಿಂಗ್: ಅನುಮತಿ ಕೊಡಲು ಸರ್ಕಾರಕ್ಕೆ ಸೂಚಿಸಿ ಎಂದು ಸ್ಪೀಕರ್ ಗೆ ಪತ್ರ ಬರೆದ ಸಿದ್ಧರಾಮಯ್ಯ

    Must read

    ಕೊರೊನಾ ವಿಚಾರದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕೋರಿದ್ದಾರೆ.

    ಈ ಸಂಬಂಧ ವಿಧಾನಸಭೆ ಅಧ್ಯಕ್ಷರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೊರೋನಾ ಸಾಂಕ್ರಾಮಿಕವನ್ನು ನಿರ್ವಹಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಝೂಮ್ ತಂತ್ರಾಂಶದ ಮೂಲಕ ಮಾಹಿತಿ ಪಡೆಯಲು ಉದ್ದೇಶಿಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಝೂಮ್ ಮೀಟಿಂಗ್ ಮೂಲಕ ಹಾಜರಾಗಿ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸಹ ಪತ್ರ ಬರೆಯಲಾಗಿತ್ತು. ಮೂರು ದಿನಗಳ ನಂತರ ಮುಖ್ಯ ಕಾರ್ಯದರ್ಶಿಗಳು ನನಗೆ ಪತ್ರ ಬರೆದು ವಿರೋಧ ಪಕ್ಷದ ನಾಯಕರು ಸಭೆ ನಡೆಸಬಾರದು, ಬೇಕಿದ್ದರೆ ಪತ್ರ ಬರೆದು ಮಾಹಿತಿ ಪಡೆಯಬಹುದಾಗಿದೆ ಎಂದು ಮುಖ್ಯ ಮಂತ್ರಿಗಳು ಅನುಮೋದನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಆದರೆ ಕಳೆದ 21 ತಿಂಗಳಲ್ಲಿ ಸರ್ಕಾರಕ್ಕೆ ಹಲವು ಪತ್ರಗಳನ್ನು ಬರೆದಿದ್ದೇನೆ. ಕೋವಿಡ್ ಸಂದರ್ಭದಲ್ಲೂ ಸುಮಾರು 15 ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದೇನೆ. ಇವುಗಳಿಗೆ ಇದುವರೆಗೂ ಸಹ ಒಂದು ಅಕ್ಷರದ ಉತ್ತರವೂ ಬಂದಿಲ್ಲ. ಸರ್ಕಾರವೊಂದು ಜೀವಂತವಾಗಿದ್ದರೆ, ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ವಿರೋಧ ಪಕ್ಷದ ನಾಯಕರು ಪತ್ರ ಬರೆದ ಕೂಡಲೇ ಮಾಹಿತಿ ನೀಡುತ್ತಿತ್ತು.
    ವಿರೋಧ ಪಕ್ಷವಾಗಿ ನಾವೂ ಸಹ ಜನರ ಜೊತೆ ನಿಂತು ಅವರ ದುಃಖಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಆದರೆ ರಾಜ್ಯದ ಆರೋಗ್ಯ, ಆರ್ಥಿಕ ಮತ್ತು ಕೃಷಿ ವಲಯಗಳಲ್ಲಿ ಏನಾಗುತ್ತಿದೆ? ಎಂದು ತಿಳಿದುಕೊಂಡು ಅವುಗಳ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಬೇಕಾದುದು, ಸಲಹೆಗಳನ್ನು ನೀಡಬೇಕಾದುದು ವಿರೋಧ ಪಕ್ಷದ ನಾಯಕನ ಶಾಸನಾತ್ಮಕ ಅಧಿಕಾರ.ವಿಳಂಬ ಮಾಡದೆ ವಿರೋಧ ಪಕ್ಷದ ನಾಯಕರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಬೇಕಾಗಿರುವುದು ರ್ಕಾರದ ಸಂವಿಧಾನಾತ್ಮಕ ಜವಾಬ್ಧಾರಿ. ಆದರೆ ಈ ಜವಾಬ್ಧಾರಿಗಳನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಹಾಗಾಗಿ ಸರ್ಕಾರವು ಉದ್ದೇಶಪೂರ್ವಕವಾಗಿ ಮಾಹಿತಿ ಕೊಡದೆ ಹಕ್ಕು ಚ್ಯುತಿಯನ್ನುಂಟು ಮಾಡಿದೆ ಎಂಬ ನಿಲುವಿಗೆ ಬರಬೇಕಾದ ಕೃತ್ಯವೆಸಗುತ್ತಿದೆ.

    ನನಗೆ ಅಧಿಕಾರಿಗಳ ಕಾರ್ಯವೈಖರಿಗಳ ಕುರಿತು ಪರಿಶೀಲನೆ ನಡೆಸುವ, ನಿರ್ದೇಶನಗಳನ್ನು ನೀಡುವ ಉದ್ದೇಶವಿಲ್ಲ. ಅಷ್ಟರಮಟ್ಟಿಗಿನ ಸಾಂವಿಧಾನಿಕ ಅರಿವು ಇದೆ. ಕೆಲವು ಮಾಹಿತಿ ಪಡೆಯುವುದಷ್ಟೇ ನನ್ನ ಉದ್ದೇಶ. ಮಾಹಿತಿ ನೀಡಬೇಕಾದ ನಮೂನೆಯನ್ನು ಸಿದ್ಧಪಡಿಸಿ ಅಧಿಕಾರಿಗಳಿಗೆ ನೀಡಲಾಗಿದೆ. ಆ ನಮೂನೆಯನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡು ಭರ್ತಿ ಮಾಡುವಷ್ಟು ತಿಳಿವಳಿಕೆ ಇರುವವರೂ ಕಡಿಮೆ ಇದ್ದಾರೆ. ಕಳೆದ ಎರಡು ವರ್ಷಗಳಿಂದ ನಾವು ಕೇಳಿರುವ ಮಾಹಿತಿಯೊಂದಾದರೆ ಅಧಿಕಾರಿಗಳು ಇನ್ನೊಂದು ಮಾಹಿತಿ ನೀಡಿದ್ದಾರೆ. ಈ ಗೊಂದಲಗಳಿಗೆ ಅವಕಾಶ ನೀಡಬಾರದೆಂಬ ಉದ್ದೇಶದಿಂದಲೇ ನೇರವಾಗಿ ಮುಖತಃ ಮಾಹಿತಿ ಪಡೆಯಲು ಉದ್ದೇಶಿಸಿದ್ದೆ. ಅದಕ್ಕಾಗಿ ಒಂದು ಜಿಲ್ಲೆಗೆ ಅರ್ಧ ಗಂಟೆಯಿಂದ ಒಂದು ಗಂಟೆಯಷ್ಟು ಮಾತ್ರ ಕಾಲ ನಿಗಧಿ ಪಡಿಸಿದ್ದೆ. ಖುದ್ದು ಮಾಹಿತಿ ಪಡೆಯುವ ನನ್ನ ಹಕ್ಕನ್ನು ಸರ್ಕಾರವು ನಿರಾಕರಿಸಿರುವುದರಿಂದ ಅದು ಹಕ್ಕು ಚ್ಯುತಿಯಾಗುವುದಿಲ್ಲವೆ?

    ಜೊತೆಗೆ ನಾನು ಕಳುಹಿಸಿದ್ದ ನಮೂನೆಯಲ್ಲಿ ಕೇವಲ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಾತ್ರ ಮಾಹಿತಿ ಕಳುಹಿಸಿದ್ದಾರೆ. ಉಳಿದವರು ಬೇಜವಾಬ್ಧಾರಿ ವರ್ತನೆ ತೋರಿದ್ದಾರೆ. ಅವರ ವರ್ತನೆಗೆ ಯಾವ ಶಿಕ್ಷೆ ವಿಧಿಸುತ್ತೀರಿ? ಮುಖ್ಯ ಕಾರ್ಯದರ್ಶಿಗಳು ನನಗೆ ಕಳಿಸಿರುವ ಪತ್ರದಲ್ಲಿ 2009 ರ ಸುತ್ತೋಲೆಯನ್ನು ನಮೂದಿಸಿದ್ದಾರೆ. 2009 ರ ಸುತ್ತೋಲೆಯನ್ನು 2016 ರಲ್ಲಿ ಪುನರುಚ್ಛರಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಹಿಂದೆ ಸುತ್ತೋಲೆಗಳನ್ನು ಹೊರಡಿಸಿದಾಗ ಸರ್ಕಾರಕ್ಕೆ ತಂತ್ರಜ್ಞಾನ ಸಂಬಂಧಿ ಅನುಕೂಲಗಳಿರಲಿಲ್ಲ. ಹಾಗಾಗಿ ಸಭೆ ಕರೆದು ಮಾಹಿತಿ ಪಡೆಯಬೇಕಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಝೂಮ್, ಗೂಗಲ್ ಮುಂತಾದ ಅಪ್ಲಿಕೇಷನ್ನುಗಳ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಇದಕ್ಕಾಗಿ ಸರ್ಕಾರವೇನೂ ವ್ಯವಸ್ಥೆ ಮಾಡಬೇಕಾಗಿರಲಿಲ್ಲ. ಸರ್ಕಾರ ಇದಿಷ್ಟನ್ನೂ ಅರ್ಥಮಾಡಿಕೊಳ್ಳದ ಸ್ಥಿತಿ ತಲುಪಿದೆ.

    ಹಿಂದೆ ನಾನು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಬರ ಮುಂತಾದ ವಿಚಾರಗಳ ಕುರಿತು ಖುದ್ದು ಮಾಹಿತಿ ಪಡೆದಿದ್ದರು. ಅದಕ್ಕೆ ನನ್ನ ಸರ್ಕಾರ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ ಅದೇ ರೀತಿಯಲ್ಲಿ ತಂತ್ರಜ್ಞಾನದ ನೆರವು ಪಡೆದು ಮಾಹಿತಿ ಸಂಗ್ರಹಿಸುವುದನ್ನು ನಿರಾಕರಿಸಲಾಗುತ್ತಿದೆ. ಸರ್ಕಾರದ ಈ ಕ್ರಮವು ಸಂವಿಧಾನದ ಹಲವು ಅನುಚ್ಛೇದಗಳ ಪ್ರಕಾರ ಹಕ್ಕುಚ್ಯುತಿಯಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಸ್ಪೀಕರ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!