18.6 C
Karnataka
Friday, November 22, 2024

    ಬಿಜೆಪಿಯದ್ದು ಪಿಕ್ ಪಾಕೆಟ್ ಸರ್ಕಾರ: ಡಿ.ಕೆ. ಶಿವಕುಮಾರ್ ವಾಗ್ದಾಳಿ

    Must read

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ‘100 ನಾಟ್ ಔಟ್’ ಆಂದೋಲನ ಆರಂಭಿಸಿದ್ದು, ‘ಬಿಜೆಪಿಯದ್ದು ಪಿಕ್ ಪಾಕೆಟ್ ಸರ್ಕಾರವಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಐದು ದಿನಗಳ ಕಾಲ ನಡೆಯಲಿರುವ ಈ ಪ್ರತಿಭಟನಾ ಆಂದೋಲನಕ್ಕೆ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ರೆಡ್ಡಿ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಪ್ರತಿಭಟನೆ ಮಾಡಿ ಚಾಲನೆ ನೀಡಿದರು. ಈ ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ದಿನೇಶ್ ಗುಂಡೂರಾವ್ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.

    ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:

    ‘ಬಹಳ ವಿಶೇಷ ಹಾಗೂ ಐತಿಹಾಸಿಕ ದಿನಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಭಾರತ ಸರ್ಕಾರ ದೇಶದ ಪ್ರತಿಯೊಬ್ಬ ಪ್ರಜೆಗೂ ಬರೆ ಎಳೆದಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ಕೇವಲ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡು ವಾಹನ ಚಲಾಯಿಸುವವರಿಗೆ ಮಾತ್ರ ಪರಿಣಾಮ ಬೀರುತ್ತಿಲ್ಲ. ಪ್ರತಿ ನಾಗರೀಕನೂ ಖರೀದಿಸುವ ಪ್ರತಿ ವಸ್ತುಗಳು ದುಬಾರಿಯಾಗುವಂತೆ ಬರೆ ಎಳೆದಿದ್ದಾರೆ.

    ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ನಾವು ಹೋರಾಟ ಮಾಡಬೇಕಿದೆ. ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಾಕಷ್ಟು ಹೋರಾಟ ಮಾಡಿದ್ದನ್ನು ನಾವು ನೋಡಿದ್ದೇವೆ. ಇದೇ ಯಡಿಯೂರಪ್ಪ, ಶೋಭ ಕರಂದ್ಲಾಜೆ ಹಾಗೂ ಸಚಿವರೆಲ್ಲರು ಯುಪಿಎ ಸರ್ಕಾರದ ಅವಧಿಯಲ್ಲಿ ಒಂದೆರಡು ರೂಪಾಯಿ ಹೆಚ್ಚಾದಾಗ ಗಲಾಟೆ ಮಾಡಿದ್ದರು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಈ ವರ್ಷ ಜನವರಿಯಿಂದ ಇಲ್ಲಿಯವರೆಗೂ 42 ಕ್ಕೂ ಹೆಚ್ಚು ಬಾರಿ ಬೆಲೆ ಏರಿಕೆ ಮಾಡಿದೆ. ಏಪ್ರಿಲ್ ನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ದರ ಹೆಚ್ಚಾಗಲಿಲ್ಲ. ಅದನ್ನು ಬಿಟ್ಟರೆ ಉಳಿದ ಐದು ತಿಂಗಳೂ ಬೆಲೆ ಹೆಚ್ಚಳ ಮಾಡಿದೆ.

    ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿಸಿ, 20.60 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ. ಸರ್ಕಾರ ತನ್ನ ಆದಾಯ ವೃದ್ಧಿ ಮಾಡಿಕೊಳ್ಳಲು, ಬೊಕ್ಕಸ ತುಂಬಿಸಿಕೊಳ್ಳಲು ಎಲ್ಲ ಪದಾರ್ಥಗಳ ಬೆಲೆ ಹೆಚ್ಚಳ ಮಾಡುತ್ತಿದೆ. ಇದು ಜನರ ನಿತ್ಯ ಬದುಕಿನಲ್ಲಿ ಸಮಸ್ಯೆ ಉಂಟು ಮಾಡುತ್ತಿದೆ. ಕೇಂದ್ರ ಸರ್ಕಾರ ಜನರ ಜೇಬಿಗೆ ಕನ್ನ ಹಾಕುತ್ತಿದ್ದು, ಇದೊಂದು ಪಿಕ್ ಪಾಕೆಟ್ ಸರ್ಕಾರ. ಇದರ ಬಗ್ಗೆ ನಾವು ಜನರಲ್ಲಿ ತಿಳುವಳಿಕೆ ಮೂಡಿಸಿ, ಹೋರಾಟ ಮಾಡಬೇಕಿದೆ.

    ಈ ಹಿಂದೆ ಇಂಧನ ಬೆಲೆ ಎಷ್ಟಿತ್ತು, ಈಗ ಎಷ್ಟಾಗಿದೆ ಎಂದು ನಾವು ತಿಳಿಸಿದ್ದೇವೆ. ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಇಳಿಸಿ ತೈಲಬೆಲೆಗೆ ಅನುಗುಣವಾಗಿ ದರ ಇಳಿಸಬೇಕು. ಜನರಿಗೆ ಹಣ ವಾಪಸ್ ನೀಡಬೇಕು, ಜನರಿಂದ ದೋಚುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ನಾವಿಂದು ಪ್ರತಿಭಟನೆ ಆರಂಭಿಸಿದ್ದು, ರಾಜ್ಯದಲ್ಲಿ ಒಟ್ಟು 5 ಸಾವಿರ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಹೋರಾಟ ಐದು ದಿನಗಳ ಕಾಲ ನಡೆಯಲಿದ್ದು, ಇಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ನಾಳೆ ತಾಲೂಕು ಕೇಂದ್ರ, ನಾಡಿದ್ದು ಜಿಲ್ಲಾ ಪಂಚಾಯ್ತಿ ಮತ್ತು ಹೋಬಳಿ ಕೇಂದ್ರಗಳಲ್ಲಿ 14ರಂದು ಗ್ರಾಮಪಂಚಾಯ್ತಿ ವ್ಯಾಪ್ತಿ ಪೆಟ್ರೋಲ್ ಬಂಕ್ ಬಳಿ ಹಾಗೂ 15ರಂದು ಇತರೆ ಕಡೆಗಳಲ್ಲಿ ಪ್ರತಿಭಟನೆ ಮಾಡಲಿದ್ದೇವೆ.

    ನಮ್ಮ ಎಲ್ಲ ನಾಯಕರು ಇದೇ ರೀತಿ ಕೋವಿಡ್ ನಿಯಮ ಪಾಲನೆ ಮಾಡಿಕೊಂಡು ಅಂತರ ಕಾಪಾಡಿಕೊಂಡು ಪ್ರತಿಭಟನೆ ಮಾಡಬೇಕು. ಸರ್ಕಾರ ಕೋವಿಡ್ ಇದ್ದರೂ ಚುನಾವಣೆ ನಡೆಸಿದೆ. ಆದರೂ ಅವರ ಮೇಲೆ ಪ್ರಕರಣ ದಾಖಲಾಗಿಲ್ಲ. ಆದರೆ ನಮಗೆ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನೀವು ಚುನಾವಣೆ ನಡೆಸಿದ್ದಕ್ಕೆ, ದೇವಾಲಯಕ್ಕೆ ಹೋಗಿದ್ದಕ್ಕೆ ಹಾಗೂ ಹೋಮಗಳನ್ನು ಮಾಡಿದ್ದಕ್ಕೆ ಯಾಕೆ ಪ್ರಕರಣ ಇಲ್ಲ. ನಿಮ್ಮ ಈ ಬೆದರಿಕೆಗೆ ಕಾಂಗ್ರೆಸಿಗರು ಹೆದರುವುದಿಲ್ಲ. ಈ ದೇಶದ ಸ್ವಾತಂತ್ರ್ಯಕ್ಕೆ ಪ್ರಾಣ ಕೊಟ್ಟವರು ನಾವು. ನಮ್ಮ ಹೋರಾಟ ಇದೇ ರೀತಿ ಮುಂದುವರಿಯಲಿದ್ದು, ಜನರೇ ನಿಮ್ಮ ಸರ್ಕಾರವನ್ನು ಕಿತ್ತೊಗೆಯಲಿದೆ.

    ಸಾವಿನಲ್ಲಿ, ಔಷಧಿಯಲ್ಲಿ, ಆಸ್ಪತ್ರೆ ಹಾಸಿಗೆಯಲ್ಲಿ ಹಣ ದೋಚಿದ್ದಲ್ಲದೇ, ಈಗ ಪೆಟ್ರೋಲ್ ಮತ್ತು ಡೀಸೆಲ್ ಮೂಲಕ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದ್ದೀರಿ. ನಾಳೆಯಿಂದ ನಮ್ಮ ನಾಯಕರೆಲ್ಲರೂ ಜಿಲ್ಲೆ, ತಾಲೂಕು, ಪಂಚಾಯ್ತಿ ಮಟ್ಟಕ್ಕೆ ಹೋಗಿ ಸರ್ಕಾರದ ದುರಾಡಳಿತವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಾರೆ.

    ನೆರೆ ರಾಷ್ಟ್ರಗಳಲ್ಲಿ ಇಂಧನ ಬೆಲೆ ನಮಗಿಂತ ಅರ್ಧದಷ್ಟಿದೆ. ನೀವು ಮಾತ್ರ ಜನರಿಂದ ಸುಲಿಗೆ ಮಾಡುತ್ತಲೇ ಇದ್ದೀರಿ. ಇದನ್ನು ನಿಲ್ಲಿಸಿ ಇಂಧನ ಬೆಲೆ ಇಳಿಸಬೇಕು ಎಂದು ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಬಿಜೆಪಿ ನಾಯಕರು ಈ ಹಿಂದೆ ಏನೇನು ಮಾತನಾಡಿದ್ದರು ಎಂಬುದೆಲ್ಲವನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆ. ಈ ಹಿಂದೆ ಅವರು ಪ್ರತಿಭಟನೆ ಮಾಡಿದ್ದ ಫೋಟೋವನ್ನು ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ಕಳುಹಿಸಿ ಕೊಡುತ್ತೇವೆ.’

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!