ಕೋವಿಡ್-19 ರೋಗಿಗಳ ಚಿಕಿತ್ಸೆ ವೇಳೆ ಕೋಲ್ಚಿಸಿನ್ ಔಷಧ ಬಳಕೆಯ ಸುರಕ್ಷತೆ ಮತ್ತು ಪರಿಣಾಮವನ್ನು ನಿರ್ಣಯಿಸಲು ಎರಡು ವಿಧದ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಕೈಗೊಳ್ಳಲು ಡಿಸಿಜಿಐ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಮತ್ತು ಹೈದ್ರಾಬಾದ್ ನ ಲಾಕ್ಸೈ ಲೈಫ್ ಸೈನ್ಸಸ್ ಪ್ರೈವೆಟ್ ಲಿಮಿಟೆಡ್ ಗೆ ಅನುಮೋದನೆ ನೀಡಿದೆ.
ಸಿಎಸ್ಐಆರ್ ನ ಮಹಾನಿರ್ದೇಶಕ ಡಾ. ಶೇಖರ್ ಸಿ. ಮಂಡೆ ಈ ಔಷಧದ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮೋದನೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸಿಎಸ್ಐಆರ್ ನ ಮಹಾನಿರ್ದೇಶಕರ ಸಲಹೆಗಾರರಾದ ಡಾ. ರಾಮ್ ವಿಶ್ವಕರ್ಮ, ಗುಣಮಟ್ಟದ ಆರೈಕೆಯೊಂದಿಗೆ ಹೃದಯ ಅಸ್ವಸ್ಥತೆ ಹೊಂದಿರುವ ಕೋವಿಡ್-19 ರೋಗಿಗಳಿಗೆ ಕೋಲ್ಚಿಸಿನ್ ಚಿಕಿತ್ಸೆಯು ಸಹಕಾರಿಯಾಗಲಿದೆ ಮತ್ತು ಪ್ರೋಇನ್ ಫ್ಲಾಮೇಟರಿ ಸೈಟೋಕಿನ್ ಗಳನ್ನು ಕಡಿಮೆ ಮಾಡಲು ಮತ್ತು ಆದಷ್ಟು ಬೇಗ ಚೇತರಿಸಿಕೊಳ್ಳಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಕೋವಿಡ್-19 ಸೋಂಕಿನ ವೇಳೆ ಮತ್ತು ಕೋವಿಡ್ ನಂತರದ ಸಮಯದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಹಲವರು ಸಾವನ್ನಪ್ಪುತ್ತಿದ್ದಾರೆ ಎಂಬುದು ಹಲವು ಜಾಗತಿಕ ಅಧ್ಯಯನಗಳಿಂದ ಇದೀಗ ದೃಢಪಟ್ಟಿದೆ. ಹಾಗಾಗಿ ಹೊಸ ಅಥವಾ ಮರು ಸಂಶೋಧಿಸಲ್ಪಟ್ಟ ಔಷಧವನ್ನು ಕಂಡುಹಿಡಿಯುವುದು ಅತ್ಯವಶ್ಯಕವಾಗಿದೆ.
ಹೈದ್ರಾಬಾದ್ ನ ಸಿಎಸ್ಐಆರ್-ಐಐಸಿಟಿ ನಿರ್ದೇಶ ಡಾ. ಎಸ್. ಚಂದ್ರಶೇಖರ್ ಮತ್ತು ಜಮ್ಮುವಿನ ಸಿಎಸ್ಐಆರ್-ಐಐಐಎಂ ನಿರ್ದೇಶಕರಾದ ಡಾ. ಡಿ.ಎಸ್. ರೆಡ್ಡಿ ಅವರು, ಈ ಎರಡು ಪಾಲುದಾರ ಸಂಸ್ಥೆಗಳು ಕೋಲ್ಚಿಸಿನ್ ಔಷಧ ಬಳಕೆಯ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಾಲಯದ ಪರಿಣಾಮದ ಫಲಿತಾಂಶವನ್ನು ಎದುರು ನೋಡುತ್ತಿದ್ದೇವೆ. ಇದು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ನಿರ್ವಹಣೆಯಲ್ಲಿ ಜೀವ ಉಳಿಸಲು ಸಹಕಾರಿಯಾಗಬಹುದು ಎಂದು ಭಾವಿಸಲಾಗಿದೆ ಎಂದಿದ್ದಾರೆ. ಭಾರತ ಈ ಪ್ರಮುಖ ಔಷಧ ಉತ್ಪಾದನೆಯಲ್ಲಿ ಅತಿ ದೊಡ್ಡ ರಾಷ್ಟ್ರವಾಗಿದೆ, ಪ್ರಯೋಗ ಯಶಸ್ವಿಯಾದರೆ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಇದು ಲಭ್ಯವಾಗಲಿದೆ.
ಲಾಕ್ಸೈ ಸಂಸ್ಥೆಯ ಸಿಇಒ ಡಾ. ರಾಮ್ ಉಪಾಧ್ಯಾಯ, ಭಾರತದಾದ್ಯಂತ ಹಲವು ಕಡೆ ರೋಗಿಗಳ ದಾಖಲಾತಿ ಈಗಾಗಲೇ ಆರಂಭವಾಗಿದೆ ಮತ್ತು ಪ್ರಯೋಗ ಮುಂದಿನ 8 ರಿಂದ 10 ವಾರಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು. ಈ ಪ್ರಯೋಗದ ಫಲಿತಾಂಶವನ್ನು ಆಧರಿಸಿ ಮತ್ತು ನಿಗದಿತ ಅನುಮೋದನೆಗಳ ನಂತರ ಔಷಧವನ್ನು ಭಾರತದ ಬಹುದೊಡ್ಡ ಪ್ರಮಾಣದ ಜನಸಂಖ್ಯೆಗೆ ಲಭ್ಯವಾಗುವಂತೆ ಮಾಡಬಹುದು ಎಂದು ಹೇಳಿದ್ದಾರೆ.
ಹೃದಯ ಶಸ್ತಚಿಕಿತ್ಸೆಯ ನಂತರ ಹೃತ್ಕರ್ಣದ ಕಂಪನ ತಗ್ಗಿಸುವ ನಂತರದ ಪೆರಿ-ಪ್ರೊಸಿಜರಲ್ ಆಟ್ರಿಯಲ್ ಫಿಬರಿಲೇಷನ್ ಮತ್ತು ಪೋಸ್ಟ್-ಪೆರಿಕಾರ್ಡಿಯೋಟಮಿ ಸಿಂಡ್ರೋಮ್ ಮತ್ತು ಕಂಪನ ದರಗಳಲ್ಲಿ ಇಳಿಕೆಗೆ ಕೋಲ್ಚಿಸಿನ್ ಕಾರಣವಾಗಿದೆ ಎಂದು ಇತ್ತೀಚಿನ ಕ್ಲಿನಿಕಲ್ ಅಧ್ಯಯನಗಳಿಂದ ದೃಢಪಟ್ಟಿದೆ ಎಂದು ಪ್ರಮುಖ ವೈದ್ಯಕೀಯ ನಿಯತಕಾಲಿಕಗಳಲ್ಲಿ ವರದಿಯಾಗಿದೆ.(ಪಿಐಬಿ)