ಸುಮಾ ವೀಣಾ
ಕರಿಗಂ ಪರಮಾಣುಗಂ ತರಮಾವುದೋ –ಪ್ರಸ್ತುತ ಸಾಲು ಪಂಪನ ‘ವಿಕ್ರಮಾರ್ಜುನ ವಿಜಯ’ದ ದಶಮಾಶ್ವಾಸದಲ್ಲಿ ಉಲ್ಲೇಖವಾಗಿರುವಂಥದ್ದು. ಮಹಾಭಾರತ ಯುದ್ಧ ನಡೆಯುವ ಪೂರ್ವದಲ್ಲಿ ದುರ್ಯೋಧನ ಭೀಷ್ಮರನ್ನು ಉದ್ದೇಶಿಸಿ ಕೃಷ್ಣನನ್ನು, ಪಾಂಡವರನ್ನು ಉದ್ದೇಶಿಸಿ ಹೇಳುವ ಮಾತು. ನಮ್ಮಲ್ಲಿ ವ್ಯಕ್ತಿ, ವಸ್ತುವಿನ ಹೊರಗಾತ್ರವನ್ನು, ಹೊರ ರೂಪವನ್ನು ನೋಡಿ ಅಳೆಯುವಂಥವರೇ ಹೆಚ್ಚು. ಅವರ ಅಂತಃಶಕ್ತಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. “ಆಕಾರದಲ್ಲಿ ವಾಮನ ಶಕ್ತಿಯಲ್ಲಿ ತ್ರಿವಿಕ್ರಮ” ,“ಕಿರಿದರಲ್ಲಿ ಪಿರಿದರ್ಥ”,”ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು”ಮೊದಲಾದ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
‘ಕರಿ’ ಅಂದರೆ ಆನೆ, ಪರಮಾಣು ಅನ್ನುವುದು ಕಣ್ಣಿಗೆ ಕಾಣುವುದಿಲ್ಲ ಎಂಬುದು ಎಲ್ಲರಿಗು ತಿಳಿದಿರುವಂಥದ್ದೆ. ಚಿಕ್ಕದು ಎಂದು ಹೇಳಲು ಎಳ್ಳಷ್ಟು, ತೃಣಮಾತ್ರ, ಅಣುವಿನಷ್ಟು, ರವಷ್ಟು ಮುಂತಾದ ಪದಗಳನ್ನು ಬಳಸುತ್ತಾರೆ. ಆನೆ ಅಂದರೆ ಪದಶಃ ಗಾತ್ರದಲ್ಲಿ ಹಿರಿದು ಅನ್ನುವ ಅರ್ಥವನ್ನೇ ಕೊಡುತ್ತದೆ.
ದುರ್ಯೋಧನ ತನ್ನ ಗುರು ದ್ರೋಣಾಚಾರ್ಯರ ಮಾತಿನಂತೆ ಭೀಷ್ಮರನ್ನು ಭೇಟಿ ಮಾಡಲು ಹೋದಾಗ ಭೀಷ್ಮರನ್ನು ಕುರಿತು ನೀವೇ ಆತ್ಯಂತಿಕ ಬಲವುಳ್ಳವರು ನಿಮ್ಮೆದರು ಆ ಕೃಷ್ಣನು ನಿಲ್ಲಲಾರ ಎಂಬುದನ್ನು ಹೇಳುವ ಸಂದರ್ಭದಲ್ಲಿ “ಕರಿಗಂ ಪರಮಾಣುಗಂ ತರಮಾವುದೋ” ಎಂಬ ಮಾತನ್ನು ಹೇಳುತ್ತಾನೆ. ಅನೆಯಂಥ ಪರಾಕ್ರಮವುಳ್ಳ ನೀವೆಲ್ಲಿ ಸೂಕ್ಷ್ಮವಾಗಿರುವ ಅಣುವೆಲ್ಲಿ ಅಂದರೆ ಕೃಷ್ಣನೆಲ್ಲಿ? ಅಂಥ ಪರಾಕ್ರಮಿ ಪರಶುರಾಮನೆ ನಿಮ್ಮೊಡನೆ ಹೋರಾಡಿ ಸೋಲಲಿಲ್ಲವೇ ? ಈಗಲೂ ಹಾಗೆಯೇ ಆಗುತ್ತದೆ ಎಂದು ತನ್ನ ಅಹಂಕಾರವನ್ನು ಪ್ರದರ್ಶಿಸುತ್ತಾನೆ. ಈ ವಾಕ್ಯವನ್ನು ಪಂಪ ದುರ್ಯೋಧನನಿಂದ ವಾಚ್ಯಾರ್ಥದಲ್ಲಿ ಆಡಿಸಿರುವುದು. ಲಕ್ಷ್ಯಾರ್ಥವನ್ನು ಗಮನಿಸಿದರೆ ಅಣುವೂ ಎಷ್ಟು ಶಕ್ತಿ ಶಾಲಿ ಎಂಬ ಹೊಳಹು ಮೂಡುತ್ತದೆ.
ಈ ಪ್ರಸಂಗವನ್ನು ಹೊರಗಿಟ್ಟರೆ ಅಜಗಜಾಂತರ ಅನ್ನುವ ಮಾತೂ ಇದೆ . ಅಜ ಎಂದರೆ ಆಡು ಬಲದಲ್ಲಿ ಕನಿಷ್ಟ ಎಂದಾದರೆ ಆನೆ ಮಿಗಿಲು ಎಂದು . ಪ್ರಾಣಿ-ಪಕ್ಷಿ-ಮನುಷ್ಯ ಯಾವುದೇ ಆಗಲಿ ಗಾತ್ರ ನೋಡಿ ಅಳೆಯುವುದಲ್ಲ ಬೌದ್ಧಿಕ ಸಾಮರ್ಥ್ಯವನ್ನೂ ಗಣನೆಗೆ ತೆಗೆದುಕೊಳ್ಳಬೇಕು ಅಲಕ್ಷಿಸಬಾರದು ಅಣು-ಅಣುವಿನಲ್ಲಿ ಅಗಾಧ ಶಕ್ತಿ ಸಂಚಯನವಾಗಿರುತ್ತದೆ.ಹಾಗಾಗಿ ಯಾರನ್ನೂ ಲಘುವಾಗಿ ಪರಿಗಣಿಸಬಾರದು ಎಂಬ ಅರ್ಥವಿದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.