21.7 C
Karnataka
Tuesday, December 3, 2024

    ಪುಣ್ಯಕೋಟಿ-ಆ್ಯನಿಮೇಷನ್ ಚಿತ್ರಕ್ಕೆ ಜಪಾನಿನ 3 ಮೂರು ಪ್ರಶಸ್ತಿ

    Must read

    ಸಂಕೇತದತ್ತ

    ಪುಣ್ಯಕೋಟಿ'-ಆ್ಯನಿಮೇಷನ್ ಚಿತ್ರವನ್ನು ಬೆಂಗಳೂರಿನ ವಾಸಿ ಟೆಕ್ಕಿ ರವಿಶಂಕರ್ ವೆಂಕಟೇಶ್ವರನ್ ನಿರ್ದೇಶಿಸಿದ್ದು ಇದು ಈ ವರ್ಷ ಜಪಾನಿನ 2ನೇ ಗೋಲ್ಡನ್ ಹಾರ್ವೆಸ್ಟ್ ಫಿಲ್ಮ್ ಫೆಸ್ಟಿವಲ್ ನಲ್ಲಿಉತ್ತಮ ಆ್ಯನಿಮೇಷನ್ ಚಿತ್ರ’, ಉತ್ತಮ ಫೀಚರ್ ಫಿಲ್ಮ್' ಹಾಗೂಉತ್ತಮ ನಿರ್ದೇಶಕ’ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸಂಸ್ಕೃತ ಭಾಷೆಯಲ್ಲಿನ ಚಿತ್ರಿಸಿದ ಈ ಪುಣ್ಯಕೋಟಿ ಎಂಬ ಕನ್ನಡ ನಾಡಿನ ಸುಪ್ರಸಿದ್ದ ಜನಪ್ರಿಯ ಹಾಡಿಗೆ ಇಷ್ಟು ದೊಡ್ಡ ಪುರಸ್ಕಾರ ದೊರಕಿರುವುದು ಸಂತಸದ ವಿಷಯವೆಂದು ನಿರ್ದೇಶಕ ರವಿಶಂಕರ್ ಅಭಿಪ್ರಾಯ ಪಟ್ಟಿದ್ದಾರೆ.

    ಅಲ್ಲದೇ `ಪುಣ್ಯಕೋಟಿ’ ಚಿತ್ರವು ಮುಂಬೈನಲ್ಲಿ ನಡೆದ ಆ್ಯನಿಮೇಷನ್ ನೆಟ್ವರ್ಕ್ನ ವಾರ್ಷಿಕ ಸ್ಪರ್ಧೆಯಲ್ಲಿ ಬೆಸ್ಟ್ ಡಿಜಿಟಲ್ ಫಿಲ್ಮ್, ಕ್ಯಾರೆಕ್ಟರ್ ಡಿಸೈನ್, ಧ್ವನಿ ಮತ್ತು ಚಿತ್ರಕತೆಗಾಗಿ ನಾಲ್ಕು ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ. ಇಂತಹ ವೈವಿಧ್ಯಮಯ ಚಿತ್ರವನ್ನು ಭಾರತ ಚಿತ್ರರಂಗದ ಹಲವು ದಿಗ್ಗಜರ ಮುಂದೆ ಪ್ರಸ್ತುತ ಪಡಿಸಿ ಭೇಷ್ ಎನಿಸಿಕೊಂಡಿದ್ದಾರೆ.

    ಕನ್ನಡದ ಈ ನಾಡಲ್ಲಿ ಪುಣ್ಯಕೋಟಿ' ಕತೆಯು ಮನೆ ಮಾತಾಗಿದೆ. ಕನ್ನಡ ನೆಲದ ಸಂಸ್ಕೃತಿಯ ಸೊಗಡನ್ನು ಬಿಂಬಿಸುವ ಹಾಡು ಎಲ್ಲರಿಗೂ ಗೊತ್ತಿರುವಂತಹದ್ದೆ ಆಗಿದೆ. ಎಲ್ಲರ ಮನಸ್ಸಿಗೆ ಮುಟ್ಟುವ ಈ ಹಾಡಿನ ಸಾಲುಗಳು ಇಂದಿಗೂ ಜನಜನಿತವಾಗಿದೆ.ಸತ್ಯವೇ ನಮ್ಮ ತಾಯಿ-ತಂದೆ’ ಎನ್ನುವಂತಹ ಸಾಲು, ಸತ್ಯವಾಕ್ಯವನ್ನು ತಪ್ಪುವವರಲ್ಲ ಎನ್ನುವ ಮಾತು ಕನ್ನಡಿಗರ ನಿಷ್ಠೆಯನ್ನು ಸಾರುತ್ತದೆ.

    ಮೋಹನ್ದಾಸ್ ಪೈ ಅವರ ವಿಶ್ಬೇರ್ರಿ ಸಂಸ್ಥೆಯ ಮೂಲಕ ಎರಡು ಹಂತದಲ್ಲಿ ಕ್ರೌಡ್ ಫಂಡಿಂಗ್ ಮೂಲಕ ಚಿತ್ರವನ್ನು ಮಾಡಿದ್ದಲ್ಲದೇ ಅಂತಿಮ ಹಂತದಲ್ಲಿ ರವಿಶಂಕರ್ ಅವರ ಪತ್ನಿ ಸಿಂಧೂ ಅವರ ಹಣಕಾಸಿನ ಸಹಾಯದಿಂದ ಚಿತ್ರವನ್ನು ಮುಗಿಸಿದ್ದಾರೆ. ಈ ಚಿತ್ರದ ಟ್ರೈಲರ್ ಅರ್ಧ ಮಿಲಿಯನ್ ವೀಕ್ಷಕರನ್ನು ತಲುಪಿದ್ದು ಈಗ ಇತಿಹಾಸ.

    `ಪುಣ್ಯಕೋಟಿ’ ಎಂಬ ಗೋವಿನ ಹಾಡಿನ ಮೂಲಕ ಸತ್ಯದ ತತ್ವವನ್ನು ಜಗಜ್ಜಾಹಿರುಗೊಳಿಸಲು ಬೆಂಗಳೂರಿನ ವಾಸಿ ಟೆಕ್ಕಿ ರವಿಶಂಕರ್ ವೆಂಕಟೇಶ್ವರನ್ ಇನ್ಫೋಸಿಸ್ನ ಕೆಲಸವನ್ನು ಬಿಟ್ಟು ಸತತ ನಾಲ್ಕು ವರ್ಷಗಳು ಶ್ರಮವಹಿಸಿ ನಿರ್ದೇಶಿಸಿದ್ದಾರೆ. ಈ ಆ್ಯನಿಮೇಷನ್ ಚಿತ್ರವನ್ನು ಸಂಸ್ಕೃತ ಭಾಷೆಯಲ್ಲಿ ಮಾಡಿ ಮತ್ತಷ್ಟು ವಿಭಿನ್ನಗೊಳಿಸಿದ್ದಾರೆ. ಈ ನಮ್ಮ ದೇವ ಭಾಷೆಯನ್ನು ಸಾಮಾನ್ಯರತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ.

    ಕನ್ನಡದ ಹೆಸರಾಂತ ನಟ, ನಿರ್ದೇಶಕರಾಗಿದ್ದ ಜಿ ವಿ ಅಯ್ಯರ್ ಅವರು ಸಂಸ್ಕೃತದಲ್ಲಿ ಹಲವು ಚಿತ್ರಗಳನ್ನು ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಅವರ ಕಾಲಕ್ಕೇ ನಿಂತು ಹೋಗದಂತೆ ಈಗಿನ ಪೀಳಿಗೆಯವರಾದ ರವಿಶಂಕರ್ ಅವರು ಮತ್ತೆ ಅಯ್ಯರ್ ಅವರು ಹಾಕಿ ಕೊಟ್ಟ ಹಾದಿಯನ್ನು ಮುಂದುವರಿಸುತ್ತಾ ಬಂದಿದ್ದಾರೆ.

    ಇಳರಾಜ ಹಾಗೂ ರೇವತಿಯಂತಹ ದಿಗ್ಗಜರ ಸಹಕಾರ:

    ಈ ಆ್ಯನಿಮೇಷನ್ ಚಿತ್ರಕ್ಕೆ ಭಾರತೀಯ ಸಂಗೀತ ಲೋಕದ ದಿಗ್ಗಜರಲ್ಲೊಬ್ಬರಾದ ಹಾಗೂ ಈ ಚಿತ್ರದ ನಿರ್ದೇಶಕ ರವಿಶಂಕರ್ ಅವರ ಮಾನಸಗುರುಗಳೂ ಆದ ಇಳಯರಾಜ ಅವರಲ್ಲಿ ಈ ಚಿತ್ರದ ಬಗ್ಗೆ ತಿಳಿಸಿದಾಗ ಅವರು ಮುಕ್ತ ಮನಸ್ಸಿನಿಂದ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಲ್ಲದೇ ಈ ಚಿತ್ರಕ್ಕೆ ಸಂಬಂಧಿಸಿದ ಸಂಸ್ಕೃತ ಹಾಗೂ ಇಂಗ್ಲಿಷ್ ಆವೃತ್ತಿಯ ಪುಸ್ತಕವನ್ನು ಇಳಯರಾಜ ಲೋಕಾರ್ಪಣೆ ಮಾಡಿ ರವಿಶಂಕರ್ ಅವರ ಸತ್ಕಾರ್ಯವನ್ನು ಪ್ರೋತ್ಸಾಹಿಸಿದ್ದಾರೆ.

    ಹೆಸರಾಂತ ನಟಿ ರೇವತಿ ಹಾಗೂ ನಟ ರೋಜರ್ ನಾರಾಯಣ್ ಧ್ವನಿಯನ್ನು ಕೊಟ್ಟಿದ್ದಾರೆ. ಸಂಸ್ಕೃತ ನಾಟಕಗಳಲ್ಲಿ ಪಳಗಿರುವ ಪ್ರೊಫೆಸರ್ ಲೀಲಾ ಅವರು ಡಬ್ಬಿಂಗ್ ಕಾರ್ಯವನ್ನು ನಿರ್ವಹಿಸಿದ್ದಾರೆ. ಸಂಸ್ಕೃತದಲ್ಲಿ ಡಬ್ಬಿಂಗ್ ಮಾಡಿದ್ದಾರಲ್ಲದೇ ಇಂಗ್ಲಿಷ್ ಸಬ್ಟೈಟಲ್ ಅನ್ನು ಅಳವಡಿಸಿದ್ದಾರೆ. ವೈದ್ಯರೂ, ಕವಿಗಳೂ ಆದ ಡಾ. ಶಂಕರ್ ರಾಜಾರಾಮ್ ಅವರು ಈ ಚಿತ್ರಕ್ಕಾಗಿ 4 ಹಾಡುಗಳನ್ನು ರಚಿಸಿದ್ದಾರೆ.

    ರಾಷ್ಟ್ರಪ್ರಶಸ್ತಿ ವಿಜೇತ ಮನೋಜ್ ಕನ್ನೋತ್ ಚಿತ್ರದ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಈ ಎಲ್ಲಾ ದಿಗ್ಗಜರ ಕಾರ್ಯವು ಈ ಚಿತ್ರಕ್ಕೆ ಬಲ ತಂದಿದೆ. ಸಂಸ್ಕೃತದಲ್ಲಿರುವ ಈ ಚಿತ್ರವನ್ನು ಆ್ಯನಿಮೇಷನ್ನಿನ ಮೂಲಕ ಪ್ರಸ್ತುತ ಪಡಿಸಿರುವುದರಿಂದ ದೇಶ-ವಿದೇಶಗಳಲ್ಲಿನ ಎಲ್ಲ ವರ್ಗದ ಚಿತ್ರಪ್ರೇಮಿಗಳನ್ನು ತಲುಪಲು ಸಹಕಾರಿಯಾಗಿದೆ ಎಂಬುದು ನಿರ್ದೇಶಕ ರವಿಶಂಕರ್ ಅವರ ಆಶಯ.

    ಕನ್ನಡದ ಖ್ಯಾತ ಚಿತ್ರಕಾರ ಗುಜ್ಜಾರ್ ಅವರಿಂದ ಇದು ಆರಂಭವಾಯ್ತು ಎಂಬುದು ಕನ್ನಡಿಗರ ಹೆಗ್ಗಳಿಕೆಯಾಗಿದೆ. ಈ ಚಿತ್ರದ ಮೂಲ ಕರಡು ಚಿತ್ರಗಳನ್ನು ಕನ್ನಡದ ಖ್ಯಾತ ಚಿತ್ರಕಾರ ಬಿ ಜಿ ಗುಜ್ಜಾರ್ ಅವರು ಚಿತ್ರಿಸಿದ್ದರು. ಅದರ ನಂತರ ಕೇರಳದಲ್ಲಿನ ಸ್ಟುಡಿಯೋಗಳಲ್ಲಿ ಆ್ಯನಿಮೇಷನ್ ಕೆಲಸವನ್ನು ಮಾಡಿಸಿದ್ದಾರೆ. ಆ್ಯನಿಮೇಷನ್ ಕಲಾವಿದ ಎ ವಿ ಗಿರೀಶ್ ಅವರು ರವಿಶಂಕರ್ ಅವರ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಮುಂದಾಳತ್ವ ವಹಿಸಿ ಸಫಲರಾಗಿದ್ದಾರೆ. ಕನ್ನಡದ ಹಾಡು ಹಾಗೂ ಹಾಡಿನ ಸತ್ಯದ ಸಾರವನ್ನು ಜಗಜ್ಜಾಹಿರು ಪಡಿಸಲು ಸಹೃದಯ ಪ್ರೇಕ್ಷಕ ಮಹಾಶಯರ ಪ್ರೋತ್ಸಾಹದ ಅವಶ್ಯಕತೆ ಇದೆ.

    ಸಂಕೇತದತ್ತ ಎಂಬ ಹೆಸರಿನಿಂದ ಸುಪ್ರಸಿದ್ಧರಾಗಿರುವ ಸಂಕೇತ ಗುರುದತ್ತ ಅವರ ಮೂಲ ತುಮಕೂರು. ಅಲ್ಲಿ ತುಮಕೂರು‌ವಾರ್ತೆ, ಪ್ರಜಾಪ್ರಗತಿ, ಕನ್ನಡ ಗಂಗೋತ್ರಿ, ನಗೆಮಿತ್ರ ಹಾಗೂ ನಗೆಮುಗುಳು, ಪತ್ರಿಕೆಗಳಿಗೆ ಕೆಲಸ ಮಾಡಿದ್ದರು. ಬೆಂಗಳೂರಿಗೆ ಬಂದು ಸುದ್ದಿ ಸಂಗಾತಿ ವಾರ ಪತ್ರಿಕೆಯಲ್ಲಿ ಕೆಲ ಕಾಲವಿದ್ದರು. ಆನಂತರ ಧಾರಾವಾಹಿ, ಸಿನಿಮಾಗಳಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಕಿರ್ಲೋಸ್ಕರ್ ಮಲ್ಟಿಮೀಡಿಯಾಗೆ ಸೇರ್ಪಡೆ‌‌. ಅಲ್ಲಿಂದ ಒಂದಿಷ್ಟು ಕಲಿತು ಹೈದರಾಬಾದನತ್ತ ಪಯಣ. ಅಲ್ಲಿ ಹನ್ನೊಂದು ವರ್ಷವಿದ್ದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುಧಾ, ಮಯೂರ, ಪ್ರಜಾವಾಣಿ ವಿಶೇಷಾಂಕ, ಹೊಸತು, ಪ್ರಿಯಾಂಕಗಳಿಗೆ ಫ್ರೀಲ್ಯಾನ್ಸ್ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ಸಿಕ್ಕ ಮತ್ತೊಂದು ಉತ್ತಮ ಅವಕಾಶ ಕನ್ನಡಪ್ರಭದಲ್ಲಿ ಕಲಾಕಾರನಾಗಿದ್ದು. ಕಲಾ ವಿಭಾಗದ ಜೊತೆಗೆ ಪುರವಣಿಯ ಕೆಲ ಪುಟಗಳ ಜವಾಬ್ದಾರಿ ಸಿಕ್ಕಿತು. ಅಲ್ಲಿ ನಾಟಕ, ಸಿನಿಮಾ ಹಾಗೂ ಕಲಾಪ್ರದರ್ಶನಗಳ ವಿಮರ್ಶೆ, ವ್ಯಕ್ತಿ ಹಾಗೂ ಸಾಂಸ್ಕ್ರತಿಕ ತಂಡಗಳ ಪರಿಚಯ ಲೇಖನ ಹೀಗೆ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!