16.7 C
Karnataka
Sunday, November 24, 2024

    ಷೇರುಪೇಟೆಯಲ್ಲಿ ಪ್ರಸ್ತುತ ಸಮಯ ದೀರ್ಘಕಾಲೀನ ಹೂಡಿಕೆಗೆ ಯೋಗ್ಯವೇ?

    Must read

    ಅಗ್ರಮಾನ್ಯ ಕಂಪನಿಗಳು ತಮ್ಮ ಸಂಪನ್ಮೂಲಗಳನ್ನು ವಿವಿಧ ವಲಯಗಳಲ್ಲಿ ಖ್ಯಾತಿ ಹೊಂದಿರುವ ಸಣ್ಣ ಸಣ್ಣ ಕಂಪನಿಗಳನ್ನು ಕೊಳ್ಳುವ ಮೂಲಕ ತಮ್ಮ ಚಟುವಟಿಕೆಯ ಪಥವನ್ನು ಸುಭದ್ರಗೊಳಿಸಿಕೊಳ್ಳುತ್ತಿವೆ. ಪೇಟೆಯೊಳಗೆ ಹರಿದುಬರುತ್ತಿರುವ ಹಣದ ಹೊಳೆಯ ಕಾರಣ ಷೇರಿನ ದರಗಳು ಹೆಚ್ಚು ಹೆಚ್ಚು ಅಸ್ಥಿರತೆಯನ್ನು ಪ್ರದರ್ಶಿಸುತ್ತಿವೆ. ಈ ಸಂದರ್ಭದಲ್ಲಿ ಅನೇಕ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪನಿಗಳು ರಭಸದಿಂದ ಏರಿಕೆ ಕಂಡುಕೊಳ್ಳುತ್ತಿವೆ. ದಾಖಲೆಯನ್ನು ನಿರ್ಮಿಸುತ್ತಿವೆ. ಅನೇಕ ನಕಾರಾತ್ಮಕ ಅಂಶಗಳೂ ಸಹ ಪೇಟೆಯ ಏರಿಕೆಗೆ ತಡೆಯಾಗುತ್ತಿಲ್ಲ.

    • ಇತ್ತೀಚಿನ ಅಂಶಗಳ ಪ್ರಕಾರ ವಾಹನಗಳ ರಿಜಿಸ್ಟ್ರೇಷನ್‌ ಹಿಂದಿನ ತಿಂಗಳು ಸುಮಾರು ಅರ್ಧದಷ್ಟು ಕಡಿಮೆಯಾಗಿವೆ.
    • ಗ್ರಾಹಕ ಬಳಕೆಯ ಸರಕುಗಳ ಮಾರಾಟವು ಕಳೆದ ಮೇ ತಿಂಗಳಲ್ಲಿ ಶೇ.32 ರಷ್ಠು ಇಳಿಕೆಯಾಗಿದೆ ಎಂದು ದೇಶದಾದ್ಯಂತ ಹಲವು ಲಕ್ಷ ರೀಟೇಲ್‌ ಸ್ಟೋರ್‌ ಗಳ ಸಮೀಕ್ಷೆ ನಡೆಸುವ BIZOM ಸಂಸ್ಥೆ ಪ್ರಕಟಿಸಿದೆ ಏಪ್ರಿಲ್‌ ತಿಂಗಳಲ್ಲಿ ಸುಮಾರು ಶೇ. 16 ರಷ್ಟು ಇಳಿಕೆಯಾಗಿತ್ತು.
    • ಬ್ಯಾಂಕ್‌ ಗಳಿಗ ನೀಡಿರುವ ಶೇ.30 ರಷ್ಠು ಆಟೋ ಡೆಬಿಟ್‌ ಇನ್ ಸ್ಟ್ರಕ್ಷನ್‌ ಗಳು ವಿಫಲವಾಗಿವ, ಚೆಕ್‌ ಬೌನ್ಸ್‌ ಹಗರಣಗಳು ಶೇ.25 ರಷ್ಠು ಹೆಚ್ಚಿವೆ.

    ದೇಶದ ಜಿ ಡಿ ಪಿ ಯನ್ನು ಪ್ರತಿಯೊಂದು ಸಂಸ್ಥೆಯು ಮೊಟಕುಗೊಳಿಸುತ್ತಿರುವುದು ಒಂದು ಕಡೆಯಾದರೆ ಮತ್ತೊಂದೆಡೆ ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೆಚ್ಚುತ್ತಿರುವುದು ಗೋಚರವಾಗುತ್ತಿದೆ. ಕಳೆದ 14 ತಿಂಗಳಲ್ಲಿ ಮೊದಲ ಬಾರಿಗೆ ಸುಮಾರು 10 ಸಾವಿರ ಕೋಟಿಗೂ ಹೆಚ್ಚಿನ ಹಣವು ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಗಳ ಮೂಲಕ ಹೂಡಿಕೆಮಾಡಲಾಗಿದೆ. ಹರಿದಾಡುವ ಹಣ ಹೆಚ್ಚಾದ್ದರಿಂದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಗುಣಮಟ್ಟಕ್ಕೆ ಪ್ರಾಧಾನ್ಯತೆಯಿರುವುದಿಲ್ಲ. ಹಾಗಾಗಿ ಕೈಲಿರುವ ಹಣ ತೊಡಗಿಸಲು ಓಡುತ್ತಿರುವ ಕುದುರೆ ಎಂದು ಹಿಡಿಯುವುದರಿಂದ, ಪರಿಸ್ಥಿತಿ ಬದಲಾದಾಗ ಕುದುರೆ ನಿಲ್ಲುತದೆಯೋ ಅಥವಾ ಕುಸಿಯುತ್ತದೆಯೋ ಸಮಯವೇ ನಿರ್ಧರಿಸುತ್ತದೆ. ಹಾಗಾಗಿ ಈಗ ಷೇರುಪೇಟೆಯಲ್ಲಿ ಹೂಡಿಕೆಗಿಂತ ವ್ಯವಹಾರವೇ ಹೆಚ್ಚು ಲಾಭಕರವಾಗಿದೆ.

    ಇತ್ತೀಚೆಗೆ ಷೇರುಪೇಟೆಯ ಚಟುವಟಿಕೆಗಳಲ್ಲಿ ಟೆಕ್ನಿಕಲ್‌ ಶೈಲಿಯ ವಹಿವಾಟು ಹೆಚ್ಚು ಪ್ರದರ್ಶಿತವಾಗುತ್ತಿದ್ದು. ಈ ಮೂಲಕ ಅನೇಕ ಹೂಡಿಕೆದಾರರು ನಿರಾಸೆಗೊಳ್ಳುವುದನ್ನು ಕಾಣಬಹುದು. ಒಂದೇ ದಿಕ್ಕಿನಲ್ಲಿ ಷೇರಿನ ಬೆಲೆ ಚಲಿಸುತ್ತಿದ್ದರೆ ಹಿತವಾಗಿರುತ್ತದೆ ಆದರೆ ಅನಿರೀಕ್ಷಿತವಾದ ರೀತಿ ದಿಶೆ ಬದಲಿಸಿದಾಗ ʼ ಸ್ಟಾಪ್‌ ಲಾಸ್‌ʼ ನಿಯಮ ಪಾಲಿಸುವವರಿಗೆ ಅದು ಟಾಪ್‌ ಲಾಸ್‌ ನಲ್ಲಿ ಕೊನೆಗೊಳ್ಳುವುದು ಅಘಾತಕಾರಿ ಅಂಶವಾಗಿದೆ.

    ಮೆಜೆಸ್ಕೊ ಷೇರಿನ ಚೆಲ್ಲಾಟ:

    ಮೆಜೆಸ್ಕೊ ಕಂಪನಿಯು ಡಿಸೆಂಬರ್‌ ತಿಂಗಳಲ್ಲಿ ರೂ.974 ರಂತೆ ಡಿವಿಡೆಂಡ್‌ ವಿತರಿಸಿದಾಗ ಹಲವಾರು ನಕಾರಾತ್ಮಕವಾದ ವಿಶ್ಲೇಷಣೆಗಳು ಹೊರಬಂದವು. ಈ ಷೇರು ಒಂದು ತಿಂಗಳಲ್ಲಿ ರೂ.73 ರಿಂದ ರೂ.117 ರವರೆಗೂ ಏರಿಕೆ ಕಂಡಿದೆ. ಡಿಸೆಂಬರ್‌ ತಿಂಗಳ ರೂ.12 ರ ಸಮೀಪದಿಂದ ನಿರಂತರವಾಗಿ ಏರಿಕೆ ಕಂಡು ಮಾರ್ಚ್‌ ತಿಂಗಳಲ್ಲಿ ರೂ.122 ಕ್ಕೆ ತಲುಪಿ ನಂತರ ರೂ.65 ಕ್ಕೆ ಕುಸಿದು ಜೂನ್‌ ತಿಂಗಳವರೆಗೂ ರೂ.75 ರವರೆಗೂ ತೆವಳಿಕೊಂಡಿದ್ದು ಕೇವಲ ಒಂದೇ ತಿಂಗಳಲ್ಲಿ ಸುಮಾರು ರೂ.44 ರಷ್ಟು ಏರಿಕೆ ಕಂಡಿದೆ.

    ಈ ಮಧ್ಯೆ ಪ್ರತಿ ಷೇರಿಗೆ ರೂ.77 ರಂತೆ ಬೈ ಬ್ಯಾಕ್‌ ಮಾಡುವ ಆಫರ್‌ 3 ನೇ ತಾರೀಕು ಕೊನೆಗೊಂಡಿದೆ. ಅದು ಕೊನೆಗೊಂಡ ನಂತರ ಚುರುಕಾದ ಏರಿಕೆ ಪ್ರದರ್ಶಿಸಿದೆ. ಇದು ಬೈಬ್ಯಾಕ್‌ ಆಫರ್‌ ನಲ್ಲಿ ಹಿಂದುರುಗಿಸಿದವರಿಗೆ ನಿರಾಶೆಯುಂಟುಮಾಡಿರುವುದಂತು ನಿಜ. ಅದಕ್ಕೂ ಮಿಗಿಲಾದ ಅಂಶ ಎಂದರೆ 11 ರಂದು ಶುಕ್ರವಾರ ದಿನದ ಆರಂಭಿಕ ವಹಿವಾಟಿನಲ್ಲಿ ರೂ.117 ರ ಗರಿಷ್ಠ ಆವರಣಮಿತಿಯಲ್ಲಿದ್ದ ಈ ಷೇರು ಕೇವಲ ಕೆಲವೇ ನಿಮಿಷಗಳಲ್ಲಿ ಭಾರಿ, ಗಜಗಾತ್ರದ ಮಾರಾಟದ ಕಾರಣ ಕನಿಷ್ಠ ಆವರಣಮಿತಿಯತ್ತ ತಿರುಗಿ ದಿನದ ಕೊನೆವರೆಗೂ ಅಲ್ಲಿಯೇ ಸ್ಥಿರವಾಗಿತ್ತು. ಅಂದರೆ ಎರಡು ದಿನದ ಏರಿಕೆಯು ಒಂದೇ ದಿನದ ಇಳಿಕೆ ಪ್ರದರ್ಶಿತವಾಗಿದೆ. ಅಲ್ಲದೆ ಸೋಮವಾರವೂ ಖರೀದಿಸಿದ ಷೇರನ್ನು ಮಾರಾಟಮಾಡಲು ಅವಕಾಶ ದೊರೆಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

    ಸ್ಟ್ರೈಡ್ಸ್‌ ಫಾರ್ಮಾ ಸೈನ್ಸ್ ಅಲೆದಾಟ:

    ಒಂದೇ ವಾರದಲ್ಲಿ ಈ ಷೇರು ರೂ.770 ರ ಸಮೀಪದಿಂದ ರೂ.847 ರವರೆಗೂ ಏರಿಕೆ ಪ್ರದರ್ಶಿಸಿದ ಈ ಕಂಪನಿ ಈ ಎರಡು ಮಿತಿಗಳ ಅಂತರದಲ್ಲಿ ಭಾರಿ ಏರಿಳಿತಗಳನ್ನು ಪ್ರದರ್ಶಿಸಿದೆ. ಜೂನ್‌ 7 ರಂದು ಷೇರಿನ ಬೆಲೆ ರೂ.778 ರಲ್ಲಿದ್ದು ಭಾರಿ ಗಾತ್ರದ ವಹಿವಾಟಿನ ಕಾರಣ ತಟಸ್ಥತೆ ಮುಂದುವರೆದು 8 ರಂದು ರೂ.774 ಕ್ಕೆ ಕುಸಿಯಿತಾದರೂ ದಿಢೀರ್‌ ಖರೀದಿಯ ಕಾರಣ ರೂ.835 ನ್ನು ದಾಟಿತು. ಮತ್ತೆ 9ರಂದು ಹೆಚ್ಚಿನ ಸಂಖ್ಯಾಗಾತ್ರವಿಲ್ಲದೆ ಷೇರಿನ ಬೆಲೆ 798 ಕ್ಕೆ ಕುಸಿಯಿತು, ಶುಕ್ರವಾರ ರೂ.847 ಕ್ಕೆ ಮತ್ತೆ ಜಿಗಿದು ವಾರದ ಗರಿಷ್ಠವನ್ನು ದಾಖಲಿಸಿತು.

    ಅದಾನಿ ಪವರ್ ಲಿಮಿಟೆಡ್‌:

    ಇತ್ತೀಚೆಗೆ ಪವರ್‌ ವಲಯದ ಷೇರುಗಳಲ್ಲಿ ಎಲ್ಲಿಲ್ಲದ ಚೇತರಿಕೆ ಕಂಡುಬಂದಿದೆ. ಈ ಚೇತರಿಕೆಯಲ್ಲಿ ಟಾಟಾ ಪವರ್‌, ಎನ್‌ ಟಿ ಪಿ ಸಿ ಗಳಂತಹವೂ ಭಾಗಿಯಾಗಿವೆ. ಈ ರಭಸದ ಚಟುವಟಿಕೆಯ ವಾತಾವರಣದಲ್ಲಿ ಅದಾನಿ ಪವರ್‌ ಕಂಪನಿಯು ಒಂದೇ ವಾರದಲ್ಲಿ ರೂ.111 ರ ಸಮೀಪದಿಂದ ರೂ.167 ರವರೆಗೂ ಜಿಗಿತ ಕಂಡಿದೆ. ಜಿಗಿತ ಸರಿ ಆದರೆ ಅಲ್ಲಿ ಸ್ಥಿರತೆ ಕಂಡುಕೊಳ್ಳಲು ಅಸಮರ್ಥವಾಗಿದೆ. ಬುಧವಾರದಂದು ಷೇರಿನ ಬೆಲೆ ರೂ.167 ರ ಗರಿಷ್ಠ ತಲುಪಿದಾಗ ಗಜಗಾತ್ರದ ವಹಿವಾಟಿನಿಂದ ರೂ.138 ಕ್ಕೆ ಕುಸಿಯಿತು. ನಂತರ ಚೇತರಿಕೆ ಕಂಡರೂ ಗರಿಷ್ಠ ಮಟ್ಟ ತಲುಪದಾಯಿತು. ರೂ.148 ರಲ್ಲಿ ವಾರಾಂತ್ಯ ಕಂಡಿತು.

    ಟೈಡ್‌ ವಾಟರ್‌ ಆಯಿಲ್‌ ( ಇಂಡಿಯಾ) ಲಿಮಿಟೆಡ್‌ ಉದಾರ ಕೊಡುಗೆ – ಉತ್ತಮ ಸ್ಪಂದನೆ:

    ಪ್ರತಿ ಷೇರಿಗೆ ರೂ.200 ರಂತೆ ಡಿವಿಡೆಂಡ್‌ ಪ್ರಕಟಿಸಿದೆ. ಜೊತೆಗೆ 1:1 ರ ಅನುಪಾತದ ಬೋನಸ್‌ ಷೇರು ಘೋಷಿಸಿದೆ. ಈ ಷೇರಿನ ಮುಖಬೆಲೆಯನ್ನು ರೂ.5 ರಿಂದ ರೂ.2 ಕ್ಕೆ ಸೀಳುವ ಯೋಜನೆಯನ್ನು ಸಹ ಪ್ರಕಟಿಸಿದೆ. ಇದಕ್ಕೆ ಭಾರಿ ಬೆಂಬಲ ದೊರೆತ ಕಾರಣ ಷೇರಿನ ಬೆಲೆ ಶುಕ್ರವಾರ ದಿನದ ಗರಿಷ್ಠ ಆವರಣಮಿತಿಯನ್ನು ತಲುಪಿತ್ತು. ಆದರೆ ಈ ಷೇರಿನ ಬೆಲೆ ವಾರದ ಆರಂಭದಲ್ಲಿ ರೂ.12,990 ರ ವಾರ್ಷಿಕ ಗರಿಷ್ಠದ ಸಮೀಪದಿಂದ ರೂ.10,700 ರವರೆಗೂ ಕುಸಿದು ಶುಕ್ರವಾರ ರೂ.11,457 ಕ್ಕೆ ಪುಟಿದೆದ್ದಿದೆ. ಆದರೆ ಸೋಜಿಗ ಸಂಗತಿ ಎಂದರೆ ಕಳೆದ ಒಂದು ತಿಂಗಳಲ್ಲಿ ರೂ.4,620 ರಿಂದ ರೂ.12,990 ಕ್ಕೆ ಜಿಗಿತ ಕಂಡಿದೆ. ಈ ಪ್ರಮಾಣದ ಏರಿಕೆಯು ಅಪರೂಪವಾದರೂ, ಸ್ಥಿರತೆ ಕಾಣುವುದು ಅತಿ ವಿರಳ ಎನಿಸಿದರೂ ಏರಿಕೆಯು ಆಂತರಿಕ ಸಾಧನೆ ಮತ್ತು ಕಾರ್ಪೊರೇಟ್‌ ಫಲಗಳ ಕಾರಣವಾಗಿದೆ. ಕೆಲವು ದಿನಗಳ ಹಿಂದಷ್ಠೆ ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ ಇದೇ ರೀತಿ ಏರಿಕೆ ಪ್ರದರ್ಶಿಸಿರುವುದನ್ನು ಕಂಡೆವು. ಆದರೆ ಆ ಏರಿಕೆಯು ಭಾಹ್ಯ ಕಾರಣದಿಂದಾಗಿದ್ದು ಈ ವಾರ ರೂ.924 ರ ಗರಿಷ್ಠದಿಂದ ರೂ.772 ಕ್ಕೆ ಜಾರಿತಾದರೂ ಚೇತರಿಕೆಯಿಂದ ರೂ.817 ರ ಸಮೀಪ ಕೊನೆಗೊಂಡಿದೆ.

    ಯುನಿ ಅಬೆಕ್ಸ್‌ ಅಲ್ಲಾಯ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಸ್ಥಿತಿ:

    ಈ ಕಂಪನಿಯು ಕೆಳಮಧ್ಯಮ ವಲಯದಲ್ಲಿದ್ದು ಮಾರ್ಚ್‌ ಅಂತ್ಯದಲ್ಲಿ ಉತ್ತಮ ಅಂಕಿ ಅಂಶಗಳ ಸಾಧನೆ ಪ್ರಕಟಿಸಿದೆ. ಅಲ್ಲದೆ ಪ್ರತಿ ಷೇರಿಗೆ ರೂ.10 ರಂತೆ ಡಿವಿಡೆಂಡ್‌ ಪ್ರಕಟಿಸಿದೆಯಾದರೂ ಹೆಚ್ಚಿನ ಬೆಂಬಲವಿಲ್ಲ. ಸೋಮವಾರ ವಾರ್ಷಿಕ ಗರಿಷ್ಠ ರೂ.677 ನ್ನು ದಾಖಲಿಸಿದ್ದ ಈ ಕಂಪನಿ ಶುಕ್ರವಾರ ರೂ.568 ಕ್ಕೆ ಇಳಿದು ರೂ.570ರಲ್ಲಿ ಕೊನೆಗೊಂಡಿದೆ. ಮಿತವಾದ ಸಂಖ್ಯೆಯ ವಹಿವಾಟಾಗುವ ಈ ಷೇರು ಏರಿಳಿಕೆಗಳಿಗೆ ಸುಲಭವಾಗಿ ಸ್ಫಂಧಿಸುತ್ತದೆ. ಹೆಚ್ಚಿನ ಎಚ್ಚರ ಅಗತ್ಯ.

    ಷೇರುಪೇಟೆಯ ಬುಲ್‌ ರನ್‌ ಹೀಗೆಯೇ ಮುಂದುವರೆಯಬಹುದೇ?

    ಭವಿಷ್ಯದ ಘಟನೆಗಳಿಗೆ ಮೌಲೀಕರಣಮಾಡಿ ವಿಜೃಂಭಿಸುವುದೇ ಷೇರುಪೇಟೆಯ ವೈಶಿ಼ಷ್ಟ್ಯ. ಹೆಚ್ಚಿನ ಕಂಪನಿ ಷೇರುಗಳು ಅರ್ಹತೆಯನ್ನು ಮೀರಿ ಮಿಂಚಿವೆ. ಅಂತರ್ಗತವಾಗಿ ಅಡಕವಾಗಿರುವ ಸಾಧನೆಯಗಳ ಆಧಾರದ ಮೇಲೆ ಹೂಡಿಕೆ ಮಾಡಿದ್ದರೆ ಮುಂದೆಂದಾದರೂ ಆ ಬೆಲೆ ದೊರಕಬಹುದು ಆದರೆ ಕೇವಲ ಗಾಳಿ ಗೋಪುರದಂತೆ ಏರಿಕೆ ಕಂಡಿರುವ ಕಂಪನಿಗಳು ಹೆಚ್ಚು ಅಪಾಯಕಾರಿ. 1999-2000 ದಲ್ಲಿ ಅಗ್ರಮಾನ್ಯ ಪಟ್ಟ ಪಡೆದಿದ್ದ ಟೆಕ್ನಾಲಜಿ ಕಂಪನಿಗಳು ರೂ.3,000 ದಲ್ಲಿದ್ದು ನಂತರದ ವರ್ಷಗಳಲ್ಲಿ ಏಕ ಅಂಕಿ ತಲುಪಿದ ಅನೇಕ ಕಂಪನಿಗಳಿವೆ. ವಹಿವಾಟಿನಿಂದ ಅಮಾನತುಗೊಂಡ ಕಂಪನಿಗಳನೇಕವಿವೆ. ಯಾವುದೂ ಸ್ಥಿರವಲ್ಲ, ಆದರೆ ಆಂತರಿಕ ಅಂಶಗಳು ಸುಭದ್ರವಾಗಿದ್ದಲ್ಲಿ ಹಾನಿ ಪ್ರಮಾಣ ಮಿತವಾಗಿರುತ್ತವೆ.

    ಜೂನ್‌ ನಿಂದ ಸೆಪ್ಟೆಂಬರ್‌ ತಿಂಗಳುಗಳಲ್ಲಿ ಅನೇಕ ಕಂಪನಿಗಳು ತಮ್ಮ ವಾರ್ಷಿಕ ಫಲಿತಾಂಶ ಪ್ರಕಟಿಸಿ, ಡಿವಿಡೆಂಡ್‌ ಘೋಷಿಸುವುದಲ್ಲದೆ ತಮ್ಮ ವಾರ್ಷಿಕ ಸಾಮಾನ್ಯ ಸಭೆ ನಡೆಸುತ್ತವೆ. ಈ ವಾರ್ಷಿಕ ಸಾಮಾನ್ಯ ಸಭೆ ಮುಗಿಯುವವರೆಗೂ ಷೇರುಪೇಟೆಯಲ್ಲಿ ಚಟುವಟಿಕೆ ರಭಸಮಯವಾಗಿರುತ್ತವೆ. ಆದರೆ ಜೂನ್‌ ಅಂತ್ಯದ ತ್ರೈಮಾಸಿಕ ಫಲಿತಾಂಶವು, ಲಾಕ್‌ ಡೌನ್‌ ಕಾರಣ ಪ್ರೋತ್ಸಾಹದಾಯಾಕವಾಗಿರಲಾರದು. ಹಾಗಾಗಿ ಜೂನ್‌ ತ್ರೈಮಾಸಿಕ ಫಲಿತಾಂಶಗಳ ಸಮಯಕ್ಕೆ ಪೇಟೆಯ ಈ ರಭಸವು ಕಡಿಮೆಯಾಗುವ ಸಾಧ್ಯತೆ ಇದೆ.

    ಆ ಸಮಯದಲ್ಲಿ ಬರಗಾಲ, ಪ್ರವಾಹ, ಮುಂಗಾರು ಮುಂತಾದ ಹಲವಾರು ಪ್ರಭಾವಿ ಅಂಶಗಳು ಮುಂಚೂಣಿಯಲ್ಲಿರುತ್ತವೆ. ಆ ಸಮಯದಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳ ಮನಸ್ಥಿತಿಯೂ ಪ್ರಭಾವಿಯಾಗಿರುತ್ತದೆ. ಈ ಎಲ್ಲಾ ಅನಿಶ್ಚತೆಯ ಕಾರಣ ಪ್ರಾಫಿಟ್‌ ಬುಕ್‌ ಗೆ ಹೆಚ್ಚಿನ ಆಧ್ಯತೆ ನೀಡಿ, ಹಣವನ್ನು ಸಿದ್ಧವಾಗಿರಿಸಿಕೊಂಡಿದ್ದಲ್ಲಿ ಅವಕಾಶಗಳ ಲಾಭ ಪಡೆಯಲು ಅನುಕೂಲವಾಗುತ್ತದೆ ಎನ್ನಬಹುದು.

    ನಿಯಂತ್ರಣ ಸಂಸ್ಥೆ ಅಥವಾ ಸ್ವನಿಯಂತ್ರಣ ಸಂಸ್ಥೆಗಳಾದ ಸ್ಟಾಕ್ ಎಕ್ಸ್ ಚೇಂಜ್ ಗಳು ತೆಗೆದುಕೊಳ್ಳುವ ನಿರ್ಧಾರಗಳು ಹೂಡಿಕೆದಾರರ ಬಂಡವಾಳ ಕರಗಿಸಬಹುದು ಎಂಬುದಕ್ಕೆ ಸೋಮವಾರದಿಂದ ಡಿ ಹೆಚ್ ಎಫ್ ಎಲ್ ಷೇರುಗಳು ವಹಿವಾಟಿನಿಂದ ಹಿಂದೆ ಸರಿಯುವ ಕಾರಣ ಆ ಷೇರುಗಳಲ್ಲಿನ ಹೂಡಿಕೆ ಶೂನ್ಯ ವಾಗುವುದು. ಅಪಾಯದ ಅರಿವಿದ್ದರೂ ಆ ಷೇರುಗಳನ್ನು ‘ಬಿ’ ಗುಂಪಿನಲ್ಲಿ ವಹಿವಾಟಿಗೆ ಅವಕಾಶ ನೀಡಿದೆ ‘ಟಿ’ ಗುಂಪಿಗೆ ವರ್ಗಾಯಿಸಬಹುದಿತ್ತು. ಹೀಗೆ ಯಾರು ಗಮನಕ್ಕೂ ಬಾರದೆ ಕೆಲವು ಬೆಳವಣಿಗೆಗಳು ಘಟಿಸುವುದರಿಂದ ಹೂಡಿಕೆದಾರರು ಸ್ವ -ನಿಯಂತ್ರಣ ಅಳವಡಿಸಿಕೊಳ್ಳುವುದೊಂದೇ ಉತ್ತಮ ಮಾರ್ಗ.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    1 COMMENT

    1. Thank you sir, your articles are always valuable and very informative too. Thanks for helping us to build wealth

    LEAVE A REPLY

    Please enter your comment!
    Please enter your name here

    Latest article

    error: Content is protected !!