ಎಲ್ಲರ ಪ್ರಾರ್ಥನೆಯನ್ನು ಮೀರಿ ಸಂಚಾರ ಮುಗಿಸಿ ಹೊರಟ ಕಲಾವಿದ ಸಂಚಾರಿ ವಿಜಯ್ ರೊಂದಿಗಿನ ಒಡನಾಟವನ್ನು ರಂಗಕರ್ಮಿ ಸರ್ವಮ್ ಥಿಯೇಟರ್ ತಂಡದ ದಿವ್ಯಾ ಕಾರಂತ್ ಇಲ್ಲಿ ನೆನಪಿಸಿ ಕೊಂಡಿದ್ದಾರೆ.
ಹನುಮಂತನಗರದ ಕೆ ಎಚ್ ಕಲಾಸೌಧದಲ್ಲಿ ನಡೆದ
‘ಅಕ್ಕು’ ನಾಟಕದ ಪ್ರದರ್ಶನ ಆಗಷ್ಟೇ ಮುಗಿದಿತ್ತು.
ಮುಖದ ಬಣ್ಣ ಕಳಚುತ್ತಿದ್ದವಳನ್ನು, ಸಹಕಲಾವಿದ ಬಂದು ಕರೆದ. ‘ನಿನ್ನ ಯಾರೋ ನೊಡ್ಬೇಕಂತೆ, ಹೊರಗೆ ಕಾಯ್ತಾ ಇದ್ದಾರೆ’. ನನಗೆ ಇದೆಲ್ಲ ಸ್ವಲ್ಪ ಕಸಿವಿಸಿ. ಅರ್ಧ ಮನಸ್ಸಿನಿಂದಲೇ ಹೊರ ಹೋದೆ. ಬಾಗಿಲ ಹೊರಗೆ, ಮಸುಕು ಬೆಳಕಲ್ಲಿ ತಣ್ಣಗೆ ನಿಂತಿದ್ದ ವ್ಯಕ್ತಿ ನನ್ನ ಕಂಡಕೂಡಲೇ ಮುಂದೆ ಬಂದರು.
ನಾನು ಬಿಟ್ಟ ಕಣ್ಣುಗಳಿಂದ ಅವರನ್ನು ನೋಡುತ್ತಲೇ ಇದ್ದೆ. ಮನಸ್ಸು ಮಂಗನ ಹಾಗೆ ಕುಣಿಯುತ್ತಿತ್ತು. ನಾಷನಲ್ ಅವಾರ್ಡ್ ಬಂದ ನಟ ನನ್ನನ್ನು ಕಾಯುವುದೇ?
ಮೊದಲು ಮುಗುಳ್ನಗೆ, ನಂತರ ಮಾತು. ಅಥವಾ ಆತನ ಮುಖವೇ ಇದ್ದದ್ದು ಹಾಗೋ ಏನೋ! ಸದಾ ಹಸನ್ಮುಖಿ.
‘ಅಮ್ಮಚ್ಚಿ?’
‘ಹೂಂ’
‘ಎರೆಡರೆಡು ಭಾವ ಒಟ್ಟೊಟ್ಟಿಗೆ ನನ್ನಲ್ಲಿ ಉಕ್ಕಿಸಿದಿರಿ ನೀವು!ಪಾತ್ರಕ್ಕಾದ ನೋವು, ಕಣ್ಣಲ್ಲಿ ನೀರು ತರಿಸಿತು. ಅದನ್ನು ನಿರ್ವಹಿಸುವಲ್ಲಿ ಗೆದ್ದ ನಟಿಯ ಪರಿಪಕ್ವತೆ ಖುಷಿ ಕೊಟ್ಟಿತು.’
‘ಥಾಂಕ್ಸ್’
‘ನಾನು ವಿಜಯ್. ನಿಮ್ ಹೆಸರು?’
ಮುಂದೆ ಹಲವಾರು ಸಿನಿಮಾಗಳಿಂದ ನನಗೆ ಕರೆ ಬಂದಿತ್ತು. ‘ಮೇಡಂ ಸಂಚಾರಿ ವಿಜಯ್ ಸರ್ ನಿಮ್ ನಂಬರ್ ಕೊಟ್ರು..’ ‘ಮೇಡಂ ಸಂಚಾರಿ ವಿಜಯ್ ಸರ್ ನಿಮ್ಮನ್ನ ರೇಕಮಂಡ್ ಮಾಡಿದ್ರು.. ‘
ಒಂದೇ ನಾಟಕ ತಂಡದಲ್ಲಿ ಇದ್ದು ಒತ್ಲಾ ಹೊಡೆದದ್ದಿದೆ. ಒಟ್ಟಿಗೆ ಟೀ ಕುಡಿದು ನಾಯಿಗಳಿಗೆ ಬಿಸ್ಕತ್ ಹಾಕಿದ್ದಿದೆ. ಪ್ರತಿಯೊಂದು ನಾಟಕದ ಪ್ರದರ್ಶನದ ಆಹ್ವಾನಕ್ಕೆ ವಿಷ್ ಮಾಡಿದ್ದಿದೆ
ಎಲ್ಲಾ ಸಿನೆಮಾದ ಪ್ರೀಮಿಯರ್ ಗೆ ಬರಲೇಬೇಕು ಎಂದು ಒತ್ತಡ ಹಾಕಿದ್ದಿದೆ. ಹಿಂದಿನ ವರ್ಷ ಲಾಕ್ ಡೌನ್ ಸಮಯದಲ್ಲಿ, ‘ಎಲ್ಲಾ ಓಕೆನಾ?’ ಅಂತ ಬಂದ ಫೋನಿನ ಕರೆಯ ನೆನಪಿದೆ.
ಆ ಕರೆ ಮತ್ತೊಮ್ಮೆ ಬರಬಾರದೇ.
ಕೀಚಕ ನಾಟಕದಲ್ಲಿನ ಬೃಹನ್ನಳೆ ಮತ್ತೊಮ್ಮೆ ರಂಗದ ಮೇಲೆ ವಯ್ಯಾರದಿಂದ ನಡೆಯಬಾರದೇ.
ಹಲವು ಹಸಿದ ಜೀವಗಳಿಗೆ ಅನ್ನ ನೀಡಿದ ಕೈ ಮತ್ತೊಮ್ಮೆ ಚಪ್ಪಾಳೆ ತಟ್ಟಬಾರದೇ.
ಒಂದಿಷ್ಟೂ ಅಹಂಕಾರವಿಲ್ಲದೆ ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದ ಚೇತನ, ಅದಮ್ಯವಾಗಬಾರದೇ.
ಬದುಕನ್ನು ಸೋಜಿಗವಾಗಿಸಿ, ಆ ಪರಿಪಾಟಲನ್ನು ನೋಡಿ ನಗುವ ಸಾವು, ತಾನು ಸಾಯಬಾರದೇ.
ಬದುಕಿದ್ದಾಗ ಹೇಳಲಾಗದ ಮಾತು, ಈಗ ಲೇಖನವಾಗುತ್ತಿರುವ ದುರಂತ, ಕನಸಾಗಬಾರದೇ..
😔😔😔
Saavinallu sarthakathe kandu konda nata 👏
Excellent tribute.