19.9 C
Karnataka
Sunday, September 22, 2024

    ದೊಡ್ಡಬಳ್ಳಾಪುರವನ್ನು ಎಂದಿಗೂ ಮರೆಯದ ಕೆ ಸಿ ಎನ್ ಚಂದ್ರಶೇಖರ್

    Must read

    ನಿನ್ನೆ ಮಧ್ಯರಾತ್ರಿ ನಿಧನರಾದ ನಿರ್ಮಾಪಕ, ಉದ್ಯಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿದ್ದ ಕೆ.ಸಿ.ಎನ್.ಚಂದ್ರಶೇಖರ್ ನಿಧನದಿಂದ ಅದ್ಧೂರಿ ಚಲನಚಿತ್ರ ನಿರ್ಮಾಣ, ಚಲನಚಿತ್ರ ರಂಗದ ಸಂಘಟನೆಯ ಮುಂಚೂಣಿಯಲ್ಲಿದ್ದ ಒಬ್ಬ ಪ್ರಮುಖ ನೇತಾರನನ್ನು ಕಳೆದುಕೊಂಡಂತಾಗಿದೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

    ಖ್ಯಾತ ನಿರ್ಮಾಪಕ ಕೆ.ಸಿ.ಎನ್.ಗೌಡ ಹಾಗೂ ನರಸಮ್ಮ ದಂಪತಿಗಳ ಪುತ್ರರಾಗಿದ್ದ ಕೆಸಿಎನ್ ಚಂದ್ರು ಹುಟ್ಟಿದ್ದು 1952ರಲ್ಲಿ. ದೊಡ್ಡಬಳ್ಳಾಪುರ ತಾಲೂಕಿನ ಕೋನೇನಹಳ್ಳಿಯವರು. ಬಾಲ್ಯ ಕಳೆದಿದ್ದು ಮರಳೇನಹಳ್ಳಿ. ಪ್ರೈಮರಿ ಸ್ಕೂಲ್ ವ್ಯಾಸಂಗವೂ ಮರಳೇನಹಳ್ಳಿಯಲ್ಲಿ. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

    ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ದೊಡ್ಡಬಳ್ಳಾಪುರದಲ್ಲಿ ಪೂರೈಸಿ ನಂತರ ಅವರು ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದರು. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ.(ನಾಟಕ)ಯ ಮೊದಲ ಬ್ಯಾಚ್ ಪದವೀಧರರಾಗಿದ್ದರು.

    ದೊಡ್ಡಬಳ್ಳಾಪುರದಲ್ಲಿ ಕೆ.ಸಿ.ಎನ್.ಗೌಡರು ಎಂದರೆ ದೊಡ್ಡ ಉದ್ಯಮಿಗಳು. ಸುಮಾರು ಇನ್ನೂರಕ್ಕೂ ಹೆಚ್ಚು ಮಗ್ಗಗಳನ್ನು ಹೊಂದಿದ್ದ ನೂರಾರು ಕಾರ್ಮಿಕರಿಗೆ ಕೆಲಸ ನೀಡಿದ್ದ ಕುಟುಂಬ ಅವರದು. ರೇಷ್ಮೆ ಬಟ್ಟೆ ನೇಯ್ಗೆಯಲ್ಲಿ ಎಷ್ಟು ಪರಿಣಿತಿಯೋ ಕನ್ನಡ ಚಿತ್ರರಂಗದ ಮಹತ್ವದ ಚಲನಚಿತ್ರಗಳ ನಿರ್ಮಾಣ ಮಾಡುವ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಹೆಚ್ಚಿಸಿದವರು ಕೆ.ಸಿ.ಎನ್.ಚಂದ್ರಶೇಖರ್.

    ತಂದೆ ಕೆ ಸಿ ಎನ್ ಗೌಡರೊಂದಿಗೆ

    ಎರಡು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಚೆನ್ನೈನ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿದ್ದರು.
    ಕೆ.ಸಿ.ಎನ್.ಚಂದ್ರಶೇಖರ್ ಸಿನಿಮಾ ರಂಗದಲ್ಲಿ, ತಮ್ಮ ವ್ಯಾಪಾರ ರಂಗದಲ್ಲಿ ಎಷ್ಟೇ ಖ್ಯಾತಿ, ಹಣ ಸಂಪಾದಿಸಿದರೂ ಅವರಿಗೆ ತಮ್ಮೂರಿನ ಬಗ್ಗೆ ಅಪಾರ ಅಭಿಮಾನವಿತ್ತು. ಅವರ ಪ್ರಾಥಮಿಕ ಶಿಕ್ಷಣ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿಯಲ್ಲಿ ನಂತರ ಪ್ರೌಢಶಾಲೆಗೆ ದೊಡ್ಡಬಳ್ಳಾಪುರದ ಸರ್ಕಾರಿ ಪ್ರೌಢಶಾಲೆ ಸೇರಿದರು. ನಂತರ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಿದರು.

    ದೊಡ್ಡಬಳ್ಳಾಪುರದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಬಂದರೂ ತಮ್ಮ ಬಂಧುಮಿತ್ರರು ಹಾಗೂ ಗೆಳೆಯರನ್ನು ಮಾತನಾಡಿಸುತ್ತಿದ್ದರು. ದೊಡ್ಡಬಳ್ಳಾಪುರದ ಯಾರಾದರೂ ಅವರ ಮನೆಗೆ ಹೋದರೂ ಪ್ರೀತಿಯಿಂದ ಉಪಚರಿಸುತ್ತಿದ್ದರು. ದೊಡ್ಡಬಳ್ಳಾಪುರ ತಾಲೂಕು ಕುಂಚಿಟಿಗರ ಸಂಘದ ಗೌರವಾಧ್ಯಕ್ಷರಾಗಿದ್ದರು. ಬೆಂಗಳೂರಿನ ವಸಂತನಗರದಲ್ಲಿ ವರ ನೇತೃತ್ವದಲ್ಲಿ ಕುಂಚಿಟಿಗ ವಿದ್ಯಾರ್ಥಿಗಳ ನೆರವಿಗೆ ವಿದ್ಯಾರ್ಥಿ ನಿಲಯ ಕಟ್ಟಿಸಿದ್ದರು. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾಳಜಿ ಅವರದಾಗಿತ್ತು.
    ಬಂಗಾರದ ಮನುಷ್ಯ, ಹುಲಿಯ ಹಾಲಿನ ಮೇವು, ಕಸ್ತೂರಿ ನಿವಾಸ, ಬಭ್ರುವಾಹನ, ಸನಾದಿ ಅಪ್ಪಣ್ಣ, ಭಲೇ ಜೋಡಿ, ದಾರಿ ತಪ್ಪಿದ ಮಗ ಇತ್ಯಾದಿ ಚಿತ್ರಗಳು ರಾಜ್ ಕಮಲ್ ಆರ್ಟ್ಸ್ ದೊಡ್ಡಬಳ್ಳಾಪುರ ಮತ್ತು ಕೆಸಿಎನ್ ಮೂವೀಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿದ್ದವು.

    ಅಪಾರ ಸಾಹಿತ್ಯ ಪ್ರೇಮಿಯೂ ಆಗಿದ್ದ ಅವರು ಕಳೆದ ಬಾರಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ದೊಡ್ಡಬಳ್ಳಾಪುರದಲ್ಲಿ ನಿರ್ಮಾಣವಾದ ಕನ್ನಡ ಜಾಗೃತ ಪರಿಷತ್ತಿನ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲೂ ಭಾಗವಹಿಸಿದ್ದರು.
    ಕೋನೇನಹಳ್ಳಿಯ ಅವರ ಸೋದರ ಸಂಬಂಧಿ ಆಂಜನಪ್ಪ ಅವರು ಊರಿನಲ್ಲಿ ಕೆ.ಸಿ.ಎನ್. ಕುಟುಂಬದವರು ಆಸ್ಪತ್ರೆ ಕಟ್ಟಿಸಿದ್ದಾರೆ. ಅವರು ಕುಂಚಿಟಿಗರ ಅಭಿವೃದ್ಧಿಗೆ ಅಪಾರ ಶ್ರಮವಹಿಸಿ ಕುಂಚಿಟಿಗರ ವಿದ್ಯಾರ್ಥಿ ನಿಲಯ ನಿರ್ಮಿಸಲು ಶ್ರಮಿಸಿದರು ಎಂದರು.

    ದೊಡ್ಡಬಳ್ಳಾಪುರದಲ್ಲಿ ನಡೆದ ಕುಂಚಿಟಿಗರ ಸಂಘದ ಸಭೆಯಲ್ಲಿ ಶ್ರೀರಾಮಯ್ಯ, ಕೆಂಪರಾಜು ಹಾಗೂ ಶಿಕ್ಷಕ ಎಂ.ವಿ.ರಾಜ್ ಕುಮಾರ್ ಅವರೊಂದಿಗೆ ಕೆ.ಸಿ.ಎನ್. ಚಂದ್ರು

    ಕೆ.ಸಿ.ಎನ್.ಚಂದ್ರಶೇಖರ್ ಅವರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ನೇತೃತ್ವ ವಹಿಸಿದ್ದಾಗ ತಮ್ಮ ಊರಿನ ಹಲವು ವಿದ್ಯಾರ್ಥಿಗಳಿಗೆ ಅಲ್ಲಿ ಸೀಟುಗಳನ್ನು ನೀಡಿ ಉತ್ತೇಜಿಸಿದರು ಎಂದು ಅವರನ್ನು ನೆನೆಯುತ್ತಾರೆ.
    ಕೆ.ಸಿ.ಎನ್.ಚಂದ್ರಶೇಖರ್ ಅವರು ತಮ್ಮ ಊರಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು ಎಂದು ದೊಡ್ಡಬಳ್ಳಾಪುರ ತಾಲೂಕು ಕುಂಚಿಟಿಗರ ಸಂಘದ ಕಾರ್ಯಾಧ್ಯಕ್ಷ ಆರ್.ಕೆಂಪರಾಜು ಹೇಳುತ್ತಾರೆ.

    ತಾಲೂಕು ಕುಂಚಿಟಿಗರ ಸಂಘದ ಗೌರವಾಧ್ಯಕ್ಷರಾಗಿದ್ದ ಅವರು ಸಮುದಾಯದ ಒಳಿತಿಗೆ ಶ್ರಮಿಸುತ್ತಿದ್ದರು ಎಂದು ನೆನೆಯುತ್ತಾರೆ.
    ಅವರ ಸಂಬಂಧಿಯಾದ ಎಂ.ಶ್ರೀರಾಮಯ್ಯ, ಕೆಸಿಎನ್ ಚಂದ್ರಶೇಖರ್ ಅವರ ಅಜ್ಜ ಕೆ.ಚೌಡಯ್ಯ ತಮ್ಮ ಊರು ಕೋನೇನಹಳ್ಳಿ ಬಿಟ್ಟು ದೊಡ್ಡಬಳ್ಳಾಪುರಕ್ಕೆ ಬಂದು ಅಲ್ಲಿ ರಾಗಿ ಮಿಷನ್ ಹಾಕಿ ಅಲ್ಲಿಂದ ತಮ್ಮ ಉದ್ಯಮ ಪ್ರಾರಂಭಿಸಿದರು. ನಂತರ ಮಗ್ಗಗಳಿಂದ ಸಿನಿಮಾವರೆಗೆ ಅವರು ಅಪಾರವಾಗಿ ಪ್ರಗತಿ ಸಾಧಿಸಿದರು ಎನ್ನುತ್ತಾರೆ.

    ವಿ. ಎಲ್. ಪ್ರಕಾಶ್
    ವಿ. ಎಲ್. ಪ್ರಕಾಶ್
    ವಿ.ಎಲ್.ಪ್ರಕಾಶ್ ವಿದ್ಯಾರ್ಥಿ ದೆಸೆಯಿಂದಲೇ ಬರಹದ ವ್ಯವಸಾಯ. ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಣೆ. ಪ್ರಸ್ತುತ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕ.
    spot_img

    More articles

    1 COMMENT

    1. ರಾಜ್ ಕಮಲ್ ಆಟ್ಸ್೯ ದೊಡ್ಡಬಳ್ಳಾಪುರ ಅವರ
      ಕೆ.ಸಿ.ಎನ್. ಮೂವೀಸ್ ಬ್ಯಾನರ್ ನಡಿ ಬರುತ್ತಿದ್ದ ಚಿತ್ರಗಳ ಸೊಗಡೇ ಬೇರೆ? ಹೆಚ್ಚಿನ ಚಿತ್ರಗಳೆಲ್ಲವೂ ಸೂಪರ್ ಹಿಟ್.
      ಅಂಥಾ ಚಿತ್ರ ನಿಮಾ೯ಣ ಸಂಸ್ಥೆಯ ಬೃಹತ್ ಕೊಂಡಿಯೊಂದು ಕಳಚಿಕೊಂಡಂತಾಗಿದೆ.
      ಅವರ ಆತ್ಮಕ್ಕೆ ಶಾಂತಿ ದೊರಕಲಿ. 🙏

    LEAVE A REPLY

    Please enter your comment!
    Please enter your name here

    Latest article

    error: Content is protected !!